ದೇಹದ ತುಂಬ 18 ಗಾಯ; 4 ವರ್ಷದ ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ

ದೇಹದ ತುಂಬ 18 ಗಾಯ; 4 ವರ್ಷದ ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ

ಲಕ್ನೋ, ಮಾರ್ಚ್ 16: ಪ್ರತಿಯೊಬ್ಬ ಗಂಡಸಿಗೂ ತಾನು ತಂದೆಯಾಗುವ ಕ್ಷಣ ಬಹಳ ವಿಶೇಷವಾಗಿರುತ್ತದೆ. ಅಪ್ಪ ತನಗೆಷ್ಟೇ ಕಷ್ಟ ಬಂದರೂ ಮಗುವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಾನೆ. ಮಗುವಿನ ಭವಿಷ್ಯಕ್ಕಾಗಿ ಯಾವ ತ್ಯಾಗ ಮಾಡಲು ಬೇಕಾದರೂ ಸಿದ್ಧವಾಗಿರುತ್ತಾನೆ. ಆದರೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಬಹಳ ಆತಂಕಕಾರಿಯಾದುದು. 4 ವರ್ಷದ ತನ್ನ ಸ್ವಂತ ಮಗುವಿಗೆ ಬೆಲ್ಟ್​ನಿಂದ ಹೊಡೆದು, ಬೆಂಕಿ ಹಚ್ಚಿ ಸುಟ್ಟು ಕೊಲೆ (Child Killed in Lucknow) ಮಾಡಿರುವ ಘಟನೆ ಆಘಾತ ಮೂಡಿಸಿದೆ. ಆ ಪುಟ್ಟ ಮಗುವಿನ ಪಾಲಿಗೆ ಹೆತ್ತ ಅಪ್ಪ ಮತ್ತು ಮಲತಾಯಿಯೇ ರಾಕ್ಷಸರಾಗಿದ್ದಾರೆ.

ಲಕ್ನೋದ ಚೌಕ್ ಪ್ರದೇಶದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಆ ಮಗುವಿನ ತಂದೆ ಮತ್ತು ಆತನ ಎರಡನೇ ಪತ್ನಿಯನ್ನು ಬಂಧಿಸಲಾಗಿದೆ. ಮಗುವಿನ ತಾಯಿಯ ಅಜ್ಜಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಭೀಷ್ಮ ಖರ್ಬಂದ (35) ಮತ್ತು ಅವನ ಪತ್ನಿ ರಾಗಿಣಿ ಖರ್ಬಂದ (30) ಅವರನ್ನು ಬಂಧಿಸಲಾಗಿದೆ. ಉನ್ನಾವೋದ ಸುಧಾ ಕಶ್ಯಪ್ ಅವರು ಮಾರ್ಚ್ 12ರಂದು ತಮ್ಮ ಮೊಮ್ಮಗ ಅರ್ನವ್​ನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು

“ನಾವು ಲಜ್‌ಪತ್ ನಗರದಲ್ಲಿರುವ ಮನೆಗೆ ತಲುಪಿದಾಗ ಮಗುವಿನ ಶವವನ್ನು ವರಾಂಡಾದಲ್ಲಿ ಇಡಲಾಗಿತ್ತು. ತಪಾಸಣೆ ನಡೆಸಿದಾಗ ಮಗುವಿನ ದೇಹದಾದ್ಯಂತ ಹಲವಾರು ಗಾಯದ ಗುರುತುಗಳು ಮತ್ತು ನೀಲಿ ಗುರುತು ಕಂಡುಬಂದವು, ಇದು ಮಗುವನ್ನು ಕ್ರೂರವಾಗಿ ಥಳಿಸಿರುವುದನ್ನು ಸೂಚಿಸುತ್ತದೆ. ಮಗುವಿನ ಪಾದಗಳ ಮೇಲೆ ಸುಟ್ಟ ಗುರುತುಗಳು ಸಹ ಇದ್ದವು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊರಕೆ, ಅಡುಗೆಮನೆಯ ಚಾಕು, ಬೆಲ್ಟ್ ಮತ್ತು ಹಗ್ಗ ಸೇರಿದಂತೆ ಅಪರಾಧದಲ್ಲಿ ಬಳಸಲಾಗಿದೆ ಎನ್ನಲಾದ ಹಲವಾರು ವಸ್ತುಗಳನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ.

ಮಗುವಿನ ತಾಯಿ ಅನಾರೋಗ್ಯದಿಂದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅದಾದ ನಂತರ ಭೀಷ್ಮ ಮತ್ತೊಂದು ಮದುವೆಯಾಗಿದ್ದರು. ಭೀಷ್ಮ ಮತ್ತು ರಾಗಿಣಿ ಆಸ್ತಿಯ ದುರಾಸೆಯಿಂದ 4 ವರ್ಷದ ಮಗುವನ್ನು ಕೊಂದಿದ್ದಾರೆ ಎಂದು ಆ ಮಗುವಿನ ಅಜ್ಜಿ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಂದು, ತನ್ನ ಮಣಿಕಟ್ಟನ್ನೇ ಕೊಯ್ದುಕೊಂಡ ವ್ಯಕ್ತಿ

ತಂದೆ ಮತ್ತು ಮಲತಾಯಿ ಹುಡುಗನನ್ನು ಪದೇ ಪದೇ ಹೊಡೆಯುತ್ತಿದ್ದರು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಮಗುವಿಗೆ ವಿದ್ಯುತ್ ಶಾಕ್ ನೀಡಲಾಗಿದ್ದು, ಆಗಾಗ ಕಠಿಣವಾದ ಶಿಕ್ಷೆ ವಿಧಿಸಲಾಗುತ್ತಿತ್ತು ಎನ್ನಲಾಗಿದೆ. ಆ ಮಗುವಿನ ದೇಹದ ಮೇಲೆ ಸುಮಾರು 18 ಗಾಯದ ಗುರುತುಗಳು ಗೋಚರಿಸಿವೆ ಎಂದು ಮಗುವಿನ ತಾಯಿಯ ಕಡೆಯ ಕುಟುಂಬ ಆರೋಪಿಸಿದೆ.

ಅರ್ನವ್​ನ ತಾಯಿಯ ಮರಣದ ನಂತರ ಆ ಹುಡುಗ ತನ್ನ ತಾಯಿಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದ. ಆದರೆ, ಸುಮಾರು 6 ತಿಂಗಳ ಹಿಂದೆ ಅವನ ತಂದೆ ನ್ಯಾಯಾಲಯದ ಆದೇಶದ ನಂತರ ಅವನನ್ನು ವಶಕ್ಕೆ ಪಡೆದರು. ಮನೆಯಲ್ಲಿ ಆತನ ತಂದೆ ಸದಾ ಮಗುವನ್ನು ಹೊಡೆಯುತ್ತಿದ್ದರು. ಮಗುವನ್ನು ಹೊರಗೆ ಆಟವಾಡಲು ಕೂಡ ಬಿಡುತ್ತಿರಲಿಲ್ಲ, ಯಾರ ಮನೆಗೂ ಕಳುಹಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.

ಬಂಧಿತ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ ಇದು ಈ ರೋಗದ ಸೂಚನೆಯಾಗಿರಬಹುದು

ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಕೂದಲು ಉದುರುವ ಸಮಸ್ಯೆಯನ್ನು (Hair Loss) ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿದಿನ ಸುಮಾರು 50 ರಿಂದ 100 ಕೂದಲುಗಳು ಉದುರುವುದು ಸಹಜವೆಂದು ತಜ್ಞರು ಹೇಳುತ್ತಾರೆ, ಏಕೆಂದರೆ ಹಳೆಯ ಕೂದಲುಗಳ ಬದಲಿಗೆ ಹೊಸ ಕೂದಲುಗಳು ಬೆಳೆಯುತ್ತಿರುತ್ತವೆ. ಆದರೆ ಇದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೂದಲು ಉದುರುತ್ತಿದ್ದರೆ ಅಥವಾ ಕೂದಲು ಒದ್ದೆ ಇದ್ದು ಅದನ್ನು ಓರೆಸುವಾಗ ಮತ್ತು ತಲೆ ತೊಳೆಯುವಾಗ ಕೈ ಮುಷ್ಟಿಗಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಇದು ಕೆಲವೊಮ್ಮೆ ದೇಹದ ಒಳಗಿನ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾದರೆ ಈ ರೀತಿಯಾದಾಗ ಏನು ಮಾಡಬೇಕು, ಇದು ಯಾವ ಆರೋಗ್ಯ ಸಮಸ್ಯೆಯ ಲಕ್ಷಣ ಎಂಬುದನ್ನು ತಿಳಿದುಕೊಳ್ಳಿ.

ನಿರಂತರವಾಗಿ ಕೂದಲು ಉದುರುವ ಸಮಸ್ಯೆಯೊಂದಿಗೆ ಕೂದಲು ತೆಳ್ಳಗಾಗುವುದು, ಕೂದಲಿನ ಬುಡ ದುರ್ಬಲವಾಗುವುದು, ತಲೆಯ ಚರ್ಮ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಅಥವಾ ಕೂದಲಿನ ದಟ್ಟತೆ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಾಣಿಸಬಹುದು. ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಕಾರಣವನ್ನು ತಿಳಿದು ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

ಯಾವ ಆರೋಗ್ಯ ಸಮಸ್ಯೆಗಳ ಸೂಚನೆ?

ಚರ್ಮರೋಗ ತಜ್ಞರಾದ ಡಾ. ಸೌಮ್ಯ ಸಚ್ದೇವಾ ಅವರ ಪ್ರಕಾರ, ಮಹಿಳೆಯರಲ್ಲಿ ಹೆಚ್ಚು ಕೂದಲು ಉದುರುವುದು ಹಲವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರಬಹುದು. ಥೈರಾಯ್ಡ್ ಸಮಸ್ಯೆ ಇದ್ದರೆ ದೇಹದ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಕೂದಲಿನ ಬೇರುಗಳು ದುರ್ಬಲವಾಗುತ್ತವೆ ಮತ್ತು ಕೂದಲು ವೇಗವಾಗಿ ಉದುರುವ ಸಾಧ್ಯತೆ ಹೆಚ್ಚುತ್ತದೆ. ಇದರ ಜೊತೆಗೆ ದೇಹದಲ್ಲಿ ಐರನ್ ಕೊರತೆ ಅಥವಾ ಅನಿಮಿಯಾ ಇದ್ದರೂ ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಪರಿಣಾಮವಾಗಿ ಕೂದಲು ದುರ್ಬಲವಾಗಿ ಉದುರುತ್ತದೆ. ಹಾರ್ಮೋನ್ ಅಸಮತೋಲನ, ವಿಶೇಷವಾಗಿ ಪಿಸಿಓಎಸ್ (PCOS) ಸಮಸ್ಯೆಯಿರುವ ಮಹಿಳೆಯರಲ್ಲಿಯೂ ಕೂದಲು ಉದುರುವ ಸಮಸ್ಯೆ ಕಾಣಿಸಬಹುದು. ದೀರ್ಘಕಾಲದ ಮಾನಸಿಕ ಒತ್ತಡವೂ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: ತಲೆಸ್ನಾನದ ಸಂದರ್ಭದಲ್ಲಿ ಮಾಡುವ ಈ ತಪ್ಪುಗಳು ಸಹ ಕೂದಲು ಉದುರಲು ಮುಖ್ಯ ಕಾರಣ

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಹಾರ್ಮೋನ್ ಅಸಮತೋಲನ ಇರುವವರು, ದೇಹದಲ್ಲಿ ಐರನ್ ಅಥವಾ ಪ್ರೋಟೀನ್ ಕೊರತೆ ಇರುವವರು ಹಾಗೂ ಹೆಚ್ಚು ಮಾನಸಿಕ ಒತ್ತಡ ಅನುಭವಿಸುವವರು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸಬಹುದು. ಜೊತೆಗೆ ಹೆಚ್ಚು ರಾಸಾಯನಿಕ ಇರುವ ಹೇರ್ ಪ್ರಾಡಕ್ಟ್‌ಗಳ ಬಳಕೆ, ಪದೇ ಪದೇ ಹೇರ್ ಸ್ಟೈಲಿಂಗ್ ಮಾಡುವುದು ಅಥವಾ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟುವುದು ಕೂಡ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ.

ಹೇಗೆ ತಡೆಗಟ್ಟಬಹುದು?

ಕೂದಲು ಉದುರುವ ಸಮಸ್ಯೆಯನ್ನು ತಡೆಯಲು ಸಮತೋಲನಯುತ ಹಾಗೂ ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ವಿಶೇಷವಾಗಿ ಐರನ್, ಪ್ರೋಟೀನ್ ಮತ್ತು ವಿಟಮಿನ್‌ಗಳಿರುವ ಆಹಾರವನ್ನು ಸೇವಿಸಬೇಕು. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಕೂದಲಿನ ಸರಿಯಾದ ಆರೈಕೆ ಮಾಡುವುದು ಮುಖ್ಯ. ಕೂದಲು ಉದುರುವಿಕೆ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ

ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾಗೆ (Boss Movie) ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಕ್ಕೆ ಸೆನ್ಸಾರ್ ನೀಡಬಾರದು ಎಂದು ದರ್ಶನ್ (Darshan) ಪರ ವಕೀಲರು ನೋಟಿಸ್ ನೀಡಿದ್ದಾರೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಯಾವುದೇ ನೋಟಿಸ್ ಬಂದಿಲ್ಲ. 3-4 ಜನರು ನನಗೆ ಬೆದರಿಕೆ ಕರೆ ಮಾಡಿದ್ದಾರೆ. ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ದರ್ಶನ್ ಅವರ ರಿಯಲ್ ಸ್ಟೋರಿ ಇಟ್ಟುಕೊಂಡು ನಾವು ಸಿನಿಮಾ ಮಾಡಿಲ್ಲ. ರೇಣುಕಾಸ್ವಾಮಿ ಘಟನೆ ಕೂಡ ಈ ಸಿನಿಮಾದಲ್ಲಿ ಇಲ್ಲ. ಕಾಕತಾಳೀಯವಾಗಿ ಹೋಲಿಕೆ ಆಗಿರಬಹುದು ಅಷ್ಟೇ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಆ ಘಟನೆ ಇಟ್ಟುಕೊಂಡು ನಾವು ಸಿನಿಮಾ ಮಾಡೋಕೆ ಆಗಲ್ಲ. ವಕೀಲನಾಗಿ ನನಗೆ ಅದು ಗೊತ್ತು. ನಮಗೆ ನೋಟಿಸ್ ಬಂದರೆ ಅದಕ್ಕೆ ಉತ್ತರ ನೀಡುತ್ತೇವೆ’ ಎಂದು ಲವ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಮದುವೆಯ ನಂತರವೂ ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುವುದೇಕೆ?

ವಿವಾಹೇತರ ಸಂಬಂಧ ( affair) ತಪ್ಪು ಎಂದು ಗೊತ್ತಿದ್ದರೂ ಸಹ ಇಂದಿಗೂ ಅದೆಷ್ಟೋ ವಿವಾಹಿತ ಮಹಿಳೆಯರು, ವಿವಾಹಿತ ಪುರುಷರು ವಿವಾಹೇತರ ಸಂಬಂಧಗಳನ್ನು  ಹೊಂದಿದ್ದಾರೆ. ಹೌದು ಮದುವೆಯಾಗಿ ಚಂದದ ಹೆಂಡತಿ ಇದ್ದರೂ ಸಹ ಕೆಲವು ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುತ್ತಾರೆ. ಈ ರೀತಿ ವಿವಾಹಿತ ಪುರುಷರು ಇತರ ಮಹಿಳೆಯರನ್ನು ಇಷ್ಟಪಡುವುದರ ಹಿಂದೆ ನಿರ್ದಿಷ್ಟ ಕಾರಣಗಳಿವೆ ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಚಾಣಕ್ಯರ ಪ್ರಕಾರ ಪುರುಷರು ವಿವಾಹೇತರ ಸಂಬಂಧವನ್ನು ಹೊಂದುವುದೇಕೆ, ಇತರ ಮಹಿಳೆಯರತ್ತ ಆಕರ್ಷಿತರಾವುಗುದೇಕೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ವಿವಾಹಿತ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವುದೇಕೆ?

ಹೊಸತನದ ಗೀಳು: ಪುರುಷರ ಮನಸ್ಸು ಯಾವಾಗಲೂ ತನ್ನಲ್ಲಿಲ್ಲದದ್ದಕ್ಕಾಗಿ ಹಾತೊರೆಯುತ್ತಿರುತ್ತದೆ. ಹೊಸ ಪರಿಚಯ ಮತ್ತು ಹೊಸ ಮಾತುಗಳು ಆಸಕ್ತಿದಾಯಕವಾಗಿ ಕಾಣುತ್ತವೆ. ಅವರು ಹೆಂಡ್ತಿಯನ್ನು ಪ್ರತಿದಿನ ನೋಡುವ ಕಾರಣ  ಹೆಂಡತಿಯ ವಿಶೇಷ ಲಕ್ಷಣಗಳು ಸಹ ಅವರಿಗೆ ತುಂಬಾ ಸಾಮಾನ್ಯವೆಂದು ತೋರುತ್ತದೆ. ಅದೇ ಅವರಿಗೆ ಪರಿಚಯವಿಲ್ಲದ ಹೊಸ ಮಹಿಳೆಯಾಗಿದ್ದರೆ, ಅದು ಅವರಿಗೆ ತುಂಬಾ ರೋಮಾಂಚನಕಾರಿಯಾಗಿ ತೋರುತ್ತದೆ. ಈ ಕಾರಣದಿಂದಲೇ ವಿವಾಹಿತ ಪುರುಷರು ಮಹಿಳೆಯರತ್ತ ಆಕರ್ಷಿತರಾಗುವುದು.

ಚಿಕ್ಕ ವಯಸ್ಸಿನಲ್ಲಿಯೇ ಮದುವೆ: ಅನೇಕ ಹುಡುಗರು ಕುಟುಂಬದ ಒತ್ತಡದಿಂದಾಗಿ ಸರಿಯಾದ ಪ್ರಬುದ್ಧತೆಯನ್ನು ತಲುಪುವ ಮೊದಲೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ, ಅವರಿಗೆ ತಮ್ಮ ವೃತ್ತಿ ಮತ್ತು ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇರುವುದಿಲ್ಲ. ಅವರು ಬೆಳೆದಂತೆ, ಅವರ ಆಲೋಚನೆಗಳು ಮತ್ತು ಆಸೆಗಳು ಸಂಪೂರ್ಣವಾಗಿ ಬದಲಾಗುತ್ತಾ ಹೋಗುತ್ತವೆ. ಹೆಂಡತಿಯ ಮೇಲಿನ ಪ್ರೀತಿಯೂ ಕಡಿಮೆಯಾಗುತ್ತದೆ. ತಮ್ಮ ಮನಸ್ಥಿತಿಗೆ ಹೊಂದಾಣಿಕೆಯಾಗುವ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮಗುವಾದ ಬಳಿಕ ಆಗುವ ಬದಲಾವಣೆ: ಮಕ್ಕಳಾದ ಬಳಿಕ ಸ್ವಾಭಾವಿಕವಾಗಿ, ತಾಯಿ ತನ್ನ ಎಲ್ಲಾ ಸಮಯ ಮತ್ತು ಪ್ರೀತಿಯನ್ನು ತನ್ನ ಮಗುವಿಗೆ ನೀಡುತ್ತಾಳೆ. ಇದರಿಂದ ಗಂಡನಾದವನಿಗೆ ತನ್ನ ಹೆಂಡತಿ ನಿಜವಾಗಿಯೂ ತನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಅನಿಸಲು ಪ್ರಾರಂಭಿಸುತ್ತದೆ. ಈ ಒಂಟಿತನವು ಅವನನ್ನು ಬಾಹ್ಯ ಆಕರ್ಷಣೆಗಳ ಕಡೆಗೆ ಎಳೆಯುತ್ತದೆ. ಆ ಸಮಯದಲ್ಲಿ, ಪರ ಸ್ತ್ರೀ ತನ್ನೊಂದಿಗೆ ಸ್ವಲ್ಪ ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡಿದರೆ, ಅವನು ಸುಲಭವಾಗಿ ಆಕೆಯ ಕಡೆಗೆ ಆಕರ್ಷಿತನಾಗುತ್ತಾನೆ ಎಂದು ಚಾಣಕ್ಯ ಹೇಳಿದ್ದಾರೆ.

ದೈಹಿಕ ಅಂತರ:  ಪತಿ-ಪತ್ನಿಯ ಸಂಬಂಧಕ್ಕೆ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯ ಎನ್ನುತ್ತಾರೆ ಚಾಣಕ್ಯ. ಈ ಅಡಿಪಾಯ ದುರ್ಬಲಗೊಂಡರೆ, ಸಂಬಂಧವು ಕ್ರಮೇಣ ಹದಗೆಡುತ್ತದೆ. ಅನೇಕ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ತಮ್ಮ ಆಸೆಗಳನ್ನು ಬಹಿರಂಗವಾಗಿ ಚರ್ಚಿಸಲು ನಾಚಿಕೆಪಡುತ್ತಾರೆ. ಇದು ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಆ ಅಂತರದಿಂದಾಗಿ, ಗಂಡಂದಿರು ಅತೃಪ್ತರಾಗುತ್ತಾರೆ ಮತ್ತು ಆ ದೈಹಿಕ ಆನಂದವನ್ನು ಹೊರಗೆ ಹುಡುಕಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: ಜೀವನದಲ್ಲಿ ಹಣದ ಕೊರತೆ ಎದುರಾಗಬಾರದೆಂದರೆ ಚಾಣಕ್ಯರು ಹೇಳಿರುವ ಮಾತುಗಳನ್ನು ಪಾಲಿಸಿ

ಈ ಸಮಸ್ಯೆಗಳಿಗೆ ಚಾಣಕ್ಯರ ಪರಿಹಾರಗಳೇನು?

  • ದಂಪತಿಗಳ ನಡುವೆ ಸ್ಪಷ್ಟವಾದ ಸಂವಹನವಿದ್ದರೆ, ಯಾವುದೇ ದೊಡ್ಡ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಹಾಗಾಗಿ ಪತಿ ಪತ್ನಿಯರು ಪ್ರತಿಯೊಂದು ವಿಷಯದ ಬಗ್ಗೆಯೂ ಮುಕ್ತವಾಗಿ ಮಾತನಾಡಬೇಕು.
  • ಒಂದು ಸಣ್ಣ ಅಪ್ಪುಗೆ ಮತ್ತು ಪ್ರೀತಿಯ ಮಾತು ಅವರ ಬಾಂಧವ್ಯವನ್ನು ಶಾಶ್ವತವಾಗಿ ತಾಜಾವಾಗಿರಿಸುತ್ತದೆ.
  • ಕೋಪದಿಂದ ದೂರ ಹೋಗುವ ಬದಲು, ಕುಳಿತು ಶಾಂತವಾಗಿ ಮಾತನಾಡುವುದು ನಿರ್ಣಾಯಕ ಪರಿಹಾರವನ್ನು ನೀಡುತ್ತದೆ. ಸಮಸ್ಯೆಗಳು ಉದ್ಭವಿಸಿದಾಗ, ಅಹಂಕಾರದಿಂದ ದೂರ ಸರಿಯದೆ ಪರಸ್ಪರ ಅರ್ಥಮಾಡಿಕೊಂಡರೆ, ಸಂಬಂಧದಲ್ಲಿ ಅಂತರ ಬೆಳೆಯುವುದಿಲ್ಲ.
  • ಒಂದು ಸಸ್ಯಕ್ಕೆ ಪ್ರತಿದಿನ ನೀರು ಹಾಕಿ ಬೆಳೆಸುವಂತೆ, ದಾಂಪತ್ಯ ಜೀವನಕ್ಕೆ ಪ್ರತಿದಿನ ಪ್ರೀತಿಯನ್ನು ಧಾರೆಯೆರೆದರೆ ಮಾತ್ರ ಗಂಡ ಹೆಂಡತಿಯ ಬಾಂಧವ್ಯ ಶಾಶ್ವತವಾಗಿ ಹಸಿರಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ

ನವದೆಹಲಿ, ಮಾರ್ಚ್ 16: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ (West Bengal Assembly Elections) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಜೆಪಿ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಚುನಾವಣೆಗೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಒಂದು ದಿನದ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು 2 ಹಂತಗಳಲ್ಲಿ ನಡೆಯಲಿವೆ. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಚುನಾವಣೆಗಳು ನಡೆಯಲಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಅಸ್ಸಾಂ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನ ಮತಗಳ ಎಣಿಕೆಯೊಂದಿಗೆ ಮೇ 4ರಂದು ನಡೆಯಲಿದೆ.

2021ರಲ್ಲಿ ನಡೆದ 8 ಹಂತದ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷದ ಅಂದರೆ 2026ರ ಪಶ್ಚಿಮ ಬಂಗಾಳ ಚುನಾವಣೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ಚುನಾವಣಾ ಆಯೋಗ ಸಾಕಷ್ಟು ಚರ್ಚೆ ನಡೆಸಿ ಮತದಾನದ ಹಂತಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಎಲ್ಲರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ, ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ ಶಪಥ

ಬಿಜೆಪಿ ಇಂದು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ 2 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಒಂದು ನಂದಿಗ್ರಾಮ ಮತ್ತು ಭವಾನಿಪುರ. ಭವಾನಿಪುರ ಸ್ಥಾನದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುವುದರಿಂದ ಸುವೇಂದು ಅಧಿಕಾರಿ ಸಿಎಂ ಎದುರಾಳಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಸುವೇಂದು ಅಧಿಕಾರಿ ಪ್ರಸ್ತುತ ನಂದಿಗ್ರಾಮದ ಬಿಜೆಪಿ ಶಾಸಕರಾಗಿದ್ದಾರೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ನಂದಿಗ್ರಾಮ ಸ್ಥಾನದಿಂದ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ ಅವರನ್ನು ಸುಮಾರು 2,000 ಮತಗಳಿಂದ ಸೋಲಿಸಿದ್ದರು.

ಇದನ್ನೂ ಓದಿ: ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ; ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಇದಾದ ನಂತರ ಮಮತಾ ಬ್ಯಾನರ್ಜಿ ಭವಾನಿಪುರ ಸ್ಥಾನದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಇಂದು ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಪ್ರಮುಖ ಹೆಸರುಗಳೆಂದರೆ, ದಿಲೀಪ್ ಘೋಷ್ (ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ)- ಖರಗ್‌ಪುರ ಸದರ್ ಕ್ಷೇತ್ರ, ಅಗ್ನಿಮಿತ್ರ ಪಾಲ್ (ಫ್ಯಾಷನ್ ಡಿಸೈನರ್)- ಅಸನ್ಸೋಲ್ ದಕ್ಷಿಣ ಕ್ಷೇತ್ರ, ಸುವೇಂದು ಅಧಿಕಾರಿ- ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರ, ಅಶೋಕ್ ದಿಂಡಾ (ಭಾರತದ ಮಾಜಿ ಕ್ರಿಕೆಟಿಗ)- ಮೊಯ್ನಾ ಕ್ಷೇತ್ರ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಲಾಧಿಕಾರಿ ಕಿರುಕುಳ ಆರೋಪ: ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ

ಬಳ್ಳಾರಿ, (ಮಾರ್ಚ್ 16): ಮೇಲಾಧಿಕಾರಿಯ ಮಾನಸಿಕ ಕಿರುಕುಳ ಹಿನ್ನೆಲೆ ಕೃಷಿ ಇಲಾಖೆಯ ( agriculture department) ಗುತ್ತಿಗೆ ನೌಕರ ಆತ್ಮಹತ್ಯೆಗೆ (Suicide)  ಶರಣಾಗಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಂಡೂರು ತಾಲೂಕಿನ‌ ಗೌರಿಪುರದಲ್ಲಿ ನಡೆದಿದೆ. ಜಿ.ಎನ್. ರಾಜು ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆ ನೌಕರ. ಸಂಡೂರು ಕೃಷಿ ಇಲಾಖೆಯ ತಾಲೂಕು (AO) ಅಧಿಕಾರಿ ರಾಘವೇಂದ್ರ ಅವರ ವಿರುದ್ದ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಕಾರಣ ಬರೆದಿರುವ ಗುತ್ತಿಗೆ ನೌಕರ ರಾಜು ಅವರು ಕೃಷಿ ಇಲಾಖೆಯ ಅಧಿಕಾರಿ ರಾಘವೇಂದ್ರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸಂಡೂರು ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ ಅವರು ರಾಜು ಅವರಿಗೆ ಕೆಲಸಕ್ಕೆ ಸೇರಿದ ದಿನದಿಂದಲೇ ಮಾನಸಿಕ ಕಿರುಕುಳ ನೀಡುತ್ತಿದ್ರು. ಕಚೇರಿಯಲ್ಲಿನ ಕಿರುಕುಳದ ಬಗ್ಗೆ ಮೃತ ರಾಜು ಪತ್ನಿ ಪ್ರೇಮಾ ಅವರ ಮುಂದೆ ಹೇಳಿಕೊಂಡಿದ್ದರು, ದಿನ ನಿತ್ಯ ಕೆಲಸಕ್ಕೆ ಹೋದ್ರು ರಾಘವೇಂದ್ರ ಅವರು ತನ್ನನ್ನು ಮಾತನಾಡಿಸುತ್ತಿರಲಿಲ್ಲ. ಯಾವುದೇ ಕೆಲಸ ಮಾಡು ಅಂತ ಹೇಳುತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ಸಹ ಬಂದಿರಲಿಲ್ಲವಂತೆ. ಹಿರಿಯ ಅಧಿಕಾರಿಗಳು ಹೇಳಿದ್ರು ನನ್ನ ಗಂಡನಿಗೆ ಸಂಬಳ ಕೊಡದೇ ಕಿರುಕುಳ ನೀಡುತ್ತಿದ್ದರು ಎಂದು ಮೃತ ರಾಜು ಪತ್ನಿ ಪ್ರೇಮಾ ಅವರು ಅರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: 11 ತಿಂಗಳಿಂದ ಸಂಬಳವಿಲ್ಲ, ಸಾಲಗಾರರ ಕಾಟ; ಡೆತ್‌ನೋಟ್‌ ಬರೆದಿಟ್ಟು ಗ್ರಾ ಪಂ ನೀರುಗಂಟಿ ಆತ್ಮಹತ್ಯೆ

ನೀರುಗಂಟಿ ಆತ್ಮಹತ್ಯೆ

ಚಿಕ್ಕಮಗಳೂರು: ಡೆತ್‌ನೋಟ್ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ. ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ರಮೇಶ್(47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ, ಸಾಲಗಾರರ ಕಾಟ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

ನಾನು ತುಂಬಾ ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನಗೆ 11 ತಿಂಗಳ ವೇತನ ಕೊಟ್ಟಿಲ್ಲ ಹಾಗೂ ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ. ಫೈನಾನ್ಸ್‌ನಲ್ಲಿ ಸಾಲ ಮಾಡಿರುವೆ, ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್‌ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್

ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಿಂದ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಖ್ಯಾತ ಗಾಯಕ ಅರಿಜಿತ್ ಸಿಂಗ್ (Arijit Singh) ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿರುವ ನಿರ್ಧಾರವನ್ನು ಶ್ರೇಯಾ ಬೆಂಬಲಿಸಿದ್ದಾರೆ. ಅಲ್ಲದೇ, ತಮಗೂ ಅಂತಹ ಆಲೋಚನೆ ಬಂದಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ‘ಎಬಿಪಿ ನ್ಯೂಸ್’ ಜೊತೆ ಮಾತನಾಡಿದ ಶ್ರೇಯಾ ಘೋಷಾಲ್ ಅವರು ಈ ವಿಷಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

‘ಕೆಲವೊಮ್ಮೆ ನನಗೂ ಸಂಗೀತದಿಂದ ವಿರಾಮ ಪಡೆಯಬೇಕು ಅನಿಸುತ್ತದೆ. ನಿರಂತರ ಕೆಲಸದ ನಡುವೆ ವಿಶ್ರಾಂತಿಯ ಅಗತ್ಯವಿರುತ್ತದೆ’ ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ‘ಅರಿಜಿತ್ ಸಿಂಗ್ ಅವರು ಅಂತಹ ದೊಡ್ಡ ನಿರ್ಧಾರವನ್ನು ಅತ್ಯಂತ ಧೈರ್ಯದಿಂದ ತೆಗೆದುಕೊಂಡಿದ್ದಾರೆ. ಅವರ ಸಂಗೀತವು ಹೃದಯದಿಂದ ಬರುತ್ತದೆ. ಅವರು ಯಾವುದೋ ಲಾಭಕ್ಕಾಗಿ ಅಥವಾ ಸಾಧನೆಗಾಗಿ ಸಂಗೀತ ಮಾಡುವುದಿಲ್ಲ, ಬದಲಾಗಿ ತಮ್ಮ ಸಂತೋಷಕ್ಕಾಗಿ ಮಾಡುತ್ತಾರೆ. ಅದಕ್ಕಾಗಿಯೇ ಜನರು ಅವರ ಹಾಡುಗಳನ್ನು ಅಷ್ಟೊಂದು ಪ್ರೀತಿಸುತ್ತಾರೆ’ ಎಂದು ಶ್ಲಾಘಿಸಿದ್ದಾರೆ.

ವೇದಿಕೆಯ ಮೇಲೆ ಲಿಪ್-ಸಿಂಕ್ ಮಾಡುವುದರ ಬಗ್ಗೆ ಶ್ರೇಯಾ ಘೋಷಾಲ್ ಅವರು ಖಡಕ್ ಆಗಿ ಮಾತನಾಡಿದ್ದಾರೆ. ‘ವೇದಿಕೆಯ ಮೇಲೆ ಹಾಡುವಾಗ ಲಿಪ್-ಸಿಂಕ್ ಮಾಡುವುದರ ಬಗ್ಗೆ ನನಗೆ ತುಂಬಾ ಅಸಮಾಧಾನ ಇದೆ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ, ನಾನು ಅಂದೇ ಹಾಡುವುದನ್ನು ನಿಲ್ಲಿಸಿಬಿಡುತ್ತೇನೆ’ ಎಂದು ತಮ್ಮ ವೃತ್ತಿಪರತೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ದೇವದಾಸ್’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಶ್ರೇಯಾ ಘೋಷಾಲ್, ಅವರು ಆ ಸಿನಿಮಾದಲ್ಲಿನ ಗಾಯನಕ್ಕಾಗಿ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ಪಡೆದರು. ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಯ ಸಿನಿಮಾಗಳ ಹಾಡುಗಳಿಗೆ ಧ್ವನಿ ನೀಡಿ ದೇಶಾದ್ಯಂತ ಅವರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಅವರು ಅರಿಜಿತ್ ಸಿಂಗ್ ರೀತಿ ವಿರಾಮದ ಬಗ್ಗೆ ಮಾತಾಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ: ‘ಚಿಕ್ನಿ ಚಮೇಲಿ’ ಹಾಡಿನ ವಿವಾದಕ್ಕೆ ಸ್ಪಷ್ಟನೆ ನೀಡಿದ ಗಾಯಕಿ ಶ್ರೇಯಾ ಘೋಷಾಲ್

ಅರಿಜಿತ್ ಸಿಂಗ್ ನಿವೃತ್ತಿ: ಜನವರಿ 27ರಂದು ಅರಿಜಿತ್ ಸಿಂಗ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಚ್ಚರಿಯ ಪೋಸ್ಟ್ ಒಂದನ್ನು ಹಾಕಿದ್ದರು. ‘ಇನ್ನು ಮುಂದೆ ನಾನು ಯಾವುದೇ ಸಿನಿಮಾಗಳಿಗೆ ಹೊಸದಾಗಿ ಹಾಡುವುದಿಲ್ಲ. ಈ ಸುದೀರ್ಘ ಪಯಣ ಅದ್ಭುತವಾಗಿತ್ತು’ ಎಂದು ಬರೆಯುವ ಮೂಲಕ ಹಿನ್ನೆಲೆ ಗಾಯನಕ್ಕೆ ಗುಡ್‌ಬೈ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

ನವದೆಹಲಿ, ಮಾರ್ಚ್ 16: ಭಾರತದಲ್ಲಿ ಎಲ್​ಪಿಜಿಗೆ (LPG) ತುಸು ಹಾಹಾಕಾರ ನಡೆಯುತ್ತಿದೆ. ಸರ್ಕಾರ ಎಲ್​ಪಿಜಿ ಪೂರೈಕೆ ಸರಿಯಾಗಿ ಇದೆ ಎಂದು ಹೇಳಿದರೂ ಸಿಲಿಂಡರ್ ಬುಕಿಂಗ್ ಆಗದೇ ಇರುವುದು, ಡೆಲಿವರಿ ವಿಳಂಬ ಆಗುತ್ತಿರುವುದು ಇತ್ಯಾದಿ ಸಮಸ್ಯೆ ಇದೆ. ಇದೇ ವೇಳೆ, ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ ಬಳಕೆದಾರರಿಗೆ (PNG users) ಗ್ಯಾಸ್ ಪೂರೈಕೆ ನಿಂತಿಲ್ಲ. ಪ್ರಧಾನಿಗಳು ಇತ್ತೀಚೆಗೆ, ಪಿಎನ್​ಜಿ ಬಳಕೆ ಮಾಡುವಂತೆ ಜನರಿಗೆ ಕರೆ ಕೂಡ ಮಾಡಿದ್ದಾರೆ. ಹಾಗಾದರೆ, ಪಿಎನ್​ಜಿ ಗ್ಯಾಸ್ ಮತ್ತು ಎಲ್​ಪಿಜಿ ನಡುವೆ ವ್ಯತ್ಯಾಸವೇನು?

ಎಲ್​ಪಿಜಿ ಮತ್ತು ಪಿಎನ್​ಜಿ ನಡುವೆ ವ್ಯತ್ಯಾಸವೇನು?

ಎಲ್​ಪಿಜಿ ಎಂಬುದು ಪೆಟ್ರೋಲಿಯಂ ಉತ್ಪನ್ನ. ಇದು ಕಚ್ಚಾ ತೈಲದಿಂದ ಸಿಗುವ ಒಂದು ಉಪ ಉತ್ಪನ್ನ. ಗ್ಯಾಸ್ ಅನ್ನು ದ್ರವೀಕರಿಸಿ ಸಿಲಿಂಡರ್​ನಲ್ಲಿ ತುಂಬಿಸಿ ಸರಬರಾಜು ಮಾಡಲಾಗುತ್ತದೆ.

ಪಿಎನ್​ಜಿ ಎಂಬುದು ಪೈಪ್ಡ್ ನ್ಯಾಚುರಲ್ ಗ್ಯಾಸ್. ಇದು ನೈಸರ್ಗಿಕ ಅನಿಲ. ನೀರನ್ನು ನಲ್ಲಿ ಮೂಲಕ ಸರಬರಾಜು ಮಾಡಲಾಗುವಂತೆ, ಪಿಎನ್​ಜಿಯನ್ನು ಕೊಳವೆ ಮೂಲಕ ಮನೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್

ದೇಶದಲ್ಲಿ ಹೆಚ್ಚಿನ ಮನೆಗಳಲ್ಲಿ ಎಲ್​ಪಿಜಿ ಸಂಪರ್ಕ ಇದೆ. 32 ಕೋಟಿಗೂ ಅಧಿಕ ಮನೆಗಳು ಎಲ್​ಪಿಜಿ ಗ್ಯಾಸ್ ಸೌಲಭ್ಯ ಪಡೆದಿವೆ. ಆದರೆ, ಪಿಎನ್​ಜಿ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ ಒಂದೂವರೆ ಕೋಟಿಗಿಂತ ತುಸು ಹೆಚ್ಚು. ಈಗೀಗ ಇದರ ಬಳಕೆ ಮತ್ತು ಸಂಪರ್ಕ ಜಾಲ ಹೆಚ್ಚುತ್ತಿದೆ.

ಪಿಎನ್​ಜಿ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಯ ಆಗದಿರುವುದು ಯಾಕೆ?

ಭಾರತಕ್ಕೆ ಬೇಕಾದ ಎಲ್​ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆಮದು ಮಾಡಿಕೊಳ್ಳಲಾಗುತ್ತಿರುವ ಎಲ್​ಪಿಜಿಯಲ್ಲಿ ಶೇ. 80ಕ್ಕಿಂತ ಹೆಚ್ಚಿನಷ್ಟನ್ನು ಕೊಲ್ಲಿ ರಾಷ್ಟ್ರಗಳಿಂದ ಪಡೆಯಲಾಗುತ್ತಿದೆ. ಹೀಗಾಗಿ, ಇರಾನ್ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಪೂರೈಕೆಯಲ್ಲಿ ಗಣನೀಯವಾದ ತೊಂದರೆ ಆಗಿದೆ.

ಆದರೆ, ನೈಸರ್ಗಿಕ ಅನಿಲ ಭಾರತದಲ್ಲೂ ಲಭ್ಯ ಇದೆ. ಭಾರತಕ್ಕೆ ಬೇಕಾದ ಪಿಎನ್​ಜಿಯಲ್ಲಿ ಅರ್ಧದಷ್ಟು ಭಾರತದಲ್ಲೇ ಲಭ್ಯ ಇದೆ. ಉಳಿದವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಆಮದು ಮಾಡಿಕೊಳ್ಳಲು ಒಂದು ಪ್ರದೇಶದ ಮೇಲೆ ಅವಲಂಬಿತವಾಗದೆ, ಅಮೆರಿಕ, ಆಸ್ಟ್ರೇಲಿಯಾ ಇತ್ಯಾದಿ ಹಲವಾರು ರಾಷ್ಟ್ರಗಳಿಂದ ಅದನ್ನು ಪಡೆಯಲಾಗುತ್ತಿದೆ. ಹೀಗಾಗಿ, ಪಿಎನ್​ಜಿ ಪೂರೈಕೆಯಲ್ಲಿ ಭಾರತಕ್ಕೆ ಅಷ್ಟೇನೂ ತೊಂದರೆ ಆಗದಿರಬಹುದು.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಭಾರತದಲ್ಲಿ ಪಿಎನ್​ಜಿ ಸಂಪರ್ಕ ಪಡೆಯುವುದು ಹೇಗೆ?

ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪಿಎನ್​ಜಿ ಸಂಪರ್ಕ ಸೌಲಭ್ಯ ಇದೆ. ಇಂಡಿಯನ್ ಆಯಿಲ್, ಬಿಪಿಸಿಎಲ್, ಅದಾನಿ ಟೋಟಲ್ ಗ್ಯಾಸ್, ಜಿಎಐಎಲ್ ಇತ್ಯಾದಿ ಸಂಸ್ಥೆಗಳು ಪಿಎನ್​ಜಿ ಸೌಲಭ್ಯ ನೀಡುತ್ತವೆ. ಐಜಿಎಲ್, ಎಂಜಿಎಲ್, ಆವಂತಿಕಾ ಗ್ಯಾಸ್, ಜಿಜಿಎಲ್ ಇತ್ಯಾದಿ ಇನ್ನೂ ಅನೇಕ ಸಂಸ್ಥೆಗಳು ಈ ಸೇವೆ ನೀಡುತ್ತವೆ. ಬೆಂಗಳೂರಿನಲ್ಲಿ ಜಿಎಐಎಲ್ ಸಂಸ್ಥೆ ಪಿಎನ್​ಜಿ ಸಂಪರ್ಕ ನೀಡುತ್ತದೆ. ಜಿಎಐಎಲ್​ನ ಅಧಿಕೃತ ವೆಬ್​ಸೈಟ್​ಗೆ ಹೋಗಿ ನೀವಿರುವ ಪ್ರದೇಶದ ಸಮೀಪ ಪಿಎನ್​ಜಿ ಜಾಲ ಇದ್ದರೆ ಪರಿಶೀಲಿಸಿ, ಕನೆಕ್ಷನ್​ಗೆ ಅರ್ಜಿ ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂಡಿಯಾ ಪೋಸ್ಟ್‌ನಿಂದ ನೆಕ್ಸ್ಟ್-ಡೇ ಡೆಲಿವರಿ ಸೇವೆ: ಬೆಂಗಳೂರು ಸೇರಿ ಲಿಸ್ಟ್​​ನಲ್ಲಿರುವ ನಗರಗಳ ಪಟ್ಟಿ ಇಲ್ಲಿದೆ

ಬೆಂಗಳೂರು, ಮಾರ್ಚ್​​ 16: ಪಾರ್ಸೆಲ್‌ಗಳು, ಕಾನ್ಸೈನ್‌ಮೆಂಟ್‌ಗಳು ಮತ್ತು ಇತರ ಅಂಚೆ ವಸ್ತುಗಳನ್ನು 24 ಗಂಟೆಗಳೊಳಗೆ ತಲುಪಿಸುವ ಹೊಸ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸಲು ಇಂಡಿಯಾ ಪೋಸ್ಟ್ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ’24 ಸ್ಪೀಡ್ ಪೋಸ್ಟ್’ ಎಂಬ ಈ ಹೊಸ ಸೇವೆಯನ್ನು ಮಾರ್ಚ್ 17ರಿಂದ (ನಾಳೆ) ಆರಂಭಿಸಲಾಗುತ್ತಿದ್ದು, ತುರ್ತು ಹಾಗೂ ಸಮಯಕ್ಕೆ ತಲುಪಬೇಕಾದ ಪಾರ್ಸೆಲ್‌ಗಳಿಗೆ ಮರುದಿನವೇ ಗ್ಯಾರಂಟಿ ಡೆಲಿವರಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಈ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ನವದೆಹಲಿಯ ಆಕಾಶವಾಣಿ ಭವನದ ರಂಗ ಭವನ ಸಭಾಂಗಣದಲ್ಲಿ ಮಧ್ಯಾಹ್ನ 12:30ಕ್ಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸೇವೆಯ ವಿಶೇಷತೆಗಳು

‘24 ಸ್ಪೀಡ್ ಪೋಸ್ಟ್’ ಸೇವೆ ಮೂಲಕ ಪ್ರಮುಖ ಮಹಾನಗರಗಳಲ್ಲಿ ಮುಂದಿನ ದಿನವೇ (Next-Day) ಖಚಿತ ಡೆಲಿವರಿ ಸೌಲಭ್ಯ ಲಭ್ಯವಾಗಲಿದೆ. ಇದಲ್ಲದೆ OTP ಆಧಾರಿತ ಸುರಕ್ಷಿತ ಡೆಲಿವರಿ, ಎಂಡ್-ಟು-ಎಂಡ್ ಟ್ರ್ಯಾಕಿಂಗ್ ವ್ಯವಸ್ಥೆ, SMS ಅಲರ್ಟ್ ಮೂಲಕ ಪಾರ್ಸೆಲ್ ಸ್ಥಿತಿ ಮಾಹಿತಿ ಸೇರಿ ಹಲವು ಸೌಲಭ್ಯಗಳು ದೊರೆಯಲಿವೆ.

ಯಾವ್ಯಾವ ನಗರಗಳಲ್ಲಿ ಸೇವೆ ಲಭ್ಯ?

ಮೊದಲ ಹಂತದಲ್ಲಿ ಈ ಸೇವೆ ದೇಶದ ಆರು ಪ್ರಮುಖ ಮಹಾನಗರಗಳಲ್ಲಿ ಲಭ್ಯವಾಗಲಿದೆ. ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ಸೇವೆ ಶುರುವಾಗಲಿದೆ. ಇದರ ಜೊತೆಗೆ D+1 ದಿನದಲ್ಲಿ ತಲುಪುವ ‘24 ಸ್ಪೀಡ್ ಪೋಸ್ಟ್’ ಹಾಗೂ D+2 ದಿನಗಳಲ್ಲಿ ತಲುಪುವ ‘48 ಸ್ಪೀಡ್ ಪೋಸ್ಟ್’ ಸೇವೆಗಳನ್ನೂ ಆರಂಭಿಸಲಾಗುತ್ತದೆ. ಇದಕ್ಕಾಗಿ ವಿಶೇಷ ಪ್ರೊಸೆಸಿಂಗ್ ವಿಂಡೋಗಳು ಮತ್ತು ಆದ್ಯತೆಯ ಏರ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಇರಲಿದೆ.

ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯ

ಡೆಲಿವರಿ ತಡವಾದರೆ ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯವೂ ಇರಲಿದೆ. ಅಂಚೆ ಇಲಾಖೆಯನ್ನು ದೇಶದ ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ, ಪಾರ್ಸೆಲ್ ಪ್ರೊಸೆಸಿಂಗ್ ಮತ್ತು ಡೆಲಿವರಿ ವ್ಯವಸ್ಥೆಯನ್ನು ಆಧುನಿಕಗೊಳಿಸಲಾಗಿದೆ. ದೇಶದಾದ್ಯಂತ ವೇಗ, ವಿಶ್ವಾಸಾರ್ಹತೆ ಹಾಗೂ ಗ್ರಾಹಕ ಅನುಭವವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋಮಾದಿಂದ ಹೊರಬರುವ ಸಮಯ ಪ್ರತಿಯೊಬ್ಬರಲ್ಲಿಯೂ ಭಿನ್ನವಾಗಿರುವುದಕ್ಕೆ ಕಾರಣವೇನು?

ಕೋಮಾ ಒಂದು ಗಂಭೀರ ವೈದ್ಯಕೀಯ ಸ್ಥಿತಿ ಆಗಿದ್ದು, ಇದು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಿಮಗೆ ತಿಳಿದಿರಬಹುದು ಕೋಮಾ (Coma) ಎಂದರೆ ವ್ಯಕ್ತಿ ದೀರ್ಘಕಾಲದ ವರೆಗೆ ಅಚೇತನ ಸ್ಥಿತಿಯಲ್ಲಿ ಇರುವ ಗಂಭೀರ ಆರೋಗ್ಯ ಪರಿಸ್ಥಿತಿ. ಈ ಸಂದರ್ಭದಲ್ಲಿ ವ್ಯಕ್ತಿ ಸುತ್ತಮುತ್ತ ನಡೆಯುತ್ತಿರುವ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವ್ಯಕ್ತಿ ಎಚ್ಚರಗೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಸಾಮಾನ್ಯವಾಗಿ ಮಾತನಾಡಲು ಅಥವಾ ಚಲಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಎಂದಾದರೂ ಗಮನಿಸಿದ್ದೀರಾ, ಕೋಮಾದಿಂದ ಹೊರಬರುವ ಸಮಯ ಏಕೆ ಪ್ರತಿ ರೋಗಿಯಲ್ಲೂ ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ಈ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸಾಮಾನ್ಯವಾಗಿ ಮೆದುಳಿಗೆ ಗಂಭೀರ ಗಾಯವಾಗುವುದು, ಬ್ರೇನ್ ಸ್ಟ್ರೋಕ್, ಆಮ್ಲಜನಕದ ಕೊರತೆ, ಸೋಂಕು, ಮದ್ಯ ಅಥವಾ ಔಷಧಿಗಳ ಅತಿಯಾದ ಸೇವನೆ ಅಥವಾ ಗಂಭೀರ ಕಾಯಿಲೆಗಳ ಕಾರಣದಿಂದ ಕೋಮಾ ಉಂಟಾಗಬಹುದು. ಮೆದುಳಿಗೆ ಬೇಕಾದಷ್ಟು ಆಮ್ಲಜನಕ ಅಥವಾ ರಕ್ತ ದೊರೆಯದಾಗ ಅದರ ಸಾಮಾನ್ಯ ಕಾರ್ಯಗಳು ಅಸ್ತವ್ಯಸ್ತವಾಗುತ್ತವೆ ಮತ್ತು ವ್ಯಕ್ತಿ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆ ಇರುತ್ತದೆ. ಕೋಮಾ ಸ್ಥಿತಿಯಲ್ಲಿ ರೋಗಿಗೆ ಆಹಾರ, ಉಸಿರಾಟ ಹಾಗೂ ದೇಹದ ಇತರ ಕ್ರಿಯೆಗಳನ್ನು ನಿರ್ವಹಿಸಲು ವೈದ್ಯಕೀಯ ಸಹಾಯ ಅಗತ್ಯವಾಗಬಹುದು. ಕೆಲವೊಮ್ಮೆ ರೋಗಿಗೆ ಸುತ್ತಮುತ್ತಲಿನ ಧ್ವನಿಗಳು ಕೇಳಿಸಬಹುದು, ಆದರೆ ನೀಡಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿ ಕೆಲವೇ ದಿನಗಳ ಕಾಲ ಇರಬಹುದು ಅಥವಾ ಕೆಲವೊಮ್ಮೆ ಬಹಳ ವರ್ಷಗಳ ಕಾಲ ಮುಂದುವರಿಯಬಹುದು. ಆದ್ದರಿಂದ ಕೋಮಾವನ್ನು ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಹರೀಶ್ ರಾಣಾ ಪ್ರಕರಣದ ಬೆನ್ನಲ್ಲೇ ಹೊಸ ಚರ್ಚೆ: ಕೋಮಾ ಮತ್ತು ಬ್ರೈನ್ ಡೆಡ್ಗೂ ಏನೆಲ್ಲಾ ವ್ಯತ್ಯಾಸ?

ಕೋಮಾದಿಂದ ಹೊರಬರುವ ಸಮಯ ಏಕೆ ವಿಭಿನ್ನವಾಗಿರುತ್ತದೆ?

ದೆಹಲಿ ಜಿಬಿ ಪಂತ್ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ದಲ್ಜೀತ್ ಸಿಂಗ್ ಅವರು ಹೇಳುವ ಪ್ರಕಾರ, ಕೋಮಾದಿಂದ ಹೊರಬರುವ ಅವಧಿ ಪ್ರತಿ ರೋಗಿಯಲ್ಲೂ ವಿಭಿನ್ನವಾಗಿರುತ್ತದೆ. ಇದು ಮೆದುಳಿಗೆ ಎಷ್ಟರ ಮಟ್ಟಿಗೆ ಹಾನಿಯಾಗಿದೆ ಮತ್ತು ಕೋಮಾ ಯಾವ ಕಾರಣದಿಂದ ಉಂಟಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮೆದುಳಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದ್ದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿದ್ದರೆ, ರೋಗಿ ಕೆಲವೇ ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಮೆದುಳಿಗೆ ಗಂಭೀರ ಗಾಯವಾಗಿದ್ದರೆ ಅಥವಾ ದೀರ್ಘಕಾಲ ಆಮ್ಲಜನಕದ ಕೊರತೆ ಉಂಟಾಗಿದ್ದರೆ, ಚೇತರಿಕೆ ಪಡೆಯಲು ಹೆಚ್ಚು ಸಮಯ ಬೇಕಾಗಬಹುದು. ರೋಗಿಯ ವಯಸ್ಸು, ದೇಹದ ಸ್ಥಿತಿ ಮತ್ತು ಈಗಾಗಲೇ ಇರುವ ಕಾಯಿಲೆಗಳೂ ಕೂಡ ಪ್ರಮುಖ ಪಾತ್ರವಹಿಸುತ್ತವೆ. ಕೆಲವೊಮ್ಮೆ ರೋಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ ಮತ್ತು ಕಾಲಕ್ರಮೇಣ ಅವನ ಪ್ರತಿಕ್ರಿಯೆಗಳು ಸುಧಾರಿಸುತ್ತವೆ. ಆದ್ದರಿಂದ ಕೋಮಾದಿಂದ ಹೊರಬರುವ ಅವಧಿ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ.

ಚಿಕಿತ್ಸೆ ಮತ್ತು ಆರೈಕೆ ಅತ್ಯಂತ ಮುಖ್ಯ

ಕೋಮಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ನಿರಂತರ ಆರೈಕೆ ಅತ್ಯಂತ ಅಗತ್ಯವಾಗಿದೆ. ವೈದ್ಯರು ಮೊದಲಿಗೆ ಕೋಮಾ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ ಮತ್ತು ಅದರ ಆಧಾರದ ಮೇಲೆ ಚಿಕಿತ್ಸೆ ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ರೋಗಿಗೆ ವೆಂಟಿಲೇಟರ್ ಅಥವಾ ಇತರ ಲೈಫ್ ಸಪೋರ್ಟ್ ವ್ಯವಸ್ಥೆಗಳ ಅಗತ್ಯವಾಗಬಹುದು. ಜೊತೆಗೆ ದೇಹದ ಪ್ರಮುಖ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಔಷಧಿಗಳು ಮತ್ತು ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯ ನಿಯಮಿತ ಪರೀಕ್ಷೆ, ಸರಿಯಾದ ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆ ಕೂಡ ಬಹಳ ಮುಖ್ಯವಾಗಿವೆ. ಕುಟುಂಬ ಸದಸ್ಯರು ಮತ್ತು ವೈದ್ಯಕೀಯ ತಂಡದ ಉತ್ತಮ ಆರೈಕೆಯಿಂದ ರೋಗಿಯ ಸ್ಥಿತಿಯಲ್ಲಿ ನಿಧಾನವಾಗಿ ಸುಧಾರಣೆ ಕಂಡುಬರುವ ಸಾಧ್ಯತೆ ಹೆಚ್ಚುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version