‘ಬಿಗ್ ಬಾಸ್ ಕನ್ನಡ 13’ ಆಡಿಷನ್: ಈ ಸಲ ಸಾಮಾನ್ಯ ಜನರಿಗೂ ಸಿಗಲಿದೆ ಅವಕಾಶ – Kannada News

2026ನೇ ಸಾಲಿನ ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋ ಸ್ವಲ್ಪ ಮುಂಚಿತವಾಗಿಯೇ ಆರಂಭ ಆಗಲಿದೆ. ಈ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ಈಗಾಗಲೇ ಮಾಹಿತಿ ಹಂಚಿಕೊಂಡಿದೆ. ವಿಶೇಷ ಏನೆಂದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೆ ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ. ಅದಕ್ಕಾಗಿ ಆಡಿಷನ್ ನಡೆಸಲಾಗುವುದು. ಈ ಸುದ್ದಿ ಕೇಳಿದ ಬಳಿಕ ಜನಸಾಮಾನ್ಯರಲ್ಲಿ ಆಸೆ ಚಿಗುರಿದೆ. ಯಾವ ರೀತಿ ಆಡಿಷನ್​ನಲ್ಲಿ ಭಾಗವಹಿಸಬೇಕು ಎಂಬುದನ್ನು ಕೂಡ ‘ಕಲರ್ಸ್ ಕನ್ನಡ’ ವಾಹಿನಿ ತಿಳಿಸಿದೆ.

ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಆಡಿಷನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಒಮ್ಮೆಯಾದರೂ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬೇಕು ಎಂಬುದು ಜನರ ಆಸೆ ಆಗಿರುತ್ತದೆ. ಆದರೆ ಅವಕಾಶ ಸಿಗುವುದು ಸುಲಭವಲ್ಲ. ಈ ಬಾರಿ ಆಡಿಷನ್ ಕರೆದಿರುವುದರಿಂದ ಜನರ ಆಸೆಯ ಬಳ್ಳಿಗೆ ನೀರು ಎರೆದಂತೆ ಆಗಿದೆ.

‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?’ ಎಂದು ‘ಕಲರ್ಸ್ ಕನ್ನಡ’ ವಾಹಿನಿ ಕೇಳುತ್ತಿದೆ. ‘ನಮಸ್ತೆ ಕರ್ನಾಟಕ.. ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ನೀಡುತ್ತಿದ್ದಾರೆ ಬಿಗ್ ಬಾಸ್. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ’ ಎಂದು ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆಡಿಷನ್ ಪ್ರೋಮೋ:

ಜನರಲ್ಲಿ ಪ್ರತಿಭೆ ಇದ್ದರೆ ಮೂರು ನಿಮಿಷದ ವಿಡಿಯೋವನ್ನು ‘Colorskannada.jiostar.com’ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕು. ಆಯ್ಕೆ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಸಿಗಲಿದೆ. ಈ ಬಾರಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಆ ಕಾರಣದಿಂದ ಈ ಸಲದ ಬಿಗ್ ಬಾಸ್ ಶೋ ವಿಶೇಷ ಎನಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಹೊಸ ಸೀಸನ್: ಸರ್ಪ್ರೈಸ್ ನೀಡಿದ ‘ಕಲರ್ಸ್ ಕನ್ನಡ’

ಈವರೆಗೂ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ 12 ಸೀಸನ್​ಗಳು ಯಶಸ್ವಿಯಾಗಿ ನಡೆದಿವೆ. ಈಗ ಬರಲಿರುವುದು 13ನೇ ಸೀಸನ್. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ. ಹೊಸ ಹುರುಪಿನೊಂದಿಗೆ ಹೊಸ ಸೀಸನ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:32 am, Sun, 7 June 26

Source link

ಕೈ ತಪ್ಪಿದ ನಾಯಕತ್ವ… ಸೂರ್ಯಕುಮಾರ್ ಯಾದವ್ ಹೇಳಿದ್ದೇನು? – Kannada News

ಭಾರತ ಟಿ20 ತಂಡದ ನಾಯಕ ಬದಲಾಗಿದ್ದಾರೆ. ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್​ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡಗಳ ನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸೂರ್ಯಕುಮಾರ್ ಯಾದವ್ ಯುಗಾಂತ್ಯವಾಗಿದೆ ಎನ್ನಬಹುದು.

ಈ ಬಗ್ಗೆ ಮುಂಬೈ ಟಿ20 ಲೀಗ್​ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್,  “ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮುಂಬೈ ಕ್ರಿಕೆಟ್‌ಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಸತತವಾಗಿ ಮುಂಬೈನ ಮೂವರು ಆಟಗಾರರು ರಾಷ್ಟ್ರೀಯ ತಂಡದ ನಾಯಕರಾಗುತ್ತಿರುವುದು ಸಣ್ಣ ವಿಷಯವಲ್ಲ” ಎಂದು ಅವರು ಹೇಳಿದ್ದಾರೆ.

ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಹೊಸ ತಂಡವನ್ನು ಪ್ರಕಟಿಸಿದ ತಕ್ಷಣ, ಸೂರ್ಯಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಧಿಕೃತ ತಂಡದ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಿಗಾಗಿ ಇಡೀ ತಂಡಕ್ಕೆ ಮತ್ತು ಹೊಸ ನಾಯಕನಿಗೆ ಒಳಿತಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದಾರೆ.

ನಾಯಕತ್ವ ಬದಲಾವಣೆಗೆ ಕಾರಣಗಳೇನು?

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದ ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಆದರೆ, ಇತ್ತೀಚಿನ ಐಪಿಎಲ್ 2026ರಲ್ಲಿ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಮತ್ತು ವೈಯಕ್ತಿಕ ರನ್ ಗಳಿಕೆಯ ಕುಸಿತ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

ಹೀಗಾಗಿ ನಾಯಕತ್ವದಿಂದ ಕೆಳಗಿಳಿಸಿ ಮುಂಬರುವ ಟಿ20 ಸರಣಿಗಳಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಏಷ್ಯನ್ ಗೇಮ್ಸ್​ ಮತ್ತು ಮುಂದಿನ ಟಿ20 ವಿಶ್ವಕಪ್​ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ  ಬದಲಾವಣೆಯನ್ನು ಮಾಡಿದೆ.

ಅಂದರೆ 35 ವರ್ಷದ ಸೂರ್ಯಕುಮಾರ್ ಯಾದವ್ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಈಗಲೇ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಅದರಂತೆ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಹೊಸ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿ ಬಳಿಕ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಬೇಕಿದ್ದು,  ಇದು ಅಯ್ಯರ್ ಕ್ಯಾಪ್ಟನ್ಸಿಗೆ ಎದುರಾಗಲಿರುವ ಮೊದಲ ಸವಾಲಾಗಿರಲಿದೆ.

Source link

ಬೆಂಗಳೂರು ಪೂರ್ವ ನಗರ ನಿಗಮದಿಂದ ಬೃಹತ್ ಸ್ವಚ್ಛತಾ ಸಪ್ತಾಹ; 100 ಟನ್ ಕಸ ವಿಲೇವಾರಿ! – Kannada News

ಬೆಂಗಳೂರು ಪೂರ್ವ ನಗರ ನಿಗಮದಿಂದ ನೂರು ಟನ್ ಕಸ ತೆರವುಗೊಳಿಸಲಾಗಿದೆ.

ಬೆಂಗಳೂರು, ಜೂನ್ 07: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರು (Bengaluru) ಪೂರ್ವ ನಗರ ನಿಗಮವು (ಬಿಇಸಿಸಿ) ಕೆ.ಆರ್. ಪುರಂ ಮತ್ತು ದೊಡ್ಡನೆಕ್ಕುಂದಿ ವಾರ್ಡ್‌ಗಳಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 100 ಟನ್‌ಗೂ ಹೆಚ್ಚು ಕಟ್ಟಡದ ಅವಶೇಷಗಳು ಮತ್ತು ಕಸವನ್ನು ತೆರವುಗೊಳಿಸಲಾಗಿದ್ದು, 18 ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ಬಿಇಸಿಸಿ ಕಮಿಷನರ್ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಪೂರ್ವ ನಗರ ನಿಗಮದಿಂದ ನೂರು ಟನ್ ಕಸ ತೆರವುಗೊಳಿಸಲಾಗಿದೆ.
  • ವೆಂಗಯ್ಯನ ಕೆರೆ ಆವರಣದಲ್ಲಿ ಒಟ್ಟು ಅರವತ್ತು ಸಸಿಗಳನ್ನು ನೆಡಲಾಗಿದೆ.
  • ಪ್ಲಾಸ್ಟಿಕ್ ಬಳಸಿದವರಿಂದ ಮೂವತ್ತು ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಬೃಹತ್ ಯಂತ್ರೋಪಕರಣಗಳ ಬಳಕೆ

ಈ ಬೃಹತ್ ಸ್ವಚ್ಛತಾ ಕಾರ್ಯಕ್ಕಾಗಿ ನಿಗಮವು 1,600 ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು, ಮಾರ್ಷಲ್‌ಗಳು ಮತ್ತು ಸ್ವಯಂಸೇವಕರನ್ನು ನಿಯೋಜಿಸಿತ್ತು. ಕಸ ವಿಲೇವಾರಿ ಮಾಡಲು 14 ಟ್ರ್ಯಾಕ್ಟರ್‌ಗಳು, 6 ಟಿಪ್ಪರ್ ಲಾರಿಗಳು, 6 ಕಾಂಪಾಕ್ಟರ್ ವಾಹನಗಳು, 20 ಆಟೋ ಟಿಪ್ಪರ್‌ಗಳು ಮತ್ತು 3 ಹಿಟಾಚಿ ಯಂತ್ರಗಳನ್ನು ಬಳಸಿಕೊಳ್ಳಲಾಯಿತು. ಗಂಗಾಶೆಟ್ಟಿ ಕೆರೆ ಆವರಣ, ಸರ್ಕಾರಿ ಶಾಲೆ-ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು. ಇದರೊಂದಿಗೆ ಮುಖ್ಯ ರಸ್ತೆಗಳು, ವಾರ್ಡ್ ರಸ್ತೆಗಳು, ರಸ್ತೆ ವಿಭಜಕಗಳು, ಬಸ್ ತಂಗುದಾಣಗಳು, ಉದ್ಯಾನವನಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸಲೀಸಾಗಿ ಅಚ್ಚುಕಟ್ಟಾಗಿಸಲಾಯಿತು.

ಗಿಡ ನೆಡುವಿಕೆ ಮತ್ತು ಗೋಡೆ ಬರಹ

ಪರಿಸರ ದಿನದ ನೆನಪಿಗಾಗಿ ವೆಂಗಯ್ಯನ ಕೆರೆ ಆವರಣದಲ್ಲಿ 60 ಸಸಿಗಳನ್ನು ನೆಡಲಾಯಿತು. ನಗರದ ಇತರ ಭಾಗಗಳಲ್ಲೂ ಹೆಚ್ಚು ಸಸಿಗಳನ್ನು ನೆಡಲು ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದ್ದಾರೆ. ನಗರದ ಸೌಂದರ್ಯವನ್ನು ಹೆಚ್ಚಿಸುವ ಭಾಗವಾಗಿ ಹಲವಾರು ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಗೋಡೆಗಳ ಮೇಲೆ ಆಕರ್ಷಕ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳನ್ನು ಬಿಡಿಸಲಾಗಿದೆ.

ಪ್ಲಾಸ್ಟಿಕ್ ಬಳಸಿದವರಿಗೆ ದಂಡದ ಬರೆ

ಸ್ವಚ್ಛತೆಯ ಜೊತೆಗೆ ನಿಗಮದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದ ಆರೋಪದ ಮೇಲೆ ಒಟ್ಟು 26 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಂದ ಒಟ್ಟು 30,000 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ – Kannada News

ಪ್ರಾತಿನಿಧಿಕ ಚಿತ್ರImage Credit source: Getty Images

ಬೆಂಗಳೂರು, ಜೂನ್​​ 07: ಮದುವೆ ಆಗೋದಾಗಿ ನಂಬಿಸಿ ಯುವಕನೋರ್ವನಿಗೆ ಯುವತಿ (girl) ಬರೋಬ್ಬರಿ 35 ಲಕ್ಷ ರೂ ವಂಚಿಸಿರುವಂತಹ (Fraud) ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಎಂಬಾತನಿಗೆ ಲಕ್ಷ್ಮೀ ವಂಚಿಸಿದ್ದಾಳೆ. ಸದ್ಯ ಯುವಕ ನೀಡಿದ ದೂರಿನನ್ವಯ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ವಧುವಿನ ಹುಡುಕಾಟದಲ್ಲಿದ್ದ ಯುವಕನಿಗೆ ಮಹಾ ಮೋಸ
  • ಯುವತಿಯಿಂದ ಬರೋಬ್ಬರಿ 35 ಲಕ್ಷ ರೂ ವಂಚನೆ
  • ಬೆಂಗಳೂರಿನ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಅನಿಲ್​​ ಮ್ಯಾಟ್ರಿಮೋನಿ ವೆಬ್​ಸೈಟ್​​ ಮೂಲಕ ಹುಡುಗಿ ಹುಡುಕುತ್ತಿದ್ದರು. ಈ ವೇಳೆ ಭಾಸ್ಕರ್ ರಾವ್ ಎಂಬಾತ ಅನಿಲ್​ಗೆ ಕರೆ ಮಾಡಿದ್ದರು. ನಿಮ್ಮ ಪ್ರೊಫೈಲ್​ ಇಷ್ಟ ಆಗಿದೆ, ಲಕ್ಷ್ಮೀಗೆ ನಂಬರ್ ನೀಡಿದ್ದೀನಿ‌ ಎಂದಿದ್ದ. ಬಳಿಕ ಖದ್ದು ಲಕ್ಷ್ಮೀ ಅನಿಲ್​ಗೆ ಕರೆ ಮಾಡಿದ್ದಾಳೆ. ಇಬ್ಬರು ಕೆಲ ದಿನ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು: ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಂಚನೆ

ಇನ್ನು ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿದ ಲಕ್ಷ್ಮೀ, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷ ಒಡ್ಡಿದ್ದಾಳೆ. ‘ನೀನು ಈಗಲೇ ಹಣ ಹೂಡಿಕೆ ಮಾಡು, ಮದುವೆಯ ನಂತರ ಅದೇ ಲಾಭದ ಹಣದಲ್ಲಿ ಚೆನ್ನಾಗಿ ಸೆಟಲ್ ಆಗೋಣ’ ಎಂದು ನಂಬಿಸಿದ್ದಾಳೆ. ಇದಕ್ಕೆ ಅನಿಲ್ ‘ಈಗ ಬೇಡ, ಮದುವೆಯಾದ ಬಳಿಕ ನೋಡೋಣ’ ಎಂದು ನಿರಾಕರಿಸಿದರೂ ಬಿಡದ ಲಕ್ಷ್ಮೀ, ಹಠಕ್ಕೆ ಬಿದ್ದು ಹಣ ಹೂಡುವಂತೆ ಸತತವಾಗಿ ಪ್ರೇರೇಪಿಸಿದ್ದಾಳೆ.

ಇದನ್ನೂ ಓದಿ: ನಿಮಗೆ 8 ಲಕ್ಷ ರೂ. ಲಾಟರಿ ಹೊಡೆದಿದೆ ಅಂದ್ರೆ ನಂಬಬೇಡಿ!: ಬೆಂಗಳೂರಿನ ಇಬ್ಬರಿಗೆ ಬಿತ್ತು 13.71 ಲಕ್ಷ ರೂ. ನಾಮ; ಹೊಸ ಆನ್‌ಲೈನ್ ಸ್ಕ್ಯಾಮ್

ಕೊನೆಗೆ ಆಕೆಯ ಮಾತು ನಂಬಿದ ಅನಿಲ್, ಹಂತ ಹಂತವಾಗಿ ಬರೋಬ್ಬರಿ 35 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಬಳಿಕ ಲಾಭದ ಹಣವನ್ನು ಹಿಂಪಡೆಯಲು ಹೋದಾಗ ಕ್ರಿಪ್ಟೋ ಖಾತೆಯೇ ಡಿಲೀಟ್ ಆಗಿರುವುದು ಕಂಡುಬಂದಿದೆ. ಆತಂಕಗೊಂಡ ಅನಿಲ್ ಲಕ್ಷ್ಮೀ ಮೊಬೈಲ್‌ಗೆ ಕರೆ ಮಾಡಿದಾಗ ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಕೊನೆಗೆ ತಾನು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗುತ್ತಿದ್ದಂತೆ ಅನಿಲ್ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಟಿಎಂಸಿ ಶಾಸಕ ಮದನ್ ಮಿತ್ರ ಮೇಲೆ ಮೊಟ್ಟೆ ಎಸೆತ – Kannada News

ಕೋಲ್ಕತ್ತಾ, ಜೂನ್ 07: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ಶಾಸಕ ಮದನ್ ಮಿತ್ರ ಅವರ ವಾಹನದ ಮೇಲೆ ಶನಿವಾರ ರಾತ್ರಿ ಕಮರ್ಹತಿಯ ಅರಿಯದಹ ಪ್ರದೇಶದಲ್ಲಿ ಪ್ರತಿಭಟನಾಕಾರರು ಮೊಟ್ಟೆ ಎಸೆದ ಘಟನೆ ನಡೆದಿದೆ. ಸ್ಥಳೀಯ ಆಟೋ ಮತ್ತು ಇ-ರಿಕ್ಷಾ ಚಾಲಕರು ವಾರ್ಡ್ ಸಂಖ್ಯೆ 14 ರ ಕೌನ್ಸಿಲರ್ ಕಚೇರಿ ಮುಂದೆ ಜಮಾಯಿಸಿ, ಕಳೆದ ಕೆಲವು ವರ್ಷಗಳಿಂದ ಬಲವಂತವಾಗಿ ವಸೂಲಿ ಮಾಡಲಾಗಿರುವ ಕಟ್ ಮನಿ (ಅಕ್ರಮ ಕಮಿಷನ್) ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ವಾಹನವನ್ನು ಗುರಿಯಾಗಿಸಿ ಮೊಟ್ಟೆ ಎಸೆಯಲಾಗಿದ್ದು, ಚಾಲಕನ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.

ಈ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಕೈವಾಡವಿದೆ ಎಂದು ಮದನ್ ಮಿತ್ರ ಆರೋಪಿಸಿದ್ದಾರೆ. ಆದರೆ, ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ನಂತರ ಸ್ಥಳೀಯರಲ್ಲಿ ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ – Kannada News

ಮಲೇಷ್ಯಾದಲ್ಲಿ ನಡೆಯುತ್ತಿರುವ 2026ರ ACC ಮಹಿಳಾ ಟಿ20 ಪ್ರೀಮಿಯರ್ ಕಪ್ ಟೂರ್ನಿಯಲ್ಲಿ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತಹ ಫಲಿತಾಂಶ ಮೂಡಿಬಂದಿದೆ. ಈ ಫಲಿತಾಂಶ ಮೂಡಿಬಂದಿದ್ದು ಕೇವಲ 5 ಎಸೆತಗಳಲ್ಲಿ ಎಂಬುದೇ ಅಚ್ಚರಿ.ಈ ಟೂರ್ನಿಯ ಗ್ರೂಪ್ ‘ಬಿ’ ಪಂದ್ಯದಲ್ಲಿ ಸೌದಿ ಅರೇಬಿಯಾ ಮಹಿಳಾ ತಂಡ ಹಾಗೂ ಯುಎಇ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ಮಹಿಳಾ ತಂಡ, ಯುಎಇ ಬೌಲರ್‌ಗಳ ಮಾರಕ ದಾಳಿಗೆ ಧೂಳೀಪಟವಾಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಸೌದಿ ತಂಡ 15.3 ಓವರ್‌ಗಳಲ್ಲಿ ಕೇವಲ 27 ರನ್‌ಗಳಿಸಿ ಆಲೌಟ್ ಆಯಿತು.

ಯುಎಇ ಪರ ಹೀನಾ ಹೋಟ್‌ಚಂದಾನಿ (3-4), ಸುರಕ್ಷಾ ಕೊಟ್ಟೆ (3-5) ಮತ್ತು ನಾಯಕಿ ಇಶಾ ಓಜಾ (3-9) ತಲಾ ಮೂರು ವಿಕೆಟ್ ಪಡೆದು ಸೌದಿ ಅರೇಬಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಕೇವಲ 5 ಎಸೆತಗಳಲ್ಲಿ ಮುಗಿದ ಪಂದ್ಯ!

28 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡಕ್ಕೆ ಸೌದಿ ಅರೇಬಿಯಾದ ಬೌಲರ್ ಮಾಹ್ ನೂರ್ ಅಮೀರ್ ಎಸೆದ ಮೊದಲ ಓವರ್ ವರದಾನವಾಗಿ ಪರಿಣಮಿಸಿತು. ದಿಕ್ಕು ದೆಸೆಯಿಲ್ಲದ ದಾಳಿ ನಡೆಸಿದ ಮಾಹ್ ನೂರ್, ಸಾಲು ಸಾಲು ವೈಡ್ (10 ವೈಡ್‌ಗಳು) ಹಾಗೂ ನೋ-ಬಾಲ್ ಸೇರಿದಂತೆ ಒಟ್ಟು 11 ಎಕ್ಸ್ಟ್ರಾ ರನ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಇದರ ಜೊತೆಗೆ ಯುಎಇ ನಾಯಕಿ ಇಶಾ ಓಜಾ ಕೇವಲ 5 ಎಸೆತಗಳಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 15 ರನ್ ಚಚ್ಚಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ತೀರ್ಥಾ ಸತೀಶ್ ತಾವು ಎದುರಿಸಿದ ಏಕೈಕ ಎಸೆತದಲ್ಲಿ ಬೌಂಡರಿ ಬಾರಿಸಿದರು. ಪರಿಣಾಮವಾಗಿ, ಮೊದಲ ಓವರ್‌ನ 5ನೇ ಎಸೆತದಲ್ಲಿ (0.5 ಓವರ್) ಯುಎಇ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿ 10 ವಿಕೆಟ್​್ಗಳ ಭರ್ಜರಿ ಜಯ ಸಾಧಿಸಿತು.

ವಿಶ್ವ ದಾಖಲೆ:

  •  115 ಎಸೆತಗಳು ಬಾಕಿ: ಯುಎಇ ತಂಡ ಇನ್ನೂ 115 ಎಸೆತಗಳು (19.1 ಓವರ್) ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
  •  ಜಂಟಿ ಎರಡನೇ ಸ್ಥಾನ: ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗವಾಗಿ ಗುರಿ ತಲುಪಿದ ಜಂಟಿ ಎರಡನೇ ಪಂದ್ಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಕೇವಲ 20 ನಿಮಿಷಗಳಿಗಿಂತ ಕಡಿಮೆ ಅವಧಿಯ ರನ್ ಚೇಸ್‌ನಲ್ಲಿ ಮುಕ್ತಾಯಗೊಂಡ ಈ ಪಂದ್ಯ, ಕ್ರಿಕೆಟ್ ಇತಿಹಾಸದ ಅತ್ಯಂತ ವಿಚಿತ್ರ ಹಾಗೂ ಅಪರೂಪದ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದೆ.

Source link

ರೈಲಿನ ಬೋರ್ಡ್​ ಬರೆಸಲು ಕೂಡ ಪಾಕಿಸ್ತಾನದ ಬಳಿ ಹಣವಿಲ್ಲ, ಸೀಮೆ ಸುಣ್ಣದಲ್ಲಿ ಮಾರ್ಗದ ಹೆಸರು ಬರೆದ ರೈಲ್ವೆ ಇಲಾಖೆ – Kannada News

ಕರಾಚಿ, ಜೂನ್ 07: ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ಕೆಲವೊಮ್ಮೆ ಹಳೆಯ ಕಾಲದ ಸರಳ ಆಚರಣೆಗಳು ಮತ್ತು ಮಿತವ್ಯಯದ ಕ್ರಮಗಳು ಜನರ ಗಮನವನ್ನು ಸೆಳೆಯುತ್ತವೆ. ಲಾಹೋರ್‌ನಿಂದ ಕರಾಚಿಯವರೆಗೆ ಸರಿಸುಮಾರು 1,000 ಕಿಲೋಮೀಟರ್‌ಗಳ ಸುದೀರ್ಘ ಮಾರ್ಗದಲ್ಲಿ 16 ಗಂಟೆಗಳ ಕಾಲ ಯಶಸ್ವಿಯಾಗಿ ಸಂಚರಿಸುವ ಪಾಕಿಸ್ತಾನ ರೈಲ್ವೆ(Railway)ಯ ಎಕ್ಸ್‌ಪ್ರೆಸ್ ರೈಲೊಂದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಎಬಿಪಿ ಲೈವ್ ವರದಿ ಮಾಡಿದೆ.

ವಿದ್ಯುತ್ ಅಥವಾ ಡಿಜಿಟಲ್ ಬೋರ್ಡ್‌ಗಳ ದುಬಾರಿ ವೆಚ್ಚಕ್ಕೆ ಪರ್ಯಾಯವಾಗಿ, ರೈಲ್ವೆ ಸಿಬ್ಬಂದಿಯು ರೂಟ್ ಬೋರ್ಡ್ ಮೇಲೆ ಉರ್ದು ಭಾಷೆಯಲ್ಲಿ ಸೀಮೆಸುಣ್ಣವನ್ನು (Chalk) ಬಳಸಿ ಅತ್ಯಂತ ಸರಳವಾಗಿ “ಮುಲ್ತಾನ್ ಜಕಾರಿಯಾ ಕರಾಚಿ” ಎಂದು ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರತೀಯ ನೆಟ್ಟಿಗರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಸ್ಯದ ಚಟಾಕಿಗಳನ್ನು ಹಾರಿಸಿದ್ದಾರೆ. ಇದು ಪಾಕಿಸ್ತಾನದ ರಹಸ್ಯ ತಂತ್ರಜ್ಞಾನ ಇರಬಹುದು, ಮಳೆ ಬಂದ ತಕ್ಷಣ ಬೋರ್ಡ್ ಮೇಲಿರುವ ಮಾರ್ಗವು ಸ್ವಯಂಚಾಲಿತವಾಗಿ ಅಳಿಸಿಹೋಗುತ್ತದೆ, ಆಗ ರೈಲು ತನಗೆ ಇಷ್ಟಬಂದ ಹೊಸ ನಿಲ್ದಾಣಕ್ಕೆ ಹೋಗಬಹುದು ಎಂದು ಅತ್ಯಂತ ವ್ಯಂಗ್ಯಭರಿತ ಹಾಗೂ ಮೋಜಿನ ಕಾಮೆಂಟ್‌ಗಳ ಮೂಲಕ ಇಡೀ ವಾತಾವರಣವನ್ನು ಹಗುರಗೊಳಿಸಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು

ಎಸಿ ಸ್ಟ್ಯಾಂಡರ್ಡ್ ಬೋಗಿಗಳನ್ನು ಹೊಂದಿರುವ ಈ ರೈಲು, ಸೀಮೆಸುಣ್ಣದ ಬರವಣಿಗೆಯನ್ನು ಹೊಂದಿದ್ದರೂ ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ತಲುಪಿಸುತ್ತಿದೆ. ತಂತ್ರಜ್ಞಾನದ ವೈಭವಗಳ ನಡುವೆಯೂ ಇಂತಹ ತಳಮಟ್ಟದ ಸಾಂಪ್ರದಾಯಿಕ ವಿಧಾನಗಳು ಹಾಗೂ ಅದರ ಸುತ್ತ ಮೂಡಿಬಂದಿರುವ ಸಾರ್ವಜನಿಕರ ಹಾಸ್ಯಪ್ರಜ್ಞೆಯು ಇಂಟರ್ನೆಟ್ ಲೋಕದಲ್ಲಿ ಭಾರಿ ಮನರಂಜನೆಯನ್ನು ನೀಡುತ್ತಿದ್ದು, ನೆರೆರಾಷ್ಟ್ರಗಳ ನಡುವೆ ಒಂದು ಲಘು ಹಾಸ್ಯದ ಸೇತುವೆಯನ್ನು ನಿರ್ಮಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲ ಭಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​: ಮೆಟ್ರೋದಲ್ಲಿ ಸಂಚರಿಸಲು ಸಿಎಂ ನಿರ್ಧಾರ – Kannada News

ಬೆಂಗಳೂರು, ಜೂನ್​​ 07: ಸಿಎಂ ಡಿ.ಕೆ. ಶಿವಕುಮಾರ್​ ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದಲಿದ್ದಾರೆ. ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಸಿಎಂ ಪ್ರಯಾಣಿಸಲಿದ್ದಾರೆ. ಜೀರೋ ಟ್ರಾಫಿಕ್​ನಿಂದ ವಾಹನ ಸವಾರರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಕನಕಪುರ ರಸ್ತೆ ತಲುಪಿದ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ತಮ್ಮ ಪ್ರವಾಸ ಮುಂದುವರೆಸಲಿದ್ದಾರೆ. ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆ ಕ್ಷೇತ್ರಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟ ಸಲೀಂ ಕುಮಾರ್ ನಿಧನ: ಕಂಬನಿ ಮಿಡಿದ ಮಮ್ಮುಟ್ಟಿ – Kannada News

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಲೀಂ ಕುಮಾರ್ (Salim Kumar) ಶನಿವಾರ (ಜೂನ್ 6) ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಹಾಗೂ ಲಿವರ್ (Liver) ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 10.43ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸಲೀಂ ಕುಮಾರ್ ಅವರು ಪತ್ನಿ ಸುನಿತಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಚಂದು ಇತ್ತೀಚೆಗೆ ಸೂಪರ್ ಹಿಟ್ ಆದ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ನಟಿಸಿದ್ದರು ಎಂಬುದು ಉಲ್ಲೇಖನೀಯ. ಸಲೀಂ ಕುಮಾರ್ ನಿಧನಕ್ಕೆ ಮಾಲಿವುಡ್ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

‘ಬೇರೆಯವರನ್ನು ನಗಿಸುತ್ತಾ, ಯೋಚಿಸುವಂತೆ ಮಾಡುತ್ತಾ, ಕೆಲವೊಮ್ಮೆ ತಾವೂ ಅತ್ತು ಬೇರೆಯವರನ್ನೂ ಅಳಿಸುತ್ತಿದ್ದ ಸಲೀಂ. ಈಗ ನೀನು ಕೇವಲ ನನ್ನನ್ನು ಕಣ್ಣೀರಿಡುವಂತೆ ಮಾಡಿ ಹೊರಟುಹೋಗಿದ್ದೀಯ. ನಿನ್ನ ಈ ಅಗಲಿಕೆ ಎಂದಿಗೂ ಮುಗಿಯದ ಮೌನ ಮತ್ತು ಅಪಾರ ದುಃಖವನ್ನು ತಂದಿದೆ ಸಹೋದರ’ ಎಂದು ಮಮ್ಮುಟ್ಟಿ ಕಣ್ಣೀರು ಹಾಕಿದ್ದಾರೆ.

90ರ ದಶಕದ ಕೊನೆಯಲ್ಲಿ ಮಿಮಿಕ್ರಿ ಮತ್ತು ಹಾಸ್ಯ ಕಲಾವಿದರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಲೀಂ ಕುಮಾರ್, ಕೇವಲ ಕಾಮಿಡಿ ಪಾತ್ರಗಳಿಗೆ ಸೀಮಿತವಾಗದೆ ಅದ್ಭುತ ಪೋಷಕ ನಟನಾಗಿ ಗುರುತಿಸಿಕೊಂಡರು. 2005ರಲ್ಲಿ ‘ಅಚ್ಚನುರಂಗತ ವೀಡು’ ಚಿತ್ರದ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಇನ್ನು 2010ರಲ್ಲಿ ತೆರೆಕಂಡ ‘ಆದಾಮಿಂತೆ ಮಕನ್ ಅಬು’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು.

ಇದನ್ನೂ ಓದಿ: ಖ್ಯಾತ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ

ಕೇರಳದ ಸಿಎಂ ವಿ.ಡಿ. ಸತೀಶನ್ ಸೇರಿದಂತೆ ಹಲವು ಗಣ್ಯರು ಸಲೀಂ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ‘ಅವರು ಕೇವಲ ಒಬ್ಬ ಚಿತ್ರನಟನಷ್ಟೇ ಅಲ್ಲ, ನಮಗೆ ಕುಟುಂಬದ ಸದಸ್ಯರಂತಿದ್ದರು’ ಎಂದು ಸತೀಶನ್ ಸ್ಮರಿಸಿದ್ದಾರೆ. ಸಲೀಂ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಲಯಾಳಂ ಚಿತ್ರರಂಗದ ನಟ ದಿಲೀಪ್ ಸೇರಿದಂತೆ ಹಲವು ತಾರೆಯರು ಆಸ್ಪತ್ರೆಗೆ ಧಾವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಎಲ್ ರಾಹುಲ್ ನಟನೆಗೆ ‘ಆಸ್ಕರ್’ ಪ್ರಶಸ್ತಿ ನೀಡಬೇಕು: ಗ್ರೇಮ್ ಸ್ವಾನ್ – Kannada News

ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಮೊದಲಿಗೆ ಡಿಆರ್‌ಎಸ್​ನಿಂದ ಪಾರಾಗಿ ಸುದ್ದಿಯಾಗಿದ್ದ ರಾಹುಲ್, ಆ ಬಳಿಕ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಡಿಆರ್​ಎಸ್​​ ಹಾಗೂ ಸೆಂಚುರಿಗಳಿಂದ ಸುದ್ದಿಯಾಗಲು ಮುಖ್ಯ ಕಾರಣ 11ನೇ ಓವರ್​ನಲ್ಲೇ ಸಿಕ್ಕ ಜೀವದಾನ!

11ನೇ ಓವರ್‌ನಲ್ಲಿ ಅಫ್ಘಾನಿಸ್ತಾನ್ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಪ್ರಯತ್ನಿಸಿದ್ದರು. ಆದರೆ ಚೆಂಡು ಅವರ ಬ್ಯಾಟ್‌ನ ತುದಿಗೆ ಸವರಿ ನೇರವಾಗಿ ವಿಕೆಟ್ ಕೀಪರ್ ಅಫ್ಸರ್ ಜಜಾಯ್ ಕೈ ಸೇರಿತು.

ಅಫ್ಘಾನಿಸ್ತಾನದ ಆಟಗಾರರು ಔಟ್ ಎಂದು ಜೋರಾಗಿ ಅಪೀಲ್ ಮಾಡಿದರೂ, ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಈ ವೇಳೆ ಕೆಎಲ್ ರಾಹುಲ್ ಯಾವುದೇ ಆತಂಕವಿಲ್ಲದೆ, ತಮಗೇನೂ ತಿಳಿಯದಂತೆ ಅತ್ಯಂತ ಶಾಂತವಾಗಿ ತಲೆಯಾಡಿಸಿದರು.

ಅಷ್ಟೇ ಅಲ್ಲದೆ ಅಫ್ಘಾನ್ ಆಟಗಾರರು ಡಿಆರ್​ಎಸ್​ ತೆಗೆದುಕೊಳ್ಳಲು ಕೆಎಲ್ ರಾಹುಲ್ ಅವರ ಹಾವಭಾವನ್ನು ಗಮನಿಸಿದ್ದಾರೆ. ಈ ವೇಳೆ ಅವರು ಬ್ಯಾಟ್​ನ ಹ್ಯಾಂಡಲ್​ನಿಂದ ಸೌಂಡ್ ಬಂದಂತೆ ಪರೀಕ್ಷಿಸುತ್ತಿದ್ದ ನಿಂತಿದ್ದರು.

ಇದಾಗ್ಯೂ  ಸ್ಲಿಪ್‌ನಲ್ಲಿದ್ದ ರಹಮಾನುಲ್ಲಾ ಗುರ್ಬಾಝ್ ರಿವ್ಯೂ ತೆಗೆದುಕೊಳ್ಳುವಂತೆ ನಾಯಕ ಹಶ್ಮತುಲ್ಲಾ ಶಾಹಿದಿಗೆ ಒತ್ತಾಯಿಸಿದರು. ಆದರೆ ರಾಹುಲ್ ಅವರ ಮುಖದ ಹಾವಭಾವ ನೋಡಿ ಗೊಂದಲಕ್ಕೊಳಗಾದ ಕೀಪರ್ ಮತ್ತು ನಾಯಕ ರಿವ್ಯೂ ಬೇಡ ಎಂದು ನಿರ್ಧರಿಸಿದರು.

ಮುಂದಿನ ಕೆಲವು ನಿಮಿಷಗಳಲ್ಲಿ ಟಿವಿ ರಿಪ್ಲೇನಲ್ಲೇ ಬ್ಯಾಟ್‌ಗೆ ಚೆಂಡು ಸ್ಪಷ್ಟವಾಗಿ ತಗುಲಿರುವುದು ದೊಡ್ಡ ಸ್ಪೈಕ್ ಮೂಲಕ ಸಾಬೀತಾಯಿತು. ಇದನ್ನು ನೋಡಿ ಅಫ್ಘಾನ್ ಆಟಗಾರರು ತಲೆಮೇಲೆ ಕೈ ಹೊತ್ತು ಕುಳಿತುಕೊಂಡರು. ಅಂದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅಫ್ಘಾನ್ ಆಟಗಾರರು ವಿಫಲರಾದರು.

ರಾಹುಲ್ ನಟನೆಗೆ ಆಸ್ಕರ್ ಪ್ರಶಸ್ತಿ ನೀಡಬೇಕು!

ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸುತ್ತಿದ್ದ ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್ ಈ ಬಗ್ಗೆ ಲೈವ್ ಕಾಮೆಂಟರಿಯಲ್ಲಿ ಮಾತನಾಡುತ್ತಾ, “ಕೆ.ಎಲ್. ರಾಹುಲ್ ಇಲ್ಲಿ ಅದ್ಭುತ ಆಟ ಆಡಿದ್ದಾರೆ. ನಾಯಕ ಮತ್ತು ಕೀಪರ್ ರಾಹುಲ್ ಮುಖ ನೋಡಿದಾಗ ಅವರು ಏನೂ ಆಗಿಲ್ಲ ಎಂಬಂತೆ ತಲೆಯಾಡಿಸಿದರು. ಎದುರಾಳಿಗಳು ಅದನ್ನು ನಂಬಿಯೇ ಬಿಟ್ಟರು. ರಾಹುಲ್ ಅವರ ಈ ನಟನೆಗೆ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ ಮಾಡಬೇಕು” ಎಂದು ಲೇವಡಿ ಮಾಡಿದ್ದಾರೆ.

ಅಂದರೆ ಗ್ರೇಮ್ ಸ್ವಾನ್ ಪ್ರಕಾರ, ಕೆಎಲ್ ರಾಹುಲ್ ತಮ್ಮ ನಟನೆಯ ಮೂಲಕ ಅಫ್ಘಾನಿಸ್ತಾನ್ ಆಟಗಾರರು ಡಿಆರ್​ಎಸ್​ ತೆಗೆದುಕೊಳ್ಳುದಂತೆ ಮಾಡಿದ್ದಾರೆ. ಸಿನಿಮಾಗಳಲ್ಲಿ ಅತ್ಯುತ್ತಮವಾಗಿ ನಟಿಸುವ ನಟ-ನಟಿಯರಿಗೆ ವಿಶ್ವದ ಅತ್ಯುನ್ನತ ‘ಆಸ್ಕರ್ ಪ್ರಶಸ್ತಿ’ ನೀಡಲಾಗುತ್ತದೆ. ಇಲ್ಲಿ ಕೆ.ಎಲ್. ರಾಹುಲ್ ಮೈದಾನದಲ್ಲಿ ಒಬ್ಬ ವೃತ್ತಿಪರ ನಟನಿಗಿಂತಲೂ ಅದ್ಭುತವಾಗಿ ನಟಿಸಿ ಎದುರಾಳಿ ತಂಡವನ್ನು ದಾರಿ ತಪ್ಪಿಸಿದ್ದಾರೆ ಎಂದು ಗ್ರೇಮ್ ಸ್ವಾನ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಒಂದೇ ತಂಡವಾದ ಎರಡು ಟೀಮ್​​ಗಳು..!

ಸೆಂಚುರಿ ಸಿಡಿಸಿದ ಕನ್ನಡಿಗ:

ಕೇವಲ 16 ರನ್ ಗಳಿಸಿದ್ದಾಗ ಸಿಕ್ಕ ಈ ಜೀವದಾನವನ್ನು ಪೂರ್ಣವಾಗಿ ಬಳಸಿಕೊಂಡ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 165 ಎಸೆತಗಳಲ್ಲಿ ಭರ್ಜರಿ ಶತಕ (100 ರನ್) ಬಾರಿಸಿದರು. ಇವರೊಂದಿಗೆ ನಾಯಕ ಶುಭ್‌ಮನ್ ಗಿಲ್ (103*) ಕೂಡ ಶತಕ ಸಿಡಿಸಿದರು. ಪರಿಣಾಮ, ಭಾರತ ತಂಡವು  ಮೊದಲ ದಿನದ ಆಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368  ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ.

Source link

Exit mobile version