ನೆಲಮಂಗಲ ಬಳಿ ಭೀಕರ ಅಪಘಾತ: ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​

ನೆಲಮಂಗಲ ಬಳಿ ಭೀಕರ ಅಪಘಾತ: ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​

ನೆಲಮಂಗಲ, ಮಾರ್ಚ್​​ 17: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 30 ವರ್ಷದ ಗೃಹಿಣಿ ಲಕ್ಷ್ಮಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಯಾದಗಿರಿ ಮೂಲದ ಲಕ್ಷ್ಮಿ ಬೆಂಗಳೂರಿನ ಕಾಚೊಹಳ್ಳಿಯಲ್ಲಿ ವಾಸವಾಗಿದ್ದು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಸುಮಾರು 8:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಲಕ್ಷ್ಮಿ ಅವರು ತಮ್ಮ ಅನಾರೋಗ್ಯ ಪೀಡಿತ ಮಗನನ್ನು ಗೊಲ್ಲರಹಟ್ಟಿ ಬಳಿಯ ಆಸ್ಪತ್ರೆಗೆ ಕರೆದೊಯ್ದು ಮನೆಗೆ ಮರಳುತ್ತಿದ್ದರು. ಗೊಲ್ಲರಹಟ್ಟಿ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಇವರಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಈಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಬಿಎಂಟಿಸಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾರ್ಮುಜ್ ಜಲಸಂಧಿಯಿಂದ ಗುಜರಾತ್​ಗೆ ಬಂದ ಭಾರತದ ಎರಡನೇ ಎಲ್​ಪಿಜಿ ಟ್ಯಾಂಕರ್ ನಂದಾದೇವಿ

ನವದೆಹಲಿ, ಮಾರ್ಚ್ 17: ಹಾರ್ಮುಜ್ ಜಲಸಂಧಿಯಿಂದ ಎಲ್​ಪಿಜಿ ಗ್ಯಾಸ್ ಹೊತ್ತ ಎರಡನೇ ಹಡಗೊಂದು ಭಾರತವನ್ನು ತಲುಪಿದೆ. 45,000 ಮೆಟ್ರಿಕ್ ಟನ್ ಎಲ್​ಪಿಜಿ ಹೊಂದಿರುವ ನಂದಾದೇವಿ ಎನ್ನುವ ಹಡಗು ಇಂದು ಗುರುವಾರ ಗುಜರಾತ್​ನ ವಡಿನಾರ್ ಬಂದರನ್ನು ತಲುಪಿದೆ. ಮೂಲ ಯೋಜನೆ ಪ್ರಕಾರ ಈ ಹಡಗು ಕಾಂಡ್ಲಾ ಪೋರ್ಟ್ ತಲುಪಬೇಕಿತ್ತು. ಆದರೆ, ಕಾರಣಾಂತರದಿಂದ ವಡಿನಾರ್ ಕಡೆಗೆ ತಿರುಗಿಸಲಾಯಿತು.

ಇರಾನ್ ಯುದ್ಧ ಶುರುವಾದಾಗಿನಿಂದ ಹಾರ್ಮುಜ್ ಜಲಸಂಧಿಗೆ ತಡೆಯಾಗಿದೆ. ಆದರೆ, ಭಾರತ ನಡೆಸಿದ ಮಾತುಕತೆಯ ಫಲವಾಗಿ ಇರಾನ್ ದೇಶವು ಹಾರ್ಮುಜ್ ಜಲಸಂಧಿಯಿಂದ ಈವರೆಗೆ ಮೂರು ಭಾರತೀಯ ಟ್ಯಾಂಕರ್​ಗಳಿಗೆ ಸಾಗಲು ಅನುಮತಿಸಿದೆ. ಶಿವಾಲಿಕ್ ಎನ್ನುವ ಹಡಗು ನಿನ್ನೆ ಗುಜರಾತ್​ನ ಮುಂದ್ರಾ ಪೋರ್ಟ್ ತಲುಪಿದೆ. ಅದು ಸುಮಾರು 45,000 ಟನ್ ಎಲ್​ಪಿಜಿ ಗ್ಯಾಸ್ ಹೊತ್ತು ಬಂದಿದೆ. ಇವತ್ತು ನಂದಾದೇವಿ ಹಡಗು ಆಗಮಿಸಿದೆ. ಇಲ್ಲಿಗೆ ಎರಡು ಹಡಗುಗಳು ಭಾರತದ ತೀರವನ್ನು ತಲುಪಿದಂತಾಗಿದೆ. ಇನ್ನೊಂದು ಹಡಗು ಒಂದೆರಡು ದಿನದಲ್ಲಿ ತಲುಪುವ ನಿರೀಕ್ಷೆ ಇದೆ. ಜಗ್ ಲಾಡ್ಕಿ ಎನ್ನುವ ಈ ಹಡಗು ಕೂಡ ಮುಂದ್ರಾ ಪೋರ್ಟ್​ಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಹಾರ್ಮುಜ್ ಜಲಸಂಧಿಯಲ್ಲಿ ಇನ್ನೂ 22 ಭಾರತೀಯ ಹಡಗುಗಳು ಅನುಮತಿಗಾಗಿ ಕಾದು ನಿಂತಿವೆ. ಈ 22 ಹಡಗುಗಳಲ್ಲಿ 611 ಭಾರತೀಯ ನಾವಿಕರಿದ್ದಾರೆ ಎಂದು ಸರ್ಕಾರದ ದತ್ತಾಂಶ ಹೇಳುತ್ತಿದೆ. ಈಗ ಒಂದೊಂದೇ ಹಡಗನ್ನು ಹೊರತರಿಸಲು ಭಾರತ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಇರಾನ್​ನ ಮನವೊಲಿಸುವ ಪ್ರಯತ್ನಗಳಾಗುತ್ತಿವೆ.

ಎಲ್​ಪಿಜಿ ಬಿಕ್ಕಟ್ಟಿನಲ್ಲಿ ಭಾರತ

ಹಾರ್ಮುಜ್ ಜಲಸಂಧಿ ನಿರ್ಬಂಧಿತವಾಗಿರುವುದರಿಂದ ಜಾಗತಿಕವಾಗಿ ತೈಲ ಮತ್ತು ಅನಿಲಗಳ ಬೆಲೆ ಗಗನಕ್ಕೇರಿದೆ. ಎರಡೂ ಪೂರೈಕೆಗಳಿಗೆ ವ್ಯತ್ಯಯ ಆಗಿದೆ. ಭಾರತಕ್ಕೆ ಪೆಟ್ರೋಲ್, ಡೀಸಲ್​ಗಿಂತ ಎಲ್​ಪಿಜಿ ಬಿಕ್ಕಟ್ಟು ಹೆಚ್ಚು ತೀವ್ರತೆಯಲ್ಲಿದೆ. ಭಾರತ ಆಮದು ಮಾಡಿಕೊಳ್ಳುವ ಎಲ್​ಪಿಜಿಯಲ್ಲಿ ಬಹುತೇಕ ಭಾಗವು ಹಾರ್ಮುಜ್ ಜಲಸಂಧಿ ಮೂಲಕ ಸಾಗಣೆ ಆಗುತ್ತದೆ. ಹೀಗಾಗಿ, ಎಲ್​ಪಿಜಿ ಬಿಕ್ಕಟ್ಟು ಹೆಚ್ಚಾಗಿದೆ.

ಇದನ್ನೂ ನೋಡಿ: ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ ಎಲ್‌ಪಿಜಿ ಟ್ಯಾಂಕರ್

ಭಾರತವು ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ನೈಸರ್ಗಿಕ ಅನಿಲದಲ್ಲಿ ಅರ್ಧದಷ್ಟನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಉಳಿದ ಅರ್ಧವನ್ನು ಬೇರೆ ಬೇರೆ ಭಾಗಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಎಲ್​ಪಿಜಿ ಗ್ಯಾಸ್​ಗೆ ಗಲ್ಫ್ ಮೇಲೆ ಅವಲಂಬನೆ ಹೆಚ್ಚಿರುವುದು ಭಾರತಕ್ಕೆ ಸ್ವಲ್ಪ ಇಕ್ಕಟ್ಟಿನ ಸ್ಥಿತಿ ತಂದಿರುವುದು ಹೌದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ

ಪುನೀತ್ ರಾಜ್​​ಕುಮಾರ್ (Puneeth Rajkumar) ಅವರ 51ನೇ ಜಯಂತಿಯಂದು ಕುಟುಂಬ ಸದಸ್ಯರು ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್​ಕುಮಾರ್, ವಿನಯ್ ರಾಜ್​ಕುಮಾರ್, ಯುವ ರಾಜ್​ಕುಮಾರ್ ಇನ್ನೂ ಹಲವು ಕುಟುಂಬ ಸದಸ್ಯರು. ಅಪ್ಪು ಅವರ ಆಪ್ತರು ಇಂದು (ಮಾರ್ಚ್ 17) ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ವಿನಯ್ ರಾಜ್​ಕುಮಾರ್ ಮತ್ತು ಯುವ ರಾಜ್​ಕುಮಾರ್ ಅವರುಗಳು ಚಿಕ್ಕಪ್ಪ ಇದ್ದಾಗ ಆಚರಿಸುತ್ತಿದ್ದ ಅವರ ಹುಟ್ಟುಹಬ್ಬಗಳನ್ನು ನೆನಪು ಮಾಡಿಕೊಂಡರು. ಹೇಗೆ ಹಿಂದಿನ ರಾತ್ರಿಯಿಂದಲೇ ಪಾರ್ಟಿ ಆರಂಭವಾಗುತ್ತಿತ್ತು, ಅಪ್ಪು ಅವರನ್ನು ನೋಡಲು ಬರುತ್ತಿದ್ದ ಜನರು ಹೀಗೆ ಹಲವು ವಿಷಯಗಳ ಬಗ್ಗೆ ವಿನಯ್ ಮತ್ತು ಯುವ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡ್ರಂಕ್​​ ಆ್ಯಂಡ್​​ ಡ್ರೈವ್​​ ಮಾಡಿದವನಿಗೆ ಕೋರ್ಟ್​​ ಕೊಟ್ಟ ಶಿಕ್ಷೆ ಎಂತಹದ್ದು ನೋಡಿ

ಚಿಕ್ಕಮಗಳೂರು, ಮಾರ್ಚ್​​ 17: ಅದೆಷ್ಟೇ ಜಾಗೃತಿ ಕೆಲಸಗಳನ್ನು ಸಂಚಾರಿ ಪೊಲೀಸರು ಮಾಡಿದರೂ ಕೆಲ ವಾಹನ ಸವಾರರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ಚಾಲನೆ ಹಲವರ ಅಭ್ಯಾಸವಾಗಿಹೋಗಿದೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹೆಚ್ಚೆಂದರೆ ದಂಡ ಹಾಕಬಹುದು ಎಂಬ ಉಡಾಫೆಯ ಮನಸ್ಥಿತಿಗೆ ಜನ ತಲುಪುತ್ತಿದ್ದಾರೆ. ಆದರೆ ಚಿಕ್ಕಮಗಳೂರಿನಲ್ಲಿ ನಡೆದ ಪ್ರಕರಣವೊಂದು ಅಂತವರಿಗೆ ಪಾಠವಾಗುವಂತಿದೆ. ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಶಾಕ್​​ ಕೊಟ್ಟಿದ್ದು, ಟ್ರಾಫಿಕ್ ರೂಲ್ಸ್ ಇರುವ‌ ಬೋರ್ಡ್ ಹಿಡಿದು ನಿಲ್ಲುವಂತೆ ಆದೇಶ ಮಾಡಿದೆ.

ಹೌದು, ಕಡೂರು ತಾಲೂಕಿನ ಬಿಸಲೆಹಳ್ಳಿ ಗ್ರಾಮದ ರಂಜಿತ್ ಕುಮಾರ್ ವಿರುದ್ಧ ಮದ್ಯಪಾನ ಮಾಡಿ ಬೈಕ್​​ ಚಾಲನೆ ಮಾಡಿದ್ದ ಕೇಸ್​​ ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಕಡೂರು JMFC ಕೋರ್ಟ್ ನಿರೀಕ್ಷೆಗೂ ಮೀರಿದ ಆದೇಶ ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಟ್ರಾಫಿಕ್ ರೂಲ್ಸ್ ಇರುವ‌ ಬೋರ್ಡ್ ಹಿಡಿದು ರಂಜಿತ್ ಕುಮಾರ್ ರಸ್ತೆಯಲ್ಲಿ ನಿಲ್ಲಬೇಕು ಎಂದು ತಿಳಿಸಿದೆ. ಪ್ರಕರಣ ಸಂಬಂಧ ಆರೋಪಿ ರಂಜಿತ್​​ ಕುಮಾರ್​​ ಕೂಡ ವಿಚಾರಣೆ ವೇಳೆ ತನ್ನ ತಪ್ಪು ಒಪ್ಪೊಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸರ್ಕಾರದಿಂದಲೇ ಸಿಗಲಿದೆ ಉಚಿತ ನೀಟ್ ಕೋಚಿಂಗ್!

ಮರವಂಜಿ ಸರ್ಕಲ್​​/ ಮಲ್ಲೇಶ್ವರ ಸರ್ಕಲ್​​ನಲ್ಲಿ ಮಾರ್ಚ್​​ 17ರಂದು (ಇಂದು) ಬೆಳಿಗಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಟ್ರಾಫಿಕ್ ರೂಲ್ಸ್ ಇರುವ‌ ಬೋರ್ಡ್ ಹಿಡಿದು ರಂಜಿತ್​​ ನಿಲ್ಲಬೇಕು ಎಂದಿರುವ ಕೋರ್ಟ್​​, ಈತ ಕಮ್ಯುನಿಟಿ ಸೇವೆ ಮಾಡುತ್ತಿರುವುದನ್ನು ನೋಡಿಕೊಳ್ಳಲು ಓರ್ವ ಪೊಲೀಸ್​​ ಸಿಬ್ಬಂದಿ ನಿಯೋಜನೆಗೂ ಸೂಚಿಸಿದೆ. ಸಂಜೆ 5 ಗಂಟೆಯ ಬಳಿಕ ಕೋರ್ಟ್​​ ಸೂಚನೆಯನ್ನು ಆತ ಪಾಲಿಸಿದ್ದಾನೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆಯೂ ಸೂಚಿಸಿದೆ. ಕೋರ್ಟ್​​ ಆದೇಶದ ಹಿನ್ನೆಲೆ ಮರವಂಜಿ ಸರ್ಕಲ್​​ನಲ್ಲಿ ರಂಜಿತ್​​ ಬೋರ್ಡ್​​ ಹಿಡಿದು ನಿಂತಿದ್ದು, ಪೊಲೀಸ್​​ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳ ಮುಂಬಡ್ತಿ ಪರೀಕ್ಷೆ ಮುಂದೂಡಿಕೆ

ಹುಬ್ಬಳ್ಳಿ, ಮಾರ್ಚ್ 17: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸಿದ ಭಾರಿ ಪ್ರತಿಭಟನೆಗೆ ಮಣಿದ ರೈಲ್ವೆ ಇಲಾಖೆ, ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳಿಗಾಗಿ ಮಾರ್ಚ್ 17 ರಂದು ನಡೆಸಲಿದ್ದ ಮುಂಬಡ್ತಿ ಪರೀಕ್ಷೆಯನ್ನು ರದ್ದುಪಡಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿನ ಕೆಲವು ಅವ್ಯವಸ್ಥೆಗಳು ಮತ್ತು ಸ್ಥಳೀಯ ಭಾಷೆಗಳ ಕಡೆಗಣನೆ ಕುರಿತು ಕರವೇ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ತೀವ್ರ ಹೋರಾಟ ನಡೆಸಿದ್ದರು. ಈ ಹೋರಾಟದ ಪರಿಣಾಮವಾಗಿ, ರೈಲ್ವೆ ಇಲಾಖೆಯು ಮುಂಬಡ್ತಿ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿದೆ.

ಹಲವು ದಿನಗಳಿಂದ ಕರವೇ ಮುಖಂಡರು ಮತ್ತು ಸದಸ್ಯರು ರೈಲ್ವೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಈ ಮುಂಬಡ್ತಿ ಪರೀಕ್ಷೆಯು ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಕರವೇ ಹೋರಾಟದ ಒತ್ತಡ ಹೆಚ್ಚಿದ ನಂತರ, ರೈಲ್ವೆ ಇಲಾಖೆಯು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿತು. ಕರವೇ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಈ ಮಹತ್ವದ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ತಾತ್ಕಾಲಿಕವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಮುಂಬಡ್ತಿ ಪರೀಕ್ಷೆಗೆ ಸಂಬಂಧಿಸಿದ ಮುಂದಿನ ಕ್ರಮಗಳ ಬಗ್ಗೆ ರೈಲ್ವೆ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನದ 24 ಗಂಟೆಯೂ ಪ್ರದರ್ಶನ ಕಾಣಲಿದೆ ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ (Dhurandhar 2) ರಿಲೀಸ್ ಆಗೋಕೆ ಕೌಂಟ್​ಡೌನ್ ಶುರುವಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಡಿಸೆಂಬರ್ 18ಕ್ಕೆ ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಇದಕ್ಕೆ ಬುಕ್ಕಿಂಗ್ ಜೋರಾಗಿದೆ. ಹೀಗಿರುವಾಗಲೇ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆಯಲು ರೆಡಿ ಆಗಿದೆ. ಭಾರತದ ಕೆಲ ಭಾಗದಲ್ಲಿ ದಿನದ 24 ಗಂಟೆಯೂ ‘ಧುರಂಧರ್ 2’ಗೆ ಶೋ ನೀಡಲಾಗುತ್ತಿದೆ!

‘ಧುರಂಧರ್ 2’ ಸಿನಿಮಾದ ಅವಧಿ ಸರಿ ಸುಮಾರು ನಾಲ್ಕು ಗಂಟೆ ಇದೆ. ದಿನಕ್ಕೆ ಐದು ಶೋ ಮಾಡಬೇಕು ಎಂದರೆ 20 ಗಂಟೆ ಬೇಕಾಗುತ್ತದೆ. ಇನ್ನು, ಪ್ರತಿ ಶೋನಿಂದ ಶೋಗೆ ಅರ್ಧ ಗಂಟೆ ಗ್ಯಾಪ್ ಕೊಟ್ಟರೂ, ಎರಡೂವರೆ ಹೆಚ್ಚುವರಿಯಾಗಿ ಬೇಕಾಗುತ್ತದೆ. ಇನ್ನು, ಇಂಟರ್​ವಲ್ ಎಲ್ಲಾ ಸೇರಿದರೆ ದಿನದ 24 ಗಂಟೆ ಸಂಪೂರ್ಣವಾಗಿ ಬೇಕಾಗುತ್ತದೆ.

ಇನ್ನು, ಪ್ರತಿ ಶೋಗಳನ್ನು ಸ್ಟ್ರೆಚ್ ಮಾಡಬೇಕಾದ ಪರಿಸ್ಥಿತಿ ಥಿಯೇಟರ್​​ ಅವರಿಗೆ ಬಂದಿದೆ. ಕೆಲವು ಕಡೆಗಳಲ್ಲಿ ದಿನವಿಡೀ ‘ಧುರಂಧರ್ 2’ ಓಡಲಿದೆ. ಮುಂಬೈನ ಪಿವಿಆರ್ ಚಕಲಾ, ಮೂವಿ ಮ್ಯಾಕ್ಸ್ ಸಿಯೋನ್​ ಮೊದಲಾದ ಕಡೆಗಳಲ್ಲಿ ಮುಂಜಾನೆ 1.50ಕ್ಕೆ ಶೋ ಇಡಲಾಗಿದೆ. ಪುಣೆ ಹಾಗೂ ಅಹ್ಮದಾಬಾದ್​​​ನಲ್ಲೂ ಇದೇ ಸ್ಥಿತಿ ಇದೆ. ಅಡ್ವಾನ್ಸ್ ಬುಕಿಂಗ್​​ನಿಂದ ಚಿತ್ರದ 15 ಲಕ್ಷ ಟಿಕೆಟ್ ಮಾರಾಟ ಆಗಿದೆ ಎನ್ನಲಾಗಿದೆ.

ಕಳೆದ 30 ವರ್ಷಗಳಿಂದ ಮುಂಬೈನ ಮರಾಠ ಮಂದಿರದಲ್ಲಿ ದಿನ ನಿತ್ಯ ಬೆಳಿಗ್ಗೆ 11.30ಕ್ಕೆ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾ ಪ್ರದರ್ಶನ ಕಾಣುತ್ತಾ ಬರುತ್ತಿದೆ. ಆದರೆ, ‘ಧುರಂಧರ್ 2’ ಚಿತ್ರದ ಬೇಡಿಕೆ ಹಾಗೂ ರನ್​​ಟೈಮ್ ಕಾರಣಕ್ಕೆ ‘ಡಿಡಿಎಲ್​​ಜೆ’ ಚಿತ್ರಕ್ಕೆ ಬೆಳಿಗ್ಗೆ ಶೋ ನೀಡಲಾಗಿದೆ.

ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ನೂರು ಕೋಟಿ ಗಳಿಕೆ ದಾಟಿದ ‘ಧುರಂಧರ್ 2’

ಪೇಡ್ ಪ್ರೀಮಿಯರ್​​​ಗಳಿಂದ ‘ಧುರಂಧರ್ 2’ ಸಿನಿಮಾಗೆ 35 ಕೋಟಿ ರೂಪಾಯಿ ಹರಿದು ಬಂದಿದೆ. ಇದು ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಲಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಧುರಂಧರ್ 2, ಆರ್ ಮಾಧವನ್, ಅರ್ಜುನ್ ರಾಮ್​​ ಪಾಲ್​, ಸಂಜಯ್ ದತ್, ಸಾರಾ ಅರ್ಜುನ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಮೂಡಬಿದ್ರೆ ಇನ್ಸ್‌ಪೆಕ್ಟರ್?: ಸಂತ್ರಸ್ತೆ ಗಂಭೀರ ಆರೋಪ

ಮಂಗಳೂರು, ಮಾರ್ಚ್​​ 17: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್‌ ವಿರುದ್ಧ ಸಂತ್ರಸ್ತೆಯೊಬ್ಬರು ಗಂಭೀರ  ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪತಿಯ ಮೇಲೆ ರೌಡಿಶೀಟರ್ ಹಾಕಿ ಬಂಧಿಸುವ ಬೆದರಿಕೆ ಹಾಕಿ ಲಂಚ ಹಾಗೂ ಲೈಂಗಿಕ ಕಿರುಕುಳಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿರುವ ಮಹಿಳೆ, ಇನ್ಸ್‌ಪೆಕ್ಟರ್ ಸಂದೇಶ್‌ ಅವರು ತಮ್ಮ ಹುದ್ದೆಗೆ ಬರಲು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಲಂಚ ನೀಡಿದ್ದಾರೆಂದು ಹೇಳಿಕೊಂಡಿದ್ದಾರೆ. ಹೀಗಾಗಿ 25 ಲಕ್ಷ ರೂಪಾಯಿ ನೀಡವ ಅಥವಾ ಲೈಂಗಿಕ ಸಂಪರ್ಕಕ್ಕೆ ಒಪ್ಪುವ ಆಯ್ಕೆಯನ್ನು ಅವರು ತನಗೆ ನೀಡಿದ್ದು, 50,000 ರೂಪಾಯಿ ಹಣವನ್ನು ಈಗಾಗಲೇ ವಸೂಲಿ ಮಾಡಿರೋದಾಗಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು

ಹುಬ್ಬಳ್ಳಿ, ಮಾ.17: ರೇಲ್ವೆ ಇಲಾಖೆಯು ನಡೆಸುವ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ. ಗೂಡ್ಸ್ ರೈಲ್ವೆ ಮ್ಯಾನೇಜರ್ ಹಾಗೂ LDCE ಹುದ್ದೆಗಳಿಗೆ ನಡೆಯುವ ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದ ಕಾರಣ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಬರೆಯಲು ಅವಕಾಶವಿರುವುದು ಸ್ಥಳೀಯ ಭಾಷಿಕರಾದ ಕನ್ನಡಿಗರಿಗೆ ದೊಡ್ಡ ಅಡ್ಡಿಯಾಗಿದೆ ಎಂದು ಕಾರ್ಯಕರ್ತರು ದೂರಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಸಮರ ಸಿಂಹ ಟಿ.ಎ. ನಾರಾಯಣ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರ್ಯಕರ್ತರು, ಕನ್ನಡವನ್ನು ಕಡ್ಡಾಯವಾಗಿ ಪರೀಕ್ಷಾ ಮಾಧ್ಯಮಗಳಲ್ಲಿ ಸೇರಿಸುವಂತೆ ಒತ್ತಾಯಿಸಿದರು. ಕನ್ನಡಿಗರ ಹಿತಾಸಕ್ತಿಗಳನ್ನು ರಕ್ಷಿಸಲು ರೇಲ್ವೆ ಇಲಾಖೆಯು ತನ್ನ ನೀತಿಯನ್ನು ಪರಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ರಣಕಹಳೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕರವೇ ಕಾರ್ಯಕರ್ತರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆಯು ಇಂದು ನಡೆಯಬೇಕಿದ್ದ ಪದೋನ್ನತಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಗೂಡ್ಸ್ ರೈಲ್ವೆ ಮ್ಯಾನೇಜರ್ ಹಾಗೂ LDCE ಹುದ್ದೆಗಳ ಮುಂಬಡ್ತಿಗಾಗಿ ಇಂದು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಪ್ರತಿಭಟನೆಯ ತೀವ್ರತೆಗೆ ಹೆದರಿದ ಅಧಿಕಾರಿಗಳು ಪರೀಕ್ಷೆಯನ್ನು ಮುಂದೂಡಿ, ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಅಭ್ಯರ್ಥಿಗಳನ್ನು ವಾಪಸ್ ಕಳುಹಿಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ, ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟವೂ ನಡೆಯಿತು.ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೈಂಗಿಕ ಕಿರುಕುಳ ಆರೋಪಕ್ಕೆ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಸ್ಪಷ್ಟನೆ: ಮತ್ತೊಂದೆಡೆ ಸುಮೋಟೋ ಕೇಸ್​​ ದಾಖಲಿಸಿದ ಮಹಿಳಾ ಆಯೋಗ

ಮಂಗಳೂರು, ಮಾರ್ಚ್​​ 17:  ತಮ್ಮ ವಿರುದ್ಧದ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಹಣ ಕೇಳಿದ ಆರೋಪಗಳನ್ನು ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜೆ. ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅವರು, ಈ ಎಲ್ಲಾ ಆರೋಪಗಳು ಸುಳ್ಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಅವರ ಪತಿ ಹೇಳಿದ್ರು. ಹೀಗಾಗಿ ಆಕೆಯನ್ನು ರಕ್ಷಿಸಲು ನಾನು ಕಾಂಪೌಂಡ್ ಹಾರಿದ್ದು ನಿಜ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿ ಸಂದೇಶ್ ಪಿ.ಜಿ. ವಿರುದ್ಧ ತನಿಖೆಗೆ ಮಂಗಳೂರು ಪೊಲೀಸ್​​ ಕಮಿಷನರ್​​ ಸುಧೀರ್​​ ರೆಡ್ಡಿ ಸೂಚನೆ ನೀಡಿದ್ದಾರೆ. ಉತ್ತರ ACP ಶ್ರೀಕಾಂತ್​​ಗೆ ತನಿಖೆಯ ಹೊಣೆ ನೀಡಲಾಗಿದೆ. ಲೈಂಗಿಕ ಕಿರುಕುಳದ ಬಗ್ಗೆ ಈವರೆಗೂ ಯಾವೊಬ್ಬ ಮಹಿಳೆ ಕೂಡ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರು ಇದ್ದರೆ ಈಗಲೂ ದೂರು ನೀಡಬಹುದು ಎಂದು ಕಮಿಷನರ್​​ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ‌, ಈ ವಿಚಾರದ ಬಗ್ಗೆ ನಾನು ಈಗಾಗಲೇ ಕಮಿಷನರ್ ಜೊತೆ ಮಾತನಾಡಿದ್ದೇನೆ. ಸಂತ್ರಸ್ತೆಯರು ಯಾರೂ ಮುಂದೆ ಬಂದು ನಮಗೆ ದೂರು ನೀಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ದೂರು ನೀಡಿರುವ ಅಕ್ನಾಲೆಜ್ಮೆಂಟ್​​ ಇರೋದಾಗಿ ಕೆಲವರು ತಿಳಿಸಿದ್ದು, ನಾವು ನಿನ್ನೆಯೇ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಹಲವಾರು ಸಂತ್ರಸ್ತರು ಇದರಲ್ಲಿ ಇದ್ದಾರೆ. ಕೆಲ ಮಹಿಳೆಯರು ಕುಟುಂಬ ಮತ್ತು ಮಕ್ಕಳ ಕಾರಣಕ್ಕೆ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಅಡ್ವಾನ್ಸ್ ಬುಕಿಂಗ್ ಪ್ರಾರಂಭ: ಟಿಕೆಟ್ ಬೆಲೆ ಎಷ್ಟು?

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಮಾರ್ಚ್ 19ರಂದು ಆಗಲಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಹಿಂದಿನ ದಿನ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ 18ರಂದು ‘ಧುರಂಧರ್ 2’ ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಮಾಡಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸ್ಪೆಷನ್ ಶೋಗಳನ್ನು ಮಾತ್ರವೇ ಪ್ರದರ್ಶಿಸುತ್ತಿದೆ. ಬಿಡುಗಡೆಯ ದಿನ ಅಂದರೆ ಮಾರ್ಚ್ 19ರಂದು ಬೆಳಿಗಿನ ಜಾವ ಸಿನಿಮಾದ ಸ್ಪೆಷಲ್ ಶೋಗಳನ್ನು ಆಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ ಸಹ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.

ಪ್ರತಿ ಬಾರಿ ಪವನ್ ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ಬೆಂಗಳೂರಿನಲ್ಲಿ ಸಿಗುತ್ತಿದ್ದವು, ಆದರೆ ಈ ಬಾರಿ ಹಾಗಾಗಿಲ್ಲ. ‘ಧುರಂಧರ್ 2’ ಸಿನಿಮಾದ ಕಾರಣಕ್ಕಾಗಿ ಸಿನಿಮಾಕ್ಕೆ ಹೆಚ್ಚಿನ ಶೋಗಳು ಸಿಕ್ಕಿಲ್ಲ ಹಾಗೆಂದು ತೀರ ಕಡಿಮೆ ಶೋಗಳು ಮಾತ್ರವೇ ದೊರೆತಿವೆ ಎಂದೂ ಸಹ ಅಲ್ಲ. ಸಾಧಾರಣ ಸಂಖ್ಯೆಯ ಶೋಗಳು ಸಿಕ್ಕಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಸ್ಪೆಷಲ್ ಶೋಗಳನ್ನು ಸಹ ಆಯೋಜನೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಬೆಳಿಗಿನ ಜಾವ 6:30 ಇಂದ ಶೋಗಳು ಆರಂಭವಾಗುತ್ತಿವೆ. ಕೆಲವು ಚಿತ್ರಮಂದಿರಗಳಲ್ಲಿ 7 ಗಂಟೆಗೆ ಶೋ ಪ್ರದರ್ಶಿಸಲಾಗುತ್ತಿದೆ. ವಿಶೇಷ ಶೋಗಳಿಗೆ ಬೆಂಗಳೂರಿನಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೆ ತೀರ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ‘ಧುರಂಧರ್ 2’ ಸಿನಿಮಾದ ಟಿಕೆಟ್​​ ಬೆಲೆಗೆ ಹೋಲಿಸಿದರೆ ‘ಉಸ್ತಾದ್ ಭಗತ್ ಸಿಂಗ್’ನ ವಿಶೇಷ ಶೋನ ಟಿಕೆಟ್ ಬೆಲೆಗಳು ಕಡಿಮೆಯೇ ಇವೆ. ವಿಶೇಷ ಶೋಗೆ ಕೆಲವೆಡೆ 400 ಹಾಗೂ 500 ರೂಪಾಯಿಗಳಿವೆ. ಅದೇ ಚಿತ್ರಮಂದಿರದ 10 ಗಂಟೆ ಶೋಗೆ ಟಿಕೆಟ್ ಬೆಲೆ 350 ಅಥವಾ 250 ರೂಪಾಯಿಗಳಿವೆ. ಕೆಲವೆಡೆ ಇನ್ನೂ ಕಡಿಮೆ ಇವೆ.

ಇದನ್ನೂ ಓದಿ:‘ಕಾಲರ್ ಎತ್ತರ’ ಎಂದು ಕುಣಿದ ಪವನ್ ಕಲ್ಯಾಣ್: ಸ್ಟೆಪ್ಪು ನೋಡಿ

ಈ ಬಾರಿ ಪವನ್ ಕಲ್ಯಾಣ್ ಸಿನಿಮಾಕ್ಕೆ ಬಹಳ ಕಡಿಮೆ ಶೋಗಳು ದೊರೆತಿವೆ. ಮಂಗಳವಾರ ಬುಕ್​​ಮೈಶೋನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ 150ಕ್ಕೂ ಕಡಿಮೆ ಶೋಗಳು ದೊರೆತಿವೆ. ಸ್ಕ್ರೀನ್​​ಗಳ ಸಂಖ್ಯೆ 35 ದಾಟಿಲ್ಲ. ಈ ಹಿಂದಿನ ‘ಓಜಿ’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಸ್ಕ್ರೀನ್​​ಗಳು ಮತ್ತು ಶೋಗಳು ಲಭ್ಯವಾಗಿದ್ದವು. ಆದರೆ ಈ ಬಾರಿ ‘ಧುರಂಧರ್ 2’ ಹೊಡೆತಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಭಾರಿ ಪೆಟ್ಟುಣ್ಣುತ್ತಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಕಲ್ಯಾಣ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾನಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version