‘ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ’:ಪರಮಾಪ್ತ ಜಮೀರ್ ವಿರುದ್ಧ ಸಿದ್ದರಾಮಯ್ಯ ಗರಂ – Kannada News

ಬೆಂಗಳೂರು, (ಜೂನ್ 11): ರಾಜಕೀಯದಲ್ಲಿ ಯಾರು ಯಾರಿಗೂ ಶತ್ರುಗಳಲ್ಲ, ಮಿತ್ರರಲ್ಲ ಎಂಬ ಮಾತಿದೆ. ಇದಕ್ಕೆ ಪೂರಕವೆಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪರಮಾಪ್ತ ಜಮೀರ್ ಅಹ್ಮದ್ ಖಾನ್ ವಿರುದ್ಧೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಲೇ ಜಮಿರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ ಎನ್ನಲಾಗುತ್ತಿದೆ. ಹೌದು..ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಿದ್ದರಾಮಯ್ಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದು, ಈ ವೇಳೆ ಗಂರ ಆದ ಸಿದ್ದರಾಮಯ್ಯ, ಅವನು (ಜಮೀರ್ ಅಹ್ಮದ್ ಖಾನ್) ನನ್ನ ಆಪ್ತ ಎಂದು ನೀವೆಲ್ಲಾ ಹೇಳುತ್ತೀರಾ. ಆದ್ರೆ, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ ಎಂದು ಸಿಡಿಮಿಡಿಗೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೊದಲೇ ಆಡಿಯೋವೊಂದು ವೈರಲ್ ಆಗಿರುವುದು ಜಮೀರ್ ಅಹ್ಮದ್ ಮೇಲೆ ಪಕ್ಷ ವಿರೋಧಿ ಆರೋಪ ಕೇಳಿಬಂದಿದ್ದು, ಇದರ ನಡುವೆ ಇದೀಗ ಸಿದ್ದರಾಮಯ್ಯ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಸ್ಟೆಲ್ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; ಆಹಾರ ಸೇವಿಸಿದ್ದ 15 ವಿದ್ಯಾರ್ಥಿನಿಯರು ಅಸ್ವಸ್ಥ – Kannada News

ಹಾಸನ ಹಾಸ್ಟೆಲ್​​​ನಲ್ಲಿ ಊಟದಲ್ಲಿ ಹಲ್ಲಿ ಪತ್ತೆ: 15 ವಿದ್ಯಾರ್ಥಿಗಳು ಅಸ್ವಸ್ಥImage Credit source: Tv9 kannada

ಹಾಸನ, ಜೂ.11: ಜಿಲ್ಲೆಯ ತಾಲ್ಲೂಕಿನ ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ದೊಡ್ಡ ಅಚಾತುರ್ಯವೊಂದು ನಡೆದಿದೆ. ವಿದ್ಯಾರ್ಥಿನಿಯರು ರಾತ್ರಿಯ ಊಟ ಮಾಡುವ ವೇಳೆ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದ್ದು, ಅದೇ ವಿಷಪೂರಿತ ಆಹಾರವನ್ನು ಸೇವಿಸಿದ ಸುಮಾರು 15 ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲಿ ಇರುವುದು ತಡವಾಗಿ ಬೆಳಕಿಗೆ ಬಂದಿರುವ ಕಾರಣ ಅಷ್ಟರಲ್ಲಾಗಲೇ ಊಟ ಸವಿದಿದ್ದ 15 ವಿದ್ಯಾರ್ಥಿನಿಯರಲ್ಲಿ ತಕ್ಷಣವೇ ವಾಂತಿ ಹಾಗೂ ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡ ಆರು ವಿದ್ಯಾರ್ಥಿನಿಯರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ (HIMS) ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO) ಹಿಮ್ಸ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ.

ಸುಮಾರು 400 ವಿದ್ಯಾರ್ಥಿನಿಯರಿರುವ ಈ ದೊಡ್ಡ ಹಾಸ್ಟೆಲ್‌ಗೆ ಕಳೆದ ಎರಡು ತಿಂಗಳಿಂದ ಗ್ಯಾಸ್ ಸಿಲಿಂಡರ್ ಸಿಗದೆ ತೀವ್ರ ಪರದಾಟ ಉಂಟಾಗಿದೆ ಎಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಹಾಸ್ಟೆಲ್‌ಗೆ ವಾರಕ್ಕೆ ಕನಿಷ್ಠ 4 ರಿಂದ 6 ವಾಣಿಜ್ಯ (Commercial) ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಗ್ಯಾಸ್ ಏಜೆನ್ಸಿಯವರು ವಾರಕ್ಕೆ ಕೇವಲ ಒಂದರಿಂದ ಎರಡು ಸಿಲಿಂಡರ್ ಮಾತ್ರ ಪೂರೈಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮಹಾ ವಿಸ್ಮಯ: 26 ವರ್ಷ ಹಿಂದೆ ಓಡಿಹೋಗಿದ್ದ ಹುಡುಗ ಕೊನೆಗೂ ವಾಪಸ್, ಸತೀಶ್ ಈಗ ಮಹಾರಾಷ್ಟ್ರದ ಸಲೀಂ!

ಸಿಲಿಂಡರ್ ಕೊರತೆಯಿಂದಾಗಿ ಅನಿವಾರ್ಯವಾಗಿ ಅಡುಗೆ ಮನೆಯ ಹೊರಗಡೆ ಸೌದೆ ಒಲೆ ಹಾಕಿ ಅಡುಗೆ ಮಾಡಲಾಗುತ್ತಿತ್ತು. ಹೊರಗಡೆ ತೆರೆದ ಜಾಗದಲ್ಲಿ ಅಡುಗೆ ಮಾಡುತ್ತಿದ್ದರಿಂದ ಹಾಗೂ ಅಡುಗೆ ತಯಾರಿಸುವವರು ಶುಚಿತ್ವ ಕಾಪಾಡದ ಕಾರಣ ಸಾಂಬಾರ್‌ಗೆ ಹಲ್ಲಿ ಬಿದ್ದಿದೆ. ಇದೇ ಅಚಾತುರ್ಯಕ್ಕೆ ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಮುಖ್ಯ ಕಾರಣ ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 400 ಜನ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ನ ಈ ದುಸ್ಥಿತಿಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಗ್ಯಾಸ್ ಏಜೆನ್ಸಿಯ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಪೋಷಕರು ತೀವ್ರವಾಗಿ ಕಿಡಿಕಾರಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:55 pm, Thu, 11 June 26

Source link

ಪ್ರಣೀತ್ ಮೋರೆ ಶೋನಲ್ಲಿ ಮತ್ತೊಂದು ಕರ್ಮಕಾಂಡ; ಮೃತದೇಹದ ಖಾಸಗಿ ಅಂಗಗಳ ಬಗ್ಗೆ ಲೇವಡಿ – Kannada News

ರಿಯಾಲಿಟಿ ಶೋ ‘ಬಿಗ್ ಬಾಸ್ 19’ರ ಸೆಕೆಂಡ್ ರನ್ನರ್ ಅಪ್ ಹಾಗೂ ಸ್ಟ್ಯಾಂಡ್-ಅಪ್ ಕಮಿಡಿಯನ್ ಪ್ರಣೀತ್ ಮೋರೆ ಅವರ ಶೋ ಈಗ ಸಾಲು ಸಾಲು ವಿವಾದಗಳ ಮೂಲಕ ಭಾರಿ ಆಕ್ರೋಶಕ್ಕೆ ಈಡಾಗಿದೆ. ತಮ್ಮ ಶೋನಲ್ಲಿ ಅಸಭ್ಯ ಹಾಗೂ ಕೀಳು ಮಟ್ಟದ ಸಂಭಾಷಣೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪ್ರಣೀತ್ ಮೋರೆಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೇ ವೈರಲ್ ಆಗಿದ್ದ ‘370 ರೂಪಾಯಿ ಬಿರಿಯಾನಿ’ ವಿವಾದ ತಣ್ಣಗಾಗುವ ಮುನ್ನವೇ, ಅದೇ ಶೋನ ಮತ್ತೊಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಿಚ್ಚು ಹೊತ್ತಿಸಿದೆ.

ಪ್ರಸ್ತುತ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಭಾಗವಹಿಸಿರುವ ಡಾ. ಸೆಜಲ್ ಪವಾರ್ ಎಂಬ ಯುವ ಮಹಿಳಾ ವೈದ್ಯೆ, ಶವಪರೀಕ್ಷೆ ನಡೆಸುವಾಗ ಪುರುಷರ ಶವಗಳ ಖಾಸಗಿ ಅಂಗಗಳನ್ನು ವೈದ್ಯರು ಹೇಗೆ ಲೇವಡಿ ಮಾಡುತ್ತಾರೆ ಮತ್ತು ತಮಾಷೆ ಮಾಡುತ್ತಾರೆ ಎಂಬ ವಿಷಯವನ್ನು ನಗುತ್ತಾ ಹಂಚಿಕೊಂಡಿದ್ದಾರೆ. ಅತ್ಯಂತ ಗೌರವಾನ್ವಿತ ವೃತ್ತಿಯಲ್ಲಿದ್ದುಕೊಂಡು, ಮೃತದೇಹಕ್ಕೆ ಕನಿಷ್ಠ ಗೌರವ ನೀಡದೆ ಈ ರೀತಿ ಸಾರ್ವಜನಿಕವಾಗಿ ಹಾಸ್ಯ ಮಾಡಿರುವುದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಬೆನ್ನಲ್ಲೇ ಡಾ. ಸೆಜಲ್ ಕ್ಷಮೆಯಾಚಿಸಿದ್ದು, ‘ನನ್ನ ಮಾತಿನ ಅರ್ಥ ಬೇರೆಯೇ ಇತ್ತು. ಆದರೆ ಅದು ತಪ್ಪಾಗಿ ಬಿಂಬಿತವಾಗಿದೆ. ಇದಕ್ಕೆ ನಾನು ಜವಾಬ್ದಾರಿ ಹೊರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಡಾ. ಸೆಜಲ್ ಅವರ ಈ ವರ್ತನೆಗೆ ಸಿನಿಮಾ ಗಣ್ಯರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ವೈದ್ಯಕೀಯ ವಿದ್ಯಾರ್ಥಿಗಳು ಕಲಿಯಲಿ ಮತ್ತು ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಕುಟುಂಬದವರು ತಮ್ಮವರ ಮೃತದೇಹವನ್ನು ದಾನ ಮಾಡುತ್ತಾರೆ. ಅದು ಅತ್ಯಂತ ದೊಡ್ಡ ನಂಬಿಕೆ. ಇಂತಹ ಕೀಳು ಮಟ್ಟದ ವರ್ತನೆಗಳಿಂದಾಗಿ ಜನರು ದೇಹದಾನ ಮಾಡುವುದನ್ನೇ ನಿಲ್ಲಿಸಿದರೆ ವೈದ್ಯಕೀಯ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಇದು ಕಾಮಿಡಿಯೂ ಅಲ್ಲ, ಕಂಟೆಂಟ್ ಕೂಡ ಅಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಏನಿದು ಬಿರಿಯಾನಿ ವಿವಾದ?

ಇದಕ್ಕೂ ಮುನ್ನ ಇದೇ ಶೋನಲ್ಲಿ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕ, ತಾನು ಯುವತಿಯೊಬ್ಬಳನ್ನು ಡೇಟ್‌ಗೆ ಕರೆದೊಯ್ದು 370 ರೂಪಾಯಿ ಬಿರಿಯಾನಿ ಕೊಡಿಸಿದ್ದಾಗಿ ಹೇಳಿದ್ದನು. ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡಬೇಕಲ್ಲ’ ಎಂದು ಹೇಳಿ, ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಅತ್ಯಂತ ಅಸಭ್ಯವಾಗಿ ಮತ್ತು ಸಾರ್ವಜನಿಕವಾಗಿ ವಿವರಿಸಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದದ ಬೆನ್ನಲ್ಲೇ ಹಿಮಾಂಶು ತನ್ನ ಕೆಲಸವನ್ನು ಕಳೆದುಕೊಂಡಿದ್ದನು. ಈಗ ಅದೇ ರೀತಿ ಈ ಮಹಿಳಾ ವೈದ್ಯೆಯ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ – Kannada News

ಆಂಥ್ರೊಪಿಕ್ ಕ್ಲಾಡ್Image Credit source: Getty Images

ನವದೆಹಲಿ, ಜೂನ್ 11: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಪ್ರಖ್ಯಾತ AI ಕಂಪನಿಯಾದ ‘ಆಂಥ್ರೊಪಿಕ್’ (Anthropic) ಜೊತೆ ಜಾಗತಿಕ ಪಾಲುದಾರಿಕೆಯನ್ನು ಘೋಷಿಸಿದೆ. ಈ ಯೋಜನೆಯ ಭಾಗವಾಗಿ, TCS ತನ್ನ 50,000 ಉದ್ಯೋಗಿಗಳಿಗೆ ಆಂಥ್ರೊಪಿಕ್‌ನ ‘ಕ್ಲಾಡ್’ (Claude) AI ಮಾಡಲ್ ಅನ್ನು ಬಳಸುವ ಕುರಿತು ತರಬೇತಿ ನೀಡಲಿದೆ. ಇಂಜಿನಿಯರಿಂಗ್, ಹಣಕಾಸು, ಕಾನೂನು, ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಉದ್ಯೋಗಿಗಳು ಈ ತಂತ್ರಜ್ಞಾನವನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಲಿದ್ದಾರೆ.

ಈ ಒಪ್ಪಂದದ ಅಡಿಯಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ಒಂದು ಪ್ರತ್ಯೇಕ ವ್ಯಾಪಾರ ಘಟಕವನ್ನು (Business Unit) ಸ್ಥಾಪಿಸಲಿದ್ದು, ಇದು ಆಂಥ್ರೊಪಿಕ್‌ನ ‘ಕ್ಲಾಡ್’ ಮಾದರಿಗಳನ್ನು ಬಳಸಿಕೊಂಡು ಗ್ರಾಹಕರಿಗೆ AI ಪರಿಹಾರಗಳನ್ನು ಒದಗಿಸುವ ಕೆಲಸ ಮಾಡಲಿದೆ.

ಕ್ಲಾಡ್ ಯಾವ ಕ್ಷೇತ್ರಗಳಿಗೆ ಲಾಭ?

ಹಣಕಾಸು ಸೇವೆಗಳು (Financial Services), ಆರೋಗ್ಯ ರಕ್ಷಣೆ, ಲೈಫ್ ಸೈನ್ಸಸ್, ಟೆಲಿಕಾಂ, ವಾಯುಯಾನ ಮತ್ತು ಸಾರ್ವಜನಿಕ ಸೇವೆಗಳಂತಹ ಕ್ಷೇತ್ರಗಳಿಗೆ ಈ AI ತಂತ್ರಜ್ಞಾನವನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ವಿಶ್ವಾಸಾರ್ಹತೆ ಮತ್ತು ನಿಯಂತ್ರಕ ನಿಯಮಗಳನ್ನು (Regulatory Compliance) ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕ್ಷೇತ್ರಗಳಿಗೆ ಇದು ಹೆಚ್ಚು ಸಹಕಾರಿಯಾಗಲಿದೆ.

ಇದನ್ನೂ ಓದಿ: ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

ಆಂಥ್ರೋಪಿಕ್ ಸಿಇಒ ಹೇಳಿಕೆ

ಭಾರತವು ತಮ್ಮ ಕಂಪನಿಯ ಪಾಲಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಈ ಪಾಲುದಾರಿಕೆಯು ಭಾರತದಲ್ಲಿನ ತಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆಂಥ್ರೊಪಿಕ್‌ನ ಸಿಇಒ ಡಾರಿಯೋ ಅಮೋಡೆ ಅವರು ತಿಳಿಸಿದ್ದಾರೆ.

TCS ಕಂಪನಿಯು ಕೇವಲ AI ಪ್ರಯೋಗಗಳಿಗೆ ಸೀಮಿತವಾಗದೆ, ಉತ್ಪಾದನಾ ಮಟ್ಟದಲ್ಲಿ (Production-scale) AI ಅಪ್ಲಿಕೇಶನ್‌ಗಳನ್ನು ನಿಯೋಜಿಸಲು ಮತ್ತು ಅದಕ್ಕೆ ಅಗತ್ಯವಾದ ಭದ್ರತೆ ಹಾಗೂ ನಿಖರತೆಯನ್ನು ಖಾತ್ರಿಪಡಿಸಲು ಈ ತಂತ್ರಜ್ಞಾನವನ್ನು ಬಳಸಲಿದೆ.

TCS iON ಪಾತ್ರ

ಟಿಸಿಎಸ್​ನ ‘TCS iON’ ವಿಭಾಗವು ಕ್ಲಾಡ್ ಮಾಡಲ್​ಗಳನ್ನು ಕಲಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಇದು ಭಾರತದಲ್ಲಿ ‘AI-ಸಜ್ಜಿತ’ (AI-ready) ಕಾರ್ಯಪಡೆಯನ್ನು ನಿರ್ಮಿಸಲು ನೆರವಾಗಲಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಟಿಸಿಎಸ್​ನ ಸಿಇಒ ಮತ್ತು ಎಂಡಿಯಾದ ಕೃತಿವಾಸನ್ ಅವರು ಈ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಟಿಸಿಎಸ್​ನ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಔದ್ಯಮಿಕ ಪರಿಗಣಿತಿ ಜೊತೆಗೆ ಕ್ಲಾಡ್​ನ ಶಕ್ತಿಯು ಸೇರಿದರೆ ಗ್ರಾಹಕರಿಗೆ ಎಐ ಅಳವಡಿಕೆ ಕಾರ್ಯವನ್ನು ಸುಲಭಗೊಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಈ ಬೆಳವಣಿಗೆಯ ನಡುವೆಯೂ, ಮಾರುಕಟ್ಟೆಯಲ್ಲಿ TCS ಷೇರುಗಳು ಸದ್ಯಕ್ಕೆ 52 ವಾರಗಳ ಕನಿಷ್ಠ ಮಟ್ಟದ ಸಮೀಪವೇ ವಹಿವಾಟು ನಡೆಸುತ್ತಿವೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಿವಿಂಗ್​ಸ್ಟೋನ್ ನಾಯಕ, ಆ್ಯಂಡಿ ಫ್ಲವರ್, ದಿನೇಶ್ ಕಾರ್ತಿಕ್ ಕೋಚ್! – Kannada News

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿಯ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಲಂಡನ್ ಸ್ಪಿರಿಟ್ ತಂಡವು ತನ್ನ ನಾಯಕನನ್ನು ಹೆಸರಿಸಿದೆ. ಅದರಂತೆ ಈ ಬಾರಿ ಲಂಡನ್ ಸ್ಪಿರಿಟ್ ತಂಡವನ್ನು ಲಿಯಾಮ್ ಲಿವಿಂಗ್​ಸ್ಟೋನ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ (2025ರ ಸೀಸನ್‌ನಲ್ಲಿ) ನ್ಯೂಝಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಲಂಡನ್ ಸ್ಪಿರಿಟ್ ತಂಡವನ್ನು ಮುನ್ನಡೆಸಿದ್ದರು.

ಇದೀಗ ಹೊಸ ತಂಡದೊಂದಿಗೆ ಹೊಸ ಪ್ರಯೋಗ ಮಾಡಲು ಲಂಡನ್ ಸ್ಪಿರಿಟ್ ಫ್ರಾಂಚೈಸಿ ಮುಂದಾಗಿದೆ. ಅದರಂತೆ ಆಲ್​ರೌಂಡರ್ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್​ಗೆ ನಾಯಕತ್ವ ನೀಡಲಾಗಿದೆ.

ಆ್ಯಂಡಿ ಫ್ಲವರ್, ದಿನೇಶ್ ಕಾರ್ತಿಕ್ ಕೋಚ್:

ಲಂಡನ್ ಸ್ಪಿರಿಟ್ ತಂಡದ ಡೈರೆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಮೊ ಬೊಬಾಟ್. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕರು. ಹೀಗಾಗಿಯೇ ಇದೀಗ ಲಂಡನ್ ಸ್ಪಿರಿಟ್ ತಂಡಕ್ಕೂ ಆರ್​ಸಿಬಿ ತಂಡದ ಯಶಸ್ವಿ ಜೋಡಿಯ ಎಂಟ್ರಿಯಾಗಿದೆ. ಅಂದರೆ ಆರ್​ಸಿಬಿ ತಂಡದ ಮುಖ್ಯ ಕೋಚ್ ಹಾಗೂ ಮೆಂಟರ್ ಲಂಡನ್ ಸ್ಪಿರಿಟ್ ತಂಡದ ಪರ ಕಾರ್ಯ ನಿರ್ವಹಿಸಲಿದ್ದಾರೆ.

  • ಆ್ಯಂಡಿ ಫ್ಲವರ್ (ಮುಖ್ಯ ಕೋಚ್): ಆರ್​ಸಿಬಿ ತಂಡದ ಕೋಚ್ ಆಗಿ ಬ್ಯಾಕ್ ಟು ಬ್ಯಾಕ್ ಎರಡು ಟ್ರೋಫಿ ಗೆದ್ದಿರುವ ಆ್ಯಂಡಿ ಫ್ಲವರ್ ಈ ಬಾರಿ ಲಂಡನ್ ಸ್ಪಿರಿಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ಹಿಸಲಿದ್ದಾರೆ.
  • ದಿನೇಶ್ ಕಾರ್ತಿಕ್ (ಮೆಂಟರ್/ಕೋಚ್): ಲಂಡನ್ ಸ್ಪಿರಿಟ್ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿರುವುದು ಆರ್​ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್.
  • ಆರ್​ಸಿಬಿ ಮಾಜಿ ಆಟಗಾರ: ಲಿಯಾಮ್ ಲಿವಿಂಗ್​ಸ್ಟೋನ್ ಆರ್​ಸಿಬಿ ತಂಡದ ಮಾಜಿ ಆಟಗಾರ ಎಂಬುದು ಉಲ್ಲೇಖಾರ್ಹ. ಆರ್​ಸಿಬಿ ತಂಡ ಚೊಚ್ಚಲ ಟ್ರೋಫಿ ಗೆದ್ದಾಗ ಲಿವಿಂಗ್​ಸ್ಟೋನ್ ಕೂಡ ತಂಡದ ಭಾಗವಾಗಿದ್ದರು. ಇದೀಗ ಲಿವಿಂಗ್​ಸ್ಟೋನ್​ಗೆ ನಾಯಕತ್ವ ನೀಡಿ ಆ್ಯಂಡಿ ಫ್ಲವರ್​, ದಿನೇಶ್ ಕಾರ್ತಿಕ್ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಬೌಲಿಂಗ್ ಕೋಚ್ ಆಗಿ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಲಂಡನ್ ಸ್ಪಿರಿಟ್ ಬಲಿಷ್ಠ ಕೋಚಿಂಗ್ ಬಳಗವನ್ನು ರೂಪಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಭಾರತೀಯ..!

ಲಂಡನ್ ಸ್ಪಿರಿಟ್ ತಂಡ: ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ/ಇಂಗ್ಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಡೆವಾಲ್ಡ್ ಬ್ರೆವಿಸ್ (ಸೌತ್ ಆಫ್ರಿಕಾ), ಆ್ಯಡಂ ಹೋಸ್ (ಇಂಗ್ಲೆಂಡ್), ಲುಹಾನ್-ಡ್ರೆ ಪ್ರಿಟೋರಿಯಸ್ (ಸೌತ್ ಆಫ್ರಿಕಾ), ಜೇಮ್ಸ್ ರೀವ್ (ಇಂಗ್ಲೆಂಡ್), ಜೇಮ್ಸ್ ಕೋಲ್ಸ್ (ಇಂಗ್ಲೆಂಡ್), ಜೇಮಿ ಓವರ್ಟನ್ (ಇಂಗ್ಲೆಂಡ್), ಡೇವಿಡ್ ವಿಲ್ಲಿ (ಇಂಗ್ಲೆಂಡ್), ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಟೈಮಲ್ ಮಿಲ್ಸ್ (ಇಂಗ್ಲೆಂಡ್), ಆಡಮ್ ಮಿಲ್ನ್ (ನ್ಯೂಝಿಲೆಂಡ್), ಮ್ಯಾಥ್ಯೂ ಫಿಶರ್ (ಇಂಗ್ಲೆಂಡ್) ಮತ್ತು ಮೇಸನ್ ಕ್ರೇನ್ (ಇಂಗ್ಲೆಂಡ್).

Source link

ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ – Kannada News

ಕಾಕಿನಾಡ, ಜೂನ್ 11: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಟುನಿ ಮಂಡಲದ ಸಿಎಚ್ ಅಗ್ರಹಾರದ ತಾಳೆ ಎಣ್ಣೆ ತೋಟದಲ್ಲಿ ಕಾವಲುಗಾರರಾಗಿರುವ ಸುಂಕರ ಭವಾನಿ ಮತ್ತು ಗಣೇಶ್ ದಂಪತಿಯ ಎರಡು ವರ್ಷದ ಮುದ್ದಾದ ಮಗಳು ಜಾಹ್ನವಿ ಕಾಣೆಯಾಗಿ ನಾಲ್ಕು ದಿನಗಳಾಗಿವೆ. ಮಗಳ ಮುಖ ನೋಡಲು ತಾಯಿ ಕಂಗಾಲಾಗಿದ್ದರೆ, ಮತ್ತೊಂದೆಡೆ ಇಡೀ ಆಡಳಿತ ಯಂತ್ರವೇ ಆಕೆಯನ್ನು ಪತ್ತೆಹಚ್ಚಲು ಬೆಟ್ಟ-ಗುಡ್ಡಗಳನ್ನು ಜಾಲಾಡುತ್ತಿದೆ. ಸದ್ಯಕ್ಕೆ ಗಾಢ ಕತ್ತಲೆಯಂತಿರುವ ಈ ಕಥೆಯಲ್ಲಿ ಈಗ ಸಾಕು ನಾಯಿ(Dog)ಯ ಅಚ್ಚರಿಯ ನಡೆ ಮತ್ತು ಅಧಿಕಾರಿಗಳ ತೀವ್ರ ಶೋಧ ಕಾರ್ಯವು ಮಗು ಜೀವಂತವಾಗಿ ಮರಳಿ ಬರಲಿದ್ದಾಳೆ ಎಂಬ ದೊಡ್ಡ ಭರವಸೆಯ ಕಿರಣವನ್ನು ಮೂಡಿಸಿದೆ.

ಅಚ್ಚರಿ ತಂದ ಸಾಕು ನಾಯಿಯ ಆಗಮನ ಮತ್ತು ಮಹತ್ವದ ಸುಳಿವು
ಜಾಹ್ನವಿ ನಾಪತ್ತೆಯಾದ ದಿನದಿಂದ ಆಕೆಯ ಬೆನ್ನಿಗೇ ಹೋಗಿದ್ದ ಸಾಕು ನಾಯಿ ಕೂಡ ನಾಪತ್ತೆಯಾಗಿತ್ತು. ಆದರೆ, ಮೂರು ದಿನಗಳ ನಂತರ ಹಠಾತ್ ಆಗಿ ಮನೆಗೆ ಮರಳಿದ ನಾಯಿ, ಮಗು ಎಲ್ಲಿದ್ದಾಳೆ ಎಂಬುದಕ್ಕೆ ಪ್ರಕೃತಿಯೇ ನೀಡಿದಂತೆ ಒಂದು ರೋಚಕ ಸುಳಿವನ್ನು ಬಿಟ್ಟುಕೊಟ್ಟಿದೆ.

ಮನೆಯ ಬಳಿ ಬಂದ ನಾಯಿ, ಮಗುವಿನ ತಾಯಿ ಭವಾನಿಯ ಬಳಿ ಬಂದು ಆಕೆಯ ಸೀರೆಯ ಸೆರಗು ಎಳೆದು ಮತ್ತೆ ಗುಡ್ಡಗಾಡು ಪ್ರದೇಶದತ್ತ ಓಡಿದೆ. ನಾಯಿಯ ಈ ವಿಚಿತ್ರ ವರ್ತನೆಯು “ಮಗು ಗುಡ್ಡದ ಮೇಲಿದ್ದಾಳೆ, ನನ್ನ ಜೊತೆ ಬನ್ನಿ ಎಂದು ಕರೆಯುತ್ತಿರುವ ಸಂಕೇತದಂತಿದೆ. ನಾಯಿ ತಡವಾಗಿ ಬಂದಿರುವುದು ಮತ್ತು ಮಗುವಿನ ಬಟ್ಟೆಯನ್ನು ಎಳೆಯುತ್ತಿರುವುದು ನೋಡಿದರೆ, ಮಗು ಸುರಕ್ಷಿತವಾಗಿದ್ದಾಳೆ ಮತ್ತು ನಾಯಿಯೇ ಇಷ್ಟು ದಿನ ಆಕೆಗೆ ಕಾವಲಾಗಿತ್ತು ಎಂಬ ಆಶಾವಾದ ಪೋಷಕರಲ್ಲಿ ಚಿಗುರೊಡೆದಿದೆ.

ಮತ್ತಷ್ಟು ಓದಿ: Video: 30 ಸೆಕೆಂಡುಗಳಲ್ಲಿ ಹಲವರಿಗೆ ಕಚ್ಚಿದ ಬೀದಿ ನಾಯಿ

ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ: 200ಕ್ಕೂ ಹೆಚ್ಚು ಸಿಬ್ಬಂದಿ ಕಣಕ್ಕೆ
ಪುಟ್ಟ ಕಂದಮ್ಮನನ್ನು ಹೇಗಾದರೂ ಮಾಡಿ ತಾಯಿಯ ಮಡಿಲು ಸೇರಿಸಲೇಬೇಕು ಎಂದು ಪೆಡ್ಢಾಪುರಂ ವಿಭಾಗದ 200 ಕ್ಕೂ ಹೆಚ್ಚು ಪೊಲೀಸರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಅರಣ್ಯದ ಹಾದಿಗಳು ಮತ್ತು ದಟ್ಟವಾದ ತಾಳೆ ತೋಟಗಳಲ್ಲಿ ಆಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇಡಲಾಗಿದೆ. ಇತ್ತೀಚೆಗೆ ಗುಡ್ಡಗಾಡು ಪ್ರದೇಶದಲ್ಲಿ ಮಗುವಿನ ಅಳುವ ಶಬ್ದ ಕೇಳಿಸಿದೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದು, ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ
ಮಗುವಿನ ಪತ್ತೆಗೆ ಸಾರ್ವಜನಿಕರ ಸಹಕಾರವನ್ನೂ ಕೋರಿರುವ ಪೊಲೀಸರು, ಜಾಹ್ನವಿ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರೂ ಸಹ ಈಗ ಜಾಗೃತರಾಗಿದ್ದು, ಹುಡುಕಾಟಕ್ಕೆ ದೊಡ್ಡ ಬಲ ಬಂದಿದೆ.

ನಾಯಿಯ ಚಲನವಲನಗಳ ಮೇಲೆ ತಜ್ಞರ ನಿಗಾ
ತುನಿ ಪುರಸಭೆ ಆಯುಕ್ತ ವೆಂಕಟ್ ರಾವ್ ನೇತೃತ್ವದಲ್ಲಿ ಸಾಕು ನಾಯಿಯನ್ನು ಸದ್ಯ ಸುರಕ್ಷಿತವಾಗಿ ಸೆರೆಹಿಡಿಯಲಾಗಿದ್ದು, ಶ್ವಾನದಳದ ತಜ್ಞರು ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಯಿ ತೋರಿಸುವ ದಾರಿಯಲ್ಲೇ ಸಾಗಲು ಪೊಲೀಸರು ಬ್ಲೂಪ್ರಿಂಟ್ ಸಿದ್ಧಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:19 pm, Thu, 11 June 26

Source link

Viral: ಖಾಲಿಯಿದ್ದ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ತಿಂಗಳಿಗೆ 22 ಲಕ್ಷ ಸಂಪಾದಿಸುವ ವ್ಯಕ್ತಿ – Kannada News

ಮೀರತ್, ಜೂನ್ 11: ಕೈಯಲ್ಲೊಂದು ಉದ್ಯೋಗ ಇಲ್ಲವಾದರೆ ಸ್ವಂತವಾದ ಬ್ಯುಸಿನೆಸ್ ಇದ್ರೆ ಮರ್ಯಾದೆ. ಕೆಲವರು ಸ್ವಂತ ಬ್ಯುಸಿನೆಸ್ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡೋದನ್ನು ನೀವು ನೋಡಿರುತ್ತೀರಿ. ಆದರೆ ವ್ಯಕ್ತಿಯೊಬ್ಬರು ಖಾಲಿ ಜಾಗವನ್ನೇ ಹಣದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿರುವ (Meerut in Uttar Pradesh) ತನ್ನ ಸ್ನೇಹಿತನ ಹೊಸ ಬ್ಯುಸಿನೆಸ್ ಐಡಿಯಾದ ಬಗ್ಗೆ ಯುವತಿಯೂ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ತನ್ನ ಬಳಿಯಿದ್ದ ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ತಿಂಗಳಿಗೆ 22 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾ ಇದ್ದಾರಂತೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಈ ವ್ಯಕ್ತಿಯ ಬ್ಯುಸಿನೆಸ್ ಐಡಿಯಾವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಕಂಟೆಂಟ್ ಕ್ರಿಯೇಟರ್ ಪೂಜಾ (@poojaofficial5) ಹೆಸರಿನ ಎಕ್ಸ್ ಖಾತೆಯಲ್ಲಿ ತನ್ನ ಸ್ನೇಹಿತನ ಹೊಸ ಬ್ಯುಸಿನೆಸ್ ಐಡಿಯಾವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಮೀರತ್‌ನಲ್ಲಿರುವ ತನ್ನ ಸ್ನೇಹಿತ, ಒಂದು ಸ್ವಿಮ್ಮಿಂಗ್ ಪೂಲ್ ಬ್ಯುಸಿನೆಸ್‌ನಿಂದ ಬೇಸಿಗೆಯಲ್ಲಿ ತಿಂಗಳಿಗೆ 22 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹಾಗೂ ಇನ್ನು ಉಳಿದ ತಿಂಗಳಿನಲ್ಲಿ 7.5 ಲಕ್ಷದವರೆಗೆ ಸಂಪಾದನೆ ಮಾಡ್ತಾರೆ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನಾನು ಈ ಫಾರ್ಮ್‌ಗೆ ಹೋದಾಗ ಈ ಸ್ವಿಮ್ಮಿಂಗ್ ಪೂಲ್ ಗಮನಿಸಿದ್ದೆ. ಇದೇನಾದ್ರೂ ದುಡ್ಡು ಮಾಡ್ತಿದ್ಯಾ ಅಥವಾ ಸುಮ್ನೆ ಹವ್ಯಾಸಕ್ಕಾಗಿ ಮಾಡಿದ್ದೀಯಾ? ಎಂದು ಕೇಳಿದ್ದಕ್ಕೆ ನನ್ನ ಸ್ನೇಹಿತ, ಪರವಾಗಿಲ್ಲ, ನಡೀತಿದೆ ಎಂದು ನಗುತ್ತಾ ಉತ್ತರಿಸಿದ್ದಾರೆ. ಮೀರತ್‌ನ NH 58 ಹೆದ್ದಾರಿಯಲ್ಲಿರುವ ಈ ಫಾರ್ಮ್‌ಗೆ ಬೇಸಿಗೆಯಲ್ಲಿ ದಿನಕ್ಕೆ 700 ರಿಂದ 800 ಜನ ಬರ್ತಾರಂತೆ. ಒಬ್ಬರಿಗೆ 100 ರೂಪಾಯಿ ಟಿಕೆಟ್ ದರವಿದೆ. ಈ ಬೇಸಿಗೆಯಲ್ಲಿ ದಿನಕ್ಕೆ ಸರಾಸರಿ 750 ಜನ ಇಲ್ಲಿಗೆ ಬಂದರೆ, ದಿನಕ್ಕೆ 75,000 ರೂಪಾಯಿ ಆದಾಯ ಬರುತ್ತದೆ. ತಿಂಗಳಿಗೆ ಸುಮಾರು 22.5 ಲಕ್ಷ ರೂಪಾಯಿ ಆದಾಯವಾಗುತ್ತದೆ ಎಂದು ಪೂಜಾ ಹೇಳಿದ್ದಾರೆ.

ಬೇಸಿಗೆ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಸುಮಾರು 250 ಜನ ಇಲ್ಲಿಗೆ ಬರುತ್ತಾರೆ. ದಿನಕ್ಕೆ 25000 ಸಾವಿರದಂತೆ ತಿಂಗಳಿಗೆ 7.5 ಲಕ್ಷ ರೂಪಾಯಿ ಬರುತ್ತದೆ. ಈ ಫಾರ್ಮ್‌ ನೋಡಿಕೊಳ್ಳಲು ಸೆಕ್ಯುರಿಟಿಗಾಗಿ ಗಾರ್ಡ್‌ಗಳನ್ನು ಮಾತ್ರ ನೇಮಿಸಿಕೊಂಡಿದ್ದಾರೆ. ಅವರಿಬ್ಬರಿಗೂ ಸೇರಿ ತಿಂಗಳಿಗೆ 20,000 ರೂಪಾಯಿ ಸಂಬಳ ಕೊಡುತ್ತಾರೆ. ಈ ಸ್ವಿಮ್ಮಿಂಗ್ ಪೂಲ್‌ನ ನೀರನ್ನು ಬದಲಾಯಿಸುವಾಗ ಅದನ್ನು ವ್ಯರ್ಥ ಮಾಡಲ್ಲ. ಈ ನೀರನ್ನು ರೈತರಿಗೆ ಕೃಷಿಗಾಗಿ ಮಾರಾಟ ಮಾಡುತ್ತಾರೆ. ಈ ಹಣದಿಂದ ಈಗಾಗಲೇ ವಾಹನಗಳನ್ನು ಖರೀದಿಸಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆ ಆದಾಯದ ಮೂಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ದಿನಕ್ಕೆ 700 ರಿಂದ 800 ಜನರೇ, ಈ ಸ್ವಿಮ್ಮಿಂಗ್ ಪೂಲ್ ನಲ್ಲಿ ಅದೇಗೆ ಸಾಧ್ಯ ಎಂದು ಕೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಸ್ನೇಹಿತನ ಐಡಿಯಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ: ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರು, ಜೂನ್​​ 11: ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟ ಬಜೆಟ್​​ನ ಶೇ. 52ರಷ್ಟು ಹಣವನ್ನು ಕೆಲವೇ ಸಮುದಾಯದ ಸಂಸ್ಥೆಗಳಿಗೆ ನೀಡಲಾಗಿದೆ. 8 ಮಡಿವಾಳ‌, 2 ಯಾದವ, 01 ಹೆಳವ, ಸವಿತಾ ಸಮಾಜದ 01 ಸಂಘಗಳಿಗೆ ಅನುದಾನ ನೀಡಲಾಗಿದೆ. ಟೀ. ನರಸೀಪುರ ಒಂದೇ ತಾಲೂಕಿಗೆ 13 ಸಮುದಾಯ ಭವನಗಳು ಮಂಜೂರು ಮಾಡಲಾಗಿದ್ದು, ಗದಗದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್​​ಗೂ 50 ಲಕ್ಷ ಕೊಟ್ಟಿದ್ದಾರೆ. ಕುರುಬ ಸಮುದಾಯದ 89 ಸಂಘ ಸಂಸ್ಥೆಗಳಿಗೆ ಅನುದಾನ ನೀಡಲಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಬೇರೆ ಸಮುದಾಯಗಳು ಇಲ್ಲವಾ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಲ್ಮಾನ್ ಖಾನ್ ಆಪ್ತನ ಜಿಮ್ ಮೇಲೆ ಬಿಷ್ಣೊಯಿ ಗ್ಯಾಂಗ್ ದಾಳಿ – Kannada News

ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಮತ್ತೊಮ್ಮೆ ದಾಳಿ ನಡೆಸಿದೆ. ಈ ಬಾರಿ ಸಲ್ಮಾನ್ ಖಾನ್​ ಆಪ್ತರೊಬ್ಬರನ್ನು ಗುರಿ ಮಾಡಿ ದಾಳಿ ಮಾಡಲಾಗಿದೆ. ಬುಧವಾರ ರಾತ್ರಿ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ಪ್ರಸಿದ್ಧ ಗಾಯಕ ಗುರು ರಂಧಾವ ಒಡೆತನದ ಫಿಟ್‌ನೆಸ್ ಸೆಂಟರ್ ಮೇಲೆ ಗುಂಡಿನ ದಾಳಿ ನಡೆದಿದೆ. ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿರುವ ಅನಿಲ್ ಪಂಡಿತ್ ಎಂಬಾತ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ನಟ ಸಲ್ಮಾನ್ ಖಾನ್‌ಗೆ ಬಹಳ ಹತ್ತಿರವಾಗುತ್ತಿರುವ ಗಾಯಕನಿಗೆ ಎಚ್ಚರಿಕೆ ನೀಡಲು ಗುರು ರಂಧವ ಅವರ ’24HS ಫಿಟ್‌ನೆಸ್’ ಜಿಮ್‌ ಅನ್ನು ಗುರಿಯಾಗಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ. ‘ನಾವು ದೆಹಲಿಯಲ್ಲಿ ಗುರು ರಂಧವ ಅವರ ಜಿಮ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದೇವೆ, ಏಕೆಂದರೆ ಅವರು ಸಲ್ಮಾನ್ ಖಾನ್‌ಗೆ ತುಂಬಾ ಹತ್ತಿರವಾಗುತ್ತಿದ್ದಾರೆ’ ಎಂದು ಪಂಡಿತ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದು, ತನ್ನ ‘ಶತ್ರುಗಳ’ ಮೇಲೆ ಇನ್ನೂ ಹೆಚ್ಚಿನ ದಾಳಿಗಳನ್ನು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಗುಂಡಿನ ದಾಳಿಯ ಮಾಹಿತಿ ಪಡೆದ ನಂತರ ಪೊಲೀಸ್ ತಂಡಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದೆಹಲಿ ಪೊಲೀಸರ ಪ್ರಕಾರ, ದೆಹಲಿಯ ನಿವಾಸಿಯೊಬ್ಬರು ಗುರು ರಂಧವ ಅವರ ‘24HS ಫಿಟ್‌ನೆಸ್’ ಫ್ರ್ಯಾಂಚೈಸ್‌ನ ಜಿಮ್ ಅನ್ನು ನಡೆಸುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಮುಖ ಮುಚ್ಚಿಕೊಂಡಿದ್ದ ಇಬ್ಬರು ಬೈಕ್ ಸವಾರರು ಜಿಮ್ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಪೊಲೀಸರು ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇತ್ತೀಚೆಗೆ ಸರಣಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮಾಡುತ್ತಿದೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿತ್ತು. ಕೆನಡಾದಲ್ಲಿ ಗಾಯಕ ಗಿಪ್ಪಿ ಗ್ರೆವಾಲ್ ಅವರ ಮನೆಯ ಮೇಲೆ ದಾಳಿ, ಮುಂಬೈನಲ್ಲಿ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡಿನ ದಾಳಿ, ಎಪಿ ಧಿಲ್ಲೋನ್ ಅವರಿಗೆ ಬೆದರಿಕೆ, ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆ. ಕಪಿಲ್ ಶರ್ಮಾ ಅವರ ಕೆನಡಾದ ಕೆಫೆ ಮೇಲೆ ದಾಳಿ, ರೋಹಿತ್ ಶೆಟ್ಟಿ ಅವರ ಮುಂಬೈ ಮನೆಯ ಮೇಲೆ ದಾಳಿ, ನಟಿ ದಿಶಾ ಪಟಾನಿ ಅವರ ಮನೆಯ ಮೇಲೆ ದಾಳಿಗಳನ್ನು ಈ ತಂಡ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

6 ಸಾವಿರ ಕೊಟ್ರೆ ಒಂದು ವಿಷಯ ಪಾಸ್​​: ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ್ತೊಂದು ಕಳ್ಳಾಟ ಬಯಲು – Kannada News

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯImage Credit source: getmycollege.com

ಬಳ್ಳಾರಿ, ಜೂನ್​​ 11: ವಿಶ್ವ ವಿದ್ಯಾಲಯಗಳೆಂದರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರಗಳು. ಆದರೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಾತ್ರ ಮಾತಿಗೆ ವಿರುದ್ಧ ಎಂಬಂತಿದೆ. ಹಣ ಪಡೆದು ನಕಲಿ ಘಟಿಕೋತ್ಸವ ಸರ್ಟಿಫಿಕೇಟ್ ಕೊಡುತ್ತಿದ್ದ ಹಗರಣದ ಬೆನ್ನಲ್ಲೇ ಯೂನಿವರ್ಸಿಟಿಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಡಿಗ್ರಿ ಫೇಲ್ ಆದ ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸ್ ಮಾಡುವ ದಂಧೆಯಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಯೇ ಭಾಗಿಯಾಗಿರೋದು ಹೌಹಾರುವಂತೆ ಮಾಡಿದೆ.

ಒಂದು ಸಬ್ಜೆಕ್ಟ್​​ಗೆ ಇಷ್ಟೆಂದು ಹಣ ಫಿಕ್ಸ್​​

ಒಂದು ವಿಷಯಕ್ಕೆ 6 ಸಾವಿರ ರೂಪಾಯಿ ನೀಡಿದರೆ ಸಾಕು ಫೇಲ್​​ ಆದ ವಿದ್ಯಾರ್ಥಿಯನ್ನು ಇಲ್ಲಿನ ಸಿಬ್ಬಂದಿ ತೇರ್ಗಡೆ ಮಾಡುತ್ತಾರೆ. ಇದೇ ರೀತಿ ಹಣ ನೀಡಿ ಈಗಾಗಲೇ ಹಲವರು ಉತ್ತೀರ್ಣ ಕೂಡ ಆಗಿದ್ದಾರೆ. ಅಷ್ಟಕ್ಕೂ ಇದು ಈಗ ನಡೆಯುತ್ತಿರುವ ಹೊಸ ದಂಧೆಯಲ್ಲ. ಹಲವು ವರ್ಷಗಳಿಂದ ಯೂನಿವರ್ಸಿಟಿಯ ಕೆಲ ಸಿಬ್ಬಂದಿ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. UCMC ವಿಭಾಗದ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಎನ್ನುವವರ ಮೇಲೆ ಈ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಲಭ್ಯವಾಗಿರುವ ಆಡಿಯೋವೊಂದರಲ್ಲಿ ಕೆಲ ಸಿಬ್ಬಂದಿ ವಿದ್ಯಾರ್ಥಿಗಳ ಬಳಿ ಹಣ ಕೇಳಿರೋದು ದೃಢಪಟ್ಟಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಮುಂಗಾರು ಮಳೆ ಅಬ್ಬರ, ಭಾರಿ ಅವಾಂತರ; ವಿಮ್ಸ್ ಆಸ್ಪತ್ರೆ, ಕೆಇಬಿ ಕಚೇರಿಗಳಿಗೆ ನುಗ್ಗಿದ ನೀರು

ತನಿಖೆಗೆ ವಿದ್ಯಾರ್ಥಿ ಸಂಘಟನೆಗಳ ಆಗ್ರಹ

ಇನ್ನು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಬ್ಬಂದಿಯ ಕಳ್ಳಾಟ ಬಯಲಾಗುತ್ತಿದ್ದಂತೆ ಈ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ಆಕ್ರೋಶ ವ್ಯಕ್ತಪಡಿಸಿದೆ. ಈ ದಂಧೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ದಂಧೆಯಲ್ಲಿ ವಿವಿಯ ಪ್ರಮುಖರು ಭಾಗಿಯಾಗಿದ್ದು, ದೊಡ್ಡ ಮಟ್ಟದಲ್ಲಿ ತನಿಖೆ ಮಾಡುವಂತೆ ಒತ್ತಾಯಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:30 pm, Thu, 11 June 26

Source link

Exit mobile version