ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಆಸೆ ಈಡೇರಿಸಿದ ಪುತ್ರ!

ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಆಸೆ ಈಡೇರಿಸಿದ ಪುತ್ರ!

ಬೆಳಗಾವಿ, ಮಾರ್ಚ್​ 11: ದಾನಗಳಲ್ಲಿ ಅನ್ನದಾನ, ನೇತ್ರದಾನ ಹಾಗೂ ದೇಹದಾನ ಶ್ರೇಷ್ಠ. ಇಂತಹ ಶ್ರೇಷ್ಠ ದಾನಗಳ ಪೈಕಿ 101 ವರ್ಷದ ತಾಯಿ ದೇಹದಾನ (Body Donation) ಮಾಡಿರುವುದು ಗಮನ ಸೆಳೆಯುತ್ತಿದೆ. ತಂದೆಯಂತೆ ತಾಯಿ ಕೂಡ ತನ್ನ ಮಗನೇ ದೇಹವನ್ನ ಛೇದಿಸಬೇಕೆಂದು ವಿಲ್ ಬರೆದು ಸಾವನ್ನಪ್ಪಿದ್ದರೆ, ತಾಯಿ ಕೊನೆ ಆಸೆಯಂತೆ ವೈದ್ಯ ಪುತ್ರ ದೇಹ ಛೇದಿಸಲು‌ ಸಿದ್ಧರಾಗಿದ್ದಾರೆ. ಅಜ್ಜಿಯ ಮಾದರಿಯ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಸಮಾಜಕ್ಕೆ ಮಾದರಿಯಾಗುವಂತಹದ್ದು, ಶತಾಯುಷಿ ಅಜ್ಜಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ವೈದ್ಯ ಕುಟುಂಬದ ಸ್ಟೋರಿ. ಯಾಕೆಂದರೆ ಹೆತ್ತಮಕ್ಕಳಿಗೆ ತಂದೆ-ತಾಯಿ ಆಸ್ತಿ ಅಂತಸ್ತನ್ನ ವಿಲ್ ಆಗಿ ಬರೆದಿಡುತ್ತಾರೆ. ಇಲ್ಲೊಬ್ಬರು ಮಹಾತಾಯಿ ತನ್ನ ಪುತ್ರನಿಂದಲೇ ದೇಹ ಛೇದಿಸಬೇಕೆಂದು ವಿಲ್ ಬರೆದಿಟ್ಟು ದೇಹದಾನ ಮಾಡಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ: ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ದೇಹದಾನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಶತಾಯಿಷಿ ಸುಶೀಲಾದೇವಿ ರಾಮಣ್ಣವರ್. ಈ ಮಹಾ ತಾಯಿಯ ವಯಸ್ಸು 101 ವರ್ಷ. ತಮ್ಮ ನಿಧನದ ಬಳಿಕ ದೇಹವನ್ನ ದಾನ ಮಾಡಿದ್ದರು. ಅದು ಬೆಳಗಾವಿ ನಗರದಲ್ಲಿರುವ ಕೆಎಲ್ಇ ಕಂಕಣವಾಡಿ ಆಯುರ್ವೇದ ಕಾಲೇಜಿಗೆ ದೇಹದಾನವನ್ನ ಮಾಡಿದ್ದಾರೆ. ಅದರಂತೆ ಅವರ ನಿಧನದ ಬಳಿಕ ಶತಾಯುಷಿ ಸುಶೀಲಾದೇವಿ ದೇಹವನ್ನ ಆಸ್ಪತ್ರೆ ವಿದ್ಯಾರ್ಥಿಗಳ‌ ಅಧ್ಯಯನಕ್ಕೆ ದಾನ ನೀಡಿದ್ದಾರೆ. ಆಸ್ಪತ್ರೆಗೆ ದೇಹದಾನ ಮಾಡುವುದಕ್ಕೂ ಮುನ್ನ ಕೆಲ ಧಾರ್ಮಿಕ ವಿಧಿಗಳ ಪ್ರಕಾರ ಪೂಜೆ ಸಲ್ಲಿಸಿ, ಗೌರವವನ್ನ ಅರ್ಪಿಸಲಾಗಿದೆ.

ಈ ಹಿಂದೆ ಇದೇ ಆಸ್ಪತ್ರೆಗೆ ಡಾ.ಮಹಾಂತೇಶ ರಾಮಣ್ಣನವರ ತಂದೆ ಸಹ ದೇಹದಾನ ಮಾಡಿದ್ದರು. ತಂದೆ ದೇಹವನ್ನು ಸಹ ಪುತ್ರ ಮಹಾಂತೇಶ ರಾಮಣ್ಣನವರ ಛೇದಿಸಿದ್ದರು. ಈಗ ತಾಯಿ ಇಚ್ಛೆಯಂತೆ ಅವರ ದೇಹವನ್ನ ಮಗ ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಇಷ್ಟೇ ಅಲ್ಲದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೇಹಗಳ ಕೊರತೆ ಇರೋದನ್ನ ಮನಗೊಂಡು ಇಡೀ ಕುಟುಂಬ ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಮಾಡುತ್ತಲೇ ಬಂದಿದ್ದಾರೆ. ಇದರ ಪರಿಣಾಮವಾಗಿ ಕಂಕಣವಾಡಿ ಆಸ್ಪತ್ರೆಗೆ ಒಂದು ಸಾವಿರ ಜನರು ದೇಹವನ್ನ ದಾನ ಮಾಡಿಸಿದ್ದಾರೆ. ಅಲ್ಲದೇ ಇನ್ನೂ 5 ಸಾವಿರ ಜನರು ದೇಹದಾನ ಮಾಡಿಸುವ ವಾಗ್ದಾನ ಮಾಡಿದ್ದಾರೆ.

ಇದನ್ನೂ ಓದಿ: ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿಗೆ ಬಲಿ ಆಯ್ತು ಜೀವ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ರಾಮಣ್ಣನವರ ಕುಟುಂಬವು ಸಮಾಜಕ್ಕೆ ಆಯುರ್ವೇದಿಕ ವೈದ್ಯಕೀಯ ಚಿಕಿತ್ಸೆ ಜೊತೆಗೆ ದೇಹದಾನದಂತಹ ಸಮಾಜ ಮುಖಿ ಸೇವೆಯಲ್ಲಿ ತೊಡಗಿಸಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕೆಲಸಕ್ಕೆ ಸಾರ್ವಜನಿಕರು ಕೂಡ ಮುಂದಾಗಬೇಕು ಅಂತಾ ಕರೆ ಕೂಡ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ತಂದೆಯಂತೇ ತಾಯಿ ಕೂಡ ಪುತ್ರನ ಕೈಯಿಂದಲೇ ದೇಹ ಛೇದಿಸಲು ವಿಲ್ ಬರೆದು ಗಮನ ಸೆಳೆದಿದ್ದಾರೆ. ದಶಕಗಳ ಹಿಂದೇ ತಂದೆ ದೇಹ ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ಪುತ್ರ ಈಗ ತಾಯಿ ದೇಹ ಛೇದಿಸಲು ಮುಂದಾಗಿರುವುದು ವಿಶೇಷ. ಸದ್ಯ ಒಂದು ವೈದ್ಯಕೀಯ ಕುಟುಂಬವೇ ಈ ರೀತಿ ದೇಹ ದಾನದ ಮೂಲಕ ಜನರನ್ನ ಗಮನ ಸೆಳೆದು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದು ಇದಕ್ಕೆ ಸಾರ್ವಜನಿಕರು ಕೂಡ ಇದಕ್ಕೆ ಸಾಥ್ ಕೊಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗೆದ್ದವರಿಗಷ್ಟೆ ಅಲ್ಲ ಆಸ್ಕರ್ ನಾಮಿನಿಗಳಿಗೆ ಸಿಗಲಿದೆ 3 ಕೋಟಿ ಮೌಲ್ಯದ ಉಡುಗೊರೆಗಳು

ಪ್ರತಿ ವರ್ಷ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇವಲ ಕೆಲವೇ ಕೆಲವು ತಾರೆಗಳು ಮಾತ್ರ ಆಸ್ಕರ್ ಗೆಲ್ಲುತ್ತಾರೆ. ಅವರಿಗೆ ಚಿನ್ನ ಲೇಪಿದ ಮೂರ್ತಿಯ ಜೊತೆಗೆ ನಗದು ಬಹುಮಾನವೂ ಸಿಗುತ್ತದೆ. ಆದರೆ ನಾಮಿನೇಷನ್ ಪಡೆದವರಿಗೆ ಏನೂ ಇಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ನಾಮಿನೇಷನ್ ಹಂತದ ವರೆಗೆ ಬಂದವರಿಗೂ ಸಹ ದೊಡ್ಡ ಉಡುಗೊರೆಯನ್ನು ನೀಡಲಾಗುತ್ತಿದೆ. ಅದೂ ಈ ಉಡುಗೊರೆ ಬಾಸ್ಕೆಟ್​​ನ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳಿದೆ. ಈ ಉಡುಗೊರೆ ಬಾಸ್ಕೆಟ್​​ನಲ್ಲಿ ವಿದೇಶಿ ಪ್ರವಾಸದ ಟಿಕೆಟ್​​ ಜೊತೆಗೆ ಇನ್ನೂ ಏನೇನೋ ಇದೆ. ಇಲ್ಲಿದೆ ನೋಡಿ ಪೂರ್ಣ ಪಟ್ಟಿ…

ಅತ್ಯುತ್ತಮ ನಟ, ನಟಿ ಮತ್ತು ನಿರ್ದೇಶಕ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಟಾಪ್ 25 ಕಲಾವಿದರಿಗೆ ‘ಡಿಸ್ಟಿಂಕ್ಟಿವ್ ಅಸೆಟ್ಸ್’ (Distinctive Assets) ಎಂಬ ಮಾರ್ಕೆಟಿಂಗ್ ಕಂಪನಿಯು ಅತ್ಯಂತ ಐಷಾರಾಮಿ ಉಡುಗೊರೆಗಳನ್ನು ನೀಡುತ್ತದೆ. ಇದನ್ನು ‘ಎವರಿಒನ್ ವಿನ್ಸ್‘ ನಾಮಿನಿ ಗಿಫ್ಟ್ ಬ್ಯಾಗ್ ಎಂದು ಕರೆಯಲಾಗುತ್ತಿದೆ. 2026ರ ಈ ಗಿಫ್ಟ್ ಬ್ಯಾಗ್​​ನಲ್ಲಿ 350000 ಡಾಲರ್ (2.90 ಕೋಟಿಗೂ ಹೆಚ್ಚು) ಮೌಲ್ಯದ ಉಡುಗೊರೆಗಳನ್ನು ತುಂಬಿಸಲಾಗಿದೆ.

ಗಿಫ್ಟ್ ಬ್ಯಾಗ್​​ನಲ್ಲಿ ಫಿನ್‌ಲ್ಯಾಂಡ್‌ನ ಆರ್ಕ್ಟಿಕ್ ವಿಲ್ಲಾದಲ್ಲಿ ನಾರ್ದರ್ನ್ ಲೈಟ್ಸ್ ವೀಕ್ಷಿಸಲು ಉಚಿತ ವಾಸ್ತವ್ಯ. ಇಬಿಜಾ ದಲ್ಲಿ 16 ಅತಿಥಿಗಳಿಗಾಗಿ ಐಷಾರಾಮಿ ವಿಲ್ಲಾ ಪ್ರವಾಸ. ಕೋಸ್ಟರಿಕಾ ಮತ್ತು ಶ್ರೀಲಂಕಾದಲ್ಲಿ ಪ್ರೀಮಿಯಂ ರೆಸಾರ್ಟ್ ವಾಸ್ತವ್ಯದ ವೋಚರ್‌ಗಳನ್ನು ಈ ಗಿಫ್ಟ್ ಬ್ಯಾಗ್ ಒಳಗೊಂಡಿದೆ. ಜೊತೆಗೆ ಚಾಕಲೇಟ್​​ಗಳು, ಅತ್ಯುತ್ತಮ ದರ್ಜೆಯ ಸುಗಂಧ ದ್ರವ್ಯ, ಬ್ಯಾಗುಗಳು ಇನ್ನೂ ಹಲವು ವಸ್ತುಗಳಿವೆ. ವಿಶೇಷವೆಂದರೆ ಬೆವರ್ಲಿ ಹಿಲ್ಸ್‌ನ ಪ್ರಸಿದ್ಧ ವೈದ್ಯರಿಂದ ಹಲ್ಲುಗಳ ಸೌಂದರ್ಯವರ್ಧಕ ಚಿಕಿತ್ಸೆಯ ಕೂಪನ್​​ಗಳು, ಲೈಪೋಸಕ್ಷನ್ ಅಂತಹ ಹೈ-ಎಂಡ್ ಕಾಸ್ಮೆಟಿಕ್ ಸರ್ಜರಿ ಕೂಪನ್‌ಗಳು. ಪ್ರತಿಷ್ಠಿತ ಸ್ಪಾಗಳಲ್ಲಿ ಫೇಶಿಯಲ್ ಮತ್ತು ಚರ್ಮದ ಪುನಶ್ಚೇತನ ಚಿಕಿತ್ಸೆಗಳ ಕೂಪನ್​​ಗಳು ಇರಲಿವೆ.

ಇದನ್ನೂ ಓದಿ:ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್​​ನಿಂದ ವಿಶೇಷ ಗೌರವ

ಇದರ ಜೊತೆಗೆ ಸುಮಾರು 91 ಲಕ್ಷ ಮೌಲ್ಯದ ಮನೆಯ ಒಳಾಂಗಣ ವಿನ್ಯಾಸದ ಪ್ಯಾಕೇಜ್. ಅತ್ಯಾಧುನಿಕ ಕಿಚನ್ ಗ್ಯಾಜೆಟ್‌ಗಳು ಮತ್ತು ದುಬಾರಿ ಹೋಮ್ ಡೆಕೋರ್ ವಸ್ತುಗಳು. ಇವುಗಳ ಜೊತೆಗೆ ಗಾಂಜಾ ಮಿಶ್ರಿತ ಐಷಾರಾಮಿ ಉತ್ಪನ್ನಗಳು. ಕ್ಯಾವಿಯರ್ (ದುಬಾರಿ ಮೀನಿನ ಮೊಟ್ಟೆ)ಗಳು ಇವೆ. ವಿಶೇಷವೆಂದರೆ ಈ ಗಿಫ್ಟ್ ಬ್ಯಾಗಿನಲ್ಲಿ ವಿಚ್ಛೇದನ ವಕೀಲರಿಂದ ಉಚಿತವಾಗಿ ಸಿದ್ಧಪಡಿಸಿಕೊಡುವ ‘ಪ್ರೀನಪ್ಷಿಯಲ್ ಅಗ್ರಿಮೆಂಟ್’ (ಮದುವೆ ಮುನ್ನ ಮಾಡಿಕೊಳ್ಳುವ ಒಪ್ಪಂದ) ಪ್ಯಾಕೇಜ್ ಸಹ ಇದೆ.

ಮಾರ್ಚ್ 15 ರಂದು ಆಸ್ಕರ್​​ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ. ಸಮಾರಂಭವು ಲಾಸ್ ಏಂಜಲ್ಸ್​ನ ಡಾಲ್ಬಿ ಥಿಯೇಟರ್​​ನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀವನಾಂಶ ಕೇಳದೇ ವಿಚ್ಛೇದನ ಪಡೆದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಮುದ್ರೆ ಬಿದ್ದಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ (Divorce) ಮಂಜೂರು ಮಾಡಿದೆ. ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ರೀತಿಯ ಜೀವನಾಂಶ (Alimony) ಕೇಳಿಲ್ಲ.

ನ್ಯಾಯಾಲಯದಲ್ಲಿ ಹನ್ಸಿಕಾ ಪರವಾಗಿ ವಕೀಲ ಅದ್ನಾನ್ ಶೇಖ್ ವಾದ ಮಂಡಿಸಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಅವರ ಜೀವನಶೈಲಿ, ಆಲೋಚನೆಗಳು ಮತ್ತು ಸ್ವಭಾವಗಳಲ್ಲಿನ ವ್ಯತ್ಯಾಸಗಳು ಪದೇ ಪದೇ ಜಗಳಕ್ಕೆ ಕಾರಣವಾಗುತ್ತಿದ್ದವು. ಸಣ್ಣ ವಿಷಯಗಳೂ ದೊಡ್ಡ ವಿವಾದಗಳಾಗಿ ಮಾರ್ಪಡುತ್ತಿದ್ದವು ಎನ್ನಲಾಗಿದೆ.

ಇಬ್ಬರ ನಡುವಿನ ಮನಸ್ತಾಪವನ್ನು ಸರಿಪಡಿಸಲು ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಹಲವು ಬಾರಿ ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಅಂತಿಮವಾಗಿ, 2024ರ ಜುಲೈ 2ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಈಗ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಪರಸ್ಪರ ಯಾವುದೇ ಜೀವನಾಂಶ ನೀರೀಕ್ಷೆ ಮಾಡಿಲ್ಲ.

ಹನ್ಸಿಕಾ ಮತ್ತು ಸೊಹೈಲ್ 2022ರ ಡಿಸೆಂಬರ್ 4ರಂದು ಜೈಪುರದ ಅರಮನೆಯಲ್ಲಿ ಅತ್ಯಂತ ಅದ್ದೂರಿಯಾಗಿ ವಿವಾಹವಾಗಿದ್ದರು. ಇವರ ವಿವಾಹ ಪೂರ್ವ ಶಾಸ್ತ್ರಗಳಾದ ಮೆಹಂದಿ, ಸಂಗೀತ್ ಮತ್ತು ಹಳದಿ ಸಮಾರಂಭಗಳು ಸುದ್ದಿಯಾಗಿದ್ದವು. ಅಷ್ಟೇ ಅಲ್ಲದೆ, ಇವರ ಪ್ರೇಮ ಕಥೆ ಮತ್ತು ಮದುವೆಯ ಸಿದ್ಧತೆಗಳ ಬಗ್ಗೆ ‘ಹನ್ಸಿಕಾಸ್ ಲವ್ ಶಾದಿ ಡ್ರಾಮಾ’ ಎಂಬ ರಿಯಾಲಿಟಿ ಶೋನಲ್ಲಿ ಪ್ರಸಾರ ಮಾಡಲಾಗಿತ್ತು.

ಇದನ್ನೂ ಓದಿ: ‘ಬಿಂದಾಸ್​’ ನಟಿಯ ಬೀಚ್​ ಫೋಟೋಸ್​; ಕಡಲ ತೀರದಲ್ಲಿ ನಿಂತು ಪೋಸ್​ ನೀಡಿದ ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೊಟ್ವಾನಿ ಅವರಿಗೆ ಈಗ 34 ವರ್ಷ ವಯಸ್ಸು. ಬಾಲನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯ ಸಿನಿಮಾಗಳಲ್ಲಿ ನಾಯಕಿಯಾಗಿ ಅವರು ನಟಿಸಿದರು. ಹನ್ಸಿಕಾ ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ‘ಬಿಂದಾಸ್’. 2008ರಲ್ಲಿ ತೆರೆಕಂಡಿದ್ದ ಆ ಸಿನಿಮಾದಲ್ಲಿ ಹನ್ಸಿಕಾ ಅವರು ಪುನೀತ್ ರಾಜ್​ಕುಮಾರ್​ಗೆ ಜೋಡಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಬದುಕು ನಿತ್ಯ ನಿರಂತರ ಹೋರಾಟ; ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ

ತಾಯಿ (mother) ಅಂದ್ರೇನೆ ಹಾಗೆ, ತಮ್ಮ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು ಇಲ್ಲೊಬ್ಬಳು ತಾಯಿ ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಾ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ಈ ಆಟೋ ಚಾಲಕಿ ಹೆಸರು ಕೋಮಲ್ ಗಾಯಕ್ವಾಡ್ (Komal Gaikwad) . ಪತಿ ಬಿಟ್ಟು ಹೋದ ಬಳಿಕ ಈ ಮಹಿಳೆಗೆ ಮಗಳೇ ಪ್ರಪಂಚವಾಗಿದ್ದಾಳೆ. ಈ ತಾಯಿಯೊಬ್ಬಳ ಹೋರಾಟದ ಬದುಕಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಕಣ್ಣೀರು ಸುರಿಸಿದ್ದಾರೆ.

Officialhumanofbombay  ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿಈ ಆಟೋ ಚಾಲಕಿ ತನ್ನ ಬದುಕಿನ ಕಥೆಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ, ಮಕ್ಕಳು ಬೆಳಿಗ್ಗೆ 6.30ಕ್ಕೆ ಗಾಢ ನಿದ್ರೆಯಲ್ಲಿದ್ರೆ ತೇಜು ನನ್ನ ಜತೆಗೆ ಆಟೋ ಹತ್ತಿರ್ತಾಳೆ. ಇಡೀ ದಿನ ಆಟೋದಲ್ಲಿ ಕುಳಿತುಕೊಳ್ಳುತ್ತಾಳೆ. ತಿಂಡಿ, ಊಟ ನಿದ್ರೆ ಎಲ್ಲವೂ ಆಟೋದಲ್ಲೇ. ಪರ್ಭಾನಿಯಲ್ಲಿ ಜನಿಸಿದ ನಾನು ಆರ್ಥಿಕ ಸಮಸ್ಯೆ ಕಾರಣಕ್ಕೆ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲೇ ಉಳಿದೆ. ಮನೆಯವರ ಮಾತಿನಂತೆ ಮದುವೆಯಾದೆ. ಮದುವೆ ಆದ್ಮೇಲೆ 2018ರಲ್ಲಿ ಕಲ್ಯಾಣ್ ಗೆ ಬಂದೆ. 2022ರಲ್ಲಿ ನಮ್ಮ ಮಡಿಲಿಗೆ ಮಗಳು ಬಂದಳು. ನಮ್ಮ ಪುಟ್ಟ ಪ್ರಪಂಚಕ್ಕೆ ತೇಜು ಎಂದು ಕೋಮಲ್ ನಾಮಕರಣ ಮಾಡಿದೆವು. ಮಗಳಿಗೆ 18 ತಿಂಗಳಾಗ್ತಿದ್ದಂತೆ ಎಲ್ಲ ಬದಲಾಗಿ ಹೋಯ್ತು.

ವೈರಲ್‌ ವಿಡಿಯೋ ಇಲ್ಲಿದೆ

ಪರ್ಭಾನಿಯಲ್ಲಿ ಜನಿಸಿದ ನಾನು ಆರ್ಥಿಕ ಸಮಸ್ಯೆ ಕಾರಣಕ್ಕೆ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲೇ ಉಳಿದೆ. ಮನೆಯವರ ಮಾತಿನಂತೆ ಮದುವೆಯಾದೆ. ಮದುವೆ ಆದ್ಮೇಲೆ 2018ರಲ್ಲಿ ಕಲ್ಯಾಣ್‌ಗೆ ಬಂದೆ. 2022ರಲ್ಲಿ ನಮ್ಮ ಮಡಿಲಿಗೆ ಮಗು ಬಂದಿತು. ನಮ್ಮ ಪುಟ್ಟ ಪ್ರಪಂಚಕ್ಕೆ ತೇಜು ಎಂದು ಕೋಮಲ್ ನಾಮಕರಣ ಮಾಡಿದೆವು. ಮಗಳಿಗೆ 18 ತಿಂಗಳಾಗ್ತಿದ್ದಂತೆ ಎಲ್ಲ ಬದಲಾಗಿತ್ತು.

ಪರ್ಭಾನಿಗೆ ಹೋಗಿ ಬರ್ತೇನೆ ಎಂದಿದ್ದ ನನ್ನ ಪತಿ, ತಿಂಗಳಾದ್ರೂ ಮನೆಗೆ ಬರಲಿಲ್ಲ. ನೆಪ ಹೇಳಿಕೊಂಡು ಮನೆಗೆ ಬರೋದನ್ನೇ ಬಿಟ್ಟ. ಹೀಗಾಗಿ ಮಗಳ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ದುಡಿಯುವುದು ಅನಿವಾರ್ಯವಾಯ್ತು, ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲ್ಸಕ್ಕೆ ಸೇರಿಕೊಂಡೆ. ಮಗಳನ್ನು ಮನೆಯಲ್ಲೇ ಬಿಟ್ಟು ಬರಬೇಕಾಗಿತ್ತು. ಆಗ ಆಟೋ ಓಡಿಸುವ ನಿರ್ಧಾರ ಮಾಡಿಕೊಂಡೆ. ದಿನಕ್ಕೆ 400- 500 ರೂಪಾಯಿ ಸಂಪಾದನೆ ಮಾಡುತ್ತೇನೆ. ತಿಂಗಳ ಬಾಡಿಗೆ, ದಿನಸಿಗೆ ದುಡಿದ ಹಣವೆಲ್ಲವು ಖರ್ಚು ಆಗ್ತಿದೆ . ಮಗಳಿಗೆ ಸುಂದರ ಭವಿಷ್ಯ ಕಟ್ಟುವ ಭರವಸೆಯಲ್ಲಿ ದಿನನಿತ್ಯ ಹೋರಾಟ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಟೋ ಓಡಿಸುತ್ತಿದ್ದರೆ ಪುಟ್ಟ ಕಂದಮ್ಮ ಆಟೋದ ಸೀಟ್‌ನ ಪಕ್ಕ ಮಗಳಿಗಾಗಿ ಸೀಟ್‌ ಮಾಡಿಕೊಟ್ಟಿದ್ದಾಳೆ. ಪುಟ್ಟ ಹುಡುಗಿಯೂ ಆಟೋದಲ್ಲಿ ತನ್ನ ತಾಯಿ ಪಕ್ಕ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ಪುಟಾಣಿಗೆ ಅಮ್ಮ ಕೈ ತುತ್ತು, ಪ್ರೀತಿ ಎಲ್ಲವೂ ಈ ಆಟೋದಲ್ಲೇ ಸಿಗುವುದನ್ನು ನೋಡಬಹುದು.

ಇದನ್ನೂ ಓದಿ: ಹಾಲಿನ ಬಾಟಲಿ ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟ ಮಹಿಳೆ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗೆ ತುಂಬಾ ಶಕ್ತಿಯಿದೆ ಎಂದರೆ, ಮತ್ತೊಬ್ಬರು, ನಿಮ್ಮ ಬಗ್ಗೆ ಹೆಮ್ಮೆ ಇದೆ. ಅದ್ಭುತ ಮಹಿಳೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಪುಟಾಣಿ ತುಂಬಾನೇ ಧೈರ್ಯಶಾಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಬೆವರಿನ ವಾಸನೆಯನ್ನು ಹೋಗಲಾಡಿಸಿ, ದಿನವಿಡೀ ಫ್ರೆಶ್‌ ಆಗಿರಲು ಏನು ಮಾಡಬೇಕು?

ಬೇಸಿಗೆಯಲ್ಲಿ (summer) ನಿರ್ಜಲೀಕರಣ, ಶೆಖೆ, ಕಿರಿಕಿರಿ ಸಮಸ್ಯೆ ಒಂದುಕಡೆಯಾದ್ರೆ, ಇನ್ನೊಂದು ಕಡೆ ವಿಪರೀತ ಬೆವರಿನ ಸಮಸ್ಯೆ. ಹೌದು ಬೇಸಿಗೆಯಲ್ಲಿ ದೇಹ ವಿಪರೀತ ಬೆವರುವ ಕಾರಣ ಮೈ ತುರಿಕೆ, ಬೆವರು ಸಾಲೆಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಈ ಬೆವರಿನ ಕಾರಣದಿಂದ ದೇಹದಲ್ಲಿ ದುರ್ವಾಸನೆಯು ಸಹ ಕಾಣಿಸಿಕೊಳ್ಳುತ್ತದೆ. ಈ ಬೆವರಿನ ವಾಸನೆಯಿಂದಾಗಿ ಅನೇಕರು ಮುಜುಗರಕ್ಕೊಳಗಾಗುತ್ತಿರುತ್ತಾರೆ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಪರ್‌ಫ್ಯೂಮ್‌ ಹಾಕಿದ್ರೂ ಬೆವರಿನ ವಾಸನೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ವಾ? ಹಾಗಿದ್ರೆ ಈ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ಕಾಡುವ ಬೆವರಿನ ದುರ್ಗಂಧವನ್ನು ಹೋಗಲಾಡಿಸಿ, ದೇಹ ದಿನವಿಡೀ ಫ್ರೆಶ್‌ ಆಗಿರುವಂತೆ ನೋಡಿಕೊಳ್ಳಬಹುದು.

ಬೇಸಿಗೆಯಲ್ಲಿ ಬೆವರಿನ ವಾಸನೆಯನ್ನು ಹೋಗಲಾಡಿಸುವುದು ಹೇಗೆ?

  • ಬೇಸಿಗೆಯಲ್ಲಿ ಬೆವರುವುದು ಸಹಜ. ಆದರೆ ಈ ಬೆವರಿನ ವಾಸನೆ ಮಾತ್ರ ವಿಪರೀತ ಮುಜುಗರವನ್ನು ಉಂಟುಮಾಡುತ್ತದೆ. ಹೀಗಿರುವಾಗ ಬೇಸಿಗೆಯಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ತಿನ್ನುವ ಮೂಲಕ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಬಹುದು.  ಹೌದು ಮುಖ್ಯವಾಗಿ ಮೆಂತ್ಯ ಬೀಜಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಆ ನೀರನ್ನು ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ ಮತ್ತು ಬೆವರಿನ ವಾಸನೆಯನ್ನು ಸಹ ಇದು ನಿವಾರಿಸುತ್ತದೆ.
  • ಅದೇ ರೀತಿ, ನೀರಿನಂಶ ಹೆಚ್ಚಿರುವ ಕಲ್ಲಂಗಡಿ ಮತ್ತು ಸೌತೆಕಾಯಿ ತಿನ್ನುವುದರಿಂದ ಮೂತ್ರದಲ್ಲಿನ ಅನಗತ್ಯ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಬೆವರು ವಾಸನೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಸಿಟ್ರಿಕ್ ಆಮ್ಲದಲ್ಲಿ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಬೇಸಿಗೆಯಲ್ಲಿ ಬೆವರು ಕಡಿಮೆಯಾಗುತ್ತದೆ, ಬೆವರಿನ ವಾಸನೆಯೂ ನಿವಾರಣೆಯಾಗಿ ದೇಹವು ದಿನವಿಡೀ ಫ್ರೆಶ್‌ ಆಗಿರುತ್ತದೆ. ಇದಲ್ಲದೆ, ಕ್ಲೋರೊಫಿಲ್ ಭರಿತ ಹಸಿರು ತರಕಾರಿಗಳು, ತರಕಾರಿಗಳನ್ನು ತಿನ್ನುವ ಮೂಲಕ ಬೆವರಿನ ವಾಸನೆಯನ್ನು ಹೋಗಲಾಡಿಸಬಹುದು.
  • ಬೇಸಿಗೆಯಲ್ಲಿ ಸಾಧ್ಯವಾದಷ್ಟು ಕೆಂಪು ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಬೇಕು. ಏಕೆಂದರೆ ಈ ಆಹಾರಗಳಲ್ಲಿನ ಸಲ್ಫರ್ ಅಂಶವು ಬೆವರು ವಾಸನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಧೂಮಪಾನವು ಸಹ ದೇಹದ ವಾಸನೆಗೆ ಹಾನಿಕಾರಕವಾಗಿದೆ.
  • ಬೇಸಿಗೆಯಲ್ಲಿ ಬಿಗಿಯಾದ, ಸಿಂಥೆಟಿಕ್ ಬಟ್ಟೆಗಳನ್ನು ಧರಿಸುವುದರಿಂದ ಬೆವರು ಹೆಚ್ಚಾಗುತ್ತದೆ ಮತ್ತು ವಾಸನೆ ಹೆಚ್ಚಾಗುತ್ತದೆ. ಆದ್ದರಿಂದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ, ಏಕೆಂದರೆ ಅವು ಬೆವರನ್ನು ಸುಲಭವಾಗಿ ಹೀರಿಕೊಳ್ಳುತ್ತವೆ ಮತ್ತು ದೇಹವು ಉಸಿರಾಡಲು ಅನುವು ಮಾಡಿಕೊಡುತ್ತದೆ.
  • ದೇಹದ ಕೆಲವು ಭಾಗಗಳು, ಉದಾಹರಣೆಗೆ ಕಂಕುಳ, ಪಾದಗಳು ಮತ್ತು ಕುತ್ತಿಗೆಯ ಭಾಗದಲ್ಲಿ ಹೆಚ್ಚು ಬೆವರುವುತ್ತದೆ. ಈ ಪ್ರದೇಶಗಳನ್ನು ಸ್ವಚ್ಛಗೊಳಿಸಲು ವಿಶೇಷ ಗಮನ ಕೊಡುವುದು ಮುಖ್ಯ. ಈ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಸೋಂಪು ನೀರು ಕುಡಿಯುವುದರಿಂದ ದೇಹ ತಂಪಾಗಿರುವುದು ಮಾತ್ರವಲ್ಲ ಪ್ರಯೋಜನಗಳೂ ಲಭಿಸುತ್ತದೆ‌

ವಿಷಯಗಳನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳಿ:

  • ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ.
  • ಗಾಳಿಯ ಹರಿವನ್ನು ಕಾಪಾಡಿಕೊಳ್ಳಲು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ.
  • ದೇಹವು ಒಳಗಿನಿಂದ ನಿರ್ವಿಷೀಕರಣಗೊಳ್ಳುವಂತೆ ಮಾಡಲು ಸಾಕಷ್ಟು ನೀರು ಕುಡಿಯಿರಿ.
  • ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳ ಸೇವನೆಯನ್ನು ತಪ್ಪಿಸಿ ಏಕೆಂದರೆ ಇವು ಬೆವರಿನ ವಾಸನೆಯನ್ನು ಹೆಚ್ಚಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಎದುರಾಯ್ತು ಗ್ಯಾಸ್ ಸಮಸ್ಯೆ

ಬೆಂಗಳೂರು, (ಮಾರ್ಚ್ 11): ಅಮೆರಿಕ –ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದ್ದರಿಂದ, ಭಾರತದಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಗಣನೀಯವಾಗಿ ಇಳಿಕೆ ಕಂಡಿದೆ. ದೇಶದ ಹಲವು ನಗರಗಳಲ್ಲಿ ಎಲ್‍ಪಿಜಿ ಸಿಲಿಂಡರ್‌ಗಳ (LPG cylinders) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಬೇಡಿಕೆ ಹೆಚ್ಚುತ್ತಿರುವುದರ ಜತೆಗೆ ವಿತರಣೆಯಲ್ಲಿ ತಾತ್ಕಾಲಿಕ ಅಡಚಣೆ ಎದುರಾಗುತ್ತಿದೆ. ಕೇವಲ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲ ಕರ್ನಾಟಕದ ಮುಜುರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಸಹ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದೆ.

ಈ ಬಗ್ಗೆ ಖುದ್ದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನಸೌಧದಲ್ಲಿ ಇಂದು (ಮಾರ್ಚ್ 11) ಮಾತನಾಡಿದ್ದು, ರಾಜ್ಯದ 15 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಸದನದಲ್ಲಿ ಚರ್ಚೆ ಆಯ್ತು. ಪ್ರಸಾದ ವಿನಿಯೋಗಕ್ಕೆ ಉಂಟಾಗುತ್ತಿರುವ ಸಮಸ್ಯೆ ಚರ್ಚೆ ಮಾಡಿದ್ವಿ. ತೊಂದರೆ ಆಗದಂತೆ ನೋಡಿಕೊಳ್ಳಲು ಆಡಳಿತ ಮಂಡಳಿಗೆ ತಿಳಿಸಿದ್ದೇವೆ. ದೇಗುಲಕ್ಕೆ ಬಂದು ಪ್ರಸಾದ ಸ್ವೀಕರಿಸಿದರೆ ಮಾತ್ರ ಭಕ್ತರಿಗೆ ಸಮಾಧಾನ. ಹೀಗಾಗಿ ಕಡಿಮೆ ಇಂಧನ ಬಳಸಿ ಪ್ರಸಾದ ತಯಾರಿಕೆ ಬಗ್ಗೆ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿ ಮುಂದೆ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Source link

ಹರೀಶ್ ರಾಣಾ ದಯಾಮರಣದ ತೀರ್ಪಿಗೆ ಅಡಿಪಾಯ ಹಾಕಿತ್ತು ಅರುಣಾ ಶಾನಭಾಗ್ ಕೇಸ್; ಏನಿದು ಪ್ರಕರಣ?

ನವದೆಹಲಿ, ಮಾರ್ಚ್ 11: ಆತ ಉತ್ತರ ಪ್ರದೇಶದ ಸ್ಪುರದ್ರೂಪಿ ಯುವಕ. ಹೆಸರು ಹರೀಶ್ ರಾಣಾ. ಎಂಜಿನಿಯರಿಂಗ್ ಓದುತ್ತಿದ್ದ ಅವರು 2003ರಲ್ಲಿ 4ನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಗಾಯವಾಗಿ ಕೋಮಾದಲ್ಲಿದ್ದರು. 13 ವರ್ಷಗಳಿಂದ ಕೋಮಾದಲ್ಲಿದ್ದ ಅವರು ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇರಲಿಲ್ಲ. ಹೀಗಾಗಿ, ಅವರ ತಂದೆ-ತಾಯಿ ತಮ್ಮ ಮಗನಿಗೆ ದಯಾಮರಣ ನೀಡಬೇಕೆಂದು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ದಯಾಮರಣವೆಂದರೆ ಆ ವ್ಯಕ್ತಿಯ ಜೀವ ಉಳಿಸಲು ನೀಡಲಾಗುತ್ತಿರುವ ಎಲ್ಲ ಚಿಕಿತ್ಸೆ, ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದುಹಾಕುವುದು. ಕೊನೆಗೂ ಹರೀಶ್ ರಾಣಾ ಅವರ ಪೋಷಕರ ಮನವಿಗೆ ಅಸ್ತು ಎಂದ ಕೋರ್ಟ್ ಹರೀಶ್ ರಾಣಾ ದಯಾಮರಣಕ್ಕೆ ಒಪ್ಪಿಗೆ ನೀಡಿದೆ. ಭಾರತದ ದಯಾಮರಣ ಕಾನೂನಿನಲ್ಲಿ ಹಲವು ಬದಲಾವಣೆಗಳನ್ನು ತಂದ ಕೆಲವು ಪ್ರಕರಣಗಳಲ್ಲಿ ಮುಖ್ಯವಾದುದು ಅರುಣಾ ಶಾನಭಾಗ್ ((Aruna Shanbaug) ಕೇಸ್. ಇದು ಭಾರತದ ದಯಾಮರಣದ ಮೊದಲ ಪ್ರಕರಣ.

ಇದೀಗ ಹರೀಶ್ ರಾಣಾ ಅವರ ಪ್ರಕರಣವು ಮತ್ತೊಮ್ಮೆ “ಘನತೆಯಿಂದ ಸಾಯುವ ಹಕ್ಕು” ಎಂದೂ ಕರೆಯಲ್ಪಡುವ ದಯಾಮರಣ ಕುರಿತು ಭಾರತದ ಕಾನೂನು ಚರ್ಚೆಗೆ ಕಾರಣವಾಗಿದೆ. ಅವರ ಪ್ರಕರಣದ ಅಂತಿಮ ನಿರ್ಧಾರವು ಹಿಂದಿನ ಎರಡು ಪ್ರಮುಖ ಕಾನೂನು ಬೆಳವಣಿಗೆಗಳಾದ ಅರುಣಾ ಶಾನ್‌ಭಾಗ್ ಪ್ರಕರಣ ಮತ್ತು ಕಾಮನ್ ಕಾಸ್ ತೀರ್ಪಿನಿಂದ ಪ್ರಭಾವಿತವಾಗಿದೆ.

ಇದನ್ನೂ ಓದಿ: 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ಸುಪ್ರೀಂ ಕೋರ್ಟ್ ಎರಡು ಮಹತ್ವದ ತೀರ್ಪುಗಳ ಮೂಲಕ ದಯಾಮರಣಕ್ಕೆ ಅನುಮತಿ ನೀಡಿದೆ. ಮೊದಲನೆಯದು 2011ರ ಅರುಣಾ ಶಾನ್‌ಭಾಗ್ ಪ್ರಕರಣ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರೂಪದ ಸಂದರ್ಭಗಳಲ್ಲಿ ದಯಾಮರಣವನ್ನು ಕಾನೂನುಬದ್ಧವೆಂದು ಗುರುತಿಸಿತು. ಇನ್ನೊಂದು 2018ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ.

ಅರುಣಾ ಶಾನಭಾಗ್ ಯಾರು?:

ಅರುಣಾ ಶಾನ್‌ಭಾಗ್ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ನವೆಂಬರ್ 27, 1973ರಂದು ಆಸ್ಪತ್ರೆಯ ಸೆಕ್ಯುರಿಟಿಗಳಿಂದ ಅತ್ಯಾಚಾರಕ್ಕೊಳಗಾದ ಅವರ ಕುತ್ತಿಗೆಯನ್ನು ಸರಪಳಿಯಿಂದ ಬಿಗಿಯಲಾಗಿತ್ತು. ಇದಾದ ನಂತರ ಅವರು 37 ವರ್ಷಗಳ ಕಾಲ ನಿರಂತರ ಕೋಮಾದಲ್ಲಿಯೇ ಇದ್ದರು. ಸೆಕ್ಯುರಿಟಿ ಅರುಣಾ ಶಾನ್‌ಬಾಗ್ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ನಾಯಿ ಸರಪಳಿಯಿಂದ ಅವರ ಕತ್ತು ಹಿಸುಕಿದ್ದ. ಅವರ ಕತ್ತು ಹಿಸುಕಿದಾಗ, ಅದು ಅವರ ಮೆದುಳಿಗೆ ಆಮ್ಲಜನಕವನ್ನು ಕಡಿತಗೊಳಿಸಿತು. ಈ ದಾಳಿಯು ಅವರ ಮೆದುಳಿಗೆ ಹಾನಿಯನ್ನುಂಟುಮಾಡಿತು. ಇದರಿಂದ ಅವರು ಪಾರ್ಶ್ವವಾಯುವಿಗೆ ಒಳಗಾದರು. ಕಣ್ಣು ಕಾಣದಂತಾಯಿತು, ಕಿವಿ ಕೇಳದಂತಾಯಿತು.

 

ಕೆಇಎಂ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಅವರನ್ನು ನೋಡಿಕೊಂಡರು. ಟ್ಯೂಬ್ ಮೂಲಕ ಅವರಿಗೆ ಆಹಾರವನ್ನು ನೀಡುತ್ತಿದ್ದರು. ಅರುಣಾ ಶಾನಭಾಗ್ ಆ ಆಸ್ಪತ್ರೆಯ ಮಗಳಂತಾಗಿದ್ದರು. ಅರುಣಾ ಅವರನ್ನು ಮದುವೆಯಾಗಬೇಕಿದ್ದ ಯುವಕ ಅವರಿಗೆ ದಯಾಮರಣ ನೀಡಬೇಕೆಂದು ಮನವಿ ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿ ಅರುಣಾ ಶಾನ್‌ಬಾಗ್‌ಗೆ ಆಹಾರ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನಗಳನ್ನು ನೀಡಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಆದರೆ, ಆಕೆಯ ಜೀವವನ್ನು ಕೊನೆಗೊಳಿಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಇದನ್ನೂ ಓದಿ: ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು: ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಅರುಣಾ ಶಾನ್‌ಭಾಗ್ ಪ್ರಕರಣದಲ್ಲಿ ಹಲವು ದಶಕಗಳಿಂದ ಅವರನ್ನು ನೋಡಿಕೊಂಡ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಯನ್ನು ನಿಲ್ಲಿಸುವುದನ್ನು ಬೆಂಬಲಿಸಲಿಲ್ಲ. ಈ ಕಾರಣದಿಂದಾಗಿ, ನ್ಯಾಯಾಲಯವು ಅವರಿಗೆ ದಯಾಮರಣವನ್ನು ಅನುಮತಿಸದಿರಲು ನಿರ್ಧರಿಸಿತು. ಆದರೂ, ಈ ತೀರ್ಪು ಐತಿಹಾಸಿಕವಾಗಿತ್ತು. ಏಕೆಂದರೆ ಇದು ಭಾರತದಲ್ಲಿ ಮೊದಲ ಬಾರಿಗೆ ನಿಷ್ಕ್ರಿಯ ದಯಾಮರಣಕ್ಕೆ ಬಾಗಿಲು ತೆರೆಯಿತು. ಚೇತರಿಕೆ ಅಸಾಧ್ಯವಾದಾಗ ರೋಗಿಗಳು ಘನತೆಯಿಂದ ಸಾಯುವ ಹಕ್ಕನ್ನು ಹೊಂದಿರಬೇಕೇ ಎಂಬ ಬಗ್ಗೆ ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿತು. 2015ರಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಕೋಮಾ ಸ್ಥಿತಿಯಲ್ಲಿ ಕಳೆದ ನಂತರ ಅವರು ನಿಧನರಾದರು.

ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದರೂ ಈ ತೀರ್ಪು ಭಾರತ ದೇಶಕ್ಕೆ ಒಂದು ಐತಿಹಾಸಿಕ ಕ್ಷಣವಾಗಿ ಪರಿಣಮಿಸಿತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಕ್ರಿಯ ದಯಾಮರಣ (ಕಾನೂನುಬಾಹಿರ) ಮತ್ತು ನಿಷ್ಕ್ರಿಯ ದಯಾಮರಣದ ನಡುವೆ ಕಾನೂನು ವ್ಯತ್ಯಾಸವನ್ನು ಮಾಡಲಾಯಿತು.

2018ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನಿಷ್ಕ್ರಿಯ ದಯಾಮರಣವನ್ನು ಔಪಚಾರಿಕವಾಗಿ ಕಾನೂನುಬದ್ಧಗೊಳಿಸಿತು. ನ್ಯಾಯಾಲಯವು “ಘನತೆಯಿಂದ ಸಾಯುವ ಹಕ್ಕು” ಆರ್ಟಿಕಲ್ 21 (ಜೀವನದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿತು. ಈ ತೀರ್ಪು ಲಿವಿಂಗ್ ವಿಲ್‌ಗಳನ್ನು ಪರಿಚಯಿಸಿತು. ಇದು ವ್ಯಕ್ತಿಗಳು ತಮ್ಮ ಜೀವಿತಾವಧಿಯ ಅಂತ್ಯದ ಆಸೆಗಳನ್ನು ಮುಂಚಿತವಾಗಿ ದಾಖಲಿಸಲು ಅನುವು ಮಾಡಿಕೊಡುತ್ತದೆ.

2023ರಲ್ಲಿ ಸುಪ್ರೀಂ ಕೋರ್ಟ್ ಈ ಮಾರ್ಗಸೂಚಿಗಳನ್ನು ಸರಳಗೊಳಿಸಿತು. ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಮುಖ್ಯ ಅವಶ್ಯಕತೆಗಳು ಹೀಗಿವೆ.

– ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯಕೀಯ ಮಂಡಳಿ ಮತ್ತು ದ್ವಿತೀಯ ಮಂಡಳಿಯು ರೋಗಿಗೆ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಪ್ರಮಾಣೀಕರಿಸಬೇಕು.

– ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬದಲಿಗೆ, ಲಿವಿಂಗ್ ವಿಲ್ ಅನ್ನು ಈಗ ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬಹುದು.

– ರೋಗಿಯು ಒಪ್ಪಿಗೆ ನೀಡಲು ಸಾಧ್ಯವಾಗದಿದ್ದರೆ, ನಿಕಟ ಸಂಬಂಧಿ ಅಥವಾ ಕಾನೂನು ಪಾಲಕರಂತಹ ವ್ಯಕ್ತಿಗಳು ಓ ಪ್ರಕ್ರಿಯೆಯನ್ನು ತೆಗೆದುಕೊಳ್ಳಬಹುದು. ಆದರೆ, ಇದು ವೈದ್ಯಕೀಯ ಮತ್ತು ನ್ಯಾಯಾಂಗ ಅಧಿಸೂಚನೆಗೆ ಒಳಪಟ್ಟಿರಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ

ಯಾದಗಿರಿ, ಮಾರ್ಚ್​​ 11: ಜಿಲ್ಲೆಯ ಭೂಗರ್ಭದಲ್ಲಿ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯ ಆರಂಭವಾಗಿದೆ. ಚಿನ್ನ ಸೇರಿದಂತೆ ವಿವಿಧ ಖನಿಜ ನಿಕ್ಷೇಪಗಳ ಪತ್ತೆಗಾಗಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಇಂದಿನಿಂದ ಜಿಲ್ಲೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಈ ಸಮೀಕ್ಷೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಹೆಲಿಕಾಪ್ಟರ್ ಮೂಲಕ ಆಕಾಶದಿಂದಲೇ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಮತ್ತು ಎಲ್ಹೇರಿ ಭಾಗಗಳಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಯುತ್ತಿದೆ. ಆಕಾಶದಲ್ಲಿ ನಿರಂತರವಾಗಿ ಹೆಲಿಕಾಪ್ಟರ್ ಹಾರುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಈ ಸಮೀಕ್ಷಾ ಕಾರ್ಯವನ್ನು ನಡೆಸಲು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿದ್ದು, ಮಾರ್ಚ್ 31ರವರೆಗೆ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸಮಾಧಾನ ಸ್ಫೋಟ: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ರಾಜೀನಾಮೆ

ಹುಬ್ಬಳ್ಳಿ (ಮಾರ್ಚ್ 11): ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ್ (Lingaraj Patil) ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಲಿಂಗರಾಜ ಪಾಟೀಲ್​, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ (Karnataka BJP disciplinary committee chairman ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಎಸ್.ವಿ. ಸಂಕನೂರ ಅವರಿಗೆ ನೀಡಲಾಗಿದೆ, ಇದರಿಂದ ಅಸಮಾಧಾನಗೊಂಡಿರುವ ಲಿಂಗರಾಜ ಪಾಟೀಲ್ , ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದು,  ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಕಡೆಗಣಿಸಿ ಎಸ್.ವಿ.ಸಂಕನೂರು ಅವರಿಗೆ ಟಿಕೆಟ್ ನೀಡಿದ್ದರಿಂದ ನೋವಾಗಿದೆ. ಹೀಗಾಗಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎಂದು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಇದನ್ನೂ ಒದಿ: ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಜೆಡಿಎಸ್​​ಗೆ 1 ಸೀಟು!

ಬಿಜೆಪಿಯಲ್ಲಿ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆಯಿಲ್ಲ ಎನ್ನುವುದು ದೃಢವಾಗಿದೆ. ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಈ ಮೂಲಕ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ. 37 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇನೆ. ಇದನ್ನು ಗುರುತಿಸದೇ ಪಕ್ಷ ಹೊರಗಿನಿಂದ ಬಂದವರಿಗೆ ಮಣೆ ಹಾಕಿ ಟಿಕೆಟ್ ನೀಡಿದ್ದು, ಸಾಕಷ್ಟು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಲೂ ಕಾಲ ಮಿಂಚಿಲ್ಲ. ನನಗೆ ಟಿಕೆಟ್ ಸಿಗುವ ಭರವಸೆ ಇದ್ದು, ಎಂಟು ದಿನಗಳವರೆಗೆ ಕಾದು ನೋಡುತ್ತೇನೆ. ಅವಕಾಶ ಸಿಗದಿದ್ದರೆ ಬೇರೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು. ಈ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೆಕೆಯೆಂದು ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು: ಸಾವಲ್ಲೂ ಒಂದಾದ ಆಪ್ತ ಸ್ನೇಹಿತರು

ಹುಬ್ಬಳ್ಳಿ, ಮಾರ್ಚ್​ 11: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ರಣಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ. ಎಲ್ಲಿಯಾದ್ರು ನೀರು ಕಂಡ್ರೆ ಸಾಕು ಅಲ್ಲಿ ಸ್ವಲ್ಪ ಹೊತ್ತು ಆಟವಾಡಿ, ರಿಲ್ಯಾಕ್ಸ್ ಆಕಬೇಕು ಎಂದು ಬಯಸುತ್ತಿದ್ದಾರೆ. ಆದ್ರೆ ನಿಮ್ಮ ಮಕ್ಕಳು ಈ ರೀತಿಯಾಗಿ ಹೋಗ್ತಿದ್ದರೆ ಅವರ ಬಗ್ಗೆ ಸ್ವಲ್ಪ ಎಚ್ಚರವಹಿಸೋದು ಉತ್ತಮ. ಯಾಕಂದ್ರೆ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಬೈರಿದೇವರಕೊಪ್ಪದಲ್ಲಿರುವ ರೇಣುಕಾ ನಗರದ ಸಮರ್ಥ್ ಮತ್ತು ಹರೀಶ್ ಎಂಬ ಹದಿನೇಳು ವರ್ಷದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು,ಇವರು ಅಕ್ಕ-ಪಕ್ಕದ ಮನೆಯ ನಿವಾಸಿಗಳು. ಗೋಪನಕೊಪ್ಪ ಬಳಿಯಿರೋ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದ ಇವರು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು. ಹುಬ್ಬಳ್ಳಿಯಲ್ಲಿ ಬಿಸಿಲು ಹೆಚ್ಚಾಗಿರೋದರಿಂದ ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ಹೋಗಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಬಂದಿರಲಿಲ್ಲ. ಈ ನಡುವೆ ಇವರು ಹೊಂಡದಲ್ಲಿ ಮುಳುಗಿರೋದನ್ನು ಗಮನಿಸಿರುವ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಿಟ್​​ ಆ್ಯಂಡ್​​ ರನ್​​ ಕೇಸ್​​ಗೆ ಟ್ವಿಸ್ಟ್​; KSRTC ಬಸ್​​ ಡ್ಯಾಶ್​​ ಕ್ಯಾಮರಾದಿಂದ ರಿವೀಲ್​​ ಆಯ್ತು ಸ್ಫೋಟಕ ಸತ್ಯ

ಇನ್ನು ಈ ಇಬ್ಬರಿಗೂ ಸರಿಯಾಗಿ ಈಜಲು ಬರುತ್ತಿರಲಿಲ್ಲವಂತೆ. ಹೀಗಿದ್ದರೂ ಹುಚ್ಚು ಸಾಹಸ ಮಾಡಿ ಈಜಲು ಹೋದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಮನೆಗೆ ಆಧಾರವಾಗಿದ್ದ ಏಕೈಕ ಗಂಡು ಮಕ್ಕಳ ಅಕಾಲಿಕ ನಿಧನ ಹೆತ್ತವರನ್ನು ಆಘಾತಕ್ಕೆ ದೂಡಿದೆ. ಶವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಸಂಬಂಧಿಕರ ಆಕ್ರಂದನ ಕಲ್ಲು ಹೃದಯವನ್ನೂ ಕರಗಿಸುವಂತೆ ಕಂಡುಬಂದಿದ್ದು, ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಸಿಲು ಎಂದು ಸಿಕ್ಕ ಸಿಕ್ಕಲ್ಲಿ ಈಜಲು ಹೋದ್ರೆ ಸಂಕಷ್ಟ ಎದುರಾಗೋ ಸಾಧ್ಯತೆಯಿದ್ದು, ಮಕ್ಕಳು ಮತ್ತು ಯುವಕರು ಈ ಬಗ್ಗೆ ಜಾಗೃತರಾಗಿರಬೇಕು. ಜೊತೆಗೆ ಹೆತ್ತವರು ಕೂಡಾ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳನ್ನು ಕಳೆದುಕೊಂಡ ಮೇಲೆ ಕಣ್ಣೀರು ಹಾಕಿದರೆ ಯಾವುದೇ ಪ್ರಯೋಜನವಾಗಲಾರದು ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version