ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ವಿಶಾಖಪಟ್ಟಣಂ, ಡಿಸೆಂಬರ್ 18: ವಿಶಾಖಪಟ್ಟಣಂ ಜಿಲ್ಲೆಯ ಯಾರಡಾ ಬೀಚ್‌ನಲ್ಲಿ ಮೀನುಗಾರರಿಗೆ ದೊಡ್ಡ ಶಾಕ್ ಕಾದಿತ್ತು. ಇಲ್ಲಿ ಬೃಹತ್ ತಿಮಿಂಗಿಲವೊಂದು ತೀರಕ್ಕೆ ಬಂದು ಸಾವನ್ನಪ್ಪಿದೆ. ಸುಮಾರು 15 ಅಡಿ ಉದ್ದದ ತಿಮಿಂಗಿಲವು ಉಸಿರುಗಟ್ಟಿಸುತ್ತಿರುವುದನ್ನು ಕಂಡು ಮೀನುಗಾರರು ಅದನ್ನು ಸಮುದ್ರಕ್ಕೆ ಬಿಡಲು ಪ್ರಯತ್ನಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ ತಿಮಿಂಗಿಲವು ದಡದಲ್ಲಿಯೇ ಸತ್ತುಹೋಯಿತು. ಅದು ಗಾಯಗೊಂಡಿರಬಹುದು ಅಥವಾ ಬಲೆಯಲ್ಲಿ ಸಿಲುಕಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಗುದ್ದಿದ ರಭಸಕ್ಕೆ ಕಾರು ಪಲ್ಟಿ – Kannada News | Belagavi: DK Shivakumar PS car involved in accident; biker dies, car overturns on impact

ಬೆಳಗಾವಿ, ಡಿಸೆಂಬರ್ 18: ಡಿಸಿಎಂ ಡಿಕೆ ಶಿವಕುಮಾರ್​ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕಾರು ಡಿಕ್ಕಿಯಾಗಿ ಬೈಕ್​ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಹೊರವಲಯದಲ್ಲಿ ನಡೆದಿದೆ. ಮಂಜುನಾಥ್ ಬೈರ್ನಟ್ಟಿ(30) ಸಾವನ್ನಪ್ಪಿರುವ ಬೈಕ್​ ಸವಾರ. ಮೃತ ಮಂಜುನಾಥ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟ್ಟಿದ್ದರು. ಅತ್ತ ರಾಜೇಂದ್ರ ಪ್ರಸಾದ್ ಕಾರು ಯಲ್ಲಮ್ಮನ ದರ್ಶನ ಪಡೆದು ವಾಪಸಾಗುವಾಗ ಅಪಘಾತ ಸಂಭವಿಸಿದೆ. ಕಾರು ಗುದ್ದಿದ ರಭಸಕ್ಕೆ ಮಂಜುನಾಥ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ರಾಜೇಂದ್ರ ಪ್ರಸಾದ್ ಹಾಗೂ ಕಾರು ಚಾಲಕನಿಗೂ ಗಾಯಗಳಾಗಿದ್ದು, ಧಾರವಾಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.​ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕರಾವಳಿಗರು ಬೆಂಕಿ ಹಚ್ಚೋರು ಎಂದ ಸಚಿವ ಭೈರತಿ ಸುರೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ – Kannada News | Karavali MLAs Angry On Minister Byrathi Suresh for controversy statement On coastal during hate speech bill

ಬೆಳಗಾವಿ (ಡಿಸೆಂಬರ್ .18): ಕರಾವಳಿ ಭಾಗದ ಬಿಜೆಪಿ ಶಾಸಕರ ವಿರುದ್ಧ ‘ಬೆಂಕಿ ಹಚ್ಚುವವರು’ ಎಂದು ಸಚಿವ ಬೈರತಿ ಸುರೇಶ್ (Byarathi Suresh) ಅವರು ಹೇಳಿರುವುದು ಸದನದಲ್ಲಿ ಕಿಚ್ಚನ್ನು ಹೊತ್ತಿಸಿದೆ. ಸುವರ್ಣಸೌಧದ ವಿಧಾನಸಭೆಯಲ್ಲಿಂದು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕಕ್ಕೆ (Hate Speech Bill) ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಹೀಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜೋರಾಗಿ ಮಾತಿನ ಸಮರ ನಡೆಯುತ್ತಿರುವಾಗಲೇ ಸಚಿವ ಭೈರತಿ ಸುರೇಶ್ ಅವರು ಎದ್ದು ನಿಂತು ನೀವು ಕರಾವಳಿಯವರು ಬೆಂಕಿ ಹಚ್ಚುವವರು ಎಂದು ಹೇಳಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದರು.

ಸಚಿವ ಸುರೇಶ್ ಕ್ಷಮೆಗೆ ಬಿಗಿಪಟ್ಟು

ಸದನದಲ್ಲಿ ಚರ್ಚೆಯ ವೇಳೆ ಸಚಿವ ಭೈರತಿ ಸುರೇಶ್ ಅವರು ಬಿಜೆಪಿ ಶಾಸಕರನ್ನು ಉದ್ದೇಶಿಸಿ, ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂದು ನೀಡಿದ ಹೇಳಿಕೆ ನೀಡಿದ್ದೇ ತಡ ಸದನದಲ್ಲಿ ಕಿಚ್ಚು ಹಚ್ಚಿತು. ಸಚಿವರ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಚನ್ನಬಸಪ್ಪ ಅವರು ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕರಾವಳಿ ಸಂಸ್ಕೃತಿಗೆ ನೀವು ಅಪಮಾನ ಮಾಡಿದ್ದೀರಿ, ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: BPL ಕಾರ್ಡ್​​ದಾರರಿಗೆ ಶೀಘ್ರವೇ ಗುಡ್​​ನ್ಯೂಸ್​?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ

ಸ್ಪೀಕರ್ ಖಾದರ್ ವಿರುದ್ಧ ಆಕ್ರೋಶ

ಈ ಸಂದರ್ಭದಲ್ಲಿ ಕಾರಾವಳಿ ಭಾಗದ ಶಾಸಕರೂ ಆಗಿರುವ ಸ್ಫೀಕರ್ ಯುಟಿ ಖಾದರ್ ಸೈಲೆಂಟ್ ಆಗಿರುವುದಕ್ಕೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನೇ ಪ್ರಶ್ನಿಸಿ, ‘ನೀವೂ ಕರಾವಳಿಯವರಲ್ಲವೇ? ಸಚಿವರು ಇಡೀ ಕರಾವಳಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಲ್ಲಾ? ಪೀಠದಿಂದ ಹೊರಗೆ ಬನ್ನಿ’ ಎಂದರು. ಆಗ ಸ್ಪೀಕರ್ ಯುಟಿ ಖಾದರ್ ಅವರು ವಿವಾದಾತ್ಮಕ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿದರೂ ಬಿಜೆಪಿ ಶಾಸಕರು ಸಮಾಧಾನಗೊಳ್ಳದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಗದ್ದಲದ ನಡುವೆ ಬಿಲ್ ಪಾಸ್

ಬಿಜೆಪಿ ಶಾಸಕರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಸಭಾಧ್ಯಕ್ಷರು ‘ದ್ವೇಷ ಭಾಷಣ ತಡೆ ವಿಧೇಯಕ’ವನ್ನು  ಅಂಗೀಕರಿಸಿದರು. ಈ ಕ್ರಮದಿಂದ ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲೇ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ‘ಇದು ದ್ವೇಷ ಭಾಷಣ ವಿರೋಧಿ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಬಿಲ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಸದ್ಯ ಕರಾವಳಿ ಭಾಗದ ಬಿಜೆಪಿ ಶಾಸಕರು ಆಕ್ರೋಶಗೊಂಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಚಿವ ಭೈರತಿ ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು – Kannada News | Yogaraj Bhat speech in Landlord Kannada movie song release event

ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ‘ಲ್ಯಾಂಡ್ ಲಾರ್ಡ್’ (Landlord) ಸಿನಿಮಾದ ‘ನಿಂಗವ್ವ ನಿಂಗವ್ವ..’ ಹಾಡು ರಿಲೀಸ್ ಆಗಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರೇಮ್, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ತರುಣ್ ಸುಧೀರ್, ಸೋನಲ್ ಮೊಂತೆರೋ ಭಾಗಿ ಆಗಿದ್ದರು. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಯೋಗರಾಜ್ ಭಟ್ (Yogaraj Bhat) ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಕಂಠದಲ್ಲಿ ಹಾಡು ಮೂಡಿಬಂದಿದೆ. ಸಾಂಗ್ ರಿಲೀಸ್ ವೇಳೆ ಯೋಗರಾಜ್ ಭಟ್ ಅವರು ನೇರವಾಗಿ ಮಾತನಾಡಿದರು. ‘ನಾನು ಪಕ್ಕಾ ಲೋಫರ್. ಆದ್ರೆ ವಿಜಿ ನನ್ನ ಅಪ್ಪ ಇದ್ದಂಗೆ’ ಎಂದು ಅವರು ಹೇಳಿದರು. ಅವರು ಯಾಕೆ ಈ ರೀತಿ ಮಾತನಾಡಿದರು ಎಂಬುದಕ್ಕೆ ಈ ವಿಡಿಯೋದಲ್ಲಿ ಉತ್ತರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಟಿ ಶಿಲ್ಪಾ ಶೆಟ್ಟಿ ಮುಂಬೈ ನಿವಾಸದ ಮೇಲೆ ಐಟಿ ದಾಳಿ: 60 ಕೋಟಿ ರೂ. ವಂಚನೆ ಕೇಸ್ – Kannada News | After Bastian pub now IT Raid on Shilpa Shetty Mumbai home in Rs 60 Cr fraud case

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಕುಟುಂಬದ ಮೇಲೆ ಹಲವಾರು ಕೇಸ್​​ಗಳು ಇವೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಈಗಾಗಲೇ ಅನೇಕ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಮುಂಬೈ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗುರುವಾರ (ಡಿಸೆಂಬರ್ 18) ಈ ಘಟನೆ ನಡೆದಿದೆ. ಅದಕ್ಕೂ ಒಂದು ದಿನ ಮುನ್ನ, ಅಂದರೆ ಡಿ.17ರಂದು ಬೆಂಗಳೂರಿನಲ್ಲಿ ಕೂಡ ಶಿಲ್ಪಾ ಶೆಟ್ಟಿ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಐಟಿ ಅಧಿಕಾರಿಗಳು ದಾಳಿ (IT Raid) ಮಾಡಿದ್ದರು.

ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಅವರು ‘ಬಾಸ್ಟಿಯನ್ ಗಾರ್ಡನ್ ಸಿಟಿ’ ಪಬ್ ಹೊಂದಿದ್ದಾರೆ. ಇದು ಬೆಂಗಳೂರಿನ ಅತಿ ದುಬಾರಿ ಪಬ್​​ಗಳಲ್ಲಿ ಒಂದಾಗಿದೆ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ಪಬ್ ಇದೆ. ಪಬ್ ಮಾತ್ರವಲ್ಲದೇ ಇನ್ನೂ ಹಲವು ಕಡೆಗಳಲ್ಲಿ ದಾಳಿ ಮಾಡಿ ಕೆಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿ ಅವರಿಗೆ ಸಂಕಷ್ಟ ಶುರುವಾಗಿದೆ.

ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಮೇಲೆ 60 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಅವರು ಈ ಆರೋಪ ಮಾಡಿದ್ದಾರೆ. ಸ್ಟಾರ್ ದಂಪತಿಯಿಂದ ತಮಗೆ ವಂಚನೆ ಆಗಿದೆ ಎಂದು ದೀಪಕ್ ಕೊಠಾರಿ ದೂರು ನೀಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಪಬ್ ಮೇಲೆ ದಾಳಿ:
ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ 5 ಕಾರಿನಲ್ಲಿ ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಸೆಂಟ್ ಮಾರ್ಕ್ಸ್ ರಸ್ತೆಯ ಬ್ಯಾಸ್ಟಿಯನ್ ಪಬ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ರೆಸ್ಟೋರೆಂಟ್ ಸಹಜವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟರು. ಆದರೆ ಆಡಳಿತ ವಿಭಾಗ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಐಟಿ ಅಧಿಕಾರಿಗಳು ಜಾಲಾಡಿದರು. ಇಷ್ಟು ವರ್ಷಗಳಿಂದ ಕಟ್ಟಿದ ತೆರಿಗೆ ಎಷ್ಟು ಎಂಬುದನ್ನು ಪರಿಶೀಲಿಸಲಾಯಿತು. ತೆರಿಗೆ ಇಲಾಖೆಗೆ ನೀಡಿರುವ ದಾಖಲಾತಿಗಳಿಗೂ ಕೌಂಟರ್​ನಲ್ಲಿ ಇದುವರೆಗೆ ಆಗಿರುವ ವ್ಯಾಪಾರಕ್ಕೂ ಹೋಲಿಕೆ ಮಾಡಲಾಗಿದೆ. ಹೂಡಿಕೆ, ಲಾಭ ಮತ್ತು ತೆರಿಗೆ ಈ ಮೂರು ವಿಚಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ವಿರುದ್ಧ ಬೆಂಗಳೂರು ಪೊಲೀಸರ ಎಫ್​​ಐಆರ್: ನಡೆದಿದ್ದೇನು?

ಶಿಲ್ಪಾ ಶೆಟ್ಟಿ ಅವರ ಪಬ್​ನಲ್ಲಿ ಕೆಲವು ದಿನಗಳ ಹಿಂದೆ ಉದ್ಯಮಿ ಸತ್ಯನಾಯ್ಡು ಮತ್ತು ಇತರರ ನಡುವೆ ಒಂದು ಗಲಾಟೆ ಆಗಿತ್ತು. ಆ ಬಳಿಕ ಪಬ್ ಅವಧಿ ಮೀರಿ, ಅಂದರೆ 1.30ರ ತನಕ ಒಪನ್ ಇತ್ತು. ಈ ಎರಡೂ ವಿಚಾರಕ್ಕೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಕಳೆದ 10 ದಿನಗಳ ಅಂತರದಲ್ಲಿ ಈ ಪಬ್ ಮೇಲೆ ಒಂದು ಕೇಸ್ ಹಾಗೂ ಐಟಿ ದಾಳಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಗುವನ್ನು ಕಸದ ಬುಟ್ಟಿಗೆ ಹಾಕಿ, ನಾನು ಹಾಲು ಕುಡಿಸೋದಿಲ್ಲ; ಒಂದೇಸಮನೆ ಹಠ ಹಿಡಿದ ಬಾಣಂತಿ – Kannada News | I Wont feed baby throw it to dustbin woman refuses to accept Newborn Baby in Hospital know why

ಗೋರಖ್​ಪುರ, ಡಿಸೆಂಬರ್ 18: ‘ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು’ ಎಂಬ ಗಾದೆ ಮಾತೊಂದಿದೆ. ತಾಯಿ ಎಂಥದ್ದೇ ಪರಿಸ್ಥಿತಿ ಬಂದರೂ ತಾನು ಹೆತ್ತ ಮಗುವನ್ನು ಬಿಟ್ಟುಕೊಡುವುದಿಲ್ಲ, ಅದಕ್ಕೆ ತೊಂದರೆಯಾದರೆ ಸಹಿಸುವುದೂ ಇಲ್ಲ. ಆದರೆ, ಗೋರಖ್‌ಪುರದ (Gorakhpur) ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ನಿರಾಕರಿಸಿದಳು. ಇದು ವೈದ್ಯರಿಗೆ ಆಘಾತ ಉಂಟುಮಾಡಿದೆ. ಆಕೆಯ ಮನೆಯವರು, ವೈದ್ಯರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಅದಕ್ಕೆ ಒಪ್ಪಲಿಲ್ಲ.

“ಈ ಮಗು ವಿಶ್ವಾಸದ್ರೋಹಿಯಾದ ನನ್ನ ಗಂಡನ ಮಗು. ಆ ಮಗುವನ್ನು ಬೇಕಿದ್ದರೆ ಕಸದ ಬುಟ್ಟಿಗೆ ಎಸೆಯಿರಿ, ಆದರೆ ನಾನು ಅವನಿಗೆ ಹಾಲುಣಿಸುವುದಿಲ್ಲ ಅಥವಾ ಬೆಳೆಸುವುದೂ ಇಲ್ಲ” ಎಂದು ಆಕೆ ಹೇಳಿದ್ದಾಳೆ.

“ಮಗುವನ್ನು ನೋಡಿಕೊಳ್ಳಬೇಕಾದ ನನ್ನ ಪತಿ ಬೇರೆ ಮಹಿಳೆಯೊಂದಿಗೆ ಓಡಿಹೋದ. ಹಾಗಾದರೆ ನಾನೊಬ್ಬಳೇ ಏಕೆ ಈ ಮಗುವನ್ನು ಬೆಳೆಸಬೇಕು?” ಎಂದು ಆಕೆ ಹತಾಶಳಾಗಿ ಪ್ರಶ್ನಿಸಿದ್ದಾಳೆ. ತನ್ನ ಪತಿ ತನ್ನ ಜೀವನವನ್ನು ಹಾಳು ಮಾಡಿದ್ದರಿಂದ ಆ ಮಗುವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಆ ಮಹಿಳೆ ಹೇಳಿದ್ದಾಳೆ. “ಆ ಮಗುವನ್ನು ನೀವು ಎಲ್ಲಿ ಬೇಕಾದರೂ ಬಿಡಿ ಅಥವಾ ಕಸಕ್ಕೆ ಬೇಕಾದರೂ ಎಸೆಯಿರಿ” ಎಂದು ಆಕೆ ಹಠ ಹಿಡಿದಿದ್ದಾಳೆ.

ಇದನ್ನೂ ಓದಿ: ಬುರ್ಖಾ ಧರಿಸದೆ ಹೊರಹೋಗಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೊಂದೆ; ಶಾಕಿಂಗ್ ವಿಷಯ ಬಿಚ್ಚಿಟ್ಟ ಪಾಪಿ

ಈ ಸುದ್ದಿ ಕೇಳಿದ ಕೂಡಲೇ ಜನರು ಆ ಮಗುವನ್ನು ದತ್ತು ಪಡೆಯಲು ಆಸ್ಪತ್ರೆಗೆ ಬರಲು ಪ್ರಾರಂಭಿಸಿದರು. ಕೊನೆಗೆ ಈ ವಿಷಯ ಎಸ್‌ಐಸಿ ಜೈ ಕುಮಾರ್‌ಗೆ ತಲುಪಿ, ಅವರು ತಕ್ಷಣವೇ ಮಕ್ಕಳ ಸಹಾಯವಾಣಿಗೆ ಇಡೀ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯೂ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿತು. ಸುಮಾರು 48 ಗಂಟೆಗಳ ಪ್ರಯತ್ನದ ನಂತರ ಆ ಮಗುವನ್ನು ತನ್ನ ಜೊತೆ ಇಟ್ಟುಕೊಂಡು, ಬೆಳೆಸಲು ಆಕೆ ಒಪ್ಪಿಕೊಂಡಳು.

ಆ ಮಹಿಳೆಯ ಪತಿ ಚಾಲಕರಾಗಿದ್ದರು. ಅವರು ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅವರ ಕುಟುಂಬವು ಸಂತೋಷದಿಂದಲೇ ಬದುಕುತ್ತಿತ್ತು. ಅವರು ತಮ್ಮ ಕುಟುಂಬದೊಂದಿಗೆ ಬಿಹಾರದ ದರ್ಭಾಂಗದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವು ತಿಂಗಳ ನಂತರ, ಆಕೆಯ ಪತಿ ಆಕೆಯನ್ನು ದೆಹಲಿಗೆ ಕರೆದೊಯ್ದರು. ಸುಮಾರು 5 ತಿಂಗಳ ಹಿಂದೆ ಆತ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿ ಈ ಮಹಿಳೆಯನ್ನು ಬಿಟ್ಟು ಹೋದರು.

ಇದನ್ನೂ ಓದಿ: ಇವ್ನೆಂಥಾ ಮಗ, ಹೆತ್ತ ತಂದೆ ತಾಯಿಯನ್ನು ಹೊಡೆದು ಕೊಂದು, ದೇಹಗಳನ್ನು ಕತ್ತರಿಸಿ ನದಿಗೆಸೆದ ಮಗ

ಅಷ್ಟರಲ್ಲಾಗಲೇ ಗರ್ಭಿಣಿಯಾಗಿದ್ದ ಆಕೆ ಮಗುವನ್ನು ತೆಗೆಸಲೂ ಆಗದೆ ಗಂಡ ವಾಪಾಸ್ ಬರುತ್ತಾನೆಂದು ಕಾಯುತ್ತಲೇ ಇದ್ದಳು. ಮಗು ಹುಟ್ಟಿದ ವಿಷಯ ತಿಳಿದರೂ ಆತ ಬಾರದೆ ಇದ್ದುದರಿಂದ ಆಕೆ ತಾಳ್ಮಗೆಟ್ಟು ಮಗುವೇ ಬೇಡವೆಂದು ಹಠ ಹಿಡಿದಿದ್ದಳು. ತಾನೊಬ್ಬಳೇ ಆ ಮಗುವನ್ನು ಹೇಗೆ ಬೆಳೆಸುವುದು ಎಂಬ ಚಿಂತೆ ಆಕೆಯನ್ನು ಕಾಡಿತ್ತು. ಗಂಡ ಬಿಟ್ಟುಹೋದ ನಂತರ ಗೊತ್ತಿಲ್ಲದ ಊರಾದ ದೆಹಲಿಯಲ್ಲಿ ಬೇರೆಯವರ ಮನೆ ಅಡುಗೆ ಮಾಡಿ ಆಕೆ ಮನೆಯ ಬಾಡಿಗೆ ಕಟ್ಟಿ, ಜೀವನ ನಡೆಸುತ್ತಿದ್ದಳು. ಇನ್ನು ಮುಂದೆ ಪುಟ್ಟ ಮಗುವನ್ನು ಬಿಟ್ಟುಕೊಂಡು ಕೆಲಸ ಮಾಡಿ ದುಡಿಯಲೂ ಸಾಧ್ಯವಾಗದ ಕಾರಣದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಮುಖಂಡನಿಂದಲೇ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ: ಮಾಲು ಸಮೇತ ಸಿಕ್ಕಿಬಿದ್ದ – Kannada News | Congress leader accused of selling ration rice in the black market

ಬೆಂಗಳೂರು, ಡಿಸೆಂಬರ್​ 18: ಬಿಪಿಎಲ್​​ ಕಾರ್ಡ್​​ದಾರರಿಂದ ಕಡಿಮೆ ಬೆಲೆಗೆ ಅಕ್ಕಿ (rice) ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿರುವ ಸಾಕಷ್ಟು ಘಟನೆಗಳು ವರದಿಯಾಗಿವೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿ ಮಾಡಿ ಬಳಿಕ ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಯಲ್ಲಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಇದೀಗ ಕಾಂಗ್ರೆಸ್ (congress) ಮುಖಂಡನಿಂದಲೇ ಈ ಅಕ್ಕಿ ಮಾರಾಟ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಕಾಳ ಸಂತೆಯಲ್ಲಿ ಬಿಪಿಎಲ್​ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಆಕ್ರೋಶ ಭುಗಿಲೆದ್ದಿದೆ.

ಎರಡು ಗುಂಪುಗಳ ನಡುವೆ ಗಲಾಟೆ

ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಅಲೀಮ್ ಎಂಬ ಕಾಂಗ್ರೆಸ್ ಮುಖಂಡನ ಮಧ್ಯೆ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಕಾಂಗ್ರೆಸ್ ಮುಖಂಡ ಅಲೀಮ್ ಎಂಬುವವರಿಂದ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್​ದಾರರಿಂದ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿದೆ. ಅಷ್ಟೇ ಅಲ್ಲದೆ KRS ಪಕ್ಷದ ಮುಖಂಡರು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದವರನ್ನು ಹಿಡಿದು ಪೊಲೀಸ್​ ಠಾಣೆಗೆ ಕರೆತಂದಿದ್ದರು.

ಇದನ್ನೂ ಓದಿ: ಕರ್ನಾಟಕದ ಅನ್ನಭಾಗ್ಯ ಅಕ್ಕಿ ದುಬೈನಲ್ಲಿ ಮಾರಾಟವಾಗುತ್ತಿದ್ಯಾ? ಕಾಂಗ್ರೆಸ್-ಬಿಜೆಪಿ ಜಟಾಪಟಿ

ಇನ್ನು KRS ಪಕ್ಷದ ಮುಖಂಡರ ಆರೋಪವನ್ನು ಅಲೀಮ್ ಅಲ್ಲಗೆಳೆದಿದ್ದಾರೆ. ಸದ್ಯ ಕುಮಾರಸ್ವಾಮಿ ಲೇಔಟ್ ಸ್ಟೇಷನ್ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂಥಾಗಿದೆ. 300ಕ್ಕೂ ಹೆಚ್ಚು ಅಲೀಮ್ ಬೆಂಬಲಿಗರು ಹಾಗೂ KRS ಮುಖಂಡರು ಸೇರಿದ್ದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸದ್ಯ ಎರಡು ಕಡೆಯ ಗುಂಪುಗಳನ್ನು ಪೊಲೀಸರು ಚದುರಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಅಲೀಮ್​​ ದಂಧೆ ನಡೆಸುತ್ತಿದ್ದಾನೆ: ರಘುಪತಿ ಭ

ಇನ್ನು ಈ ಬಗ್ಗೆ KRS ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಮಾತನಾಡಿದ್ದು, ಹಲವು ದಿನಗಳ ಹಿಂದೆ ಈ ರೀತಿ ಅಕ್ರಮವಾಗಿ ಬಿಪಿಎಲ್​​ ಅಕ್ಕಿ ಮಾರಾಟದ ಮಾಹಿತಿ ಸಿಕ್ತು. ನಾವು ಪೂರ್ವ ತಯಾರಿ ಮಾಡಿಕೊಂಡು ಅಕ್ಕಿ ತುಂಬಿಸಿಕೊಂಡು ಹೋಗುತ್ತಿದ್ದ ಜನರನ್ನು ಹಿಡಿದಿದ್ದೇವೆ. ಸುಮಾರು 45 ಅಕ್ಕಿ ಚೀಲಗಳನ್ನು ನಾವು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ ಎಂದರು.

ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಅಲೀಮ್ ಎಂಬ ಕಾಂಗ್ರೆಸ್ ಮುಖಂಡನೇ ಈ ದಂಧೆಯನ್ನು ನಡೆಸುತ್ತಿದ್ದಾನೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಅಲೀಮ್ ಪ್ಲಾನ್ ಮಾಡಿಕೊಂಡಿದ್ದಾನೆ. ಯಲಚೇನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಆತನ ಹಾವಳಿ ಮಿತಿಮೀರಿದೆ. ನಾವು KRS ಪಕ್ಷದ ಮುಖಂಡರು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿದ್ದೇವೆ. ನಮ್ಮ ಜನಪ್ರಿಯತೆಯನ್ನು ಸಹಿಸಲು ಆಗದೆ ಈ ರೀತಿ ಹಗೆ ಸಾಧಿಸುತ್ತಿದ್ದಾನೆ. ಅವನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಕಡೆಯ 200 ಹುಡುಗರನ್ನು ಕರೆಸಿ ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಪೊಲೀಸರು ನಮಗೆ ರಕ್ಷಣೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸದನದಲ್ಲಿ ಚರ್ಚೆ ಬೆನ್ನಲ್ಲೇ ಶಕ್ತಿ ಯೋಜನೆ ಹಣ ಬಾಕಿ ರಿಲೀಸ್: ಯಾವ ನಿಗಮಕ್ಕೆ ಎಷ್ಟು? – Kannada News | Karnataka: Shakti Yojana grant released; 441 crore disbursed to four corporations

ಬೆಂಗಳೂರು, ಡಿಸೆಂಬರ್​ 18: ಸರ್ಕಾರಿ ಬಸ್​​ಗಳಲ್ಲಿ ಲಕ್ಷಾಂತರ ನಾರಿಮಣಿಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದಂತೆ ಹಲವರ ಬದುಕಿಗೆ ಶಕ್ತಿಯೋಜನೆಯೇ (shakti yojana) ಆಸರೆ ಆಗಿದೆ. ಆದರೆ ಯೋಜನೆಯೇ ಸಾರಿಗೆ ಇಲಾಖೆಯನ್ನ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆಯಾಗಿದ್ದು, ಅದರ ಬೆನ್ನಲ್ಲೇ ಇದೀಗ ಸರ್ಕಾರ ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದೆ. 4 ನಿಗಮಗಳಿಗೆ 441 ಕೋಟಿ ರೂ. ಅನುದಾನ (grant) ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ದಾಖಲೆಯ ಸಮೇತ ಬಯಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಗೆ ಬರೋಬ್ಬರಿ 4 ಸಾವಿರ ಕೋಟಿ ರೂ ಹಣ ಬರಬೇಕಾಗಿದೆ. ಇದೇ ಕಾರಣಕ್ಕೆ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ ಅನ್ನೋ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ

ಇನ್ನು ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆ ಆಗುತ್ತಿದ್ದಂತೆ ಇದೀಗ ಆರ್ಥಿಕ ಇಲಾಖೆಯಿಂದ ಸಾರಿಗೆ ಇಲಾಖೆಗೆ 441 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ನವೆಂಬರ್ ತಿಂಗಳ ಅನುದಾನವಾಗಿ ಸಾರಿಗೆ ಇಲಾಖೆಯ 4 ನಿಗಮಗಳಿಗೆ 441 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೆಎಸ್ಆರ್​ಟಿಸಿಗೆ 171.41 ಕೋಟಿ ರೂ, ಬಿಎಂಟಿಸಿಗೆ 75.65 ಕೋಟಿ ರೂ, ಕೆಕೆಆರ್​ಟಿಸಿಗೆ 86.92 ಕೋಟಿ ರೂ, NWKRTCಗೆ 107.67 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಶಕ್ತಿ ಯೋಜನೆಯ ಬಾಕಿ 4006 ಕೋಟಿ ರೂ. ಹಣ ಹಾಗೆಯೇ ಉಳಿದಿದೆ.

ನಾಲ್ಕು ನಿಗಮಗಳ ಬಾಕಿ ಹಣ ಹೀಗಿದೆ

ಕೆಸ್​ಆರ್​​ಟಿಸಿಗೆ 2023-2024ರ ಅವಧಿಯಲ್ಲಿ 452 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ. 2024-2025ರ ಅವಧಿಯಲ್ಲಿ 495 ಕೋಟಿ ರೂ ಬಾಕಿ ಇದೆ. 2025 ನವೆಂಬರ್ ಅಂತ್ಯಕ್ಕೆ 631 ಕೋಟಿ ರೂ ಪೆಂಡಿಂಗ್ ಇದ್ದು, ಒಟ್ಟು 1580 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ.

ಬಿಎಂಟಿಸಿ ನಿಗಮಕ್ಕೆ 2023-2024ರಅವಧಿಯಲ್ಲಿ 205 ಕೋಟಿ ರೂ ಬಾಕಿ ಇದೆ. 2024-25ರ ಅವಧಿಯಲ್ಲಿ 194 ಕೋಟಿ ರೂ ಬಾಕಿ ಇದ್ರೆ, 2025ರ ನವೆಂಬರ್ ಅಂತ್ಯಕ್ಕೆ ಒಟ್ಟು 310 ಕೋಟಿ ರೂ ಸೇರಿದಂತೆ ಒಟ್ಟು 710 ಕೋಟಿ ರೂಪಾಯಿ ಸರ್ಕಾರದಿಂದ ಬರಬೇಕಿದೆ.

ಇದನ್ನೂ ಓದಿ: NWKRTCಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ: ಸಂಕಷ್ಟದಲ್ಲಿ ನಿಗಮ

ಅಲ್ಲದೇ NWKRTC ನಿಗಮಕ್ಕೆ 2023-2024 ರಲ್ಲಿ 283 ಕೋಟಿ ರೂ ಬಾಕಿ ಬರಬೇಕಿದೆ. 2024-2025ರ ಅವಧಿಯಲ್ಲಿ 275 ಕೋಟಿ ಮತ್ತು 2025ರ ನವೆಂಬರ್ ಅಂತ್ಯಕ್ಕೆ 428 ಕೋಟಿ ರೂ ಸೇರಿ ಒಟ್ಟು 988 ಕೋಟಿ ರೂ ಬಾಕಿ ಉಳಿಸಿಕೊಳ್ಳಳಾಗಿದೆ.

ಇಷ್ಟೇ ಅಲ್ಲ KKRTC ಸಾರಿಗೆ ನಿಗಮಕ್ಕೆ 2023-2024 ರಲ್ಲಿ 238 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. 2024-2025 ರ ಅವಧಿಯಲ್ಲಿ 204 ಕೋಟಿ ರೂ ಪೆಂಡಿಂಗ್ ಇದ್ದರೆ, 2025ರ ನವೆಂಬರ್ ಅಂತ್ಯಕ್ಕೆ 284 ಕೋಟಿ ರೂ ಬಾಕಿ ಇದೆ. 4 ನಿಗಮಗಳು ಸೇರಿ ಬರೋಬ್ಬರಿ 4 ಸಾವಿರ ಕೋಟಿ ರೂ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದ್ದು ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:12 pm, Thu, 18 December 25

Source link

ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಭೂಮಿ ಎಲ್ಲಿ? ಹೇಗಿದೆ ನೋಡಿ – Kannada News | BJP Alleged land grab in Kolar Against Minister Krishna Byre Gowda, here Is land details

ಕೋಲಾರ, (ಡಿಸೆಂಬರ್ 18):  ಬೆಂಗಳೂರಿನ ಬ್ಯಾಟರಾಯನಪುರ ಕಾಂಗ್ರೆಸ್‌ ಶಾಸಕ, ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಈವರೆಗೂ ಯಾವ ಹಗರಣದಲ್ಲೂ ಸಿಲುಕದ ಕ್ಲೀನ್‌ ಇಮೇಜ್‌ ರಾಜಕಾರಣಿ. ಆದ್ರೆ, ಇದೇ ಮೊದಲ ಬಾರಿಗೆ ಭೂಕಬಳಿಕೆ ಆರೋಪ ಇವರನ್ನೀಗ ಸುತ್ತಿಕೊಂಡಿದೆ.ಹೌದು..ಕೋಲಾರ ತಾಲೂಕಿನ ಗರುಡಪಾಳ್ಯ ಸಚಿವ ಕೃಷ್ಣಭೈರೇಗೌಡರ ಹುಟ್ಟೂರು. ನರಸುಪುರ ಹೋಬಳಿಯ ಗರುಡಪಾಳ್ಯದಲ್ಲಿ 200ಎಕರೆಗೂ ಹೆಚ್ಚು ಜಾಗವಿದೆ. ಇಲ್ಲಿನ ಸರ್ವೆ ನಂಬರ್‌ 46 ಮತ್ತು 47ರಲ್ಲಿ . ಇದೇ ಸರ್ವೇ ನಂಬರ್‌ನಲ್ಲೇ ಸಚಿವರ ಹೆಸರಿನಲ್ಲಿ 21 ಎಕರೆ ಜಮೀನಿದೆ. ಆದ್ರೆ, ಇದು ಸ್ಮಶಾನ ಮತ್ತು ಕೆರೆ ಭೂಮಿಯಾಗಿದ್ದು, ನಕಲಿ ದಾಖಲೆಗಳನ್ನ ಸೃಷ್ಟಿಸಿ ಸಚಿವರು ಅದನ್ನ ಕಬಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇನ್ನು ಇದಕ್ಕೆ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿ, ತನಿಖೆ ಎದುರಿಸಲು ಸಿದ್ಧ ಎಂದು ಖಡಕ್ ಆಗಿ ಹೇಳಿದ್ದಾರೆ.ಆದ್ರೆ, ಭೂಕಬಳಿಕೆ ಆರೋಪವನ್ನೇ ಅಸ್ತ್ರವಾಗಿಸಿಕೊಂಡು ಬಿಜೆಪಿ ಕೃಷ್ಣಭೈರೇಗೌಡರ ವಿರುದ್ಧ ಮುಗಿಬಿದ್ದಿದೆ. ಇಂದು (ಡಿಸೆಂಬರ್ 18) ಉಭಯ ಸದನದಲ್ಲೂ ಈ ವಿಚಾರವೇ ಪ್ರತಿಧ್ವನಿಸಿದೆ. ಬಿಜೆಪಿ ಆರೋಪಕ್ಕೆ ಸಚಿವರು ಕೂಡ ತಿರುಗೇಟು ಕೊಟ್ಟಿದ್ದಾರೆ. ಇನ್ನು ಬಿಜೆಪಿ ಆರೋಪ ಮಾಡಿರುವ ಆ ಭೂಮಿ ಹೇಗಿದೆ? ಎಲ್ಲಿದೆ? ಎನ್ನುವುದನ್ನು ನಮ್ಮ ಕೋಲಾರ ಪ್ರತಿನಿಧಿ ಸ್ಥಳದಿಂದ ಮಾಹಿತಿ ನೀಡಿದ್ದಾರೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಚಾರ್ಜ್​ಶೀಟ್’, ‘ರಕ್ಕಿ’ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸಿದ ವೆಂಕಟ್​ ಭಾರದ್ವಾಜ್ – Kannada News | Venkat Bharadwaj completes Chargesheet and Rakky movie shooting in 2025

ನಿರ್ದೇಶಕ ವೆಂಕಟ್ ಭಾರದ್ವಾಜ್ (Venkat Bharadwaj) ಅವರು ಬ್ಯಾಕ್ ಟು ಬ್ಯಾಕ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. 2025ರಲ್ಲಿ ಅವರು ಸೂಪರ್ ಫಾಸ್ಟ್ ಆಗಿ ಕೆಲಸ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ 2 ಸಿನಿಮಾಗಳು 2025ರಲ್ಲಿ ಬಿಡುಗಡೆ ಆದವು. ಅಲ್ಲದೇ ಇದೇ ವರ್ಷ ಅವರು ಇನ್ನೆರಡು ಸಿನಿಮಾಗಳ ಶೂಟಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಹೌದು, ವೆಂಕಟ್ ಭಾರದ್ವಜ್ ಆ್ಯಕ್ಷನ್-ಕಟ್ ಹೇಳಿದ ‘ಹೈನಾ’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಯಿತು. ಬಳಿಕ ನವೆಂಬರ್ ತಿಂಗಳಲ್ಲಿ ‘ಹೇ ಪ್ರಭು’ ಸಿನಿಮಾ ತೆರೆಕಂಡಿತು. ಈ ನಡುವೆಯೇ ಅವರು ‘ಚಾರ್ಜ್​ಶೀಟ್’ (Chargesheet) ಹಾಗೂ ‘ರಕ್ಕಿ’ ಸಿನಿಮಾಗಳ ಶೂಟಿಂಗ್ ಮುಗಿಸಿದ್ದಾರೆ.

‘ಚಾರ್ಜ್‌ಶೀಟ್’ ಸಿನಿಮಾದಲ್ಲಿ ಕ್ರೈಮ್ ಕಥಾಹಂದರ ಇದರಲಿದೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ‘ಅರ್ಜುನ್ ಫಿಲ್ಮ್ಸ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಈ ವರ್ಷ ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ಮುಗಿಸಲಾಯಿತು. ಅದರ ಜೊತೆಗೆ ವೆಂಕಟ್ ಭಾರದ್ವಾಜ್ ಅವರು ಇನ್ನೊಂದು ಸಿನಿಮಾ ಕೈಗೆತ್ತಿಕೊಂಡರು.

ವೆಂಕಟ್ ಭಾರದ್ವಾಜ್ ನಿರ್ದೇಶನದ ಇನ್ನೊಂದು ಸಿನಿಮಾ ‘ರಕ್ಕಿ’. ಈ ಸಿನಿಮಾವನ್ನು ‘ಎಸ್‌ಎನ್‌ಆರ್ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಮಾಡಲಾಗಿದೆ. ರಕ್ಕಿ ಸುರೇಶ್, ಆಶಿಕಾ ಸೋಮಶೇಖರ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

2003ರಲ್ಲಿ ಬೆಂಗಳೂರು ನಗರದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧಾರಿಸಿ ‘ಚಾರ್ಜ್‌ಶೀಟ್’ ಸಿನಿಮಾ ಸಿದ್ಧವಾಗುತ್ತಿದೆ. ಆ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಜೀವನಾನುಭವಗಳು ಮತ್ತು ಅವರ ಕಾದಂಬರಿಯನ್ನು ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ವೆಂಕಟ್ ಭಾರದ್ವಾಜ್ ಅವರು ಚಿತ್ರಕಥೆ, ಸಂಭಾಷಣೆಗಳು ಮತ್ತು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಕರ್​​ಗೆ ಶಾರ್ಟ್​​ಲಿಸ್ಟ್ ಆದ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’: ಮುಂದೇನು?

‘ಚಾರ್ಜ್‌ಶೀಟ್’ ಸಿನಿಮಾದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಅಮರ್, ಸತ್ಯಾ ರಾಮ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ, ಚೇತನ ಖೋಟ್, ರೂಪೇಶ್ ಹಾಗೂ ವೆಂಕಟ್ ಭಾರದ್ವಾಜ್ ಅಭಿನಯಿಸಿದ್ದಾರೆ. ಸಮೀರ್ ಕುಲಕರ್ಣಿ ಅವರು ಸಂಗೀತ ನೀಡಿದ್ದಾರೆ. ಪ್ರಮೋದ್ ಭಾರತೀಯ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಮೀಕ್ ವಿ. ಭಾರದ್ವಾಜ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version