ಬಾಗಲಕೋಟೆ, (ಮಾರ್ಚ್ 22): ಬಾಗಲಕೋಟೆ ಉಪಚುನಾವಣೆಯ (Bagalkot By Election) ಕಾಂಗ್ರೆಸ್ ಟಿಕೆಟ್ ಎಚ್ ವೈ ಮೇಟಿ ಪುತ್ರ ಉಮೇಶ್ ಮೇಟಿ ಅವರಿಗೆ ನೀಡಲಾಗಿದೆ. ಟಿಕೆಟ್ ಗಾಗಿ ನಾಲ್ವರು ಮೇಟಿ ಮಕ್ಕಳ ನಡುವೆ ಕಿತ್ತಾಟ ಶುರುವಾಗಿತ್ತು. ಅಂತಿಮವಾಗಿ ಸಿದ್ದರಾಮಯ್ಯ ಸಂಧಾನಸಭೆ ಮಾಡಿ ಕೊನೆಗೆ ಉಮೇಶ್ ಅವರಿಗೆ ಮಣೆ ಹಾಕಿದ್ದಾರೆ. ಇನ್ನು ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಮಹಾದೇವಿ ಮೇಟಿ ಸಹ ತಣ್ಣಗಾಗಿದ್ದಾರೆ. ಯಾಕಂದ್ರೆ ಕೆಲ ದಿನಗಳಿಂದಷ್ಟೇ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡುವ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಆದ್ರೆ, ಇದೀಗ ಸಿಎಂ ಸಂಧಾನ ಸಭೆ ಮಾಡಿದ ಬಳಿಕ ಮಹಾದೇವಿ ಮೇಟಿ ಕೂಲ್ ಆಗಿದ್ದು, ಸಹೋದರ ಉಮೇಶ್ ಗೆ ಟಿಕೆಟ್ ನೀಡಿರುವುದಕ್ಕೆ ಸಂತಸಗೊಂಡಿದ್ದಾರೆ. ಅಲ್ಲದೇ ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲುಸುತ್ತೇವೆ ಎನ್ನುವುದನ್ನು ಸಹ ಹೇಳಿದ್ದಾರೆ. ಇನ್ನು ಟಿವಿ9ಗೆ ಮಹಾದೇವಿ ಮೇಟಿ ಪ್ರತಿಕ್ರಿಯಿಸಿದ್ದು, ಉಮೇಶ್ ಮೇಟಿಗೆ ಟಿಕೆಟ್ ಕೊಟ್ಡಿದ್ದು ಸಂತಸ ತಂದಿದೆ. ನಾನು ಅಂದುಕೊಂಡಂತೆ ಸಹೋದರ ಉಮೇಶ್ ಮೇಟಿಗೆ ಟಿಕೆಟ್ ನೀಡಲಾಗಿದೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲ ಬಂಡಾಯ,ಭಿನ್ನಾಭಿಪ್ರಾಯ ಸರಿಯಾಗಿದೆ. ನಾಳೆ ನಾಮಪತ್ರ ಸಲ್ಲಿಸಲು ನಾನು ಸಹೋದರನ ಜೊತೆ ಹೋಗುತ್ತೇನೆ. ಪ್ರಚಾರಕ್ಕೂ ನಾಲ್ಕು ಜನ ಮಕ್ಕಳು ಒಟ್ಟಾಗಿ ಹೋಗುತ್ತೇವೆ ಎಂದರು.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ಮೂಲಕ ಗಳಿಸಿರುವ ಯಶಸ್ಸನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ತ್ರಿವಿಕ್ರಮ್ ಆಫರ್ ಅನ್ನು ತ್ಯಜಿಸಿ ಅಟ್ಲಿ ಕೈ ಹಿಡಿಸಿದ್ದಾರೆ. ಅಟ್ಲಿ, ಅಲ್ಲು ಅರ್ಜುನ್ಗಾಗಿ ಭಾರಿ ಬಜೆಟ್ನ ಹಾಲಿವುಡ್ ಮಾದರಿಯ ಫ್ಯಾಂಟಸಿ ಮಾದರಿಯ ಕತೆ ಹೆಣೆದಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾವನ್ನು ಯಶಸ್ಸು ಮಾಡುವ ಹಠಕ್ಕೆ ಬಿದ್ದಿರುವ ಅಟ್ಲಿ, ದೊಡ್ಡ-ದೊಡ್ಡ ಸ್ಟಾರ್ ನಟಿಯರನ್ನು ಸಿನಿಮಾಕ್ಕೆ ಸೇರಿಸಿಕೊಳ್ಳುತ್ತಾ ಸಾಗಿದ್ದಾರೆ. ಸಿನಿಮಾದ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಅವರೊಟ್ಟಿಗೆ ರಶ್ಮಿಕಾ ಮಂದಣ್ಣ ಸಹ ಇರಲಿದ್ದಾರೆ. ಇದೀಗ ಸ್ಟಾರ್ ಕ್ರಿಕೆಟಿಗನ ಪತ್ನಿಯನ್ನು ಸಹ ಸಿನಿಮಾಕ್ಕೆ ಎಳೆದುಕೊಂಡಿದ್ದಾರೆ.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ಅನುಷ್ಕಾ ಶರ್ಮಾ, ಅಲ್ಲು ಅರ್ಜುನ್ ಜೊತೆಗಿನ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ನಾಯಕಿ ಪಾತ್ರ ಆಗಿರುವುದಿಲ್ಲ ಬದಲಿಗೆ ಅತಿಥಿ ಪಾತ್ರ ಆಗಿರಲಿದೆಯಂತೆ. ಆದರೆ ಕತೆಗೆ ಪ್ರಮುಖವಾದ ತಿರುವು ನೀಡುವ ಪಾತ್ರ ಸಹ ಆಗಿರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಅನುಷ್ಕಾ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಒಂದು ವೇಳೆ ಇದು ಅಧಿಕೃತವಾದರೆ, ಅನುಷ್ಕಾ ಶರ್ಮಾ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗುತ್ತದೆ. 2022ರಲ್ಲಿ ತೆರೆಕಂಡ ‘ಖಾಲಾ’ ಚಿತ್ರದ ಅತಿಥಿ ಪಾತ್ರದ ನಂತರ ಅನುಷ್ಕಾ ಬೆಳ್ಳಿತೆರೆಯಿಂದ ದೂರವೇ ಉಳಿದಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿರುವ ಅವರು, ಈಗ ಈ ಭರ್ಜರಿ ಪ್ರಾಜೆಕ್ಟ್ ಮೂಲಕ ಕಮ್‌ಬ್ಯಾಕ್ ಮಾಡುತ್ತಾರಾ ಎಂಬುದು ಅಭಿಮಾನಿಗಳ ಕುತೂಹಲ.
ಅನುಷ್ಕಾ ಶರ್ಮಾ, ಚಿತ್ರರಂಗದಿಂದ ಬಹುತೇಕ ದೂರಾಗಿದ್ದಾರೆ. ಅವರು ನಾಯಕಿಯಾಗಿ ನಟಿಸಿದ್ದ ಕೊನೆಯ ಸಿನಿಮಾ ‘ಜೀರೋ’ 2018 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ 2022 ರಲ್ಲಿ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಅನುಷ್ಕಾ ಶರ್ಮಾ ಅವರನ್ನು ಅಟ್ಲಿ ಸಂಪರ್ಕಿಸಿದ್ದಾರಾದರೂ ಅವರು ನಟಿಸುವುದು ಇನ್ನೂ ಖಾತ್ರಿ ಆಗಿಲ್ಲ ಎನ್ನಲಾಗುತ್ತಿದೆ.
ಇನ್ನು ಈ ಸಿನಿಮಾದಲ್ಲಿ ಈಗಾಗಲೇ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಬಾರಿಗೆ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲು ಅರ್ಜುನ್ ಈ ಚಿತ್ರದಲ್ಲಿ ದ್ವಿಪಾತ್ರ ಅಥವಾ ಎರಡಕ್ಕಿಂತಲೂ ಹೆಚ್ಚು ಪಾತ್ರಗಳಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರವು ‘ಪ್ಯಾರಲಲ್ ಯೂನಿವರ್ಸ್’ ಕಥಾಹಂದರ ಹೊಂದಿರಲಿದೆ ಎಂಬ ಮಾಹಿತಿ ಇದೆ.
ಸದ್ಯಕ್ಕೆ ಅನುಷ್ಕಾ ಶರ್ಮಾ ಅವರ ಸೇರ್ಪಡೆಯ ಬಗ್ಗೆ ಚಿತ್ರತಂಡವಾಗಲಿ ಅಥವಾ ನಟಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಏಪ್ರಿಲ್ 8ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟೀಸರ್ ಅಥವಾ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಸಾಯಿ ಅಭ್ಯಂಕರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸನ್ ಪಿಕ್ಚರ್ಸ್ನವರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಬೆಂಗಳೂರು, ಮಾರ್ಚ್ 22: ಬೆಂಗಳೂರು (Bengaluru) ಅಂದ್ರೆ ದುಬಾರಿ. ಈ ಬಾಡಿಗೆ ಮನೆ ವಿಷ್ಯದಲ್ಲಿ ಕೇಳುವುದೇ ಬೇಡ. ಸಿಗೋ ಅಲ್ಪ ಸಂಬಳದಲ್ಲಿ ಬಾಡಿಗೆ ಕಟ್ಟಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ದುಡಿದದ್ದೆಲ್ಲವನ್ನು ಮನೆ ಮಾಲೀಕರ ಹೊಟ್ಟೆಗೆ ಹಾಕುವಂತಾಗಿದೆ. ಬೆಂಗಳೂರಿನ ನಿವಾಸಿಯೊಬ್ಬರು ಪ್ರತಿ ತಿಂಗಳು ಸುಮಾರು 40,000 ರೂ ಬಾಡಿಗೆಗೆ ಏಕೆ ಖರ್ಚು ಮಾಡುವೆ ಎಂದು ವಿವರಿಸಿದ್ದಾರೆ. ಇದೇ ವೇಳೆ ತನಗೆ ಬಾಡಿಗೆಗಿಂತ ಜೀವನದ ಅನುಭವ ಮುಖ್ಯ ಎಂದು ತಿಳಿಸಿದ್ದಾರೆ. ಈ ವ್ಯಕ್ತಿ ಹಂಚಿಕೊಂಡ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.
ಮಾಣಿಕ್ ಸಲಾರಿಯಾ (life_with_manik) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವಸತಿ ಆಯ್ಕೆಯನ್ನು ಪ್ರಶ್ನಿಸಿದ ಸಹೋದ್ಯೋಗಿಯೊಂದಿಗಿನ ವಿಡಿಯೋ ಹಂಚಿಕೊಂಡಿದ್ದಾರೆ. ನಾನು ಬೆಂಗಳೂರಿನಲ್ಲಿ ತಿಂಗಳಿಗೆ ಸುಮಾರು 40,000 ರೂ ಪಾವತಿಸುತ್ತೇನೆ. ಇತ್ತೀಚೆಗೆ ನನ್ನ ಸಹೋದ್ಯೋಗಿ ನೀವು ತುಂಬಾ ದೂರದಲ್ಲಿ ವಾಸಿಸುತ್ತಿದ್ದೀರಿ. ನೀವು ಹೆಚ್ಚು ಬಾಡಿಗೆ ಪಾವತಿಸುತ್ತಿದ್ದೀರಿ. ನೀವು ನಿಮ್ಮ ಹಣವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಹೇಳಿದ್ದರು. ಆ ಕ್ಷಣದಲ್ಲಿ ಜನರು ಬಾಡಿಗೆಯನ್ನು ಫ್ಲಾಟ್‌ನ ದೃಷ್ಟಿಕೋನದಿಂದ ಮಾತ್ರ ನೋಡುತ್ತಾರೆ ಎಂದು ನಾನು ಅರಿತುಕೊಂಡೆ. ಆದರೆ ನನ್ನ ಅಭಿಪ್ರಾಯ ಸ್ವಲ್ಪ ವಿಭಿನ್ನವಾಗಿದೆ ಎಂದು ವಿವರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ನಾನು ಬಾಡಿಗೆಯನ್ನು ಜೀವನಶೈಲಿಯಾಗಿ ನೋಡುತ್ತೇನೆ. ನಾನು ಜೀವನಶೈಲಿಗಾಗಿ ಖರ್ಚು ಮಾಡುತ್ತಿದ್ದೇನೆ. ನಾನು ಗೇಟೆಡ್ ಸೊಸೈಟಿಯಲ್ಲಿ ವಾಸಿಸುತ್ತಿದ್ದೇನೆ. ನೀವು ಪಡೆಯುವ ದೊಡ್ಡ ಪ್ರಯೋಜನವೆಂದರೆ ಇಲ್ಲಿ ಭದ್ರತೆ. ನೀವು ಪಡೆಯುವ ಎರಡನೇ ದೊಡ್ಡ ಪ್ರಯೋಜನವೆಂದರೆ ಕ್ಲಬ್‌ಹೌಸ್. ಈ ಕ್ಲಬ್‌ಹೌಸ್‌ನಲ್ಲಿ ಹಲವು ಸೌಲಭ್ಯಗಳಿವೆ. ನೀವು ಕ್ರೀಡೆಗಳನ್ನು ಆಡಬಹುದು, ಟೇಬಲ್ ಟೆನ್ನಿಸ್ ಆಡಬಹುದು, ಬ್ಯಾಡ್ಮಿಂಟನ್ ಆಡಬಹುದು, ಈಜಬಹುದು ಹಾಗೂ ಜಿಮ್ ಮಾಡಬಹುದು. ಹೊರಗೆ ಲಾನ್ ಟೆನ್ನಿಸ್ ಕೋರ್ಟ್ ಇರುತ್ತದೆ. ಬಹುತೇಕ ಪ್ರತಿ ವಾರ ನಾವು ಬಾಕ್ಸ್ ಕ್ರಿಕೆಟ್ ಆಡುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿನ ಪರಿಸರ ತುಂಬಾ ಸ್ವಚ್ಛ ಮತ್ತು ಹಸಿರಾಗಿದ್ದು, ಸಂಜೆ ನಡಿಗೆ, ಬೆಳಿಗ್ಗೆ ನಡಿಗೆ ಅನುಭವ ಪಡೆಯುತ್ತೇನೆ. ಅದು ಮನೆಯಂತೆ ಭಾಸವಾಗುತ್ತದೆ. ಇಲ್ಲಿನ ನಿವಾಸಿಗಳು ಜತೆ ಸೇರಿ ಪ್ರತಿಯೊಂದು ಹಬ್ಬವನ್ನು ತುಂಬಾ ಉತ್ಸಾಹದಿಂದ ಆಚರಿಸುತ್ತೇವೆ. ನಾವು ಇತ್ತೀಚೆಗೆ ಹೋಳಿ ಆಚರಿಸಿದೆವು. ಆದರೆ ನನಗೆ ಇದೆಲ್ಲದಕ್ಕಿಂತ ಮುಖ್ಯವಾದುದು ಏನು ಎಂದು ನಿಮಗೆ ತಿಳಿದಿದೆಯೇ? ನಾನು ಸಂಜೆ ಆಫೀಸಿನಿಂದ ಮನೆಗೆ ಬಂದಾಗ, ನಾನು ಮಾನಸಿಕವಾಗಿ ಕೆಲಸದಿಂದ ದೂರ ಸರಿಯಬಹುದು. ಹೌದು, ಪ್ರಯಾಣಕ್ಕಿಂತ ನನಗೆ ಸೌಕರ್ಯವೇ ಹೆಚ್ಚು ಇಷ್ಟ ಎಂದು ಹೇಳಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದುಡಿಯುವುದು ಖುಷಿಯಾಗಿರಲು, ಈ ಮಾತಿನಂತೆ ನೀವು ನಡೆದುಕೊಳ್ಳುತ್ತಿದ್ದೀರಾ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ನಿಜಕ್ಕೂ ಒಳ್ಳೆಯ ದೃಷ್ಟಿಕೋನ. ನೀವು ಅದನ್ನು ನಿಭಾಯಿಸಲು ಸಾಧ್ಯವಾದರೆ, ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿದರೆ ನಿಜಕ್ಕೂ ಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡು ಖರ್ಚು ಮಾಡಿದೆ ಯಾಕೆ ಅನ್ನೋದಕ್ಕಿಂತ, ಪಡೆದುಕೊಂಡದ್ದೇನು ಎಂದು ಅರಿಯುವುದು ಮುಖ್ಯ ಎಂದಿದ್ದಾರೆ.
ನವದೆಹಲಿ, ಮಾರ್ಚ್ 22: ಇರಾನ್ ಯುದ್ಧ ಮುಂದುವರಿಯುತ್ತಲೇ ಇರುವುದರಿಂದ ಜಾಗತಿಕ ತೈಲ ಬಿಕ್ಕಟ್ಟು (Oil crisis) ತೀವ್ರಗೊಳ್ಳುತ್ತಿದೆ. ಭಾರತದಲ್ಲಿ ಸರ್ಕಾರವು ಇಂಧನ ಪೂರೈಕೆಗೆ ಹರಸಾಹಸ ಮಾಡುತ್ತಿದೆ. ಈ ಮುಂದುವರಿದ ಸಂಕಷ್ಟ ಎದುರಿಸಲು ನಡೆದಿರುವ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿಗಳು ಉನ್ನತ ಮಟ್ಟದ ಸಭೆ ನಡೆಸಿದರು. ಪೆಟ್ರೋಲಿಯಂ, ಕಚ್ಚಾ ತೈಲ, ನೈಸರ್ಗಿಕ ಅನಿಲ್, ವಿದ್ಯುತ್, ರಸಗೊಬ್ಬರ ಸೆಕ್ಟರ್ಗಳಲ್ಲಿ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆ ಮಾಡಿದರು.
ಅತಿರೇಕದ ಸ್ಥಿತಿ ಬಂದರೆ ದೇಶದಲ್ಲಿ ಈ ವಿವಿಧ ಇಂಧನ ಸರಕುಗಳ ದಾಸ್ತಾನು ಎಷ್ಟಿದೆ, ಆಮದು ಎಷ್ಟು ಬೇಕು, ಸಿದ್ಧತೆಯ ಯೋಜನೆಗಳು ಏನೇನು ಎಂಬಿತ್ಯಾದಿ ಮಾಹಿತಿಯನ್ನು ಸರ್ಕಾರದ ಈ ಸಂಬಂಧಿತ ಇಲಾಖೆಗಳ ಉನ್ನತ ಅಧಿಕಾರಿಗಳು ಪ್ರಧಾನಿಗಳಿಗೆ ನಿವೇದಿಸಿದರು. ವಿವಿಧ ಸಚಿವರೂ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಕಚ್ಚಾ ತೈಲ ಬೆಲೆ ಹೆಚ್ಚಳ ಆಗಿದ್ದರೂ ಭಾರತ ರಷ್ಯಾದಿಂದ ಅದರ ಪೂರೈಕೆ ಪಡೆದಿದೆ. ಭಾರತದಲ್ಲೂ ಪೆಟ್ರೋಲಿಯಂ ದಾಸ್ತಾನು ತಕ್ಕಮಟ್ಟಿಗೆ ಇದೆ. ಹೀಗಾಗಿ, ತೈಲ ಬೆಲೆ ಏರಿಕೆಯ ಶಾಕ್ ಅನ್ನು ಭಾರತ ತಡೆದುಕೊಂಡು, ಸಾಮಾನ್ಯ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಾಗದಂತೆ ನೋಡಿಕೊಂಡಿದೆ. ಪ್ರೀಮಿಯಮ್ ಪೆಟ್ರೋಲ್ ಬೆಲೆ ಮಾತ್ರವೇ ಏರಿಕೆ ಆಗಿರುವುದು.
ಭಾರತಕ್ಕೆ ನೈಸರ್ಗಿಕ ಅನಿಲದ ಅಭಾವವೂ ಹೆಚ್ಚೇನೂ ಕಾಡುತ್ತಿಲ್ಲ. ಪೈಪ್ಡ್ ಗ್ಯಾಸ್ ಪೂರೈಕೆ ನಿರಂತರವಾಗಿದೆ. ಅರ್ಧಕ್ಕಿಂತ ಹೆಚ್ಚಿನ ನೈಸರ್ಗಿಕ ಅನಿಲವು ಭಾರತದಲ್ಲೇ ಸಿದ್ಧವಾಗುತ್ತಿರುವುದರಿಂದ ಅದರ ಪೂರೈಕೆಯಲ್ಲಿ ಅಷ್ಟೇನೂ ವ್ಯತ್ಯಯ ಆಗಿಲ್ಲ. ಆಸ್ಟ್ರೇಲಿಯಾ, ಕೆನಡಾ ಇತ್ಯಾದಿ ಮೂಲಗಳಿಂದ ನ್ಯಾಚುರಲ್ ಗ್ಯಾಸ್ ಪೂರೈಕೆಯನ್ನು ಭಾರತ ಪಡೆಯುತ್ತಿದೆ.
ಆದರೆ, ದೇಶಕ್ಕೆ ಹೆಚ್ಚಿನ ಸಮಸ್ಯೆಯಾಗಿರುವುದು ಎಲ್ಪಿಜಿಯದ್ದು. ಈ ಪೆಟ್ರೋಲಿಯಂ ಗ್ಯಾಸ್ ಅಭಾವ ಹೆಚ್ಚು ಕಾಡುತ್ತಿದೆ. ಕಮರ್ಷಿಯಲ್ ಗ್ಯಾಸ್ ಬಳಕೆಗೆ ನಿರ್ಬಂಧಗಳನ್ನು ಹಾಕಿದೆ. ಗೃಹಬಳಕೆ ಎಲ್ಪಿಜಿ ಪೂರೈಕೆಗೆ ಸರ್ಕಾರ ಮೊದಲ ಆದ್ಯತೆ ಕೊಟ್ಟಿದೆ. ಕಮರ್ಷಿಯಲ್ ಗ್ಯಾಸ್ ವಿಚಾರದಲ್ಲಿ ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಸಾಮಾನ್ಯ ಜನರಿಗೆ ಸಂಬಂಧಿಸಿದ ಸೇವೆಗಳಿಗೆ ಆದ್ಯತೆ ಕೊಡಲಾಗುತ್ತಿದೆ.
ವಾಹನಗಳಿಗೆ ಹಾಕಲಾಗುವ ಸಿಎನ್ಜಿ ಗ್ಯಾಸ್ ಪೂರೈಕೆ ಸಮರ್ಪಕವಾಗಿದೆ ಎಂದು ಸರ್ಕಾರ ಹೇಳಿದರೂ ಹಲವು ನಗರಗಳಲ್ಲಿ ಸಿಎನ್ಜಿ ಸ್ಟೇಷನ್ಗಳಲ್ಲಿ ಉದ್ದುದ್ದ ಕ್ಯೂಗಳಿರುವುದನ್ನು ಕಾಣಬಹುದು ಎಂದು ವರದಿಗಳು ಬಂದಿವೆ.
ಕಾರವಾರ, ಮಾರ್ಚ್ 22: ಎಲ್ಪಿಜಿ ಗ್ಯಾಸ ಸಿಲಿಂಡರ್ (gas cylinder)ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದರ ಎಫೆಕ್ಟ್ ಬೇರೆ ಉದ್ಯಮಗಳ ಮೇಲೂ ಬೀರಿದೆ. ಪ್ರವಾಸಿ ತಾಣಗಳಲ್ಲಿ ಸಮರ್ಪಕ ಎಲ್.ಪಿ.ಜಿ ಗ್ಯಾಸ್ ಸಿಗದೆ ಎಲ್ಲಾ ಬಗೆಯ ಅಡುಗೆ ಮಾಡಲಾಗುತ್ತಿಲ್ಲ. ಹೀಗಾಗಿ ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಪ್ರವಾಸಿಗರಿಗೆ ಕರಾವಳಿಯ ಖಾದ್ಯ ಸವಿಯಲು ಸಿಗದೇ ನಿರಾಸೆ ಆಗಿದ್ದಾರೆ. ಇನ್ನೂ ಕೆಲವರು ಬುಕ್ಕಿಂಗ್ ಮಾಡಿರುವುದನ್ನ ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದಾರೆ.
ಇರಾನ್-ಇಸ್ರೇಲ್ ಯುದ್ಧ ಆರಂಭವಾಗಿ ಇಂದಿಗೆ 23 ದಿನ. ಇದೇ ಯುದ್ಧ ನಮ್ಮ ದೇಶದ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಮೊದಮೊದಲು ಸಿಲಿಂಡರ್ ಗ್ಯಾಸ್ ಸಿಗದೆ ಹೊಟೇಲ್ ಉದ್ಯಮಕ್ಕೆ ದೊಡ್ಡ ನಷ್ಟ ಸಂಭವಿಸಿದೆ. ಆದರೆ ಸಿಲಿಂಡರ್ ಎಫೆಕ್ಟ್ನ ನಷ್ಟ ಕೇವಲ ಹೋಟೆಲ್ ಉದ್ಯಮಕ್ಕೆ ಸೀಮಿತವಾಗಿಲ್ಲ. ಬೇರೆಬೇರೆ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ.
ಉತ್ತರ ಕನ್ನಡ ಜಿಲ್ಲೆಯನ್ನ ಪ್ರವಾಸಿಗರ ಸ್ವರ್ಗ ಎಂದು ಕರೆಯಲಾಗುತ್ತದೆ. ಕೇವಲ ಪ್ರೇಕ್ಷಣೀಯ ತಾಣಗಳಿಗಷ್ಟೇ ಅಲ್ಲ, ಇಲ್ಲಿನ ಖಾದ್ಯಗಳು ಕೂಡ ಸಾಕಷ್ಟು ಫೇಮಸ್. ಇಲ್ಲಿನ ಕರಾವಳಿ ಖಾದ್ಯ ಸವಿಯಲು ರಾಜ್ಯ, ಹೊರರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಿಲಿಂಡರ್ ಅಭಾವದಿಂದ ಎಲ್ಲಾ ಬಗೆಯ ಖಾದ್ಯಗಳನ್ನು ಮಾಡಲಾಗುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿತಾಣಗಳಿವೆ. ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮನಸೋಲದವರಿಲ್ಲ. ಇಂತಹ ಪ್ರಕೃತಿ ಸೌಂದರ್ಯದ ಮಧ್ಯೆ ತಯಾರಿಸುವ ರುಚಿಕರ ಫಿಶ್ ಹಾಗೂ ತಂದೂರಿ ಐಟಂಗಳಿಗೆ ಭಾರಿ ಬೇಡಿಕೆ ಇದೆ. ಪ್ರವಾಸಿ ತಾಣದ ಜೊತೆಗೆ ಇಲ್ಲಿನ ಖಾದ್ಯ ಸವಿಯಲೆಂದೇ ರಾಜ್ಯ, ಹೊರರಾಜ್ಯಗಳಿಂದ ಜನ ಬರುತ್ತಾರೆ. ಆದರೆ ಗ್ಯಾಸ ಅಭಾವ ಹಿನ್ನೆಲೆ ಇಲ್ಲಿನ ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರಿಗೆ ಕರೆ ಮಾಡಿ ಖಾದ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಖಾದ್ಯ ಸಿಗುತ್ತಿಲ್ಲ ಎಂಬ ಮಾಹಿತಿ ಬರುತ್ತಿದ್ದಂತೆ ಬುಕ್ಕಿಂಗ್ ಕೂಡ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಹೋಟೆಲ್ ಮಾಲೀಕರು ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಪ್ರಿಮಿಯರ್ ಹೋಟೆಲ್ ಮಾಲೀಕ ಎಂ.ಜಿ ರಾಣೆ ಮಾತನಾಡಿದ್ದು, ಪ್ರತಿವರ್ಷ ಸಾಲು ಸಾಲು ರಜೆ ಇದ್ದರೆ ನಮ್ಮ ಹೋಟೆಲ್ ತುಂಬಿರುತ್ತಿತ್ತು. ಯುದ್ಧ ಆರಂಭಕ್ಕೂ ಮುನ್ನ ಮುಂಗಡ ಬುಕ್ಕಿಂಗ್ ಮಾಡಿದ್ದರು. ಕಳೆದ ವಾರ ಬಹಳಷ್ಟು ಜನ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಾರೆ. ಕಾರವಾರದ ದೇಸಿ ಫುಡ್ನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ದೇಸಿ ಫುಡ್ ತಿನ್ನಲು ದೂರದೂರಿನಿಂದ ವಿಐಪಿ ಗೆಸ್ಟ್ ಬರ್ತಾರೆ. ಆ ಗ್ಯಾಸ್ ಅಭಾವದಿಂದ ಬಹಳಷ್ಟು ಐಟಂ ಮಾಡುತ್ತಿಲ್ಲ. ಹೀಗಾಗಿ ಬಹಳಷ್ಟು ಜನ ಕಾರವಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರೆಸಾರ್ಟ್, ಹೋಮ್ ಸ್ಟೆಗಳಲ್ಲು ಇದೆ ರೀತಿಯ ಪರಿಸ್ಥಿತಿ ಇದೆ. ನಿರೀಕ್ಷಿಸಿದಷ್ಟು ಲಾಭ ಸಿಕ್ಕಿಲ್ಲ ಎಂದಿದ್ದಾರೆ.
ಒಟ್ಟಾರೆ ಸಾಲು ಸಾಲು ರಜೆ ಹಾಗೂ ಮಕ್ಕಳ ಬೆಸಿಗೆ ರಜೆ ಆರಂಭ ಹಿನ್ನೆಲೆ ಬಹಳಷ್ಟು ಜನರು ಕುಟುಂಬ ಸಮೇತ ಪ್ರವಾಸಕ್ಕೆ ಬರುವ ಪ್ಲ್ಯಾನ್ ಹಾಕಿರುತ್ತಾರೆ. ಆದರೆ ಗ್ಯಾಸ್ ಅಭಾವದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಹೆಚ್ಚು ಆದಾಯ ಗಳಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಹೋಟೆಲ್ ಉದ್ಯಮಿಗಳಿಗೆ ನಿರಾಸೆ ಉಂಟಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯು (AYUSH Department Karnataka) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಖಾಲಿ ಇರುವ ಖಾತೆ ಸಹಾಯಕ (Accounts Assistant) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ವಾಣಿಜ್ಯ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಅಭ್ಯರ್ಥಿಗಳು ಯಾವುದೇ ಆನ್‌ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲದೆ ಮಾರ್ಚ್ 25 ರಂದು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಹುದ್ದೆಯ ವಿವರ ಮತ್ತು ವೇತನ ಶ್ರೇಣಿ:
ಪ್ರಸ್ತುತ ಆಯುಷ್ ನಿರ್ದೇಶನಾಲಯದಲ್ಲಿ ಒಂದು ಖಾತೆ ಸಹಾಯಕ ಹುದ್ದೆ ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 25,000 ರೂ. ಗೌರವ ಧನವನ್ನು ನೀಡಲಾಗುತ್ತದೆ. ಉದ್ಯೋಗ ಸ್ಥಳವು ಬೆಂಗಳೂರು ಆಗಿರುತ್ತದೆ. ಸರ್ಕಾರದ ನಿಯಮಾನುಸಾರ ಆಯ್ಕೆ ಪ್ರಕ್ರಿಯೆಯು ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ವೃತ್ತಿಜೀವನವನ್ನು ರಾಜ್ಯದ ಆರೋಗ್ಯ ಮತ್ತು ಆಯುಷ್ ವಲಯದಲ್ಲಿ ಆರಂಭಿಸಲು ಇದು ಸೂಕ್ತ ವೇದಿಕೆಯಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿ.ಕಾಂ (B.Com) ಅಥವಾ ಬಿಬಿಎ/ಬಿಬಿಎಂ (BBA/BBM) ಪದವಿಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು. ಸರ್ಕಾರದ ನಿಯಮಗಳ ಅನ್ವಯ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಈ ಹುದ್ದೆಯ ಆಯ್ಕೆಯು ಕೇವಲ ನೇರ ಸಂದರ್ಶನದ (Walk-in-Interview) ಮೂಲಕ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು, ಅನುಭವದ ಪತ್ರಗಳು (ಇದ್ದಲ್ಲಿ) ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಮಾರ್ಚ್ 25 ರಂದು ಈ ಕೆಳಗಿನ ವಿಳಾಸಕ್ಕೆ ಹಾಜರಾಗಬೇಕು:
ವಿಳಾಸ: ಆಡಿಟೋರಿಯಂ, 1ನೇ ಮಹಡಿ, ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು – 560009.
ಅಭ್ಯರ್ಥಿಗಳಿಗೆ ಸೂಚನೆಗಳು:
ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಆಯುಷ್ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಕೊಂಡೊಯ್ಯಲು ಸೂಚಿಸಲಾಗಿದೆ. ಸಮಯ ಪ್ರಜ್ಞೆ ಮತ್ತು ದಾಖಲೆಗಳ ನಿಖರತೆ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
2026 ರ ಐಪಿಎಲ್ (IPL 2026) ಪ್ರಾರಂಭವಾಗುವ ಮೊದಲೇ ಬಿಸಿಸಿಐ (BCCI), ಟೀಂ ಇಂಡಿಯಾದ ಮುಂದಿನ ವೇಳಾಪಟ್ಟಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಎರಡು ತಿಂಗಳ ಕಾಲ ಐಪಿಎಲ್‌ನಲ್ಲಿ ಬ್ಯುಸಿಯಾಗಲಿರುವ ಟೀಂ ಇಂಡಿಯಾ ಆ ಬಳಿಕ ಒಂದರ ಹಿಂದೆ ಒಂದರಂತೆ ಸರಣಿಗಳನ್ನು ಆಡಲಿದೆ. ಮೊದಲಿಗೆ ಅಫ್ಘಾನಿಸ್ತಾನವನ್ನು ಎದುರಿಸಲಿರುವ ಭಾರತ ತಂಡ ಆ ಬಳಿಕ ವಿದೇಶಿ ಪ್ರವಾಸ ಮಾಡಲಿದೆ. ಆ ವಿದೇಶಿ ಪ್ರವಾಸಗಳಲ್ಲಿ ಮೊದಲನೆಯದ್ದಾಗಿ ಐರ್ಲೆಂಡ್ (India vs Ireland) ದೇಶಕ್ಕೆ ಕಾಲಿಡಲಿದೆ. ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದೀಗ ಬಿಸಿಸಿಐ, ಆ ಎರಡು ಪಂದ್ಯಗಳು ಎಲ್ಲಿ? ಯಾವಾಗ ನಡೆಯಲಿವೆ ಎಂಬುದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತ ತಂಡವು ಸುಮಾರು ಮೂರು ವರ್ಷಗಳ ನಂತರ ಮತ್ತೆ ಐರಿಶ್ ನೆಲದಲ್ಲಿ ಟಿ20 ಸರಣಿಯನ್ನಾಡಲಿದೆ. ಟೀಂ ಇಂಡಿಯಾ ಈ ಹಿಂದೆ 2018, 2022 ಮತ್ತು 2023 ರಲ್ಲಿ ಐರ್ಲೆಂಡ್ ಪ್ರವಾಸ ಮಾಡಿತ್ತು. ಈ ಬಾರಿ, ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ಗೆ ಹೋಗಲಿದೆ. ಮೊದಲ ಟಿ20 ಪಂದ್ಯ ಜೂನ್ 26 ರಂದು ನಡೆದರೆ, ಎರಡನೇ ಟಿ20 ಪಂದ್ಯ ಜೂನ್ 28 ರಂದು ನಡೆಯಲಿದೆ. ಈ ಎರಡೂ ಪಂದ್ಯಗಳು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿವೆ. ಐಪಿಎಲ್‌ನಲ್ಲಿ ಮಿಂಚುವ ಆಟಗಾರರು ಈ ಪ್ರವಾಸಕ್ಕೆ ತಂಡದಲ್ಲಿ ಆಯ್ಕೆಯಾಗುವ ಸಾಧ್ಯತೆಗಳಿವೆ.
News
Schedule announced for #TeamIndia‘s tour of Ireland for the 2⃣-match T20I series
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗಲೇ ಟಿ20 ಸ್ವರೂಪದಿಂದ ನಿವೃತ್ತಿ ಘೋಷಿಸಿರುವುದರಿಂದ ಅವರು ಐರ್ಲೆಂಡ್ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ರೋಹಿತ್ ಮತ್ತು ವಿರಾಟ್ ಐರ್ಲೆಂಡ್ ಪ್ರವಾಸದ ಮೊದಲು ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ (ಜೂನ್ 6 – ಜೂನ್ 20) ಮತ್ತು ಐರ್ಲೆಂಡ್ ಪ್ರವಾಸದ ನಂತರ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ (ಜುಲೈ 1 – ಜುಲೈ 19) ಆಡುವ ಸಾಧ್ಯತೆಯಿದೆ. ಇದರರ್ಥ ಒಟ್ಟಾರೆಯಾಗಿ, ಈ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್ ನಂತರ 6 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಫ್ಘನ್, ಇಂಗ್ಲೆಂಡ್ ಸರಣಿಯ ವಿವರಗಳು
ಐಪಿಎಲ್ ಮುಗಿದ ಕೂಡಲೇ, ಟೀಂ ಇಂಡಿಯಾ ಜೂನ್ 6 ರಿಂದ ಜೂನ್ 20 ರವರೆಗೆ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದರಲ್ಲಿ ಒಂದು ಟೆಸ್ಟ್ ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳು ಸೇರಿವೆ. ಅದಾದ ತಕ್ಷಣ, ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಮುಗಿಸಿದ ನಂತರ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಯುವ ಆಟಗಾರರಿಗೆ ಸುವರ್ಣ ಅವಕಾಶ
ಐರ್ಲೆಂಡ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ಸೂರ್ಯಕುಮಾರ್ ಯಾದವ್ ಯುವ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡುವವರಿಗೆ ಐರ್ಲೆಂಡ್ ಪ್ರವಾಸಕ್ಕೆ ಕರೆ ಬರುವ ಸಾಧ್ಯತೆಯಿದೆ. ರೋಹಿತ್ ಮತ್ತು ವಿರಾಟ್ ಅವರಂತಹ ಹಿರಿಯ ಆಟಗಾರರು ಇಲ್ಲದಿದ್ದರೂ, ಭಾರತ ಹೊಂದಿರುವ ಬಲವಾದ ಬೆಂಚ್ ಬಲದೊಂದಿಗೆ ಐರ್ಲೆಂಡ ತಂಡವನ್ನು ಸದೆಬಡಿಯಲು ಟೀಂ ಇಂಡಿಯಾ ಹೊರಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರ, (ಮಾರ್ಚ್ 22): ಜಗಳದ ಬಳಿಕ ಮಲಗಿದ್ದ ಗಂಡನ (Husband) ಮರ್ಮಾಂಗಕ್ಕೆ ಹೆಂಡತಿ (Wife) ಒದ್ದು ಕೊಲೆಗೆ ಯತ್ನಿಸಿರುವ ಘಟನೆ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ನಡೆದಿದೆ. ಪತಿ ಮುನೀಂದ್ರ ಹಾಗೂ ವರ್ಷಾ ನಡುವೆ ಗಲಾಟೆಯಾಗಿದ್ದು, ಬಳಿಕ ಮುನೀಂದ್ರ ಮಲಗಿದ್ದ ವೇಳೆ ಪತ್ನಿ ವರ್ಷಾ ಆತನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ತನ್ನ ಗಂಡನಿಗೆ ಡೈವೋರ್ಸ್ ಕೊಡುವಂತೆ ಪೀಡಿಸಿದ್ದಾಳೆ. ಆದ್ರೆ, ಡೈವೋರ್ಸ್ ಕೊಡಲು ಒಪ್ಪದ ಗಂಡ ಮನೆಯಲ್ಲಿ ಮಲಗಿದ್ದಾಗ, ಆತನ ಮರ್ಮಾಂಗಕ್ಕೆ ಒದ್ದು ಕೊಲೆ ಯತ್ನ ನಡೆಸಿದ್ದಾಳೆ ಎಂದು ತಿಳಿದುಬಂದಿದ್ದು, ಅತ್ತ ಗಂಡ ಆಸ್ಪತ್ರೆ ಸೇರುತ್ತಿದ್ದಂತೆ ಇತ್ತ ಹೆಂಡತಿ ಆಸ್ಪತ್ರೆ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ನಿವಾಸಿಗಳಾದ ಮುನಿಂದ್ರ ಹಾಗೂ ವರ್ಷಾ ಐದು ವರ್ಷ ಪರಸ್ಪರ ಪ್ರಿತಿಸಿದ್ದು, ಕಳೆದ 2 ವರ್ಷ ಹಿಂದಷ್ಟೇ ಪೊಲೀಸ್ ಠಾಣೆಯಲ್ಲಿ ವಿವಾಹವಾಗಿದ್ದರು. ಆದ್ರೆ, ಮದುವೆ ಬಳಿಕ ಅದೇನಾಯ್ತೋ ಏನೋ ವಿಚ್ಛೇದನ ನೀಡುವಂತೆ ವರ್ಷಾ, ಗಂಡನಿಗೆ ಪೀಡಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಪದೇ ಪದೇ ಗಂಡನ ಜೊತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದಳಂತೆ. ಇದೇ ರೀತಿ ಬೆಳಿಗ್ಗೆ ಗಂಡನ ಬಟ್ಟೆ ಹರಿದು ಹಾಕಿ ಜೋರು ಗಲಾಟೆ ಮಾಡಿದ್ದಳಂತೆ. ಅಲ್ಲದೇ ಜಗಳದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ಹಾಕಿದ್ದಾಳೆ. ಸಾಲದಕ್ಕೆ ತನ್ನ ಬಟ್ಟೆಯನ್ನೂ ಸಹ ತೆಗೆದು ಬನ್ನಿ ಯಾರ್ ಬರ್ತಿರಾ ಬನ್ನಿ ಎಂದು ಕಿರುಚಾಡಿದ್ದಾಳೆ. ನಂತರ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ಬಳಿಕ ಆತನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಬೆಳಗ್ಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಗಂಡನನ್ನ ನೋಡಲು ಕುಟುಂಬಸ್ಥರು ಅವಕಾಶ ನೀಡಿಲ್ಲ. ಇದಾದ ಬಳಿಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಮಹಿಳೆ ಕ್ರೀಮಿನಾಶಕ ಸೇವಿಸಿ ಹೈಡ್ರಾಮಾವೇ ಮಾಡಿದ್ದಾಳೆ. ಇನ್ನು ವಿಷ ಸೇವಿ ಆತ್ಮಹತ್ಯೆಗೆ ಯತ್ನಿಸಿದ ವರ್ಷಾ, ಅಸ್ವಸ್ಥಳಾಗಿದ್ದು, ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದುವೆಯಾದ ಹೊಸದರಲ್ಲಿ ವರ್ಷಾ ತವರು ಮನೆಯಲ್ಲಿದ್ದು, ಇತ್ತೀಚಿಗೆ ಗಂಡನ ಮನೆಗೆ ಶಿಪ್ಟ್ ಆಗಿದ್ದರು. ಬಳಿಕ ಸಣ್ಣಪುಟ್ಟ ವಿಚಾರಕ್ಕೆ ವರ್ಷಾ ಗಂಡನ ಜೊತೆ ಕಿರಿಕ್ ಮಾಡುತ್ತಿದ್ದಳು. ಗಂಡನ ಸಹವಾಸವೆ ಬೇಡ ಎಂದು ಮಾಂಗಲ್ಯ ಸರ, ಕಾಲುಂಗರ ಬಿಚ್ಚಿ ಬೀದಿಯಲ್ಲಿ ಎಸೆದು ಹೋಗಿದ್ದಾಳಂತೆ. ಆದ್ರೆ, ಇದೀಗ ಗಂಡನನ್ನು ಕೊಲೆಗೆ ಯತ್ನಿಸಿದ್ದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿದ್ದಾಳೆ.
ನವದೆಹಲಿ, ಮಾರ್ಚ್ 22: ಯುದ್ಧದಿಂದ ಜರ್ಝರಿತವಾಗಿರುವ ಇರಾನ್ ಇದೀಗ ಆರ್ಥಿಕವಾಗಿ ದುಸ್ತರ ಪರಿಸ್ಥಿತಿಗೆ ಸಿಲುಕಿದೆ. ಅಮೆರಿಕದ ಆರ್ಥಿಕ ದಿಗ್ಬಂಧನದ ಫಲವಾಗಿ ಇರಾನ್ನ ರಿಯಾಲ್ ಕರೆನ್ಸಿಯ ಮೌಲ್ಯ (Irani Rial notes) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿದಿದೆ. ಈ ಮಧ್ಯೆ ಇರಾನ್ ದೇಶವು 10 ಮಿಲಿಯನ್ ರಿಯಾಲ್ ಬ್ಯಾಂಕ್ ನೋಟೊಂದನ್ನು ಬಿಡುಗಡೆ ಮಾಡಿದೆ. 10 ಮಿಲಿಯನ್ ಎಂದರೆ ಒಂದು ಕೋಟಿ ರಿಯಾಲ್ ಮುಖಬೆಲೆಯ ನೋಟು ಇದು.
ಈ ಒಂದು ಕೋಟಿ ರಿಯಾಲ್ ನೋಟಿನ ಮೌಲ್ಯ ಕೇವಲ 7 ಡಾಲರ್ ಮಾತ್ರ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 650 ರುಪಾಯಿ ಮಾತ್ರ. ಅಷ್ಟು ಮಟ್ಟಿಗೆ ಇರಾನ್ ಕರೆನ್ಸಿಯ ಮೌಲ್ಯ ನಶಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀನೀ ಯುವಾನ್ ಕರೆನ್ಸಿಗೆ ಬರೊಬ್ಬರಿ 2 ಲಕ್ಷ ಇರಾನೀ ರಿಯಾಲ್ ಸಿಗುತ್ತದೆ. ಒಂದು ಭಾರತೀಯ ರುಪಾಯಿಯ ಮೌಲ್ಯ ಸುಮಾರು 14,000 ರಿಯಾಲ್ಗೆ ಸಮ ಎನಿಸುತ್ತದೆ.
ಇರಾನ್ನಲ್ಲಿ ಹಣದುಬ್ಬರ ಅತಿಯಾದ ಮಟ್ಟದಲ್ಲಿದೆ. ಶೇ. 50ಕ್ಕಿಂತಲೂ ಹೆಚ್ಚಿನ ಹಣದುಬ್ಬರ ದರ ಅಲ್ಲಿದೆ. ಅಂದರೆ, ವರ್ಷಕ್ಕೆ 50 ಪ್ರತಿಶತದಷ್ಟು ಬೆಲೆ ಏರಿಕೆ ಅಲ್ಲಿ ಆಗುತ್ತಿದೆ. ಹಣದ ಮೌಲ್ಯ ಕುಸಿಯುತ್ತಲೇ ಇದೆ. ಸಾಧಾರಣ ವಸ್ತುಗಳನ್ನು ಖರೀದಿಸಲೂ ಜನರು ಬಂಡಲ್ಗಟ್ಟಲೆ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಅಲ್ಲಿನ ಸರ್ಕಾರ ಒಂದು ಮಿಲಿಯನ್ ರಿಯಾಲ್ ಮುಖಬೆಲೆಯ ನೋಟುಗಳನ್ನು ಮುದ್ರಿಸಿದೆ.
ಜನರಿಂದ ಕ್ಯಾಷ್ ಶೇಖರಣೆ
ಯುದ್ಧದಿಂದ ಇರಾನ್ನ ಬ್ಯಾಂಕಿಂಗ್ ಸಿಸ್ಟಂ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗೆ ಧಕ್ಕೆಯಾಗುವ ಭಯವೂ ಇರಾನ್ನ ಆಡಳಿತ ಮತ್ತು ಜನಸಾಮಾನ್ಯರಿಗೆ ಕಾಡುತ್ತಿದೆ. ಹೀಗಾಗಿ, ಬಹಳಷ್ಟು ಜನರು ನಗದು ಹಣವನ್ನು ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಬ್ಯಾಂಕು ಹಾಗು ಎಟಿಎಂಗಳ ಮುಂದೆ ಜನರ ನೂಕುನುಗ್ಗಲು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ನಿಷೇಧ ಕ್ರಮವು ಇರಾನ್ ಆರ್ಥಿಕತೆಯನ್ನು ಜರ್ಝರಿತಗೊಳಿಸಿದೆ. ಅಮೆರಿಕನ್ ಡಾಲರ್ ಬಳಕೆ ಅಸಾಧ್ಯವಾದ್ದರಿಂದ ಇರಾನ್ಗೆ ಅಂತಾರಾಷ್ಟ್ರೀಯ ವ್ಯವಹಾರ ಕಷ್ಟವೆನಿಸಿದೆ. ಚೀನಾ ಜೊತೆ ಬಾರ್ಟರ್ ಸಿಸ್ಟಂ ರೀತಿ ಅದು ವ್ಯವಹರಿಸುತ್ತಿದೆ. ಚೀನಾಗೆ ತೈಲ ಪೂರೈಕೆಗೆ ಬದಲಾಗಿ, ಇರಾನ್ನಲ್ಲಿ ಚೀನಾ ಬೇರೆ ಸೇವೆಗಳನ್ನು ಒದಗಿಸುತ್ತದೆ.
ಮಡದಿ ಮಕ್ಕಳೊಂದಿಗೆ ಲಂಡನ್ನಲ್ಲಿ ನೆಲೆಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಯಾವುದಾದರೂ ಸರಣಿಗಳಿದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ. ಉಳಿದಂತೆ ಕೊಹ್ಲಿ ಲಂಡನ್ನಲ್ಲಿಯೇ ಇರುತ್ತಾರೆ. ಇದೀಗ 2026 ರ ಐಪಿಎಲ್ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇದರ ಸಲುವಾಗಿ ವಿರಾಟ್ ಕೊಹ್ಲಿ ತಮ್ಮ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿಳಿದಿದ್ದರು. ಆ ಬಳಿಕ ಆರ್‌ಸಿಬಿ ತಂಡವನ್ನು ಕೂಡಿಕೊಂಡಿರುವ ಕೊಹ್ಲಿ, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ವದಂತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವದಂತಿ ಗಾಳಿಯಂತೆ ಹಬ್ಬುತ್ತಿರುವುದನ್ನು ಗಮನಿಸಿದ ಕೊಹ್ಲಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ವದಂತಿ ಬಗ್ಗೆ ಕೊಹ್ಲಿ ಸ್ಪಷ್ಟನೆ
ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿ ಏನೆಂದರೆ.. ವಿರಾಟ್ ಕೊಹ್ಲಿ ಭಾರತದಿಂದ ಲಂಡನ್‌ಗೆ ಪ್ರಯಾಣಿಸಲು ಆರ್‌ಸಿಬಿ ಆಡಳಿತ ಮಂಡಳಿಯಿಂದ ಚಾರ್ಟರ್ಡ್ ವಿಮಾನದ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಪಂದ್ಯಗಳ ನಡುವೆ ಮೂರು ದಿನಗಳ ಅಂತರವಿದ್ದರೆ, ಆ ಚಾರ್ಟರ್ಡ್ ವಿಮಾನದಲ್ಲಿ ಭಾರತದಿಂದ ಲಂಡನ್‌ಗೆ ತೆರಳಿ, ಪಂದ್ಯದ ಹಿಂದಿನ ದಿನ ಲಂಡನ್ನಿಂದ ಭಾರತಕ್ಕೆ ಹಿಂದಿರುಗಿ ತಂಡವನ್ನು ಕೂಡಿಕೊಳ್ಳುವ ಸಲುವಾಗಿ ಕೊಹ್ಲಿ ಈ ಬೇಡಿಕೆಯನ್ನು ಆರ್‌ಸಿಬಿ ಆಡಳಿತ ಮಂಡಳಿ ಮುಂದಿಟ್ಟಿದ್ದಾರೆ ಎಂಬುದಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ವಿರಾಟ್ ಕೊಹ್ಲಿ ನಿರಾಕರಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡು, ಎರಡು ನಗುವ ಎಮೋಜಿಗಳನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ. ಇದರರ್ಥ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಶುದ್ಧ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂಬುದನ್ನು ಅರಿಯಬಹುದಾಗಿದೆ.
ಭರ್ಜರಿ ತಯಾರಿಯಲ್ಲಿ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2026 ಕ್ಕೆ ತಯಾರಿ ನಡೆಸುತ್ತಿದ್ದಾರೆ. ಅವರು ಕಳೆದ ವಾರವಷ್ಟೇ ಆರ್‌ಸಿಬಿ ಶಿಬಿರಕ್ಕೆ ಸೇರಿದ್ದರು. ಆರ್‌ಸಿಬಿ ತರಬೇತಿ ಶಿಬಿರದಲ್ಲಿ ವಿರಾಟ್ ಕೊಹ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿವೆ. ಕೆಲವು ವೀಡಿಯೊಗಳಲ್ಲಿ ವಿರಾಟ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದರೆ, ಇನ್ನು ಕೆಲವು ವೀಡಿಯೊಗಳಲ್ಲಿ ಅವರು ಆರ್‌ಸಿಬಿ ಆಟಗಾರರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ