ತಾಯಿ ಸಾವಿನ ನೋವಲ್ಲಿ 20 ದಿನಗಳ ಮಗು ಬಿಟ್ಟು ಎಂಜಿನಯರ್​​ ಆತ್ಮಹತ್ಯೆ: ಬೆಟ್ಟದ ಮೇಲಿಂದ ಜಿಗಿದು ದಾರುಣ ಅಂತ್ಯ – Kannada News | Tumakuru Tragedy: PWD Engineer Jumps from Devarayanadurga Hill Over Mother’s Death Grief

ತುಮಕೂರು, ಮೇ 12: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಿಡಬ್ಲ್ಯೂಡಿ ಎಂಜಿನಿಯರ್​​ ಓರ್ವ 20 ದಿನಗಳ ಮಗು ಮತ್ತು ಪತ್ನಿಯನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಲ್ಲಿ (Tumakuru) ನಡೆದಿದೆ. ಮಂಜುಪ್ರಸಾದ್ ಮೃತ ವ್ಯಕ್ತಿಯಾಗಿದ್ದು, ದೇವರಾಯನದುರ್ಗ ಬೆಟ್ಟದ ಮೇಲಿಂದ ಜಿಗಿದು ದುರಂತ ಅಂತ್ಯ ಕಂಡಿದ್ದಾರೆ. ತಾಯಿಯ ಅಗಲುವಿಕೆಯ ನೋವಿನಲ್ಲಿ ಅವರಿದ್ದರು ಎನ್ನಲಾಗಿದ್ದು, ಮಂಜುಪ್ರಸಾದ್ ಸಾವು ಪತ್ನಿ ಸೇರಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸ್ನೇಹಿತರಿಗೂ ಆಘಾತ ತಂದಿದೆ.

ಮೂಲತಃ ತುಮಕೂರಿನ ಸತ್ಯಮಂಗಲದ ನಿವಾಸಿಯಾದ ಮಂಜುಪ್ರಸಾದ್ ಎಂಟೆಕ್​​ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ತಾಯಿಯ ಕನಸಿನಂತೆ ಕಳೆದ ಮೂರು ವರ್ಷಗಳ ಹಿಂದೆ ಪಿಡಬ್ಲ್ಯೂಡಿ ಇಂಜಿನಿಯರ್ ಆಗಿ ಕೆಲಸಗಿಟ್ಟಿಸಿಕೊಂಡಿದ್ದರು. ಪ್ರಸ್ತುತ ಪಾವಗಡ ಪಿಡಬ್ಲ್ಯೂಡಿ ಇಂಜಿನಿಯರ್ ಆಗಿ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ತಾಯಿ ಮತ್ತು ಹೆಂಡತಿ ಜೊತೆಗೆ ಸುಖವಾಗಿದ್ದ ಮಂಜುಪ್ರಸಾದ್ ಒಂದುವರೆ ವರ್ಷದ ಹಿಂದೆ ಅಮ್ಮ ಮೃತಪಟ್ಟ ಬಳಿಕ ಮಾನಸಿಕವಾಗಿ ತೀವ್ರ ನೊಂದಿದ್ದರು. ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದ ಇವರಿಗೆ ತಾಯಿ ಮೇಲೆ ಅಪಾರ ಪ್ರೀತಿ ಇತ್ತು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬೆಟ್ಟದಷ್ಟು ಕನಸು ಕೂಡ ಕಂಡಿದ್ದರು. ಆದರೆ ದುರದೃಷ್ಟವಶಾತ್​​ ಅನಾರೋಗ್ಯದಿಂದ ಅವರ ತಾಯಿ ಮೃತಪಟ್ಟಿದ್ದರು. ಆಕೆಯ ಅಗಲಿಕೆಯ ನೋವು ಸಹಿಸಲಾಗದ ಮಂಜುಪ್ರಸಾದ್ ಮನೆ ಮುಂದೆಯೇ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದರು. ಆ ಬಳಿಕ ಪ್ರತಿದಿನವೂ ಬೆಳಿಗ್ಗೆ ಎದ್ದ ಬಳಿಕ ಆಕೆಯ ಸಮಾಧಿಯನ್ನು ಮಂಜುಪ್ರಸಾದ್ ನೋಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ; ಸಾವಿನ ಸುತ್ತ ಹತ್ತಾರು ಅನುಮಾನ

ಮಗುವಾದ ಕ್ಷಣದಲ್ಲಿ ಖುಷಿಯಾಗಿದ್ದ ಮಂಜುಪ್ರಸಾದ್, ತಾಯಿಯನ್ನು ಮಗುವಿನಲ್ಲಿ ನೋಡೊ ಪ್ರಯತ್ನ ಮಾಡಿದ್ದರು. ಆ ಮಗುವಿಗೂ ತಾಯಿ ಹೆಸರಾದ ಪುಟ್ಟಮ್ಮ ಎಂದೇ ಕರೆಯುತಿದ್ದರು. ಮೊನ್ನೆ ದೇವಸ್ಥಾನಕ್ಕೆ ಹೊಗಿದ್ದು, ದೇವರಿಗೆ ಮುಡಿ ಕೊಟ್ಟು ನಿನ್ನೆ ಬೆಳಿಗ್ಗೆ ಪತ್ನಿಯ ಕೊರಟಗೆರೆ ನಿವಾಸಕ್ಕೆ ಬಂದ ಮಂಜು, ನಂತರ ಕೆಲಸ ಇದೆ ಬರ್ತಿನಿ ಎಂದು ಹೊದವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದುಡುಕಿನ ನಿರ್ಧಾರದಿಂದಾಗಿ ನಾಲ್ಕು ವರ್ಷಗಳ ಹಿಂದೆ ಕೈಹಿಡಿದಿದ್ದ ಪತ್ನಿ ದಿಕ್ಕುತೋಚದ ಸ್ಥಿತಿಗೆ ತಲುಪಿದ್ದಾರೆ. 20 ದಿನಗಳ ಪುಟ್ಟ ಕಂದಮ್ಮನಿಗೂ ತಂದೆ ಇಲ್ಲದಂತಾಗಿದ್ದು, ಈ ಸಾವು ಸ್ನೇಹಿತರಿಗೂ ಕಣ್ಣೀರು ತರಿಸಿದೆ.

ಅಸಲಿಗೆ ತಾಯಿ ಕಳೆದುಕೊಂಡಿದ್ದ ಮಂಜುಪ್ರಸಾದ್ ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಸಹ ಹುಬ್ಬಳ್ಳಿಗೆ ತೆರಳಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇನ್ನು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದ ಮಂಜು ವೈದ್ಯರ ಬಳಿ ಚಿಕಿತ್ಸೆ ಸಹ ಪಡೆಯುತಿದ್ದರು. ಆದರೆ ಈ ನಡುವೆ ಅದೇನಾಯ್ತೋ ಗೊತ್ತಿಲ್ಲ ಏಕಾಏಕಿ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಸಂಬಂಧಿಕರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

27 ವರ್ಷಗಳ ಹಿಂದೆಯೇ ‘ಸಿಎಂ’ ಆಗಬೇಕಿತ್ತು ದಳಪತಿ ವಿಜಯ್, ಕೈತಪ್ಪಿದ್ದು ಹೇಗೆ? – Kannada News | Thalapathy Vijay missed the Shankar’s Political Thriller movie Mudhalvan

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿನಿಮಾ ಸ್ಟಾರ್ ಆಗಿ ದೊರೆತಿದ್ದ ಭಾರಿ ಜನಪ್ರಿಯತೆ ಮತಗಳಾಗಿ ಪರಿವರ್ತನೆ ಆಗಿದ್ದು, ಕಾಂಗ್ರೆಸ್ ಮತ್ತು ಇನ್ನಿತರೆ ಕೆಲ ಪಕ್ಷಗಳ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದಾರೆ. ವಿಜಯ್ ಅವರಿಗೆ ರಾಜಕೀಯ ಎಂಟ್ರಿಯ ಕನಸು ವರ್ಷಗಳಿಂದಲೂ ಇತ್ತು. ಸುಮಾರು ಎರಡು ದಶಕದಿಂದಲೂ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವು ಬಾರಿ ತಮಿಳುನಾಡಿನ ಸಾಮಾಜಿಕ ವಿಷಯಗಳ ಬಗ್ಗೆ ಸಿನಿಮಾ ಮೂಲಕ ಧ್ವನಿ ಎತ್ತಿದ್ದರು. ಕೊನೆಗೂ ಈಗ ಸಿಎಂ ಆಗಿದ್ದಾರೆ. ಆದರೆ ವಿಜಯ್ ಅವರು 27 ವರ್ಷಗಳ ಹಿಂದೆ ‘ಸಿಎಂ’ ಆಗಬೇಕಿತ್ತು! ಅದು ಹೇಗೆ?

1999 ರಲ್ಲಿ ತಮಿಳಿನಲ್ಲಿ ಸಿನಿಮಾ ಒಂದು ಬಿಡುಗಡೆ ಆಗಿತ್ತು. ಸಿನಿಮಾದ ಹೆಸರು ‘ಮೊದಲ್ವನ್’. ಸಿನಿಮಾನಲ್ಲಿ ಅರ್ಜುನ್ ಸರ್ಜಾ ನಾಯಕ. ಮೊನಿಷಾ ಕೊಯಿರಾಲ ನಾಯಕಿ. ಸಿನಿಮಾ ನಿರ್ದೇಶಿಸಿದ್ದು ಆಗಿನ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಕ ಶಂಕರ್. ಅಸಲಿಗೆ ಆ ಸಿನಿಮಾದ ಕತೆಯನ್ನು ಶಂಕರ್ ಬರೆದಿದ್ದು ದಳಪತಿ ವಿಜಯ್ ಅವರಿಗಾಗಿ. ಆದರೆ ಅನಿವಾರ್ಯ ಕಾರಣಗಳಿಂದ ವಿಜಯ್ ಅವರು ‘ಮುದಲ್ವನ್’ ಸಿನಿಮಾನಲ್ಲಿ ನಟಿಸಲಾಗಲಿಲ್ಲ.

ಇದನ್ನೂ ಓದಿ:ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

‘ಮುದಲ್ವನ್’ ಸಿನಿಮಾ, ಪತ್ರಕರ್ತನೊಬ್ಬ ಒಂದು ದಿನದ ಮಟ್ಟಿಗೆ ಸಿಎಂ ಆಗಿ ಭ್ರಷ್ಟರನ್ನು ಜೈಲಿಗೆ ಅಟ್ಟುವ ಕತೆಯನ್ನು ಒಳಗೊಂಡಿದೆ. ಅರ್ಜುನ್ ಸರ್ಜಾ ಆ ಸಿನಿಮಾನಲ್ಲಿ ಒಂದು ದಿನದ ಮಟ್ಟಿಗೆ ಸಿಎಂ ಆಗುತ್ತಾರೆ. ಒಂದೊಮ್ಮೆ ವಿಜಯ್ ಅವರು ಆ ಸಿನಿಮಾನಲ್ಲಿ ನಟಿಸಿದ್ದರೆ 1999ರಲ್ಲೇ ‘ಸಿಎಂ’ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ತೆರೆಯ ಮೇಲೆ ಸಿಎಂ ಆಗುವುದನ್ನು ತಪ್ಪಿಸಿಕೊಂಡಿದ್ದ ವಿಜಯ್, ಈಗ ನಿಜ ಜೀವನದಲ್ಲಿ ಸಿಎಂ ಆಗಿದ್ದಾರೆ. ಸಿನಿಮಾನಲ್ಲಿ ನಾಯಕ ಮಾಡಿದ ಕ್ರಾಂತಿಯನ್ನು ಈಗ ನಿಜವಾಗಿಯೂ ಮಾಡುವ ಅವಕಾಶ ವಿಜಯ್ ಮುಂದಿದೆ.

ಶಂಕರ್ ಅವರ ‘ಮುದಲ್ವನ್’ ಸಿನಿಮಾ ಹಿಂದಿಗೆ ‘ನಾಯಕ್’ ಆಗಿ ರೀಮೇಕ್ ಆಯ್ತು. ಅಲ್ಲಿ ಅನಿಲ್ ಕಪೂರ್ ನಾಯಕ, ರಾಣಿ ಮುಖರ್ಜಿ ನಾಯಕಿ. ಶಂಕರ್ ಜೊತೆಗೆ ‘ಮೊದಲ್ವನ್’ ಸಿನಿಮಾನಲ್ಲಿ ನಟಿಸುವುದು ಮಿಸ್ ಮಾಡಿಕೊಂಡಿದ್ದ ವಿಜಯ್ ಬಹಳ ವರ್ಷಗಳ ಬಳಿಕ ಶಂಕರ್ ನಿರ್ದೇಶನ ಮಾಡಿದ ‘ನನ್ಬ’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ‘ನನ್ಬ’ ಸಿನಿಮಾ ಹಿಂದಿಯ ‘3 ಇಡಿಯಟ್ಸ್’ ಸಿನಿಮಾದ ರೀಮೇಕ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಐದು ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಚಾಣಕ್ಯ – Kannada News | Chanakya Niti: Peace and happiness reign in the home of a woman with these qualities

ಹೆಣ್ಣನ್ನು ಮನೆಯ ಕಣ್ಣು, ಮನೆಯ (home) ನಂದಾದೀಪ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ನಿಜ, ಏಕೆಂದರೆ ಕುಟುಂಬವನ್ನು ಮುನ್ನಡೆಸುವಲ್ಲಿ ಮಹಿಳೆಯರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಕುಟುಂಬದ ಉನ್ನತಿ-ಅವನತಿ ಕೂಡ ಅವರ ಮೇಲೆಯೇ ನಿಂತಿರುತ್ತದೆ. ಅದಕ್ಕಾಗಿಯೇ ಉತ್ತಮ ಗುಣವುಳ್ಳ ಹೆಣ್ಣನ್ನೇ ಮದುವೆಯಾಗಬೇಕು ಎಂದು ಹಿರಿಯರು ಹೇಳೋದು. ಅಂತಹ ಮಹಿಳೆಯರು ಮನೆಯನ್ನು ಸ್ವರ್ಗವನ್ನಾಗಿಸುತ್ತಾರೆ. ಅದರಲ್ಲೂ ಈ ಕೆಲವೊಂದು ಗುಣಗಳನ್ನು ಹೊಂದಿರುವ ಹೆಣ್ಣು ಇರುವಂತಹ ಮನೆಯಲ್ಲಿ ಹೊಂದಾಣಿಕೆ ಶಾಂತಿ, ಸಂತೋಷ, ನೆಮ್ಮದಿಗೆ ಯಾವುದೇ ಕೊರತೆಯಿಲ್ಲ ಎಂದು ಆಚಾರ್ಯ ಚಾಣಕ್ಯರು ವರ್ಣಿಸಿದ್ದಾರೆ. ಹಾಗಿದ್ರೆ ಮಹಿಳೆಯ ಯಾವ ಗುಣಗಳು ಮನೆಯನ್ನು ಸ್ವರ್ಗವನ್ನಾಗಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ಈ ಗುಣಗಳನ್ನು ಹೊಂದಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ:

ತಾಳ್ಮೆ ಮತ್ತು ಸಹಿಷ್ಣುತೆ: ಪ್ರತಿಯೊಬ್ಬರ ಮನೆಯಲ್ಲೂ ಉದ್ವಿಗ್ನತೆ, ಆರ್ಥಿಕ ತೊಂದರೆಗಳು ಅಥವಾ ಸಂಬಂಧದಲ್ಲಿ ಹದಗೆಡುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಯಾವ ಹೆಣ್ಣು ತಾಳ್ಮೆಯಿಂದ ಇರುತ್ತಾಳೋ ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೇ ತಾಳ್ಮೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೋ, ಆಕೆಯ ಮನೆಯಲ್ಲಿ ಎಂತಹ ಕಠಿಣ ಸಂದರ್ಭಗಳಲ್ಲೂ ಶಾಂತಿ ಹದಗೆಡುವುದಿಲ್ಲ. ಮಹಿಳೆಯ ಈ ಗುಣ ಮನೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು  ಸಹಾಯ ಮಾಡುತ್ತದೆ.

ಪ್ರೀತಿ ಮತ್ತು ಹೊಂದಾಣಿಕೆ: ಮಹಿಳೆಗೆ ತನ್ನ ಕುಟುಂಬವನ್ನು ಪ್ರೀತಿಸುವ  ಮತ್ತು ಹೊಂದಾಣಿಕೆಯ ಗುಣ ಇರಬೇಕು. ಮಹಿಳೆಯ ಈ ಗುಣ ಕುಟುಂಬ ಸದಸ್ಯರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ ಈ ಗುಣವನ್ನು ಹೊಂದಿರುವ ಹೆಣ್ಣಿನ ಮನೆಯಲ್ಲಿ ಜಗಳ, ಮನಸ್ತಾಪಗಳು ಸಹ ಇರೋದಿಲ್ಲ. ಹೆಣ್ಣಿನ ಈ ಗುಣ ಮನೆಯ ವಾತಾವರಣವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುತ್ತದೆ.

ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ: ಮನೆಯ ನಿಜವಾದ ಶಕ್ತಿ ಬುದ್ಧಿವಂತ ಮಹಿಳೆ. ಬುದ್ಧಿವಂತ ಮಹಿಳೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅದು ಸರಿಯೋ ತಪ್ಪೋ ಎಂದು ಎರಡು ಬಾರಿ ಯೋಚಿಸುತ್ತಾಳೆ. ಅಲ್ಲದೆ ಆಕೆ ಯಾವುದೇ ಪರಿಸ್ಥಿತಿಯನ್ನೂ ಸಹ ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾಳೆ. ಈ ಗುಣವು ಮನೆಯಲ್ಲಿ ಅನಗತ್ಯ ಉದ್ವಿಗ್ನತೆ ಹೆಚ್ಚಾಗುವುದನ್ನು ತಡೆಯುತ್ತದೆ. ಮಹಿಳೆಯ ಈ ಬುದ್ಧಿವಂತಿಕೆಯು ಇಡೀ ಕುಟುಂಬ ತಪ್ಪು ದಿಕ್ಕಿನಲ್ಲಿ ಹೋಗದಂತೆ ತಡೆಯುತ್ತದೆ.

ಇದನ್ನೂ ಓದಿ: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ

ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ: ಜೀವನದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಹೀಗಿರುವಾಗ ಕಷ್ಟದ ಸಮಯದಲ್ಲಿ ಭರವಸೆ ಕಳೆದುಕೊಳ್ಳದೆ, ಧೃತಿಗೆಡದೆ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಾಳೋ ಅಂತಹ ಸಂದರ್ಭಗಳಲ್ಲಿ ಆಕೆಯ ಸದಸ್ಯರು ಸಹ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ, ಅವಳ ಆತ್ಮವಿಶ್ವಾಸವು ಅವಳಿಗೆ ಪ್ರತಿಯೊಂದು ಸವಾಲನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ. ಮಹಿಳೆಯ ಈ ಗುಣ ಕುಟುಂಬದ ಶಕ್ತಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜವಾಬ್ದಾರಿ ಮತ್ತು ಬದ್ಧತೆ: ಮನೆ ಅಂದ್ಮೆಲೇ  ಒಂದಷ್ಟು ಜವಾಬ್ದಾರಿಗಳು ಇದ್ದೇ ಇರುತ್ತವೆ ಮತ್ತು ಅವುಗಳನ್ನು ಪೂರೈಸಲು ಬದ್ಧತೆ ಬಹಳ ಮುಖ್ಯ. ಈ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವ ಮಹಿಳೆಯ ಮನೆ ಸ್ವರ್ಗಕ್ಕೆ ಸಮಾನ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಜವಾಬ್ದಾರಿಯುತ ಮಹಿಳೆ ತನ್ನ ಕೆಲಸವನ್ನು ಕೇವಲ ಕರ್ತವ್ಯವೆಂದು ಪರಿಗಣಿಸುವುದಿಲ್ಲ, ಬದಲಾಗಿ ಅದನ್ನು ಪೂರ್ಣ ಹೃದಯದಿಂದ ನಿರ್ವಹಿಸುತ್ತಾಳೆ. ಮಕ್ಕಳಿಗೆ ಶಿಕ್ಷಣ ನೀಡುವುದು, ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಮನೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಹೀಗೆ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ. ಈ ಸಮರ್ಪಣೆ ಕುಟುಂಬಕ್ಕೆ ವಿಶ್ವಾಸ ಮತ್ತು ಸ್ಥಿರತೆಯನ್ನು ತರುತ್ತದೆ. ಕುಟುಂಬದ ಅಡಿಪಾಯವನ್ನು ಮತ್ತಷ್ಟು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ವಿಚಿತ್ರ ಮನೆ: 3×7 ಅಡಿಯಲ್ಲಿ 4 ಅಂತಸ್ತಿನ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ – Kannada News | Bengaluru’s Bizarre 3×7 House: This 4 Storey Building Will Leave You Amazed

ಬೆಂಗಳೂರು, ಮೇ 12: ಬ್ರ್ಯಾಂಡ್ ಬೆಂಗಳೂರಿನಲ್ಲಿ ಯಾರು ಬೇಕಾದರೂ, ಹೇಗೆ ಬೇಕಾದರೂ ಮನೆ ಕಟ್ಟಬಹುದೇ? ಎಂಬ ಪ್ರಶ್ನೆಗೆ ರಾಜರಾಜೇಶ್ವರಿ ನಗರದ ಜವರೇಗೌಡ ನಗರದಲ್ಲಿ ತಲೆ ಎತ್ತಿರುವ ವಿಚಿತ್ರ ಕಟ್ಟಡ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಕೇವಲ 3×7 ಅಡಿ ಜಾಗದಲ್ಲೇ ಬರೋಬ್ಬರಿ 4 ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಸದ್ಯ ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಈ ವಿಚಿತ್ರ ಕಟ್ಟಡದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದರು ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯವಹಿಸಿದ್ದಾರೆ. ಇನ್ನು ಈಗಾಗಲೇ ಕಟ್ಟಡದ ಕೆಳಭಾಗ ಹಾಗೂ ಮುಂಭಾಗ ಕುಸಿದಿದ್ದು, ಯಾವ ಕ್ಷಣದಲ್ಲಾದರೂ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಪಕ್ಕದ ಮನೆಗೂ ಅಪಾರ ಪ್ರಮಾಣದ ಹಾನಿಯಾಗಿದ್ದು, ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಜೀವಭಯದಲ್ಲೇ ವಾಸಿಸುವಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕ್ ಆಟಗಾರನ ಕಳ್ಳಾಟ ಬಯಲು..! – Kannada News | Shaheen Afridi Faces Disciplinary Heat Over Ball Tampering

ಕ್ರಿಕೆಟ್ ಎನ್ನುವುದು ಜಂಟಲ್​ಮ್ಯಾನ್ ಗೇಮ್. ಇದರ ಜೊತೆಗೆ ಕ್ರೀಡಾ ಸ್ಫೂರ್ತಿಗೆ ಹೆಸರಾದ ಆಟ. ಆದರೆ, ಗೆಲುವಿನ ಹಪಾಹಪಿ ಅಥವಾ ಮೈದಾನದ ಹತಾಶೆ ಕೆಲವೊಮ್ಮೆ ಸ್ಟಾರ್ ಆಟಗಾರರನ್ನೂ ದಾರಿ ತಪ್ಪಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನ್ ವೇಗಿ ಶಾಹೀನ್ ಶಾ ಆಫ್ರಿದಿ. ಬಾಂಗ್ಲಾದೇಶ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹೀನ್ ‘ಬಾಲ್ ಟ್ಯಾಂಪರಿಂಗ್’ (ಚೆಂಡು ವಿರೂಪಗೊಳಿಸುವಿಕೆ) ಮಾಡಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕ್ ಮತ್ತು ಬಾಂಗ್ಲಾ ನಡುವಣ ಪಂದ್ಯದ ನಾಲ್ಕನೇ ದಿನದಂದು ಈ ಘಟನೆ ಸಂಭವಿಸಿದೆ. ಬಾಂಗ್ಲಾದೇಶದ ಬ್ಯಾಟರ್‌ಗಳು ಬಲವಾದ ಮುನ್ನಡೆ ಸಾಧಿಸುತ್ತಿದ್ದಾಗ, ಹತಾಶರಾದಂತೆ ಕಂಡ ಆಫ್ರಿದಿ ಅವರು ತಮ್ಮ ಶೂಗಳ ಸ್ಪೈಕ್ಸ್ (Spikes) ಬಳಸಿ ಚೆಂಡಿನ ಮೇಲ್ಮೈಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂಪೈರ್‌ಗಳ ಕ್ರಮ:

ಮೈದಾನದಲ್ಲಿದ್ದ ಅಂಪೈರ್‌ಗಳಾದ ಕುಮಾರ್ ಧರ್ಮಸೇನಾ ಮತ್ತು ರಿಚರ್ಡ್ ಕೆಟಲ್‌ಬರೋ ಅವರು ತಕ್ಷಣವೇ ಇದನ್ನು ಗಮನಿಸಿ, ಚೆಂಡನ್ನು ಪರಿಶೀಲಿಸಿದರು. ಹಾನಿಯಾಗಿರುವುದು ಖಚಿತವಾದ ಮೇಲೆ ಅವರು ಕೂಡಲೇ ಚೆಂಡನ್ನು ಬದಲಾಯಿಸಿ ಆಟ ಮುಂದುವರಿಸಿದರು.

ಸಂಭವನೀಯ ಶಿಕ್ಷೆಗಳು:

ICC ನಿಯಮಗಳ ಪ್ರಕಾರ, ಚೆಂಡು ವಿರೂಪಗೊಳಿಸುವುದು ಗಂಭೀರ ಅಪರಾಧವಾಗಿದೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ಆಫ್ರಿದಿ ಅವರಿಗೆ ಈ ಕೆಳಗಿನ ಶಿಕ್ಷೆಗಳಾಗುವ ಸಾಧ್ಯತೆಯಿದೆ:

  • ಪಂದ್ಯದ ಶುಲ್ಕದಲ್ಲಿ ಶೇ. 50 ರಿಂದ 100 ರಷ್ಟು ದಂಡ ವಿಧಿಸಬಹುದು.
  • ಕನಿಷ್ಠ 2 ರಿಂದ 4 ಸಸ್ಪೆನ್ಷನ್ ಪಾಯಿಂಟ್‌ಗಳನ್ನು ನೀಡಬಹುದು. ಇದರರ್ಥ ಅವರು ಮುಂದಿನ ಕೆಲವು ಪಂದ್ಯಗಳಿಂದ (ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಅಥವಾ ಇಂಗ್ಲೆಂಡ್ ಸರಣಿ) ಹೊರಗುಳಿಯಬೇಕಾಗುತ್ತದೆ.

ಪುನರಾವರ್ತಿತ ವರ್ತನೆ:

ಇತ್ತೀಚೆಗಷ್ಟೇ ಪಿಎಸ್ಎಲ್ (PSL) ಪಂದ್ಯದಲ್ಲೂ ಇವರ ಮೇಲೆ ಇಂತಹದ್ದೇ ಆರೋಪ ಕೇಳಿ ಬಂದಿದ್ದರಿಂದ, ಐಸಿಸಿ ಇದನ್ನು ಕೇವಲ ಆಕಸ್ಮಿಕ ಎಂದು ಪರಿಗಣಿಸದೇ, ಉದ್ದೇಶಪೂರ್ವಕ ಕೃತ್ಯ ಎಂದು ಪರಿಗಣಿಸುವ ಸಾಧ್ಯತೆ ಇದೆ. ಇದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನಾನು ಹೇಳಿದ್ದು ಹಂಗಲ್ಲ, ಹಿಂಗೆ: ಎಸ್​. ಬದರಿನಾಥ್ ಸ್ಪಷ್ಟನೆ!

ಮುಂದಿನ ಪ್ರಕ್ರಿಯೆ ಏನು?

ಪಂದ್ಯ ಮುಗಿದ ನಂತರ ಮ್ಯಾಚ್ ರೆಫರಿ ಅವರು ವಿಡಿಯೋ ಪುರಾವೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಶಾಹೀನ್ ಅವರ ವಿಚಾರಣೆ ನಡೆಸಲಿದ್ದಾರೆ. ಒಂದು ವೇಳೆ ಅವರು ತಪ್ಪೊಪ್ಪಿಕೊಂಡರೆ ಶಿಕ್ಷೆ ತಕ್ಷಣ ಘೋಷಣೆಯಾಗುತ್ತದೆ, ಇಲ್ಲದಿದ್ದರೆ ಶಿಸ್ತು ಸಮಿತಿಯ ಮುಂದೆ ವಿಚಾರಣೆ ನಡೆಯಲಿದೆ.

Source link

NTPC Recruitment 2026: ಎನ್‌ಟಿಪಿಸಿ ನೇಮಕಾತಿ; ಸಹಾಯಕ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಲಕ್ಷದವರೆಗೆ ಸಿಗಲಿದೆ ವೇತನ! – Kannada News | NTPC Assistant Officer Recruitment 2026: Apply Online for 20 Posts Before May 21st!

ಎನ್‌ಟಿಪಿಸಿ ನೇಮಕಾತಿImage Credit source: gemini ai

ಭಾರತದ ಪ್ರಮುಖ ಇಂಧನ ಕಂಪನಿಯಾದ ಎನ್‌ಟಿಪಿಸಿ (NTPC) ಲಿಮಿಟೆಡ್, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಅಧಿಕಾರಿ (Assistant Officer) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಕಂಪನಿಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಮತ್ತು ಒಟ್ಟು ಸಂಖ್ಯೆ:

ಈ ನೇಮಕಾತಿ ಅಧಿಸೂಚನೆಯ ಅಡಿಯಲ್ಲಿ ಒಟ್ಟು 20 ಸಹಾಯಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು, ಮಾಸಿಕ 30,000 ರಿಂದ 1,20,000 ರೂ. ವರೆಗೆ ಸಂಬಳ ದೊರೆಯಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಇತರೆ ಸವಲತ್ತುಗಳು ಮತ್ತು ಭತ್ಯೆಗಳು ಸಹ ಸಿಗಲಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 60ರಷ್ಟು ಅಂಕಗಳೊಂದಿಗೆ ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷಗಳಾಗಿರಬೇಕು. ಮೀಸಲಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ (SC/ST/OBC/PWD) ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಶುಲ್ಕದ ವಿವರ:

ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ (General), ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಅಭ್ಯರ್ಥಿಗಳಿಗೆ 300ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಎಸ್‌ಸಿ (SC), ಎಸ್‌ಟಿ (ST), ವಿಕಲಚೇತನ (PWD) ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಅಭ್ಯರ್ಥಿಗಳು ಎನ್‌ಟಿಪಿಸಿಯ ಅಧಿಕೃತ ಕೆರಿಯರ್ ಪೋರ್ಟಲ್ ಆದ careers.ntpc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 21 ಕೊನೆಯ ದಿನಾಂಕವಾಗಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಶೋಧಕರಿಗೆ ರಾಯಲ್ಟಿ ರಿಯಾಯಿತಿ; ಇಂಧನ ಕೊರತೆ ಕಡಿಮೆ ಮಾಡಲು ಸರ್ಕಾರ ಕಸರತ್ತು – Kannada News | Boost to India’s Energy Self Reliance: Govt Slashes Oil/Gas Exploration Royalties

ನವದೆಹಲಿ, ಮೇ 12: ಭಾರತದ ಇಂಧನ ಅಗತ್ಯಗಳಿಗಾಗಿ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯವಾಗಿ ಕಚ್ಚಾ ತೈಲ ಹಾಗೂ ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ತೈಲ ಮತ್ತು ಅನಿಲದ ಪರಿಶೋಧನೆ ಹಾಗೂ ಉತ್ಪಾದನೆಯ ಮೇಲೆ ಕಂಪನಿಗಳು ಪಾವತಿಸಬೇಕಾದ ರಾಯಲ್ಟಿ ದರಗಳನ್ನು (ರಾಯಧನ) ಕಡಿಮೆ ಮಾಡಿದೆ. ವಿಶೇಷವಾಗಿ ಕಠಿಣ ಭೌಗೋಳಿಕ ಪ್ರದೇಶಗಳಲ್ಲಿ (Deepwater and Ultra-deepwater blocks) ನಡೆಯುವ ಉತ್ಪಾದನೆಗೆ ಈ ರಿಯಾಯಿತಿ ಅನ್ವಯಿಸಲಿದೆ.

ಪ್ರಸ್ತುತ ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಶೇ. 85ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ದೇಶದ ಒಳಗೇ ಉತ್ಪಾದನೆ ಹೆಚ್ಚಿಸುವ ಮೂಲಕ ಈ ಆಮದು ಪ್ರಮಾಣವನ್ನು ತಗ್ಗಿಸುವುದು ಮತ್ತು ವಿದೇಶಿ ವಿನಿಮಯವನ್ನು ಉಳಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು

ರಾಯಲ್ಟಿ ಕಡಿತದಿಂದಾಗಿ ಒಎನ್‌ಜಿಸಿ (ONGC) ಮತ್ತು ರಿಲಾಯನ್ಸ್‌ನಂತಹ ದೊಡ್ಡ ಕಂಪನಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಇದು ಹೊಸ ತೈಲ ಬಾವಿಗಳ ಪತ್ತೆಗಾಗಿ ಹೆಚ್ಚಿನ ಹೂಡಿಕೆ ಮಾಡಲು ಕಂಪನಿಗಳಿಗೆ ಪ್ರೇರಣೆ ನೀಡುತ್ತದೆ.

ಉತ್ಪಾದನಾ ವೆಚ್ಚ ಕಡಿಮೆಯಾಗುವುದರಿಂದ ದೀರ್ಘಾವಧಿಯಲ್ಲಿ ದೇಶದ ಇಂಧನ ಭದ್ರತೆ ಬಲಗೊಳ್ಳಲಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಇದು ತಗ್ಗಿಸಲಿದೆ.

ತೈಲ ಪರಿಶೋಧನೆ ಅಥವಾ ಆಯಿಲ್ ಎಕ್ಸ್​ಪ್ಲೋರೇಶನ್ ಅತಿ ಹೆಚ್ಚು ಅಪಾಯ ಮತ್ತು ಹೆಚ್ಚಿನ ಬಂಡವಾಳ ಬೇಡುವ ಕ್ಷೇತ್ರವಾಗಿದೆ. ಸರ್ಕಾರದ ಈ ತೆರಿಗೆ ವಿನಾಯಿತಿ ಕ್ರಮವು ಖಾಸಗಿ ಮತ್ತು ವಿದೇಶಿ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ

ಕಳೆದ ವರ್ಷ ಸರ್ಕಾರವು ಓಆರ್​ಡಿ (ತೈಲಬಾವಿ ನಿಯಂತ್ರಕ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ಪಿಎನ್​ಜಿ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ತೈಲ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವ ಸುಧಾರಣೆಗಳು ಈ ಕಾಯ್ದೆಯಲ್ಲಿವೆ. ಒಟ್ಟಾರೆಯಾಗಿ, ‘ಆತ್ಮನಿರ್ಭರ ಭಾರತ’ ಯೋಜನೆಯಡಿಯಲ್ಲಿ ಇಂಧನ ಕ್ಷೇತ್ರದಲ್ಲಿ ಸ್ವಯಂ ಅವಲಂಬನೆ ಸಾಧಿಸಲು ಈ ಕ್ರಮವು ದಿಕ್ಸೂಚಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದಿ ‘ದೃಶ್ಯಂ 3’ ಮಲಯಾಳಂಗಿಂತ ಸಾಕಷ್ಟು ಭಿನ್ನ: ಬಿಡುಗಡೆಯಲ್ಲಿ ಗೊಂದಲ – Kannada News | Hindi Drishyam 3 will be very different from Malayalam Drishyam 3

ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ’. ಮೋಹನ್​​ಲಾಲ್ (Mohanlal) ನಟಿಸಿ ಜೀತು ಜೋಸೆಫ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಭಾರತದ ಬೇರೆ ಬೇರೆ ಭಾಷೆಗಳು ಸೇರಿದಂತೆ ಹಲವು ವಿದೇಶಿ ಭಾಷೆಗಳಲ್ಲಿಯೂ ರೀಮೇಕ್ ಆಗಿ ಬಹುತೇಕ ಎಲ್ಲೆಡೆ ಸೂಪರ್ ಹಿಟ್ ಆಯ್ತು. ಬಳಿಕ ‘ದೃಶ್ಯಂ 2’ ಸಿನಿಮಾ 2022 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಯ್ತು. ಈ ಸಿನಿಮಾದ ರೀಮೇಕ್ ಅನ್ನು ಹಿಂದಿಯಲ್ಲಿ ಅಜಯ್ ದೇವಗನ್ ಮಾಡಿದ್ದರು. ಇದೀಗ ‘ದೃಶ್ಯಂ’ ಸಿನಿಮಾದ ಮೂರನೇ ಭಾಗ ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೇ ಸಿನಿಮಾ ಹಿಂದಿಗೂ ರೀಮೇಕ್ ಆಗುತ್ತಿದ್ದು, ಆದರೆ ಹಿಂದಿಯ ‘ದೃಶ್ಯಂ 3’, ಮಲಯಾಳಂನ ‘ದೃಶ್ಯಂ 3’ ಸಿನಿಮಾಕ್ಕಿಂತಲೂ ಬಹಳ ಭಿನ್ನವಾಗಿರಲಿದೆ ಎಂದು ಚಿತ್ರತಂಡ ಹೇಳಿದೆ.

ಮಲಯಾಳಂ ರೀತಿಯೇ ಹಿಂದಿಯಲ್ಲಿಯೂ ಸಹ ‘ದೃಶ್ಯಂ’ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಮಲಯಾಳಂನಲ್ಲಿ ಮೋಹನ್​​ಲಾಲ್ ನಟಿಸಿದ್ದ ಪಾತ್ರಗಳಲ್ಲಿ ಹಿಂದಿಯಲ್ಲಿ ಅಜಯ್ ದೇವಗನ್ ನಟಿಸುತ್ತಾ ಬಂದಿದ್ದಾರೆ. ಮೊದಲ ಎರಡು ಸಿನಿಮಾಗಳನ್ನು ಮಲಯಾಳಂನಲ್ಲಿ ಇರುವಂತೆಯೇ ಯಥಾವತ್ತು ಕಾಪಿ ಮಾಡಿದ್ದ ಹಿಂದಿ ತಂಡ, ಈಗ ‘ದೃಶ್ಯಂ 3’ ಅನ್ನು ಭಿನ್ನವಾಗಿ ಪ್ರೆಸೆಂಟ್ ಮಾಡಲಿದ್ದಾರೆ. ಇದಕ್ಕೆ ಕಾರಣವೂ ಇದೆ.

ಮಲಯಾಳಂ ನಿರ್ದೇಶಕ ಮತ್ತು ‘ದೃಶ್ಯಂ’ ಸರಣಿಯ ಸೃಷ್ಟಿಕರ್ತ ಜೀತು ಜೋಸೆಫ್ ಹೇಳಿರುವಂತೆ, ‘ದೃಶ್ಯಂ 3’ ಕೌಟುಂಬಿಕ ಸಿನಿಮಾ ಆಗಿರಲಿದೆ. ಅಂದರೆ ಇದರಲ್ಲಿ ಸಸ್ಪೆನ್ಸ್ ಭಾಗ ತುಸು ಕಡಿಮೆ ಇರಲಿದೆ. ಆ ಒಂದು ಕೊಲೆಯಿಂದ ನಾಯಕ ಜಾರ್ಜ್ ಕುಟ್ಟಿಗೆ ಆದ ಸಮಸ್ಯೆಗಳು, ಅವನ ಕುಟುಂಬಕ್ಕೆ ಆದ ಸಮಸ್ಯೆಗಳ ಮೇಲೆ ಈ ಸಿನಿಮಾ ಗಮನ ಹರಿಸಲಿದೆ. ಆ ಮೂಲಕ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಗಿಂತಲೂ ಹೆಚ್ಚಾಗಿ ಎಮೋಷನಲ್ ಡ್ರಾಮಾ ಆಗಿರಲಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಹಾದಿ ಹಿಡಿದ ಮೋಹನ್​​ಲಾಲ್ ನಟನೆಯ ‘ದೃಶ್ಯಂ 3’

ಆದರೆ ಇದು ಹಿಂದಿಯವರಿಗೆ ಬೇಕಾಗಿಲ್ಲ. ಅವರಿಗೆ ನಾಯಕನನ್ನು ವೈಭವೀಕರಿಸುವ, ಸಸ್ಪೆನ್ಸ್ ಥ್ರಿಲ್ಲರ್ ಕಟ್ಟಿಕೊಡುವ ಬಯಕೆ ಇದ್ದು, ಅದಕ್ಕೆ ತಕ್ಕಂತೆ ಮತ್ತು ಅಜಯ್ ದೇವಗನ್ ಅವರ ಮಾಸ್ ಇಮೇಜಿಗೆ ತಕ್ಕಂತೆ ಚಿತ್ರಕತೆಯನ್ನು ತಿದ್ದಿದ್ದಾರಂತೆ. ಸಿನಿಮಾದ ಅಂತ್ಯದಲ್ಲಿ ನಾಯಕ (ಹಿಂದಿಯಲ್ಲಿ ವಿಜಯ್ ಸಾಳಗಾಂವ್ಕರ್) ತನ್ನ ಕುಟುಂಬವನ್ನು ಬುದ್ಧಿವಂತಿಕೆಯಿಂದ ಕಾಪಾಡುವ ಕತೆ ಇರಲಿದೆಯಂತೆ. ಆದರೆ ಮಲಯಾಳಂ ‘ದೃಶ್ಯಂ 3’ ನಲ್ಲಿ ಭಿನ್ನವಾದ ಕತೆ ಇರಲಿದೆ.

‘ದೃಶ್ಯಂ 3’ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾ ಇದೇ ತಿಂಗಳು 21 ರಂದು ಬಿಡುಗಡೆ ಆಗಲಿದೆ. ಹಿಂದಿಯ ‘ದೃಶ್ಯಂ 3’ ಸಿನಿಮಾವನ್ನು ಅದೇ ಸಮಯಕ್ಕೆ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕರಿಗೆ ಇತ್ತು. ಆದರೆ ಮಲಯಾಳಂ ತಂಡದವರ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಒಪ್ಪಂದದ ಬಳಿಕ ಇದೀಗ ಹಿಂದಿ ಸಿನಿಮಾವನ್ನು ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿ: ಛತ್ತೀಸ್‌ಗಢದಲ್ಲಿ 15 ವರ್ಷದ ಬಾಲಕ ಸಾವು; ಮೂವರು ಮಕ್ಕಳ ಸ್ಥಿತಿ ಗಂಭೀರ! – Kannada News | Chhattisgarh Food Poisoning: Boy Dies, 3 Ill After Consuming Cut Watermelon; Safety Alert

ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿImage Credit source: Pinterest

ಛತ್ತೀಸ್‌ಗಢ, ಮೇ 12: ಮುಂಬೈನಲ್ಲಿ ನಡೆದ ಕಲ್ಲಂಗಡಿ ಹಣ್ಣಿನ ದುರಂತದ ಬೆನ್ನಲ್ಲೇ, ಈಗ ಛತ್ತೀಸ್‌ಗಢದ ಜಾಂಜಗೀರ್-ಚಂಪಾದಲ್ಲಿ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ 15 ವರ್ಷದ ಬಾಲಕ ಮೃತಪಟ್ಟಿದ್ದು, ಉಳಿದ ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ:

ಜಾಂಜಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಪೋಡಿ ದಲ್ಹಾ ಗ್ರಾಮದ ಅಖಿಲೇಶ್ ಧಿವರ್ ಎಂದು ಗುರುತಿಸಲಾಗಿದೆ. ಈತ ತನ್ನ ಸೋದರ ಮಾವನ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಮೃತನ ಜೊತೆಗೆ ಪಿಂಟು (12), ಹಿತೇಶ್ (13) ಮತ್ತು ಮತ್ತೊಬ್ಬ 4 ವರ್ಷದ ಬಾಲಕ ಕೂಡ ಹಣ್ಣನ್ನು ಸೇವಿಸಿದ್ದರು.

ದುರಂತಕ್ಕೆ ಕಾರಣವಾಯಿತೇ ದೀರ್ಘಕಾಲ ಇಟ್ಟಿದ್ದ ಹಣ್ಣು?

ಸೋಮವಾರ ಬೆಳಿಗ್ಗೆ ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಮಕ್ಕಳು ಸಂಜೆ ಸೇವಿಸಿದ್ದರು ಎಂದು ವರದಿಯಾಗಿದೆ. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅಖಿಲೇಶ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ. ಸದ್ಯ ಉಳಿದ ಮೂವರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ವಿಷಾಹಾರದ ಶಂಕೆ, ತನಿಖೆಗೆ ಆದೇಶ:

ಕತ್ತರಿಸಿದ ಹಣ್ಣನ್ನು ದೀರ್ಘಕಾಲ ತೆರೆದಿಟ್ಟಿದ್ದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ‘ಫುಡ್ ಪಾಯಿಸನಿಂಗ್’ (Food Poisoning) ಆಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಮಕ್ಕಳು ಕಲ್ಲಂಗಡಿ ಹಣ್ಣಿನ ಜೊತೆಗೆ ಕೋಳಿ ಮಾಂಸವನ್ನೂ ಸೇವಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ. ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಹಣ್ಣುಗಳನ್ನು ಸೇವಿಸುವಾಗ ಜಾಗ್ರತೆ ಇರಲಿ:

ಬೇಸಿಗೆಯ ಸಮಯದಲ್ಲಿ ಕತ್ತರಿಸಿದ ಹಣ್ಣುಗಳನ್ನು, ವಿಶೇಷವಾಗಿ ರಸ್ತೆಬದಿಯಲ್ಲಿ ಅಥವಾ ದೀರ್ಘಕಾಲ ತೆರೆದಿಟ್ಟ ಹಣ್ಣುಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಹಣ್ಣುಗಳನ್ನು ಕತ್ತರಿಸಿದ ಕೂಡಲೇ ಸೇವಿಸುವುದು ಅಥವಾ ಸರಿಯಾಗಿ ಮುಚ್ಚಿಡುವುದು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:22 pm, Tue, 12 May 26

Source link

ಮೋದಿ ಮನವಿಗೆ ಸ್ಪಂದನೆ; ಪೆಟ್ರೋಲ್ ಉಳಿಸಲು ಸೈಕಲ್​ನಲ್ಲೇ ನ್ಯಾಯಾಲಯಕ್ಕೆ ಬಂದ ಹೈಕೋರ್ಟ್ ನ್ಯಾಯಮೂರ್ತಿ – Kannada News | Madhya Pradesh High Court judge rides cycle to Court after PM Modi’s appeal to save fuel

ನವದೆಹಲಿ, ಮೇ 12: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮನವಿ ಮಾಡಿದ್ದರು. ಎಲೆಕ್ಟ್ರಿಕ್ ವಾಹನ, ಸರ್ಕಾರಿ ಸಾರಿಗೆಯನ್ನು ಬಳಸಲು ಕರೆನೀಡಿದ್ದರು. ಅವರ ಮನವಿಗೆ ದೇಶಾದ್ಯಂತ ಸಾಕಷ್ಟು ಉತ್ತಮ ಸ್ಪಂದನೆ ಬರುತ್ತಿದೆ. ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಧೀಶರು ಕೂಡ ಪ್ರಧಾನಿ ಮೋದಿಯ ಮನವಿಗೆ ಸ್ಪಂದಿಸಿ, ನ್ಯಾಯಾಲಯಕ್ಕೆ ಕಾರಿನ ಬದಲು ಸೈಕಲ್​ನಲ್ಲಿ ಆಗಮಿಸಿದ್ದಾರೆ. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಅಮೆರಿಕ-ಇರಾನ್ ಯುದ್ಧದಿಂದಾಗಿ ನಡೆಯುತ್ತಿರುವ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಾಲ್ ಇಂದು ನ್ಯಾಯಾಲಯಕ್ಕೆ ಸೈಕಲ್ ಸವಾರಿ ಮಾಡಿಕೊಂಡು ಆಗಮಿಸಿದ್ದಾರೆ. ಅವರ ಹಿಂದೆ ಭದ್ರತಾ ಸಿಬ್ಬಂದಿ ಕೂಡ ಸೈಕಲ್​ನಲ್ಲಿಯೇ ಆಗಮಿಸಿದ್ದಾರೆ.

ಜಬಲ್ಪುರ ಹೈಕೋರ್ಟ್ ಪೀಠದಲ್ಲಿ ನಿಯೋಜಿತರಾಗಿರುವ ನ್ಯಾಯಮೂರ್ತಿ ಬನ್ಸಾಲ್, ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ನ್ಯಾಯಾಲಯದ ಆವರಣಕ್ಕೆ ಸುಮಾರು 3 ಕಿಲೋಮೀಟರ್ ಸೈಕಲ್‌ನಲ್ಲಿ ಪ್ರಯಾಣಿಸಿದರು, ಅವರ ಜೊತೆಗೆ ನ್ಯಾಯಾಲಯದ ಸಿಬ್ಬಂದಿಯೂ ಇದ್ದರು.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಮನವಿ ಮಾಡುವುದನ್ನು ನಾನು ಗಮನಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ಗೆ ಸೈಕಲ್‌ನಲ್ಲಿ ಹೋಗಿ ಸಾಮಾನ್ಯ ಜನರಿಗೆ ಸಾಧ್ಯವಾದಾಗಲೆಲ್ಲಾ ಕಡಿಮೆ ದೂರಕ್ಕೆ ಪ್ರಯಾಣಿಸಲು ಸೈಕಲ್ ಬಳಸುವ ಸಂದೇಶ ನೀಡಬೇಕೆಂದು ನಾನು ಸೈಕಲ್​ನಲ್ಲೇ ಕೋರ್ಟ್​ಗೆ ತೆರಳಿದೆ ಎಂದು ನ್ಯಾಯಮೂರ್ತಿ ಬನ್ಸಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version