ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು; ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ನಾಳೆ ಉಪವಾಸ ಸತ್ಯಾಗ್ರಹ – Kannada News

ನವದೆಹಲಿ, ಜೂನ್ 9: ಮಧ್ಯಪ್ರದೇಶದಿಂದ ರಾಜ್ಯಸಭೆಯ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ ಹೈದರಾಬಾದ್ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದ್ದರಿಂದ, ಕಾಂಗ್ರೆಸ್‌ಗೆ ಈಗ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದೆ ಆ ಸ್ಥಾನವನ್ನು ಕಳೆದುಕೊಂಡಿದೆ. ಇದರಿಂದಾಗಿ ಬಿಜೆಪಿಯ ಮೂರನೇ ಅಭ್ಯರ್ಥಿ ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್ ಚುನಾವಣಾ ಆಯೋಗದ ಕಚೇರಿಯೆದುರು ಪ್ರತಿಭಟನೆ ನಡೆಸಿದೆ. ನಾಳೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಘೋಷಿಸಿದೆ.

ಮೀನಾಕ್ಷಿ ನಟರಾಜನ್ (ಆರೋಪಿ ಸಂಖ್ಯೆ 4) ವಿರುದ್ಧ ಹೈದರಾಬಾದ್‌ನ ‘ನಾಲ್ಕನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್’ ನ್ಯಾಯಾಲಯದಲ್ಲಿ 2025 ರ ಆಗಸ್ಟ್‌ನಿಂದ ಕ್ರಿಮಿನಲ್ ಪ್ರಕರಣವೊಂದು ಬಾಕಿ ಇದೆ. ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅವರಿಗೆ ನೋಟಿಸ್ ಕೂಡ ಜಾರಿ ಮಾಡಿತ್ತು. ನಾಮಪತ್ರ ಸಲ್ಲಿಕೆಯ ವೇಳೆ ಈ ಕ್ರಿಮಿನಲ್ ಪ್ರಕರಣದ ವಿವರಗಳನ್ನು ಅಫಿಡವಿಟ್‌ನಲ್ಲಿ ನಮೂದಿಸದ ಕಾರಣದಿಂದ ಬಿಜೆಪಿಯ ಮಹೇಶ್ ಕೇವತ್ ನೀಡಿದ ದೂರಿನ ಆಧಾರದ ಮೇಲೆ ಚುನಾವಣಾಧಿಕಾರಿಗಳು ನಾಮಪತ್ರವನ್ನು ವಜಾಗೊಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೀಟು ಕಳ್ಳತನ ಮಾಡಿದೆ; ರಾಜ್ಯಸಭೆ ನಾಮಪತ್ರ ರದ್ದಾಗಿದ್ದಕ್ಕೆ ಮೀನಾಕ್ಷಿ ನಟರಾಜನ್ ಆಕ್ರೋಶ

ರಾಜ್ಯಸಭಾ ಚುನಾವಣೆಯಲ್ಲಿ ತೃತೀಯ ಪಕ್ಷದ ಪ್ರಭಾವ ಹಾಗೂ ರೆಸಾರ್ಟ್ ರಾಜಕೀಯದ ಆತಂಕದಿಂದಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಭೋಪಾಲ್‌ನಿಂದ ಬೆಂಗಳೂರಿಗೆ ಕರೆದೊಯ್ಯಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು. ಕಾಂಗ್ರೆಸ್ ಶಾಸಕರು ವಿಮಾನವೇರಿ, ಅದು ರನ್‌ವೇನಲ್ಲಿ ಚಲಿಸಲು ಆರಂಭಿಸಿದಾಗಲೇ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಸುದ್ದಿ ಬಂದಿದೆ. ತಕ್ಷಣವೇ ಹಿರಿಯ ನಾಯಕರ ಆದೇಶದ ಮೇರೆಗೆ ವಿಮಾನವನ್ನು ರನ್‌ವೇನಿಂದಲೇ ವಾಪಸ್ ಕರೆಯಿಸಿ, ಶಾಸಕರನ್ನು ರಕ್ಷಿಸುವ ತಂತ್ರಕ್ಕೆ ಬ್ರೇಕ್ ಹಾಕಲಾಯಿತು.

ನಾಮಪತ್ರ ರದ್ದತಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಚಿನ್ ಪೈಲಟ್ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿತು. ಸಂಜೆ 6 ಗಂಟೆಯ ನಂತರ ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಇಲ್ಲದ ಕಾರಣ ಅವರಿಗೆ ಒಳಗೆ ಹೋಗಲು ಬಿಡದಿದ್ದಾಗ, ಕಾಂಗ್ರೆಸ್ ನಾಯಕರು ಗೇಟ್ ಮುಂಭಾಗದಲ್ಲೇ ಧರಣಿ ಕುಳಿತು ಆಕ್ರೋಶ ಹೊರಹಾಕಿದರು. ನಂತರ ಆಯೋಗವು ಕಾಂಗ್ರೆಸ್‌ನ ಜ್ಞಾಪನಾ ಪತ್ರವನ್ನು ಸ್ವೀಕರಿಸಿದೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ

“ಇದು ಪ್ರಜಾಪ್ರಭುತ್ವದ ಹಗಲು ದರೋಡೆ. ನಮ್ಮ ಶಾಸಕರನ್ನು ಸೆಳೆಯುವ ಬಿಜೆಪಿಯ ಕೀಳು ತಂತ್ರಗಳು ವಿಫಲವಾದಾಗ ಅವರು ಈ ಮಾರ್ಗ ಹಿಡಿದಿದ್ದಾರೆ. ನಾಮಪತ್ರದಲ್ಲಿ ತಪ್ಪು ಮುಚ್ಚಿಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ನಾವು ಇದನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಬೀದಿಗಿಳಿದು ಹೋರಾಡಲಿದ್ದೇವೆ.” ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

“ನಮ್ಮ ಅಭ್ಯರ್ಥಿಯ ವಿರುದ್ಧ ಯಾವುದೇ ಎಫ್‌ಐಆರ್ (FIR) ಅಥವಾ ಚಾರ್ಜ್‌ಶೀಟ್ ಇಲ್ಲ. ಕೇವಲ ಕೋರ್ಟ್‌ನಿಂದ ಬಂದ ನೋಟಿಸ್ ಅನ್ನು ನೆಪವಾಗಿಟ್ಟುಕೊಂಡು ರಾಜ್ಯಸಭಾ ಅಭ್ಯರ್ಥಿಯೊಬ್ಬರ ನಾಮಪತ್ರ ರದ್ದು ಮಾಡಿರುವುದು ಇತಿಹಾಸದಲ್ಲೇ ಮೊದಲು.” ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:13 pm, Tue, 9 June 26

Source link

ಪಾದಚಾರಿ ಅಲ್ಲ,ಸಾವಿನ ಮಾರ್ಗ: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ ಪಾದಚಾರಿಗಳ ಸಾವಿನ ಸಂಖ್ಯೆ – Kannada News

ಬೆಂಗಳೂರು, (ಜೂನ್ 09): ಜನಸಂದಣಿ ಹೆಚ್ಚಿರುವ ಬೆಂಗಳೂರಿನ (Bengaluru)  ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಫುಟ್‌ಪಾತ್‌ (footpaths) ಅತಿಕ್ರಮಿಸಿವೆ. ಬಹುತೇಕ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಗಳಲ್ಲೂ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ. ಇದೇ ರೀತಿ ನಗರದ ಇತರೆ ರಸ್ತೆಗಳಲ್ಲಿನ ಫುಟ್‌ಪಾತ್‌ಗಳು ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಹೋಟೆಲ್‌ಗಳ ಟೇಬಲ್‌, ಅಂಗಡಿಗಳ ಸಾಮಗ್ರಿಗಳು, ನಾಮಫಲಕ, ಕಟ್ಟಡ ಕಾಮಗಾರಿ ವಸ್ತುಗಳು, ಹಣ್ಣು, ತರಕಾರಿ, ಬೋಂಡಾ-ಬಜ್ಜಿ ಕೈಗಾಡಿಗಳು ಸೇರಿದಂತೆ ಫಾಸ್ಟ್‌ಫುಡ್‌ ಅಂಗಡಿಗಳ ವ್ಯಾಪಾರಕ್ಕೆ ಫುಟ್‌ಪಾತ್‌ಗಳು ಬಳಕೆಯಾಗುತ್ತಿವೆ. ಇದರಿಂದ ಪಾದಾಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೌದು….ಪಾದಚಾರಿಗಳ ಸಾವಿನ ಸಂಖ್ಯೆ ನೋಡೋದಾದರೆ, 2023ರಲ್ಲಿ-232 ಸಾವು, 2024- 246, 2025-260, 2026(ಏಪ್ರಿಲ್ ತಿಂಗಳವರೆಗೆ) 90 ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪಾದಾಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ
  • ವ್ಯಾಪಾರಿಗಳ ಅಡ್ಡವಾದ ಪಾದಚಾರಿಗಳಿಗೆ ನಿರ್ಮಿಸಿದ ಬೆಂಗಳೂರಿನ ಅಂಡರ್‌ಪಾಸ್‌ಗಳು
  • ರಸ್ತೆ ದಾಟಲು ಪ್ರಾಣ ಕೈನಲ್ಲಿಟ್ಟುಕೊಂಡು ಓಡಾಡುತಿರೋ ಪಾದಚಾರಿಗಳು
  • ಎರಡು ವರ್ಷಾವಾದ್ರೂ ಜನರು ಓಡಾಡುವ ಸ್ಕೈವಾಕ್ ಗಿಲ್ಲ ಮುಕ್ತಿ

ಈ ಸಾವುಗಳನ್ನು ತಡೆಯಲು ನಿರ್ಮಿಸಲಾದ ಅಂಡರ್ ಪಾಸ್, ಸ್ಕೈವಾಕ್ ಗಳು ಮಾತ್ರ ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ನಗರದ ಬಹುತೇಕ ಪಾದಚಾರಿ ಮಾರ್ಗಗಳು ವಿವಿಧ ಕಾರಣಗಳಿಂದ ಒತ್ತುವರಿಯಾಗಿರುತ್ತವೆ. ಹೀಗಾಗಿ ಸಾರ್ವಜನಿಕರು ಓಡಾಡಲು ಅನಿವಾರ್ಯವಾಗಿ ರಸ್ತೆಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಪಾದಚಾರಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು: 5,445ಕ್ಕೆ ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ವ್ಯಾಪಾರಿಗಳ ಅಡ್ಡವಾದ ಅಂಡರ್ ಪಾಸ್, ಸ್ಕೈವಾಕ್

ಬೆಂಗಳೂರಿನ ಹೃದಯ ಭಾಗದಲ್ಲಿರೋ ಮೆಜೆಸ್ಟಿಕ್ ಅಂಡರ್‌ಪಾಸ್ ಒಳಗೆ ಕಾಲಿಟ್ಟರೆ ಇದು ಪಾದಚಾರಿಗಳ ಮಾರ್ಗವೋ ಅಥವಾ ಸಂತೆ ಮಾರುಕಟ್ಟೆಯೋ ಎನ್ನುವ ಆಗಿದೆ. ಪಾದರಕ್ಷೆಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವರೆಗೆ ಎಲ್ಲವೂ ಇಲ್ಲಿ ಸಿಗುತ್ತದೆ. ವ್ಯಾಪಾರಿಗಳು ಇಡೀ ಅಂಡರ್‌ಪಾಸ್ ಅನ್ನು ಅತಿಕ್ರಮಣ ಮಾಡಿದ್ದಾರೆ. ಇನ್ನು ಮೆಟ್ರೋ ನಿಲ್ದಾಣದಿಂದ ಕೆಎಸ್ಆರ್ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಎಲ್ಲಾ ಭಾಗದಲ್ಲೂ ಅಂಡರ್‌ಪಾಸ್‌ನಲ್ಲಿ ವ್ಯಾಪಾರಿಗದೇ ಹಾವಳಿ.

ಮುಗಿಯದ ಓಕಳೀಪುರ ಸ್ಕೈವಾಕ್

ಮತ್ತೊಂದು ಕಡೆ ಓಕಳೀಪುರ ಮುಖ್ಯ ರಸ್ತೆ ದಾಟಲು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಕೋಟಿಗಟಲ್ಲೇ ಖರ್ಚು ಮಾಡಿ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಅದ್ರೆ ವಯಸ್ಸದವರು ಓಡಾಡಲು ಸರಿಯಾದ ಲಿಫ್ಟ್ ವ್ಯವಸ್ಥೆಯೇ ಇಲ್ಲ. ನಿರ್ಮಾಣವಾಗಿ ಎರಡು ವರ್ಷವಾದ್ರೂ ಸ್ಕೈವಾಕ್ ಕೆಲಸ ಮುಗಿಯುವ ಲಕ್ಷಣಗಲೇ ಕಾಣುತಿಲ್ಲ.. ಇದರಿಂದಾಗಿ ಜನರು ಮುಖ್ಯ ರಸ್ತೆಗಳಲ್ಲೇ ವಾಹನಗಳ ಮಧ್ಯೆ ನುಸುಳಿಕೊಂಡು ಪ್ರಾಣವನ್ನು ಕೈನಲ್ಲಿ ಇಟ್ಟುಕೊಂಡು ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆ.ಆರ್. ಮಾರುಕಟ್ಟೆ ಅಂಡರ್‌ಪಾಸ್ ಈಗ ಕಳಪೆ

ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾದ ಕೆ.ಆರ್. ಮಾರುಕಟ್ಟೆ ಅಂಡರ್‌ಪಾಸ್ ಈಗ ಕಳಪೆ ನಿರ್ವಹಣೆಗೆ ಸಾಕ್ಷಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಎಸ್ಕಲೇಟರ್‌ಗಳನ್ನೇನೋ ಹಾಕಲಾಗಿದೆ. ಆದರೆ ಅವು ಸದ್ಯ ಕೈಕೊಟ್ಟಿವೆ. ಇದರಿಂದ ಹಿರಿಯ ನಾಗರಿಕರು ರಸ್ತೆಯ ಮೇಲೆಯೇ ಪ್ರಾಣದ ಹಂಗು ತೊರೆದು ಓಡಾಡುತ್ತಿದ್ದಾರೆ.

ಒಟ್ಟಿನಲ್ಲಿ ಕೋಟಿ ಕೋಟಿ ವೆಚ್ಚದ ಯೋಜನೆಗಳು ಕೇವಲ ಕಾಗದದ ಮೇಲಷ್ಟೇ ಇವೆಯೇ ಹೊರತು ಪಾದಚಾರಿಗಳ ಜೀವ ಉಳಿಸುವ ಕೆಲಸ ಮಾತ್ರ ಆಗುತ್ತಿಲ್ಲ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

ಶನಿಯ ಕೃಪೆಯಿಂದ ಈ ರಾಶಿಯವರ ದೀರ್ಘಕಾಲದ ಕನಸುಗಳು ನನಸಾಗುವ ಸಮಯ: ನಿಮ್ಮ ರಾಶಿಯ ಮೇಲಾಗುವ ಪ್ರಭಾವ ಏನು? – Kannada News

ಜ್ಯೋತಿಷ್ಯದ ಪ್ರಕಾರ ಶನಿಯು ಮೀನ ರಾಶಿಯಲ್ಲಿದ್ದು ಚಂದ್ರನ ದ್ರೇಕ್ಕಾಣ, ರವಿಯ ಹೋರೆ ಹಾಗೂ ಗುರುವಿನ ತ್ರಿಂಶಾಂಶ ಮತ್ತು ದ್ವಾದಶಾಂಶಗಳಲ್ಲಿ ಸ್ಥಿತನಾಗಿರುವುದು ಅತ್ಯಂತ ವಿಶಿಷ್ಟ ಸಂಯೋಜನೆಯಾಗಿದೆ. ಈ ತಿಂಗಳಲ್ಲಿ ಶನಿಯ ಸಂಚಾರ ಏನೆಲ್ಲ ಆಗಲಿದೆ.

​ಮೇಷ ರಾಶಿ

​ಶನಿಯು ಈ ರಾಶಿಯಲ್ಲಿ ಇರುವ ಕಾರಣ ಆರ್ಥಿಕ ವ್ಯಯ ಹೆಚ್ಚಾಗಲಿದೆ. ಆದರೆ ಗುರುವಿನ ದ್ವಾದಶಾಂಶವು ವಿದೇಶ ಪ್ರಯಾಣ ಅಥವಾ ಆಧ್ಯಾತ್ಮಿಕ ಸಾಧನೆಗೆ ದಾರಿ ಮಾಡಿಕೊಡುತ್ತದೆ. ರವಿಯ ಹೋರೆಯಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಕೊಂಚ ವಿಳಂಬವಾಗಬಹುದು. ಚಂದ್ರನ ದ್ರೇಕ್ಕಾಣವು ಮನಸ್ಸಿನಲ್ಲಿ ಅಸ್ಥಿರತೆ ತರಲಿದ್ದು, ಹಿರಿಯರ ಮಾರ್ಗದರ್ಶನದಿಂದ ಯಶಸ್ಸು ಸಿಗಲಿದೆ.

​ವೃಷಭ ರಾಶಿ

​ಏಕಾದಶದ ಶನಿಯು ಅಪಾರ ಲಾಭ ತರಲಿದ್ದಾನೆ. ರವಿಯ ಹೋರೆಯು ಉದ್ಯೋಗದಲ್ಲಿ ಉನ್ನತ ಸ್ಥಾನ ಮತ್ತು ಗೌರವವನ್ನು ನೀಡುತ್ತದೆ. ಗುರುವಿನ ತ್ರಿಂಶಾಂಶದಿಂದಾಗಿ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸುವಿರಿ. ಚಂದ್ರನ ದ್ರೇಕ್ಕಾಣವು ಮಿತ್ರರಿಂದ ಮತ್ತು ಒಡಹುಟ್ಟಿದವರಿಂದ ಪ್ರೀತಿ, ಸಹಕಾರವನ್ನು ತಂದುಕೊಡುತ್ತದೆ. ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು.

ಮಿಥುನ ರಾಶಿ

​ದಶಮದ ಶನಿಯು ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮವನ್ನು ಬೇಡುತ್ತಾನೆ. ರವಿಯ ಹೋರೆಯು ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ತರಬಹುದು. ಆದರೆ ಗುರುವಿನ ಅಂಶಗಳು ವ್ಯಾಪಾರದಲ್ಲಿ ಸ್ಥಿರತೆ ಮತ್ತು ಗೌರವವನ್ನು ನೀಡುತ್ತವೆ. ಚಂದ್ರನ ದ್ರೇಕ್ಕಾಣದಿಂದಾಗಿ ಕೆಲಸದ ನಡುವೆ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಮಾನಸಿಕ ಸಮತೋಲನ ಅಗತ್ಯವಾಗಿದೆ.

ಕರ್ಕಾ​ಟಕ ರಾಶಿ

ನವಮದ ಶನಿಯು ಭಾಗ್ಯೋದಯವನ್ನು ತರಲಿದ್ದಾನೆ. ರವಿಯ ಹೋರೆಯು ತಂದೆಯ ಆರೋಗ್ಯದ ಕಡೆ ಗಮನಹರಿಸಲು ಸೂಚಿಸುತ್ತದೆ. ಗುರುವಿನ ದ್ವಾದಶಾಂಶ ಮತ್ತು ತ್ರಿಂಶಾಂಶವು ಉನ್ನತ ಶಿಕ್ಷಣ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಉತ್ತಮ ಅವಕಾಶ ನೀಡಲಿದೆ. ಚಂದ್ರನ ದ್ರೇಕ್ಕಾಣವು ನಿಮ್ಮ ಆಲೋಚನೆಗಳಲ್ಲಿ ಸಕಾರಾತ್ಮಕತೆ ತುಂಬಲಿದ್ದು, ದೈವಬಲದಿಂದ ಎಲ್ಲಾ ಕಷ್ಟಗಳು ದೂರಾಗಲಿವೆ.

ಸಿಂಹ ರಾಶಿ

​ಈ ರಾಶಿಗೆ ಶನಿಯು ಅಷ್ಟಮ ಶನಿಯ ಪ್ರಭಾವ ನೀಡಲಿದ್ದು, ಆರೋಗ್ಯದ ಬಗ್ಗೆ ಎಚ್ಚರವಿರಲಿ. ರವಿಯ ಹೋರೆಯು ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ವಿವಾದ ತರಬಹುದು. ಆದರೆ ಗುರುವಿನ ತ್ರಿಂಶಾಂಶವು ವಿಮೆ ಅಥವಾ ಹಠಾತ್ ಧನಲಾಭವನ್ನು ನೀಡುತ್ತದೆ. ಚಂದ್ರನ ದ್ರೇಕ್ಕಾಣವು ಮಾನಸಿಕ ಆತಂಕ ತರಲಿದ್ದು, ನಿಯಮಿತ ಪ್ರಾಣಾಯಾಮ ಮತ್ತು ಧ್ಯಾನದಿಂದ ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ

ಸಪ್ತಮದಲ್ಲಿ ಶನಿಯು ದಾಂಪತ್ಯದಲ್ಲಿ ಅಥವಾ ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಪರೀಕ್ಷಿಸುತ್ತಾನೆ. ರವಿಯ ಹೋರೆಯಿಂದಾಗಿ ಸಂಗಾತಿಯೊಂದಿಗೆ ಸೌಮ್ಯವಾಗಿ ವರ್ತಿಸುವುದು ಒಳಿತು. ಗುರುವಿನ ಅಂಶಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸಲಿವೆ. ಚಂದ್ರನ ದ್ರೇಕ್ಕಾಣವು ಹೊಸ ವ್ಯಾಪಾರ ಒಪ್ಪಂದಗಳಿಗೆ ಪ್ರೇರಣೆ ನೀಡಲಿದ್ದು, ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.

ತುಲಾ ರಾಶಿ

​ಷ ಶನಿಯು ಶತ್ರುನಾಶ ಮತ್ತು ಕೋರ್ಟ್ ಕಲಾಪಗಳಲ್ಲಿ ಜಯ ತರಲಿದ್ದಾನೆ. ರವಿಯ ಹೋರೆಯು ಉದ್ಯೋಗದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಲು ಶಕ್ತಿ ನೀಡುತ್ತದೆ. ಗುರುವಿನ ತ್ರಿಂಶಾಂಶವು ಸಾಲಬಾಧೆಯಿಂದ ಮುಕ್ತಿ ನೀಡಲಿದ್ದು, ಆರೋಗ್ಯ ಸುಧಾರಿಸಲಿದೆ. ಚಂದ್ರನ ದ್ರೇಕ್ಕಾಣವು ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ತುಂಬಲಿದ್ದು, ಸಣ್ಣ ಪ್ರವಾಸಗಳು ಲಾಭದಾಯಕವಾಗಲಿವೆ.

​ವೃಶ್ಚಿಕ ರಾಶಿ

​ಪಂಚಮ ಶನಿಯು ಸಂತಾನ ಮತ್ತು ಪ್ರೇಮವಿಷಯಗಳಲ್ಲಿ ವಿಳಂಬ ತರಬಹುದು. ರವಿಯ ಹೋರೆಯು ನಿಮ್ಮಲ್ಲಿ ನಾಯಕತ್ವದ ಗುಣವನ್ನು ಹೆಚ್ಚಿಸುತ್ತದೆ. ಗುರುವಿನ ದ್ವಾದಶಾಂಶವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅಪಾರ ಯಶಸ್ಸನ್ನು ನೀಡಲಿದೆ. ಚಂದ್ರನ ದ್ರೇಕ್ಕಾಣವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತದೆ.

ಧನು ರಾಶಿ

ಚತುರ್ಥ ರಾಶಿಯಲ್ಲಿ ಶನಿಯು ಅರ್ಧಾಷ್ಟಮ ಸ್ಥಿತಿಯಲ್ಲಿದ್ದು, ತಾಯಿಯ ಆರೋಗ್ಯ ಮತ್ತು ಆಸ್ತಿ ಖರೀದಿ ವಿಷಯದಲ್ಲಿ ವಿಳಂಬ ತರಬಹುದು. ರವಿಯ ಹೋರೆಯು ಉದ್ಯೋಗದಲ್ಲಿ ವರ್ಗಾವಣೆಯನ್ನು ಸೂಚಿಸುತ್ತದೆ. ಗುರುವಿನ ತ್ರಿಂಶಾಂಶವು ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಲಿದೆ. ಚಂದ್ರನ ದ್ರೇಕ್ಕಾಣವು ಆಂತರಿಕ ಶಾಂತಿ ಮತ್ತು ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಡುತ್ತದೆ.

ಮಕರ ರಾಶಿ

ಮೂರನೇ ಶನಿಯು ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ದ್ವಿಗುಣಗೊಳಿಸುತ್ತಾನೆ. ರವಿಯ ಹೋರೆಯು ಸರ್ಕಾರದಿಂದ ಅಥವಾ ಉನ್ನತಾಧಿಕಾರಿಗಳಿಂದ ಪ್ರಶಂಸೆಯನ್ನು ತರಲಿದೆ. ಗುರುವಿನ ದ್ವಾದಶಾಂಶವು ಕಿರಿಯ ಸಹೋದರರೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಚಂದ್ರನ ದ್ರೇಕ್ಕಾಣವು ಸಣ್ಣ ಪ್ರಯಾಣಗಳ ಮೂಲಕ ಆರ್ಥಿಕ ಲಾಭ ಮತ್ತು ಹೊಸ ಸಂಪರ್ಕಗಳನ್ನು ತಂದುಕೊಡಲಿದೆ.

ಕುಂಭ ರಾಶಿ

​ದ್ವಿತೀಯ ರಾಶಿಯಲ್ಲಿ ಶನಿಯು ಸಾಡೇಸಾಥ್ ಶನಿಯ ಕೊನೆಯ ಹಂತದಲ್ಲಿದ್ದು, ಹಣಕಾಸಿನ ಶಿಸ್ತನ್ನು ಬೇಡುತ್ತಾನೆ. ರವಿಯ ಹೋರೆಯು ಮಾತಿನಲ್ಲಿ ಕಠಿಣತೆ ತರಬಹುದು, ಎಚ್ಚರವಿರಲಿ. ಆದರೆ ಗುರುವಿನ ಅಂಶಗಳು ಕುಟುಂಬದಲ್ಲಿ ಶಾಂತಿ ಮತ್ತು ಹಠಾತ್ ಧನಲಾಭವನ್ನು ನೀಡಲಿವೆ. ಚಂದ್ರನ ದ್ರೇಕ್ಕಾಣವು ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸಲು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಚಿಸುತ್ತದೆ.

ಇದನ್ನೂ ಓದಿ: ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ

​ಮೀನ ರಾಶಿ

ಈ ರಾಶಿಯಲ್ಲಿ ಶನಿ ಇರುವುದರಿಂದ ಜನ್ಮ ಶನಿಯ ಪ್ರಭಾವವಿದ್ದು, ದೈಹಿಕ ಆಯಾಸ ಹೆಚ್ಚಾಗಬಹುದು. ರವಿಯ ಹೋರೆಯು ನಿಮಗೆ ಸಮಾಜದಲ್ಲಿ ದೊಡ್ಡ ಜವಾಬ್ದಾರಿಗಳನ್ನು ತರಲಿದೆ. ಗುರುವಿನ ಸ್ವಕ್ಷೇತ್ರದ ಅಂಶಗಳು ನಿಮ್ಮ ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿವೆ. ಚಂದ್ರನ ದ್ರೇಕ್ಕಾಣವು ಮಾನಸಿಕವಾಗಿ ನಿಮ್ಮನ್ನು ಹೆಚ್ಚು ಪರಿಪಕ್ವ ಹಾಗೂ ಶಾಂತಚಿತ್ತರನ್ನಾಗಿ ಮಾಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಾಂಕ ಖರ್ಗೆ ಅವರೇ ಇದು ಸರಿಯಲ್ಲ: ‘ನಾನು ಬಂದಿರೋದು ಮಂತ್ರಾಲಯಕ್ಕೆ, ನೀವ್ಯಾಕೆ ತಡೀತಿದ್ದೀರಿ?’: ಪುನೀತ್ ಕೆರೆಹಳ್ಳಿ ಗರಂ – Kannada News

ರಾಯಚೂರು, ಜೂ.9: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿರುವ ‘ಹಿಂದೂ ಮಹೋತ್ಸವ’ ಸಮಾರಂಭಕ್ಕೆ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಆಗಮಿಸಬೇಕಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರಿಗೆ ರಾಯಚೂರು ಜಿಲ್ಲಾ ಪೊಲೀಸರು ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದಾರೆ. ಅಷ್ಟೇ ಅಲ್ಲದೆ, ಮಂತ್ರಾಲಯಕ್ಕೂ ಬಂದಿದ್ದ ಪುನೀತ್ ಕೆರೆಹಳ್ಳಿ ಅವರನ್ನು ಅಲ್ಲೇ ತಡೆದು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಸಂಘಟನೆಯ ನೇತೃತ್ವದಲ್ಲಿ ಇಂದು ಬೃಹತ್ ಹಿಂದೂ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುನೀತ್ ಕೆರೆಹಳ್ಳಿ ಅವರು ಆಗಮಿಸುತ್ತಿದ್ದರು. ಆದರೆ, ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯು ಅವರಿಗೆ ರಾಯಚೂರು ಜಿಲ್ಲೆಗೆ ಆಗಮಿಸದಂತೆ ಖಡಕ್ ನಿರ್ಬಂಧ ವಿಧಿಸಿದೆ. ಮಂತ್ರಾಲಯದಲ್ಲಿ ತಮಗೆ ಪೊಲೀಸರು ತಡೆ ಒಡ್ಡಿ ನೋಟಿಸ್ ನೀಡಿದ ತಕ್ಷಣ ರಾಯಚೂರು ಪೊಲೀಸರ ನಡೆಗೆ ಪುನೀತ್ ಕೆರೆಹಳ್ಳಿ ತೀವ್ರವಾಗಿ ಗರಂ ಆಗಿದ್ದಾರೆ. “ನಾನು ಮಂತ್ರಾಲಯಕ್ಕೆ ದರ್ಶನಕ್ಕಾಗಿ ಬಂದಿದ್ದೇನೆ. ಇಲ್ಲಿಗೆ ಬಂದು ನನ್ನನ್ನು ತಡೆದು, ಕಾರ್ಯಕ್ರಮಕ್ಕೆ ಬರದಂತೆ ಕಾನೂನುಬಾಹಿರವಾಗಿ ನಿರ್ಬಂಧ ವಿಧಿಸುತ್ತಿದ್ದೀರಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಗೃಹ ಸಚಿವ ಪ್ರಿಯಾಂಕ ಖರ್ಗೆಗೂ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಸೀಟು ಕಳ್ಳತನ ಮಾಡಿದೆ; ರಾಜ್ಯಸಭೆ ನಾಮಪತ್ರ ರದ್ದಾಗಿದ್ದಕ್ಕೆ ಮೀನಾಕ್ಷಿ ನಟರಾಜನ್ ಆಕ್ರೋಶ – Kannada News

ಭೋಪಾಲ್, ಜೂನ್ 9: ಮಧ್ಯಪ್ರದೇಶದ 3 ರಾಜ್ಯಸಭಾ ಸ್ಥಾನಗಳ ಪೈಕಿ ಒಂದಕ್ಕೆ ಸಲ್ಲಿಕೆಯಾಗಿದ್ದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ ಕಾನೂನು ಪ್ರಕರಣವೊಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ವಜಾಗೊಳಿಸಲಾಗಿದೆ. ಈ ಕಾರಣದಿಂದಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಮಪತ್ರ ತಿರಸ್ಕಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನಾಕ್ಷಿ ನಟರಾಜನ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಆಡಳಿತಾರೂಢ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ಅವರ ಸಂಚು ನಮಗೆ ಅರ್ಥವಾಗಿತ್ತು. ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಹತ್ತಿಕ್ಕುವ ರಾಜಕಾರಣ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಏಕಪಕ್ಷೀಯ ವ್ಯವಸ್ಥೆ ಮತ್ತು ಸರ್ವಾಧಿಕಾರವನ್ನು ಹೇರುವ ಪ್ರಯತ್ನವಾಗಿದೆ. ಇದು ಪ್ರಜಾಪ್ರಭುತ್ವದ ಹಗಲು ದರೋಡೆಯಾಗಿದೆ” ಎಂದು ಟೀಕಿಸಿದ್ದಾರೆ.

“ಇದು ಒಗ್ಗಟ್ಟಿನಿಂದ ಕೂಡಿದ ಮನೆ ಎಂದು ಅವರಿಗೆ ತಿಳಿದಾಗ, ಕಾನೂನುಬದ್ಧವಾಗಿ ಪರಿಗಣನೆಗೆ ಬಾರದ ನ್ಯಾಯಾಲಯದ ನೋಟಿಸ್ ಅನ್ನು ನೆಪವಾಗಿಟ್ಟುಕೊಂಡು ನಮ್ಮ ನಾಮಪತ್ರವನ್ನು ರದ್ದು ಮಾಡಿದರು. ನಮ್ಮ ಇಬ್ಬರೂ ವಕೀಲರು ಮಂಡಿಸಿದ ವಾದಗಳನ್ನು ಆಲಿಸದೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಚುನಾವಣಾ ದರೋಡೆಯನ್ನು ನಾವು ಕಾನೂನಾತ್ಮಕವಾಗಿ ಪ್ರಶ್ನಿಸುತ್ತೇವೆ.” ಎಂದು ಮೀನಾಕ್ಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು: 5,445ಕ್ಕೆ ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ – Kannada News

ಬೆಂಗಳೂರು, (ಜೂನ್ 09): ರಾಜಧಾನಿ ಬೆಂಗಳೂರಿನಲ್ಲಿ ಕಸದ (bengaluru garbage) ಸಮಸ್ಯೆ ಮತ್ತೆ ತಲೆದೂರಿದೆ. ನಗರದ ಹಲವೆಡೆ ರಸ್ತೆಯುದ್ಧಕ್ಕೂ ಕಸದ ರಾಶಿಯೇ ಕಾಣಿಸುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ವಿಲೇವಾರಿಯಾಗದ ಕಸ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳುಗಳಿಂದ ಕಸ ಸಾಗಿಸದ ಕಾರಣ, ತ್ಯಾಜ್ಯ ರಸ್ತೆ ಮಧ್ಯಕ್ಕೆ ಬಂದು ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು
  • ಎರಡು ತಿಂಗಳು ಕಳೆದ್ರು ಕಸ ತಗೆಯದೆ ನಿರ್ಲಕ್ಷತೋರುತಿರೋ GBA
  • 5,445ಕ್ಕೆ ಏರಿಕೆಯಾದ ಕಸದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ಇನ್ನು ಅಚ್ಚರಿಯ ವಿಷಯ ಅಂದ್ರೆ, ಸ್ವಚ್ಛತೆ ಕಾಪಾಡುವುದಕ್ಕಾಗಿ GBA ಕಡೆಯಿಂದ ಮಾರ್ಷಲ್ ಗಳನ್ನು ನಿರ್ಮಿಸದ್ದಾರೆ. ಅದ್ರೆ ಮಾರ್ಷಲ್ ಗಳು ಇದರ ಬಗ್ಗೆ ಗಮನವನ್ನು ಅರಿಸುತ್ತಿಲ್ಲ.ಇಡೀ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ರಸ್ತೆಯಲ್ಲೇ ಬೇಕಾಬಿಟ್ಟಿ ಕಸವನ್ನು ಎಸೆದು ಹೋಗುತ್ತಿದ್ದಾರೆ.

ಇದನ್ನೂ ಓದಿ: Bengaluru Air Quality: ಬೆಂಗಳೂರಿನಲ್ಲಿ ಗಣನೀಯವಾಗಿ ಸುಧಾರಿಸಿದ ಗಾಳಿಯ ಗುಣಮಟ್ಟ

ಇನ್ನು ಕಳೆದ ಎರಡು ತಿಂಗಳಿನಿಂದ ಟಿಪ್ಪರ್‌ಗಳು ಸರಿಯಾಗಿ ಬರ್ತಿಲ್ಲ. ಮನೆಯಲ್ಲೇ ಕಸದ ರಾಶಿ ಬೀಳ್ತಿದೆ. ಹಸಿ ಕಸದ ವಾಸನೆಯಿಂದ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಅಧಿಕಾರಿಗಳು ಇದನ್ನ ಅರ್ಥ ಮಾಡ್ಕೋಬೇಕು ಸರಿಯಾಗಿ ಕಸದ ಆಟೋಗಳು ಮನೆ ಬಳಿ ಬರ್ತಿಲ್ಲ. ಇದರಿಂದ ಜನರು ರಸ್ತೆಯಲ್ಲೇ ಕಸವನ್ನು ಎಸೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

‘ಕಸಾ ಪೋರ್ಟಲ್’ ನೀಡಿರುವ ಅಂಕಿಅಂಶಗಳ ಪ್ರಕಾರ, ಒಂದು ತಿಂಗಳ ಹಿಂದೆ 3,200 ರಷ್ಟಿದ್ದ ಸಕ್ರಿಯ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಈಗ ಬರೋಬ್ಬರಿ 5,445 ಕ್ಕೆ ಏರಿಕೆಯಾಗಿದೆ. ಇದರಿಂದ ಉದ್ಯಾನ ನಗರಿ ಈಗ ಕಸದ ನಗರಿಯಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ.

ಕಸದ ಸಮಸ್ಯೆಗೆ ಪ್ರಮುಖ ಕಾರಣಗಳೇನು?

ಕಳೆದ 13 ವರ್ಷಗಳಿಂದ ಕಸ ಸಂಗ್ರಹಣೆ ಟೆಂಡರ್‌ಗಳನ್ನು ಅಂತಿಮಗೊಳಿಸದಿರುವುದು, ಟಿಪ್ಪರ್‌ ಮತ್ತು ಸಿಬ್ಬಂದಿಯ ಕೊರತೆ, ಸಿಬ್ಬಂದಿಯ ಅನಿಯಮಿತ ಲಭ್ಯತೆ, ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ಕಸ ರವಾನಿಸುವ ವಾಹನಗಳ ರಿಪೇರಿಯಿಂದಾಗಿ ನಗರದಲ್ಲಿ ಕಸ ಸಂಗ್ರಹಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸನ್ನಿ ಡಿಯೋಲ್, ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಚಿತ್ರದ ಶೀರ್ಷಿಕೆ ಬದಲು; ಹೊಸ ಟೈಟಲ್ ಏನು? – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಲಾಹೋರ್ 1947’ (Lahore 1947) ಚಿತ್ರ ಕೂಡ ಇದೆ. ಆದರೆ ಈ ಸಿನಿಮಾದಲ್ಲಿ ಈಗ ದೊಡ್ಡ ಬದಲಾವಣೆಗೆ ಆಗಿದೆ. ನಟ ಸನ್ನಿ ಡಿಯೋಲ್ (Sunny Deol) ಮತ್ತು ನಟಿ ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಹೆಸರನ್ನೇ ಅಧಿಕೃತವಾಗಿ ಬದಲಾಯಿಸಲಾಗಿದೆ. ಹೊಸ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿದೆ. ‘ಲಾಹೋರ್ 1947’ ಬದಲು ಈಗ ‘ಬಂಟ್ವಾರಾ 1947’ (Batwara 1947) ಎಂದು ಮರುನಾಮಕರಣ ಮಾಡಲಾಗಿದೆ.

ಮಂಗಳವಾರ (ಜೂನ್ 9) ಚಿತ್ರತಂಡವು ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹೊಸ ಶೀರ್ಷಿಕೆ ಹಾಗೂ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಟ, ನಿರ್ಮಾಪಕ ಆಮಿರ್ ಖಾನ್ ಅವರು ಬಂಡವಾಳ ಹೂಡಿದ್ದಾರೆ.

ನಟ ಸನ್ನಿ ಡಿಯೋಲ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಬಂಟ್ವಾರಾ 1947’ ಚಿತ್ರದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ದ್ವೇಷ ಮತ್ತು ಭಯದ ಸಮಯದಲ್ಲಿ, ಅವನು ಧೈರ್ಯವನ್ನು ಆರಿಸಿಕೊಂಡ. 2026ರ ಆಗಸ್ಟ್ 14ರಿಂದ ಚಿತ್ರಮಂದಿರಗಳಲ್ಲಿ ಬಂಟ್ವಾರಾ 1947 ಸಿನಿಮಾ ವೀಕ್ಷಿಸಿ’ ಎಂದು ಈ ಪೋಸ್ಟ್​ಗೆ ಅವರು ಕ್ಯಾಪ್ಷನ್ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿದ್ದ ಭಯ, ಅನಿಶ್ಚಿತತೆ ಮತ್ತು ಹಿಂಸಾಚಾರದ ಕರಾಳ ದಿನಗಳನ್ನು ಈ ಪೋಸ್ಟರ್ ನೆನಪಿಸುವಂತಿದೆ. ದಟ್ಟ ಹೊಗೆ, ಜ್ವಾಲೆ ಮತ್ತು ಗದ್ದಲದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಪೋಸ್ಟರ್ ನೋಡಿದರೆ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟು ಆಗುತ್ತದೆ. ಸೆಪಿಯಾ ಟೋನ್‌ನಲ್ಲಿರುವ ಈ ಪೋಸ್ಟರ್‌ನಲ್ಲಿ ಸನ್ನಿ ಡಿಯೋಲ್ ಮತ್ತು ಶಬಾನಾ ಅಜ್ಮಿ ವಿಭಜನೆಯಿಂದ ದೂರಾಗುತ್ತಿರುವ ದೃಶ್ಯವಿದೆ. ಮತ್ತೊಂದು ದೃಶ್ಯದಲ್ಲಿ ಸನ್ನಿ ಅವರು ಕೈಯಲ್ಲಿ ಉರಿಯುತ್ತಿರುವ ಪಂಜನ್ನು ಹಿಡಿದು ನಿಂತಿದ್ದರೆ, ಅವರ ಹಿಂದೆ ಭಯಭೀತರಾಗಿರುವ ಪ್ರೀತಿ ಜಿಂಟಾ ಹಾಗೂ ಆತಂಕದಿಂದ ನೋಡುತ್ತಿರುವ ಕರಣ್ ಡಿಯೋಲ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್​? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್​ ನ್ಯೂಸ್​

‘ಬಾಲಿವುಡ್ ಹಂಗಾಮಾ’ ವರದಿಯ ಪ್ರಕಾರ, ‘ಬಂಟ್ವಾರಾ’ ಎಂಬ ಶೀರ್ಷಿಕೆಯ ಹಕ್ಕುಗಳು ಈ ಹಿಂದೆ 1989ರಲ್ಲಿ ಅದೇ ಹೆಸರಿನ ಚಿತ್ರವನ್ನು ನಿರ್ಮಿಸಿದ್ದ ದಿವಂಗತ ನಿರ್ಮಾಪಕ ಸಲೀಂ ಅಖ್ತರ್ ಅವರ ಕುಟುಂಬದ ಬಳಿ ಇತ್ತು. ಆಮಿರ್ ಖಾನ್ ಅವರು ಖುದ್ದಾಗಿ ಆ ಕುಟುಂಬವನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಈ ಶೀರ್ಷಿಕೆಯ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ – Kannada News

ನವದೆಹಲಿ, ಜೂನ್ 9: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಆರ್ಥಿಕ ಮತ್ತು ರಾಜಕೀಯ ಕುಂದುಕೊರತೆಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಮುಖ ನಾಗರಿಕ ಸಮಾಜದ ಒಕ್ಕೂಟವಾದ ‘ಜಾಯಿಂಟ್ ಅವಮಿ ಆಕ್ಷನ್ ಕಮಿಟಿ’ಯನ್ನು (JAAC) ಅಧಿಕಾರಿಗಳು ನಿಷೇಧಿಸಿದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ತೀವ್ರ ಘರ್ಷಣೆಯಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಗೆ ಪಾಕಿಸ್ತಾನವೇ ನೇರ ಹೊಣೆ ಎಂದು ಆರೋಪಿಸಿದೆ. ಹಾಗೇ, ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಪಾಕಿಸ್ತಾನ ಮಾಡುತ್ತಿರುವ ದುಷ್ಕೃತ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನ ದೇಶವನ್ನು ಹೊಣೆಗಾರರನ್ನಾಗಿ ಮಾಡಲಿದೆ ಎಂದು ನಾವು ನಂಬುತ್ತೇವೆ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಈ ಸಂದರ್ಭದಲ್ಲಿ ಪಾಕಿಸ್ತಾನದಿಂದ ವ್ಯವಸ್ಥಿತವಾಗಿ ಹರಡಲಾಗುತ್ತಿರುವ ಸುಳ್ಳು ಸುದ್ದಿ ಮತ್ತು ವೀಡಿಯೊಗಳ ಸರಣಿಯನ್ನು ನಾವು ಗಮನಿಸುತ್ತಿದ್ದೇವೆ. ಇದು ತನ್ನದೇ ಆದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನ ಮಾಡುತ್ತಿರುವ ಹತಾಶ ಪ್ರಯತ್ನವಾಗಿದೆ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಾರತದ ನಕ್ಷೆಯಲ್ಲಿ ಪಿಒಕೆ ಸೇರಿಸಿದ ಅಮೆರಿಕ; ಪಾಕಿಸ್ತಾನಕ್ಕೆ ಬಿಸಿ ತುಪ್ಪವಾದ ಟ್ರಂಪ್

ಪಿಒಕೆಯಲ್ಲಿ ನಡೆಯುತ್ತಿರುವ ಪೊಲೀಸ್ ದಬ್ಬಾಳಿಕೆಯ ಬಗ್ಗೆ ಮಾತನಾಡಿದ ರಣಧೀರ್ ಜೈಸ್ವಾಲ್, “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಪೊಲೀಸ್ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವರದಿಗಳು ಬಂದಿವೆ. ಇದರಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ದುಷ್ಕೃತ್ಯಗಳು ಮತ್ತು ದೌರ್ಜನ್ಯಗಳ ವಿರುದ್ಧ ಅದನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ.

“ಪಾಕಿಸ್ತಾನ ಸರ್ಕಾರವು ರಾವಲಕೋಟ್‌ನಲ್ಲಿ ನಮ್ಮ ಜನರ ಮಾರಣಹೋಮವನ್ನು ಪ್ರಾರಂಭಿಸಿದೆ” ಎಂದು ಜೆಎಎಸಿ (JAAC) ನಾಯಕ ಶೌಕತ್ ನವಾಜ್ ಮಿರ್ ಎಕ್ಸ್ (ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ. ಇಂದು ಸಂಪೂರ್ಣ ಲಾಕ್‌ಡೌನ್ ಯಶಸ್ವಿಗೊಳಿಸಲು ತಮ್ಮ ಗುಂಪು ಒಗ್ಗಟ್ಟಾಗಿರಲಿದೆ ಎಂದು ಅವರು ಪ್ರತಿಜ್ಞೆ ಮಾಡಿದ್ದರು.

ಇದನ್ನೂ ಓದಿ: ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ; 30 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

ರಾವಲಕೋಟ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಭೀಕರ ದಮನಕಾಂಡದ ನಂತರವೂ ಉದ್ವಿಗ್ನತೆ ಮುಂದುವರಿದಿದ್ದು, ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನವು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ಭಾರತ ಇಂದು ಆರೋಪಿಸಿದೆ.

ಇತ್ತೀಚಿನ ಪ್ರತಿಭಟನೆಗಳ ವೇಳೆ ಪಾಕಿಸ್ತಾನಿ ಪಡೆಗಳು ಜಾಯಿಂಟ್ ಅವಮಿ ಆಕ್ಷನ್ ಕಮಿಟಿ (JAAC) ಗೆ ಸೇರಿದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, 30 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೆಎಎಸಿ ಕಾರ್ಯಕರ್ತರು ಕಿರಿದಾದ ಗಲ್ಲಿಗಳಿಂದ ಬಂದೂಕುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿ “ಗೆರಿಲ್ಲಾ ಮಾದರಿ” ದಾಳಿ ನಡೆಸಿದ್ದರಿಂದ ತಾವು ಈ ಕ್ರಮ ಕೈಗೊಂಡಿರುವುದಾಗಿ ಪಾಕಿಸ್ತಾನಿ ಪಡೆಗಳು ಸಮರ್ಥಿಸಿಕೊಂಡಿವೆ.

ಪಾಕಿಸ್ತಾನ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರೂ, ಪ್ರತಿಭಟನೆಗಳು ಮೀರ್‌ಪುರ, ಮುಜಾಫರಾಬಾದ್, ಗಿಲ್ಗಿಟ್-ಬಾಲ್ಟಿಸ್ತಾನ್, ದಡಿಯಾಲ್, ರಾವಲಕೋಟ್, ಸುಧ್ನೋತಿ ಮತ್ತು ತಟ್ಟಾಪಾನಿ ಭಾಗಗಳಿಗೆ ವ್ಯಾಪಿಸಿವೆ. ಈ ಪ್ರತಿಭಟನೆಯ ಕಿಚ್ಚು ಬ್ರಿಟನ್ ವರೆಗೂ ತಲುಪಿದ್ದು, ಅಲ್ಲಿನ ಕಾಶ್ಮೀರಿ ವಲಸಿಗರು ಲಂಡನ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಹೊರಗೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. 30 ಬ್ರಿಟಿಷ್ ಸಂಸದರು ಬ್ರಿಟನ್ ಸರ್ಕಾರಕ್ಕೆ ಪತ್ರ ಬರೆದಿದ್ದು, “ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಈ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನಕ್ಕೆ ಪ್ರೋತ್ಸಾಹ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಬುದ್ಧಿವಂತ ಮಹಿಳೆ ಮಾತ್ರ ಈ ವಿಶೇಷ ಗುಣಗಳನ್ನು ಹೊಂದಿರುವುದಂತೆ – Kannada News

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ಶ್ರೀಮಂತಿಕೆ, ಯಶಸ್ಸು, ಬಡತನ, ದಾಂಪತ್ಯ ಜೀವನ, ಹಿತಶತ್ರುಗಳು, ಸ್ನೇಹಿತರು ಹೀಗೆ ನಮ್ಮ ಜೀವನದ ಪ್ರತಿಯೊಂದು ವಿಚಾರದ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಮಹಿಳೆಯರ ಜೀವನಕ್ಕೂ ಸಂಬಂಧಿಸಿದ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಬುದ್ಧಿವಂತ ಮಹಿಳೆಯ ಲಕ್ಷಣಗಳೇನು, ಆಕೆ ಯಾವೆಲ್ಲಾ ಗುಣಗಳನ್ನು ಹೊಂದಿರುತ್ತಾಳೆ ಎಂಬುದನ್ನು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಬುದ್ಧಿವಂತ ಮಹಿಳೆಯ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಬುದ್ಧಿವಂತ ಮಹಿಳೆಯ ಲಕ್ಷಣಗಳೇನು?

ಸ್ವತಂತ್ರ ಚಿಂತನೆ: ಬುದ್ಧಿವಂತ, ಬಲಿಷ್ಠ ಮಹಿಳೆ ತನ್ನದೇ ಆದ ಆಲೋಚನೆಗಳನ್ನು ರೂಪಿಸಿಕೊಳ್ಳುತ್ತಾಳೆ. ಅವಳು ಇತರರ ಅಭಿಪ್ರಾಯಗಳನ್ನು ಕೇಳುತ್ತಾಳೆ, ಆದರೆ ಅವಳು ತನ್ನದೇ ತೀರ್ಪಿನ ಆಧಾರದ ಮೇಲೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ.

ಇತರರ ಮಿತಿಗಳನ್ನು ಅರ್ಥಮಾಡಿಕೊಳ್ಳುವುದು: ಬುದ್ಧಿವಂತ ಮಹಿಳೆಗೆ ಎಲ್ಲಿ ಹೇಗಿರಬೇಕು ಎಂಬುದು ತಿಳಿದಿರುತ್ತದೆ. ಆಕೆ ಇತರರ ಮಿತಿಗಳನ್ನು ಅರ್ಥಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇತರರ ವಿಚಾರದಲ್ಲಿ ಹೆಚ್ಚು ಮೂಗು ತುರಿಸುವುದಿಲ್ಲ.

ಭಾವನೆಗಳನ್ನು ನಿಯಂತ್ರಿಸುವುದು: ಬುದ್ಧಿವಂತ ಮಹಿಳೆ ಯಾವತ್ತೂ ಅತಿಕೇರದ ವರ್ತನೆಯನ್ನು ತೋರುವುದಿಲ್ಲ, ಆಕೆಗೆ ತನ್ನ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಆಕೆ ಎಲ್ಲಾ ಸಂದರ್ಭಗಳನ್ನು ಸಹ ಶಾಂತವಾಗಿ ನಿಭಾಯಿಸುತ್ತಾಳೆ.

ಚಿಂತನಶೀಲ ಮನಸ್ಥಿತಿ: ನೀತಿವಂತಿಕೆಯ ಮಾರ್ಗವನ್ನು ಅನುಸರಿಸುವ ಮತ್ತು ತನ್ನ ಮೌಲ್ಯಗಳನ್ನು ಗೌರವಿಸುವ ಮಹಿಳೆ ಬುದ್ಧಿವಂತಳಾಗಿರುತ್ತಾರೆ. ಜೊತೆಗೆ ಕಷ್ಟದ ಸಮಯದಲ್ಲೂ ವಿಚಲಿತರಾಗದೆ ಮತ್ತು ಸಂದರ್ಭಗಳನ್ನು ಚಿಂತನಶೀಲವಾಗಿ ನಿಭಾಯಿಸುವ ಮಹಿಳೆ ಕೂಡ ಬುದ್ಧಿವಂತ ಮಹಿಳೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಭವಿಷ್ಯದ ಬಗ್ಗೆ ಯೋಚಿಸುವ ಮಹಿಳೆ: ಮನೆಯ ಸಂಪನ್ಮೂಲಗಳು ಮತ್ತು ಹಣಕಾಸು ವಿಚಾರಗಳನ್ನು ಸಮರ್ಥವಾಗಿ ನಿರ್ವಹಿಸುವ, ವ್ಯರ್ಥ ಖರ್ಚುಗಳನ್ನು ತಪ್ಪಿಸುವ ಮತ್ತು ಭವಿಷ್ಯಕ್ಕಾಗಿ ಉಳಿತಾಯ ಮಾಡುವ ಮಹಿಳೆ ತುಂಬಾನೇ ಬುದ್ಧಿವಂತೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಇದನ್ನೂ ಓದಿ: ಅಭ್ಯಾಸಗಳಿದ್ದರೆ ನೀವು ಜೀವನಪರ್ಯಂತ ಬಡವರಾಗಿಯೇ ಉಳಿಯುತ್ತೀರಿ ಜೋಕೆ!

ಸಮಯದ ಮಹತ್ವ ತಿಳಿದಿರುವಾಕೆ: ಸಮಯ ಎನ್ನುವಂತಹದ್ದು ಅತ್ಯಮೂಲ್ಯವಾದದ್ದು, ಅದರ ಮಹತ್ವವನ್ನು ತಿಳಿದಿರುವ ಮಹಿಳೆಯೇ ನಿಜವಾದ ಬುದ್ಧಿವಂತೆ ಎನ್ನುತ್ತಾರೆ ಚಾಣಕ್ಯ. ಸಮಯದ ಮಹತ್ವ ತಿಳಿದಿರುವವರು ನಿಷ್ಪ್ರಯೋಜಕ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದಿಲ್ಲ ಮತ್ತು ತನ್ನ ಅಭಿವೃದ್ಧಿಯತ್ತ ಗಮನಹರಿಸುತ್ತಾರೆ.

ಮನೆಯನ್ನು ಸಮರ್ಥವಾಗಿ ನಿಭಾಸುವ ಕಲೆ: ಒಳ್ಳೆಯ ನಡವಳಿಕೆಯೊಂದಿಗೆ ಮನೆ ಮತ್ತು ಮನೆಯವರನ್ನು ಅಚ್ಚುಕಟ್ಟಾಗಿ ನಿಭಾಯಿಸುವ, ಮನೆಯ ಸುಖ, ಶಾಂತಿಯನ್ನು ಕಾಪಾಡಿಕೊಳ್ಳುವ ಕಲೆಯನ್ನು ತಿಳಿದಿರುವ ಮಹಿಳೆ ಕೂಡ ಬುದ್ಧಿವಂತೆ ಎನ್ನುತ್ತಾರೆ ಚಾಣಕ್ಯ.

ಗುಣಗಳು ಯಾವುದೇ ಮಹಿಳೆಯನ್ನು ಬುದ್ಧಿವಂತಳನ್ನಾಗಿ ಮಾಡುವುದು ಮಾತ್ರವಲ್ಲದೆ, ಆಕೆಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ, ಸಮಾಜದಲ್ಲಿ ಆಕೆಯ ಗೌರವ, ಘನತೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ – Kannada News

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಪದೇಪದೇ ಮೈಗ್ರೇನ್ (Migraine) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ತಲೆನೋವು ಎಂದು ಇದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದೀಗ ಹೊಸ ಅಧ್ಯಯನವೊಂದು ಮೈಗ್ರೇನ್ ಮತ್ತು ಹೃದಯದ ಆರೋಗ್ಯದ ನಡುವೆ ಸಂಬಂಧ ಇರಬಹುದೆಂಬ ಸೂಚನೆ ನೀಡಿದೆ. ಹೌದು, ಸಾಮಾನ್ಯವಾಗಿ ಮೈಗ್ರೇನ್ ಅನ್ನು ತಲೆನೋವಿನ ಸಮಸ್ಯೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಇದರ ಪರಿಣಾಮ ಕೇವಲ ತಲೆನೋವಿನಲ್ಲೇ ಸೀಮಿತವಾಗಿರುವುದಿಲ್ಲ. ಮೈಗ್ರೇನ್ ಮತ್ತು ದೇಹದ ಇತರ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವನ್ನು ತಿಳಿಯಲು ಹಲವು ಅಧ್ಯಯನಗಳು ನಡೆದಿವೆ. ಸ್ಪ್ರಿಂಗರ್ ನೇಚರ್ ಪ್ರಕಟಿಸಿರುವ ಅಧ್ಯಯನದ ಪ್ರಕಾರ, ಪದೇಪದೇ ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿರಬಹುದು ಎಂದು ಹೇಳಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮಾಹಿತಿ ಸ್ಟೋರಿಯಲ್ಲಿದೆ.

ಮೈಗ್ರೇನ್ ವೇಳೆ ತೀವ್ರ ತಲೆನೋವು, ವಾಂತಿ ಬರುವ ಭಾವನೆ, ಬೆಳಕು ಅಥವಾ ಶಬ್ದಕ್ಕೆ ಹೆಚ್ಚು ಕಿರಿಕಿರಿಯಾಗುವುದು. ಮತ್ತೆ ಕೆಲವರಲ್ಲಿ ಇದು ದಿನನಿತ್ಯದ ಜೀವನ ಮತ್ತು ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಜಿ ಈ ರೀತಿಯ ಲಕ್ಷಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆ ಸರಿಯಾಗಿ ಆರೈಕೆ ಮಾಡಿಕೊಳ್ಳುವುದು ಒಳ್ಳೆಯದು.

ಅಧ್ಯಯನ ಹೇಳುವುದೇನು?

ಅಧ್ಯಯನದಲ್ಲಿ ಸಂಶೋಧಕರು ಮೈಗ್ರೇನ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದಾರೆ. ಮೈಗ್ರೇನ್ ಇರುವವರಲ್ಲಿ ಕಾರ್ಡಿಯೋವಾಸ್ಕುಲರ್ ಡಿಸೀಸ್ (CVD), ಕೊರೊನರಿ ಹೃದಯರೋಗ ಮತ್ತು ಇಸ್ಕೆಮಿಕ್ ಸ್ಟ್ರೋಕ್ ಅಪಾಯ ಹೆಚ್ಚಿರುವುದು ಕಂಡುಬಂದಿದೆ. ವಿಶೇಷವಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಜೊತೆಗೆ ಧೂಮಪಾನ, ಒಬೆಸಿಟಿ, ಹೈ ಬ್ಲಡ್ ಪ್ರೆಶರ್ ಅಥವಾ ಇತರ ಹೃದಯ ಸಂಬಂಧಿ ಅಪಾಯಕಾರಕ ಅಂಶಗಳಿದ್ದರೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಹಸಿವಾದಾಗ ಸಿಕ್ಕಾಪಟ್ಟೆ ಕೋಪ ಬರೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ತಲೆನೋವು ಸಡನ್ ಆಗಿ ತುಂಬಾ ತೀವ್ರವಾಗುವುದು, ಮಾತಾಡಲು ತೊಂದರೆ, ದೇಹದ ಒಂದು ಭಾಗದಲ್ಲಿ ದುರ್ಬಲತೆ, ತಲೆ ಸುತ್ತುವುದು, ಕಣ್ಣು ಮಸುಕಾಗುವುದು ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮೈಗ್ರೇನ್ ದೈನಂದಿನ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದರೆ ಅಥವಾ ಔಷಧಿಗಳ ನಂತರವೂ ಸಮಸ್ಯೆ ಮುಂದುವರಿದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಮೈಗ್ರೇನ್ ನಿಯಂತ್ರಣಕ್ಕೆ ಏನು ಮಾಡಬೇಕು?

ಸಾಕಷ್ಟು ನಿದ್ರೆ, ನಿಯಮಿತ ಜೀವನಶೈಲಿ ಮತ್ತು ಒತ್ತಡ ನಿಯಂತ್ರಣ ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಮೈಗ್ರೇನ್ ಹೆಚ್ಚಿಸುವ ಕಾರಣಗಳನ್ನು ಗುರುತಿಸುವುದು ಕೂಡ ಮುಖ್ಯ. ಉದಾಹರಣೆಗೆ ತೀವ್ರ ಬೆಳಕು, ನಿದ್ರಾಹೀನತೆ ಅಥವಾ ಕೆಲವು ಆಹಾರ ಪದಾರ್ಥಗಳು ಸಮಸ್ಯೆಯನ್ನು ಹೆಚ್ಚಿಸಬಹುದು. ಪರ್ಯಾಯವಾಗಿ ಸಾಕಷ್ಟು ನೀರು ಕುಡಿಯುವುದು, ಸಮತೋಲನಯುತ ಆಹಾರ ಸೇವಿಸುವುದು ಮತ್ತು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ. ಸಮಸ್ಯೆ ಮುಂದುವರಿದರೆ ತಜ್ಞರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version