ಪತಿಯನ್ನು ಬಿಡುವಂತೆ ಠಾಣೆಗೆ ಬಂದಿದ್ದ ಮಹಿಳೆಯನ್ನು ಮಂಚಕ್ಕೆ ಕರೆದ ಇನ್ಸ್​ಪೆಕ್ಟರ್!

ಪತಿಯನ್ನು ಬಿಡುವಂತೆ ಠಾಣೆಗೆ ಬಂದಿದ್ದ ಮಹಿಳೆಯನ್ನು ಮಂಚಕ್ಕೆ ಕರೆದ ಇನ್ಸ್​ಪೆಕ್ಟರ್!

ಮಂಗಳೂರು, (ಮಾರ್ಚ್ 16): ದೂರು ಕೊಡಲೆಂದು ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆಗೆ (Woman) ಇನ್ಸ್​ಪೆಕ್ಟರ್ (Inspector) ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಮೂಡಬಿದ್ರೆ ಪೊಲೀಸ್​ ಇನ್ಸ್​ಪೆಕ್ಟರ್​ ಸಂದೇಶ್ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ಸುಳ್ಳು ಕೇಸ್ ನಲ್ಲಿ ಬಂಧನಕ್ಕೊಳಗಾದ ಪತಿಯನ್ನು ಬಿಡುಗಡೆ ಮಾಡುವಂತೆ ಮಹಿಳೆ, ಮೂಡಬಿದ್ರೆ ಪೊಲೀಸ್ ಠಾಣೆಗೆ ತೆರಳಿದ್ದು, ಈ ವೇಳೆ ಇನ್ಸ್​ಪೆಕ್ಟರ್​ ಸಂದೇಶ, ಪತಿಯನ್ನು ಬಿಡುಗಡೆ ಮಾಡಲು 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳೆಯ ಆರೋಪವೇನು?

ಪ್ರಕರಣವೊಂದರಲ್ಲಿ ಮೂಡಬಿದ್ರೆ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದು, ಸಂಬಂಧ ಬಂಧಿತ ವ್ಯಕ್ತಿಯ ಪತ್ನಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾಳೆ. ಈ ವೇಳೆ ಇನ್ಸ್​ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎಂದು ಸ್ವತಃ ಮಹಿಳೆಯೇ ಆರೋಪಿಸಿದ್ದಾರೆ. ತಿಯನ್ನು ಬಿಡಬೇಕಂದ್ರೆ ಲೈಂಗಿಕವಾಗಿ ಸಹಕರಿಸು. ಇಲ್ಲ 25 ಲಕ್ಷ ರೂಪಾಯಿ ಕೊಡಬೇಕು. ಇಲ್ಲಿ ಪೋಸ್ಟ್​ಗಾಗಿ ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಹಣ ಕೊಡದಿದ್ರೆ ನಿನ್ನ ಪತಿ ಮೇಲೆ ರೌಡಿಶೀಟ್ ಓಪನ್ ಮಾಡುತ್ತೇನೆ ಎಂದು ಇನ್ಸ್​ಪೆಕ್ಟರ್ ಸಂದೇಶವನ್ನ ಬೆದರಿಕೆ ಹಾಕಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.

ನೂರಾರು ಮಹಿಳೆಯರು ಇದೇ ರೀತಿ ನನ್ನ ಜೊತೆಗೆ ಇದ್ದಾರೆ. ಅವರಂತೆ ನೀನು ಕೂಡ ಲೈಂಗಿಕವಾಗಿ ಸಹಕರಿಸು. ಇಲ್ಲದಿದ್ರೆ ಡ್ರಗ್ಸ್​ ಪೆಡ್ಲರ್​ಗಳಿಗೆ ಹೇಳಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಇನ್ಸ್​ಪೆಕ್ಟರ್​ ಸಂದೇಶ್ ಧಮ್ಕಿ ಹಾಕಿದ್ದಾಗಿ ಸಂತ್ರಸ್ತ ಮಹಿಳೆ ಹೇಳಿದ್ದಾರೆ.

ಈ ಸಂಬಂಧ ಮಹಿಳೆ, ಇನ್ಸ್​ಪೆಕ್ಟರ್​ ಸಂದೇಶ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಉಪಯೋಗವಾಗಿಲ್ಲ. ಪಿಐ ಸಂದೇಶ ಮೇಲೆ ಮೇಲಾಧಿಕಾರಿಗಳಿಗಳ ಕೃಪಾಕಟಾಕ್ಷ‌ ಇದೆ. ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾವು ಕೇಳಿದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ; ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಪ್ರತಿಕ್ರಿಯೆ

ವಾಷಿಂಗ್ಟನ್, ಮಾರ್ಚ್ 16: ಇರಾನ್ ಜೊತೆಗಿನ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ, ಎಲ್ಲವನ್ನೂ ಧ್ವಂಸಗೊಳಿಸಲಾಗಿದೆ ಎಂದಿದ್ದ ಟ್ರಂಪ್ ಇರಾನ್ ಕದನವಿರಾಮಕ್ಕೆ ರೆಡಿ ಇದ್ದರೂ ನಾವು ಸಿದ್ಧರಿಲ್ಲ ಎಂದಿದ್ದರು. ಆದರೆ, ನಿನ್ನೆ ಬೇರೆ ರೀತಿಯದ್ದೇ ಹೇಳಿಕೆ ನೀಡಿರುವ ಅವರು ನಾವು ಇರಾನ್ ಜೊತೆ ಯುದ್ಧ ನಿಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ.

ಇರಾನ್- ಇಸ್ರೇಲ್, ಅಮೆರಿಕದ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಅಮೆರಿಕ ಇರಾನ್ ಜೊತೆ ಚರ್ಚೆ ನಡೆಸುತ್ತಿದೆ. ಆದರೆ ಯುದ್ಧವನ್ನು ಕೊನೆಗೊಳಿಸಲು ಇರಾನ್ ಒಪ್ಪಂದಕ್ಕೆ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ

ಭಾನುವಾರ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್, “ಹೌದು, ನಾವು ಇರಾನ್ ಜೊತೆ ಮಾತನಾಡುತ್ತಿದ್ದೇವೆ” ಎಂದಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹರಡಿರುವ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ತಲ್ಲಣಗೊಳಿಸಿರುವ ಸಂಘರ್ಷವನ್ನು ಕೊನೆಗೊಳಿಸಲು ಯಾವುದಾದರೂ ರಾಜತಾಂತ್ರಿಕತೆ ನಡೆಯುತ್ತಿದೆಯೇ ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಟ್ರಂಪ್, “ನಾವು ಮಾತುಕತೆ ನಡೆಸುತ್ತಿದ್ದೇವೆ. ಆದರೆ ಅವರು ಯುದ್ಧ ನಿಲ್ಲಿಸಲು ಸಿದ್ಧರಾಗಿದ್ದಾರೆಂದು ನನಗೆ ಅನಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್

ಇದಕ್ಕೂ ಮುನ್ನ ಇರಾನ್‌ನ ವಿದೇಶಾಂಗ ಸಚಿವರು ಅಮೆರಿಕದ ಜೊತೆ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಫೆಬ್ರವರಿ 28ರಂದು, ಇರಾನ್‌ನ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಡಜನ್​ಗಟ್ಟಲೆ ಇರಾನಿನ ಹಿರಿಯ ಅಧಿಕಾರಿಗಳು ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಮೊದಲ ದಿನದಂದೇ ಪ್ರಾಣ ಕಳೆದುಕೊಂಡರು. ಇದಾದ ನಂತರ ಇರಾನ್ ಕೂಡ ಪ್ರತೀಕಾರದ ದಾಳಿ ನಡೆಸಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳು ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕರಾವಳಿ ಕಥೆಯ ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡು

ಕರಾವಳಿ ಭಾಗದ ಕಥೆ ಹೊಂದಿರುವ ಸಿನಿಮಾಗಳಿಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಸಿನಿಮಾಗಳ ಸಾಲಿಗೆ ‘ಮ್ಯಾರೇಜ್ ಪಾರ್ಟಿ’ (Marriage Party) ಕೂಡ ಸೇರ್ಪಡೆ ಆಗಲಿದೆ. ಈ ಮೊದಲು ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ‘ಅಧಿಪತ್ರ’ ಸಿನಿಮಾದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದ ಚಯನ್ ಶೆಟ್ಟಿ ಅವರು ಈಗ ‘ಮ್ಯಾರೇಜ್ ಪಾರ್ಟಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಆಗಿರಲಿದ್ದು, ಹಲವು ಹಾಸ್ಯ ಕಲಾವಿದರು ಅಭಿನಯಿಸುತ್ತಿದ್ದಾರೆ. ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು (Prakash Thuminad), ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ರಕ್ಷಿತಾ, ನಮಿತಾ ಕಿರಣ್, ರಘು ಪಾಂಡೇಶ್ವರ, ರಾಮ್‌ದಾಸ್, ಪುಷ್ಪರಾಜ್ ಬೋಳಾರ್ ಮುಂತಾದವರು ನಟಿಸುತ್ತಿದ್ದಾರೆ.

ನಿರ್ದೇಶಕ ಚಯನ್ ಶೆಟ್ಟಿ ಅವರ ಚೊಚ್ಚಲ ಸಿನಿಮಾ ‘ಅಧಿಪತ್ರ’ಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಅವರು ‘ಮ್ಯಾರೇಜ್ ಪಾರ್ಟಿ’ ಮೂಲಕ ಸಂಪೂರ್ಣ ಮನರಂಜನೆಯ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಲಿದ್ದಾರೆ. ಯಾವುದೇ ಸದ್ದು ಗದ್ದಲ ಇಲ್ಲದೇ ಈ ಸಿನಿಮಾಗೆ ಮೊದಲ ಹಂತದ ಚಿತ್ರೀಕರಣ ಮುಗಿಸಲಾಗಿದೆ. ‘ಇದು ಹಾಸ್ಯಪ್ರಧಾನ ಸಿನಿಮಾ. ಗಟ್ಟಿ ಕಥೆಯೊಂದಿಗೆ ಪ್ರತಿ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿ ಇರಲಿದೆ’ ಎಂದು ಚಿತ್ರತಂಡ ಹೇಳಿದೆ.

ಒಂದು ಊರಿನಲ್ಲಿ ನಡೆಯುವ ಫನ್ನಿ ಘಟನೆಗಳ ಸುತ್ತ ‘ಮ್ಯಾರೇಜ್ ಪಾರ್ಟಿ’ ಸಿನಿಮಾದ ಕಥೆ ಸಾಗುತ್ತದೆ. ಕುಂದಾಪುರದ ಲೊಕೇಷನ್​ಗಳಲ್ಲಿ ಶೂಟಿಂಗ್ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 2ನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಸಿನಿಮಾದಲ್ಲಿ ವಿನೀತ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.

ಈಗಾಗಲೇ ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಪರಿಚಯ ಆಗಿರುವ ವಿನೀತ್ ಕುಮಾರ್ ಅವರು ಈಗ ‘ಮ್ಯಾರೇಜ್ ಪಾರ್ಟಿ’ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಕುಂದಾಪುರ ಮೂಲದವರಾದ ನಿರ್ದೇಶಕ ಚಯನ್ ಶೆಟ್ಟಿ ಅವರು ತಮ್ಮೂರಿನಲ್ಲಿ ನಡೆಯುವ ಮಜವಾದ ಕಥೆಯೊಂದನ್ನು ‘ಮ್ಯಾರೇಜ್ ಪಾರ್ಟಿ’ ಸಿನಿಮಾದಲ್ಲಿ ಹೇಳಲಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಜೊತೆ ಕನ್ನಡದ ನಟಿ ನಿಮಿಕಾ ರತ್ನಾಕರ್ ಫೋಟೋ ವೈರಲ್

ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ನಿರ್ಮಾಪಕ ಸಂತೋಷ್ ವಿ. ಅವರು ‘ವರಾಹಿ ಫಿಲ್ಮ್ಸ್’ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಶ್ರೀಕಾಂತ್ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ ನಿರ್ದೇಶನ, ನಿತಿನ್ ಶೆಟ್ಟಿ ಅವರ ಸಂಕಲನ ಈ ಸಿನಿಮಾಗೆ ಇರಲಿದೆ. ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ಚುನಾವಣೆ: ಕರಡು ಮತಪಟ್ಟಿ ಮತ್ತು ಮತಚೋರಿಯ ಸತ್ಯ ಅನಾವರಣ

ಹಲವು ವರ್ಷಗ ದರೋಡೆ ಹಾಗೂ ಅಧಿಕಾರಿಗಳ ಉತ್ಸವದ ಬಳಿಕ ಬಿಬಿಎಂಪಿಯನ್ನು ಜಿಬಿಎ ಎನ್ನುವ ದೊಡ್ಡ ನಾಟಕ ಮಂಡಳಿ ಮಾಡಿ ಚುನಾವಣೆಗೆ ತಯಾರಿ ನಡೆಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈಗ ಶನಿವಾರದಂದು ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿರುವ ಕರಡು ಮತಪಟ್ಟಿಯು ಕಾಂಗ್ರೆಸ್‌ನ ನಾಟಕ ಹಾಗೂ ಸುಳ್ಳುಗಳನ್ನು ಅನಾವರಣ ಮಾಡಿದೆ. ಹಾಗೆಯ ಮತಚೋರಿ ಎನ್ನುವುದು ರಾಹುಲ್‌ ಗಾಂಧಿ ಪಟಾಲಂನ ಸುಳ್ಳುಗಳ ಸರಣಿಯ ಮುಂದುವರಿದ ಭಾಗ ಎನ್ನುವುದು ಖಾತ್ರಿಯಾಗುತ್ತದೆ. ಆದರೀಗ ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಮಾಡಿರುವ ‘ಮತಚೋರಿ’ಯನ್ನು ನಾನು ಅನಾವರಣ ಮಾಡುತ್ತೇನೆ.

ಶನಿವಾರ ಸಂಜೆ ಮಲಗುವ ವೇಳೆಗೆ ಜಿಬಿಎ ಕರಡು ಮತಪಟ್ಟಿ ಬಿಡುಗಡೆ ಎನ್ನುವ ನೋಟಿಫಿಕೇಷನ್‌ ನನ್ನ ಮೊಬೈಲ್‌ಗೆ ಬಂತು. ಕೂಡಲೇ ಜಿಬಿಎ ವೆಬ್‌ಸೈಟ್‌ ಹೋಗಿ ನನ್ನ ಹೆಸರು ಹುಡುಕುವ ಪ್ರಯತ್ನ ಮಾಡಿದೆ. ಸತತ ಅರ್ಧಗಂಟೆಯ ಹರಸಾಹಸದ ಬಳಿಕ ಕೊನೆಗೂ ನಮ್ಮ ಬಡಾವಣೆಯಲ್ಲಿನ ಮತಪಟ್ಟಿಯಲ್ಲಿ ಹೆಸರು ಕಾಣಿಸಿತು. ಬಳಿಕ ನನ್ನ ಹೆಂಡತಿಯ ಹೆಸರನ್ನು ನಾಲ್ಕು ಬಾರಿ ಹುಡುಕಿದರೂ ಸಿಗಲಿಲ್ಲ. ಮತ್ತೆ ಬೆಳಗ್ಗೆ ಎದ್ದು ಲ್ಯಾಪ್‌ಟಾಪ್‌ನಲ್ಲಿ ಹುಡುಕಿದೆ. ಮತಪಟ್ಟಿಯಿಂದ ಆಕೆಯ ಹೆಸರು ಮಾಯವಾಗಿತ್ತು. ಇದಾದ ಬಳಿಕ ಆಕೆಯ ಹೆಸರನ್ನು ಕೇಂದ್ರ ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಹುಡುಕಿದೆ. ಅಲ್ಲಿಯ ಆಕೆಯ ಮತಪತ್ರದ ಎಲ್ಲ ವಿವರ ಹಾಗೂ ಮತಕೇಂದ್ರದ ಮಾಹಿತಿ ಕೂಡ ಇದೆ. ಅದರ ಜೊತೆಗೆ ಸಿರೀಯಲ್‌ ನಂಬರ್‌ ಕೂಡ ಲಭ್ಯವಿದೆ. ಬಳಿಕ ನನ್ನ ಮಾಹಿತಿಯನ್ನು ಪರಿಶೀಲಿಸಿದಾಗ ಒಂದಿಷ್ಟು ಸಮಸ್ಯೆ ಕಾಣಿಸಿತು. ನನ್ನ ಸಿರೀಯಲ್‌ ನಂಬರ್‌, ಮತಕೇಂದ್ರದ ಸಂಖ್ಯೆ ಬದಲಾಗಿತ್ತು. ಆಗ ರಾಜ್ಯ ಚುನಾವಣೆ ಆಯೋಗ ಹೀಗೆ ನಾಟಕವಾಡಿರಬಹುದು ಎನ್ನುವ ಸಂಶಯ ನನಗೆ ಮೂಡಲಾರಂಭಿಸಿತು.

ನಾನು ಕಳೆದ ಲೋಕಸಭೆ ಚುನಾವಣೆಯ ವೇಳೆಯಲ್ಲಿ ನನ್ನ ಹೆಂಡತಿಯ ಹೆಸರನ್ನು ಸಾಗರ ವಿಧಾನಸಭೆ ಕ್ಷೇತ್ರದ ಮತಪಟ್ಟಿಯಿಂದ ಬೆಂಗಳೂರಿನ ಹಾಲಿ ವಿಳಾಸಕ್ಕೆ ವರ್ಗಾಯಿಸಿದ್ದೆ. ನಿಯಮದಂತೆ ಅದು ವರ್ಗಾವಣೆಯಾಗಿ ಸ್ಥಳೀಯ ಮತಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಹಾಗೆಯೇ ಆಕೆಯು ಕಳೆದ ಲೋಕಸಭೆ ಚುನಾವಣೆಯ ವೇಳೆಗೆ ಮತದಾನವನ್ನೂ ಮಾಡಿದ್ದಳು. ಆದರೆ ಜಿಬಿಎಯ ಕರಡು ಮತಪಟ್ಟಿಯಲ್ಲಿ ಇದು ಕಾಣಿಸಿಕೊಂಡಿಲ್ಲ. ಜೊತೆಗೆ ನಮ್ಮೆಲ್ಲರ ಸಿರೀಯಲ್‌ ನಂಬರ್‌ ಕೂಡ ಬದಲಾಗಿದೆ. ನನ್ನ ಗುಮಾನಿಯಂತೆ ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು 2023ರ ವಿಧಾನಸಭೆ ಚುನಾವಣೆಯ ಮತಪಟ್ಟಿಯನ್ನು ಇರಿಸಿಕೊಂಡು ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ. 2024ರಲ್ಲಿ ನೂತನ ಮತಪಟ್ಟಿ ಇರುವಾಗ ಹಳೆಯ ಮತಪಟ್ಟಿಗೆ ಹೋಗಿದ್ದೇಕೆ ಎನ್ನುವುದು ಸ್ಪಷ್ಟವಾಗಿಲ್ಲ. ಇವೆರಡು ಮತಪಟ್ಟಿಯಲ್ಲಿ ಯಾವ ʼರಾಜಕೀಯʼ ಅಡಗಿದೆ ಎನ್ನುವುದನ್ನು ಸಂವಿಧಾನ ರಕ್ಷಕ ಪಡೆಯೇ ಸ್ಪಷ್ಟಪಡಿಸಬೇಕಿದೆ. ಇನ್ನೊಂದೆಡೆ ನನ್ನ ಹೆಂಡತಿ ರೀತಿಯಲ್ಲಿ ಮತಪಟ್ಟಿಯಿಂದ ಅನಗತ್ಯವಾಗಿ ಹೊರ ಇರುವವರು ಮತ್ತೇಕೆ ನಿಮ್ಮ ಗ್ರೇಟ್‌ ಜಿಬಿಎ ಕಚೇರಿಗೆ ಅಲೆಯಬೇಕು ಎನ್ನುವ ಮಾಹಿತಿಯನ್ನು ಜನಸಾಮಾನ್ಯರಿಗೆ ಚುನಾವಣೆ ಆಯುಕ್ತರು ನೀಡಬೇಕಿದೆ.

ಇಂತಹ ದುರುದ್ದೇಶಪೂರ್ವಕವಾದ ಕ್ರಮಕ್ಕೆ ಒಂದು ಸುಳ್ಳನ್ನು ಸೇರಿಸಲಾಗಿದೆ. ಇವರ ಪ್ರಕಾರ ಕಳೆದ ಅಕ್ಟೋಬರ್‌ನಲ್ಲಿನ ಮಾಹಿತಿ ಪ್ರಕಾರ ಮತಪಟ್ಟಿ ಕರಡು ಪ್ರಕಟಿಸಲಾಗಿದೆ. ಎಂತಹ ವಿಪರ್ಯಾಸವೆಂದರೆ 2024ರ ಏಪ್ರಿಲ್‌ನಲ್ಲಿ ಪ್ರಕಟಿಸಿದ ಕರಡು ಪಟ್ಟಿಯಲ್ಲಿರುವ ನನ್ನ ಹೆಂಡತಿ ಹೆಸರು, ಇದ್ದಕ್ಕಿದ್ದಂತೆ ಮಾಯವಾಗಿದೆ. ಹಾಗಿದ್ದರೆ ನನ್ನ ಹೆಂಡತಿ ಹೆಸರು ಅಕ್ರಮವಾಗಿ ಮತಪಟ್ಟಿಗೆ ಸೇರಿದೆಯೆನ್ನುವ ಸಂಶಯದಿಂದ ರದ್ದು ಮಾಡಿರಬಹುದು ಎಂದು ಬಡಾವಣೆಯಲ್ಲಿ ವಿಚಾರಿಸಿದೆ. ಕಳೆದೊಂದು ವರ್ಷದಲ್ಲಿ ನಮ್ಮ ಬಡಾವಣೆಗೆ ಜಿಬಿಎ ಅಥವಾ ಹಿಂದಿನ ಬಿಬಿಎಂಪಿ ಯಾವುದೇ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಹಾಗೆಯೇ ನನ್ನ ಮೊಬೈಲ್‌ಗೆ ಈ ಸಂಬಂಧ ಯಾವುದೇ ಕರೆ ಕೂಡ ಬಂದಿಲ್ಲ. ಏಕೆಂದರೆ ನನ್ನ ಹೆಂಡತಿಯ ಮತಪತ್ರದಲ್ಲಿ ನನ್ನ ಮತಪತ್ರದ ಜೋಡಣೆಯಾಗಿದೆ. ಕೇಂದ್ರ ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ಹುಡುಕುವಾಗ ನನ್ನ ಸಂಬಂಧಿ ಎನ್ನುವುದು ಅಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಅಷ್ಟಕ್ಕೂ ರಾಜ್ಯ ಚುನಾವಣೆ ಆಯೋಗವು ಇಂತಹ ಯಾವುದೇ ಕೆಲಸ ಮಾಡಿರುವ ಹಾಗಿಲ್ಲ. ಬದಲಾಗಿ ʼಮಾಸ್ಟರ್‌ʼ ಅಣತಿಯಂತೆ 2023ರ ಮತಪಟ್ಟಿಯನ್ನು ಕಣ್ಮುಚ್ಚಿಕೊಂಡು ಮರು ಪ್ರಕಟಿಸಿದೆ.

ರಾಹುಲ್‌ ಅಣುಬಾಂಬ್‌ ಹಾಗೂ ಕರ್ನಾಟಕ

ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ರಾಹುಲ್‌ ಗಾಂಧಿ ಹಾಕಿದ್ದ ಅಣುಬಾಂಬ್‌ ಹಾಗೂ ಹೈಡ್ರೋಜನ್‌ ಬಾಂಬ್‌ ನಿಮಗೆಲ್ಲ ಗೊತ್ತಿದೆ. ಅದಾದ ಬಳಿಕ ಆ ಬಾಂಬ್‌ ಲೋಕಸಭೆಯಲ್ಲೂ ಸ್ಫೋಟವಾಗಿತ್ತು. ಆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಪದೇಪದೆ ಒಂದು ವಿಚಿತ್ರವಾದ ಬೇಡಿಕೆ ಇರಿಸಿದ್ದರು. ಮತಪಟ್ಟಿಯ ಪಿಡಿಎಫ್‌ ಫೈಲ್‌ನಲ್ಲಿ ಸರ್ಚ್‌ ಅವಕಾಶವನ್ನು ಡಿಸೇಬಲ್‌ ಮಾಡಲಾಗಿದೆ. ಸರ್ಚ್‌ ಅವಕಾಶ ಇರುವ ಮತಪಟ್ಟಿಯನ್ನು ನಮ್ಮ ಕೈಗೆ ಕೊಡಿ ಎಂದು ಪದೇಪದೆ ಬಾಂಬ್‌ ಹಾಕುತ್ತಲೇ ಇದ್ದರು. ಇಂತಹ ಪಟ್ಟಿ ನೀಡಿದರೆ ಸುಲಭವಾಗಿ ಚುನಾವಣೆ ಆಯೋಗದ ಅಕ್ರಮವನ್ನು ಬಯಲಿಗೆ ಹಾಕಬಹುದು ಎನ್ನುವುದು ರಾಹುಲ್‌ ಗಾಂಧಿ ವಾದವಾಗಿತ್ತು. ಆದರೆ ಮತಪಟ್ಟಿಯ ಸುರಕ್ಷತೆ ಹಾಗೂ ದುರ್ಬಳಕೆ ತಡೆಯುವ ಉದ್ದೇಶದಿಂದ ಅದು ಅಸಾಧ್ಯ ಎನ್ನುವುದು ಚುನಾವಣೆಯ ಬಗ್ಗೆ ಲವಲೇಶ ಗೊತ್ತಿರುವ ಅಲ್ಪಜ್ಞಾನಿಗೂ ಗೊತ್ತಿದೆ. ಅಂದ ಹಾಗೆ ರಾಹುಲ್‌ ಅಣತಿಯನ್ನು ಪಾಲಿಸುವ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ರಾಜ್ಯ ಚುನಾವಣೆ ಆಯೋಗ ಕೂಡ ಪಿಡಿಎಫ್‌ನಲ್ಲಿ ಸರ್ಚ್‌ ಅವಕಾಶ ಕೊಟ್ಟಿಲ್ಲ. ಅದನ್ನು ಕೊಡುವುದು ಸರಿಯಲ್ಲ ಎನ್ನುವ ವಾದಕ್ಕೆ ನಾನು ಈಗಲೂ ಬದ್ಧವಾಗಿದ್ದೇನೆ. ರಾಹುಲ್‌ ಗಾಂಧಿ ರೀತಿಯಲ್ಲಿ ಪರಿಸ್ಥಿತಿಗೆ ತಕ್ಕಂತೆ ನಿಲುವು ಬದಲಿಸಲು ಸಾಧ್ಯವಿಲ್ಲ. ಆದರೆ ಕೇವಲ ಸಕ್ರಮವನ್ನಷ್ಟೇ ಮಾಡುವ ಮಂದಿ ಮಾಡಿರುವ ತೆರೆಮರೆಯ ನಾಟಕವನ್ನು ನಿಮಗೆ ತಿಳಿಸಲೇಬೇಕು.

ಕೇಂದ್ರ ಚುನಾವಣೆಯ ಆಯೋಗದ ವೆಬ್‌ಸೈಟ್‌ಗೆ ಯಾವುದೇ ಕ್ಷಣದಲ್ಲಿ ಭೇಟಿ ನೀಡಿದರೂ ನಿಮ್ಮ ಹೆಸರು, ಮತಚೀಟಿಯ ಸಂಖ್ಯೆ ಹಾಗೂ ಮೊಬೈಲ್‌ ನಂಬರ್‌ ಮೂಲಕ ವಿವರವನ್ನು ಪಡೆಯುವ ಅವಕಾಶವಿದೆ. ಇದರಿಂದ ಸುಲಭವಾಗಿ ನಿಮ್ಮ ಮತಚೀಟಿಯ ವಿವರವನ್ನು ನೀವು ಹುಡುಕಬಹುದು. ಆದರೆ ರಾಜ್ಯ ಚುನಾವಣೆ ಆಯೋಗವು ಪ್ರಕಟಿಸಿರುವ ವೆಬ್‌ಸೈಟ್‌ನಲ್ಲಿ ಅತ್ಯಂತ ಬುದ್ಧಿವಂತಿಕೆಯ ಕೆಲಸ ಮಾಡಲಾಗಿದೆ. ಹೆಸರು ಹಾಗೂ ಮತಚೀಟಿ ಸಂಖ್ಯೆಯ ಮೂಲಕ ಸರ್ಚ್‌ ಮಾಡುವ ಅವಕಾಶವನ್ನು ತೋರಿಸಲಾಗಿದೆ. ಆದರೆ ಅದನ್ನು ಡಿಸೇಬಲ್‌ ಮಾಡಿ, ದೂರದಲ್ಲಿನ ಚಂದಮಾಮನನ್ನು ತೋರಿಸಿ ಆಸೆ ಹುಟ್ಟಿಸುವ ಕೆಲಸ ಮಾಡಲಾಗಿದೆ. ಅಂದರೆ ಕರಡು ಮತಪಟ್ಟಿಯಲ್ಲಿನ ದಾಖಲೆಯನ್ನು ಸಾಮಾನ್ಯ ಮತದಾರರು ಹುಡುಕಲು ಸಾಧ್ಯವೇ ಇಲ್ಲದಂತಹ ಕೌಶಲ್ಯವನ್ನು ಜಿಬಿಎಯ ಅಧಿಕಾರಿಗಳು ತೋರಿಸಿದ್ದಾರೆ. ಮುಂದಿನ ಕೆಂಪೆಗೌಡ ಪ್ರಶಸ್ತಿಯನ್ನು ಇವರಿಗೆ ನೀಡಬಹುದು. ಹಾಗೆಯೇ ಲೋಕಸಭೆಯಲ್ಲಿ ಕೇಂದ್ರ ಚುನಾವಣೆ ಅಯೋಗದ ಮುಖ್ಯ ಆಯುಕ್ತರ ಮಹಾಭಿಯೋಗಕ್ಕೆ ಮುಂದಾಗಿರುವಂತೆ, ರಾಜ್ಯದಲ್ಲಿಯೂ ಆ ಕೆಲಸ ಮಾಡಬಹುದು.

ಕಾಂಗ್ರೆಸ್‌ ಎನ್ನುವ ಪಕ್ಷವು ರಾಷ್ಟ್ರ ರಾಜಕೀಯದಿಂದ ಸುಖಾಸುಮ್ಮನೇ ಮಾಯವಾಗುತ್ತಿಲ್ಲ. ಈ ರೀತಿಯ ಇಬ್ಬಗೆಯ ನೀತಿ ಹಾಗೂ ದಿಕ್ಕು ದಿಸೆಯಲ್ಲದ ನಿಲುವಿನಿಂದ ಮತದರರ ಮನಸ್ಸಿನಿಂದ ದೂರವಾಗುತ್ತಿದೆ. ಒಂದೊಮ್ಮೆ ಕೇಂದ್ರ ಚುನಾವಣೆ ಆಯೋಗವು ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಸಾಧಿಸಿ ತೋರಿಸಬೇಕಿದ್ದರೆ, ರಾಜ್ಯ ಚುನಾವಣೆ ಆಯೋಗದ ಕೆಲಸದಲ್ಲಿ ಆ ಎಲ್ಲ ಸುಧಾರಣೆ, ಸಕ್ರಮಗಳನ್ನು ಜಾರಿ ಮಾಡಿ ಮಾದರಿಯಾಗಬೇಕು. ಆಗ ಜನರಿಗೂ ನಂಬಿಕೆ ಬರುತ್ತದೆ ಹಾಗೂ ನಿಮ್ಮ ಹೋರಾಟ ಸರಿಯಾಗಿದೆ ಎನ್ನುವುದು ಅರಿವಾಗುತ್ತದೆ. ಆದರೆ ಈ ಕಾಂಗ್ರೆಸ್‌ನವರು ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಟಾರ್ಚ್‌ ಹಿಡಿದುಕೊಂಡು ಹೋಗಿ ಬೀಳುತ್ತಾರೆ. ಇವರನ್ನು ಯಾರಿಂದಲೂ ಸುಧಾರಿಸಲು ಸಾಧ್ಯವಿಲ್ಲ. ಅಂದಹಾಗೆ ದೇಶದಲ್ಲಿನ ಕಾಂಗ್ರೆಸ್‌ ಹಾಗೂ ಕರ್ನಾಟಕದಲ್ಲಿನ ಬಿಜೆಪಿಗೆ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ನಿದ್ದೆಯಲ್ಲಿರುವ ನಾಯಕರಿಗೆ ಇಂತಹ ಸೂಕ್ಷ್ಮಗಳು ಗೊತ್ತಾಗುವಷ್ಟರಲ್ಲಿ ಜಿಬಿಎ ಚುನಾವಣೆ ಮುಗಿಯದಿದ್ದರೆ ಸಾಕು.

– ರಾಜೀವ್​​ ಹೆಗಡೆ, ಹಿರಿಯ ಪತ್ರಕರ್ತರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್

ಜೆರುಸಲೇಂ, ಮಾರ್ಚ್ 16: ಇಸ್ರೇಲ್ ತನ್ನ ವಾಯುಪಡೆಯು ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇರಾನ್‌ನ (Iran) ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವಿಮಾನವನ್ನು ರಾತ್ರೋರಾತ್ರಿ ಹೊಡೆದು ನಾಶಪಡಿಸಿರುವುದಾಗಿ ಘೋಷಿಸಿದೆ. ಈ ದಾಳಿಯು ಇರಾನ್‌ನ ಪ್ರಾದೇಶಿಕ ಸಮನ್ವಯಗಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಮೂಲಕ ಮಿತ್ರರಾಷ್ಟ್ರಗಳ ಜೊತೆ ಸಂಪರ್ಕ ಸಾಧಿಸಲು, ಮಿಲಿಟರಿ ಸಂಗ್ರಹಣೆಯನ್ನು ಸುಗಮಗೊಳಿಸಲು ಮತ್ತು ಸಂಬಂಧಗಳನ್ನು ನಿರ್ವಹಿಸಲು ಖಮೇನಿ ಮತ್ತು ಇರಾನಿನ ಇತರ ಹಿರಿಯ ಅಧಿಕಾರಿಗಳು ಈ ವಿಮಾನವನ್ನು ಬಳಸುತ್ತಿದ್ದರು ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಕೇವಲ ಅಮೆರಿಕ ಹಾಗೂ ಇಸ್ರೇಲ್​ಗೆ ಮಾತ್ರ ಮುಚ್ಚಿದೆ: ಇರಾನ್ ವಿದೇಶಾಂಗ ಸಚಿವ

“ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇರಾನ್ ನಾಯಕನ ವಿಮಾನವನ್ನು ನಮ್ಮ ವಾಯುಪಡೆಯು ನಾಶಪಡಿಸಿತು. ಈ ವಿಮಾನವನ್ನು ಇರಾನ್ ಭಯೋತ್ಪಾದಕ ಆಡಳಿತದ ನಾಯಕ ಅಲಿ ಖಮೇನಿ, ಇತರೆ ಹಿರಿಯ ಅಧಿಕಾರಿಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಇತರೆ ದೇಶಗಳೊಂದಿಗೆ ಸಂಪರ್ಕ ಸಾಧಿಸಲು, ಮಿಲಿಟರಿ ಸಂಗ್ರಹಣೆಯನ್ನು ಹೆಚ್ಚಿಸಲು ಮತ್ತು ಸಂಬಂಧಗಳನ್ನು ನಿರ್ವಹಿಸಲು ಬಳಸುತ್ತಿದ್ದರು” ಎಂದು ಇಸ್ರೇಲ್​ನ IAF ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದಿ ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಈ ತಿಂಗಳ ಆರಂಭದಲ್ಲಿ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ದೇಶದ ವಾಯುಪಡೆ ಇರಾನ್​ನ 16 ವಿಮಾನಗಳನ್ನು ಹೊಡೆದುರುಳಿಸಿತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅಂಗವಾದ ಕುದ್ಸ್ ಫೋರ್ಸ್ ಈ ವಿಮಾನಗಳನ್ನು ಬಳಸುತ್ತಿತ್ತು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಮುಖ್ಯವಾಗಿ ಲೆಬನಾನ್‌ನ ಹೆಜ್ಬೊಲ್ಲಾಗೆ ಪ್ರಾಕ್ಸಿ ಗುಂಪುಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಸಾಗಿಸಲು ಈ ವಿಮಾನ ಬಳಕೆಯಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮಾರ್ಚ್ 17ರೊಳಗೆ ಇರಾನ್‌ನಿಂದ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಬರಲಿದೆ; ಕೇಂದ್ರ ಸರ್ಕಾರ ಭರವಸೆ

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ 86 ವರ್ಷದ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಪ್ರಾದೇಶಿಕ ಸಂಘರ್ಷ ತೀವ್ರಗೊಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಲವಾರು ಗಲ್ಫ್ ರಾಷ್ಟ್ರಗಳಲ್ಲಿ ಇಸ್ರೇಲಿ ಮತ್ತು ಯುಎಸ್ ಗುರಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಇದಾದ ನಂತರ ಇರಾನ್ ಪ್ರಮುಖ ಜಾಗತಿಕ ಇಂಧನ ಕಾರಿಡಾರ್ ಆದ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತು. ಇದು ಅಂತಾರಾಷ್ಟ್ರೀಯ ತೈಲ ಸರಬರಾಜು, ಇಂಧನ ಮಾರುಕಟ್ಟೆಗಳು ಮತ್ತು ಜಾಗತಿಕ ಆರ್ಥಿಕ ಸ್ಥಿರತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಹಾರ್ಮುಜ್ ಜಲಸಂಧಿ ವಿಶ್ವದ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ನಿರ್ಣಾಯಕ ಸಮುದ್ರ ಮಾರ್ಗವಾಗಿದೆ. ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ, ಭಾರತ ಸೇರಿದಂತೆ ಹಲವು ದೇಶಗಳು ಇಂಧನದ ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಸದ್ಯಕ್ಕೆ ಇರಾನ್ ಭಾರತದ ಹಡಗುಗಳು ಈ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹಾಗೂ ಗ್ಯಾಸ್​ ಸಾಗಾಟ ಮಾಡಲು ಒಪ್ಪಿಗೆ ನೀಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಮಿತ್ರ ಜೆಡಿಎಸ್ ಮುಖಂಡ

ದಾವಣಗೆರೆ, (ಮಾರ್ಚ್ 16): ಕಾಂಗ್ರೆಸ್​​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಳದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕರಣವಾಗಲಿದೆ. ಇನ್ನು ಎಲೆಕ್ಷನ್ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಇತ್ತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿನಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಕಾಂಗ್ರೆಸ್, ಕ್ಷೇತ್ರವನ್ನು ಮರಳಿ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದರೆ ಇತ್ತ ಬಿಜೆಪಿ ಬೈ ಎಲೆಕ್ಷನಲ್ಲಿ ಕಮಲ ಅರಳಿಸುವ ತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ ಮುಖಂಡ ಕಾಂಗ್ರೆಸ್​ ಪರ ಬ್ಯಾಟಿಂಗ್ ಮಾಡಿದ್ದು, ಹೊಸ ಬಾಂಬ್ ಸಿಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಟೈಟಲ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ (Battle of Galwan) ಸಿನಿಮಾದ ಬಿಡುಗಡೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ ಈಗ ಯಾವುದೇ ಸೂಚನೆ ನೀಡದೇ ಚಿತ್ರತಂಡದವರು ಶೀರ್ಷಿಕೆ ಬದಲಾವಣೆ ಮಾಡಿದ್ದಾರೆ. ‘ಬ್ಯಾಟಲ್ ಆಫ್ ಗಲ್ವಾನ್’ ಬದಲಿಗೆ ‘ಮಾತೃಭೂಮಿ’ (Maatrubhoomi) ಎಂದು ನಾಮಕರಣ ಮಾಡಲಾಗಿದೆ. ಮಾರ್ಚ್ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ಸಲ್ಮಾನ್ ಖಾನ್ (Salman Khan), ‘ಯುದ್ಧಕ್ಕೆ ಶಾಂತಿ ಸಿಗಲಿ’ ಎಂಬ ಕ್ಯಾಪ್ಶನ್ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ರಕ್ತಸಿಕ್ತ ಮುಖದೊಂದಿಗೆ ಕಾಣಿಸಿಕೊಂಡಿದ್ದು, ಮುಳ್ಳುತಂತಿಗಳಿಂದ ಸುತ್ತಲ್ಪಟ್ಟ ಕಂಬವೊಂದನ್ನು ತಡೆಯುತ್ತಿರುವ ದೃಶ್ಯವಿದೆ. ಚಿತ್ರದ ಹೊಸ ಶೀರ್ಷಿಕೆ ಪೋಸ್ಟರ್‌ನಲ್ಲಿ ಎದ್ದು ಕಾಣುತ್ತಿದೆ. ಈ ಹಿಂದೆ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು, ಆದರೆ ಹೊಸ ಪೋಸ್ಟರ್‌ನಲ್ಲಿ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

ಶೀರ್ಷಿಕೆ ಬದಲಾವಣೆ ಬಗ್ಗೆ ಮಾತನಾಡಿರುವ ನಿರ್ದೇಶಕ ಅಪೂರ್ವ ಲಖಿಯಾ, ‘ಇದು ದಿಢೀರ್ ನಿರ್ಧಾರವಲ್ಲ. ನಾವು ಮೊದಲಿನಿಂದಲೂ ಬ್ಯಾಟಲ್ ಆಫ್ ಗಲ್ವಾನ್ ಮತ್ತು ಮಾತೃಭೂಮಿ ಎಂಬ ಎರಡು ಶೀರ್ಷಿಕೆಗಳನ್ನು ನೋಂದಾಯಿಸಿದ್ದೆವು. ಚಿತ್ರೀಕರಣದ ಹಂತದಲ್ಲಿ ನಮಗೆ ಇದು ಕೇವಲ ಒಂದು ಯುದ್ಧದ ಕಥೆಯಲ್ಲ, ಬದಲಾಗಿ ಮಾನವೀಯತೆ, ಸಹಾನುಭೂತಿ ಮತ್ತು ಸೈನಿಕರ ಹೋರಾಟಗಳ ಕಥೆ ಎಂದು ಅರಿವಾಯಿತು. ಹಾಗಾಗಿ ಮಾತೃಭೂಮಿ ಎಂಬ ಹೆಸರು ಹೆಚ್ಚು ಸೂಕ್ತವೆನಿಸಿತು’ ಎಂದು ವಿವರಿಸಿದ್ದಾರೆ.

‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆಗೆ ಚೀನಾದಿಂದಲೂ ವಿರೋಧ ವ್ಯಕ್ತವಾಗಿತ್ತು. 2020ರ ಗಲ್ವಾನ್ ಸಂಘರ್ಷದ ಆಧಾರಿತ ಈ ಚಿತ್ರದ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಿನಿಮಾ ವಾಸ್ತವವನ್ನು ತಿರುಚುತ್ತಿದೆ ಮತ್ತು ಚೀನಾ ವಿರೋಧಿ ಭಾವನೆಯನ್ನು ಪ್ರಚೋದಿಸುತ್ತಿದೆ ಎಂದು ಆಕ್ಷೇಪ ಎತ್ತಿತ್ತು.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮದುವೆ ಆಗಿಲ್ಲ ಯಾಕೆ? ಕಾರಣ ಬಿಚ್ಚಿಟ್ಟಿದ್ದ ತಂದೆ ಸಲೀಂ

‘ಮಾತೃಭೂಮಿ’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‘ಸಲ್ಮಾನ್ ಖಾನ್ ಫಿಲ್ಮ್ಸ್’ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಶೀರ್ಷಿಕೆ ಬದಲಾವಣೆಯ ಸುದ್ದಿ ಕೇಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಶೀರ್ಷಿಕೆ ಬದಲಾವಣೆಯೋ ಅಥವಾ ಹೊಸ ಸಿನಿಮಾದ ಶೀರ್ಷಿಕೆಯೋ ಎಂಬ ಕಮೆಂಟ್​​ಗಳು ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​: ರೆಡಿಮೇಡ್ ಉಡುಪುಗಳ ಬೆಲೆ ಏರಿಕೆ ಸಾಧ್ಯತೆ

ಬೆಂಗಳೂರು, ಮಾರ್ಚ್​​ 16: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಬೆಂಗಳೂರಿನ ಚಿಕ್ಕಪೇಟೆಯ ಜವಳಿ ಉದ್ಯಮದಕ್ಕೂ ತಟ್ಟಿದೆ. ಕಡಿಮೆ ಬೆಲೆಗೆ ಮತ್ತು ವಿವಿಧ ಬಗೆಯ ಬಟ್ಟೆಗಳಿಗೆ ಹೆಸರುವಾಸಿಯಾದ ಚಿಕ್ಕಪೇಟೆಯ ರೆಡಿಮೇಡ್ ಉಡುಪುಗಳ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಟ್ರೇಡ್ ಆಕ್ಟಿವಿಸ್ಟ್ ಸಜ್ಜನ್‌ರಾಜ್ ಮೆಹ್ತಾ ಅವರ ಪ್ರಕಾರ ಯುದ್ಧ ಮುಂದುವರಿದರೆ ಏಪ್ರಿಲ್‌ನಿಂದ ಬಟ್ಟೆಗಳ ಬೆಲೆ ಶೇ. 10-15 ಹೆಚ್ಚಳವಾಗುವ ಸಾಧ್ಯತೆ ಇದೆ. ಉತ್ಪಾದನಾ ಹಂತದಲ್ಲಿ ಈಗಾಗಲೇ ಶೆ. 30-40ರಷ್ಟು ಬೆಲೆ ಏರಿಕೆಯಾಗಿದ್ದು, ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಡೈಗಳ ಕೊರತೆ ಎದುರಾಗಿದೆ. ಇವುಗಳ ಆಮದು ಮತ್ತು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸೂರತ್‌ನಂತಹ ಉತ್ಪಾದನಾ ಕೇಂದ್ರಗಳಲ್ಲಿ ದಾಸ್ತಾನು ಕಡಿಮೆಯಾಗುತ್ತಿದೆ. ಇದು ಚಿಕ್ಕಪೇಟೆಯ ಸಗಟು ವ್ಯಾಪಾರಕ್ಕೆ ಸಮಸ್ಯೆಯಾಗುತ್ತಿದ್ದು, ಯುಗಾದಿ ಮತ್ತು ರಂಜಾನ್‌ನಂತಹ ಹಬ್ಬಗಳ ಸೀಸನ್‌ನಲ್ಲಿ ಹೆಚ್ಚುವರಿಯಾಗಿ ಕಾರ್ಮಿಕರ ಕೊರತೆಯೂ ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಬಾಸ್’ ಸಿನಿಮಾಗೆ ಸಂಕಷ್ಟ; ನೋಟಿಸ್ ಕೊಟ್ಟ ದರ್ಶನ್ ಲಾಯರ್

ನಟ ದರ್ಶನ್ ಅವರು (Darshan) ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಈ ಪ್ರಕರಣದಲ್ಲಿ ಎ2 ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದ ವಿವರ ಎಲ್ಲರಿಗೂ ತಿಳಿದಿದೆ. ಚಾರ್ಜ್​​ಶೀಟ್​​​ನಲ್ಲಿ ಎಲ್ಲ ವಿಷಯವನ್ನೂ ವಿವರವಾಗಿ ಬರೆಯಲಾಗಿದೆ. ಹೀಗಿರುವಾಗಲೇ ‘ಬಾಸ್’ ಹೆಸರಿನ ಸಿನಿಮಾ ಸೆಟ್ಟೇರಿ, ರಿಲೀಸ್​​​ಗೆ ರೆಡಿ ಆಗಿದೆ. ಈ ಸಿನಿಮಾ ಟೀಸರ್ ನೋಡಿದರೆ ಇದು ದರ್ಶನ್ ಪ್ರಕರಣವನ್ನೇ ನೆನಪಿಸಿದೆ. ಇದು ಚರ್ಚೆಗೆ ಕಾರಣ ಆಗಿತ್ತು. ಹೀಗಿರುವಾಗಲೇ ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದು, ಸಿನಿಮಾಗೆ ಸೆನ್ಸಾರ್ ಮಾಡದಂತೆ ಕೋರಿದೆ.

ರೇಣಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಬೆಂಗಳೂರಿನ ಪಟ್ಟಣಗೆರೆ ಶೆಡ್​ ಅಲ್ಲಿ ಕೊಲೆ ಮಾಡಲಾಯಿತು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಕೂಡ ಸ್ಥಳದಲ್ಲಿ ಇದ್ದರು ಎನ್ನುವ ಆರೋಪ ಇದೆ. ಆ ಬಳಿಕ ಹೆಣವನ್ನು ಮೋರಿ ಪಕ್ಕದಲ್ಲಿ ಹಾಕಲಾಯಿತು. ಹೆಣ ಬಿಸಾಕಿದವರು ಸಿಕ್ಕಿ ಬಿದ್ದರು. ನಂತರ ದರ್ಶನ್ ಹೆಸರು ಕೂಡ ಹೊರಬಿತ್ತು. ಅವರನ್ನು ಬಂಧಿಸಲಾಯಿತು. ತಾವು ನಿರಪರಾಧಿ ಎಂದು ಅವರು ಹೇಳುತ್ತಾ ಬರುತ್ತಿದ್ದಾರೆ.

ಈಗ ರಿಲೀಸ್ ಆಗಿರೋ ‘ಬಾಸ್’ ಸಿನಿಮಾ ಟೀಸರ್ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುವ ರೀತಿಯಲ್ಲಿ ಇದೆ. ಟೀಸರ್​​​ನಲ್ಲಿ ಶೆಡ್​, ಮೋರಿಗಳನ್ನು ತೋರಿಸಲಾಗಿದೆ. ಸೆಲೆಬ್ರಿಟಿ ಓರ್ವ ಈ ಪ್ರಕರಣದಲ್ಲಿ ಸಿಲುಕುತ್ತಾನೆ. ತಾನು ನಿರಪರಾಧಿ ಎಂದು ಹೇಳುತ್ತಾನೆ. ಇದು ಕೇವಲ ಕಾಲ್ಪನಿಕ ಕಥೆ ಎಂದರೆ ಪ್ರಕರಣ ಅಷ್ಟು ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲವೇನೋ. ಆದರೆ, ಇದು ನೈಜ ಘಟನೆ ಆಧಾರಿತ ಕಥೆ ಎಂದು ಹೇಳಿರೋದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?

ಈ ಪ್ರಕರಣ ಇನ್ನೂ ಕೋರ್ಟ್​​​ನಲ್ಲಿದೆ. ದರ್ಶನ್ ತಪ್ಪು ಮಾಡಿದ್ದಾನೆ ಅಥವಾ ಮಾಡಿಲ್ಲ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಅದಕ್ಕೂ ಮೊದಲೇ ಈ ಘಟನೆ ಆಧರಿಸಿ ಸಿನಿಮಾ ಮಾಡೋದು ಎಷ್ಟು ಸರಿ ಎಂಬ ಪ್ರಶ್ನೆ ಕೆಲವರದ್ದು. ಈಗ ದರ್ಶನ್ ಪರ ವಕೀಲರು ಸೆನ್ಸರ್ ಮಂಡಳಿಗೆ ನೋಟೀಸ್ ನೀಡಿ, ಯಾವುದೇ ಕಾರಣಕ್ಕೂ ಸಿನಿಮಾಗೆ ಸೆನ್ಸಾರ್ ಮಾಡಬಾರದು ಎಂದು ಹೇಳಿದ್ದಾರೆ. ನಿರ್ದೇಶಕ ಲವ ಆ್ಯಕ್ಷನ್ ಕಟ್ ಹೇಳಿದ್ದು, ತನುಷ್ ಶಿವಣ್ಣ ನಾಯಕನಾಗಿ ಸಿನಿಮಾದಲ್ಲ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ರಾಜ್ಯದಿಂದ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಮಾರ್ಚ್​​ 16: ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಹಿನ್ನೆಲೆ ಭಾರತದಿಂದ ದುಬೈಗೆ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದುಗೊಂಡಿದೆ. ಏರ್‌ ಇಂಡಿಯಾ, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭವಿಷ್ಯದ ಬೇರೆ ದಿನಾಂಕಕ್ಕೆ ತಮ್ಮ ಪ್ರಯಾಣವನ್ನು ಮರುನಿಗದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಯಾಣ ಬೇಡವೆನ್ನುವವರು ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದಾಗಿದೆ. ಇನ್ನು ವಿಮಾನ ರದ್ದಿನಿಂದ‌ ದುಬೈನಲ್ಲಿ ಸಿಲುಕಿರುವ ಪ್ರಯಾಣಿಕರು ಪರದಾಟ ನಡೆಸಿರುವ ಪ್ರಸಂಗವೂ ವರದಿಯಾಗಿದೆ.

ಬೆಂಗಳೂರಲ್ಲಿ 24 ವಿಮಾನಗಳ ಹಾರಾಟ ಕ್ಯಾನ್ಸಲ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ನಿಂದ ನಿರ್ಗಮನ ಮತ್ತು ಆಗಮಿಸಬೇಕಿದ್ದ ಒಟ್ಟು 24 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿವೆ. ಕೆಂಪೇಗೌಡ ಏರ್​ಪೋರ್ಟ್​ನಿಂದ ನಿರ್ಗಮಿಸಬೇಕಿದ್ದ 11 ಫ್ಲೈಟ್​ಗಳು ಮತ್ತು ಅರಬ್ ದೇಶಗಳಿಂದ ಕೆಐಎಬಿಗೆ ಆಗಮಿಸಬೇಕಿದ್ದ 13 ಫ್ಲೈಟ್ ರದ್ದಾಗಿವೆ. ಅಬುದಾಬಿ, ರಿಯಾದ್, ಜಿಡ್ಡಾ, ಡಮಾಮ್, ದುಬೈ ಹಾಗೂ ದೋಹಾದಿಂದ ಕೆಐಎಬಿಗೆ ಆಗಮಿಸಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ; ಯುಎಇಯಲ್ಲಿ 19 ಭಾರತೀಯರು ಸೇರಿ 35 ಮಂದಿ ಬಂಧನ

ಮಂಗಳೂರು ಏರ್​​ಪೋರ್ಟ್​​ನಿಂದಲೂ ವಿಮಾನ ಹಾರಾಟ ವ್ಯತ್ಯಯ

ದುಬೈ ವಿಮಾನ ನಿಲ್ದಾಣದ ಬಳಿ ದಾಳಿ ಹಿನ್ನೆಲೆ ಮಂಗಳೂರಿನಿಂದ ದುಬೈ, ಡಮಾಮ್ ಮತ್ತು ಅಬುಧಾಬಿಗೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಏರ್ ಇಂಡಿಯಾ ಎಕ್ಸ್​​ಪ್ರೆಸ್​​ನ ಇಂದು ಮತ್ತು ನಾಳೆಯ ವಿಮಾನ ಹಾರಾಟ ರದ್ದಾಗಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳ ಸೂಚನೆಯ ಹಿನ್ನೆಲೆ ವಿಮಾನಯಾನ ಹಾರಾಟ ನಡೆಸುತ್ತಿಲ್ಲ ಎಂದು ತಿಳಿದುಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version