ಸಣ್ಣದೊಂದು ಮನಸ್ಥಾಪ, ಪತ್ನಿಗೆ ಬೆಂಕಿ ಹಚ್ಚಿ ಕೊಂದ ಗಂಡ

ಸಣ್ಣದೊಂದು ಮನಸ್ಥಾಪ, ಪತ್ನಿಗೆ ಬೆಂಕಿ ಹಚ್ಚಿ ಕೊಂದ ಗಂಡ

ಕೋಲ್ಕತ್ತಾ, ಮಾರ್ಚ್​ 13: ಸಣ್ಣದೊಂದು ಮನಸ್ಥಾಪಕ್ಕೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿ  ಕೊಲೆ(Murder) ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ  ನರ್ಸ್ ಒಬ್ಬರು ಕಾರಿನ ಇಎಂಐ ಪಾವತಿಗೆ ಸಂಬಂಧಿಸಿದ ಜಗಳದಲ್ಲಿ ಪತಿಯ ಕೈಯಿಂದಲೇ ಸಾವನ್ನಪ್ಪಿದ್ದಾರೆ. ಕೂಚ್ ಬೆಹಾರ್‌ನಲ್ಲಿರುವ ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸೂತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಛಂದಾ ರಾಯ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಛಂದಾ ಮನೆಯಿಂದ ಕೂಗುತ್ತಾ ಹೊರಗೆ ಓಡಿಹೋಗಿದ್ದಳು, ಬೆಂಕಿ ಹೊತ್ತಿಕೊಂಡಿದ್ದರಿಂದ ಆ ಪ್ರದೇಶದಲ್ಲಿ ಜನರು ಭಯಭೀತರಾದರು. ನಿವಾಸಿಗಳು ಆಕೆಯನ್ನು ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದಾರೆ, ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ.

ಛಂದಾ ಅವರು ಕಳೆದ ಮೂರುವರೆ ವರ್ಷಗಳಿಂದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಪತಿ ರಂಜಿತ್ ರಾಯ್, ವೃತ್ತಿಯಲ್ಲಿ ಚಾಲಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನ ಸಮಾನ ಮಾಸಿಕ ಕಂತುಗಳ (ಇಎಂಐ) ಪಾವತಿಗೆ ಸಂಬಂಧಿಸಿದಂತೆ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.

ಮತ್ತಷ್ಟು ಓದಿ: ಮದುವೆಯಾಗಿ 3 ತಿಂಗಳೊಳಗೆ ಪತಿಗೆ ಮುಹೂರ್ತ ಇಟ್ಟ ಪತ್ನಿ: ಪ್ರಿಯಕರನ ಜೊತೆ ಸೇರಿ ಕೊಲೆ

ಪೊಲೀಸ್ ಮೂಲಗಳ ಪ್ರಕಾರ, ರಂಜಿತ್ ಜೀವನ ಸಾಗಿಸಲು ವಾಹನವನ್ನು ಖರೀದಿಸಿದ್ದರು.ಸಾಲ ಮರುಪಾವತಿಗೆ ಸಂಬಂಧಿಸಿದ ವಿವಾದಗಳು ದಂಪತಿ ನಡುವೆ ಪದೇ ಪದೇ ಜಗಳಗಳಿಗೆ ಕಾರಣವೆಂದು ವರದಿಯಾಗಿದೆ.

ದಂಪತಿ ನಡುವಿನ ವಿವಾದಗಳು ಈ ಹಿಂದೆ ಮಹಿಳಾ ಪೊಲೀಸ್ ಠಾಣೆಗೆ ತಲುಪಿದ್ದವು, ಆದರೆ ಆ ಸಮಯದಲ್ಲಿ ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ರಂಜಿತ್ ಕೂಡ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದ್ದು, ಅವರ ಸ್ಥಿತಿ ಸ್ಥಿರವಾದ ನಂತರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ನಿರ್ಧರಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿಯ ಪುತ್ರಿ ಡಾರ್ಜಿಲಿಂಗ್‌ನ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ

ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಉದ್ಯಮಿ ಸೊಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದರು. ಮಾರ್ಚ್ 11ರಂದು ಕೋರ್ಟ್ ಇವರಿಗೆ ವಿಚ್ಛೇದನ ನೀಡಿದೆ. ಇಬ್ಬರು ಪರಸ್ಪರ ಸಮ್ಮತಿಸಿ ಬೇರೆ ಆಗಿದ್ದಾರೆ. ಹಾಗಾದರೆ ಡಿವೋರ್ಸ್ ಬಳಿಕ ಹನ್ಸಿಕಾ ಮನಸ್ಥಿತಿ ಹೇಗಿದೆ? ಅದಕ್ಕೆ ಇಲ್ಲಿದೆ ಉತ್ತರ. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಮನ ಸೆಳೆದಿದೆ.

ಹನ್ಸಿಕಾ ಅವರು ವಿಚ್ಛೇದನದ ಬಳಿಕ ಇನ್​​​ಸ್ಟಾಗ್ರಾಮ್ ಅಲ್ಲಿ ಸ್ಟೋರಿ ಒಂದನ್ನು ಹಾಕಿದ್ದಾರೆ. ‘Chardi Kala always’ ಎಂದು ಅವರು ಬರೆದುಕೊಂಡಿದ್ದಾರೆ. ಇದು ಪಂಜಾಬಿ ನುಡಿಗಟ್ಟಾಗಿದೆ. ಕಷ್ಟದಲ್ಲೂ ಸಹ ಆಶಾವಾದ, ಉನ್ನತ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಈ ಸಾಲು ಸೂಚಿಸುತ್ತದೆ.

ಹನ್ಸಿಕಾ ಅವರು 2022ರ ಡಿಸೆಂಬರ್ 4ರಂದು ವಿವಾಹ ಆದರು. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಈ ಮುದವೆ ನಡೆಯಿತು. ಈ ಮದುವೆಯ ಫೋಟೋಗಳು ವೈರಲ್ ಆದವು. ಹನ್ಸಿಕಾ ಆತ್ಮೀಯ ಗೆಳತಿಯ ಮಾಜಿ ಪತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ಅವರ ನಡುವೆ ಕಿತ್ತಾಟ ಪ್ರಾರಂಭವಾದವು. ಅದಾದ ನಂತರ, ಹನ್ಸಿಕಾ ಮತ್ತು ಸೊಹೈಲ್ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವಿಚ್ಛೇದನದ ನಂತರ ಹನ್ಸಿಕಾ ಸೊಹೈಲ್‌ನಿಂದ ಜೀವನಾಂಶವನ್ನು ಕೇಳಿಲ್ಲ ಎನ್ನಲಾಗಿದೆ.

ಹನ್ಸಿಕಾ ಮತ್ತು ಸೊಹೈಲ್ ಅವರ ಜೀವನದಲ್ಲಿ ಕೆಲವು ವ್ಯತ್ಯಾಸಗಳಿದ್ದವು.ಅವರ ಆಲೋಚನೆಗಳು, ಆದ್ಯತೆಗಳು ಮತ್ತು ಜೀವನಶೈಲಿಗಳು ಪರಸ್ಪರ ಬಹಳ ಭಿನ್ನವಾಗಿವೆ ಎಂದು ಅವರು ಕ್ರಮೇಣ ಅರಿತುಕೊಂಡರು.

ಇದನ್ನೂ ಓದಿ: ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ; ನಟಿಯ ಸ್ಪಷ್ಟನೆ ಏನಾಗಿತ್ತು?

2024ರಿಂದಲೇ ಹನ್ಸಿಕಾ ಹಾಗೂ ಸೊಹೈಲ್ ಬೇರೆ ಆಗಿ ವಾಸವಾಗಿರಲು ಆರಂಭಿಸಿದರು. ಈ ಕಾರಣದಿಂದ ಮಾನಸಿಕವಾಗಿ ಅವರು ಸಿದ್ಧರಾಗಿದ್ದರು. ಈ ಕಾರಣದಿಂದ ಅವರಿಗೆ ವಿಚ್ಛೇದನ ಅಷ್ಟಾಗಿ ಪರಿಣಾಮ ಬೀರದೇ ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

World Sleep Day 2026: ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ

ನಮ್ಮ ಆರೋಗ್ಯಕ್ಕೆ ಊಟ, ನೀರು, ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆಯೂ (Sleep) ಅಷ್ಟೇ ಮುಖ್ಯ. ಆದ್ರೆ ಇಂದಿನ ಈ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ, ಇಡೀ ದಿನ ಮೊಬೈಲ್‌ ಫೋನ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗೆ ಸರಿಯಾಗಿ ನಿದ್ರೆ ಮಾಡದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿದ್ರೆಯ ಮಹತ್ವವನ್ನು ತಿಳಿಸಲು ಮತ್ತು ಉತ್ತಮ ನಿದ್ರೆ ಪಡೆಯುವುದು ಏಕೆ ಮುಖ್ಯ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ನಿದ್ರಾ ದಿನದ ಇತಿಹಾಸವೇನು?

ವಿಶ್ವ ನಿದ್ರಾ ದಿನವನ್ನು  ವರ್ಲ್ಡ್ ಸ್ಲೀಪ್ ಸೊಸೈಟಿ ಪ್ರಾರಂಭಿಸಿತು. ಇದನ್ನು ಮೊದಲು 2008 ರಲ್ಲಿ ಆಚರಿಸಲಾಯಿತು. ಸಾಕಷ್ಟು ನಿದ್ರೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ನಿದ್ರಾಹೀನತೆಯ ಋಣಾತ್ಮಕ ಪರಿಣಾಮವನ್ನು ಎತ್ತಿ ತೋರಿಸುವುದು ಮತ್ತು ನಿದ್ರಾಹೀನತೆಯ ನಿರ್ವಹಣೆ ಮತ್ತು ತಡೆಗಟ್ಟುವಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ವಿಶ್ವ ನಿದ್ರಾ ದಿನದ ಮಹತ್ವವೇನು?

  • ವಿಶ್ವ ನಿದ್ರಾ ದಿನದ ಪ್ರಮುಖ ಉದ್ದೇಶವೆಂದರೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ನಿದ್ರೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ನಿದ್ರಾ ಹೀನತೆಯು ಆಯಾಸ, ಕಿರಿಕಿರಿ, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ದಿನದಂದು, ಆರೋಗ್ಯಕರ ಜೀವನಕ್ಕಾಗಿ ಜನರು ಸಾಕಷ್ಟು ನಿದ್ರೆ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.

ಒಳ್ಳೆಯ ನಿದ್ರೆ ಏಕೆ ಮುಖ್ಯ?

ನಿದ್ರೆ ಎಂದರೆ ಕೇವಲ ವಿಶ್ರಾಂತಿ ಪಡೆಯುವುದು ಮಾತ್ರವಲ್ಲ, ಇದು ದೇಹವನ್ನು ಪುನರ್ಭರ್ತಿ ಮಾಡುವ ಒಂದು ರೂಪ. ನಾವು ನಿದ್ರಿಸುವಾಗ, ದೇಹವು ಸ್ನಾಯುಗಳ ದುರಸ್ತಿ, ಮೆದುಳಿನ ವಿಶ್ರಾಂತಿ ಮತ್ತು ಹಾರ್ಮೋನುಗಳ ಸಮತೋಲನದಂತಹ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಉತ್ತಮ ನಿದ್ರೆ ಸ್ಮರಣೆಯನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಟ 8 ರಿಂದ 9 ಗಂಟೆಗಳ ಉತ್ತಮ ನಿದ್ರೆ ಪಡೆಯುವುದು ತುಂಬಾನೇ ಮುಖ್ಯ.

 ಇದನ್ನೂ ಓದಿ: ಧೂಮಪಾನ ತ್ಯಜಿಸಿ, ಆರೋಗ್ಯಕರ ಜೀವನವನ್ನು ನಡೆಸಿ

ಉತ್ತಮ ನಿದ್ರೆ ಪಡೆಯುವುದು ಹೇಗೆ?

ಮಲಗುವ ಸಮಯವನ್ನು ನಿಗದಿಪಡಿಸಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದ ಜೈವಿಕ ಗಡಿಯಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಮಲಗುವ ಮುನ್ನ ಮೊಬೈಲ್‌ನಿಂದ ದೂರವಿರಿ: ಮಲಗುವ ಮುನ್ನ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿಗಳ ಬಳಕೆಯನ್ನು ಮಿತಿಗೊಳಿಸಿ. ಅವುಗಳ ನೀಲಿ ಬೆಳಕು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಹಗುರವಾದ ಮತ್ತು ಆರೋಗ್ಯಕರ ಊಟವನ್ನು ಸೇವಿಸಿ: ರಾತ್ರಿಯಲ್ಲಿ ಭಾರವಾದ ಅಥವಾ ತುಂಬಾ ಖಾರವಾದ ಆಹಾರವನ್ನು ಸೇವಿಸುವುದರಿಂದ ನಿದ್ರೆ ಕಷ್ಟವಾಗಬಹುದು. ಆದ್ದರಿಂದ, ಹಗುರವಾದ ಆಹಾರವನ್ನು ಸೇವಿಸುವುದು ಉತ್ತಮ.

ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ರಚಿಸಿ: ಮಲಗುವ ಮುನ್ನ ಕೋಣೆಯಲ್ಲಿನ ದೀಪಗಳನ್ನು ಮಂದಗೊಳಿಸಿ ಮತ್ತು ಶಾಂತ ವಾತಾವರಣವನ್ನು ಕಾಪಾಡಿಕೊಳ್ಳಿ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ: ಪ್ರತಿದಿನ ಲಘು ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ದೇಹವು ದಣಿದ ಅನುಭವವಾಗುತ್ತದೆ ಮತ್ತು ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯಲು ಇದು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!

ಬೆಂಗಳೂರು, ಮಾರ್ಚ್​ 13: ಒಡಿಶಾದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ತಡೆಯುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕೀಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಗುರುವಾರ ರಾತ್ರೋರಾತ್ರಿ ಒಡಿಶಾ ಶಾಸಕರು ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಇದೀಗ ಅಸ್​ಸಾಂ ಶಾಸಕರೂ ಬಿಡದಿಯ ವಂಡರ್ ಲಾ ರೆಸಾರ್ಟ್ಗೆ ಬಂದಿಳಿದಿದ್ದಾರೆ. ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟಿಗೆ ಇರಿಸಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗುವಂತೆ ಮಾಡಲು ಬೆಂಗಳೂರಿಗೆ ಕರೆಸಿಕೊಂಡಿದೆ ಎಂದು ತಿಳಿದುಬಂದಿದೆ. ಇದರಿಂದ ರಾಜ್ಯಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡಿವೆ.

ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ನಲ್ಲಿ ಅಸ್ಸಾಂನ 10 ಕಾಂಗ್ರೆಸ್ ಶಾಸಕರ ವಾಸ್ತವ್ಯ ಏರ್ಪಡಿಸಲಾಗಿದೆ. ಶಾಸಕರು ರೆಸಾರ್ಟ್‌ಗೆ ಆಗಮಿಸಿದಾಗ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದ್ದು, ಅವರ ಭದ್ರತೆಗಾಗಿ ರೆಸಾರ್ಟ್ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯಲು ಶಾಸಕರನ್ನು ಒಟ್ಟಿಗೆ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Daily Devotional: ಮನೆಯೊಳಗೆ ಸರಿಯಾಗಿ ಸೂರ್ಯನ ಬೆಳಕು ಬೀಳಬೇಕು ಯಾಕೆ ಗೊತ್ತಾ?

ಮನೆ, ಕಚೇರಿ, ವ್ಯಾಪಾರ ಸ್ಥಳ ಅಥವಾ ದೇವಾಲಯ ಯಾವುದೇ ಆಗಿರಲಿ, ಸೂರ್ಯನ ಬೆಳಕು ಪ್ರವೇಶಿಸುವುದಕ್ಕೆ ಎಲ್ಲರೂ ಗಮನ ನೀಡುತ್ತಾರೆ. ಅನೇಕ ಮನೆಗಳಲ್ಲಿ ದೇವರ ಮನೆ, ಮುಖ್ಯ ಬಾಗಿಲು ಅಥವಾ ಕಚೇರಿಯ ಮುಖ್ಯ ಹಾಲ್‌ನವರೆಗೂ ಸೂರ್ಯನ ಬೆಳಕು ಬರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸೂರ್ಯರಶ್ಮಿಯ ಪ್ರವೇಶವು ದಿಕ್ಕುಗಳನ್ನು ಅವಲಂಬಿಸಿ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಪೂರ್ವ ದಿಕ್ಕಿನಿಂದ ಸೂರ್ಯನ ಬೆಳಕು ಪ್ರವೇಶಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಮನೆಯ ಬಾಗಿಲು ಪೂರ್ವಕ್ಕಿಲ್ಲದಿದ್ದರೂ, ಪೂರ್ವ ದಿಕ್ಕಿನಿಂದ ಬರುವ ಸೂರ್ಯರಶ್ಮಿಯು ಆ ಮನೆಗೆ ಸರ್ವಥಾ ಶುಭವನ್ನು ತರುತ್ತದೆ. ಇದು ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ, ಕೆಲಸ ಕಾರ್ಯಗಳಲ್ಲಿ ಶುಭ, ಆದಾಯದಲ್ಲಿ ಏರಿಕೆ ಮತ್ತು ಸಕಾರಾತ್ಮಕ ಭಾವನೆಗಳಿಗೆ ಕಾರಣವಾಗುತ್ತದೆ. ಆರೋಗ್ಯ, ಕೀರ್ತಿ ಮತ್ತು ಪ್ರತಿಷ್ಠೆಗೆ ಭಾಜನರಾಗಲು ಪೂರ್ವ ದಿಕ್ಕಿನಿಂದ ಬರುವ ಸೂರ್ಯರಶ್ಮಿ ಸಹಕಾರಿಯಾಗಿದೆ. ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ದಿಕ್ಕುಗಳಿಂದ ಬರುವ ಬೆಳಕು ಬಹಳಷ್ಟು ಶುಭ ಫಲಗಳನ್ನು ನೀಡುತ್ತದೆ.

ಸೂರ್ಯನು “ನಮಸ್ಕಾರಪ್ರಿಯೋ ಭಾನು” ಎಂದು ಕರೆಸಿಕೊಳ್ಳುತ್ತಾನೆ ಮತ್ತು “ಆತ್ಮಕಾರಕ” ಹಾಗೂ “ತಂದೆ” ಎಂದು ಪರಿಗಣಿಸಲ್ಪಡುತ್ತಾನೆ. “ಆರೋಗ್ಯಂ ಭಾಸ್ಕರಾದಿಚ್ಛೇತ್” ಎಂಬಂತೆ, ಭಾಸ್ಕರನೇ ಆರೋಗ್ಯವನ್ನು ನೀಡುವವನು ಎಂದು ನಂಬಲಾಗಿದೆ. ಹೀಗಾಗಿ ಸೂರ್ಯನ ಕಿರಣಗಳು ಆರೋಗ್ಯ ವೃದ್ಧಿಗೆ ಪೂರಕವಾಗಿವೆ. ಸಂಧ್ಯಾಕಾಲದಲ್ಲಿ ಅಂದರೆ ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ದಿಕ್ಕಿನಿಂದ ಮನೆಯೊಳಗೆ ಬೆಳಕು ಬರುವುದು ಸಹ ಶುಭಕರವಾಗಿದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಆದರೆ, ವಾಸ್ತು ಪ್ರಕಾರ ನೈಋತ್ಯ ದಿಕ್ಕಿನಿಂದ ಸೂರ್ಯನ ಕಿರಣಗಳು ಮನೆಯನ್ನು ಪ್ರವೇಶಿಸುವುದು ಶುಭಕರವಲ್ಲ. ಇದು ದೇವಾಲಯ ಅಥವಾ ದೇವರ ಸ್ಥಾನವಾಗಿದ್ದರೆ, ಅಲ್ಲಿ ಶ್ರದ್ಧಾಭಕ್ತಿಗಳಿಂದ ನಡೆದುಕೊಂಡರೆ ಶುಭಫಲಗಳು ಪ್ರಾಪ್ತವಾಗುತ್ತವೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಸೂರ್ಯರಶ್ಮಿ ನೇರವಾಗಿ ಬೀಳದಿದ್ದರೂ, ಆ ಬೆಳಕು ಪ್ರವೇಶಿಸುವ ಬಗ್ಗೆ ಗಮನ ಹರಿಸಬೇಕು.

ಒಟ್ಟಾರೆಯಾಗಿ, ಸೂರ್ಯರಶ್ಮಿಯು ಮನೆ, ಕಚೇರಿ, ದೇವಾಲಯ, ಪ್ರಾಂಗಣ, ಶಿಖರ, ಕಿಟಕಿ ಅಥವಾ ಬಾಗಿಲುಗಳ ಮುಖಾಂತರ ಪ್ರವೇಶಿಸುವುದು ಅತ್ಯಂತ ಶುಭಕಾರಿಯಾಗಿದೆ. ಮನೆಯಲ್ಲಿ ಸೂರ್ಯರಶ್ಮಿಯು ಬೀಳುವುದರಿಂದ ಆ ಮನೆಯ ವಾಸ್ತು ಗಟ್ಟಿಯಾಗಿ, ಶುಭವಾಗಿ, ಸಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​ನಲ್ಲಿ ಗರಿಗೆದರಿದ ಡಿನ್ನರ್ ಪಾಲಿಟಿಕ್ಸ್: ಮಾರ್ಚ್ 16 ರಂದು ಸಚಿವರಿಗೆ ಔತಣಕೂಟ ಆಯೋಜಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 13: ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಮತ್ತೆ ‘ಡಿನ್ನರ್ ರಾಜಕೀಯ’ ಸದ್ದು ಮಾಡುತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವೇ ದಿನಗಳ ಹಿಂದೆ ಡಿನ್ನರ್ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡ ಸಚಿವರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಆಂತರಿಕ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವುದು ಗಮನಾರ್ಹವಾಗಿದೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಂಡ ನೆಪದಲ್ಲಿ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ಆಯೋಜಿಸಿದ್ದರು. ಅದರ ಬೆನ್ನಲ್ಲೇ ಮಾರ್ಚ್ 12ರಂದು ಸಿಎಂ ಮತ್ತು ಡಿಸಿಎಂ ಬಣಗಳಿಗೆ ಸೇರಿರುವ ಕೆಲವು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿತ್ತು.

ಈ ಸಭೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಸಂಪುಟ ಪುನರ್‌ರಚನೆಗಾಗಿ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬೆಳವಣಿಗೆಗಳ ನಡುವೆಯೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಡಿನ್ನರ್ ಕೂಟ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.

ಈ ಡಿನ್ನರ್ ಸಭೆಯಲ್ಲಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ಘೋಷಣೆಯಾಗಬಹುದಾದ ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಗಳಲ್ಲಿ ಯಾರು ಭಾಗವಹಿಸಬೇಕು ಎಂಬುದರ ಕುರಿತಾಗಿಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ರೆಸಾರ್ಟ್ ರಾಜಕೀಯ ಶುರು: ಬಿಡದಿಯ ವಂಡರ್ ಲಾ ರೆಸಾರ್ಟ್​ನತ್ತ 14 ಕಾಂಗ್ರೆಸ್ ಶಾಸಕರು!

ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರ ಡಿನ್ನರ್ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜಿಸಿರುವ ಈ ಔತಣಕೂಟ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಆಂತರಿಕ ರಾಜಕೀಯದ ಮೇಲೆ ಅದರ ಪರಿಣಾಮ ಹೇಗಿರಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಚಂದ್ರಪ್ರಭ ಅವರು ಲೇಡಿ ಗೆಟಪ್​  ಅಲ್ಲಿ ಬಂದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ‘ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್’ನ ಶೋನಲ್ಲಿ ಅವರು ಈ ಗೆಟಪ್​​ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಚಂದ್ರಪ್ರಭ ಅವರನ್ನು ಲೇಡಿ ಗೆಟಪ್​​​ನಲ್ಲಿ ನೋಡಿ ಎಲ್ಲರೂ ನಕ್ಕಿದ್ದಾರೆ. ಅವರು ಸಖತ್ ಆಗಿ ಮನರಂಜನೆ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಇಸ್ರೇಲ್-ಇರಾನ್ ಯುದ್ಧದಿಂದ ಕಂಗೆಟ್ಟ ಮಂಗಳೂರು ಡ್ರೈಫ್ರೂಟ್ಸ್ ಉದ್ಯಮ: ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಪೂರೈಕೆ ಸ್ಥಗಿತ

ಮಂಗಳೂರು, ಮಾರ್ಚ್ 13: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ಇದೀಗ ಭಾರತದ ಡ್ರೈಫ್ರೂಟ್ಸ್ (Dry Fruits) ಉದ್ಯಮಕ್ಕೂ ತಟ್ಟಿದ್ದು, ವಿಶೇಷವಾಗಿ ಮಂಗಳೂರಿನ (Mangalore) ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಖರ್ಜೂರ ಸೇರಿದಂತೆ ಹಲವು ಒಣಹಣ್ಣುಗಳ ಪೂರೈಕೆ ಅಡಚಣೆಗೆ ಒಳಗಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಶುರುವಾಗಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ಡ್ರೈಫ್ರೂಟ್ಸ್ ಆಮದು ಸಂಸ್ಥೆಯಾದ ‘ರೀಮ್ ಟ್ರೇಡರ್ಸ್’ ಸೇರಿದಂತೆ ಹಲವು ವ್ಯಾಪಾರಿಗಳು ಈಗ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಕಂಪನಿ ಮಂಗಳೂರಿನಿಂದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾ ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಡ್ರೈಫ್ರೂಟ್ಸ್ ಪೂರೈಸುತ್ತದೆ. ಕರ್ನಾಟಕದ ವಿವಿಧ ಕಡೆಗಳಿಗೂ ಇಲ್ಲಿಂದಲೇ ಡ್ರೈಫ್ರೂಟ್ಸ್ ಪೂರೈಕೆಯಾಗುತ್ತಿದೆ.

ಆಮದು ಸ್ಥಗಿತ, ಡ್ರೈಫ್ರೂಟ್ಸ್ ದರ ಶೇ 15 ರಿಂದ 20 ರವರೆಗೆ ಏರಿಕೆ

ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್ ಆಮದು ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಖರ್ಜೂರ ಸೇರಿದಂತೆ ಅಂಜೀರ್, ಅಪ್ರಿಕಾಟ್, ಬಾದಾಮ್, ಕಪ್ಪು ದ್ರಾಕ್ಷಿ, ಫೈನ್ ನಟ್ಸ್ ಸೇರಿದಂತೆ ಹಲವು ಒಣಹಣ್ಣುಗಳ ಬೆಲೆಗಳು ಶೇ 15 ರಿಂದ 20 ರವರೆಗೆ ಏರಿಕೆ ಕಂಡಿವೆ.

ಸಾಮಾನ್ಯವಾಗಿ ಭಾರತಕ್ಕೆ ಆಮದು ಆಗುವ ಖರ್ಜೂರಗಳಲ್ಲಿ ಸುಮಾರು 60 ಶೇಕಡಾ ಪ್ರಮಾಣ ಇರಾನ್‌ನಿಂದಲೇ ಬರುತ್ತದೆ. ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್‌ನಿಂದ ಬರುತ್ತಿದ್ದ ದೊಡ್ಡ ಪ್ರಮಾಣದ ಖರ್ಜೂರ ಪೂರೈಕೆ ಅಡಚಣೆಗೆ ಒಳಗಾಗಿದೆ.

ಅಫ್ಘಾನಿಸ್ತಾನದಿಂದಲೂ ಆಮದು ಸ್ಥಗಿತ!

ಇದಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್‌ಗಳನ್ನು ಪಾಕಿಸ್ತಾನದ ವಾಘಾ ಗಡಿ ಮಾರ್ಗದ ಮೂಲಕ ರಸ್ತೆ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪಾಕಿಸ್ತಾನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಆ ಮಾರ್ಗದಲ್ಲಿಯೂ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಫ್ಘಾನಿಸ್ತಾನದಿಂದ ಬರಬೇಕಾದ ಸರಕುಗಳನ್ನು ಈಗ ಸಮುದ್ರ ಮಾರ್ಗದ ಮೂಲಕ ಇರಾನ್‌ನ ಬಂದರ್ ಅಬ್ಬಾಸ್ ಬಂದರು ತಲುಪಿ, ಅಲ್ಲಿಂದ ಭಾರತಕ್ಕೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಗಾಟ ಸಮಯವೂ ಹೆಚ್ಚಾಗಿ, ವೆಚ್ಚವೂ ಹೆಚ್ಚಾಗಿದೆ.

ರಂಜಾನ್ ಸೀಸನ್‌ಗೆ ವ್ಯಾಪಾರಿಗಳಿಗೆ ಆತಂಕ

ರಂಜಾನ್ ಸೀಸನ್ ಹಿನ್ನೆಲೆಯಲ್ಲಿ ಖರ್ಜೂರಕ್ಕೆ ಹೆಚ್ಚಾದ ಬೇಡಿಕೆ ಇರುತ್ತದೆ. ಆದರೆ ಈ ವೇಳೆಯಲ್ಲೇ ಪೂರೈಕೆ ಕಡಿಮೆಯಾಗಿರುವುದು ವ್ಯಾಪಾರಿಗಳಿಗೆ ತಲೆನೋವಾಗುತ್ತಿದೆ. ಈಗಾಗಲೇ ಬಂದಿದ್ದ ಕೆಲವು ಸ್ಟಾಕ್‌ಗಳು ಮಾರಾಟವಾಗಿದ್ದು, ಹೊಸ ಸರಕುಗಳ ಆಗಮನದಲ್ಲಿ ವಿಳಂಬವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಡ್ರೈಫ್ರೂಟ್ಸ್ ಪೂರೈಕೆ ಸ್ಥಗಿತ: ಉದ್ಯಮಿ ಹೇಳಿದ್ದೇನು?

ಮಂಗಳೂರಿನ ರೀಮ್ ಟ್ರೇಡರ್ಸ್ ಸಂಸ್ಥೆಯ ಮಾಲೀಕ ಮೊಹಮ್ಮದ್ ಮುಖ್ತಾರ್ ಅವರ ಪ್ರಕಾರ, ಯುದ್ಧದ ಪರಿಣಾಮದಿಂದ ಡ್ರೈಫ್ರೂಟ್ಸ್ ಕೊರತೆ ಉಂಟಾಗಿದ್ದು, ದರಗಳಲ್ಲೂ ಹೆಚ್ಚಳವಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದಲೂ ಖರ್ಜೂರ ಪೂರೈಕೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ, ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಡ್ರೈ ಫ್ರೂಟ್ಸ್

ಒಟ್ಟಿನಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಭಾರತದ ಡ್ರೈಫ್ರೂಟ್ಸ್ ಉದ್ಯಮದ ಮೇಲೂ ಪರಿಣಾಮ ಬೀರಿದ್ದು, ಮಂಗಳೂರಿನ ವ್ಯಾಪಾರಿಗಳು ಹಾಗೂ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಅದರ ಪರಿಣಾಮ ಕಾಣಿಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈದರಾಬಾದ್​​ನ ಅಲ್ಲು ಸಿನಿಮಾಸ್​​​ನಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋ

ಅಲ್ಲು ಅರ್ಜುನ್ ಅವರು (Allu Arjun) ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಅಲ್ಲು ಸಿನಿಮಾಸ್’ ಮಲ್ಟಿಪ್ಲೆಕ್ಸ್​​ನ ಹೈದರಾಬಾದ್​​ನಲ್ಲಿ ಆರಂಭಿಸಿದ್ದಾರೆ. ಐಷಾರಾಮಿ ಆಸನ ವ್ಯವಸ್ಥೆ ಹಾಗೂ ಅದ್ಭುತ ಸಿನಿಮಾ ವೀಕ್ಷಣೆ ಅನುಭವ ನೀಡುವ ಈ ಮಲ್ಟಿಪ್ಲೆಕ್ಸ್ ಗುರುವಾರ (ಮಾರ್ಚ್ 12) ಉದ್ಘಾಟನೆ ಆಯಿತು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಈ ಥಿಯೇಟರ್​​ನ ವಾಲ್​​ ಆಫ್ ಫೇಮ್​ ಅಲ್ಲಿ ಇಬ್ಬರು ಕನ್ನಡದ ನಿರ್ದೇಶಕರ ಫೋಟೋ ಇದೆ ಎಂಬುದು ವಿಶೇಷ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಅಲ್ಲು ಅರ್ಜುನ್ ಅವರು ಹೈದರಾಬಾದ್​​ನವರು. ಅಲ್ಲಿಯ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಟಾಲಿವುಡ್​​ನ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮವನ್ನು ಅಲ್ಲು ಅರ್ಜುನ್ ಆರಂಭಿಸಿದ್ದಾರೆ. ಇದು ಹೈದರಾಬಾದ್​ನಲ್ಲಿರೋ ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್​​ ಹಾಗೂ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್​ಗೆ ಸ್ಪರ್ಧೆ ಒಡ್ಡಲಿದೆ.

ಇನ್ನು, ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಅಲ್ಲಿ ವಾಲ್ ಆಫ್ ಫೇಮ್ ನಿರ್ಮಿಸಿದ್ದಾರೆ. ಇದರಲ್ಲಿ ಹಲವು ನಿರ್ದೇಶಕರ ಫೋಟೋಗಳನ್ನು ಹಾಕಲಾಗಿದೆ. ತೆಲುಗು ನಿರ್ದೇಶಕರಾದ ಸುಕುಮಾರ್, ತ್ರಿವಿಕ್ರಂ ಶ್ರೀನಿವಾಸ್, ರಾಜಮೌಳಿ, ತಮಿಳಿನ ವೆಟ್ರಿ ಮಾರನ್, ಮಣಿ ರತ್ನಂ, ಅಟ್ಲಿ, ಹಿಂದಿಯಲ್ಲಿ ಸಂದೀಪ್ ರೆಡ್ಡಿ ವಂಗ, ರಾಜ್​​ಕುಮಾರ್ ಹಿರಾನಿ ಇದ್ದಾರೆ.

ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಕನ್ನಡದ ಇಬ್ಬರು ನಿರ್ದೇಶಕರ ಫೋಟೋಗಳನ್ನು ಹಾಕಲಾಗಿದೆ. ಅದುವೇ ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ. ಇದು ಕನ್ನಡಿಗರ ಪಾಲಿಗೆ ಹೆಮ್ಮೆ ಎನಿಸಿದೆ. ಇಬ್ಬರೂ ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವುದರಿಂದ ಇವರ ಫೋಟೋಗಳನ್ನು ಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಉಡುಪಿ, ಮಂಗಳೂರಿನಲ್ಲಿ ಮತ್ತೊಮ್ಮೆ ಕುಸಿದ ವಾಯು ಗುಣಮಟ್ಟ!

ಬೆಂಗಳೂರು, ಮಾರ್ಚ್​ 13: ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ  (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 163ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –163
  • ಮಂಗಳೂರು-184
  • ಮೈಸೂರು –162
  • ಬೆಳಗಾವಿ – 154
  • ಕಲಬುರ್ಗಿ-114
  • ಶಿವಮೊಗ್ಗ – 164
  • ಬಳ್ಳಾರಿ – 144
  • ಹುಬ್ಬಳ್ಳಿ- 153
  • ಉಡುಪಿ –174
  • ವಿಜಯಪುರ –136

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

Exit mobile version