ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು – Kannada News | Pakistan Army Headquarter Under Attack 1 Pak Soldier Killed

ರಾವಲ್ಪಿಂಡಿ, ಆಗಸ್ಟ್ 11: ಪಾಕಿಸ್ತಾನದ (Pakistan) ರಾವಲ್ಪಿಂಡಿಯಲ್ಲಿರುವ ಸೇನೆಯ ಮುಖ್ಯ ಪ್ರಧಾನ ಕಚೇರಿಯ ಮುಖ್ಯ ದ್ವಾರದ ಬಳಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರ ಪ್ರವೇಶ ತಪಾಸಣಾ ಕೇಂದ್ರದ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಮಿಲಿಟರಿ ಕಮಾಂಡ್ ಸೆಂಟರ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ಆದರೂ ಈ ಘಟನೆಯಲ್ಲಿ ಪಾಕಿಸ್ತಾನದ ಓರ್ವ ಸೈನಿಕ ಮೃತಪಟ್ಟಿದ್ದಾರೆ.

ಎರಡೂ ಕಡೆಗಳಿಂದ ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ ಓರ್ವ ಯೋಧ ಕರ್ತವ್ಯ ನಿರತರಾಗಿದ್ದಾಗಲೇ ಮೃತರಾಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಚೇರಿಯ ಒಳಭಾಗದ ಭದ್ರತಾ ವಲಯಕ್ಕೆ ನುಗ್ಗಲು ಯತ್ನಿಸುತ್ತಿದ್ದ ದಾಳಿಕೋರನನ್ನು ಭದ್ರತಾ ಪಡೆಗಳು ಸ್ಥಳದಲ್ಲೇ ಹೊಡೆದುರುಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ – Kannada News | Direct tax collections this year rise drastically, with non corporate taxes see big increase

ನವದೆಹಲಿ, ಆಗಸ್ಟ್ 11: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು (Net Direct Tax Collections) ಶೇ. 23.09 ರಷ್ಟು ಭಾರಿ ಏರಿಕೆ ಕಂಡಿದೆ. ನಿನ್ನೆಯವರೆಗಿನ (ಆ. 10) ಅಂಕಿಅಂಶಗಳ ಪ್ರಕಾರ, ಒಟ್ಟು ನಿವ್ವಳ ನೇರ ತೆರಿಗೆ ₹8.11 ಲಕ್ಷ ಕೋಟಿ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಮೊತ್ತವು ₹6.59 ಲಕ್ಷ ಕೋಟಿಯಾಗಿತ್ತು. ಈ ವರ್ಷದಲ್ಲಿ ಭರ್ಜರಿ ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ಆದಾಯ ತೆರಿಗೆ ಇತ್ಯಾದಿ ಆದಾಯಗಳಿಗೆ ವಿಧಿಸಲಾಗುವ ಟ್ಯಾಕ್ಸ್ ಆಗಿದೆ.

ಕಾರ್ಪೊರೇಟೇತರ ತೆರಿಗೆದಾರರ ಕೊಡುಗೆ

ಈ ಬಾರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರು, ಎಚ್‌ಯುಎಫ್ (HUF) ಮತ್ತು ಸಂಸ್ಥೆಗಳನ್ನೊಳಗೊಂಡ ‘ಕಾರ್ಪೊರೇಟೇತರ’ (Non-Corporate Taxes) ವಿಭಾಗದ ಪಾತ್ರ ದೊಡ್ಡದಾಗಿದೆ. ಈ ವಿಭಾಗದಿಂದ ಹರಿದುಬಂದ ನಿವ್ವಳ ತೆರಿಗೆ ಮೊತ್ತವು ₹5.07 ಲಕ್ಷ ಕೋಟಿ ತಲುಪಿದ್ದು, ಕಳೆದ ವರ್ಷಕ್ಕೆ (₹4.11 ಲಕ್ಷ ಕೋಟಿ) ಹೋಲಿಸಿದರೆ ಸುಮಾರು 23.4% ಪ್ರಗತಿ ದಾಖಲಿಸಿದೆ.

ಇದನ್ನೂ ಓದಿ: ನಿಮ್ಮ ಬಳಿ ಆಧಾರ್ ಇದ್ರೆ ಸಾಕು ಇ-ಪ್ಯಾನ್ ಕಾರ್ಡ್ ಪಡೆಯೋದು ಸುಲಭ

ಕಾರ್ಪೊರೇಟ್ ತೆರಿಗೆ ಏರಿಕೆ

ಕಂಪನಿಗಳು ಮತ್ತು ಉದ್ಯಮ ವಲಯದಿಂದ ಪಾವತಿಯಾದ ನಿವ್ವಳ ಕಾರ್ಪೊರೇಟ್ ತೆರಿಗೆ (Corporate Tax) ಸಂಗ್ರಹವು ₹2.26 ಲಕ್ಷ ಕೋಟಿಯಿಂದ ₹2.70 ಲಕ್ಷ ಕೋಟಿಗೆ (19.8% ಏರಿಕೆ) ಹೆಚ್ಚಳವಾಗಿದೆ.

ಒಟ್ಟು ತೆರಿಗೆ ಸಂಗ್ರಹ ಹಾಗೂ ರಿಫಂಡ್

ಯಾವುದೇ ರಿಫಂಡ್ ನೀಡುವ ಮೊದಲು ಸಂಗ್ರಹವಾದ ಒಟ್ಟು ನೇರ ತೆರಿಗೆ (Gross Collection) ಮೊತ್ತವು ₹9.55 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗ್ರಾಸ್ ಟ್ಯಾಕ್ಸ್ ಕಲೆಕ್ಷನ್ ₹7.97 ಲಕ್ಷ ಕೋಟಿ ಇತ್ತು. ಈ ವರ್ಷ 19.75% ಏರಿದೆ.

ಇಲಾಖೆಯು ಈ ಅವಧಿಯಲ್ಲಿ ₹1.43 ಲಕ್ಷ ಕೋಟಿ ಮೊತ್ತದ ರಿಫಂಡ್ (Refunds) ಅನ್ನು ತೆರಿಗೆದಾರರಿಗೆ ಹಿಂತಿರುಗಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 3.79 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಜಿಗಿತ

ಷೇರು ಮಾರುಕಟ್ಟೆ ವಹಿವಾಟಿನ ಮೇಲೆ ವಿಧಿಸುವ ‘ಎಸ್‌ಟಿಟಿ’ (STT) ಸಂಗ್ರಹದಲ್ಲಿ ಬೃಹತ್ ಜಿಗಿತ ಕಂಡುಬಂದಿದ್ದು, ಕಳೆದ ವರ್ಷದ ₹22,354 ಕೋಟಿಯಿಂದ ₹33,824 ಕೋಟಿಗೆ (ಸುಮಾರು 51% ಏರಿಕೆ) ಏರಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯನಿಂದ ಬ್ರಿಟಿಷ್ ಸರ್ಕಾರಕ್ಕೆ 35,000 ರೂ. ಸಾಲ; 109 ವರ್ಷಗಳ ಬಳಿಕ ಇಂಗ್ಲೆಂಡ್​​ನಿಂದ ಬಂತು ಇಮೇಲ್! – Kannada News | Rs 35,000 loan to British Government in 1917 Madhya Pradesh family gets response from UK debt office after 109 years

ನವದೆಹಲಿ, ಆಗಸ್ಟ್ 11: ಮೊದಲ ಮಹಾಯುದ್ಧದ ಸಮಯದಲ್ಲಿ (1917ರಲ್ಲಿ) ಬ್ರಿಟಿಷ್ ಸರ್ಕಾರಕ್ಕೆ ಸಾಲ ನೀಡಿದ್ದ ಮಧ್ಯಪ್ರದೇಶದ ಸೆಹೋರ್ ಮೂಲದ ಕುಟುಂಬವೊಂದಕ್ಕೆ 109 ವರ್ಷಗಳ ಬಳಿಕ ಯುನೈಟೆಡ್ ಕಿಂಗ್‌ಡಮ್‌ನ (UK) ಸಾಲ ನಿರ್ವಹಣಾ ಕಚೇರಿಯಿಂದ (DMO) ಇಮೇಲ್ ಮೂಲಕ ಉತ್ತರ ಬಂದಿದೆ. ಅದರಲ್ಲಿ, ಮೂಲ ಯುದ್ಧ ಸಾಲ ಪ್ರಮಾಣಪತ್ರ ಮತ್ತು ಸಂಬಂಧಿತ ಪತ್ರವ್ಯವಹಾರದ ಪ್ರತಿಗಳನ್ನು ಕೋರಲಾಗಿದೆ. ಆ ಕುಟುಂಬವು ಪ್ರಸ್ತುತ ಬ್ರಿಟಿಷ್ ಅಧಿಕಾರಿಗಳಿಗೆ ಕಳುಹಿಸಲು ಅಗತ್ಯ ದಾಖಲೆಗಳು ಮತ್ತು ಇತರ ಬ್ಯಾಕಪ್ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.

ಏನಿದು ಘಟನೆ?:

ಸೆಹೋರ್‌ನ ಪ್ರಸಿದ್ಧ ಉದ್ಯಮಿ ಹಾಗೂ ನಗರ ಸೇಠ್ ಆಗಿದ್ದ ಜುಮ್ಮಾ ಲಾಲ್ ರುಥಿಯಾ ಎಂಬುವವರು 1917ರ ಜೂನ್ 4ರಂದು ಪ್ರಥಮ ಮಹಾಯುದ್ಧದ ನಿಧಿ ಸಂಗ್ರಹಕ್ಕಾಗಿ ಬ್ರಿಟಿಷ್ ಸರ್ಕಾರ ಬಿಡುಗಡೆ ಮಾಡಿದ್ದ ‘ಇಂಡಿಯನ್ ವಾರ್ ಲೋನ್’ಗೆ 35,000 ರೂ. ಸಾಲ ನೀಡಿದ್ದರು. ಆಗಿನ ಭೋಪಾಲ್‌ನ ಪೊಲಿಟಿಕಲ್ ಏಜೆಂಟ್ ಡಬ್ಲ್ಯೂ.ಎಸ್. ಡೇವಿಸ್ ಈ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದರು. 1937ರಲ್ಲಿ ಸೇಠ್ ಜುಮ್ಮಾ ಲಾಲ್ ನಿಧನರಾದರು. ನಂತರ ಸ್ವಾತಂತ್ರ್ಯ ಚಳವಳಿ ನಡೆದು ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾಯಿತು. ಹೀಗಾಗಿ, ಆ ಸಾಲವನ್ನು ಅವರ ಕುಟುಂಬಕ್ಕೆ ಮರುಪಾವತಿ ಮಾಡಿರಲಿಲ್ಲ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಕಾನೂನು ನೋಟಿಸ್:

ಜುಮ್ಮಾ ಲಾಲ್ ಅವರ ಮೊಮ್ಮಕ್ಕಳಾದ ವಿವೇಕ್ ರುಥಿಯಾ (63) ಮತ್ತು ವಿನಯ್ ರುಥಿಯಾ ಅವರು ತಮ್ಮ ವಕೀಲರ ಮೂಲಕ 2026ರ ಫೆಬ್ರವರಿಯಲ್ಲಿ ಬ್ರಿಟನ್‌ನ ಸಾಲ ನಿರ್ವಹಣಾ ಕಚೇರಿಗೆ (DMO) ಹಳೆಯ ಪ್ರಮಾಣಪತ್ರ ಮತ್ತು ದಾಖಲೆಗಳ ಆಧಾರದ ಮೇಲೆ ನೋಟಿಸ್ ಕಳುಹಿಸಿದ್ದರು.

ಬ್ರಿಟನ್ ಸರ್ಕಾರದ ಉತ್ತರವೇನು?:

ಆ ನೋಟಿಸ್​​ಗೆ ಯುಕೆಯ ಸಾಲ ನಿರ್ವಹಣಾ ಕಚೇರಿಯು ರುಥಿಯಾ ಕುಟುಂಬದ ವಕೀಲರಿಗೆ ಇಮೇಲ್ ಕಳುಹಿಸಿದ್ದು, 1917ರ ಸಾಲದ ಮೂಲ ಪ್ರಮಾಣಪತ್ರ ಮತ್ತು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳ ಪ್ರತಿಗಳನ್ನು ಸಲ್ಲಿಸುವಂತೆ ಕೋರಿದೆ. ಆ ದಾಖಲೆಗಳನ್ನು ಪರಿಶೀಲಿಸಿ, ಈ ಸಾಲವನ್ನು ಈ ಹಿಂದೆ ಮರುಪಾವತಿ ಮಾಡಲಾಗಿದೆಯೇ ಅಥವಾ ಬಾಕಿ ಉಳಿದಿದೆಯೇ ಎಂಬುದನ್ನು ಆರ್ಕೈವ್ಸ್ ಮುಖಾಂತರ ತನಿಖೆ ನಡೆಸುವುದಾಗಿ ಯುಕೆ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ

ಇಂದಿನ ಮೌಲ್ಯ ಎಷ್ಟು ಕೋಟಿ?:

109 ವರ್ಷಗಳ ಹಿಂದೆ ನೀಡಲಾಗಿದ್ದ 35,000 ರೂ.ಗೆ ಶೇ. 5.5ರ ವಾರ್ಷಿಕ ಬಡ್ಡಿ ದರದಲ್ಲಿ ಲೆಕ್ಕ ಹಾಕಿದರೆ, ಈಗ ಇದರ ಮೌಲ್ಯ ಹಲವು ಕೋಟಿ ರೂ. ಆಗಲಿದೆ. ಒಂದು ವೇಳೆ ಅಂದಿನ ಚಿನ್ನದ ಬೆಲೆಗೆ ಹೋಲಿಸಿ ಲೆಕ್ಕ ಹಾಕಿದರೆ (1917ರಿಂದ ಚಿನ್ನದ ಬೆಲೆ 3,000 ಪಟ್ಟು ಹೆಚ್ಚಾಗಿದೆ) ಈ ಮೊತ್ತವು 10 ಕೋಟಿ ರೂ.ಗಿಂತಲೂ ಹೆಚ್ಚು ಆಗಲಿದೆ ಎಂದು ಕುಟುಂಬಸ್ಥರು ಅಂದಾಜಿಸಿದ್ದಾರೆ. ತಮ್ಮ ತಾತನ ಸಾಲದ ಬಾಕಿ ಹಣ ಪಡೆಯುವುದು ಈಗ ಕೇವಲ ಹಣದ ವಿಚಾರವಾಗಿ ಉಳಿದಿಲ್ಲ, ಇದು ಕುಟುಂಬದ ಗೌರವದ ವಿಷಯವಾಗಿದೆ ಎಂದು ವಿವೇಕ್ ರುಥಿಯಾ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಾನಂದ ನೀಲಣ್ಣನವರ್​​ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್​ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ – Kannada News | Belagavi shivam associates cheat investors of rs 2110 crore: found In ed investigation

ಬೆಂಗಳೂರು/ಬೆಳಗಾವಿ, (ಆಗಸ್ಟ್ 11): ಬೆಳಗಾವಿ (Belagavi) ಶಿವಾನಂದ ಸಿದ್ದಪ್ಪ ನೀಲನ್ನವರ್ ಎನ್ನುವರಿಗೆ ಸೇರಿದ ಶಿವಂ ಅಸೋಸಿಯೇಟ್ಸ್ ನಿಂದ (Shivam Associates) ಜನರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಇಡಿ (Enforcement Directorate) ಪ್ರವೇಶ ಮಾಡಿದ್ದು,  ಶಿವಂ ಅಸೋಸಿಯೇಟ್ಸ್ ನಡೆಸಿದ ಕಳ್ಳಾಟವನ್ನು ಪತ್ತೆ ಮಾಡಿದೆ. ಹೌದು…. ಮಂಗಳೂರು ವಲಯ ಇಡಿ ಅಧಿಕಾರಿಗಳು ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇಕಡಾ 3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಠೇವಣಿ ಸಂಗ್ರಹಿಸಿದ್ದರು ಎಂಬುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೇ ಹೂಡಿಕೆದಾರರಿಗೆ ಬರೋಬ್ಬರಿಗೆ 2,110 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕಟಣೆ ಮೂಲಕ ತಿಳಿಸಿದ ಇಡಿ

ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು, ಶಿವಾನಂದ ಸಿದ್ದಪ್ಪ ನೀಲನ್ನವರ್ ಗೆ ಸೇರಿದ ಹಾಗೂ ಇತರ ಸಂಬಂಧಿತ ವ್ಯಕ್ತಿಗಳು, ಸಂಸ್ಥೆಗಳ ಮೇಲೆ ದಾಳಿ ಮಾಡಿ ತನಿಖೆ ಮಾಡಿದ್ದು, ಆರೋಪಿಗಳು ಹೆಚ್ಚಿನ ಸಂಖ್ಯೆಯ ಹೂಡಿಕೆದಾರರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿದ್ದಾರೆ. ವ್ಯವಹಾರಿಕ, ವೈಯಕ್ತಿಕ ಮತ್ತು ಮಧ್ಯವರ್ತಿ ಖಾತೆಗಳ ಮೂಲಕ ಹಣದ ವ್ಯವಹಾರ ನಡೆದಿದೆ. ಷೇರು ದಲ್ಲಾಳಿಗಳು, FD ಖಾತೆಗಳು, ಸಂಬಂಧಿತ ವ್ಯಕ್ತಿಗಳು ಮತ್ತು ಇತರ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಸ್ವತಃ ಇಡಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! ಬೆಳಗಾವಿಯಲ್ಲಿ ಮೂರು ಕಡೆಗಳಲ್ಲಿ ದಾಳಿ

ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇ.3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಒಟ್ಟು 2,110.97 ಕೋಟಿ ಠೇವಣಿ ಸಂಗ್ರಹಿಸಿದ್ದರು. ಆದರೆ, ಸಂಗ್ರಹಿಸಿದ ಮೊತ್ತದಲ್ಲಿ ಹೂಡಿಕೆದಾರರಿಗೆ ಕೇವಲ 333.89 ಕೋಟಿ ರೂಪಾಯಿ ಮಾತ್ರವೇ ಹಿಂದುರಿಗಿಸಿದ್ದಾರೆ. ಇನ್ನುಳಿದ 1,777.08 ಕೋಟಿ ಅಕ್ರಮ ಹಣದ ಸುಳಿವು ಪತ್ತೆಯಾಗಬೇಕಿದೆ. ಆರೋಪಿಗಳು ಸಾರ್ವಜನಿಕರನ್ನು ಸೆಳೆಯಲು ಮಧ್ಯವರ್ತಿಗಳಿಗೆ ಶೇ.0.5ರಷ್ಟು ಕಮಿಷನ್ ನೀಡುತ್ತಿದ್ದರು ಎಂಬ ಅಂಶವನ್ನೂ ಸಹ ಇಡಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

​ಹೂಡಿಕೆದಾರರಿಂದ ಸಂಗ್ರಹಿಸಿದ ಸಾರ್ವಜನಿಕರ ಹಣವನ್ನು ಷೇರು ಮಾರುಕಟ್ಟೆ, ಬ್ಯಾಂಕ್ ನಿಶ್ಚಿತ ಠೇವಣಿಗಳು, ರಿಯಲ್ ಎಸ್ಟೇಟ್ ಹಾಗೂ ನಿಕಟವರ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಈ ಜಾಲದಲ್ಲಿ ಶಿವಂ ಅಸೋಸಿಯೇಟ್ಸ್, ಶಿವಾನಂದ ಸಿದ್ಧಪ್ಪ ನೀಲಣ್ಣವರ, ಸುಭಾಷ್ ರಾಮಗೌಡ ನಂದರಗಿ, ಮಹೇಶ್ ಎಸ್.ನೀಲಣ್ಣವರ, ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ನೇರವಾಗಿ ಭಾಗಿಯಾಗಿರುವುದು ಕಂಡುಬಂದಿದೆ.​ ದಾಳಿಯ ಸಂದರ್ಭದಲ್ಲಿ ಅಕ್ರಮ ಹಣಕಾಸು ವಹಿವಾಟು, ಬೇನಾಮಿ ಆಸ್ತಿ ಹೂಡಿಕೆ ಹಾಗೂ ಡಿಜಿಟಲ್ ಸಾಕ್ಷ್ಯಗಳೂ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಕೃಷ್ಣಾ ನದಿಗೆ ಬಿದ್ದ ಕಾರು; ಟೋಲ್ ಗೇಟ್ ಬಳಿ ತಪ್ಪಿದ ಭಾರಿ ದುರಂತ – Kannada News | Bilagi: PWD Negligence Causes Car Plunge into Krishna River; Locals Demand Action

ಬಾಗಲಕೋಟೆ, ಆ.11: ಬೀಳಗಿ ತಾಲೂಕಿನ ಗಲಗಲಿ-ರಬಕವಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಕಾರೊಂದು ಬಿದ್ದ ಭೀಕರ ಘಟನೆ ನಡೆದಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಸುನೀಲ್ ಅಂಬಿಗೇರ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ಸರಿಯಾಗಿ ಜಲ್ಲಿಯನ್ನು ಸಮತಟ್ಟು ಮಾಡದೆ ಬೇಕಾಬಿಟ್ಟಿ ಬಿಟ್ಟಿದ್ದರಿಂದ ನಿಯಂತ್ರಣ ತಪ್ಪಿ ಕಾರು ಕೃಷ್ಣಾ ನದಿಗೆ ಬಿದ್ದಿದೆ.

ಕಾರು ನದಿಗೆ ಬೀಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಮಾಲೀಕ ಸುನೀಲ್, ಕಾರಿನ ಡೋರ್ ಒದ್ದು ಹೊರಬಂದಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವ ಯುವಕನನ್ನು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ತಕ್ಷಣವೇ ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಯಂತ್ರವನ್ನು ಬಳಸಿ ನದಿಯಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕಳೆದ ಒಂದು ವಾರದಲ್ಲೇ ಇದೇ ಜಾಗದಲ್ಲಿ 3 ಕಾರುಗಳು ಕೃಷ್ಣಾ ನದಿಗೆ ಬಿದ್ದಿದ್ದು, ಓರ್ವ ಬೈಕ್ ಸವಾರ ಕೂಡ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.

ಕಾರು ಮಾಲೀಕ ಸುನೀಲ್ ಅಂಬಿಗೇರ ಅವರು ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ದೂರು ನೀಡಲು ಹೋದಾಗ, ಬೀಳಗಿ ಠಾಣೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಲಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜಹೀರಾಬಾದ್ ಬಳಿ ಸಂಭವಿಸಿದ ಭೀಕರ ಅಪಘಾತ: ಆಟೋಗೆ ಟ್ಯಾಂಕರ್ ಡಿಕ್ಕಿ ಸೇರಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ 9 ಬಲಿ

ದಾವಣಗೆರೆ: ಟೋಲ್ ಗೇಟ್ ಬಳಿ ಕಾರಿಗೆ ಲಾರಿ ಡಿಕ್ಕಿ; ಜಸ್ಟ್ ಮಿಸ್

ದಾವಣಗೆರೆ ತಾಲೂಕಿನ ಹೆಬ್ಬಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ (NH 48) ಟೋಲ್ ಪ್ಲಾಜಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಟೋಲ್ ದಾಟಿ ಮುಂಭಾಗಕ್ಕೆ ತೆರಳುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ವೇಗದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಜ್ಜುಬಿದ್ದಿದೆಯಾದರೂ, ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಟೋಲ್ ಬಳಿ ನಿಂತಿದ್ದ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:57 pm, Tue, 11 August 26

Source link

ರಿಷಬ್ ಶೆಟ್ಟಿ ಅಭಿನಯದ ‘ಜೈ ಹನುಮಾನ್’ ಚಿತ್ರಕ್ಕೆ ವಮಿಕಾ ಗಬ್ಬಿ ಎಂಟ್ರಿ? – Kannada News | Dc movie actress wamiqa gabbi joins rishab shetty in jai hanuman

ನಟಿ ವಮಿಕಾ ಗಬ್ಬಿ (Wamiqa Gabbi) ಅವರಿಗೆ 2026ರ ವರ್ಷ ಸಾಲು ಸಾಲು ಯಶಸ್ಸು ತಂದುಕೊಡುತ್ತಿದೆ. ವರ್ಷದ ಆರಂಭದಲ್ಲೇ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ಅವರು, ನಂತರ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರಸ್ತುತ ತಮಿಳಿನ ‘ಡಿಸಿ’ ಚಿತ್ರದಲ್ಲಿ ಚಂದ್ರ ಎಂಬ ಪಾತ್ರದಲ್ಲಿ ನಟಿಸಿ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಅಪಾರ ಪ್ರಶಂಸೆ ಪಡೆಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಅವರು ಪ್ರಮುಖ ಪಾತ್ರದಲ್ಲಿದ್ದರೂ, ವಮಿಕಾ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇದೀಗ ವಮಿಕಾ ಅವರ ವೃತ್ತಿಜೀವನಕ್ಕೆ ಮತ್ತೊಂದು ಬಹುದೊಡ್ಡ ಅವಕಾಶ ಸಿಕ್ಕಿದೆ. ಪ್ರಶಾಂತ್ ವರ್ಮಾ ನಿರ್ದೇಶನದ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪಾನ್-ಇಂಡಿಯಾ ಪೌರಾಣಿಕ ಚಿತ್ರ ‘ಜೈ ಹನುಮಾನ್’ನಲ್ಲಿ ವಮಿಕಾ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಶಾಂತ್ ವರ್ಮಾ ಅವರ ‘ಸಿನಿಮ್ಯಾಟಿಕ್ ಯೂನಿವರ್ಸ್’ ಭಾಗವಾಗಿರುವ ಈ ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲೇ ಪ್ರಾರಂಭವಾಗಿದ್ದು, ವಮಿಕಾ ಗಬ್ಬಿ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2024ರ ಬ್ಲಾಕ್‌ಬಸ್ಟರ್ ‘ಹನು-ಮಾನ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ.

‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣದ ಈ ಪಾನ್-ಇಂಡಿಯಾ ಪೌರಾಣಿಕ ಸಿನಿಮಾಕ್ಕೆ ಮಾರ್ಚ್‌ನಿಂದಲೇ ಚಿತ್ರೀಕರಣ ಆರಂಭಗೊಂಡಿದ್ದು, 2027ರ ದ್ವಿತೀಯಾರ್ಧದಲ್ಲಿ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ವಮಿಕಾ ಗಬ್ಬಿ ಅವರ ಆಯ್ಕೆ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಮುಹೂರ್ತ: ಚಿತ್ರಗಳು ಇಲ್ಲಿವೆ ನೋಡಿ

ಇದಲ್ಲದೆ, ವಮಿಕಾ ಅವರ ಕೈಯಲ್ಲಿ ರಾಜ್‌ಕುಮಾರ್ ರಾವ್ ಜೊತೆಗಿನ ‘ಪ್ರಹಾರ್’, ಅಡಿವಿ ಶೇಷ್ ಜೊತೆಗಿನ ‘ಗೂಢಚಾರಿ 2’, ‘ದಿಲ್ ಕಾ ದರ್ವಾಜಾ ಖೋಲ್ ನಾ ಡಾರ್ಲಿಂಗ್’, ‘ಜೀನಿ’ ಮತ್ತು ‘ಕುಕು ಕಿ ಕುಂಡಲಿ’ ಸೇರಿದಂತೆ ಸಾಲು ಸಾಲು ದೊಡ್ಡ ಪ್ರಾಜೆಕ್ಟ್‌ಗಳಿವೆ. ಭಾರಿ ನಿರೀಕ್ಷೆ ಮೂಡಿಸಿರುವ ‘ಜೈ ಹನುಮಾನ್’ ಚಿತ್ರಕ್ಕೆ ಅವರು ಸೇರ್ಪಡೆಯಾದರೆ ಅವರ ಸಿನಿಪಯಣಕ್ಕೆ ದೊಡ್ಡ ಮೈಲೇಜ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ: ಇ-ಆಟೋಗೆ ಟ್ಯಾಂಕರ್ ಡಿಕ್ಕಿ ಹೊಡೆದು ಕರ್ನಾಟಕದ 9 ಕೂಲಿ ಕಾರ್ಮಿಕರ ದಾರುಣ ಸಾವು – Kannada News | Telangana Tragedy: E Auto Tanker Crash Kills 9, Two Separate Accidents Claim 9 Lives

ಸಂಗಾರೆಡ್ಡಿ, ಆ.11: ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, ಒಟ್ಟು 9 ಜನರು ದುರ್ಮರಣಕ್ಕೀಡಾಗಿದ್ದಾರೆ. ಮೊಗದಂಪಲ್ಲಿ ಮಂಡಲದ ಸತ್ವಾರ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇ-ಆಟೋಗೆ (e-Auto) ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕ ಮೂಲದ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೊಗದಂಪಲ್ಲಿ ಮಂಡಲದ ಸತ್ವಾರ್ ಬಳಿ ಈ ಭೀಕರ ದುರಂತ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಕರ್ನಾಟಕದ ಬೀದರ್ ಮೂಲದ ರಾಜಗಿರಿ ಗ್ರಾಮದ ಕೂಲಿ ಕಾರ್ಮಿಕರು ಎಂದು ಪೊಲೀಸರು ಗುರುತಿಸಿದ್ದಾರೆ. ಅಪಘಾತ ಸಂಭವಿಸಿದ ಸಮಯದಲ್ಲಿ ಇ-ಆಟೋದಲ್ಲಿ ಒಟ್ಟು 14 ಜನ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Published On – 9:31 pm, Tue, 11 August 26

Source link

ಮಕ್ಕಳಲ್ಲೂ ಹೆಚ್ಚುತ್ತಿದೆ ಫ್ಯಾಟಿ ಲಿವರ್! ಮಕ್ಕಳ ಬಗ್ಗೆ ಆತಂಕಕಾರಿ ವರದಿ ಬಹಿರಂಗ – Kannada News | 63% of Obese Children at Risk of Fatty Liver? What Parents Need to Know

ಫ್ಯಾಟಿ ಲಿವರ್ ಎಂದರೆ ಕೇವಲ ದೊಡ್ಡವರ ಆರೋಗ್ಯ ಸಮಸ್ಯೆ ಎಂದುಕೊಂಡಿದ್ದರೆ ಇದು ತಪ್ಪು. ಇತ್ತೀಚಿನ ಆರೋಗ್ಯ ಸಂಶೋಧನೆಗಳು ಮಕ್ಕಳಲ್ಲಿಯೂ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿರುವ ಆತಂಕಕಾರಿ ಚಿತ್ರಣವನ್ನು ಮುಂದಿಟ್ಟಿವೆ. ಭಾರತದಲ್ಲಿ ಸುಮಾರು 35.4% ಮಕ್ಕಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಕಂಡುಬಂದಿದೆ ಎಂದು ಹಲವು ಅಧ್ಯಯನಗಳ ವಿಶ್ಲೇಷಣೆ ತಿಳಿಸಿದೆ. ಅದೇ ವೇಳೆ, ಬೊಜ್ಜಿನಿಂದ ಬಳಲುತ್ತಿರುವ ಮಕ್ಕಳಲ್ಲಿ ಈ ಪ್ರಮಾಣ 63.4% ಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು, ದೈಹಿಕ ಚಟುವಟಿಕೆಯ ಕೊರತೆ, ಅಸಮತೋಲಿತ ಆಹಾರ, ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಟೈಪ್-2 ಡಯಾಬಿಟಿಸ್‌ನಂತಹ ಸಮಸ್ಯೆಗಳು ಫ್ಯಾಟಿ ಲಿವರ್ ಅಪಾಯವನ್ನು ಹೆಚ್ಚಿಸುತ್ತಿವೆ. ಹಾಗಾದರೆ ಮಕ್ಕಳಲ್ಲಿ ಫ್ಯಾಟಿ ಲಿವರ್ ಏಕೆ ಹೆಚ್ಚಾಗುತ್ತಿದೆ ಮತ್ತು ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಇದನ್ನು ತಡೆಯಲು ಪೋಷಕರು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫ್ಯಾಟಿ ಲಿವರ್ ಕಾಯಿಲೆಯನ್ನು ಈಗ ಹೆಚ್ಚು ನಿಖರವಾಗಿ MASLD (Metabolic Dysfunction-Associated Steatotic Liver Disease) ಎಂದು ಕರೆಯಲಾಗುತ್ತದೆ. ಡಾ. ಪಿಯೂಷ್ ವಿಶ್ವಕರ್ಮಾ (ಕನ್ಸಲ್ಟೆಂಟ್, ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್, ಆರ್‌ಜಿ ಹಾಸ್ಪಿಟಲ್ಸ್) ಅವರ ಪ್ರಕಾರ, ಭಾರತದಲ್ಲಿ ಸುಮಾರು 16%ರಿಂದ 32% ಜನಸಂಖ್ಯೆ ಈ ಸಮಸ್ಯೆಯಿಂದ ಪ್ರಭಾವಿತರಾಗಿರಬಹುದು. 26,000ಕ್ಕೂ ಹೆಚ್ಚು ಜನರನ್ನು ಒಳಗೊಂಡ 50 ಅಧ್ಯಯನಗಳ ವಿಶ್ಲೇಷಣೆಯಲ್ಲಿ, ಭಾರತದಲ್ಲಿ ವಯಸ್ಕರಲ್ಲಿ NAFLD ಪ್ರಮಾಣ ಸುಮಾರು 38.6% ಎಂದು ವರದಿಯಾಗಿದೆ. ಡಯಾಬಿಟಿಸ್ ಅಥವಾ ಬೊಜ್ಜು ಇರುವವರಲ್ಲಿ ಈ ಪ್ರಮಾಣ 52.8% ಕ್ಕೆ ಏರಿದೆ.

ಮಕ್ಕಳಲ್ಲಿ ಫ್ಯಾಟಿ ಲಿವರ್ ಏಕೆ ಹೆಚ್ಚುತ್ತಿದೆ?

ಸಾಮಾನ್ಯವಾಗಿ ಮಕ್ಕಳ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು ಪ್ರಮುಖ ಕಾರಣಗಳಾಗಿವೆ. ಗಂಟೆಗಟ್ಟಲೆ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು, ಹೊರಾಂಗಣ ಆಟಗಳ ಕೊರತೆ, ಹೆಚ್ಚು ಕ್ಯಾಲೊರಿಯ ಆಹಾರ ಸೇವನೆ ಮತ್ತು ಸಕ್ಕರೆ ಹೆಚ್ಚಿರುವ ಪಾನೀಯಗಳ ಸೇವನೆ ಮಕ್ಕಳ ತೂಕ ಹೆಚ್ಚಲು ಕಾರಣವಾಗಬಹುದು. ಬೊಜ್ಜು ಹೆಚ್ಚಾದಂತೆ ಹೊಟ್ಟೆಯ ಸುತ್ತ ಕೊಬ್ಬು, ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಮೆಟಾಬಾಲಿಕ್ ಸಮಸ್ಯೆಗಳ ಅಪಾಯವೂ ಹೆಚ್ಚುತ್ತದೆ. ಇವುಗಳೆಲ್ಲವೂ ಫ್ಯಾಟಿ ಲಿವರ್‌ಗೆ ಸಂಬಂಧ ಹೊಂದಿವೆ.

ಬೊಜ್ಜಿನ ಮಕ್ಕಳಲ್ಲಿ ಅಪಾಯ ಹೆಚ್ಚು;

ಅಧ್ಯಯನದ ವಿಶ್ಲೇಷಣೆಯ ಪ್ರಕಾರ, ಸಾಮಾನ್ಯ ಮಕ್ಕಳಿಗಿಂತ ಬೊಜ್ಜಿನಿಂದ ಬಳಲುತ್ತಿರುವ ಮಕ್ಕಳಲ್ಲಿ ಫ್ಯಾಟಿ ಲಿವರ್ ಅಪಾಯ ಹೆಚ್ಚು. ಬೊಜ್ಜು ಹೊಂದಿರುವ ಮಕ್ಕಳಲ್ಲಿ ಫ್ಯಾಟಿ ಲಿವರ್ ಪ್ರಮಾಣ 63.4ರವರೆಗೆ ಕಂಡುಬಂದಿದೆ ಎಂದು ವರದಿಯಾಗಿದೆ. ಆದ್ದರಿಂದ ಮಕ್ಕಳ ತೂಕ ಹೆಚ್ಚಾಗುತ್ತಿದ್ದರೆ ಅದನ್ನು ಕೇವಲ ಬೆಳವಣಿಗೆಯ ಭಾಗ ಎಂದು ನಿರ್ಲಕ್ಷಿಸದೆ, ಅವರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಬಗ್ಗೆ ಪೋಷಕರು ಗಮನ ಹರಿಸುವುದು ಅಗತ್ಯ.

ಐಟಿ ಉದ್ಯೋಗಿಗಳಲ್ಲೂ ಅಪಾಯ ಹೆಚ್ಚು

ಫ್ಯಾಟಿ ಲಿವರ್ ಮಕ್ಕಳಿಗಷ್ಟೇ ಸೀಮಿತವಲ್ಲ. ದೀರ್ಘಕಾಲ ಕುಳಿತು ಕೆಲಸ ಮಾಡುವ ವಯಸ್ಕರಲ್ಲಿಯೂ ಇದರ ಅಪಾಯ ಹೆಚ್ಚಿರಬಹುದು. ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ದೀರ್ಘ ಸಮಯ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಅಪಾಯವನ್ನು ಹೆಚ್ಚಿಸಬಹುದು. ಡಯಾಬಿಟಿಸ್, ಹೊಟ್ಟೆಯ ಸುತ್ತ ಹೆಚ್ಚುವರಿ ಕೊಬ್ಬು, ಇನ್ಸುಲಿನ್ ರೆಸಿಸ್ಟೆನ್ಸ್, ಬೊಜ್ಜು ಮತ್ತು ಹೈ ಬ್ಲಡ್ ಪ್ರೆಶರ್ ಪ್ರಮುಖ ಅಪಾಯದ ಅಂಶಗಳಾಗಿವೆ.

ಫ್ಯಾಟಿ ಲಿವರ್ ತಡೆಯಲು ಏನು ಮಾಡಬೇಕು?

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ಧತಿ ರೂಢಿಸಬೇಕು. ಪ್ಯಾಕೆಟ್ ಸ್ನ್ಯಾಕ್ಸ್, ಜಂಕ್ ಫುಡ್, ಹೆಚ್ಚು ಸಕ್ಕರೆ ಇರುವ ಪಾನೀಯಗಳು ಮತ್ತು ಅತಿಯಾದ ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಇದರ ಜೊತೆಗೆ ಪ್ರತಿದಿನ ವಯಸ್ಸಿಗೆ ಅನುಗುಣವಾಗಿ ದೈಹಿಕ ಚಟುವಟಿಕೆ, ಹೊರಾಂಗಣ ಆಟ ಮತ್ತು ವ್ಯಾಯಾಮಕ್ಕೆ ಸಮಯ ನೀಡಬೇಕು. ಹಣ್ಣು, ತರಕಾರಿ, ಬೇಳೆಕಾಳುಗಳು, ಸಂಪೂರ್ಣ ಧಾನ್ಯಗಳು ಮತ್ತು ಸೂಕ್ತ ಪ್ರಮಾಣದ ಪ್ರೋಟೀನ್ ಇರುವ ಸಮತೋಲಿತ ಆಹಾರಕ್ಕೆ ಆದ್ಯತೆ ನೀಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಣ್ಮರೆಯಾಗುತ್ತಿರುವ ಮುಖಗಳು’; ಹಿಮಾಲಯದ ಜನರ ಕುರಿತ ಸದ್ಗುರು ಫೋಟೋ ಪುಸ್ತಕ ಬಿಡುಗಡೆ – Kannada News | Sadhguru Launches New Photo Essay Book Disappearing Faces which Captures Himalayan People Lifestyle

ನವದೆಹಲಿ, ಆಗಸ್ಟ್ 11: ನೇಪಾಳ ಮತ್ತು ಟಿಬೆಟ್‌ನ ಹಿಮಾಲಯ ಪರ್ವತ ಶ್ರೇಣಿಗಳ ಪ್ರವಾಸದ ವೇಳೆ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಭೇಟಿಯಾದ ಜನರ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡ ನೂತನ ಛಾಯಾಚಿತ್ರ ಪುಸ್ತಕ ‘ಡಿಸಪಿಯರಿಂಗ್ ಫೇಸಸ್ – ಎ ಫೋಟೋ ಪ್ರಬಂಧ’ (Disappearing Faces – A Photo Essay) ಅನ್ನು ನವದೆಹಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್​ನಲ್ಲಿ ಬಿಡುಗಡೆ ಮಾಡಲಾಯಿತು.

‘ಪೆಂಗ್ವಿನ್ ಇಂಡಿಯಾ’ ಪ್ರಕಟಿಸಿರುವ ಈ ಪುಸ್ತಕವು, ಹಿಮಾಲಯದ ಅತಿ ಎತ್ತರದ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ವಾಸಿಸುವ ಜನರ ಜೀವನಶೈಲಿಯನ್ನು ಪ್ರಸ್ತುತಪಡಿಸುತ್ತದೆ. ಪ್ರಕೃತಿಯ ಮಡಿಲಲ್ಲಿ, ಆಧುನಿಕ ಜೀವನಶೈಲಿಯಿಂದ ದೂರವಾಗಿ ಬದುಕುತ್ತಿರುವ ಜನರ ಮುಖಭಾವನೆಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸದ್ಗುರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ಕಾಯಿಲೆಗಳೇ ಬರಬಾರದು ಅಂದ್ರೆ ಸದ್ಗುರು ತಿಳಿಸಿರುವ ಈ 4 ಬಗೆಯ ಆಹಾರಗಳಿಂದ ದೂರವಿರಿ

ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆಯಾಯಿತು. ನಂತರ ನಡೆದ ಸಂವಾದದಲ್ಲಿ ಸದ್ಗುರು ಹಾಗೂ ಲೇಖಕ ಆನಂದ್ ರಂಗನಾಥನ್ ಅವರು ಈ ಛಾಯಾಚಿತ್ರಗಳ ಹಿಂದಿನ ಕಥೆಗಳು ಮತ್ತು ಅನುಭವಗಳನ್ನು ಹಂಚಿಕೊಂಡರು.

ಈ ಪುಸ್ತಕದ ಕುರಿತು ಮಾತನಾಡಿದ ಸದ್ಗುರು, “ಈ ಮುಖಗಳು ಶೀಘ್ರದಲ್ಲೇ ಕಣ್ಮರೆಯಾಗಲಿರುವ ಒಂದು ಯುಗವನ್ನು ಪ್ರತಿನಿಧಿಸುತ್ತವೆ. ಬೆಳಕು ಮತ್ತು ಕತ್ತಲೆ, ಬಿಸಿಲು ಮತ್ತು ಚಳಿ, ವಸಂತ ಮತ್ತು ಚಳಿಗಾಲದಂತಹ ಪ್ರಕೃತಿಯ ಅನುಭವಗಳಿಂದಷ್ಟೇ ರೂಪುಗೊಂಡ ಮುಖಗಳಿವು. ಇವು ಆಧುನಿಕ ಮಾಹಿತಿಯಿಂದ ಕಲುಷಿತಗೊಳ್ಳದ ಶುದ್ಧ ಜೀವಗಳನ್ನು ಬಿಂಬಿಸುತ್ತವೆ. ಮೇಲ್ನೋಟಕ್ಕೆ ತೀರಾ ಸರಳವಾಗಿ ಕಂಡರೂ, ಮಣ್ಣು, ಗಾಳಿ, ನೀರು ಮತ್ತು ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿರುವ ಶ್ರೀಮಂತ ಅನುಭವಗಳನ್ನು ಈ ಮುಖಗಳು ಹೊಂದಿವೆ. ಕಳೆದ 5 ದಶಕಗಳಿಂದ, ಪರ್ವತಗಳ ಸೌಂದರ್ಯಕ್ಕಿಂತ ಹೆಚ್ಚಾಗಿ ಈ ಮುಖಗಳೇ ನನ್ನನ್ನು ಹಿಮಾಲಯದತ್ತ ಸೆಳೆದಿವೆ” ಎಂದು ಹೇಳಿದರು.

ಇದನ್ನೂ ಓದಿ: ದೇಶದಲ್ಲೇ ಮೊದಲು: AI ಬಳಸಿ ಅನುವಾದಗೊಂಡ ಕನ್ನಡ ಪುಸ್ತಕ ಮೈಸೂರಿನಲ್ಲಿ ಬಿಡುಗಡೆ!

ಈ ಪುಸ್ತಕದ ವಿಶೇಷತೆಗಳು:

  • ಹಿಮಾಲಯದ ಕಠಿಣ ಪರಿಸರದಲ್ಲಿ ವಾಸಿಸುವ ಜನರ ಭಾವನೆಗಳು, ಶ್ರಮ ಮತ್ತು ಅವರ ವಿಶಿಷ್ಟ ಸಂಸ್ಕೃತಿಯನ್ನು ಎಂದೂ ಕಾಣದ ರೀತಿಯಲ್ಲಿ ಸದ್ಗುರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.
  • ಆಧುನಿಕತೆಯ ಪ್ರಭಾವದಿಂದ ಕಾಲಕ್ರಮೇಣ ಮರೆಯಾಗುತ್ತಿರುವ ಹಿಮಾಲಯನ್ ಸಮುದಾಯಗಳ ಜೀವನಶೈಲಿಗೆ ಸಾಕ್ಷಿಯಾಗಿ ಈ ಪುಸ್ತಕ ಮೂಡಿಬಂದಿದೆ.
  • ಕೇವಲ ಪ್ರಕೃತಿ ಸೌಂದರ್ಯವಷ್ಟೇ ಅಲ್ಲದೆ, ಹಿಮಾಲಯವನ್ನು ಜೀವಂತವಾಗಿಟ್ಟಿರುವ ಅಲ್ಲಿನ ಜನರ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಇದು ಜಗತ್ತಿಗೆ ತಲುಪಿಸಲಿದೆ.

ಸದ್ಗುರು 2006ರಲ್ಲಿ ಮೊದಲ ಬಾರಿಗೆ ಮಾನಸ ಸರೋವರ ಮತ್ತು ಕೈಲಾಸ ಪರ್ವತಕ್ಕೆ ಯಾತ್ರೆ ಕೈಗೊಂಡಿದ್ದರು. ಅಂದಿನಿಂದ ಅವರು ನಿರಂತರವಾಗಿ ಹಿಮಾಲಯದ ಯಾತ್ರೆಗಳ ನೇತೃತ್ವ ವಹಿಸುತ್ತಿದ್ದಾರೆ. 2025ರಲ್ಲಿ ಕೈಲಾಸಕ್ಕೆ ತಮ್ಮ ಮೊದಲ ಮೋಟಾರ್ ಸೈಕಲ್ ಯಾತ್ರೆ ನಡೆಸಿದ್ದ ಅವರು, ಈ ವರ್ಷವೂ ಸಹ ಮೋಟಾರ್ ಸೈಕಲ್ ಮೂಲಕ ಪವಿತ್ರ ಹಿಮಾಲಯ ಯಾತ್ರೆಯನ್ನು ಮುಂದುವರಿಸಲಿದ್ದಾರೆ.

‘ಡಿಸಪಿಯರಿಂಗ್ ಫೇಸಸ್’ ಪುಸ್ತಕವು ಹಾರ್ಡ್‌ಬ್ಯಾಕ್ ಮತ್ತು ಪೇಪರ್‌ಬ್ಯಾಕ್ ಆವೃತ್ತಿಗಳಲ್ಲಿ ಅಮೆಜಾನ್, ಕ್ರಾಸ್‌ವರ್ಡ್, ಸಪ್ನಾ ಆನ್‌ಲೈನ್ ಮತ್ತು ಅಟ್ಲಾಂಟಿಕ್ ಜಾಲತಾಣಗಳಲ್ಲಿ penguin.co.in/book/disappearing-faces/ ಲಭ್ಯವಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:55 pm, Tue, 11 August 26

Source link

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಪೈಲಟ್ ಡ್ರಗ್ಸ್ ಸೇವಿಸಿದ್ದು ದೃಢ; ಸಂಸ್ಥೆಯ ಸಿಇಒಗೆ ಸರ್ಕಾರದಿಂದ ಸಮನ್ಸ್ – Kannada News | Air India Phuket Delhi flight pilot tests positive for drugs in two dope test

ನವದೆಹಲಿ, ಆಗಸ್ಟ್ 11: ಆಗಸ್ಟ್ 4ರಂದು ಹಾರಾಟದ ಮಧ್ಯೆ ದಿಢೀರನೆ ಸುಮಾರು 300 ಅಡಿ ಕೆಳಗೆ ಕುಸಿದು ಅಪಘಾತಕ್ಕೀಡಾಗಿದ್ದ ಫುಕೆಟ್-ದೆಹಲಿ ಏರ್ ಇಂಡಿಯಾ (Air India) ವಿಮಾನದ ಮುಖ್ಯ ಪೈಲಟ್ 2ನೇ ಡೋಪ್ ಪರೀಕ್ಷೆಯಲ್ಲೂ ಡ್ರಗ್ಸ್ (ಮಾದಕ ದ್ರವ್ಯ) ಸೇವಿಸಿರುವುದು ಖಚಿತವಾಗಿದೆ. ಈ ಘಟನೆಯ ನಂತರ ನಿಯಮಾವಳಿಗಳಂತೆ ಇಬ್ಬರೂ ಪೈಲಟ್‌ಗಳನ್ನು ಮಾದಕ ದ್ರವ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಹ-ಪೈಲಟ್‌ನ ಪರೀಕ್ಷಾ ವರದಿಯಲ್ಲಿ ಯಾವುದೇ ದೋಷ ಕಂಡುಬಂದಿರಲಿಲ್ಲ. ಆದರೆ ಮುಖ್ಯ ಪೈಲಟ್‌ನ ಮೊದಲ ಡ್ರಗ್ಸ್ ಪರೀಕ್ಷೆಯಲ್ಲಿ ಅನುಮಾನಾಸ್ಪದ ಫಲಿತಾಂಶ ಬಂದಿದ್ದರಿಂದ, ಅವರ ಮಾದರಿಯನ್ನು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಬಂದಿರುವ ಅಂತಿಮ ವರದಿಯಲ್ಲಿ ಡ್ರಗ್ಸ್ ಸೇವನೆ ದೃಢಪಟ್ಟಿದೆ.

ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ್ದ ಏರ್ ಇಂಡಿಯಾ ಡಿಸಿಜಿಎ (DGCA) ಮಾರ್ಗಸೂಚಿಗಳಂತೆ ಸಿಬ್ಬಂದಿಯನ್ನು ಮಾದಕ ದ್ರವ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಆದರೆ ಈವರೆಗೂ ಪರೀಕ್ಷೆಯ ಅಧಿಕೃತ ವರದಿ ತಮ್ಮ ಕೈಸೇರಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ

ಏರ್ ಇಂಡಿಯಾ ಸಿಇಒಗೆ ಸಮನ್ಸ್:

ಈ ಗಂಭೀರ ಘಟನೆಯ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಏರ್ ಇಂಡಿಯಾದ ನಿರ್ಗಮಿತ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರಿಗೆ ಸಮನ್ಸ್ ನೀಡಿದ್ದವು. ವಿಲ್ಸನ್ ಹಾಗೂ ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ. ಈ ಉನ್ನತ ಮಟ್ಟದ ಸಭೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷರ ಮುಖ್ಯ ಸಲಹೆಗಾರ ಪ್ರದೀಪ್ ಸಿಂಗ್ ಖರೋಲಾ, ಡಿಜಿಸಿಎ ಡೈರೆಕ್ಟರ್ ಜನರಲ್ ವೀರ್ ವಿಕ್ರಮ್ ಯಾದವ್ ಹಾಗೂ ಎಎಐಬಿ ಡೈರೆಕ್ಟರ್ ಜನರಲ್ ಜಿ.ವಿ.ಜಿ. ಯುಗಂಧರ್ ಉಪಸ್ಥಿತರಿದ್ದರು.

ಏನಿದು ಘಟನೆ?:

ಆಗಸ್ಟ್ 4ರಂದು ಏರ್‌ಬಸ್ A320 ವಿಮಾನ (AI2379) ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದಾಗ ಹಾರಾಟದ ಮಧ್ಯದಲ್ಲೇ 300 ಅಡಿ ಕೆಳಗೆ ಕುಸಿದಿತ್ತು, ಆಗಸದಲ್ಲೇ ಪಲ್ಟಿಯಾಗಿತ್ತು. ನಂತರ ಪೈಲಟ್‌ಗಳು ವಿಮಾನವನ್ನು ಸುಸ್ಥಿತಿಗೆ ತಂದು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಸಿದ್ದರು. ಈ ದುರಂತದಲ್ಲಿ 4 ವಿಮಾನ ಸಿಬ್ಬಂದಿ, 17 ಪ್ರಯಾಣಿಕರು ಗಾಯಗೊಂಡಿದ್ದರು.

ಇದನ್ನೂ ಓದಿ: ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ

ತನಿಖಾ ಮೂಲಗಳ ಪ್ರಕಾರ, ಹಾರಾಟದ ಸಮಯದಲ್ಲಿ ಆಟೋ-ಪೈಲಟ್ ವ್ಯವಸ್ಥೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಸಹ-ಪೈಲಟ್ ವಿಮಾನವನ್ನು ಮ್ಯಾನುವಲ್ ಆಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ವಿಮಾನದ ‘ಸ್ಟಾಲ್ ವಾರ್ನಿಂಗ್’ ಅಲಾರಾಂ ಮೊಳಗಿತ್ತು. ಹೈಡ್ರಾಲಿಕ್ ಸಿಸ್ಟಮ್‌ನಲ್ಲಿ ದೋಷ, ತಾಂತ್ರಿಕ ವೈಫಲ್ಯಗಳು ಹಾಗೂ ವಾಯು ತರಂಗಗಳು ಒಂದೇ ಸಮಯದಲ್ಲಿ ಸಂಭವಿಸಿದ್ದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ಕುರಿತು ಸಮಗ್ರ ತನಿಖೆ ನಡೆಸುತ್ತಿದೆ.

ಏರ್ ಇಂಡಿಯಾದ ನಿರ್ಗಮಿತ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಈ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ವಿಮಾನಯಾನದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಯಾವುದೇ ಹಂತದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:39 pm, Tue, 11 August 26

Source link

Exit mobile version