ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾ: ಪಟ್ಟಿ ಇಲ್ಲಿದೆ

Source link

IPL ಫೈನಲ್​​​ ದಿನದಂದು ಆರ್‌ಸಿಬಿ ಫ್ಯಾನ್ಸ್​​​ಗೆ ಉಚಿತ ಮೆಟ್ರೋ ಪ್ರಯಾಣ: ಅಂತೆಕಂತೆಗಳಿಗೆ BMRCL ಸ್ಪಷ್ಟನೆ

ಬೆಂಗಳೂರು, ಮೇ 30: ಅಹಮದಾಬಾದ್‌ನಲ್ಲಿ ಮೇ 31ರಂದು ನಡೆಯಲಿರುವ ಐಪಿಎಲ್ (IPL) ಫೈನಲ್ ಪಂದ್ಯ ಹಿನ್ನೆಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ನಮ್ಮ ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸ್ಪಷ್ಟಪಡಿಸಿದೆ. ಯಾರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ. ಎಲ್ಲರೂ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಬೇಕೆಂದು ಮನವಿ ಮಾಡಲಾಗಿದೆ.

ಮುಖ್ಯಾಂಶಗಳು

  • ನಾಳೆ ಅಹಮದಾಬಾದ್​​ನಲ್ಲಿ ಐಪಿಎಲ್​ ಫೈನಲ್ ಪಂದ್ಯ
  • ಮೆಟ್ರೋದಲ್ಲಿ RCB ಅಭಿಮಾನಿಗಳಿಗೆ ಉಚಿತ ಪ್ರಯಾಣ ವದಂತಿ
  • ಉಚಿತ ಪ್ರಯಾಣ ಇಲ್ಲ ಎಂದು ಬಿಎಂಆರ್​ಸಿಎಲ್​​​​

ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಬಿಎಂಆರ್​ಸಿಎಲ್

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್​ಸಿಎಲ್, ಬಿಎಂಆರ್‌ಸಿಎಲ್​​ ಗಮನಕ್ಕೆ ಬಂದಿರುವಂತೆ ಕೆಲವು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಸಂದೇಶಗಳು ಹಾಗೂ ಜಾಹೀರಾತುಗಳಲ್ಲಿ, 2026ರ ಮೇ 31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯ ಪ್ರಯುಕ್ತ ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯ ಲಭ್ಯವಿರುತ್ತದೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿದೆ.

ಬಿಎಂಆರ್​ಸಿಎಲ್ ಟ್ವೀಟ್​

ಇದನ್ನೂ ಓದಿ: ನಮ್ಮ ಮೆಟ್ರೋ ಬ್ಲೂ ಲೈನ್ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲು ಪ್ಲಾನ್!

2026ರ ಮೇ 31ರಂದು ಆರ್‌ಸಿಬಿ ಅಭಿಮಾನಿಗಳಿಗೆ ಅಥವಾ ಯಾವುದೇ ಇತರ ಪ್ರಯಾಣಿಕ ವರ್ಗಕ್ಕೆ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯ ಒದಗಿಸುವ ಯಾವುದೇ ಯೋಜನೆಯನ್ನು ಬಿಎಂಆರ್‌ಸಿಎಲ್ ಘೋಷಿಸಿಲ್ಲ ಹಾಗೂ ಅನುಮೋದಿಸಿಲ್ಲ. ಉಚಿತ ಮೆಟ್ರೋ ಪ್ರಯಾಣ ಎಂದು ಜಾಹೀರಾತು ನೀಡಲು, ಪ್ರಚಾರ ಮಾಡಲು ಅಥವಾ ಪ್ರತಿನಿಧಿಸಲು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆಗೆ ಬಿಎಂಆರ್‌ಸಿಎಲ್ ಅನುಮತಿ ಅಥವಾ ಅಧಿಕೃತ ಮಾನ್ಯತೆ ನೀಡಿಲ್ಲ ಎಂದು ತಿಳಿಸಿದೆ.

ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸಬೇಕು

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಟಿಕೆಟ್ ಖರೀದಿಸಬೇಕು ಅಥವಾ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್, ಎನ್‌ಸಿಎಂಸಿ ಕಾರ್ಡ್ ಅಥವಾ ಬಿಎಂಆರ್‌ಸಿಎಲ್ ಅನುಮೋದಿಸಿರುವ ಇತರೆ ಪ್ರಯಾಣ ಮಾಧ್ಯಮಗಳನ್ನು ಬಳಸಬೇಕು. ಪ್ರಯಾಣವು ಬಿಎಂಆರ್‌ಸಿಎಲ್‌ನ ಪ್ರಚಲಿತ ದರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ: BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ಸಾರ್ವಜನಿಕರು ಅನಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್​ಗಳು, ಜಾಹೀರಾತುಗಳು ಅಥವಾ ಸಂದೇಶಗಳನ್ನು ನಂಬಬಾರದು ಹಾಗೂ ಮಾಹಿತಿಗಾಗಿ ಬಿಎಂಆರ್‌ಸಿಎಲ್‌ ಅಧಿಕೃತ ಪ್ರಕಟಣೆಗಳು ಮತ್ತು ಅಧಿಕೃತ ಮಾಧ್ಯಮಗಳನ್ನು ಮಾತ್ರ ಅವಲಂಬಿಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:02 pm, Sat, 30 May 26

Source link

National Teacher Award 2026: ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ; ಕೇಂದ್ರ ಶಿಕ್ಷಣ ಸಚಿವಾಲಯದಿಂದ ನಾಮನಿರ್ದೇಶನಕ್ಕೆ ಮುಕ್ತ ಅವಕಾಶ!

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿImage Credit source: Pinterest

ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರು ಮತ್ತು ಬೋಧಕರನ್ನು ಗೌರವಿಸಲು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026’ ಕ್ಕಾಗಿ ಆನ್‌ಲೈನ್ ಮೂಲಕ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೈಕ್ಷಣಿಕ ನಾಯಕತ್ವ, ನಾವೀನ್ಯತೆ ಹಾಗೂ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಿದ ಆದರ್ಶ ಶಿಕ್ಷಕರನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಪ್ರಕ್ರಿಯೆಗೆ ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು’ (AICTE) ಸಾಂಸ್ಥಿಕ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಶಿಕ್ಷಕರು ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ ಆದ awards.gov.in ಮೂಲಕ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಬಹುದಾಗಿದೆ.

ಪ್ರಶಸ್ತಿಯ ಪ್ರಮುಖ ವಿಭಾಗಗಳು (Categories):

ಈ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಪ್ರಮುಖವಾಗಿ ಎರಡು ವಿಭಾಗಗಳ ಅಡಿಯಲ್ಲಿ ನೀಡಲಾಗುತ್ತದೆ:

  • ವಿಭಾಗ 1 (ಉನ್ನತ ಶಿಕ್ಷಣ ಸಂಸ್ಥೆಗಳು): ಈ ವಿಭಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಮೂರು ಉಪ-ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಆರ್ಕಿಟೆಕ್ಚರ್; ಎರಡನೆಯದಾಗಿ ಗಣಿತ, ಭೌತಶಾಸ್ತ್ರ, ಜೀವವಿಜ್ಞಾನ, ರಸಾಯನಶಾಸ್ತ್ರ, ವೈದ್ಯಕೀಯ ಮತ್ತು ಫಾರ್ಮಸಿ ಸೇರಿದಂತೆ ಶುದ್ಧ ವಿಜ್ಞಾನಗಳು (Pure Sciences); ಮೂರನೆಯದಾಗಿ ಕಲೆ, ಸಮಾಜ ವಿಜ್ಞಾನ, ಮಾನವಿಕ ವಿಷಯಗಳು, ಭಾಷೆಗಳು, ಕಾನೂನು ಅಧ್ಯಯನ, ವಾಣಿಜ್ಯ ಮತ್ತು ನಿರ್ವಹಣೆ (Management) ವಿಭಾಗಗಳು ಸೇರಿವೆ.
  • ವಿಭಾಗ 2 (ಪಾಲಿಟೆಕ್ನಿಕ್ ಸಂಸ್ಥೆಗಳು): ಈ ವಿಭಾಗವನ್ನು ದೇಶಾದ್ಯಂತ ಇರುವ ಪಾಲಿಟೆಕ್ನಿಕ್ ಕಾಲೇಜುಗಳ ಶಿಕ್ಷಕರು ಮತ್ತು ಅಧ್ಯಾಪಕ ಸಿಬ್ಬಂದಿಗಾಗಿ ಪ್ರತ್ಯೇಕವಾಗಿ ಮೀಸಲಿಡಲಾಗಿದೆ.

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳು:

ಭಾರತದ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ (Regular) ಅಧ್ಯಾಪಕರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರರು ಪದವಿ (Undergraduate) ಮತ್ತು/ಅಥವಾ ಸ್ನಾತಕೋತ್ತರ (Postgraduate) ಮಟ್ಟದಲ್ಲಿ ಕನಿಷ್ಠ 5 ವರ್ಷಗಳ ಪೂರ್ಣಾವಧಿ ಬೋಧನಾ ಅನುಭವವನ್ನು ಹೊಂದಿರಬೇಕು. ಜೊತೆಗೆ, ನಾಮನಿರ್ದೇಶನವನ್ನು ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ವಯಸ್ಸು 55 ವರ್ಷ ಮೀರಿರಬಾರದು. ಪ್ರಸ್ತುತ ಸೇವೆಯಲ್ಲಿರುವ ಉಪಕುಲಪತಿಗಳು (Vice-Chancellors), ನಿರ್ದೇಶಕರು (Directors) ಮತ್ತು ಪ್ರಾಂಶುಪಾಲರು (Principals) ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಆದರೆ, ಹಿಂದೆ ಇಂತಹ ಹುದ್ದೆಗಳನ್ನು ನಿರ್ವಹಿಸಿ ಈಗ ಸಕ್ರಿಯ ಬೋಧನೆಯಲ್ಲಿದ್ದು, 55 ವರ್ಷದೊಳಗಿನ ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ನಾಮನಿರ್ದೇಶನ ಪ್ರಕ್ರಿಯೆ ಮತ್ತು ಕೊನೆಯ ದಿನಾಂಕ:

ಸಾರ್ವಜನಿಕ ಸಹಭಾಗಿತ್ವದ (Janbhagidari) ಆಧಾರದ ಮೇಲೆ ಈ ನಾಮನಿರ್ದೇಶನ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ಇದಕ್ಕಾಗಿ ಮೂರು ವಿಧದ ಆಯ್ಕೆಗಳನ್ನು ನೀಡಲಾಗಿದೆ:

  • ಸ್ವಯಂ ನಾಮನಿರ್ದೇಶನ (Self-Nomination): ಅರ್ಹ ಶಿಕ್ಷಕರು ತಾವೇ ನೇರವಾಗಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
  • ಸಾಂಸ್ಥಿಕ ನಾಮನಿರ್ದೇಶನ (Institutional Nomination): ಸಂಸ್ಥೆಯ ಮುಖ್ಯಸ್ಥರು (ಪ್ರಾಂಶುಪಾಲರು/ನಿರ್ದೇಶಕರು) ಅರ್ಹ ಶಿಕ್ಷಕರ ಹೆಸರನ್ನು ಶಿಫಾರಸು ಮಾಡಬಹುದು.
  • ಸಹೋದ್ಯೋಗಿಗಳ ನಾಮನಿರ್ದೇಶನ (Peer Nomination): ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿ ಶಿಕ್ಷಕರು ಮತ್ತೊಬ್ಬ ಪ್ರತಿಭಾವಂತ ಶಿಕ್ಷಕನನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು.

ಈ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ, ಅಭ್ಯರ್ಥಿಗಳು AICTE ಇಲಾಖೆಯನ್ನು ಇಮೇಲ್ (helpdesknataward26@aicte-india.org) ಮೂಲಕ ಅಥವಾ ಕಚೇರಿ ಅವಧಿಯಲ್ಲಿ ದೂರವಾಣಿ ಸಂಖ್ಯೆ (011-29581051 / 011-295811236) ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಬ್ಬರಿಗೆ ಕೊಟ್ಟರೆ ಮತ್ತೊಬ್ಬರಿಗೆ ಬೇಸರ: ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು

ಬೆಂಗಳೂರು, ಮೇ 30: ಕರ್ನಾಟಕದಲ್ಲಿ ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳ ಸಂಖ್ಯೆ ಮತ್ತು ಅವುಗಳ ಹಂಚಿಕೆ ಕುರಿತು ತೀವ್ರ ಗೊಂದಲದಲ್ಲಿದೆ. ಎರಡರಿಂದ ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಅಥವಾ ಯಾವುದೇ ಹುದ್ದೆಯನ್ನು ರಚಿಸದೆ ಇರುವ ಆಯ್ಕೆಗಳ ಕುರಿತು ಚರ್ಚೆ ನಡೆದಿದೆ. ವಿವಿಧ ಜಾತಿ, ಸಮುದಾಯ ಮತ್ತು ಪ್ರಾದೇಶಿಕ ಸಮತೋಲನವನ್ನು ಸಾಧಿಸುವುದು ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ. ಒಬಿಸಿ, ಲಿಂಗಾಯತ, ಮುಸ್ಲಿಂ ಮತ್ತು ದಲಿತ ಸಮುದಾಯಗಳಿಂದ ಪ್ರಮುಖ ನಾಯಕರು ಡಿಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಯತೀಂದ್ರ, ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್ ಖಾನ್, ಯು.ಟಿ. ಖಾದರ್, ಜಿ. ಪರಮೇಶ್ವರ ಮತ್ತು ಪ್ರಿಯಾಂಕ್ ಖರ್ಗೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇವರಲ್ಲಿ ಕೆಲವರನ್ನು ಆಯ್ಕೆ ಮಾಡುವುದು ಉಳಿದವರಿಗೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಆತಂಕ ಪಕ್ಷಕ್ಕಿದೆ. ಹೀಗಾಗಿ ಶಾಸಕರ ಅರ್ಹತೆ, ಜಾತಿ ಮತ್ತು ಸಮುದಾಯವಾರು ಪ್ರಾತಿನಿಧ್ಯವನ್ನು ಪರಿಗಣಿಸಿ ಹೊಸ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಸರ್ಕಸ್ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿಕೆಶಿ ಕ್ಯಾಬಿನೆಟ್‌ನ 14 ಸಂಭಾವ್ಯ ಸಚಿವರು ಇವರೇ ನೋಡಿ! ವಿಧಾನಸಭೆ ನೂತನ ಸ್ಪೀಕರ್ ಯಾರಾಗ್ತಾರೆ ಗೊತ್ತಾ?

ಬೆಂಗಳೂರು, ಮೇ.30: ಜೂನ್ 3ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅವರೊಂದಿಗೆ 14 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದೆ. ಈ ಸಂಭಾವ್ಯ ಸಚಿವರ ಪಟ್ಟಿ ಟಿವಿ9 ವಾಹಿನಿಗೆ ಲಭ್ಯವಾಗಿದೆ. ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ್, ರೂಪಾ ಶಶಿಧರ್, ಸತೀಶ್ ಜಾರಕಿಹೋಳಿ, ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ಆರ್. ಚಲುವರಾಯಸ್ವಾಮಿ, ಬೈರತಿ ಸುರೇಶ್, ಯು.ಟಿ. ಖಾದರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡು ರಾವ್ ಮತ್ತು ಎನ್.ಎ. ಹ್ಯಾರಿಸ್ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೆಲ ಹಿರಿಯರನ್ನು ಮುಂದುವರಿಸುವ ಜೊತೆಗೆ ಹೊಸ ಮುಖಗಳಿಗೂ ಅವಕಾಶ ನೀಡುವ ಸಾಧ್ಯತೆ ಇದೆ. ಹೊಸ ಸರ್ಕಾರ ರಚನೆಯ ಸಂದರ್ಭದಲ್ಲಿ ಸ್ಪೀಕರ್ ಸ್ಥಾನಕ್ಕೂ ಪೈಪೋಟಿ ನಡೆದಿದ್ದು, ಎಚ್.ಕೆ. ಪಾಟೀಲ್ ಮತ್ತು ಮಹದೇವಪ್ಪ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅನುಭವದ ಆಧಾರದ ಮೇಲೆ ಮಹದೇವಪ್ಪ ಅವರ ಹೆಸರು ಪ್ರಬಲವಾಗಿದೆ. ಪ್ರಮಾಣ ವಚನ ಸ್ವೀಕಾರದ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ನಿಂದ ಬರಬೇಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

ಕರಾಚಿ, ಮೇ 30: ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ(Indus River) ನೀರು ಒಪ್ಪಂದವು ಸ್ಥಗಿತಗೊಂಡಿರುವುದು ಪಾಕಿಸ್ತಾನದ ಜಲ ಭದ್ರತೆಯ ಆತಂಕವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಬೇಸಿಗೆಯ ಉತ್ತುಂಗದ ನಡುವೆ ತೀವ್ರ ನೀರಿನ ಕೊರತೆ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಕೈಗೊಂಡಿರುವ ದಂಡನಾತ್ಮಕ ಕ್ರಮಗಳಿಂದ ಪಾಕಿಸ್ತಾನ ಈಗಾಗಲೇ ತೀವ್ರ ರಾಜತಾಂತ್ರಿಕ ಮತ್ತು ಆರ್ಥಿಕ ಒತ್ತಡ ಎದುರಿಸುತ್ತಿದೆ.

ಶೇ. 70 ರಷ್ಟು ನಗರಕ್ಕೆ ನೀರಿಲ್ಲ: ಈದ್ ಹಬ್ಬದ ಸಂಭ್ರಮಕ್ಕೆ ಭಂಗ
ದೇಶಾದ್ಯಂತ ಈದ್-ಉಲ್-ಅಧಾ (ಬಕ್ರೀದ್) ಹಬ್ಬದ ಆಚರಣೆ ನಡೆಯುತ್ತಿರುವಾಗಲೇ ಈ ಜಲಬಿಕ್ಕಟ್ಟು ಎದುರಾಗಿದೆ. ಕರಾಚಿ ನಗರದ ಸುಮಾರು ಶೇಕಡಾ 70 ರಷ್ಟು ಭಾಗಕ್ಕೆ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟ್ಯಾಂಕರ್ ಅನಿವಾರ್ಯ: ತಾಪಮಾನ ಏರುತ್ತಿದೆ, ಗುಲಿಸ್ತಾನ್-ಎ-ಜೌಹರ್, ಗುಲ್ಶನ್-ಎ-ಇಕ್ಬಾಲ್, ಅಜೀಜಾಬಾದ್, ಲಿಯಾಖತಾಬಾದ್ ಮತ್ತು ಉತ್ತರ ಕರಾಚಿಯಂತಹ ಪ್ರಮುಖ ಪ್ರದೇಶಗಳಲ್ಲಿ ಕಳೆದ ಎರಡು ವಾರಗಳಿಂದ ಹನಿ ನೀರು ಸಿಗುತ್ತಿಲ್ಲ. ಇದರಿಂದಾಗಿ ಜನರು ದುಬಾರಿ ಬೆಲೆಯ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗಿದೆ.

ತ್ಯಾಜ್ಯ ವಿಲೇವಾರಿ ವೈಫಲ್ಯ: ಸಿಂಧ್ ಘನತ್ಯಾಜ್ಯ ನಿರ್ವಹಣಾ ಮಂಡಳಿಯು 43 ಶತಕೋಟಿ ರೂಪಾಯಿಗಳ ಬೃಹತ್ ಬಜೆಟ್ ಹೊಂದಿದ್ದರೂ, ಹಬ್ಬದ ಸಮಯದಲ್ಲಿ ಪ್ರಾಣಿಗಳ ತ್ಯಾಜ್ಯವನ್ನು ವಿಲೇವಾರಿ ಮಾಡಲು ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ಒಂದಾ ನೀವು ಭಯೋತ್ಪಾನೆ ನಾಶ ಮಾಡಬೇಕು, ಇಲ್ಲವೇ ಸಿಂಧೂ ನೀರಿನ ಆಸೆ ಬಿಡಬೇಕು, ವಿಶ್ವಸಂಸ್ಥೆಯಲ್ಲಿ ಪಾಕ್​​​ಗೆ ಭಾರತ ಎಚ್ಚರಿಕೆ

ಪ್ರಾಂತೀಯ ಸರ್ಕಾರದ ವಿರುದ್ಧ ಜಮಾತ್-ಎ-ಇಸ್ಲಾಮಿ ವಾಗ್ದಾಳಿ
ಕರಾಚಿಯ ಮೇಯರ್ ಮುರ್ತಾಜಾ ವಹಾಬ್ ಅವರು ನಗರದಲ್ಲಿ ಯಾವುದೇ ನೀರಿನ ಕೊರತೆಯಿಲ್ಲ ಎಂದು ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜಮಾತ್-ಇ-ಇಸ್ಲಾಮಿ ಮುಖ್ಯಸ್ಥ ಹಫೀಜ್ ನಯೀಮ್ ಉರ್ ರೆಹಮಾನ್, ಆಡಳಿತ ಪಕ್ಷವಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಂಧ್ ಪ್ರಾಂತ್ಯದಲ್ಲಿ ಪಿಪಿಪಿ ಪಕ್ಷವು ಕಳೆದ 18 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ ಕರಾಚಿಯ ದೀರ್ಘಕಾಲದ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಿಲ್ಲ. ಜನಸಾಮಾನ್ಯರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಹಬ್ಬದ ದಿನಗಳಲ್ಲೂ ಸಾವಿರಾರು ನಿವಾಸಿಗಳು ಕುಡಿಯುವ ನೀರಿಗಾಗಿ ಹೆಣಗಾಡುವಂತಾಗಿದೆ ಎಂದು ಹಫೀಜ್ ನಯೀಮ್ ದೂರಿದ್ದಾರೆ. ಬಿಕ್ಕಟ್ಟಿನ ನಡುವೆಯೂ ತಮ್ಮ ಸಂಘಟನೆಯು ನಗರದ 150 ಕ್ಕೂ ಹೆಚ್ಚು ಕಡೆಗಳಲ್ಲಿ ಸಾಮೂಹಿಕ ಹಬ್ಬದ ವ್ಯವಸ್ಥೆಗಳನ್ನು ಮಾಡಿ ಜನರಿಗೆ ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನನ್ನ ಪ್ರಕಾರ ಡಿಸಿಎಂ ಹುದ್ದೇನೇ ಬೇಡ’ ಎಂದ ರಾಮಲಿಂಗಾ ರೆಡ್ಡಿ!

ಬೆಂಗಳೂರು, ಮೇ 30: ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಇಂದು ಸಂಜೆ ನಾಲ್ಕು ಗಂಟೆಗೆ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ. ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್ ಈಗಾಗಲೇ ಪ್ರಪೋಸ್ ಮಾಡಿರುವ ಕಾರಣ ನಾಯಕನ ಆಯ್ಕೆಯಲ್ಲಿ ಯಾವುದೇ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ರಾಜ್ಯಪಾಲರಿಗೆ ಮಾಹಿತಿ ನೀಡುವ ಔಪಚಾರಿಕ ಸಭೆಯಾಗಿದೆ ಎಂದರು.

ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಡಿಸಿಎಂ ಹುದ್ದೆ ಅನಗತ್ಯ ಎಂಬುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದು ಸಾಂವಿಧಾನಿಕ ಅಥವಾ ಪದವಿಯ ಹುದ್ದೆಯಲ್ಲ, ಹಾಗೂ ಅಂತಹ ಹುದ್ದೆಗಳನ್ನು ಸೃಷ್ಟಿಸಿದರೆ ಇತರ ಸಮುದಾಯಗಳಿಂದ ಬೇಡಿಕೆಗಳು ಹೆಚ್ಚಾಗುತ್ತವೆ ಎಂದರು. ತಮ್ಮ ಹಿರಿತನಕ್ಕೆ ತಕ್ಕಂತೆ ಖಾತೆ ನೀಡಬೇಕು ಎಂದು ಅವರು ನಿರೀಕ್ಷಿಸುತ್ತಿದ್ದು, ಯಾವುದೇ ಖಾತೆಗಾಗಿ ಲಾಬಿ ಮಾಡುವುದಿಲ್ಲ ಎಂದು ತಿಳಿಸಿದರು. ಪ್ರಸ್ತುತ ಮತ್ತು ಭವಿಷ್ಯದ ಸಚಿವ ಸಂಪುಟದಲ್ಲಿ ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸ್ಟಾರ್ ನಟಿಯಾಗಬೇಕಿದ್ದ ಮಿತಾಲಿ ಶರ್ಮ ಕೊನೆಗೆ ಭಿಕ್ಷುಕಿ ಆದ ಕಣ್ಣೀರಿನ ಕಥೆ

ಚಿತ್ರರಂಗ ಎಂದರೆ ಕೋಟಿ ಕೋಟಿ ಹಣ, ಗ್ಲಾಮರ್, ಹೆಸರು ಮತ್ತು ಪ್ರಸಿದ್ಧಿ ಮಾತ್ರ ಅಂದುಕೊಳ್ಳುವವರೇ ಹೆಚ್ಚು. ಪ್ರತಿವರ್ಷ ಸಾವಿರಾರು ಜನ ನಟ-ನಟಿಯರಾಗುವ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಮಾಯಾನಗರಿ ಮುಂಬೈಗೆ ಬರುತ್ತಾರೆ. ಆದರೆ, ಇಲ್ಲಿ ಬಣ್ಣದ ಲೋಕದ ಹೋರಾಟದಲ್ಲಿ ಗೆದ್ದು ನಿಲ್ಲುವವರು ಕೆಲವೇ ಕೆಲವು ಮಂದಿ ಮಾತ್ರ. ಇನ್ನು ಕೆಲವರಿಗೆ ಇಲ್ಲಿ ಎದುರಾಗುವ ಸೋಲನ್ನು ತಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಂತಹದೇ ಒಂದು ಅತ್ಯಂತ ದುಃಖದಾಯಕ ಮತ್ತು ಕರುಣಾಜನಕ ಕಥೆ ಮಾಜಿ ಭೋಜ್‌ಪುರಿ ನಟಿ ಹಾಗೂ ಮಾಡೆಲ್ ಮಿತಾಲಿ ಶರ್ಮ ಅವರದ್ದು.

ಒಂದಾನೊಂದು ಕಾಲದಲ್ಲಿ ಮಿತಾಲಿ ಶರ್ಮ ಭೋಜ್‌ಪುರಿ ಚಿತ್ರರಂಗದ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಅವರು ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ಆರಂಭದಲ್ಲಿ ಮಿತಾಲಿ ನಟಿಸಿದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಪ್ರದರ್ಶನ ಕಂಡಿದ್ದವು. ಇದರಿಂದಾಗಿ ಭೋಜ್‌ಪುರಿ ಚಿತ್ರರಂಗದ ಹಲವು ನಿರ್ಮಾಪಕ ಹಾಗೂ ನಿರ್ದೇಶಕರ ನೆಚ್ಚಿನ ನಟಿಯಾಗಿ ಅವರು ಹೊರಹೊಮ್ಮಿದ್ದರು. ಹೀಗಾಗಿ ಅವರು ಸ್ಟಾರ್ ನಟಿ ಆಗುತ್ತಾರೆ ಎಂದೇ ಅನೇಕರು ಭಾವಿಸಿದ್ದರು.

ಆದರೆ, ಕಾಲ ಉರುಳಿದಂತೆ ಮಿತಾಲಿ ಅವರ ಸಿನಿಮಾ ಬದುಕು ತಲೆಕೆಳಗಾಯಿತು. ದಿನಕಳೆದಂತೆ ಸಿನಿಮಾಗಳ ಅವಕಾಶಗಳು ಕಡಿಮೆಯಾಗುತ್ತಾ ಬಂದು, ಒಂದು ಹಂತದಲ್ಲಿ ಮಿತಾಲಿ ಕೈಯಲ್ಲಿ ಕೆಲಸಗಳೇ ಇಲ್ಲದಂತಾದವು. ಸಿನಿಮಾಗಳಿಲ್ಲದ ಕಾರಣ ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಸದಾ ಅವಕಾಶಕ್ಕಾಗಿ ಹೋರಾಡುವ ಇತರ ಕಲಾವಿದರಂತೆ, ಇವರಿಗೂ ಕೂಡ ಯಾವುದೇ ಸ್ಥಿರವಾದ ಆದಾಯವಿಲ್ಲದೆ ಬದುಕು ನಡೆಸುವುದು ಕಷ್ಟವಾಯಿತು. ವರದಿಗಳ ಪ್ರಕಾರ, ಅವರ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ ದಿನನಿತ್ಯದ ಜೀವನಕ್ಕೂ ಅವರು ತೀವ್ರ ಕಷ್ಟಪಡಬೇಕಾಯಿತು.

ಮೂಲತಃ ದೆಹಲಿಯವರಾದ ಮಿತಾಲಿ ಶರ್ಮ, ನಟಿಯಾಗಬೇಕು ಎಂಬ ಒಂದೇ ಒಂದು ದೊಡ್ಡ ಕನಸನ್ನು ಹೊತ್ತು ತಂದೆ-ತಾಯಿಯನ್ನು ಬಿಟ್ಟು ಮುಂಬೈಗೆ ಬಂದಿದ್ದರು. ಆದರೆ ಅವರು ಮುಂಬೈಗೆ ಬಂದ ನಂತರ, ಅವರ ಕುಟುಂಬದವರು ಕೂಡ ಇವರಿಂದ ದೂರ ಸರಿದು ಸಂಬಂಧವನ್ನು ಕಡಿದುಕೊಂಡಿದ್ದರು ಎನ್ನಲಾಗಿದೆ. ಒಂದೆಡೆ ಕೈಯಲ್ಲಿ ಕೆಲಸವಿಲ್ಲ, ಮತ್ತೊಂದೆಡೆ ಕಷ್ಟ ಕಾಲದಲ್ಲಿ ಸಾಂತ್ವನ ಹೇಳಲು ಕುಟುಂಬದ ಬೆಂಬಲವೂ ಇಲ್ಲ, ಜೊತೆಗೆ ಹೆಚ್ಚುತ್ತಿದ್ದ ಸಾಲದ ಸುಳಿಗೆ ಸಿಲುಕಿದ ಮಿತಾಲಿ ಅವರ ಮಾನಸಿಕ ಆರೋಗ್ಯ ಕೂಡ ಸಂಪೂರ್ಣವಾಗಿ ಕೈಕೊಟ್ಟಿತು.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ

ಅವರ ಜೀವನದ ಅತ್ಯಂತ ಆಘಾತಕಾರಿ ತಿರುವು ಎದುರಾಗಿದ್ದು ಮುಂಬೈನ ಲೋಖಂಡ್‌ವಾಲಾ ಬೀದಿಯಲ್ಲಿ. ಖ್ಯಾತ ನಟಿಯಾಗಿದ್ದ ಮಿತಾಲಿ ಶರ್ಮ ಹಸಿವಿನಿಂದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಹೊಟ್ಟೆಪಾಡಿಗಾಗಿ ಬೀದಿಯಲ್ಲಿ ಕಳ್ಳತನ ಮಾಡಲು ಹೋಗಿ ಅವರು ಸಿಕ್ಕಿಬಿದ್ದಿದ್ದರು ಎಂದು ವರದಿಯಾಗಿದೆ. ಈ ವೇಳೆ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೈಕೋಳ ಹಾಕಲು ಪ್ರಯತ್ನಿಸಿದಾಗ, ಮಾನಸಿಕ ಸಮತೋಲನ ಕಳೆದುಕೊಂಡಿದ್ದ ಮಿತಾಲಿ ಆ ಅಧಿಕಾರಿಗೆ ಬೈದು ಅಲ್ಲಿಂದ ಓಡಿಹೋಗಲು ಯತ್ನಿಸಿದ್ದರು. ಸದ್ಯ ಈ ಘಟನೆ ಇಡೀ ಬಣ್ಣದ ಲೋಕದ ಕರಾಳ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಜನರ ದಾರಿತಪ್ಪಿಸುವ ಜಾಹೀರಾತು: ಎರಡು ಕೋಚಿಂಗ್ ಸಂಸ್ಥೆಗೆ 7 ಲಕ್ಷ ರೂ. ದಂಡ

ನವದೆಹಲಿ, ಮೇ 30: ಯುಪಿಎಸ್‌ಸಿ (UPSC) ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ದಾರಿತಪ್ಪಿಸುವ ಜಾಹೀರಾತು ನೀಡಿದ ಪ್ರಮುಖ ಕೋಚಿಂಗ್ ಸಂಸ್ಥೆ ‘ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್’ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿದೆ. ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘನೆ ಮತ್ತು ಉದ್ದೇಶಪೂರ್ವಕವಾಗಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ.

ದಂಡ ವಿಧಿಸಲು ಮುಖ್ಯ ಕಾರಣಗಳೇನು?
ಮಾಹಿತಿ ಮರೆಮಾಚುವಿಕೆ: 2023ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಹೆಸರು ಮತ್ತು ಫೋಟೋಗಳನ್ನು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ದೊಡ್ಡದಾಗಿ ಪ್ರದರ್ಶಿಸಿತ್ತು. ಆದರೆ, ಆ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಯಾವ ಕೋರ್ಸ್ ಪಡೆದಿದ್ದರು ಎಂಬ ನಿಖರ ಮಾಹಿತಿಯನ್ನು ಮರೆಮಾಚಿತ್ತು.

ದಾರಿತಪ್ಪಿಸುವ ತಂತ್ರ: ಅಭ್ಯರ್ಥಿಗಳು ಕೇವಲ ಉಚಿತ ಸಂದರ್ಶನ ಮಾರ್ಗದರ್ಶನ (IGP)ಪಡೆದಿದ್ದರೂ, ಅವರು ಸಂಸ್ಥೆಯಲ್ಲೇ ಪೂರ್ಣಾವಧಿ ಹಣ ಪಾವತಿಸಿ ಓದಿದ ವಿದ್ಯಾರ್ಥಿಗಳು ಎನ್ನುವಂತೆ ಬಿಂಬಿಸಿ ಗ್ರಾಹಕರನ್ನು ದಾರಿತಪ್ಪಿಸಲಾಗಿತ್ತು.

ಹಕ್ಕುಗಳ ಉಲ್ಲಂಘನೆ: ಎರಡು ಕಠಿಣ ಹಂತಗಳನ್ನು ಸ್ವಂತವಾಗಿ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಕೇವಲ ಸಂದರ್ಶನದ ವೇಳೆ ಮಾರ್ಗದರ್ಶನ ನೀಡಿ, ಇಡೀ ಯಶಸ್ಸು ತಮ್ಮದೇ ಎಂದು ತೋರಿಸಿಕೊಳ್ಳುವುದು ಕಾನೂನುಬಾಹಿರ. ಇದು ವಿದ್ಯಾರ್ಥಿಗಳಿಗೆ ‘ಮಾಹಿತಿ ಪಡೆಯುವ ಹಕ್ಕಿನ’ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಸಿಪಿಎ ಹೇಳಿದೆ.

ಮತ್ತಷ್ಟು ಓದಿ: ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ? ಟಿವಿ9 ಜತೆ ಮನದಾಳ ಬಿಚ್ಚಿಟ್ಟ ಟಾಪರ್

60ಕ್ಕೂ ಹೆಚ್ಚು ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದ ಸಿಸಿಪಿಎ
ತರಬೇತಿ ವಲಯದಲ್ಲಿ ಪಾರದರ್ಶಕತೆ ತರಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಲು ಸಿಸಿಪಿಎ ದೇಶಾದ್ಯಂತ ಭಾರಿ ಕಾರ್ಯಾಚರಣೆ ನಡೆಸುತ್ತಿದೆ.

ದಾರಿತಪ್ಪಿಸುವ ಜಾಹೀರಾತು ನೀಡಿದ ಐಐಟಿ-ಜೆಇಇ (IIT-JEE), ನೀಟ್ (NEET), ಆರ್‌ಬಿಐ (RBI) ಮತ್ತು ಯುಪಿಎಸ್‌ಸಿ ತರಬೇತಿ ನೀಡುವ 60 ಕ್ಕೂ ಹೆಚ್ಚು ಕೋಚಿಂಗ್ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇದುವರೆಗೆ ಇಂತಹ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಒಟ್ಟು 1.46 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದೆ.

ಸಿಸಿಪಿಎ ಸಂದೇಶ: ಯಾವುದೇ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಅಲ್ಲಿನ ಕೋರ್ಸ್‌ಗಳ ಬಗ್ಗೆ ನಿಖರ ಮತ್ತು ಪಾರದರ್ಶಕ ಮಾಹಿತಿ ಪಡೆಯುವ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲು ರಸ್ತೆ, ಆಮೇಲೆ ಚರಂಡಿ: ಹುಬ್ಬಳ್ಳಿಯಲ್ಲಿ ಉಲ್ಟಾ ಪ್ಲ್ಯಾನ್​​​ಗೆ ಕೋಟ್ಯಂತರ ರೂ ಹಣ ನೀರಿನಲ್ಲಿ ಹೋಮ

ಒಳಚರಂಡಿಗಾಗಿ ಅಗೆಯಲಾಗಿರುವ ರಸ್ತೆImage Credit source: tv9 kannada

ಹುಬ್ಬಳ್ಳಿ, ಮೇ 30: ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರದಲ್ಲಿ ನೂರಾರು ಕೋಟಿ ರೂ ಖರ್ಚು ಮಾಡಿದರು ಅಭಿವೃದ್ದಿ ಮಾತ್ರ ಹೇಳಿಕೊಳ್ಳುವಂತೆ ಆಗುತ್ತಿಲ್ಲ. ಬದಲಾಗಿ ಜನರ ಕೋಟಿ ಕೋಟಿ ತೆರಿಗೆ ಹಣವನ್ನು ವ್ಯರ್ಥ ಮಾಡುವ ಪ್ರಯತ್ನಗಳೇ ಹೆಚ್ಚಾಗುತ್ತಿವೆ. ವಿವಿಧ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಕೋಟ್ಯಂತರ ರೂ ಹಣ ಪೋಲಾಗುತ್ತಿದೆ. ಎರಡು ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ (Road) ನಿರ್ಮಾಣ ಮಾಡಲಾಗಿತ್ತು. ಒಳಚರಂಡಿ ನಿರ್ಮಾಣ ಮಾಡಿ ರಸ್ತೆ ಮಾಡಬೇಕಿತ್ತು. ಆದರೆ ಹುಬ್ಬಳ್ಳಿಯಲ್ಲಿ ಮೊದಲು ರಸ್ತೆ ನಿರ್ಮಾಣ ಮಾಡಿ, ಇದೀಗ ಅದೇ ರಸ್ತೆಯನ್ನು ಅಗೆದು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಇದು  ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಗಳನ್ನು ಅಗೆದ ಅಧಿಕಾರಿಗಳು
  • ಅಧಿಕಾರಿಗಳ ಸಮನ್ವಯ ಕೊರತೆ: ಸಾರ್ವಜನಿಕರ ತೆರಿಗೆ ಹಣ ಪೋಲು
  • ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ

ಏಕಾಏಕಿ ರಸ್ತೆ ಅಗೆದ ಅಧಿಕಾರಿಗಳು

ಹುಬ್ಬಳ್ಳಿ ನಗರದ ಎರಡೆತ್ತಿನ ಮಠದ ಮುಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಿಶೇಷ ಅನುದಾನದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವೀರಾಪುರ ಓಣಿಯಿಂದ ಯಲ್ಲಾಪುರ ಓಣಿವರಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸ್ಥಳೀಯರು, ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಹೀಗಾಗಿ ಮೊದಲು ಒಳಚರಂಡಿ ನಿರ್ಮಾಣ ಮಾಡಿ, ನಂತರ ಸಿಸಿ ರಸ್ತೆ ನಿರ್ಮಾಣ ಮಾಡಿ ಅಂತ ಪಾಲಿಕೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದ್ದರಂತೆ. ಆದರೆ ಅಂದು ಸಾರ್ವಜನಿಕರ ಮಾತು ಪರಿಗಣಿಸದ ಅಧಿಕಾರಿಗಳು ಒಳಚಂರಡಿ ಮಾಡದೇ ಸಿಸಿ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿಸಿ ರಸ್ತೆಯನ್ನು ಇದೀಗ ಏಕಾಏಕಿ ಅಗೆಯಲಾಗುತ್ತಿದೆ.

ಇದನ್ನೂ ಓದಿ: ಧಾರವಾಡ ಜನರ ದಶಕಗಳ ಬೇಡಿಕೆ ಈಡೇರುವ ಸಮಯ ಸನಿಹ: ಇದರಿಂದ ಜಿಲ್ಲೆಯ ಜನರಿಗೆ ಎಷ್ಟು ಲಾಭ?

ಈ ಬಗ್ಗೆ ಕೇಳಿದರೆ ಇಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗುತ್ತಿದೆ ಅಂತ ಅಧಿಕಾರಿಗಳು ಹೇಳ್ತಿದ್ದಾರಂತೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಒಳಚರಂಡಿ ಕಾಮಗಾರಿ ಮಾಡಿ ರಸ್ತೆ ನಿರ್ಮಾಣ ಮಾಡುವಂತೆ ಹಲವು ಬಾರಿ ಹೇಳಿದರೂ ಕೇಳದೆ ರಸ್ತೆ ಮಾಡಿದ್ದರು. ಇದೀಗ ಒಳಚರಂಡಿಗಾಗಿ ಎರಡು ವರ್ಷದ ಹಿಂದಷ್ಟೇ ಮಾಡಿದ್ದ ಸಿಸಿ ರಸ್ತೆ ಅಗೆಯುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರ ತೆರಿಗೆ ಹಣ ಪೋಲು

ಕೆಆರ್​ಐಡಿಎಲ್​​ ಸದ್ಯ ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿದೆ. ಅದಕ್ಕಾಗಿ ಸಿಸಿ ರಸ್ತೆಯನ್ನು ಮದ್ಯದಲ್ಲಿಯೇ ಅಗೆಯಲಾಗಿದೆ. ಹೀಗಾಗಿ ಈ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಮಾಡಿದ್ದ ಎರಡು ಕೋಟಿ ರೂ ಜನರ ತೆರಿಗೆ ಹಣ ಪೋಲಾದಂತಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಇದೊಂದೆ ರಸ್ತೆಯಲ್ಲ. ಹುಬ್ಬಳ್ಳಿ-ಧಾರವಾಡದ ಅನೇಕ ಕಡೆ ಹೀಗೆಯೇ ಮಾಡಲಾಗುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕೋಟಿ ಕೋಟಿ ರೂ ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ರಸ್ತೆ ನಿರ್ಮಾಣ ಮಾಡುವುದು, ಬಳಿಕ ಕೆಲವೇ ತಿಂಗಳು, ವರ್ಷಗಳಲ್ಲಿ ಕುಡಿಯುವ ನೀರಿಗಾಗಿ, ಒಳಚರಂಡಿಗಾಗಿ ಅಗೆಯುವ  ಕೆಲಸ ಮಾಡಲಾಗುತ್ತಿದೆ.

ಪಾಲಿಕೆಯ ಮೇಯರ್​​​ ಜೋತಿ ಪಾಟೀಲ್ ಹೇಳಿದ್ದಿಷ್ಟು​​ 

ಉತ್ತಮ ರಸ್ತೆಗಳನ್ನು ಸರಿಮಾಡುವ ಕೆಲಸ ಕೂಡ ಆಗುತ್ತಿಲ್ಲ. ಹೀಗಾಗಿ ಜನರು ಸಂಕಷ್ಟ ಪಡುವಂತಹ ಸ್ಥಿತಿ  ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ಪಾಲಿಕೆಯ ಮೇಯರ್​​​ ಜೋತಿ ಪಾಟೀಲ್​​​​ರನ್ನು ಕೇಳಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತ್ಯಕ ಪಾಲಿಕೆ ಹೋರಾಟಕ್ಕೆ ತೆರೆ: ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು

ಹುಬ್ಬಳ್ಳಿ-ಧಾರವಾಡದಲ್ಲಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅಧಿಕಾರಿಗಳ ಅಂದಾದರ್ಬಾರ್ ನೋಡಿಯೂ ಜನಪ್ರತಿನಿಧಿಗಳು ಸುಮ್ಮನಾಗಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಇದರಿಂದ ಜನರಿಗೆ ನಿತ್ಯ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ಇನ್ನಾದರೂ ವಿವಿಧ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವ ಕೆಲಸವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version