Paramilitary Jobs 2026: ದೇಶದ ಭದ್ರತಾ ಪಡೆಗಳಲ್ಲಿ 93,000 ಹುದ್ದೆಗಳಿಗೆ ಬಂಪರ್ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ

Paramilitary Jobs 2026: ದೇಶದ ಭದ್ರತಾ ಪಡೆಗಳಲ್ಲಿ 93,000 ಹುದ್ದೆಗಳಿಗೆ ಬಂಪರ್ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ

ಭಾರತದ ಆಂತರಿಕ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸುವ ವಿವಿಧ ಅರೆಸೈನಿಕ ಪಡೆಗಳಲ್ಲಿ ಪ್ರಸ್ತುತ ಬೃಹತ್ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಇವು ಯುವಜನತೆಗೆ ದೊಡ್ಡ ಉದ್ಯೋಗಾವಕಾಶದ ಬಾಗಿಲನ್ನು ತೆರೆದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಸಿಐಎಸ್‌ಎಫ್, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಐಟಿಬಿಪಿ ಸೇರಿದಂತೆ ವಿವಿಧ ಪಡೆಗಳಲ್ಲಿ ಒಟ್ಟು 93,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಬಾಕಿ ಇದೆ. ಇದರಲ್ಲಿ ವಿಶೇಷವಾಗಿ ಸಿಐಎಸ್‌ಎಫ್ (28,342) ಮತ್ತು ಸಿಆರ್‌ಪಿಎಫ್ (27,400) ಪಡೆಗಳಲ್ಲಿ ಗರಿಷ್ಠ ಸಂಖ್ಯೆಯ ಅವಕಾಶಗಳಿದ್ದು, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನಲ್ಲೂ ಸಾವಿರಾರು ಹುದ್ದೆಗಳು ಭರ್ತಿಯಾಗಬೇಕಿದೆ.

ದೇಶದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ವಿಪತ್ತು ನಿರ್ವಹಣೆಯ ಮೇಲೆ ಈ ಖಾಲಿ ಹುದ್ದೆಗಳು ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ಲಭ್ಯವಿರುವ ಸಂಪನ್ಮೂಲಗಳನ್ನು ಸರ್ಕಾರವು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರವು ಈಗಾಗಲೇ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಸಿಬ್ಬಂದಿ ಆಯ್ಕೆ ಆಯೋಗ (SSC) ಮತ್ತು ಯುಪಿಎಸ್‌ಸಿ (UPSC) ಮೂಲಕ ವಾರ್ಷಿಕವಾಗಿ ನಡೆಸಲಾಗುವ ಕಾನ್‌ಸ್ಟೆಬಲ್ (GD) ಮತ್ತು ಇತರ ಅಧಿಕಾರಿ ಮಟ್ಟದ ಪರೀಕ್ಷೆಗಳನ್ನು ಚುರುಕುಗೊಳಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ತರಲು ದೈಹಿಕ ಪರೀಕ್ಷೆಗಳ ವೇಳೆ ಆರ್‌ಎಫ್‌ಐಡಿ (RFID) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಹಾಗೂ ವೈದ್ಯಕೀಯ ತಪಾಸಣೆಗೆ ಬೇಕಾಗುವ ಸಮಯವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ದೇಶಸೇವೆ ಮಾಡುವ ಹಂಬಲವಿರುವ ಮತ್ತು ದೈಹಿಕವಾಗಿ ಸದೃಢರಾಗಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಮುಂಬರುವ ನೇಮಕಾತಿ ಅಧಿಸೂಚನೆಗಳ ಮೇಲೆ ಕಣ್ಣಿಟ್ಟು ಪೂರ್ವ ಸಿದ್ಧತೆ ನಡೆಸುವುದು ಅತ್ಯಗತ್ಯವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಹಮದಾಬಾದ್​ ಸರ್ಕಾರಿ ಶಾಲೆಗಳಲ್ಲಿ 360 ಮಕ್ಕಳಿಗೆ ಹೃದಯ ಸಮಸ್ಯೆ; ಶಾಕಿಂಗ್ ವಿಷಯ ಬಹಿರಂಗ

ಅಹಮದಾಬಾದ್, ಮಾರ್ಚ್ 13: ಇಂದು ನಡೆದ ಗುಜರಾತ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅಹಮದಾಬಾದ್ ಜಿಲ್ಲೆಯ ಸರ್ಕಾರಿ ಶಾಲೆಗಳ ಬಗ್ಗೆ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಅಹಮದಾಬಾದ್ ಜಿಲ್ಲೆಯಲ್ಲಿ ವೈದ್ಯಕೀಯ ತಪಾಸಣೆಯ ಸಮಯದಲ್ಲಿ 360 ಮಕ್ಕಳು ಗಂಭೀರ ಹೃದಯ ಕಾಯಿಲೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಗುಜರಾತ್ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಶಾಲಾ ಆರೋಗ್ಯ ತಪಾಸಣೆ (Child health) ಕಾರ್ಯಕ್ರಮದ ವಿವರಗಳನ್ನು ಸದನದಲ್ಲಿ ಮಂಡಿಸಿದಾಗ ಈ ಆಘಾತಕಾರಿ ಸಂಗತಿ ಬಯಲಾಗಿದೆ.

ಗುಜರಾತ್ ರಾಜ್ಯ ಆರೋಗ್ಯ ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಹಮದಾಬಾದ್ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಈ ಸಮಯದಲ್ಲಿ ನೂರಾರು ಮಕ್ಕಳು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಆರಂಭಿಕ ಹಂತದಲ್ಲಿ ಗುಪ್ತ ರೋಗಗಳನ್ನು ಗುರುತಿಸುವ ಮತ್ತು ಸಕಾಲಿಕ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಅಹಮದಾಬಾದ್ ಜಿಲ್ಲೆಯ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಶಾಲಾ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ತೀವ್ರವಾಗಿ ಜಾರಿಗೊಳಿಸಲಾಗುತ್ತಿದೆ. ಕಳೆದ 2 ವರ್ಷಗಳಲ್ಲಿ, ಬಾವ್ಲಾ, ದಸ್ಕ್ರಾಯ್, ಡೆಟ್ರೋಜ್, ಧಂಧುಕಾ, ಧೋಲೇರಾ, ಧೋಲ್ಕಾ, ಮಂಡಲ್, ಸನಂದ್ ಮತ್ತು ವಿರಾಮ್‌ಗಮ್ ಸೇರಿದಂತೆ 9 ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 5,17,164 ಮಕ್ಕಳನ್ನು ಪರೀಕ್ಷಿಸಲಾಯಿತು.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಈ ತಪಾಸಣೆಗಳ ಸಮಯದಲ್ಲಿ, 360 ಮಕ್ಕಳಿಗೆ ಹೃದಯ ಸಮಸ್ಯೆ ಇರುವುದು ಪತ್ತೆಯಾಯಿತು. ಈ ಪೈಕಿ 191 ಮಕ್ಕಳಿಗೆ ಕಳೆದ ವರ್ಷದಲ್ಲಿ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಅಥವಾ ವಿಶೇಷ ಚಿಕಿತ್ಸೆ ನೀಡಲಾಗಿದೆ. ದಸ್ಕ್ರಾಯ್ ತಾಲೂಕು ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ. 78 ಮಕ್ಕಳು ತೀವ್ರ ಹೃದಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ.

ಆರೋಗ್ಯ ತಪಾಸಣೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್, ಮೂತ್ರಪಿಂಡ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಇತರ ಗಂಭೀರ ಕಾಯಿಲೆಗಳನ್ನು ಸಹ ಪತ್ತೆಯಾಗಿವೆ. 2025-26ರ ಡೇಟಾ ಪ್ರಕಾರ, ಸುಮಾರು 5,285 ಮಕ್ಕಳು ರಕ್ತಹೀನತೆ, ಕಣ್ಣಿನ ಸಮಸ್ಯೆಗಳು, ಚರ್ಮರೋಗಗಳು, ದಂತ ಸಮಸ್ಯೆಗಳು, ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳಂತಹ ಆರೋಗ್ಯ ತೊಂದರೆಗಳು ಪತ್ತೆಯಾಗಿವೆ. ಹದಿಹರೆಯದ ಹುಡುಗಿಯರಲ್ಲಿ ರಕ್ತಹೀನತೆ ಭಾರೀ ಹೆಚ್ಚಾಗಿದೆ.

ಇದನ್ನೂ ಓದಿ: ಮೆಟ್ಟಿಲು ಹತ್ತಿದ್ರೆ ಹೃದಯ ಬಡಿತ ವೇಗವಾಗುತ್ತಾ? ಈ ರೀತಿ ಆಗುವುದಕ್ಕೆ ಕಾರಣವೇನು ತಿಳಿದುಕೊಳ್ಳಿ

ಕಳೆದ ವರ್ಷವೊಂದರಲ್ಲೇ, 30,295 ಮಕ್ಕಳನ್ನು ವಿಶೇಷ ಚಿಕಿತ್ಸೆಗಾಗಿ ಪ್ರಮುಖ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಂತಹ ಎಲ್ಲಾ ಮಕ್ಕಳಿಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಉಚಿತ ಶಸ್ತ್ರಚಿಕಿತ್ಸೆಗಳು, ಔಷಧಿಗಳು ಮತ್ತು ವೈದ್ಯಕೀಯ ಆರೈಕೆ ಸಿಗುತ್ತದೆ. ಸರ್ಕಾರದಿಂದ ವಿಶೇಷವಾಗಿ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆಗಳನ್ನು ಆರ್ಥಿಕವಾಗಿ ದುರ್ಬಲ ಮತ್ತು ಮಧ್ಯಮ ಆದಾಯದ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ತಂಬಾಕು ಬೆಳೆಗಾರರ ನೆರವಿಗೆ ನಿಂತ ಕೇಂದ್ರ ಸರ್ಕಾರ: ಸೋಮವಾರದಿಂದಲೇ ಖರೀದಿ ಆರಂಭದ ಭರವಸೆ

ದೆಹಲಿ, ಮಾರ್ಚ್​​ 13: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜತೆ ಮಾತುಕತೆ ನಡೆಸಿದ್ದು, ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಗಿದೆ.  ಆ ಬೆನ್ನಲ್ಲೇ  ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ.

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿರೋದಾಗಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕುರ್ಚಿ ಕಿತ್ತಾಟದ ನಡುವೆ ಮುಂದಿನ ರಾಜಕೀಯ ಜೀವನದ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ಮಾತು!

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮೈಸೂರು-ಕೊಡಗು ಸಂಸದರಾದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ , ಜೆಡಿಎಸ್ ಹಿರಿಯ ಮುಖಂಡ ಕೃಷ್ಣನಾಯಕ, ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್, ಸೋಮವಾರದಿಂದ ತಂಬಾಕು ಖರೀದಿಗೆ ಸಚಿವ ಪಿಯೂಷ್ ಗೋಯಲ್ ಸೂಚನೆ ನೀಡಿರೋದಾಗಿ ತಿಳಿಸಿದ್ದಾರೆ. ಅಲ್ಲದೆ, 190 ದೇಶಗಳ ರಾಯಭಾರಿಗಳಿಗೆ ಪತ್ರ ಬರೆದು ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಕೋರಿಕೆ ಸಲ್ಲಿಸಲಾಗುವುದು. ಈವರೆಗೆ ರಪ್ತು ಮಾಡದಿರುವ ದೇಶಗಳಿಗೂ ತಂಬಾಕು ರಪ್ತು ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವರು ಭರವಸೆ ನೀಡಿರೋದಾಗಿ ಸಾ.ರಾ.ಮಹೇಶ್​​ ಹೇಳಿದ್ದಾರೆ.

ಶಾಸಕ ಎ. ಮಂಜು ಮಾತನಾಡಿ, ಕರ್ನಾಟಕದಲ್ಲಿ 100 ದಶಲಕ್ಷ ಟನ್ ತಂಬಾಕು ಬೆಳೆಯಲು ತಂಬಾಕು ಮಂಡಳಿ ಅವಕಾಶ ನೀಡಿದೆ. ಈ ವರ್ಷ 80 ದಶಲಕ್ಷ ಟನ್ ತಂಬಾಕು ಬೆಳೆಯಲಾಗಿದೆ. ನಾವು ಬೆಳೆದ ಸೊಪ್ಪನ್ನು ಸರ್ಕಾರ ನಿರ್ಧಾರ ಮಾಡಿದ ಬೆಲೆಯಲ್ಲಿ ಖರೀದಿ ಮಾಡಬೇಕಿದೆ. ಈ ಹಿಂದೆ ಖರೀದಿ ಭರವಸೆ ನೀಡಿದ ಕಂಪನಿಗಳು ಖರೀದಿ ಮಾಡಿಲ್ಲ. ಹೀಗಾಗಿ ಈಗ ಬೆಳೆದ ಸೊಪ್ಪನ್ನು ಕೂಡಲೇ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿರೋದಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ‘ಆಕಾಶ್’ ಸಿನಿಮಾ (Akash movie) ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. ಹಲವು ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ಫ್ಯಾನ್ಸ್ ಸಂಭ್ರಮ ಜೋರಾಗಿತ್ತು. ಸಿನಿಮಾದ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಲಾಯಿತು. ಪುನೀತ್ ರಾಜ್​ಕುಮಾರ್ ಅವರಿಗೆ ಜೈಕಾರ ಕೂಗಲಾಯಿತು. ಮಾರ್ಚ್ 17ರಂದು ಅಪ್ಪು ಜನ್ಮದಿನ. ಆ ಪ್ರಯುಕ್ತ ಅಭಿಮಾನಿಗಳ ಖುಷಿಗಾಗಿ ‘ಆಕಾಶ್’ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ. ಪುನೀತ್ (Puneeth Rajkumar) ಕುಟುಂಬದ ಸದಸ್ಯರು ಮತ್ತು ನಟಿ ರಮ್ಯಾ ಕೂಡ ಚಿತ್ರಮಂದಿರಕ್ಕೆ ಬಂದು ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತವನ್ನು ಗೇಲಿ ಮಾಡಿದ್ದ ಪಾಕ್ ಕ್ರಿಕೆಟಿಗನ ಖರೀದಿಸಿ ಕೆಟ್ಟ ಕಾವ್ಯ ಮಾರನ್

ದಿ ಹಂಡ್ರೆಡ್‌ (The Hundred) ಲೀಗ್ ಹರಾಜಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಬ್ರಾರ್ ಅಹ್ಮದ್​ನನ್ನು ಕಾವ್ಯ ಮಾರನ್ ( Kavya Maran) ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿ ಮಾಡಿರುವುದು ಭಾರತೀಯರನ್ನು ಕೆರಳಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್​ನ (Abrar Ahmed) ಕಾವ್ಯ ಮಾರನ್ ಖರೀದಿ ಮಾಡುತ್ತಿದ್ದಂತೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ, ಈ ಹಿಂದೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಅಬ್ರಾರ್ ಅಹ್ಮದ್ ಭಾರತೀಯ ವಾಯುಪಡೆಯನ್ನು ಅಪಹಾಸ್ಯ ಮಾಡಿದ್ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಭಾರತೀಯರು ಕಾವ್ಯ ಮಾರನ್ ಮೇಲೆ ಮುಗಿಬಿದಿದ್ದಾರೆ.

ಭಾರತೀಯ ವಾಯುಪಡೆಯನ್ನು ಅಪಹಾಸ್ಯ ಮಾಡಿದ್ದ

ವಾಸ್ತವವಾಗಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪಹಲ್ಗಾಮ್​ನಲ್ಲಿ ನಡೆಸಿದ ಅಟ್ಟಹಾಸದಿಂದ 26 ಅಮಾಯಕ ಭಾರತೀಯರು ಸಾವನ್ನಪ್ಪಿದರು. ಇದಕ್ಕೆ ಪ್ರತಿಕಾರವಾಗಿ ಭಾರತ ಸರ್ಕಾರ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ನೀಡಿತ್ತು. ಇದೇ ಸಂದರ್ಭದಲ್ಲಿ ಈ ಅಬ್ರಾರ್ ಅಹ್ಮದ್ ಭಾರತದ ವಾಯುಪಡೆಯನ್ನು ಅಪಹಾಸ್ಯ ಮಾಡಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಟೀ ಕಪ್ ಹಿಡಿದು ನಿಂತಿದ್ದ ಅಹ್ಮದ್, ‘ರಂಜಾನ್ ಪ್ರಾರಂಭವಾಗುವ ಮೊದಲು ಅದ್ಭುತವಾದ ಮುಸ್ಸಂಜೆಯ ಚಹಾ ಸವಿಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.

ಅಭಿನಂದನ್ ವರ್ಧಮಾನ್ ಘಟನೆ

ಅಬ್ರಾರ್ ಹಂಚಿಕೊಂಡಿದ್ದ ಈ ಪೋಸ್ಟ್ 2019 ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಘಟನೆಯನ್ನು ನೆನಪಿಸಿತ್ತು. ವಾಸ್ತವವಾಗಿ ಪಾಕ್ ಮೂಲದ ಉಗ್ರಸಂಘಟನೆ 2019 ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಉಗ್ರದಾಳಿ ನಡೆಸಿ 40 ಸಿಆರ್​ಪಿಎಫ್ ಯೋಧರನ್ನು ಬಲಿ ಪಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ, ಬಾಲಾಕೋಟ್‌ ಏರ್‌ಸ್ಟ್ರೈಕ್‌ ನಡೆಸಿತ್ತು. ಆ ಸಮಯದಲ್ಲಿ ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಆಗಸದಲ್ಲೇ ಹೊಡೆದು ಉರುಳಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದಲ್ಲಿ ಸೆರೆ ಹಿಡಿಯಲಾಗಿತ್ತು. ಆ ಸಮಯದಲ್ಲಿ ಅಭಿನಂದನ್​ ಚಹಾ ಕೂಡಿಯುತ್ತಿರುವ ವಿಡಿಯೋವನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿತ್ತು. ಆ ವಿಡಿಯೋದಲ್ಲಿ ಚಹಾ ಚಹಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅಭಿನಂದನ್ ‘ಟೀ ತುಂಬಾ ಚೆನ್ನಾಗಿದೆ, ಧನ್ಯವಾದಗಳು’ ಎಂದು ಉತ್ತರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ ಸಿಲಿಂಡರ್ ಕೊರತೆ: ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್​ ಸಿಬ್ಬಂದಿ

ಕಲಬುರಗಿ, ಮಾರ್ಚ್​​ 13: ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ನಮ್ಮ ರಾಜ್ಯಕ್ಕೂ ಅದರ ಪರಿಣಾಮ ನೇರವಾಗಿ ತಟ್ಟಿದೆ. ಸಿಲಿಂಡರ್​ಗಳ (LPG cylinder) ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದೆ. ಇತ್ತ ಕಲಬುರಗಿಯಲ್ಲಿ ಇಂದಿರಾ ಕ್ಯಾಂಟಿನ್ (Indira Canteen)​​​ ಅಡುಗೆ ಮಾಡುವುದಕ್ಕೆ ಸೌದೆ ಒಲೆಯೇ ಗತಿ ಎನ್ನುವಂತಾಗಿದೆ.

ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದು ಎಲ್​ಲಿಜಿ ಸಿಲಿಂಡರ್​ಗಳ ಮೇಲೆ ನೇರ ಪರಿಣಾಮ ಬೀರಿದ. ಇರಾನ್ – ಇಸ್ರೇಲ್ ಯುದ್ದದಿಂದ ಕಲಬುರಗಿಯಲ್ಲಿಯೂ ನಿನ್ನೆಯಿಂದಲೇ ಕಮರ್ಷಿಯಲ್ ಸಿಲಿಂಡರ್ ಕೊರತೆಯಾಗಿದ್ದು ಜನ, ಹೋಟೆಲ್ ಉದ್ಯಮದಾರರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಇಂದಿರಾ ಕ್ಯಾಂಟಿನ್​​ಗೂ ಸಿಲಿಂಡರ್ ಸಪ್ಲೈ ಬಂದ್ ಆದ ಹಿನ್ನಲೆ ಸಿಬ್ಬಂದಿ ಸೌದೆ ಒಲೆ ಮೊರೆ ಹೋಗಿದ್ದಾರೆ. ಕಲಬುರಗಿ ನಗರದ ಎಂಟು ಇಂದಿರಾ ಕ್ಯಾಂಟಿನ್​​ಗಳಿಗೂ ಸೌದೆ ಒಲೆ ಮೇಲೆಯೇ ಅಡುಗೆ ಮಾಡಲಾಗಿದೆ. ಏಕೆಂದರೆ ನಿನ್ನೆಯವರೆಗೂ ತಮ್ಮ ಬಳಿ ಇದ್ದ ಸಿಲಿಂಡರ್​​ಗಳ ಮೂಲಕ ಸಿಬ್ಬಂದಿ ಅಡುಗೆ ಮಾಡಿದ್ದಾರೆ. ಆದರೆ ಸಿಲಿಂಡರ್ ಸಿಗದ ಕಾರಣ, ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನ ಸೌದೆ ಒಲೆಯಲ್ಲಿಯೇ ಮಾಡಿದ್ದಾರೆ.

ಅಷ್ಟೆ ಅಲ್ಲದೇ ಚಪಾತಿಯನ್ನ ಹೊರಗಡೆಯಿಂದ ಖರೀದಿ ಮಾಡಿ ಜನರಿಗೆ ನೀಡಿದ್ದಾರೆ. ಇನ್ನು ಆಸ್ಪತ್ರೆಗಳ ಪಕ್ಕ ಇರುವ ಇಂದಿರಾ ಕ್ಯಾಂಟಿನ್​ನಲ್ಲಿ ಇಡ್ಲಿ, ಸಾಂಬರ್​ಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿಲಿಂಡರ್ ಇಲ್ಲದ ಪರಿಣಾಮ ಕೇವಲ ಉಪ್ಪಿಟ್ಟು, ಅವಲಕ್ಕಿ ಮಾಡಲಾಗುತ್ತಿದೆಯಂತೆ. ಸೌದೆ ಒಲೆ ಮೇಲೆ ಅಡುಗೆ ಮಾಡುವುದಕ್ಕೆ ಕೆಲಸಗಾರರು ಮುಂದೆ ಬರ್ತಿಲ್ಲ, ಆದರೆ ಬಡವರು ಉಪವಾಸ ಇರಬಾರದು ಎನ್ನುವ ಕಾರಣಕ್ಕೆ ನಾವೇ ಅಡುಗೆ ಮಾಡುತ್ತಿದ್ದೇವೆ ಎಂದು ಸಿಬ್ಬಂದಿ ಬಸವರಾಜ್​​ ಹೇಳುತ್ತಾರೆ.

ರಾಜ್ಯದಲ್ಲಿ ಯಾವಾಗ ಸಿಲಿಂಡರ್​​ಗಳ ಸಮಸ್ಯೆ ಉದ್ಭವವಾಯ್ತೋ, ಅಲ್ಲಿಗೆ ಹೋಟೆಲ್, ಢಾಬಾ ಹಾಗೂ ಮದುವೆ ಕಾರ್ಯಕ್ರಮಗಳಿಗೆ ಕೇಟರಿಂಗ್​​ನವರು ಸೌದೆ ಒಲೆಯತ್ತ ಮುಖ ಮಾಡಿದ್ದಾರೆ. ಅದಕ್ಕಾಗಿ ನಗರದಲ್ಲಿ ಕಟ್ಟಿಗೆ ಅಡ್ಡೆಗಳಲ್ಲಿ ಸೌದೆ ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಅಡುಗೆ ಗುತ್ತಿಗೆ ಹಿಡಿದಿರುವ ಕೇಟರಿಂಗ್​​ನವರಿಗೆ ಗ್ಯಾಸ್ ಟ್ರಬಲ್ ಎದುರಾಗಿದೆ. ಹೀಗಾಗಿ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಜಿಎಸ್​ಟಿ ಜತೆ ಸೇರ್ಪಡೆಯಾಯ್ತು ಗ್ಯಾಸ್ ಶುಲ್ಕ!

ಒಟ್ಟಿನಲ್ಲಿ ಸದ್ಯ ಕಲಬುರಗಿಯಲ್ಲಿಯೂ ಸಿಲಿಂಡರ್ ಹಾಹಾಕಾರ ಶುರುವಾಗಿದೆ. ಮುಂದೆ ಅದ್ಯಾವ ಮಟ್ಟಕ್ಕೆ ಹೋಗುತ್ತೋ ಕಾದುನೋಡಬೇಕು. ಏಕೆಂದರೆ ಸಿಲಿಂಡರ್​​ ಸಿಗದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗೋದು ಕಟ್ಟಿಟ್ಟ ಬುತ್ತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ವಪಕ್ಷೀಯರ ವಿರೋಧಕ್ಕೂ ಡೋಂಟ್​​ಕೇರ್​: ಬಜೆಟ್​​ ಕುರಿತ ಹೇಳಿಕೆ ಸಮರ್ಥಿಸಿಕೊಂಡ ಇಕ್ಬಾಲ್ ಹುಸೇನ್

ಬೆಂಗಳೂರು, ಮಾರ್ಚ್​​ 13: ಕರ್ನಾಟಕ ಬಜೆಟ್ ಕುರಿತು ತಮ್ಮ ಹೇಳಿಕೆಗೆ ಸ್ವಪಕ್ಷ ನಾಯಕರ ಆಕ್ರೋಶದ ನಡುವೆಯೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಾವು ಆಡಿದ್ದ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಬಜೆಟ್ ಸಮಾಧಾನ ತಂದಿಲ್ಲ ಮತ್ತು ತಮ್ಮ ನಂಬಿಕೆ ಹುಸಿಯಾಗಿದೆ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಐಎಎಸ್ ಅಥವಾ ಕೆಎಎಸ್ ಅಧಿಕಾರಿ ಅಲ್ಲ. ಬದಲಿಗೆ ಜನರ ಮತದಿಂದ ಆಯ್ಕೆಯಾದ ಜನಪ್ರತಿನಿಧಿ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ. ನನ್ನ ಕ್ಷೇತ್ರವಾದ ರಾಮನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹೀಗಿರುವಾಗ ತಮ್ಮ ಕ್ಷೇತ್ರದ ಜನರ ಪರವಾಗಿ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Jupiter Transit: ಗುರು ಪುನರ್ವಸು ನಕ್ಷತ್ರದಲ್ಲಿ ಸಂಚಾರ; 4 ರಾಶಿಗಳಿಗೆ ಅದೃಷ್ಟದ ಸುರಿಮಳೆ

​ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ಶುಭ ಗ್ರಹ ಎಂದು ಕರೆಯಲಾಗುತ್ತದೆ. ಗುರುವು ಜ್ಞಾನ, ಸಂತಾನ, ಭಾಗ್ಯ ಮತ್ತು ಸಮೃದ್ಧಿಯ ಕಾರಕ. ಪ್ರಸ್ತುತ ಗುರುವು ಮಿಥುನ ರಾಶಿಯ ಪುನರ್ವಸು ನಕ್ಷತ್ರದ ಮೂಲಕ ಸಂಚರಿಸುತ್ತಿದ್ದಾನೆ. ಪುನರ್ವಸು ನಕ್ಷತ್ರದ ಅಧಿಪತಿಯೂ ಸ್ವತಃ ಗುರುವೇ ಆಗಿರುವುದರಿಂದ, ಈ ಸಂಚಾರವು ಅತ್ಯಂತ ಶಕ್ತಿಯುತ ಹಾಗೂ ಪ್ರಭಾವಶಾಲಿಯಾಗಿದೆ.

​ಗುರುವಿನ ದೃಷ್ಟಿ ಸ್ಥಾನ:

​ಗುರುವು ತಾನು ಕುಳಿತಿರುವ ಸ್ಥಾನದಿಂದ 5, 7 ಮತ್ತು 9ನೇ ಮನೆಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ. ಮಿಥುನ ರಾಶಿಯಲ್ಲಿರುವ ಗುರುವು ಈ ಕೆಳಗಿನ ರಾಶಿಗಳ ಮೇಲೆ ತನ್ನ ಪ್ರಭಾವ ಬೀರುತ್ತಾನೆ.

  • ತುಲಾ ರಾಶಿ: ಇದು ಪಂಚಮ ದೃಷ್ಟಿ ಅಥವಾ ಸಂತಾನ ದೃಷ್ಟಿ, ಇದು ಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
  • ಧನು ರಾಶಿ: ಇದು ಸಪ್ತಮ ದೃಷ್ಟಿ ಅಥವಾ ಕಂಕಣ ದೃಷ್ಟಿ, ಇದು ಸಂಬಂಧಗಳು ಮತ್ತು ಪಾಲುದಾರಿಕೆಯನ್ನು ವೃದ್ಧಿಸುತ್ತದೆ.
  • ಕುಂಭ ರಾಶಿ: ಇದು ನವಮ ದೃಷ್ಟಿ ಅಥವಾ ಭಾಗ್ಯ ದೃಷ್ಟಿ. ಇದು ಅದೃಷ್ಟ ಮತ್ತು ಧಾರ್ಮಿಕ ಏಳಿಗೆಯನ್ನು ಸೂಚಿಸುತ್ತದೆ.

​ರಾಶಿಗಳ ಮೇಲೆ ಶುಭಾಶುಭ ಫಲಗಳು:

ಮಿಥುನ ರಾಶಿ :

ಗುರುವು ನಿಮ್ಮ ರಾಶಿಯಲ್ಲೇ ಇರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಪುನರ್ವಸು ನಕ್ಷತ್ರದಲ್ಲಿ ಗುರು ಇರುವುದರಿಂದ ಹಳೆಯ ಬಾಕಿ ಉಳಿದ ಕೆಲಸಗಳು ಮರುಜೀವ ಪಡೆಯುತ್ತವೆ. ಆದರೆ, ತೂಕ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಜ್ಞಾನಾರ್ಜನೆಗೆ ಇದು ಸುವರ್ಣಾವಕಾಶ.

​ತುಲಾ ರಾಶಿ :

​ತುಲಾ ರಾಶಿಯವರಿಗೆ ಈ ಕಾಲವು ವರದಾನದಂತಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮತ್ತು ಸಂಶೋಧಕರಿಗೆ ಅತ್ಯುತ್ತಮ ಫಲಗಳು ದೊರೆಯಲಿವೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯದ ಯೋಗವಿದೆ. ನಿಮ್ಮ ಹೂಡಿಕೆಗಳಿಂದ ನಿರೀಕ್ಷಿತ ಲಾಭ ಪಡೆಯುವಿರಿ. ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ.

​ಧನು ರಾಶಿ:

ಧನು ರಾಶಿಯ ಅಧಿಪತಿಯೂ ಗುರುವೇ ಆಗಿರುವುದರಿಂದ, ಸಪ್ತಮ ದೃಷ್ಟಿಯು ವಿವಾಹದ ಕನಸು ಕಾಣುತ್ತಿರುವವರಿಗೆ ಶುಭ ವಾರ್ತೆ ತರಲಿದೆ. ವೈವಾಹಿಕ ಜೀವನದಲ್ಲಿನ ಕಲಹಗಳು ದೂರವಾಗಿ ಪ್ರೀತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಲಾಭದಾಯಕವಾಗಲಿವೆ. ಸಾಮಾಜಿಕವಾಗಿ ನಿಮ್ಮ ಗೌರವವು ದುಪ್ಪಟ್ಟಾಗಲಿದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

​ಕುಂಭ ರಾಶಿ:

​ಕುಂಭ ರಾಶಿಯವರಿಗೆ ಅದೃಷ್ಟವು ಕೈಹಿಡಿಯಲಿದೆ. ಪಿತೃಾರ್ಜಿತ ಆಸ್ತಿಯ ವಿವಾದಗಳು ಬಗೆಹರಿಯಲಿವೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಪ್ರಯತ್ನಗಳು ಯಶಸ್ವಿಯಾಗಲಿವೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮಾನಸಿಕ ಶಾಂತಿ ನೀಡುತ್ತದೆ.

​ಪುನರ್ವಸು ನಕ್ಷತ್ರ:

ಪುನರ್ವಸು ಎಂದರೆ ಮತ್ತೆ ಸಂಪತ್ತು ಎಂದರ್ಥ. ಈ ನಕ್ಷತ್ರದಲ್ಲಿರುವ ಗುರುವು ಸೋಲನ್ನು ಗೆಲುವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದ್ದಾನೆ. ಕಳೆದುಕೊಂಡ ಗೌರವ ಅಥವಾ ಹಣವನ್ನು ಮರಳಿ ಪಡೆಯಲು ಇದು ಸೂಕ್ತ ಕಾಲ.

​ಗುರುವಾರಗಳಂದು ಶಿವನ ದಕ್ಷಿಣಾಮೂರ್ತಿ ರೂಪವನ್ನು ಪೂಜಿಸುವುದು. ಹಳದಿ ಬಣ್ಣದ ವಸ್ತ್ರ ಅಥವಾ ಬೇಳೆಯನ್ನು ಅರ್ಚಕರಿಗೆ ಅಥವಾ ಬಡವರಿಗೆ ದಾನ ಮಾಡುವುದು.

– ಲೋಹಿತ ಹೆಬ್ಬಾರ್

Source link

ಮದುವೆಯಾಗ್ತೀನೆಂದು ನಂಬಿಸಿ 4 ವರ್ಷ ಲಿವ್​-ಇನ್​ ಸಂಬಂಧದಲ್ಲಿದ್ದು ಕೈಕೊಟ್ಟ ಪೊಲೀಸ್, ಮಹಿಳೆ ಆತ್ಮಹತ್ಯೆ

ಆಗ್ರಾ,ಮಾರ್ಚ್​ 13: ಮದುವೆ(Marriage)ಯಾಗುವುದಾಗಿ ನಂಬಿಸಿ 4 ವರ್ಷ ಲಿವ್-ಇನ್ ಸಂಬಂಧದಲ್ಲಿದ್ದು ಪೊಲೀಸ್ ಕಾನ್​​ಸ್ಟೆಬಲ್ ಕೈಕೊಟ್ಟಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ವರ್ಷಗಳ ಕಾಲ ಆತ ದೈಹಿಕ ಹಾಗೂ ಮಾನಸಿಕ ಶೋಷಣೆಯಾಗಿದೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಮಹಿಳೆ ಹೇಳಿದ್ದಾಳೆ. ಮದುವೆಯಾಗುವ ಭರವಸೆ ನೀಡಿದ್ದ ತಾನು ಆತನೊಂದಿಗೆ ಪತ್ನಿಯಂತೆಯೇ ಸಂಸಾರ ನಡೆಸಿದ್ದೇನೆ ಬಳಿಕ ಆತ ಮದುವೆಯಾಗಲು ನಿರಾಕರಿಸಿದ್ದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ, ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಕಾನ್‌ಸ್ಟೆಬಲ್ ತನ್ನ ಕುಟುಂಬದವರು ತಮ್ಮ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾಗಿ ಮಹಿಳೆ ಹೇಳಿದ್ದಾಳೆ. ತಾನು ನ್ಯಾಯಕ್ಕಾಗಿ ಹಲವು ಬಾರಿ ಪ್ರಯತ್ನಿಸಿದ್ದರೂ ಸಹಾಯ ಸಿಗಲಿಲ್ಲ ಎಂದು ಕೂಡ ಹೇಳಿದ್ದಾಳೆ.

ಮತ್ತಷ್ಟು ಓದಿ: ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್

ಘಟನೆ ಬೆಳಕಿಗೆ ಬಂದ ಬಳಿಕ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಒಟ್ಟಿಗೆ ಇದ್ದು ಈಗ ಕಾನ್‌ಸ್ಟೆಬಲ್ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದಾನೆ.

ವಿಡಿಯೋದಲ್ಲಿರುವ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿಕೊಂಡಿದ್ದು, ತಾನು ಬದುಕಿದ್ದಾಗ ನ್ಯಾಯ ಸಿಕ್ಕಿಲ್ಲ ಮತ್ತು ತನ್ನ ಮರಣದ ನಂತರ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾಳೆ.

ಆ ಮಹಿಳೆ ಮೂಲತಃ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯವಳು. ಆಕೆಗೆ ಈ ಹಿಂದೆ ಮದುವೆಯಾಗಿ ವಿಚ್ಛೇದನವೂ ಆಗಿತ್ತು. ಆಗ್ರಾದಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದಾಗ ಕಾನ್ಸ್ಟೇಬಲ್ ಅವರನ್ನು ಭೇಟಿಯಾಗಿದ್ದಳು. ಈ ವಿಡಿಯೋಗಳು ವೈರಲ್ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ, ಕಾನ್‌ಸ್ಟೆಬಲ್ ಜೆ.ವಿ. ಗೌತಮ್ ಅವರನ್ನು ಅಮಾನತುಗೊಳಿಸಲಾಗಿದೆ. ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ, ಕಾನ್‌ಸ್ಟೆಬಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗ ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಅನುರಾಗ್ ದೊಭಾಲ್ ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ಹೊರಬಂದ ಯೂಟ್ಯೂಬರ್

ಹಿಂದಿ ‘ಬಿಗ್ ಬಾಸ್ 17’ ಸ್ಪರ್ಧಿ ಹಾಗೂ ಖ್ಯಾತ ಯೂಟ್ಯೂಬರ್ ಅನುರಾಗ್ ದೋಭಾಲ್ (Anurag Dobhal) ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಮಾರ್ಚ್ 7ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅನುರಾಗ್, ಇದೀಗ ಐಸಿಯುನಿಂದ (ICU) ಹೊರಬಂದಿದ್ದಾರೆ ಎಂದು ಅವರ ಮ್ಯಾನೇಜರ್ ರೋಹಿತ್ ಪಾಂಡೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಅನುರಾಗ್ ನಗುತ್ತಾ ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಫೋಟೋವನ್ನು ರೋಹಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಅನುರಾಗ್ ಭಾಯ್ ಐಸಿಯುನಿಂದ ಹೊರಬಂದಿದ್ದಾರೆ. ನಾವು ದಿನದ 24 ಗಂಟೆಯೂ ಅವರ ಜೊತೆಗಿದ್ದೇವೆ. ಅವರು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ’ ಎಂದು ರೋಹಿತ್ ಪಾಂಡೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಪಘಾತಕ್ಕೂ ಮುನ್ನ ಅನುರಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಇದು ನನ್ನ ಕೊನೆಯ ವಿಡಿಯೋ’ ಎಂದು ಭಾವುಕವಾಗಿ ಮಾತನಾಡಿದ್ದರು. ತಮ್ಮ ಅಂತರ್ಜಾತಿ ವಿವಾಹದ ಕಾರಣಕ್ಕಾಗಿ ಪೋಷಕರು ಮತ್ತು ಸಹೋದರ ಕಲಂ ದೊಭಾಲ್ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಪತ್ನಿ ರಿತಿಕಾ ಕೂಡ ತನ್ನನ್ನು ಬಿಟ್ಟು ಹೋಗಿದ್ದಾಳೆ ಮತ್ತು ತಾನು ತೀವ್ರ ಖಿನ್ನತೆಯಲ್ಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅನುರಾಗ್ ಸಹೋದರ ಕಲಂ, ‘ಇವೆಲ್ಲವೂ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯಲು ಮಾಡುತ್ತಿರುವ ನಾಟಕ’ ಎಂದು ಆರೋಪಿಸಿದ್ದರು. ಕುಟುಂಬದ ನಡುವಿನ ಗಲಾಟೆ ತಾರಕಕ್ಕೇರಿದ ಬೆನ್ನಲ್ಲೇ, ಅನುರಾಗ್ ಅವರು ಟೊಯೋಟಾ ಫಾರ್ಚುನರ್ ಕಾರಿನಲ್ಲಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರು. ವರದಿಗಳ ಪ್ರಕಾರ, ಕಾರು ಸುಮಾರು 140-150 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ಬೇಕಂತಲೇ ಅವರು ಡಿವೈಡರ್​ಗೆ ಗುದ್ದಿದರು.

ಅನುರಾಗ್ ಪತ್ನಿ ರಿತಿಕಾ ಪ್ರಸ್ತುತ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಅವರ ಆರೋಗ್ಯದ ಬಗ್ಗೆಯೂ ಮ್ಯಾನೇಜರ್ ಕಾಳಜಿ ವ್ಯಕ್ತಪಡಿಸಿದ್ದಾರೆ. ‘ಈಗ ನಮಗೆ ಅನುರಾಗ್ ಮತ್ತು ರಿತಿಕಾ ಅವರ ಆರೋಗ್ಯವೇ ಮುಖ್ಯ. ಕುಟುಂಬದ ವಿಚಾರಗಳ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅನುರಾಗ್ ಗುಣಮುಖರಾದ ನಂತರ ಅಧಿಕೃತ ಹೇಳಿಕೆ ಬಿಡುಗಡೆ ಮಾಡುತ್ತೇವೆ’ ಎಂದು ಮ್ಯಾನೇಜರ್ ರೋಹಿತ್ ತಿಳಿಸಿದ್ದಾರೆ.

ಇದನ್ನೂ ಓದಿ: ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ

ಸೋಶಿಯಲ್ ಮೀಡಿಯಾದಲ್ಲಿ ಅನುರಾಗ್ ದೊಭಾಲ್ ಬಹಳ ಫೇಮಸ್. ಮೊಟೋ ವ್ಲಾಗ್ ಮೂಲಕ ಅವರು ಹೆಸರು ಗಳಿಸಿದ್ದಾರೆ. ಆದರೆ ಖಾಸಗಿ ಜೀವನದಲ್ಲಿ ಸಮಸ್ಯೆಗಳು ಉಂಟಾದ ಕಾರಣ ಅವರು ಖಿನ್ನತೆಗೆ ಜಾರಿದ್ದರು. ಅದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈಗ ಅವರು ಚೇತರಿಕೆ ಕಾಣುತ್ತಿದ್ದಾರೆ ಎಂಬ ವಿಷಯ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version