ನವದೆಹಲಿ, ಮಾರ್ಚ್ 23: ದೆಹಲಿಯಲ್ಲಿ ಇಂದಿನಿಂದ ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ಆರಂಭವಾಗಿದೆ. ಈ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi in WITT Summit) ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮಾಡಿದ ಪಾಪದ ಹೊರೆಗಳನ್ನು ನಾವು ಹೊತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಕಾಂಗ್ರೆಸ್ ದೇಶದ ಬಗ್ಗೆ ಯೋಚಿಸುವ ಬದಲು ಅಧಿಕಾರದ ಬಗ್ಗೆ ಮಾತ್ರ ಚಿಂತಿಸುತ್ತಿತ್ತು. ಕಾಂಗ್ರೆಸ್ ತೈಲ ಬಾಂಡ್‌ಗಳನ್ನು ಬಿಡುಗಡೆ ಮಾಡಿತು. ವಿದ್ಯುತ್ ಉಳಿಸಲು ಅವರು ತಪ್ಪು ನಿರ್ಧಾರ ತೆಗೆದುಕೊಂಡರು. ಆ ತೈಲ ಬಾಂಡ್ಗಳ ಹೊರೆಯನ್ನು ನಮ್ಮ ಸರ್ಕಾರ ಇನ್ನೂ ಹೊರುತ್ತಲೇ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಕಳೆದ 5ರಿಂದ 6 ವರ್ಷಗಳಲ್ಲಿ ನಮ್ಮ ಸರ್ಕಾರವು ಕಾಂಗ್ರೆಸ್ಸಿನ ಪಾಪದ ಹೊರೆಯನ್ನು ನಮ್ಮ ಸರ್ಕಾರ ಹೊತ್ತುಕೊಂಡಿದೆ. ತೈಲ ಬಾಂಡ್ಗಳಿಂದ ಸಾಕಷ್ಟು ಸಮಸ್ಯೆಯಾಯಿತು. 1,48,000 ಕೋಟಿ ರೂ. ಬದಲಿಗೆ, ನಾವು 3 ಲಕ್ಷ ಕೋಟಿಗೂ ಹೆಚ್ಚು ಪಾವತಿಸಬೇಕಾಯಿತು. ಇತ್ತೀಚಿನ ದಿನಗಳಲ್ಲಿ, ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿರುದ್ಧ ಹೇಳಿಕೆಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ ಅವರು ಈ ಬಗ್ಗೆ ಮಾತ್ರ ಮೌನವಾಗಿದ್ದಾರೆ” ಎಂದು ಮೋದಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ (IPL 2026) ಇದೇ ಮಾರ್ಚ್ 28 ರಿಂದ ಆರಂಭವಾಗುತ್ತಿದೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನೋಡಲು ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಆದಾಗ್ಯೂ ಎಲ್ಲಾ ಅಭಿಮಾನಿಗಳಿಗೂ ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಟಿಕೆಟ್ ಸಿಗದೆ ಇರುವುದು ಅಥವಾ ಟಿಕೆಟ್ ಬೆಲೆ ಅಧಿಕವಾಗಿರುವುದು ಸೇರಿದಂತೆ ಇದಕ್ಕೆ ನಾನಾ ಕಾರಣಗಳಿರುತ್ತವೆ. ಅಂತಹ ಅಭಿಮಾನಿಗಳು ನಿರಾಶೆಗೊಳ್ಳದಂತೆ ನೋಡಿಕೊಳ್ಳುವ ಸಲುವಾಗಿ ಬಿಸಿಸಿಐ ದೇಶದ ನಾನಾ ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ಗಳನ್ನು (IPL 2026 Fan Parks) ಸ್ಥಾಪಿಸಲಿದೆ. ಬಿಸಿಸಿಐ ಒಟ್ಟು 11 ರಾಜ್ಯಗಳ 15 ನಗರಗಳನ್ನು ಈ ಫ್ಯಾನ್ ಪಾರ್ಕ್ ಸ್ಥಾಪನೆಗೆ ಆಯ್ಕೆ ಮಾಡಿಕೊಂಡಿದೆ.
ಫ್ಯಾನ್ ಪಾರ್ಕ್ ವೇಳಾಪಟ್ಟಿ:
ಮೊದಲ ವಾರ: ಮಾರ್ಚ್ 28, 29, 2026.
ಎರಡನೇ ವಾರ: ಏಪ್ರಿಲ್ 4, 5, 2026.
ಮೂರನೇ ವಾರ: ಏಪ್ರಿಲ್ 11, 12, 2026.
ಯಾವ ನಗರಗಳಲ್ಲಿ ಎಲ್ಲಿ?
ಮೊದಲ ವಾರ (ಮಾರ್ಚ್ 28-29):
ರೋಹ್ಟಕ್ (ಹರಿಯಾಣ – ಛೋಟು ರಾಮ್ ಪಾಲಿಟೆಕ್ನಿಕ್ ಮೈದಾನ), ಭೋಪಾಲ್ (ಮಧ್ಯಪ್ರದೇಶ – ಸರ್ಕಾರಿ ಎಂವಿಎಂ ಕಾಲೇಜು ಮೈದಾನ), ನಾಗ್ಪುರ (ಮಹಾರಾಷ್ಟ್ರ – ಮೆಕೋಸಾಬಾಗ್ ಮೆಥೋಡಿಸ್ಟ್ ಹೈಸ್ಕೂಲ್ ಆಟದ ಮೈದಾನ), ತುಮಕೂರು (ಕರ್ನಾಟಕ – ಸರ್ಕಾರಿ ಜೂನಿಯರ್ ಕಾಲೇಜು ಮೈದಾನ), ಕೃಷ್ಣನಗರ (ಪಶ್ಚಿಮ ಬಂಗಾಳ – ಡಿಎಲ್ ರಾಯ್ ಕ್ರೀಡಾಂಗಣ).
ಎರಡನೇ ವಾರ (ಏಪ್ರಿಲ್ 4-5):
ಮಥುರಾ (ಉತ್ತರ ಪ್ರದೇಶ – ಅಮರನಾಥ ವಿದ್ಯಾ ಆಶ್ರಮ), ಜೋಧಪುರ (ರಾಜಸ್ಥಾನ – ಬರ್ಕತುಲ್ಲಾ ಖಾನ್ ಕ್ರೀಡಾಂಗಣ), ನಿಜಾಮಾಬಾದ್ (ತೆಲಂಗಾಣ – ಮಹಿಳಾ ಶಿಕ್ಷಣ ಸಂಸ್ಥೆಗಳ ಮೈದಾನ), ಮೈಸೂರು (ಕರ್ನಾಟಕ – ಎಸ್‌ಬಿಆರ್‌ಆರ್ ಮಹಾಜನ್ ಪ್ರಥಮ ದರ್ಜೆ ಕಾಲೇಜು), ಭುವನೇಶ್ವರ (ಒಡಿಶಾ – ಕಿಟ್ಸ್ ವಿಶ್ವವಿದ್ಯಾಲಯ ಕ್ರೀಡಾಂಗಣ).
ಮೂರನೇ ವಾರ (ಏಪ್ರಿಲ್ 11-12):
ಮೀರತ್ (ಉತ್ತರ ಪ್ರದೇಶ – ಭೈನಸಾಲಿ ಮೈದಾನ), ನಾಡಿಯಾಡ್ (ಗುಜರಾತ್ – ರಾಧೆ ಫಾರ್ಮ್), ರತ್ನಗಿರಿ (ಮಹಾರಾಷ್ಟ್ರ – ಲೇಟ್ ಪ್ರಮೋದ್ ಮಹಾಜನ್ ಕ್ರೀಡಾ ಸಂಕೀರ್ಣ), ಕೊಯಮತ್ತೂರು (ತಮಿಳುನಾಡು – ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್), ರೂರ್ಕೆಲಾ (ಒಡಿಶಾ – ಸೆಕ್ಟರ್ 17 ಗ್ರೌಂಡ್).
ಫ್ಯಾನ್ ಪಾರ್ಕ್ ವಿಶೇಷತೆಗಳು
ಫ್ಯಾನ್ ಪಾರ್ಕ್ ಕೇವಲ ಪಂದ್ಯ ನೋಡುವುದಕ್ಕಲ್ಲ, ಇದು ಒಂದು ಮಿನಿ ಕಾರ್ನೀವಲ್‌ನಂತಿರಲಿದೆ. ನೇರ ಪಂದ್ಯ ವೀಕ್ಷಣೆಯ ಜೊತೆಗೆ, ಸಂಗೀತ, ಮನರಂಜನಾ ಕಾರ್ಯಕ್ರಮಗಳು ಮತ್ತು ಫುಡ್ ಕೋರ್ಟ್‌ಗಳು ಇರುತ್ತವೆ. ವಿಶೇಷವಾಗಿ ಮಕ್ಕಳಿಗಾಗಿ, ವಿಶೇಷ ಆಟದ ಪ್ರದೇಶಗಳು, ವರ್ಚುವಲ್ ಬ್ಯಾಟಿಂಗ್ ಅನುಭವ, ಬೌಲಿಂಗ್ ನೆಟ್‌ಗಳು ಮತ್ತು ಫೇಸ್ ಪೇಂಟಿಂಗ್ ಕೂಡ ಇರುತ್ತದೆ.
2015 ರಲ್ಲಿ ಪ್ರಾರಂಭ
ಬಿಸಿಸಿಐ ಈ ಫ್ಯಾನ್ ಪಾರ್ಕ್‌ಗಳ ಸಂಪ್ರದಾಯವನ್ನು 2015 ರಲ್ಲಿ ಪ್ರಾರಂಭಿಸಿತು. ಕ್ರೀಡಾಂಗಣಗಳಿಂದ ದೂರವಿರುವ ನಗರಗಳಲ್ಲಿ ಐಪಿಎಲ್ ಕ್ರೇಜ್ ಅನ್ನು ಹೆಚ್ಚಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ. 2026 ರ ಋತುವಿನಲ್ಲಿಯೂ ಅದೇ ಉತ್ಸಾಹವನ್ನು ಮುಂದುವರೆಸುತ್ತಾ, ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿಮಾನಿಗಳಿಗಾಗಿ ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 23: ಟಿವಿ9 ವಾರ್ಷಿಕ ಶೃಂಗಸಭೆಯಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು. ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಪ್ರಧಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಯ ಮಾಡಿಕೊಂಡಿರುವುದಕ್ಕೆ ಬರುಣ್ ದಾಸ್ ಹರ್ಷ ವ್ಯಕ್ತಪಡಿಸಿದರು.
ಪ್ರಧಾನಿಯವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ಬಳಿಕ ಮಾತು ಮುಂದುವರಿಸಿದ ಬರುಣ್ ದಾಸ್, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಜಾಗತಿಕ ಆರ್ಥಿಕತೆಗೆ ಎಷ್ಟು ಮಾರಕವಾಗಿದೆ ಎಂಬುದನ್ನು ಸ್ಮರಿಸಿ ಆತಂಕ ವ್ಯಕ್ತಪಡಿಸಿದರು.
ಜಾಗತಿಕ ಆರ್ಥಿಕತೆ ನಾಡಿಮಿಡಿತಗಳಾದ ಫುಯಲ್ (ಇಂಧನ), ಫುಡ್ (ಆಹಾರ), ಫಿನಾನ್ಸ್ (ಹಣಕಾಸು), ಈ ಮೂರು ಎಫ್ಗಳ ಮೇಲೆ ಯುದ್ಧದ ಅಪಾಯ ನೆಟ್ಟಿದೆ. ಇಡೀ ಜಗತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. 1973ರ ಅರಬ್ ತೈಲ ಬಿಕ್ಕಟ್ಟು, 1979ರ ಇರಾನ್ ಕ್ರಾಂತಿ, 1990ರ ಗಲ್ಫ್ ಯುದ್ಧಕ್ಕಿಂತಲೂ ಇದು ತೀವ್ರತೆಯ ಪರಿಸ್ಥಿತಿ ಹೊಂದಿದೆ. ಇಂಥ ಹೊತ್ತಲ್ಲಿ ಜಗತ್ತು ಏನು ಯೋಚಿಸುತ್ತಿದೆ ಎಂಬುದಕ್ಕಿಂತ ಭಾರತ ಏನು ಯೋಚಿಸುತ್ತಿದೆ ಎನ್ನೋದಿ ಜಗತ್ತಿಗೆ ಮುಖ್ಯ ಎಂದು ಟಿವಿ9 ನೆಟ್ವರ್ಕ್ ಸಿಇಒ ಹೇಳಿದರು.
ದೆಹಲಿಯ ಅಶೋಕಾ ಹೋಟೆಲ್ನಲ್ಲಿ ಆಯೋಜಿಸಲಾಗಿರುವ ಈ ಡಬ್ಲ್ಯುಐಟಿಟಿ ಸಮಿಟ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬರುಣ್ ದಾಸ್, ಪ್ರಧಾನಿಗಳ ಮೂರು ಮಂತ್ರಗಳನ್ನು ಪ್ರಸ್ತಾಪಿಸಿದರು.
ರಿಟರ್ನ್ ಆನ್ ಗವರ್ನೆನ್ಸ್, ಮೋದಿ ಮಲ್ಟಿಪ್ಲೈಯರ್ ಎಫೆಕ್ಟ್, ಸಿಡಿಆರ್ ಈ ಮೂರು ಮಂತ್ರಗಳ ಜೊತೆಗೆ ಮೋದಿ ಅವರ ಹೊಸ ಮಂತ್ರ ‘ಸ್ಥಿತ ಪ್ರಜ್ಞೆ’ ತಮಗೆ ಕಾಣುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಪ್ರಮುಖ ಸಲಹೆಯೇ ‘ಸ್ಥಿತ ಪ್ರಜ್ಞೆ’ ಆಗಿತ್ತು. ಸ್ಥಿತಪ್ರಜ್ಞೆ ಎಂದರೆ ಎಲ್ಲರನ್ನೂ ನ್ಯಾಯಯುತವಾಗಿ ನಡೆಸಿಕೊಳ್ಳುವುದು ಎಂದರ್ಥ ಎಂದು ಬರುಣ್ ದಾಸ್ ಹೇಳಿದರು.
‘ನಾವು ಇಂದು ಅತ್ಯಂತ ಅಸ್ಥಿರವಾದ ದಿನಗಳಲ್ಲಿ ಬದುಕುತ್ತಿದ್ದೇವೆ. ಪಶ್ಚಿಮ ಏಷ್ಯಾದ ಯುದ್ಧಕ್ಕೂ ಮೊದಲು ಸುಂಕದ ಸಮರವು ವಿಶ್ವದ ಆರ್ಥಿಕತೆಯನ್ನು ನಡುಗಿಸಿತ್ತು. ಸೇನಾ ಬಲದ ಯುದ್ಧ ಒಂದಾದರೆ, ಆರ್ಥಿಕ ಯುದ್ಧ ಮತ್ತೊಂದು. ಜಗತ್ತಿನ 830 ಕೋಟಿ ಜನರು ಬಾಧಿತರಾಗಿದ್ದಾರೆ. ಈ ಜಾಗತಿಕ ಅಸ್ಥಿರತೆ ನಡುವೆ ಭಾರತ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲ, ಜಾಗತಿಕ ವ್ಯವಸ್ಥೆ ಸ್ಥಿರಗೊಳಿಸಲು ನೆರವಾಗಿದೆ ಎಂದು ಟಿವಿ9 ನೆಟ್ವರ್ಕ್ನ ಎಂಡಿಯೂ ಆದ ಬರುಣ್ ದಾಸ್ ಹೇಳಿದರು.
ಬರುಣ್ ದಾಸ್ ಅವರ ಭಾಷಣಕ್ಕೂ ಮುನ್ನ, ಮೈ ಹೋಮ್ ಗ್ರೂಪ್ನ ಛೇರ್ಮನ್ ಜುಪಲ್ಲಿ ರಾಮೇಶ್ವರ್ ರಾವ್ ಅವರೂ ಮಾತನಾಡಿದರು.
ಬೀದರ್, ಮಾರ್ಚ್ 23: ತಮ್ಮ ಹೊಲದಲ್ಲಿ ಬಿತ್ತಿದ ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ಅನೂಕುಲವಾಗಲಿ ಅಂತಾ ನೂರಾರು ರೈತರು ತಮ್ಮ ಪೈರಿಗೆ ಬೆಳೆ ವಿಮೆ (crop insurance) ಮಾಡಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರತಿ ವರ್ಷ ಇಂತಿಷ್ಠು ಅಂತಾ ಹಣವನ್ನ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಟ್ಟುತ್ತಾ ಬಂದಿದ್ದರು. ಆದರೆ ಆ ರೈತರಿಗೆ ನ್ಯಾಯಯುತವಾಗಿ ಬರಬೇಕಾಗದ ಬೆಳೆ ವಿಮೆ ಮಾತ್ರ ಬರುತ್ತಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಎರಡು ಲಕ್ಷ ನಾಲ್ಕು ಸಾವಿರ 19 ಜನ ರೈತರು ಈ ಕಳೆದ ವರ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ರೈತರ ಬೆಳೆ ಹಾನಿಯ ವಿಮೆ ಹಣ ಮಾತ್ರ ರೈತರ ಕೈಸೇರಿಲ್ಲ. ರೈತರ ಗೋಳನ್ನ ಯಾರು ಕೇಳೋರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರಿಂದ ಸಾವಿರಾರು ರೂ ಬೆಳೆ ವಿಮೆ ಮಾಡಿಸಿಕೊಂಡು ಈಗ ರೈತರಿಗೆ ಹಣವನ್ನ ಕೊಡದೆ ಅಧಿಕಾರಿಗಳು ಬಡ ರೈತರ ಬದುಕಿನ ಜೊತೆಗೆ ಆಟವಾಡುತ್ತಿದ್ದಾರೆ. ಇನ್ನೂ ರೈತರು ಹಲವು ವರ್ಷದಿಂದ ತಾವು ಬೆಳೆದ ಬೆಳೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ಬೆಳೆ ವಿಮೆಯಿಂದಾದರೂ ಬೆಳೆ ನಷ್ಟಕ್ಕೆ ಪರಿಹಾರ ಸಿಗಬಹುದು ಅನ್ನೋ ದೃಷ್ಠಿಯಿಂದ ಈ ವರ್ಷ ಬೀದರ್ನಲ್ಲಿ 2 ಲಕ್ಷ 4 ಸಾವಿರ 19 ಜನರು ವಿವಿಧ ಬೆಳೆ ಬೆಳೆ ವಿಮೆ ಮಾಡಿದ್ದು, ಬೆಳೆ ವಿಮೆ ಸಂಸ್ಥೆಗೆ 9 ಕೋಟಿ 90 ಲಕ್ಷ ರೂ ಬೀದರ್ ಜಿಲ್ಲೆಯ ರೈತರು ಕಟ್ಟಿದ್ದಾರೆ. ಆದರೆ ಈ ವರ್ಷ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷ ಎಕರೆಯಷ್ಟು ಸುಮಾರು 300 ಕೋಟಿಗೂ ಅಧಿಕ ಬೆಳೆ ಹಾನಿಯಾಗಿದೆ. ಆದರೆ ಬೆಳೆ ವಿಮೆ ಮಾಡಿಸಿದ ಕೆವಲ 78 ಸಾವಿರ ರೈತರಿಗೆ 36.74 ಕೋಟಿ ರೂಪಾಯಿ ಮಾತ್ರ ಬೆಳೆ ವಿಮೆ ಹಣ ನೀಡಿದ್ದು, ಒಂದು ಲಕ್ಷ 38 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರಕೊಡದೆ ವಿಮೆ ಕಂಪನಿ ಮೋಸ ಮಾಡಿದೆ ಎಂದು ರೈತರು ಹೇಳುತ್ತಿದ್ದಾರೆ.
ರೈತರ ಕೈಸೇರಿದ ಹಣ
ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತಮ್ಮ ಬೆಳೆಗೆ ಬೆಳೆ ವಿಮೆಯನ್ನ ಮಾಡಿಸಿ ಅಲ್ಲಿಯೇ ಹಣವನ್ನ ತುಂಬುವಂತೆ ಕೃಷಿ ಇಲಾಖೆಯ ಅಧಿಕಾರಿ ರೈತರಿಗೆ ಸಲಹೆ ನೀಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಬ್ಯಾಂಕ್ನಲ್ಲಿ ಹಣ ಸಂದಾಯ ಮಾಡಿ ರಸೀದಿ ಪಡೆದಿದ್ದಾರೆ. ಆದರೆ ಸಂಕಷ್ಟದ ಪರಿಸ್ಥಿಯಲ್ಲಿ ಬೆಳೆ ಹಾನಿಯಾದಾಗ ಕೈಸೇರಬೇಕಾದ ಹಣವೇ ಈಗ ರೈತರಿಗೆ ಬರುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಒಂದೇ ಗ್ರಾಮದ ಕಥೆಯಲ್ಲ. ಬೀದರ್ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಣವೇ ಶೇಕಡಾ 80 ರಷ್ಟು ರೈತರಿಗೆ ಇಂದಿಗೂ ಬಂದಿಲ್ಲ. ಅವರು ಪ್ರತಿ ವರ್ಷ ಕೂಡ ಹಣ ಕಟ್ಟುತ್ತಲೇ ಇದ್ದಾರೆ. ಆದರೆ ಬೆಳೆ ವಿಮೆ ಹಣ ಬಾರದಿರುವುದು ರೈತರನ್ನ ಗಾಬರಿಗೊಳಿಸಿದೆ. ಸಾಲಾ ಸೋಲಾ ಮಾಡಿ ವಿಮೆ ಕಟ್ಟಿದ ಹಣವೂ ಇಲ್ಲಾ, ಜೊತೆಗೆ ಬೆಳೆ ನಾಶವಾಗಿರುವುದಕ್ಕೆ ಇನ್ಶೂರೆನ್ಸ್ ಹಣವೂ ಬಾರದಿರುವುದು ಅಧಿಕಾರಿಗಳ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.
ರೈತರು ಆಕ್ರೋಶ
ಸಾಲ ಸೋಲಾ ಮಾಡಿ ಬಿತ್ತಿದ ಬೆಳೆ ನಾಶವಾದರೆ ಬೆಳೆ ವಿಮೆಯಲ್ಲಾದರೂ ಮರಳಿ ಹಣಬರಬಹುದೆಂದುಕೊಂಡಿದ್ದ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ನಮ್ಮ ಬೆಳೆ ವಿಮೆ ಹಣ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಕೆಲವು ರೈತರಿಗೆ ಬೆಳೆ ವಿಮೆ ಹಣ ಹಾಕಿ, ಕೆಲವು ರೈತರಿಗೆ ಹಣ ಹಾಕದೆ ಇರೋದು ರೈತರ ಅಸಮಾಧಾನ ಹೆಚ್ಚಿಸುವಂತೆ ಮಾಡಿದೆ.
ಬೆಳೆ ವಿಮೆಯ ಹೆಸರಿನಲ್ಲಿ ರೈತರ ಹಣವನ್ನ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ವಿರುದ್ದ ಬೀದರ್ ರೈತರು ಆಕ್ರೋಶಗೊಂಡಿದ್ದಾರೆ. ಸಾವಿರಾರು ರೂಪಾಯಿ ಹಣವನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿದ ರೈತರಿಗೆ ಬೆಳೆವಿಮೆ ಬಾರದಿರುವುದಕ್ಕೆ ಯಾರು ಹೊಣೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ಗೆದ್ದ ಸಂತಸದಲ್ಲಿರುವ ಟೀಂ ಇಂಡಿಯಾದ ಮುಂದಿನ ಗುರಿ 2027 ರ ಏಕದಿನ ವಿಶ್ವಕಪ್ (2027 ODI World Cup). 2023 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮುಗ್ಗರಿಸಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದ್ದ ಟೀಂ ಇಂಡಿಯಾ (Team India) ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಈ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದೆಲ್ಲದರ ನಡುವೆ 2027 ರ ಏಕದಿನ ವಿಶ್ವಕಪ್ ಯಾವ ಸ್ವರೂಪದಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸ್ವರೂಪವನ್ನು ನೋಡಿದ ಟೀಂ ಇಂಡಿಯಾ ಅಭಿಮಾನಿಗಳ ಮನದಲ್ಲಿ ಸಂತಸ ಮನೆಮಾಡಿದೆ.
2027 ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಈ ಹಿಂದೆ 2003 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ಆಗ ಕೀನ್ಯಾ ಮೂರನೇ ಆತಿಥೇಯ ರಾಷ್ಟ್ರವಾಗಿತ್ತು, ಆದರೆ ಈ ಬಾರಿ ನಮೀಬಿಯಾ ಮೂರನೇ ಆತಿಥೇಯ ರಾಷ್ಟ್ರವಾಗಲಿದೆ. ಆದರೆ ಹೋಲಿಕೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ತಂಡಗಳ ಸಂಖ್ಯೆ ಮತ್ತು ಸ್ವರೂಪವು 2003 ರ ವಿಶ್ವಕಪ್‌ಗೆ ಹೋಲುತ್ತದೆ.
2003 ರಲ್ಲಿ ನಡೆದಂತೆ ನಡೆಯಲಿದೆ ಈ ವಿಶ್ವಕಪ್
ಈ ಬಾರಿ, 2003 ರ ವಿಶ್ವಕಪ್‌ನಂತೆಯೇ 14 ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ. ಆದರೆ ತಂಡಗಳ ಸಂಖ್ಯೆಗಿಂತ ವಿಶ್ವಕಪ್‌ನ ಸ್ವರೂಪ ಮುಖ್ಯವಾಗಿದೆ. ಈ 14 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ 2 ಗುಂಪುಗಳಲ್ಲಿ ತಲಾ ಏಳು ತಂಡಗಳು ಇರಲಿವೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಪಂದ್ಯಗಳನ್ನು ಆಡುತ್ತವೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ 6 ಸುತ್ತಿಗೆ ಮುನ್ನಡೆಯುತ್ತವೆ, ಅಲ್ಲಿ ಪ್ರತಿ ತಂಡವು ಇನ್ನೊಂದು ಗುಂಪಿನ ಮೂರು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಗುಂಪು ಹಂತದಲ್ಲಿ ತಂಡವೊಂದು ಗಳಿಸಿದ ಅಂಕಗಳು, ಸೂಪರ್ ಸಿಕ್ಸ್ ಹಂತದಲ್ಲೂ ಪರಿಗಣನೆಗೆ ಬರುತ್ತವೆ. ಇದು ಪ್ರತಿ ಪಂದ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಅಂತಿಮವಾಗಿ, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತವೆ.
2003 ರ ವಿಶ್ವಕಪ್ ಕೂಡ ಇದೇ ಮಾದರಿಯಲ್ಲಿ ನಡೆದಿತ್ತು. ಆ ಟೂರ್ನಿಯಲ್ಲಿಯೂ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಆದರೆ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈ ಬಾರಿಯ ವಿಶ್ವಕಪ್ ಕೂಡ ಅದೇ ಮಾದರಿ ಮತ್ತು ಅದೇ ದೇಶಗಳಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾ ಫೈನಲ್ ತಲುಪಿ ಟ್ರೋಫಿ ಎತ್ತಿಹಿಡಿಯಲಿ ಎಂಬುದನ್ನು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ, (ಮಾರ್ಚ್ 23): ಅವರಿಬ್ಬರೂ ಹದಿನೈದು ವರ್ಷದ ಹಿಂದೆ ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆಯೂ ಅಂತರ್ಜಾತಿ ಮದುವೆಯಾದವರು. ಮೂರು ಮುದ್ದಾದ ಮಕ್ಕಳು ಈ ದಂಪತಿ ಅನ್ಯೋನ್ಯತೆಗೆ ಸಾಕ್ಷಿಯಾಗಿದ್ದರು. ಆದರೀಗ ಅದೊಂದು ಕಾರಣಕ್ಕೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಪತಿ ಮನೆಯಿಂದ ಎಳೆತಂದು ಕಲ್ಲಿನಿಂದ ಜಜ್ಜಿ ನಡು ರಸ್ತೆಯಲ್ಲೇ ಬರ್ಬರ ಹತ್ಯೆ ಮಾಡಿದ್ದಾನೆ. ಈ ಘೋರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಿವಕ್ಕ ಹಾಗೂ ಬಸವರಾಜ 15 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಶಿವಕ್ಕ ಮೊದಲ ಪತಿ ಅಕಾಲಿಕ ಮರಣದ ನಂತರ ತನ್ನದೇ ಗ್ರಾಮದ ಬಸವರಾಜನನ್ನ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ಹೆಚ್ಚಾಗುತ್ತಾ ಬಂದಿದ್ದವು. ಗಲಾಟೆಗಳಿಂದ ಬೇಸತ್ತ ಶಿವಕ್ಕ, ತನ್ನಿಬ್ಬರು ಮಕ್ಕಳೊಂದಿಗೆ ನರಗುಂದದ ಮಠವೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾ ಮಕ್ಕಳಿಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದಳು. ಮತ್ತೊಂದೆಡೆ, ಬಸವರಾಜ ಮೊದಲ ಮಗಳನ್ನು ತನ್ನ ತಾಯಿ ಬಳಿ ಇಟ್ಟುಕೊಂಡು ಡ್ರೈವರ್ ಕೆಲಸ ಮಾಡುತ್ತಿದ್ದ. ದೂರದ ಊರುಗಳಿಗೆ ಹೋಗ್ತಿದ್ದ ಬಸವರಾಜ, ಆಗಾಗ ತಾಯಿ ಮಗಳ ಕಡೆಗೆ ಬಂದು ಹೋಗುವುದನ್ನ ಮಾಡ್ತಿದ್ದ. ಮಗಳನ್ನ ನೋಡಿಕೊಳ್ಳುವ ವಿಚಾರಕ್ಕೆ ನಡೆದ ಗಲಾಟೆ ಬಳಿಕ ಪತ್ನಿ ಮೇಲೆ ಸಂಶಯಗೊಂಡು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಾರ್ವಜನಿಕವಾಗಿ ಕಲ್ಲಿಂದ ಜಜ್ಜಿ ಪತ್ನಿ ಹತ್ಯೆ ಮಾಡಿದ್ಯಾಕೆ? ಗಂಡನಿಗೆ ಅಂತಹ ದ್ವೇಷ ಏನಿತ್ತು ಎನ್ನುವುದನ್ನು ಎಸ್ಪಿ ಬಿಚ್ಚಿಟ್ಟಿದ್ದಾರೆ.
ಕುವೈತ್, ಮಾರ್ಚ್ 23: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಮುಂದುವರೆದಂತೆ ಇರಾನ್ (Iran War) ಕೂಡ ಗಲ್ಫ್ ದೇಶಗಳಲ್ಲಿನ ಅಮೆರಿಕದ ವಾಯುನೆಲೆಗಳ ಮೇಲಿನ ದಾಳಿಯನ್ನು ಮುಂದುವರೆಸಿದೆ. ಈ ಯುದ್ಧ ಆರಂಭವಾಗಿ 24 ದಿನಗಳಾಗಿವೆ. ಇನ್ನೂ ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಲೇ ಇದೆ. ಇದರ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಎಕ್ಸ್ನಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.
ಇದು ಕುವೈತ್‌ನಲ್ಲಿ ಅಮೆರಿಕದ ಮಿಲಿಟರಿಯ ಮತ್ತೊಂದು F-15E ಯುದ್ಧವಿಮಾನ ಪತನವಾಗುವುದನ್ನು ತೋರಿಸುತ್ತದೆ. ಇದು ಯಾವ ದಿನ ನಡೆದಿರುವ ದಾಳಿಯೆಂಬ ಮಾಹಿತಿಯಿಲ್ಲ. ಇರಾನ್‌ನ ರಾಜ್ಯ ಮಾಧ್ಯಮಗಳು ಭಾನುವಾರ ಹಾರ್ಮುಜ್ ದ್ವೀಪದ ಬಳಿ ‘ಶತ್ರು’ದೇಶದ F-15 ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಇದೀಗ ವೈರಲ್ ಆದ ಈ ವಿಡಿಯೋ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 23: ಟಿವಿ9 ನೆಟ್ವರ್ಕ್ನ ಪ್ರತಿಷ್ಠಿತ ಕಾರ್ಯಕ್ರಮ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026”ರ ನಾಲ್ಕನೇ ಆವೃತ್ತಿ ನವದೆಹಲಿಯಲ್ಲಿ ಇಂದಿನ ಆರಂಭವಾಗಿದೆ. ಈ ಬಾರಿಯ ಶೃಂಗಸಭೆ ಭಾರತ ಮತ್ತು ಜಗತ್ತು ಎಂಬ ಥೀಮ್ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಗಣ್ಯರನ್ನು ಉದ್ದೇಶಿಸಿ ಮಾತನಾಡಿದರು. ಉದ್ಯಮ ಕ್ಷೇತ್ರದ ದಿಗ್ಗಜರು, ಆರ್ಥಿಕ ತಜ್ಞರು, ರಾಜಯಕೀಯ ನಾಯಕರು, ಸಿನಿಮಾ ಕ್ಷೇತ್ರದ ನಟರು, ಕ್ರೀಡಾಪಟುಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ”ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಲೈವ್ ನೋಡಿ.
ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲಿ ಕೇಳಿದರೂ ‘ಧುರಂಧರ್: ದಿ ರಿವೆಂಜ್’ (Dhurandhar 2) ಸಿನಿಮಾದ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರವಲ್ಲದೇ, ಈ ವಾರದ IMDb ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲೂ (IMDb Popular Indian Celebrities list) ಈ ಚಿತ್ರದ ತಂಡವೇ ರಾರಾಜಿಸುತ್ತಿದೆ. ವಿಶೇಷ ಏನೆಂದರೆ, ಈ ಸಿನಿಮಾದ ಕಲಾವಿದರನ್ನೂ ಮೀರಿಸಿ, ನಿರ್ದೇಶಕ ಆದಿತ್ಯ ಧರ್ ಅವರು ನಂಬರ್ ಒನ್ ಸ್ಥಾನ ಪಡೆದಿದ್ದಾರೆ.
ಸಾಮಾನ್ಯವಾಗಿ ಇಂತಹ ಪಟ್ಟಿಗಳಲ್ಲಿ ಸ್ಟಾರ್ ನಟರು ಮೊದಲ ಸ್ಥಾನದಲ್ಲಿರುತ್ತಾರೆ. ಆದರೆ ಈ ಬಾರಿ ‘ಧುರಂಧರ್’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರು ನಟರನ್ನೆಲ್ಲಾ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಚಿತ್ರದ ಕಥೆ ಮತ್ತು ಮೇಕಿಂಗ್ ಮೂಲಕ ಅವರು ಜನಮನ ಗೆದ್ದಿರುವುದಕ್ಕೆ ಇದು ಸಾಕ್ಷಿಯಾಗಿದೆ. ಅವರ ಕೆಲಸಕ್ಕೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ.
IMDb ಪಟ್ಟಿಯಲ್ಲಿರುವ ‘ಧುರಂಧರ್ 2’ ಚಿತ್ರತಂಡ:
ಆದಿತ್ಯ ಧರ್ (ನಿರ್ದೇಶಕ): 1ನೇ ಸ್ಥಾನ
ಸಾರಾ ಅರ್ಜುನ್: 2ನೇ ಸ್ಥಾನ
ರಣವೀರ್ ಸಿಂಗ್: 3ನೇ ಸ್ಥಾನ
ಉದಯ್‌ಬೀರ್ ಸಂಧು: 7ನೇ ಸ್ಥಾನ
ಅರ್ಜುನ್ ರಾಮ್ಪಾಲ್: 9ನೇ ಸ್ಥಾನ
ಸೌಮ್ಯಾ ಟಂಡನ್: 10ನೇ ಸ್ಥಾನ
ಗೌರವ್ ಗೇರಾ: 12ನೇ ಸ್ಥಾನ
ಡ್ಯಾನಿಶ್ ಇಕ್ಬಾಲ್: 13ನೇ ಸ್ಥಾನ
ರಾಕೇಶ್ ಬೇಡಿ: 20ನೇ ಸ್ಥಾನ
ಇದಲ್ಲದೆ, ಮೊದಲ ಭಾಗದಲ್ಲಿ ನಟಿಸಿದ್ದ ಅಕ್ಷಯ್ ಖನ್ನಾ 16ನೇ ಸ್ಥಾನದಲ್ಲಿದ್ದಾರೆ. ಇತರ ನಟರ ಪೈಕಿ ಅನಾಸ್ವರ ರಾಜನ್ (6ನೇ ಸ್ಥಾನ) ಮತ್ತು ಜತಿನ್ ಗೋಸ್ವಾಮಿ (14ನೇ ಸ್ಥಾನ) ಕೂಡ ಪಟ್ಟಿಯಲ್ಲಿದ್ದಾರೆ.
ಮಾರ್ಚ್ 19ರಂದು ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾ, ಕರಾಚಿಯ ಲಿಯಾರಿ ಹಿನ್ನೆಲೆಯಲ್ಲಿ ನಡೆಯುವ ಕಥೆ ಹೊಂದಿದೆ. ಭಾರತೀಯ ಸಂಸತ್ ಭವನದ ಮೇಲಿನ ದಾಳಿ, 26/11 ಮುಂಬೈ ದಾಳಿ ಮತ್ತು ಕಂದಹಾರ್ ವಿಮಾನ ಹೈಜಾಕ್‌ನಂತಹ ನೈಜ ಘಟನೆಗಳ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸದ್ಯ ಈ ಚಿತ್ರವು ಭಾರತದಲ್ಲಿ 450 ಕೋಟಿ ರೂ. ಹಾಗೂ ವಿಶ್ವದಾದ್ಯಂತ ಭರ್ಜರಿ 750 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.
ಐಎಂಡಿಬಿ ಒಂದು ಪ್ರಸಿದ್ಧ ಆನ್‌ಲೈನ್ ವೇದಿಕೆ ಆಗಿದ್ದು, ಸಿನಿಮಾ, ಟಿವಿ ಶೋಗಳು, ನಟರು, ನಿರ್ಮಾಪಕರ ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಜನರು ಸಿನಿಮಾಗಳ ವಿಮರ್ಶೆಗಳನ್ನು ಓದಲು, ರೇಟಿಂಗ್ ನೀಡಲು ಮತ್ತು ಹೊಸ ಬಿಡುಗಡೆಗಳ ಬಗ್ಗೆ ಈ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ಇದು ಚಿತ್ರರಂಗದ ಮಾಹಿತಿಗಾಗಿ ವಿಶ್ವಾಸಾರ್ಹ ಮೂಲವಾಗಿದೆ. ಇಲ್ಲಿ ಜನರು ಸಿನಿಮಾಗಳಿಗೆ ರೇಟಿಂಗ್ ಮತ್ತು ವಿಮರ್ಶೆಗಳನ್ನು ನೀಡಬಹುದು. ನಿಖರ ಮಾಹಿತಿ, ನಟರ ವಿವರಗಳು ಮತ್ತು ಟ್ರೈಲರ್‌ಗಳು ಸುಲಭವಾಗಿ ಲಭ್ಯವಾಗುತ್ತವೆ.
ನವದೆಹಲಿ, ಮಾರ್ಚ್ 23: ಹೊಸ ಹಣಕಾಸು ವರ್ಷ ಆರಂಭವಾಗಲು ಒಂದು ವಾರವಷ್ಟೇ ಉಳಿದಿರುವುದು. ಹೊಸ ವಿತ್ತ ವರ್ಷ ಆರಂಭಕ್ಕೆ ಮುನ್ನ ಮಾಡಬೇಕಾದ ಕೆಲ ಹಣಕಾಸು ಕಾರ್ಯಗಳು (Financial tasks) ತಿಳಿದಿರಲಿ. ಕೆಲ ಪ್ರಮುಖ ಕಾರ್ಯಗಳಿಗೆ ಮಾರ್ಚ್ 31ರವರೆಗೆ ಕಾಲಾವಕಾಶ ಇರುತ್ತದೆ. ಅದು ತಪ್ಪಿದರೆ ಒಂದಷ್ಟು ಹಿನ್ನಡೆ ಅಥವಾ ತೊಂದರೆ ಎದುರಾಗಬಹುದು. ಆರ್ಥಿಕವಾಗಿ ಪರಿಣಾಮ ಬೀರಬಲ್ಲ ಈ ಮಾರ್ಚ್ 31ರ ಡೆಡ್ಲೈನ್ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಪ್ಯಾನ್ ಕಾರ್ಡ್ ನಿಯಮ ಬದಲಾವಣೆ
ಸದ್ಯ ನೀವು ಪ್ಯಾನ್ ಕಾರ್ಡ್ ಪಡೆಯಬೇಕಾದರೆ ಆಧಾರ್ ದಾಖಲೆ ಕೊಟ್ಟರೆ ಸಾಕು. ಈ ಅವಕಾಶ 2026ರ ಮಾರ್ಚ್ 31ರವರೆಗೆ ಮಾತ್ರ. ಏಪ್ರಿಲ್ 1ರಿಂದ ಹೊಸ ನಿಯಮ ಬರುತ್ತಿದೆ. ಆಗ ನೀವು ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಮಾತ್ರವಲ್ಲ, ವೋಟರ್ ಐಡಿ, ಪಾಸ್ಪೋರ್ಟ್, ಡಿಎಲ್, ಬರ್ತ್ ಸರ್ಟಿಫಿಕೇಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ಇತ್ಯಾದಿ ಯಾವುದಾದರೂ ಹೆಚ್ಚುವರಿ ದಾಖಲೆಗಳನ್ನು ಕೊಡಬೇಕಾಗುತ್ತದೆ.
ಉದ್ಯೋಗಿಯ ಸಂಬಳದ ಹಣಕ್ಕೆ ಟಿಡಿಎಸ್ ಮುರಿದುಕೊಳ್ಳುವುದನ್ನು ತಪ್ಪಿಸಲು ಕಂಪನಿಗಳು ಉದ್ಯೋಗಿಗಳಿಂದ ಇನ್ವೆಸ್ಟ್ಮೆಂಟ್ ಪ್ರೂಫ್ ಕೇಳುತ್ತವೆ. ಇನ್ಷೂರೆನ್ಸ್ ಪ್ರೀಮಿಯಮ್ ಪೇಮೆಂಟ್ನ ರೆಸಿಪ್ಟ್ಗಳು, ಪಿಪಿಎಫ್ನಲ್ಲಿ ಹೂಡಿಕೆ ಮಾಡಿದ್ದರೆ ಅದರ ರೆಸಿಪ್ಟ್ಗಳು; ಎಚ್ಆರ್ಎ ಕ್ಲೇಮ್ ಮಾಡಬೇಕೆಂದಿದ್ದರೆ ರೆಂಟ್ ರೆಸಿಪ್ಟ್ಗಳು ಮತ್ತು ರೆಂಟಲ್ ಅಗ್ರೀಮೆಂಟ್; ಇಎಲ್ಎಸ್ಎಸ್ ಇನ್ವೆಸ್ಟ್ಮೆಂಟ್ ಸ್ಟೇಟ್ಮೆಂಟ್ ಇತ್ಯಾದಿ ದಾಖಲೆಗಳನ್ನು ಉದ್ಯೋಗಿಗಳು ತಮ್ಮ ಕಂಪನಿಯ ಎಚ್ಆರ್ ವಿಭಾಗಕ್ಕೆ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಡೆಡ್ಲೈನ್ ಮಾರ್ಚ್ 31. ನೀವು ದಾಖಲೆ ಸಲ್ಲಿಸದಿದ್ದರೆ ಸಂಬಳದಿಂದ ಟಿಡಿಎಸ್ ಕಡಿತ ಆಗಬಹುದು.
ಹಳೆಯ ಟ್ಯಾಕ್ಸ್ ರಿಜೀಮ್ನಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಲಾಭಕ್ಕೆ ಅವಕಾಶ ಇದೆ. ಪಿಪಿಎಫ್, ಸುಕನ್ಯಾ ಸಮೃದ್ದಿ, ಎನ್ಪಿಎಸ್ ಇತ್ಯಾದಿ ಸೇವಿಂಗ್ಸ್ ಸ್ಕೀಮ್ಗಳಿಗೆ ಮಾಡುವ ಹೂಡಿಕೆಗಳಿಗೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು. ಮಾರ್ಚ್ 31ರೊಳಗೆ ನೀವು ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಅದು ಮುಂದಿನ ಹಣಕಾಸು ವರ್ಷದ ಲೆಕ್ಕಕ್ಕೆ ಹೋಗುತ್ತದೆ.
ಸೆಕ್ಷನ್ 80ಡಿ ಅಡಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಹಣ ಪಾವತಿಗೆ ಡಿಡಕ್ಷನ್ ಸಿಗುತ್ತದೆ. 25,000 ರೂವರೆಗಿನ ಪಾವತಿಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಮಾರ್ಚ್ 31ರೊಳಗೆ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸಿರಿ.
ಹೋಮ್ ಲೋನ್ ಪಡೆದಿದ್ದರೆ ಪ್ರಿನ್ಸಿಪಾಲ್ ಮೊತ್ತ ಹಾಗೂ ಬಡ್ಡಿ ಎರಡಕ್ಕೂ ಡಿಡಕ್ಷನ್ ಸೌಲಭ್ಯ ಇದೆ. ತೆರಿಗೆ ಪಾವತಿದಾರರು ತಮ್ಮ ಬ್ಯಾಂಕಿಂದ ಹೋಮ್ ಲೋನ್ ಇಂಟರೆಸ್ಟ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ