‘ಜಂತರ್ ಮಂತರ್‌ನಲ್ಲಿ ಯಾವ ಗುಂಡಿನ ದಾಳಿಯೂ ನಡೆದಿಲ್ಲ’; ರಾಹುಲ್ ಗಾಂಧಿಗೆ ಸಚಿವ ಜೆ.ಪಿ. ನಡ್ಡಾ ತಿರುಗೇಟು – Kannada News | No firing at Jantar Mantar JP Nadda counters Rahul Gandhi

ನವದೆಹಲಿ, ಆಗಸ್ಟ್ 10: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯಾವುದೇ ಗುಂಡಿನ ದಾಳಿ ಅಥವಾ ಪೆಲೆಟ್ ಗನ್ ಪ್ರಯೋಗ ನಡೆದಿಲ್ಲ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda) ಸ್ಪಷ್ಟಪಡಿಸಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿವೇಶನದ ಆರಂಭದಲ್ಲಿ ರಾಹುಲ್ ಗಾಂಧಿ ನೀಟ್ (NEET) ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದರು. ಸರ್ಕಾರ ಅದಕ್ಕೆ ಒಪ್ಪಿಕೊಂಡಾಗ ರಾಮಮಂದಿರ ಟ್ರಸ್ಟ್ ವಿಷಯ ಎತ್ತಿದರು. ನಂತರ ಜಂತರ್ ಮಂತರ್ ಘಟನೆಯ ಕುರಿತು ಪ್ರಸ್ತಾಪಿಸಿ ದಿನಕ್ಕೊಂದು ನಿರೂಪಣೆ ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಷಯಗಳನ್ನು ಬದಲಾಯಿಸುತ್ತಾ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸದನ ನಡೆಯದಂತೆ ತಡೆಯುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದು ಜೆ.ಪಿ ನಡ್ಡಾ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಆರಂಭದಲ್ಲಿ ನೀಟ್ (NEET) ಕುರಿತು ಚರ್ಚೆಗೆ ಆಗ್ರಹಿಸಿದ್ದರು. ಆದರೆ, ಸರ್ಕಾರ ಅದಕ್ಕೆ ಒಪ್ಪಿಕೊಂಡಾಗ ತಮ್ಮ ಬೇಡಿಕೆಯನ್ನು ಬದಲಾಯಿಸಿ, ರಾಮಮಂದಿರ ಟ್ರಸ್ಟ್ ಮತ್ತು ಜಂತರ್ ಮಂತರ್ ಘಟನೆಯನ್ನು ಪ್ರಸ್ತಾಪಿಸಿದರು ಎಂದು ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ

“ರಾಹುಲ್ ಗಾಂಧಿ ಸಂಸತ್ತಿನಲ್ಲಿ ದಿನಕ್ಕೊಂದು ವಿಷಯವನ್ನು ಬದಲಾಯಿಸುತ್ತಿದ್ದಾರೆ. ಮಾತುಕತೆ ನಡೆಸುವುದು ಅವರ ಉದ್ದೇಶವಲ್ಲ; ಗೊಂದಲ ಸೃಷ್ಟಿಸುವುದಾಗಿದೆ. ಅಧಿವೇಶನದ ಆರಂಭದಲ್ಲಿ ಅವರು ನೀಟ್ ಕುರಿತು ಚರ್ಚೆಗೆ ಆಗ್ರಹಿಸಿದರು. ನಾವು ಅದಕ್ಕೆ ಒಪ್ಪಿದಾಗ ರಾಮಮಂದಿರ ಟ್ರಸ್ಟ್ ವಿಷಯ ಎತ್ತಿದರು, ನಂತರ ಜಂತರ್ ಮಂತರ್ ಘಟನೆಯ ಕುರಿತು ಗೃಹ ಸಚಿವರೇ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರು. ಸದನ ನಡೆಯಬಾರದು ಎಂಬುದೇ ಅವರ ಉದ್ದೇಶ” ಎಂದಿದ್ದಾರೆ.

“ಅವರಿಗೆ ಸದನ ನಡೆಯುವುದು ಬೇಕಾಗಿಲ್ಲ. ಅದಕ್ಕಾಗಿಯೇ ಅವರು ಕಳೆದ 15 ದಿನಗಳಿಂದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ” ಎಂದು ಹೇಳಿದ ಜೆಪಿ ನಡ್ಡಾ, ಜಂತರ್ ಮಂತರ್ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ಒಪ್ಪಿಕೊಂಡಾಗ, ರಾಹುಲ್ ಗಾಂಧಿ ಅಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಾರಂಭಿಸಿದರು ಎಂದು ಆರೋಪಿಸಿದರು.

ಇದನ್ನೂ ಓದಿ: ‘ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ’; ತಮ್ಮದೇ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

“ಇಂದು ಜಂತರ್ ಮಂತರ್ ವಿಷಯದ ಬಗ್ಗೆ ಚರ್ಚಿಸಲು ನಿರ್ಧರಿಸಿದಾಗ ಅಲ್ಲಿ ಯಾವುದೇ ಅಂತಹ ಘಟನೆ ನಡೆಯದಿದ್ದರೂ, ಗುಂಡಿನ ದಾಳಿ ನಡೆದಿದೆ ಎಂದು ಹೇಳುವ ಮೂಲಕ ಅವರು ಜನರನ್ನು ಮತ್ತು ದೇಶವನ್ನು ದಾರಿ ತಪ್ಪಿಸಲು ತೊಡಗಿದರು” ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಗೃಹ ಸಚಿವರು ಸಿದ್ಧರಿದ್ದಾರೆ ಎಂದು ಹೇಳಿದ ಜೆಪಿ ನಡ್ಡಾ, “ನಾನು ರಾಹುಲ್ ಗಾಂಧಿಯವರಿಗೆ ಮತ್ತೊಮ್ಮೆ ಸವಾಲು ಹಾಕುತ್ತೇನೆ. ಸದನಕ್ಕೆ ಬನ್ನಿ. ನಾವು ಚರ್ಚೆಗೆ ಸಿದ್ಧರಿದ್ದೇವೆ ಮತ್ತು ನಿಮಗೆ ತಕ್ಕ ಉತ್ತರ ಸಿಗಲಿದೆ. ಅಪಪ್ರಚಾರ ಹರಡಬೇಡಿ. ಜಂತರ್ ಮಂತರ್‌ನಲ್ಲಿ ಯಾವುದೇ ಗುಂಡು ಹಾರಿಸಿಲ್ಲ ಅಥವಾ ಅಲ್ಲಿ ಗುಂಡು ಹಾರಿಸಲು ಯಾವುದೇ ಆದೇಶ ನೀಡಿರಲಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಕಣ್ಣೆದುರೇ ಹತ್ಯೆ: ಒಂದು ಎಕರೆ ಜಮೀನಿಗಾಗಿ ಅಣ್ಣನನ್ನೇ ಕೊಂದು ಜೈಲು ಸೇರಿದ ತಮ್ಮ – Kannada News | Haveri Land Dispute: Brother Allegedly Kills Sibling Over One Acre Property

ಹಾವೇರಿ, ಆಗಸ್ಟ್​​ 10: ದೂರದ ಊರಿಗೆ ಕೂಲಿ ಕೆಲಸ ಮಾಡಲು ಹೋಗಿದ್ದ ಅಣ್ಣ ಮನೆಗೆ ಬರುತ್ತಿದ್ದಂತೆ ತಮ್ಮನ ಪಿತ್ತ ನೆತ್ತಿಗೇರಿತ್ತು. ಪ್ರಯಾಣ ಮಾಡಿ ಸುಸ್ತಾಗಿದ್ದ ಅಣ್ಣ, ಅಮ್ಮನ ಕೈ ತುತ್ತು ತಿಂದು ಮಲಗಿದ್ದ. ಆತ ಮಲಗುವುದನ್ನೇ ಕಾಯುತ್ತಿದ್ದ ತಮ್ಮ, ತಾಯಿ ಎದುರೇ ಕಲ್ಲು ಎತ್ತಿಹಾಕಿ ಅಣ್ಣನನ್ನು ಕೊಲೆ ಮಾಡಿದ್ದಾನೆ. ಆ ಮೂಲಕ ಒಂದು ಎಕರೆ ಜಮೀನು ವಿವಾದ ಕೊಲೆಯಲ್ಲಿ (kill) ಅಂತ್ಯವಾಗಿದೆ. ಹಾವೇರಿ (haveri) ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಹತ್ಯೆಯಾದ ವ್ಯಕ್ತಿಯನ್ನು ಸಂತೋಷ ಸವಣೂರು (31) ಎಂದು ಗುರುತಿಸಲಾಗಿದ್ದು, ಆತನ ಕಿರಿಯ ಸಹೋದರ ಕುಮಾರ ಸವಣೂರು ನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರು ಒಂದೇ ತಾಯಿಯ ಮಕ್ಕಳು. ಆದರೆ ಒಂದು ಎಕರೆ ಜಮೀನು ಇವರಿಬ್ಬರ ನಡುವೆ ದ್ವೇಷದ ಗೋಡೆ ಕಟ್ಟಿತ್ತು. ಆಗಾಗ ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ, ಕುಡಿದ ಮತ್ತಿನಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿದೆ.‌ ಕಿರಿಯ ಸಹೋದರನೇ ಅಣ್ಣನನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಗದ್ದೆಯಲ್ಲಿ ಶವ ಹೂತ ಪತ್ನಿ: 6 ತಿಂಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ನಿವಾಸಿಗಳು. ಮೃತನ ಸೋದರಮಾವ (ತಾಯಿಯ ತಮ್ಮ) ತನ್ನ ಅಕ್ಕ ಹಾಗೂ ಆಕೆಯ ಮಕ್ಕಳಿಗಾಗಿ ಒಂದು ಎಕರೆ ಜಮೀನು ನೀಡಿದ್ದು, ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಈ ಜಮೀನು ಸೇರುತ್ತದೆ ಎಂದು ಹೇಳಿದ್ದರು.

ಕುಡಿತದ ಚಟ: ಜಮೀನಿಗಾಗಿ ಗಲಾಟೆ

ಮೃತ ಸಂತೋಷ ಊರಲ್ಲೇ ಕೂಲಿ ಕೆಲಸ ಮಾಡುತ್ತಾ ಜಮೀನನ್ನೂ ನೋಡಿಕೊಳ್ಳುತ್ತಿದ್ದ. ಹೊರಗೆ ಕೆಲಸ ಮಾಡುತ್ತಿದ್ದ ತಮ್ಮ ಕುಮಾರ ಮಾತ್ರ ಸ್ನೇಹಿತರೊಂದಿಗೆ ಸೇರಿ ಕುಡಿತದ ಚಟಕ್ಕೆ ಬಿದ್ದು, ಆ ಜಮೀನನ್ನು ತನಗೆ ಬಿಟ್ಟುಕೊಡುವಂತೆ ಅಣ್ಣನ ಬಳಿ ಪದೇಪದೇ ಜಗಳ ತೆಗೆಯುತ್ತಿದ್ದ.

ಕಲ್ಲು ಎತ್ತಿಹಾಕಿ ಹತ್ಯೆ

ದೂರದ ಊರಿನಿಂದ ಪ್ರಯಾಣ ಮಾಡಿ ಸುಸ್ತಾಗಿ ಬಂದಿದ್ದ ಅಣ್ಣ ಸಂತೋಷ ಮತ್ತು ತಮ್ಮ ಕುಮಾರ ಇಬ್ಬರೂ ನಿನ್ನೆ ತಡರಾತ್ರಿ ಸಮೀಪದ ಬಾರ್‌ಗೆ ತೆರಳಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಅಮ್ಮನ ಕೈತುತ್ತು ತಿಂದ ನಂತರ ಸಂತೋಷ ಮನೆಯ ಕಟ್ಟೆಯ ಮೇಲೆ ಮಲಗಿದ್ದಾಗ, ಅಲ್ಲಿಗೆ ಬಂದ ಕುಮಾರ ಕೆದಕಿ ಜಗಳಕ್ಕೆ ನಿಂತಿದ್ದಾನೆ. ತಾಯಿ ಇಬ್ಬರಿಗೂ ಜಗಳ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದರೂ ಲೆಕ್ಕಿಸದ ಕುಮಾರ, ಮನೆ ಅಂಗಳದಲ್ಲೇ ತಾಯಿಯ ಕಣ್ಣೆದುರೇ ಕಟ್ಟೆಯ ಮೇಲೆ ಮಲಗಿದ್ದ ಅಣ್ಣ ಸಂತೋಷನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದುರಂತ: ಎಸ್​​​​ಎಸ್​​​​​ಎಲ್​​​ಸಿ ವಿದ್ಯಾರ್ಥಿ ನಿಗೂಢ ಸಾವು

ತೀವ್ರ ಗಾಯಗೊಂಡ ಸಂತೋಷ ಸ್ಥಳದಲ್ಲೇ ಮೃತಪಟ್ಟಿದ್ದು, ಅಣ್ಣನನ್ನು ಕೊಂದ ತಮ್ಮ ಇದೀಗ ಜೈಲು ಪಾಲಾಗಿದ್ದಾನೆ. ಜಮೀನಿಗಾಗಿ ನಡೆದ ರಕ್ತಪಾತದಿಂದಾಗಿ ಒಬ್ಬ ಮಗ ಹೆಣವಾಗಿ, ಇನ್ನೊಬ್ಬ ಮಗ ಜೈಲುಪಾಲಾಗಿದ್ದು, ಇತ್ತ ತಾಯಿಯ ಬದುಕು ಕತ್ತಲೆಯಂತಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​ಬಿಐ ಅಂದಾಜಿಗಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ: ಅರವಿಂದ್ ಪನಗರಿಯಾ – Kannada News | Indian economy to grow by atleast 7pc says arvind panagariya

ನವದೆಹಲಿ, ಆಗಸ್ಟ್ 10: ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗದ ವಿಚಾರದಲ್ಲಿ ಅರವಿಂದ್ ಪನಗರಿಯಾ (Arvind Panagariya) ಹೆಚ್ಚು ಆಶಾವಾದಿಯಾಗಿದ್ದಾರೆ. ಭಾರತದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಬೆಳೆಯಬಹುದು ಎಂದು ಆರ್​ಬಿಐ ತನ್ನ ಇತ್ತೀಚಿನ ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಿದೆ. ಆದರೆ, ಭಾರತದ ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ ಹಾಗೂ ಈಗಿನ 16ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆಗಿರುವ ಅರವಿಂದ್ ಪನಗರಿಯಾ ಅವರು ಭಾರತದ ಜಿಡಿಪಿಯ ಬೆಳವಣಿಗೆ ಶೇ. 7ಕ್ಕಿಂತ ಹೆಚ್ಚಿನ ದರದಲ್ಲಿ ಮುಂದುವರಿಯುತ್ತದೆ ಎಂದಿದ್ದಾರೆ. ಆರ್​ಬಿಐ ಮಾಡಿರುವ ಅಂದಾಜು ತುಸು ಜಾಗರೂಕತೆಯಿಂದ ಕೂಡಿರಬಹುದು. ಆದರೆ, ವಾಸ್ತವಿಕ ಬೆಳವಣಿಗೆಯು ಅದಕ್ಕಿಂತ ಹೆಚ್ಚಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮನಿಕಂಟ್ರೋಲ್ ಎಕ್ಸ್​ಕ್ಲೂಸಿವ್ ವರದಿಯಲ್ಲಿ ತಿಳಿಸಲಾಗಿದೆ.

ಶೇ. 7ಕ್ಕಿಂತ ಹೆಚ್ಚಿನ ಪ್ರಗತಿಯ ಭರವಸೆ

ಭಾರತದ ಆರ್ಥಿಕ ತಳಹದಿ ಬಲವಾಗಿದೆ. ಮೂಲಸೌಕರ್ಯ ವಿಸ್ತರಣೆ, ಜಿಎಸ್‌ಟಿ ವ್ಯವಸ್ಥೆಯ ಸುಧಾರಣೆ ಹಾಗೂ ಆದಾಯ ತೆರಿಗೆ ಹಂತಗಳ ಸರಳೀಕರಣದ ಪರಿಣಾಮವಾಗಿ ಭಾರತದ ಜಿಡಿಪಿ (GDP) ಪ್ರಗತಿಯು ಆರ್‌ಬಿಐ ಅಂದಾಜಿಸಿರುವುದಕ್ಕಿಂತ ಉತ್ತಮವಾಗಿರಲಿದೆ ಎಂದು ಪನಗರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣಕಾಸು ಸಂಸ್ಥೆಗಳು ಮತ್ತು ಆರ್‌ಬಿಐ ಸಾಮಾನ್ಯವಾಗಿ ಮುನ್ನೆಚ್ಚರಿಕೆಯಾಗಿ ಕೊಂಚ ಕಡಿಮೆ ಬೆಳವಣಿಗೆಯ ದರವನ್ನು ಪ್ರಕ್ಷೇಪಿಸುತ್ತವೆ (Underestimate). ಆದರೆ ಭಾರತವು ಇತ್ತೀಚಿನ ತ್ರೈಮಾಸಿಕಗಳಲ್ಲಿ ಸಾಧಿಸುತ್ತಿರುವ ವೇಗವನ್ನು ಗಮನಿಸಿದರೆ ಶೇ. 7 ರ ಗಡಿಯನ್ನು ಸುಲಭವಾಗಿ ದಾಟಲಿದೆ ಎಂದಿದ್ದಾರೆ.

ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?

ಇತ್ತೀಚಿನ ವರ್ಷಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಆರ್​ಬಿಐ ಹಾಗೂ ಇತರ ದೇಶ ವಿದೇಶಗಳ ಏಜೆನ್ಸಿಗಳ ಲೆಕ್ಕಾಚಾರಕ್ಕಿಂತಲೂ ಹೆಚ್ಚೇ ದಾಖಲು ಮಾಡಿದೆ. ಹೀಗಾಗಿ, ಪನಗರಿಯಾ ವ್ಯಕ್ತಪಡಿಸಿರುವ ಅಭಿಪ್ರಾಯ ಸಂದರ್ಭೋಚಿತ ಎನಿಸಬಹುದು.

ಸುಧಾರಣೆಗಳ ಬಲ: ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರಗಳೂ ಸಹ ಕೈಗಾರಿಕಾ, ಕಾರ್ಮಿಕ ಮತ್ತು ಮೂಲಸೌಕರ್ಯ ವಲಯಗಳಲ್ಲಿ ತರುತ್ತಿರುವ ಸುಧಾರಣೆಗಳು ಆರ್ಥಿಕತೆಗೆ ದೊಡ್ಡ ಶಕ್ತಿ ನೀಡುತ್ತಿವೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.

ಪ್ರಗತಿಗೆ ಎದುರಾಗಬಹುದಾದ ಸವಾಲುಗಳು ಮತ್ತು ಸಲಹೆಗಳು

ಆರ್ಥಿಕತೆಯು ದೀರ್ಘಾವಧಿಯಲ್ಲಿ ಹೆಚ್ಚಿನ ವೇಗದಲ್ಲಿ ಸಾಗಲು ಪನಗರಿಯಾ ಅವರು ಕೆಲ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:

  • ಉದ್ಯೋಗ ಸೃಷ್ಟಿ: ಕೇವಲ ಜಿಡಿಪಿ ಬೆಳೆದರೆ ಸಾಲದು, ಹೆಚ್ಚಿನ ಕೌಶಲ ಮತ್ತು ಉತ್ತಮ ವೇತನ ನೀಡುವ ಉದ್ಯೋಗಗಳನ್ನು ಸೃಷ್ಟಿಸುವುದು ಪ್ರಸ್ತುತ ಭಾರತದ ಮುಂದಿರುವ ಪ್ರಮುಖ ಆಕಾಂಕ್ಷೆಯಾಗಿದೆ.
  • ಕಾರ್ಮಿಕ ಕಾಯ್ದೆಗಳ ಅನುಷ್ಠಾನ: ರಾಜ್ಯಗಳು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳನ್ನು (Labour Codes) ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು.
  • ಖಾಸಗೀಕರಣ ಮತ್ತು ವ್ಯಾಪಾರ: ತಂತ್ರಜ್ಞಾನೇತರ ಮತ್ತು ನಾನ್-ಸ್ಟ್ರಾಟೆಜಿಕ್ ರಂಗಗಳಲ್ಲಿ ಖಾಸಗೀಕರಣಕ್ಕೆ ಚುರುಕು ಮುಟ್ಟಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ (ಅಮೆರಿಕ ಮತ್ತು ಇಯು ಜೊತೆ) ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTA) ಜಾರಿಗೆ ತರುವುದು ಅಗತ್ಯವಾಗಿದೆ.

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ಒಟ್ಟಾರೆಯಾಗಿ, ಜಾಗತಿಕ ಮಟ್ಟದ ಸವಾಲುಗಳ ನಡುವೆಯೂ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಈ ವಿಡಿಯೋದಲ್ಲಿದೆ ಪೂರ್ತಿ ವಿವರ – Kannada News | Geetu Mohandas background and Biography Yash starrer Toxic Movie Director career details

‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಹಿನ್ನೆಲೆ ಏನು ಎಂಬ ಕುತೂಹಲ ಹಲವರಿಗೆ ಇದೆ. ಆ ಪ್ರಶ್ನೆಗೆ ಈ ವಿಡಿಯೋದಲ್ಲಿದೆ ಉತ್ತರ. ಗೀತು ಮೋಹನ್​ದಾಸ್ (Geetu Mohandas) ಅವರಿಗೆ ಚಿತ್ರರಂಗದ ನಂಟು ಬಾಲ್ಯದಿಂದಲೇ ಇದೆ. ಮೊದಲು ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 5 ವರ್ಷ ವಯಸ್ಸು. ಬಳಿಕ ಅವರು ಹೀರೋಯಿನ್ ಆಗಿ ಮಿಂಚಿದರು. ನಂತರ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಈಗ ಅವರು ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್, ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅವರಂತಹ ಸ್ಟಾರ್ ಕಲಾವಿದರಿಗೆ ಗೀತು ಮೋಹನ್​ದಾಸ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಆಗಸ್ಟ್ 26ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

Source link

ಬೆಂಗಳೂರು ಏರ್​​​​ಪೋರ್ಟ್​​​ ಬಳಿಯ ಹೋಟೆಲ್​​​ನಲ್ಲಿ ಘೋರ ದುರಂತ: ಇಬ್ಬರು ಮಕ್ಕಳನ್ನ ಕೊಂದ ತಂದೆ – Kannada News | A Father attempts Suicide after Killed His two daughters In taj Hotel Near Bengaluru Airport

ಬೆಂಗಳೂರು, (ಆಗಸ್ಟ್​ 10): ಕೆಂಪೇಗೌಡ ವಿಮಾಣ ನಿಲ್ದಾಣ (kempegowda international airport) ಬಳಿಕ ತಾಜ್‌ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನ ನೇಣುಹಾಕಿ ಕೊಂದು ಬಳಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇಮ್ರಾನ್‌ ಎಂಬಾತ ತನ್ನ 5 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನ ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಜ್ ಹೋಟೆಲ್‌ನ 4ನೇ ಮಹಡಿಯ ರೂಮ್‌ನಲ್ಲಿ ಘಟನೆ ನಡೆದಿದ್ದು, ಕೊಲೆಯಾದ ಮಕ್ಕಳನ್ನ ಶೇಕ್ ಜೆಹರಾ (5 ವರ್ಷ), ಶೇಕ್ ಜೋಯಾ (10 ವರ್ಷ) ಎಂದು ಗುರುತಿಸಲಾಗಿದೆ.

ಇಮ್ರಾನ್‌ ಮೂಲತಃ ಬೆಂಗಳೂರಿನ ನಾಗವಾರದ ನಿವಾಸಿಯಾಗಿದ್ದು, Zimmy ಕ್ಯಾಬ್‌ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿದ್ದ. ಮಕ್ಕಳನ್ನ ಹತ್ಯೆ ಮಾಡಲು ಹೋಟೆಲ್‌ನಲ್ಲಿ ಮುಂಚಿತವಾಗಿಯೇ ರೂಂ ಬುಕ್ ಮಾಡಿದ್ದ ಎನ್ನಲಾಗಿದ್ದು, ಮೊದಲು ಇಬ್ಬರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ, ನೋವು ತಾಳಲಾರದೇ ಇಮ್ರಾನ್​ ಚೀರಾಡಿದ್ದು, ಇದನ್ನು ಕೇಳಿದ ಹೋಟೆಲ್ ಸಿಬ್ಬಂದಿ ರೂಮ್​ ಬಳಿ ಬಂದು ಕೂಡಲೇ ಇಮ್ರಾನ್​ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದುರಂತ: ಎಸ್​​​​ಎಸ್​​​​​ಎಲ್​​​ಸಿ ವಿದ್ಯಾರ್ಥಿ ನಿಗೂಢ ಸಾವು

ಇಮ್ರಾನ್‌ನನ್ನ ಸದ್ಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೊಲೆ‌ ಮತ್ತು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ತಿಳಿಯುತ್ತಿದ್ದಂತೆ ಏರ್‌ಪೋರ್ಟ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕಾರಣವೇನು ಎಂಬುವುದನ್ನು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ’; ತಮ್ಮದೇ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

ರಾಂಚಿ, ಆಗಸ್ಟ್ 10: ಜಾರ್ಖಂಡ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಲಾಠಿಚಾರ್ಜ್ ನಡೆಸಿರುವುದನ್ನು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರವಾಗಿ ಖಂಡಿಸಿದ್ದಾರೆ. ಜಾರ್ಖಂಡ್​​ನಲ್ಲಿ ಜೆಎಂಎಂ ನೇತೃತ್ವದ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿದೆ. ಇದೀಗ ತಮ್ಮದೇ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಧ್ವನಿಯೆತ್ತಿದ್ದಾರೆ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳು ಮತ್ತು ಪ್ರತಿಭಟನೆಯ ವಿರುದ್ಧ ಬಲಪ್ರಯೋಗ ಮಾಡುವುದು ಸಂಪೂರ್ಣವಾಗಿ ತಪ್ಪು. ಸರ್ಕಾರವು ವಿದ್ಯಾರ್ಥಿಗಳ ಧ್ವನಿಯನ್ನು ನಿಯಂತ್ರಿಸಲು ಯತ್ನಿಸುವ ಬದಲು ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದಿದ್ದಾರೆ.

ಜಾರ್ಖಂಡ್​​ನಲ್ಲಿ ಪರೀಕ್ಷಾ ಪಾರದರ್ಶಕತೆ, ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾನಿರತ ಯುವಕರ ಮೇಲಿನ ಪೊಲೀಸ್ ಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಜಾರ್ಖಂಡ್ ಸರ್ಕಾರ ಮಾತುಕತೆಯನ್ನು ಮುಂದುವರಿಸಿ, ಅವರ ಕಳವಳಗಳನ್ನು ಶೀಘ್ರವೇ ಪರಿಹರಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಶ್ ಈಗಾಗಲೇ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಟಾಕ್ಸಿಕ್ ಬಗ್ಗೆ ಅಜಯ್ ರಾವ್ ಮಾತು – Kannada News | Krishna Ajay Rao praises Yash Toxic movie says he will conquer the world

ಕನ್ನಡ ಚಿತ್ರರಂಗದಿಂದ ಶುರುವಾದ ಯಶ್ ಅವರ ಸಿನಿಮಾ ಜರ್ನಿ ಈಗ ಜಾಗತಿಕ ಮಟ್ಟಕ್ಕೆ ತಲುಪಿದೆ. ಬಿಡುಗಡೆಗೆ ಸಜ್ಜಾಗಿರುವ ‘ಟಾಕ್ಸಿಕ್’ (Toxic) ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಖ್ಯಾತ ನಟ ಕೃಷ್ಣ ಅಜಯ್ ರಾವ್ ಅವರು ಯಶ್ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಮೇಲೆ ನನಗೂ ನಿರೀಕ್ಷೆ ಇದೆ. ನಿರೀಕ್ಷೆಗಿಂತ ಜಾಸ್ತಿ ಭರವಸೆ ಇದೆ. ಅವರು ಮಾಡಿದ್ದೆಲ್ಲವೂ ಕೈ ಹಿಡಿದಿದೆ. ಅವರ ವಿಷನ್​ಗೆ ಹ್ಯಾಟ್ಸ್​ ಆಫ್. ರಾಜ್ಯ, ದೇಶ ಗೆದ್ದಾಗಿದೆ. ಈಗ ವಿಶ್ವದ ಕಡೆಗೆ ಹೊರಟಿದ್ದಾರೆ. ಅಲ್ಲಿಯೂ ಗೆಲ್ಲುತ್ತಾರೆ ಎಂಬ ನಂಬಿಕೆ ನನಗೆ ಇದೆ. ಅದು ದೊಡ್ಡ ವಿಚಾರ ಅಂತ ನನಗೆ ಅನಿಸುತ್ತಿಲ್ಲ. ಯಾಕೆಂದರೆ, ನಾವು ನೋಡುತ್ತಾ ಇರುತ್ತೇವೆ. ವಿಶ್ವ ಗೆದ್ದ ಬಳಿಕ ಅವರು ಏನು ಮಾಡುತ್ತಾರೋ ಗೊತ್ತಿಲ್ಲ’ ಎಂದು ಕೃಷ್ಣ ಅಜಯ್ ರಾವ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದುರಂತ: ಎಸ್​​​​ಎಸ್​​​​​ಎಲ್​​​ಸಿ ವಿದ್ಯಾರ್ಥಿ ನಿಗೂಢ ಸಾವು – Kannada News | SSLC Student Dies Under Mysterious Circumstances at Government School

ಪ್ರಾತಿನಿಧಿಕ ಚಿತ್ರImage Credit source: Getty images

ಶಿವಮೊಗ್ಗ, ಆಗಸ್ಟ್​​ 10: ಎಸ್​​​ಎಸ್​​ಎಲ್​​ಸಿ ವಿದ್ಯಾರ್ಥಿ (SSLC student) ಏಕಿಏಕಿ ಕುಸಿದುಬಿದ್ದು ಸಾವನ್ನಪ್ಪಿರುವಂತಹ (death) ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಜಿ.ಕೆ.ವಿನಯ್(15) ಮೃತ ವಿದ್ಯಾರ್ಥಿ. ಸದ್ಯ ವಿನಯ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಇತರರು ಚೆಸ್ ಆಡುತ್ತಿರುವುದನ್ನು ವಿನಯ್ ನೋಡುತ್ತ ಕುಳಿತುಕೊಂಡಿದ್ದ. ಈ ವೇಳೆ ದಿಢೀರ್ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿಕ್ಷಕರು ಆತನನ್ನು ಆಯನೂರು ಪಿಹೆಚ್​ಸಿಗೆ ಕರೆತಂದಿದ್ದಾರೆ. ಆದರೆ ವಿನಯ್ ಸ್ಥಿತಿ ಗಂಭೀರವಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸುವಷ್ಟರಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ವಿನಯ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸ್ತಿರೋ ಪೋಷಕರು

ಮೃತ ವಿದ್ಯಾರ್ಥಿ ವಿನಯ್​ನ ತಂದೆ-ತಾಯಿ ಶಿಕಾರಿಪುರದವರು. ಆಯನೂರು ಸಮೀಪದ ತಮ್ಮಡಿಹಳ್ಳಿಯ ಅಜ್ಜನ ಮನೆಯಲ್ಲಿ ವಾಸವಿದ್ದು ಓದುತ್ತಿದ್ದ. ಪೋಷಕರ ಆಕ್ರಂದನ ಮುಗಿಲು‌ ಮುಟ್ಟಿದೆ. ಇನ್ನು ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ.

ಖಾಸಗಿ ಶಾಲೆಯ ವಾಹನದಡಿ ಸಿಲುಕಿ 3 ವರ್ಷದ ಬಾಲಕಿ ಸಾವು

ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಶಾಲಾ ವಾಹನದಡಿ ಸಿಲುಕಿ ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಶಿರ್ಷಾ ಸುಹಾಸ ವಾಡಿ (3) ಮೃತಪಟ್ಟ ದುರ್ದೈವಿ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಖಾಸಗಿ ಶಾಲಾ ಬಸ್ಸಿನಿಂದ ಬಾಲಕಿಯ ಅಣ್ಣ ಕೆಳಗೆ ಇಳಿದಿದ್ದು, ಆತನನ್ನು ನೋಡಲು ಶಿರ್ಷಾ ಮನೆಯಿಂದ ಹೊರಗೆ ಬಂದು ವಾಹನದ ಮುಂದೆ ಬಂದಿದ್ದಾಳೆ. ಈ ವೇಳೆ ಚಾಲಕ ಗಮನಿಸದೇ ವಾಹನವನ್ನು ಮುಂದೆ ಚಲಾಯಿಸಿದ್ದರಿಂದ, ಬಾಲಕಿ ವಾಹನದ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಇದನ್ನೂ ಓದಿ: 2 ತಿಂಗಳ ಮಗು ಬಾವಿಯಲ್ಲಿ ಪತ್ತೆ: ತಾಯಿ ಮೇಲೆಯೇ ಡೌಟ್, ನಿಗೂಢ ಸಾವಿನ ರಹಸ್ಯ ಬೆನ್ನತ್ತಿದ ಪೊಲೀಸ್ರು

ಇನ್ನು ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಶಾಲಾ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು – Kannada News | India is our Stalingrad for Solar manufacturing, Chinese shocked by India progress in this field

ಚೀನೀ ತಳಮಳ ತೋರಿಸುವ ಒಂದು ಎಕ್ಸ್ ಪೋಸ್ಟ್Image Credit source: PTI

ನವದೆಹಲಿ, ಆಗಸ್ಟ್ 10: ಸೌರ ವಿದ್ಯುತ್ ಉಪಕರಣಗಳ (Solar Components) ಉತ್ಪಾದನೆಯಲ್ಲಿ ಭಾರತ ಸಾಧಿಸುತ್ತಿರುವ ಅಭೂತಪೂರ್ವ ಪ್ರಗತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಮುಖವಾಗಿ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಸೌರಶಕ್ತಿ ಕ್ಷೇತ್ರದ ಬೆಳವಣಿಗೆಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಚೀನಾದ ಅಗ್ರಗಣ್ಯ ಸೌರಶಕ್ತಿ ಕಂಪನಿಗಳು ಎದುರಿಸುತ್ತಿರುವ ನಷ್ಟಕ್ಕೆ ಭಾರತದ ಈ ಬೆಳವಣಿಗೆಯೇ ಪ್ರಮುಖ ಕಾರಣ ಎಂಬ ಆತಂಕ ಚೀನೀ ನೆಟಿಜನ್‌ಗಳಲ್ಲಿ ವ್ಯಕ್ತವಾಗಿದೆ. ಅಷ್ಟಕ್ಕೂ ಚೀನಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯವೇನು?

17 ಪಟ್ಟು ಹೆಚ್ಚಾದ ಭಾರತದ ಉತ್ಪಾದನೆ

ಚೀನಾದ ಜಾಲತಾಣಗಳಲ್ಲಿ ಬಂದ ಒಂದು ವರದಿಯ ಸ್ಕ್ರೀನ್​ಶಾಟ್ ಹಾಗೂ ಅದರ ಇಂಗ್ಲೀಷ್ ಭಾಷಾಂತರದ ಚಿತ್ರವನ್ನು ಭಾರತದ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಆ ವರದಿಯಲ್ಲಿ ಭಾರತದ ಸೌರಶಕ್ತಿ ಕ್ಷೇತ್ರವು ಕಳೆದ ಏಳೆಂಟು ಕ್ಷೇತ್ರದಲ್ಲಿ ಕಂಡಿರುವ ಅದ್ವಿತೀಯ ಬೆಳವಣಿಗೆಯನ್ನು ಗುರುತಿಸಿದೆ.

ಇದನ್ನೂ ಓದಿ: 676 ಸ್ಟಾರ್ಟ್‌ಅಪ್‌ಗಳು, 548 ಒಪ್ಪಂದಗಳು: ಭಾರತದ ರಕ್ಷಣಾ ತಂತ್ರಜ್ಞಾನದ ಕನಸಿಗೆ ‘iDEX’ ಬಲ

2018 ರಿಂದೀಚೆಗೆ ಭಾರತದ ಸೌರಶಕ್ತಿ ಉಪಕರಣ ಹಾಗೂ ಫೋಟೋವೋಲ್ಟಾಯಿಕ್ (PV) ಉತ್ಪಾದನಾ ಸಾಮರ್ಥ್ಯದಲ್ಲಿ 17 ಪಟ್ಟು ಹೆಚ್ಚಳವಾಗಿದೆ. ಭಾರತವು ಸೌರಶಕ್ತಿ ಕ್ಷೇತ್ರದಲ್ಲಿ ಕೇವಲ ಆಮದುದಾರನಾಗಿ ಉಳಿಯದೆ, ಸ್ವಾವಲಂಬನೆ ಸಾಧಿಸಿ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಹೊರಹೊಮ್ಮಿರುವುದು ಚೀನೀ ಕಂಪನಿಗಳಿಗೆ ದೊಡ್ಡ ಹೊಡೆತ ನೀಡಿದೆ. ಚೀನಾದ ದೊಡ್ಡ ಸೌರಶಕ್ತಿ ತಯಾರಿಕಾ ಕಂಪನಿಗಳಿಗೆ ಬಿಲಿಯನ್​ಗಟ್ಟಲೆ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನೀಯರ ಅಳಲು ತೋರಿಸುತ್ತಿರುವ ಎಕ್ಸ್ ಪೋಸ್ಟ್

“ಸ್ಟಾಲಿನ್‌ಗ್ರಾಡ್‌”ಗೆ ಹೋಲಿಕೆ

“ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವು ನಮಗೆ ‘ಸ್ಟಾಲಿನ್‌ಗ್ರಾಡ್’ ಯುದ್ಧದಂತಾಗಿದೆ” ಎಂದು ಚೀನೀಯರು ಕಳವಳ ವ್ಯಕ್ತಪಡಿಸಿರುವುದು ಕಂಡು ಬರುತ್ತದೆ. ಸ್ಟಾಲಿನ್​ಗ್ರಾಡ್ ಎಂಬುದನ್ನು ಎರಡನೇ ವಿಶ್ವ ಮಹಾಯುದ್ಧದ ಒಂದು ಘಟನೆಯ ಉಲ್ಲೇಖಕ್ಕೆ ಬಳಕೆಯಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಸ್ಟಾಲಿನ್‌ಗ್ರಾಡ್ ನಗರದಲ್ಲಿ ಜರ್ಮನ್ ಸೇನೆಯು ಸಿಲುಕಿಕೊಂಡು ಕ್ರಮೇಣ ತನ್ನ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಚೀನಾದ ನೆಟಿಜನ್‌ಗಳು ಸೌರಶಕ್ತಿ ಮಾರುಕಟ್ಟೆಯಲ್ಲಿ ಚೀನಾದ ಸ್ಥಿತಿಯನ್ನು ಜರ್ಮನ್ ಸೇನೆಗೆ ಹಾಗೂ ಭಾರತದ ಕ್ರಾಂತಿಕಾರಿ ಬೆಳವಣಿಗೆಯನ್ನು ರಷ್ಯಾದ ಪ್ರತಿರೋಧಕ್ಕೆ ಹೋಲಿಸಿರುವುದು ಕುತೂಹಲ.

ಇದನ್ನೂ ಓದಿ: ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ?

ಚೀನಾದ ಪಿವಿ ಭದ್ರಕೋಟೆ ಒಳಗಿನಿಂದಲೇ ಬಿರುಕು

“ಚೀನಾದ ಫೋಟೋವೋಲ್ಟಾಯಿಕ್ ಕೋಟೆಯನ್ನು ಭಾರತವು ಒಳಗಿನಿಂದಲೇ ಭೇದಿಸಿದೆ” ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ. ಚೀನಾದ ಮಾರುಕಟ್ಟೆ ಪ್ರಾಬಲ್ಯವನ್ನು ಭಾರತ ಯಶಸ್ವಿಯಾಗಿ ಮೆಟ್ಟಿನಿಲ್ಲುತ್ತಿದೆ ಎಂಬುದನ್ನು ಇವರುಗಳು ಒಪ್ಪಿಕೊಂಡಿದ್ದಾರೆ. ಇಂಥ ಒಂದು ದಿನ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಕಾಮೆಂಟಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version