ಬೆಂಗಳೂರು, ಆಗಸ್ಟ್ 10: ಕರ್ನಾಟಕದ ವಿವಿಧ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು (Dam water level)ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಕೃಷ್ಣಾ ನದಿಯಿಂದ ದಾಖಲೆ ಪ್ರಮಾಣದ ನೀರು ಹರಿದುಬರುತ್ತಿದ್ದು, ಇತ್ತ ಮೈಸೂರಿನ ಕಬಿನಿ ಜಲಾಶಯ ಭರ್ತಿಯಾಗಲು ಕೇವಲ ಒಂದೇ ಅಡಿ ಬಾಕಿಯಿದೆ. ಕಾವೇರಿ ಕೊಳ್ಳದ ಕೆಆರ್‌ಎಸ್ ಡ್ಯಾಂನಲ್ಲೂ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
1. ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ ಗರಿಷ್ಠ ಮಟ್ಟಕ್ಕೆ ತಲುಪುತ್ತಿದ್ದು, ಕೃಷ್ಣಾ ನದಿಯಿಂದ ಭಾರಿ ಪ್ರಮಾಣದ ಒಳಹರಿವು ಮುಂದುವರಿದಿದೆ.
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ನೀರಿನ ಮಟ್ಟ: 519.42 ಮೀಟರ್
ಒಳಹರಿವು: 89,777 ಕ್ಯೂಸೆಕ್
ಹೊರಹರಿವು: 41,155 ಕ್ಯೂಸೆಕ್
2. ಕೆಆರ್‌ಎಸ್ ಜಲಾಶಯ
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಒಳಹರಿವು ಸ್ಥಿರವಾಗಿದ್ದು, ಇಂದಿನ ನೀರಿನ ಸಂಗ್ರಹ 30 ಟಿಎಂಸಿ ದಾಟಿದೆ.
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 108.66 ಅಡಿ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ: 30.396 ಟಿಎಂಸಿ
ಒಳಹರಿವು: 11,857 ಕ್ಯೂಸೆಕ್
ಹೊರಹರಿವು: 2,335 ಕ್ಯೂಸೆಕ್
3. ಕಬಿನಿ ಜಲಾಶಯ
ಗರಿಷ್ಠ ಮಟ್ಟ: 84 ಅಡಿ
ಇಂದಿನ ನೀರಿನ ಮಟ್ಟ: 83.04 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಸಂಗ್ರಹ: 18.89 ಟಿಎಂಸಿ
ಒಳಹರಿವು: 12,044 ಕ್ಯೂಸೆಕ್
ಒಟ್ಟು ಹೊರಹರಿವು: 12,000 ಕ್ಯೂಸೆಕ್ (ಕಾಲುವೆಗಳಿಗೆ ನೀರು ಸ್ಥಗಿತ)
ಮೈಸೂರಿನ ಕಬಿನಿ ಜಲಾನಯನ ಪ್ರದೇಶದಲ್ಲಿ 10 ಮಿ.ಮೀ ಮಳೆಯಾಗಿದ್ದು, ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಲು ಕೇವಲ 0.96 ಅಡಿ ಮಾತ್ರ ಬಾಕಿಯಿದೆ. ಸುರಕ್ಷತೆಯ ದೃಷ್ಟಿಯಿಂದ ನದಿಗೆ ಭಾರಿ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಂಪಿ, ಆಗಸ್ಟ್ 10:ಹಂಪಿಯ ಜೈನ ದೇಗುಲದ ಬಳಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಪುರಾತತ್ವ ತಜ್ಞರು ಎರಡು ಮಹತ್ವದ ಶಿಲ್ಪಗಳನ್ನು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಒಂದು ದೇವತಾ ಸ್ವರೂಪದ ನಾಗಿಣಿ ಶಿಲ್ಪವಾಗಿದ್ದು, ಮತ್ತೊಂದು ಹಿಂದೂ ಸಂಪ್ರದಾಯದಲ್ಲಿ ಮಹತ್ವ ಪಡೆದ ಪೌರಾಣಿಕ ಪಕ್ಷಿ ಗರುಡನ ಶಿಲ್ಪ ಎಂದು ಅಂದಾಜಿಸಲಾಗಿದೆ. ಈ ಶಿಲ್ಪಗಳ ಪತ್ತೆಯು ಐತಿಹಾಸಿಕ ನಗರಿ ಹಂಪಿಯಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಆಚರಣೆಗಳು, ಕಲಾ ಪರಂಪರೆ ಹಾಗೂ ವಿವಿಧ ಸಂಸ್ಕೃತಿಗಳ ನಡುವಿನ ಸಂವಹನದ ಕುರಿತು ಮಹತ್ವದ ಸುಳಿವುಗಳನ್ನು ಒದಗಿಸುವ ನಿರೀಕ್ಷೆಯಿದೆ.
ಶಿಲ್ಪಗಳ ಗಾತ್ರ ಎಷ್ಟಿದೆ?
ಪತ್ತೆಯಾದ ಶಿಲ್ಪಗಳಲ್ಲಿ ಒಂದು ಮಾನವ ಹಾಗೂ ಸರ್ಪದ ಲಕ್ಷಣಗಳನ್ನು ಹೊಂದಿರುವ ಸ್ತ್ರೀ ರಕ್ಷಕ ರೂಪದ ನಾಗಿಣಿಯನ್ನು ಚಿತ್ರಿಸುತ್ತದೆ. ಮತ್ತೊಂದು ಶಿಲ್ಪವು ತಲೆ ಇಲ್ಲದ ಹದ್ದಿನಾಕಾರದ ದೈವಿಕ ರೂಪದಲ್ಲಿ ಗರುಡನನ್ನು ಚಿತ್ರಿಸಿದೆ. ಗರುಡ ಶಿಲ್ಪವು 32 ಸೆಂ.ಮೀ ಅಗಲ ಮತ್ತು 37 ಸೆಂ.ಮೀ ಉದ್ದವಿದ್ದು, ನಾಗಿಣಿ ಶಿಲ್ಪವು 30 ಸೆಂ.ಮೀ ಅಗಲ ಹಾಗೂ 51 ಸೆಂ.ಮೀ ಉದ್ದವಾಗಿದೆ. ಉತ್ತಮ ಸ್ಥಿತಿಯಲ್ಲಿ ಸಂರಕ್ಷಿತವಾಗಿರುವ ಈ ಶಿಲ್ಪಗಳನ್ನು ಜೈನ ದೇಗುಲದ ಸುತ್ತಮುತ್ತ ನಡೆಯುತ್ತಿರುವ ಪುರಾತತ್ವ ತನಿಖೆಯ ಭಾಗವಾಗಿ ದಾಖಲಿಸಲಾಗುತ್ತಿದೆ.
ಉತ್ಖನನದ ವೇಳೆ ವಿವಿಧ ಧಾರ್ಮಿಕ ಹಾಗೂ ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಶಿಲ್ಪಗಳು ಬೆಳಕಿಗೆ ಬಂದಿವೆ. ಅವುಗಳ ಶಿಲ್ಪಲಕ್ಷಣಗಳು ಮತ್ತು ಪತ್ತೆಯಾದ ಸ್ಥಳವನ್ನು ವಿವರವಾಗಿ ಅಧ್ಯಯನ ಮಾಡಲಾಗುವುದು. ಈ ಮೂಲಕ ಈ ಶಿಲ್ಪಗಳು ಆ ಪ್ರದೇಶದಲ್ಲಿರುವ ರಚನೆಗಳೊಂದಿಗೆ ಹೊಂದಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ. ರಾಮಕೃಷ್ಣ ರೆಡ್ಡಿ ಅವರು ತಿಳಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಹಿಂದೂ ಮತ್ತು ಜೈನ ಧಾರ್ಮಿಕ ಪ್ರಭಾವ ಸೇರಿದಂತೆ ವಿವಿಧ ಧಾರ್ಮಿಕ ಪರಂಪರೆಗಳನ್ನು ಪ್ರತಿಬಿಂಬಿಸುವ ಸ್ಮಾರಕಗಳು ಮತ್ತು ಪುರಾತತ್ವ ಅವಶೇಷಗಳಿವೆ. ಸಂರಕ್ಷಿತ ಪಾರಂಪರಿಕ ವಲಯದ ಸುತ್ತಮುತ್ತ ನಡೆಯುತ್ತಿರುವ ಉತ್ಖನನಗಳಲ್ಲಿ ರಚನೆಗಳ ಅವಶೇಷಗಳು, ಶಿಲ್ಪಗಳು, ವಾಸ್ತುಶಿಲ್ಪದ ತುಣುಕುಗಳು ಹಾಗೂ ಇತರ ಪುರಾತತ್ವ ವಸ್ತುಗಳು ನಿರಂತರವಾಗಿ ಪತ್ತೆಯಾಗುತ್ತಿವೆ. ಹೊಸದಾಗಿ ಪತ್ತೆಯಾಗಿರುವ ಶಿಲ್ಪಗಳ ಕಾಲಮಾನ ಹಾಗೂ ಅವುಗಳನ್ನು ಮೂಲತಃ ಯಾವ ಸ್ಥಳದಲ್ಲಿ ಇರಿಸಲಾಗಿತ್ತು ಎಂಬುದರ ಕುರಿತು ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಅವುಗಳನ್ನು ಸಮರ್ಪಕವಾಗಿ ದಾಖಲಿಸಿ, ವಿವರವಾಗಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಜಸ್ಥಾನ, ಆ.10 : ಮನೆಯವರಿಗೆ ತಿಳಿಸದೆ, ಕಷ್ಟಪಟ್ಟು ಸಂಪಾದಿಸಿದ 5 ಲಕ್ಷ ರೂಪಾಯಿ ಹಣವನ್ನು ಜಮೀನಿನಲ್ಲಿ ಹೂತುಹಾಕಿದ್ದ ರೈತನೊಬ್ಬನಿಗೆ ಈಗ ಭಾರೀ ಆಘಾತ ಎದುರಾಗಿದೆ. ಜಮೀನಿನ ಅಡಿಯಲ್ಲಿ ಮುಚ್ಚಿಟ್ಟಿದ್ದ ಸಂಪೂರ್ಣ ಹಣವನ್ನು ಗೆದ್ದಲುಗಳು ತಿಂದಿದ್ದು (Termites), ಹಣವೆಲ್ಲ ಸಂಪೂರ್ಣ ಹಾಳಾಗಿ ಹೋಗಿದೆ. ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಚಪದ್ರಾ ನಿವಾಸಿ ರಂಗು ಅಲಿಯಾಸ್ ಮಾಂಗಿಲಾಲ್ ಮೇಘವಾಲ್ ಎಂಬ ರೈತನ ಗದ್ದೆಯಲ್ಲಿ ನಡೆದಿದೆ.
ಜಮೀನಿನಲ್ಲಿ ಶೆಡ್ ನಿರ್ಮಿಸಲು ಮಾಂಗಿಲಾಲ್ 5 ಲಕ್ಷ ರೂಪಾಯಿ ನಗದನ್ನು ಕಾಯ್ದಿರಿಸಿದ್ದರು. ಮನೆಯಲ್ಲಿಟ್ಟರೆ ಕಳುವಾಗಬಹುದು ಅಥವಾ ಮನೆಯವರು ಖರ್ಚು ಮಾಡಬಹುದು ಎಂಬ ಭಯದಿಂದ, ಯಾರಿಗೂ ತಿಳಿಸದೆ ರಾತ್ರೋರಾತ್ರಿ ಪ್ಲಾಸ್ಟಿಕ್ ಚೀಲದಲ್ಲಿ ಹಣ ಸುತ್ತಿ ಜಮೀನಿನಲ್ಲಿ ಹೂತುಹಾಕಿದ್ದರು.
ಮಾಂಗಿಲಾಲ್ ಅವರಿಗೆ ಮರೆವಿನ ಕಾಯಿಲೆ ಇತ್ತು. ಹಣದ ಅಗತ್ಯ ಬಿದ್ದಾಗ, ಜಮೀನಿನಲ್ಲಿ ಎಲ್ಲಿ ಹೂತುಹಾಕಿದ್ದೇನೆ ಎಂಬುದನ್ನೇ ಅವರು ಮರೆತುಹೋದರು. 10 ಬಿಘಾ ಜಮೀನನ್ನು ಎಷ್ಟೇ ಅಗೆದು ಹುಡುಕಿದರೂ ಹಣ ಸಿಗಲಿಲ್ಲ. ನಂತರ ಕುಟುಂಬದವರಿಗೂ ವಿಷಯ ತಿಳಿಸಿ ಎಲ್ಲರೂ ಹುಡುಕಿದರೂ ಪತ್ತೆಯಾಗಲಿಲ್ಲ.
ಇಲ್ಲಿದೆ ನೋಡಿ ವಿಡಿಯೋ:
जमीन में पैसे कौन दबाता है इस किसान ने अपना प्लोट बेचकर चोरी के डर से 5 लाख रूपये ज़मीन में दबा दिए।
ಇತ್ತೀಚೆಗೆ ಮಳೆಗಾಲದ ಹಿನ್ನೆಲೆಯಲ್ಲಿ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಪ್ಲಾಸ್ಟಿಕ್ ಚೀಲ ಮೇಲಕ್ಕೆ ಬಂದಿದೆ. ಮರುದಿನ ಬೆಳಿಗ್ಗೆ ಜಮೀನಿಗೆ ಹೋದಾಗ ಪ್ಲಾಸ್ಟಿಕ್ ಬ್ಯಾಗ್ ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ ಒಳಗಿದ್ದ 5 ಲಕ್ಷ ರೂ. ಮೌಲ್ಯದ ನೋಟುಗಳನ್ನು ಗೆದ್ದಲುಗಳು ಸಂಪೂರ್ಣವಾಗಿ ತಿಂದಿರುವುದು ಕಂಡುಬಂದಿದೆ.
ಸಂಪೂರ್ಣ ಹಾಳಾಗಿದ್ದ ನೋಟುಗಳನ್ನು ತೆಗೆದುಕೊಂಡು ಕುಟುಂಬಸ್ಥರು ಪಚಪದ್ರಾ ಎಸ್‌ಬಿಐ (SBI) ಶಾಖೆಗೆ ಹಾಗೂ ನಂತರ ಬಾಲೋತ್ರಾದ ಮುಖ್ಯ ಶಾಖೆಗೆ ತೆರಳಿದರು. ಆದರೆ, ನೋಟುಗಳ ಸ್ಥಿತಿ ತೀರಾ ಕೆಟ್ಟದಾಗಿದ್ದರಿಂದ ಸ್ಥಳೀಯ ಬ್ಯಾಂಕ್‌ಗಳು ಅವುಗಳನ್ನು ಸ್ವೀಕರಿಸಲು ನಿರಾಕರಿಸಿವೆ.
ಜೈಪುರದಲ್ಲಿರುವ ರಿಸರ್ವ್ ಬ್ಯಾಂಕ್ (RBI) ಅಥವಾ ಎಸ್‌ಬಿಐ ಮುಖ್ಯ ಕಚೇರಿಗೆ ತೆರಳಿದರೆ ಪರಿ ಪರಿಶೀಲನೆ ನಡೆಸಿ ಬದಲಾಯಿಸಿಕೊಳ್ಳಬಹುದು ಎಂದು ಬ್ಯಾಂಕ್ ಸಿಬ್ಬಂದಿ ಸಲಹೆ ನೀಡಿದ್ದಾರೆ. ಆದರೆ ತೀವ್ರ ಬಡತನದಲ್ಲಿರುವ ಕುಟುಂಬಕ್ಕೆ ಜೈಪುರಕ್ಕೆ ಪ್ರಯಾಣಿಸಲು ಸಾಲದ ಹಣವೂ ಇಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ (CWG 2026) ಭಾರತದ ಕೀರ್ತಿ ಪತಾಕೆ ಹಾರಿಸಿ ಮರಳಿದ ಕ್ರೀಡಾಪಟುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಆಗಸ್ಟ್ 9, 2026) ದೆಹಲಿಯ ತಮ್ಮ ಅಧಿಕೃತ ನಿವಾಸವಾದ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಬರಮಾಡಿಕೊಂಡು ಆತ್ಮೀಯವಾಗಿ ಗೌರವಿಸಿದರು.
ಕ್ರೀಡಾಕೂಟದಲ್ಲಿ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳನ್ನು ಜಯಿಸಿ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ತಂಡದ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಶ್ಲಾಘಿಸಿದರು. ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ಜೋ ಖೇಲೇಗಾ, ವೋ ಖಿಲೇಗಾ”:
ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಅವರ ಅನುಭವಗಳನ್ನು ಆಲಿಸಿದರು. ಇದೇ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಅವರು, “ಜೋ ಖೇಲೇಗಾ, ವೋ ಖಿಲೇಗಾ” (ಯಾರು ಆಡುತ್ತಾರೋ, ಅವರು ಯಶಸ್ಸು ಸಾಧಿಸುತ್ತಾರೆ) ಎಂಬ ಸ್ಪೂರ್ತಿದಾಯಕ ಘೋಷಣೆ ಮೊಳಗಿಸಿ, ದೇಶದ ಜನತೆಗೆ ಸದಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಬಾಕ್ಸಿಂಗ್ ತಾರೆಯರ ಮೆರಗು:
ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸಿಂಗ್ ತಂಡ 7 ಚಿನ್ನ ಸೇರಿದಂತೆ ದಾಖಲೆಯ 10 ಪದಕಗಳನ್ನು ಗೆದ್ದು ಬೀಗಿತ್ತು. ಮಹಿಳೆಯರ 51 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಸಾಕ್ಷಿ ಚೌಧರಿ ಪ್ರಧಾನಿಯವರ ಸರಳತೆಯನ್ನು ಕೊಂಡಾಡಿದ್ದು, “ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ನಮಗೆ ಹೆಮ್ಮೆಯ ಕ್ಷಣ” ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದೇ ವೇಳೆ ಸ್ಟಾರ್ ವೇಟ್‌ಲಿಫ್ಟರ್ ಸಾಯಿಖೋಮ್ ಮೀರಾಬಾಯಿ ಚಾನು ಅವರೊಂದಿಗೂ ಪ್ರಧಾನಿ ಮೋದಿ ಅವರು ಪ್ರತ್ಯೇಕವಾಗಿ ಮಾತನಾಡಿದರು. ಕ್ರೀಡಾಕೂಟದ ವೇದಿಕೆಯಲ್ಲಿ ಅನುಭವಿಸಿದ ಸವಾಲುಗಳು, ಗಾಯದ ಸಮಸ್ಯೆಗಳನ್ನು ಮೆಟ್ಟಿ ನಿಂತು ಪದಕ ಗೆದ್ದ ಅವರ ಜರ್ನಿ ಮತ್ತು ಸ್ಪರ್ಧೆಯ ಸಮಯದಲ್ಲಿದ್ದ ವಾತಾವರಣದ ಬಗ್ಗೆ ಮೋದಿ ಅವರು ಪ್ರೀತಿಯಿಂದ ವಿಚಾರಿಸಿದರು.
ಈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಾಗ ಮೀರಾಬಾಯಿ ಅವರು ಕಣ್ಣೀರು ಹಾಕಿದ್ದರು. ಆ ಕ್ಷಣವನ್ನು ಪ್ರಧಾನಿ ಮೋದಿ ಅವರು ನೆನಪಿಸಿಕೊಂಡಾಗ ಮೀರಾಬಾಯಿ ಅತ್ಯಂತ ಭಾವುಕರಾಗಿ ಉತ್ತರಿಸಿದರು.
“ಸರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೇವಲ 1 ಕೆಜಿ ತೂಕದ ವ್ಯತ್ಯಾಸದಿಂದಾಗಿ ನನಗೆ ಪದಕ ಕೈತಪ್ಪಿತ್ತು. ಒಬ್ಬ ಕ್ರೀಡಾಪಟು ತನ್ನ ಜೀವನದಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದು ಆ ಕ್ಷಣದಲ್ಲಿ ನನಗೆ ಅರ್ಥವಾಗಿತ್ತು. ಕಳೆದ 4 ವರ್ಷಗಳಲ್ಲಿ ನಾನು ಸಾಲು ಸಾಲು ಗಾಯದ ಸಮಸ್ಯೆಗಳು ಮತ್ತು ಕೌಟುಂಬಿಕ ಸವಾಲುಗಳನ್ನು ಎದುರಿಸಬೇಕಾಗಿ ಬಂತು. ಅತ್ಯಂತ ಕಠಿಣ ಪರಿಶ್ರಮದಿಂದ ಆ ಕಷ್ಟದ ದಿನಗಳನ್ನು ದಾಟಿ ಬಂದು ನಾನು ಈ ಗ್ಲ್ಯಾಸ್ಗೋ ಕ್ರೀಡಾಕೂಟದ ಪೋಡಿಯಂ ಮೇಲೆ ನಿಂತಿದ್ದೆ.”
“ಯಾವಾಗ ಅಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜ ಮೇಲಕ್ಕೆ ಹಾರುತ್ತಾ, ರಾಷ್ಟ್ರಗೀತೆ ಮೊಳಗಲು ಆರಂಭಿಸಿತೋ, ಆಗ ಸರ್ ನನ್ನ ಕೈಯಲ್ಲಿ ಕಣ್ಣೀರು ತಡೆಯಲು ಸಾಧ್ಯವೇ ಆಗಲಿಲ್ಲ. ಆ ಭಾವುಕ ಕ್ಷಣದಲ್ಲಿ ನನ್ನ ಕಣ್ಣಿನಿಂದ ತಾನಾಗಿಯೇ ಆನಂದಬಾಷ್ಪ ಉರುಳಿದವು.”
“ಸರ್, ಯಾವುದೇ ದೊಡ್ಡ ಕ್ರೀಡಾಕೂಟಕ್ಕೆ ಹೋಗುವ ಮುನ್ನ ಮತ್ತು ಅಲ್ಲಿಂದ ವಾಪಸ್ ಬಂದ ನಂತರವೂ ನೀವು ನಮ್ಮನ್ನು ಭೇಟಿಯಾಗಿ ನೀಡುವ ಪ್ರೋತ್ಸಾಹ ಅದ್ಭುತವಾದದ್ದು. ನೀವು ನೀಡುವ ಆ ಧೈರ್ಯದಿಂದಾಗಿಯೇ ನಾವು ‘ಭಾರತಕ್ಕಾಗಿ ಏನನ್ನಾದರೂ ಸಾಧಿಸಿ ತೋರಿಸಬೇಕು’ ಎಂಬ ದೊಡ್ಡ ಹಠದೊಂದಿಗೆ ಕಣಕ್ಕಿಳಿಯುತ್ತೇವೆ.” ಎಂದು ಮೀರಾಬಾಯಿ ಚಾನು ಹೇಳಿದ್ದಾರೆ.
ಯುವಕರಿಗೆ ಹೊಸ ಸ್ಫೂರ್ತಿ:
ಅಥ್ಲೀಟ್‌ಗಳ ಕಠಿಣ ಪರಿಶ್ರಮ ಮತ್ತು ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಬದ್ಧತೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಈ ಐತಿಹಾಸಿಕ ಯಶೋಗಾಥೆಯು ಭಾರತದ ಕೋಟ್ಯಂತರ ಯುವಕರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ದೊಡ್ಡ ಪ್ರೇರಣೆಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ತೋರಿದ ಅಪ್ರತಿಮ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಈ ಆತ್ಮೀಯ ಸಂವಾದವು ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಭರವಸೆಯ ಅಧ್ಯಾಯವನ್ನು ಬರೆದಿದೆ.
ಕ್ರೀಡಾಪಟುಗಳ ಕಠಿಣ ಪರಿಶ್ರಮಕ್ಕೆ ಪ್ರಧಾನಿಯವರು ನೀಡಿದ ಗೌರವ ಮತ್ತು “ಜೋ ಖೇಲೇಗಾ, ವೋ ಖಿಲೇಗಾ” ಎಂಬ ಸ್ಪೂರ್ತಿದಾಯಕ ಸಂದೇಶವು ಕೇವಲ ಪದಕ ವಿಜೇತರಿಗೆ ಸೀಮಿತವಾಗಿರದೆ, ದೇಶದ ಕೋಟ್ಯಂತರ ಯುವ ಪ್ರತಿಭೆಗಳಿಗೆ ಕ್ರೀಡಾ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ದಾರಿದೀಪವಾಗಲಿದೆ.
ಬಹಳ ಹಿಂದಿನಿಂದಲೂ ಕಲ್ಲಿದ್ದಲು, ತೈಲದಂತಹ ಪಳೆಯುಳಿಕೆ ಇಂಧನಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದಾಗಿ ಇಂಧನ ಮೂಲಗಳು ಕ್ಷೀಣಿಸುತ್ತಿರುವುದಲ್ಲದೆ, ಈ ಇಂಧನಗಳ ಅತಿಯಾದ ಬಳಕೆ ಪರಿಸರಕ್ಕೂ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತಿವೆ. ಹೌದು ಇವುಗಳ ಅನಿಯಂತ್ರಿತ ಬಳಕೆ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ವಾಯು ಮಾಲಿನ್ಯ, ಹಸಿರು ಮನೆ ಅನಿಲದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಹಾಗಾಗಿ ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಿ, ಪರಿಸರಸ್ನೇಹಿಯಾದ ಜೈವಿಕ ಇಂಧನದ (biofuels) ಬಳಕೆಯನ್ನು ಉತ್ತೇಜಿಸಲು ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೈವಿಕ ಇಂಧನ ಬಳಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ.
ವಿಶ್ವ ಜೈವಿಕ ಇಂಧನ ದಿನದ ಇತಿಹಾಸವೇನು?
ಜೈವಿಕ ಇಂಧನಗಳ ಮಹತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅವುಗಳ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಡೀಸೆಲ್ ಎಂಜಿನ್‌ನ ಸಂಶೋಧಕ ಸರ್ ರುಡಾಲ್ಫ್ ಡೀಸೆಲ್ ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಆಗಸ್ಟ್ 8, 1893 ರಂದು, ಸರ್ ಡೀಸೆಲ್ ಮೊದಲ ಬಾರಿಗೆ ಕಡಲೆಕಾಯಿ ಎಣ್ಣೆಯನ್ನು ಯಾಂತ್ರಿಕ ಎಂಜಿನ್‌ಗೆ ಶಕ್ತಿ ತುಂಬಲು ಯಶಸ್ವಿಯಾಗಿ ಬಳಸಿದರು. ಇದು ಭವಿಷ್ಯದಲ್ಲಿ ಸಸ್ಯಜನ್ಯ ಎಣ್ಣೆ ಪಳೆಯುಳಿಕೆ ಇಂಧನಗಳನ್ನು ಬದಲಾಯಿಸಬಹುದೆಂಬ ಕಲ್ಪನೆಯನ್ನು ಹುಟ್ಟುಹಾಕಿತು. ಈ ಸಾಧನೆಯನ್ನು ಆಚರಿಸಲು ಮತ್ತು ಜೈವಿಕ ಇಂಧನದ ಬಳಕೆಯ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು, ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. 2015 ರಿಂದ ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭಾರತದಲ್ಲೂ ಇದನ್ನು ಆಚರಿಸುತ್ತಿದೆ.
ವಿಶ್ವ ಜೈವಿಕ ಇಂಧನ ದಿನದ ಮಹತ್ವವೇನು?
ಕಚ್ಚಾ ತೈಲದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ವಚ್ಛ ಪರಿಸರವನ್ನು ಖಚಿತಪಡಿಸಿಕೊಳ್ಳಲು ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ.
ಪಳೆಯುಳಿಕೆ ಇಂಧನಗಳು ಗಾಳಿ ಮತ್ತು ಪರಿಸರಕ್ಕೆ ತುಂಬಾ ಹಾನಿಕಾರಕವಾದ ಇಂಗಾಲದ ಹೊರಸೂಸುವಿಕೆ ಉಂಟಾಗುತ್ತದೆ. ಅದೇ ಜೈವಿಕ ಇಂಧನಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.
ಜೈವಿಕ ಇಂಧನ ಎಂದರೇನು?
ಸಸ್ಯಗಳು, ಬೆಳೆಗಳು ಮತ್ತು ಪ್ರಾಣಿಗಳ ತ್ಯಾಜ್ಯದಂತಹ ಜೈವಿಕ ಮೂಲಗಳಿಂದ ಪಡೆದ ಜೈವಿಕ ಇಂಧನವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗೆ ಉತ್ತಮ ಪರ್ಯಾಯವಾಗಿದೆ. ಸಸ್ಯಗಳು, ಕೃಷಿ ತ್ಯಾಜ್ಯ, ಬೆಳೆಗಳು, ಪಾಚಿ ಇತ್ಯಾದಿಗಳಂತಹ ಜೀವರಾಶಿಯಿಂದ ಪಡೆದ ಯಾವುದೇ ಇಂಧನವನ್ನು ಜೈವಿಕ ಇಂಧನ ಎಂದು ಕರೆಯಲಾಗುತ್ತದೆ.
ಜೈವಿಕ ಇಂಧನ ಬಳಕೆಯ ಪ್ರಯೋಜನಗಳೇನು?
ಪಳೆಯುಳಿಕೆ ಇಂಧನಗಳಿಗೆ ಹೋಲಿಸಿದರೆ ಜೈವಿಕ ಇಂಧನಗಳು ಪರಿಸರಕ್ಕೆ ಅಷ್ಟೇನೂ ಹಾನಿಕಾರಕವಲ್ಲ.
ನವೀಕರಿಸಬಹುದಾದ ಈ ಜೈವಿಕ ಇಂಧನ ಶಕ್ತಿಯು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುತ್ತದೆ.
ಹೆಚ್ಚುವರಿಯಾಗಿ, ಜೈವಿಕ ಇಂಧನಗಳು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.
ಜೈವಿಕ ಇಂಧನದ ದೊಡ್ಡ ಪ್ರಯೋಜನವೆಂದರೆ ಅದು ಮಾಲಿನ್ಯವನ್ನು ನಿಯಂತ್ರಿಸುತ್ತದೆ.
ಇದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಕೊಯ್ಲು ಮಾಡಿದ ನಂತರ ಬೆಳೆಯಿಂದ ವ್ಯರ್ಥವಾಗುವ ಭಾಗವನ್ನು ಜೈವಿಕ ಇಂಧನ ತಯಾರಿಸಲು ಬಳಸಬಹುದು.
ಬೆಳೆಯ ತ್ಯಾಜ್ಯ ಭಾಗವನ್ನು ಬಳಸುವುದರಿಂದ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರೈತರ ಆದಾಯವೂ ಹೆಚ್ಚಾಗುತ್ತದೆ.
ಮಾಹಿತಿಯ ಪ್ರಕಾರ, ಅಮೆರಿಕ ವಿಶ್ವದ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜೈವಿಕ ಇಂಧನ ಉತ್ಪಾದನೆಯ ಅತಿದೊಡ್ಡ ಮೂಲವೆಂದರೆ ಜೋಳ. ಜೋಳದಿಂದ ಎಥೆನಾಲ್ ಉತ್ಪಾದಿಸಲಾಗುತ್ತದೆ. ಈ ಎಥೆನಾಲ್ ಅನ್ನು ಗ್ಯಾಸೋಲಿನ್‌ನೊಂದಿಗೆ ಬೆರೆಸಲಾಗುತ್ತದೆ, ಇದು ಗ್ಯಾಸೋಲಿನ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಯುನೈಟೆಡ್ ಸ್ಟೇಟ್ಸ್ ನಂತರ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಜೈವಿಕ ಇಂಧನ ಉತ್ಪಾದನೆಯಲ್ಲಿ ಇಂಡೋನೇಷ್ಯಾ ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೀನಾ ನಾಲ್ಕನೇ ಸ್ಥಾನದಲ್ಲಿದೆ.
ಭಾರತವು ವಿಶ್ವದ ಐದನೇ ಪ್ರಮುಖ ಜೈವಿಕ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಭಾರತದ ಪ್ರಾಥಮಿಕ ಗಮನವು ಎಥೆನಾಲ್ ಮಿಶ್ರಣದಲ್ಲಿದೆ. ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಮೂಲಕ, ಭಾರತವು ಪೆಟ್ರೋಲಿಯಂ ಆಮದುಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ. ಕಬ್ಬಿನ ಜೊತೆಗೆ, ಜೋಳ, ಮುರಿದ ಅಕ್ಕಿ ಮತ್ತು ಇತರ ಅನುಮತಿಸಲಾದ ಕೃಷಿ ಮೂಲಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಭಾರತಕ್ಕೆ ಜೈವಿಕ ಇಂಧನಗಳ ಪ್ರಾಮುಖ್ಯತೆಯು ಕೇವಲ ಇಂಧನ ಶಕ್ತಿಯ ಸಂರಕ್ಷಣೆಗೆ ಸೀಮಿತವಾಗಿಲ್ಲ. ಇದು ರೈತರ ಆದಾಯ ಹೆಚ್ಚಿಸಲೂ ಸಹಾಯ ಮಾಡುತ್ತಿದೆ.
ಬೆಂಗಳೂರು, ಆಗಸ್ಟ್ 10: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜಿಬಿಎ (GBA) ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರಸ್ನೇಹಿ ಹಬ್ಬದ ಆಚರಣೆಗೆ ಕರೆ ನೀಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಿದೆ.
ಪಿಓಪಿ ಮತ್ತು ರಾಸಾಯನಿಕ ಬಣ್ಣಗಳಿಗೆ ಸಂಪೂರ್ಣ ನಿರ್ಬಂಧ
ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP), ಭಾರ ಲೋಹಗಳನ್ನು (Heavy Metals) ಒಳಗೊಂಡ ರಾಸಾಯನಿಕ ಬಣ್ಣಗಳು ಮತ್ತು ಜೈವಿಕ ವಿಘಟನೆಯಾಗದ ಕೃತಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ಜಲಮೂಲಗಳಲ್ಲಿ ಅವುಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಜಲಮೂಲಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಇಂತಹ ವಿಷಕಾರಿ ರಾಸಾಯನಿಕಯುಕ್ತ ಮೂರ್ತಿಗಳನ್ನು ನಗರದ ಕೆರೆ, ಬಾವಿ ಸೇರಿದಂತೆ ಪ್ರಮುಖ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ತೀವ್ರ ಜಲಮಾಲಿನ್ಯ ಉಂಟಾಗುತ್ತಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, “ಹಬ್ಬದ ದಿನಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ನೀರಿಗೆ ಬಿಡುವುದರಿಂದ ನೀರು ಮತ್ತು ಭೂಮಿ ಎರಡೂ ಕಲುಷಿತಗೊಳ್ಳುತ್ತಿವೆ. ಇದು ಒಟ್ಟಾರೆ ಪರಿಸರ ವ್ಯವಸ್ಥೆ ಹಾಗೂ ಜಲಚರಗಳಿಗೆ ಭಾರಿ ಹಾನಿ ಉಂಟುಮಾಡುತ್ತಿದೆ,” ಎಂದು ತಿಳಿಸಿದ್ದಾರೆ.
ಪರಿಸರಸ್ನೇಹಿ ಗಣಪತಿ ಬಳಕೆಗೆ ಅಧಿಕಾರಿಗಳ ಮನವಿ
ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತು, ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳು ಕೇವಲ ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ಮಾಡಿದ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಕಿಂಗ್ ಸ್ಟಾರ್ ಯಶ್ ಅವರು ತುಂಬಾನೇ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅವರು ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ‘ಟಾಕ್ಸಿಕ್’ (Toxic Movie) ಹಾಗೂ ರಾಮಾಯಣದಂತಹ ಬಿಗ್ ಬಜೆಟ್ ಸಿನಿಮಾ ಅವರ ಕೈಯಲ್ಲಿ ಇದೆ. ಇಷ್ಟೆಲ್ಲ ಎತ್ತರಕ್ಕೆ ಬೆಳೆದರೂ ಅವರಿಗೆ ತಮಗಿಂತಲೂ ಹಿರಿಯ ನಟರ ಮೇಲೆ ಇರುವ ಗೌರವ ಹಾಗೂ ಪ್ರೀತಿ ಸ್ವಲ್ಪವೂ ಕಡಿಮೆ ಆಗಿಲ್ಲ. ಇದಕ್ಕೆ ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಈವೆಂಟ್ನಲ್ಲಿ ನಡೆದ ಘಟನೆಯೇ ಉತ್ತಮ ಸಾಕ್ಷಿ.
‘ಟಾಕ್ಸಿಕ್’ ಸಿನಿಮಾದ ಈವೆಂಟ್ ಬೆಂಗಳೂರಿನ ಎಎಂಬಿ ಸಿನಿಮಾಸ್ನಲ್ಲಿ ನಡೆದಿದೆ. ಈ ಈವೆಂಟ್ಗೆ ಇಡೀ ಟಾಕ್ಸಿಕ್ ತಂಡ ಹಾಜರಿತ್ತು. ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು. ಶಿವರಾಜ್‌ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಲಾಂಚ್ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ವೇದಿಕೆ ಮೇಲೆ ಬಂದು ಇಡೀ ತಂಡಕ್ಕೆ ಹರಸಿದರು.
‘ಟಾಕ್ಸಿಕ್’ ಟ್ರೇಲರ್ ಲಾಂಚ್ ಮಾಡಿದ ಬಳಿಕ ಶಿವರಾಜ್‌ಕುಮಾರ್ ಬೇರೆ ಅನಿವಾರ್ಯ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟು ನಿಂತರು. ಆಗ ಶಿವಣ್ಣ ಅವರು ತಮ್ಮ ಬಾಡಿಗಾರ್ಡ್ಗೆ ಕಣ್ಣಲ್ಲೇ ಸನ್ನೆ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.
‘ಶಿವಣ್ಣ ಹೊರಟಿದ್ದಾರೆ. ಅವರನ್ನು ಕಾರಿನವರೆಗೆ ಬಿಟ್ಟು ಬನ್ನಿ’ ಎಂದು ರಾಕಿ ಭಾಯ್ ತಮ್ಮ ಬಾಡಿಗಾರ್ಡ್ಗೆ ಹೇಳಿದರು. ತಕ್ಷಣ ಬಾಡಿಗಾರ್ಡ್ ಶಿವರಾಜ್‌ಕುಮಾರ್ ಅವರಿಗೆ ಬೆಂಗಾವಲಾಗಿ ಕಾರಿನವರೆಗೆ ಬಿಟ್ಟು ಬಂದಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಯಶ್ ಅವರ ಈ ಕಾಳಜಿಯನ್ನು ಎಲ್ಲರೂ ಕೊಂಡಾಡಿದ್ದಾರೆ.
ಶಿವಣ್ಣನಿಗೆ ಅವರದ್ದೇ ಆದ ಬಾಡಿಗಾರ್ಡ್ ಇರುತ್ತಾರೆ. ಅವರು ಕಾರ್ಯಕ್ರಮದಿಂದ ಹೊರಟು ನಿಂತಾಗ ಯಶ್ ಆ ಬಗ್ಗೆ ತಲೆಕೆಡಿಸಿಕೊಳ್ಳದೆಯೂ ಇರಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಶಿವರಾಜ್‌ಕುಮಾರ್ ಬಗ್ಗೆ ನಿಜವಾದ ಕಾಳಜಿ ತೋರಿಸಿದ್ದಾರೆ.
ವಂದೇ ಭಾರತ್ ರೈಲು (ಸಾಂದರ್ಭಿಕ ಚಿತ್ರ)Image Credit source: PTI
ಬೆಂಗಳೂರು, ಆಗಸ್ಟ್ 10: ಬೆಂಗಳೂರು-ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು (Bengaluru-Mumbai Vande Bharat Sleeper) ಸಂಚಾರಕ್ಕೆ ಸಿದ್ಧತೆ ಅಂತಿಮ ಹಂತ ತಲುಪಿದೆ. ನೈಋತ್ಯ ರೈಲ್ವೆ (SWR) ಎರಡು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಸ್ವೀಕರಿಸಿ ಅಧಿಕೃತವಾಗಿ ನಿಯೋಜನೆ ಮಾಡಿದೆ. ಶೀಘ್ರದಲ್ಲೇ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ನಡೆಸಿ, ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲೇ ತಯಾರಾದ ರೈಲು
ಬೆಂಗಳೂರಿನಲ್ಲೇ ಬಿಇಎಂಎಲ್ (BEML) ತಯಾರಿಸಿದ ಈ ಎರಡು ರೈಲು ಸೆಟ್‌ಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದ ಯೋಜನೆಯಡಿ ನಿರ್ಮಿಸಲಾಗಿದೆ. ವಿವಿಧ ಹಂತದ ಪರೀಕ್ಷೆ ಹಾಗೂ ಪರಿಶೀಲನೆಗಳ ಬಳಿಕ ರೈಲುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ವಿಭಾಗದ ಡಿವಿಷನಲ್ ರೈಲ್ವೆ ಮ್ಯಾನೇಜರ್ ಆಶುತೋಷ್ ಕುಮಾರ್ ಸಿಂಗ್ ಅವರು ರೈಲು ಸೆಟ್‌ಗಳು ಕಮಿಷನ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ರೈಲು ಸೇವೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಸುಮಾರು 16 ಗಂಟೆಯಲ್ಲಿ ಬೆಂಗಳೂರು-ಮುಂಬೈ ಪ್ರಯಾಣ
ವಂದೇ ಭಾರತ್ ಸ್ಲೀಪರ್ ರೈಲು ರಾತ್ರಿ ಬೆಂಗಳೂರಿನಿಂದ ಹಾಗೂ ಮುಂಬೈನಿಂದ ಹೊರಡಲಿದೆ. ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಸುಮಾರು 16 ಗಂಟೆ ಆಗಿರಲಿದೆ. ವಿಮಾನ ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.
ರೈಲು ಸಂಚಾರವನ್ನು KSR ಬೆಂಗಳೂರು-ಮುಂಬೈ CSMT ಮಾರ್ಗದಲ್ಲಿ ಆರಂಭಿಸುವ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುತ್ತಿದೆ. ಇದೇ ವೇಳೆ, SMVT ಬೆಂಗಳೂರು ನಿಲ್ದಾಣದಿಂದ ಸೇವೆ ಆರಂಭಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎರಡೂ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
16 ಬೋಗಿಗಳ ರೈಲಿನಲ್ಲಿ ಏನೇನಿರಲಿದೆ ಸೌಲಭ್ಯ?
ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳಿರಲಿವೆ. ಇದರಲ್ಲಿ 11 ತ್ರೀ-ಟಯರ್ ಎಸಿ (3AC), ನಾಲ್ಕು 2-ಟಯರ್ ಎಸಿ (2AC) ಹಾಗೂ ಒಂದು ಫಸ್ಟ್ ಕ್ಲಾಸ್ ಎಸಿ (1AC) ಕೋಚ್ ಇರಲಿದೆ.
ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ಟಿಕೆಟ್ ದರ ಎಷ್ಟು?
3AC ಟಿಕೆಟ್ ದರವು ಊಟ ಸೇರಿದಂತೆ ಸುಮಾರು 3,000 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ರೈಲಿನ ಪ್ರಾಯೋಗಿಕ ಸಂಚಾರದ ಬಳಿಕ ಪ್ರಯಾಣದ ಸಮಯ ಮತ್ತು ವೇಗಕ್ಕೆ ಸಂಬಂಧಿಸಿದ ಅಂತಿಮ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಕಲ್ಯಾಣ ಕರ್ನಾಟಕ ಭಾಗಕ್ಕೂ ರೈಲು ಸಂಪರ್ಕ
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕ ಮಾರ್ಗವಾಗಿ ಸಂಚರಿಸುವ ನಿರೀಕ್ಷೆಯಿದೆ. ಈ ಮಾರ್ಗವು ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಸುಮಾರು 1,137 ಕಿ.ಮೀ. ಉದ್ದದ ಈ ಮಾರ್ಗ ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು, ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಹಲವು ಭಾಗಗಳಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಿದೆ.
ಪ್ರಸ್ತುತ ಬೆಂಗಳೂರು-ಮುಂಬೈ ನಡುವೆ ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ SMVT ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಸಂಚರಿಸುತ್ತಿವೆ. ಇವುಗಳಿಗೆ ಸುಮಾರು 24 ಗಂಟೆಗಳ ಪ್ರಯಾಣದ ಅವಧಿ ಬೇಕಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾದರೆ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ.
ಹುಬ್ಬಳ್ಳಿ ಮಾರ್ಗವಾಗಿ ರೈಲು ಓಡಿಸಬೇಕು ಎಂಬ ಜನಪ್ರತಿನಿಧಿಗಳು ಹಾಗೂ ರೈಲ್ವೆ ಹೋರಾಟಗಾರರ ಬೇಡಿಕೆಯೂ ಇತ್ತು. ಆದರೆ ಆ ಮಾರ್ಗದ ಉದ್ದ, ಕೆಲವು ಭಾಗಗಳಲ್ಲಿನ ಸಿಂಗಲ್ ಟ್ರ್ಯಾಕ್ ಹಾಗೂ ವೇಗದ ನಿರ್ಬಂಧಗಳ ಹಿನ್ನೆಲೆಯಲ್ಲಿ ಆ ಆಯ್ಕೆಯನ್ನು ಪರಿಗಣಿಸಲಾಗಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿ, ಆ.10: ಲೋಕಸಭೆಯಲ್ಲಿ ಇಂದು (ಸೋಮವಾರ ಆ.10) ನಾಲ್ಕು ಅತ್ಯಂತ ಪ್ರಮುಖ ವಿಧೇಯಕಗಳನ್ನು (Bills) ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳಲ್ಲಿ ‘ಟ್ರಿಬ್ಯೂನಲ್ ರಿಫಾರ್ಮ್ಸ್ ಮಸೂದೆ’ ಹಾಗೂ ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವ ವಿಧೇಯಕವೂ ಸೇರಿದೆ.
ಲೋಕಸಭೆಯಲ್ಲಿ ಮಂಡನೆಯಾಗಲಿರುವ 4 ಪ್ರಮುಖ ಮಸೂದೆಗಳು:
ಟ್ರಿಬ್ಯೂನಲ್ ರಿಫಾರ್ಮ್ಸ್ ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ನ್ಯಾಯಮಂಡಳಿಗಳ (Tribunals) ಕಾರ್ಯವೈಖರಿಯನ್ನು ಸುಧಾರಿಸುವುದು, ಸದಸ್ಯರ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ಪಾರದರ್ಶಕತೆ ಹಾಗೂ ಏಕರೂಪತೆಯನ್ನು ತರುವುದು. ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (National Tribunals Commission) ಸ್ಥಾಪನೆಯ ಪ್ರಸ್ತಾಪವೂ ಇದರಲ್ಲಿದೆ.
ಎರಡನೇ ಮಸೂದೆ, ಕೇರಳ (ಹೆಸರು ಬದಲಾವಣೆ) ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. ಸಂವಿಧಾನದ ಮೊದಲ ಅನುಸೂಚಿಯನ್ನು ತಿದ್ದುಪಡಿ ಮಾಡುವ ಮೂಲಕ ‘ಕೇರಳ’ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವುದು ಇದರ ಉದ್ದೇಶವಾಗಿದೆ.
ಇನ್ನು ಮೂರನೇ ಮಸೂದೆ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಮಂಡಿಸಲಿದ್ದಾರೆ. 1957ರ ಗಣಿ ಮತ್ತು ಖನಿಜ ಕಾಯ್ದೆಗೆ ತಿದ್ದುಪಡಿ ತಂದು ಖನಿಜ ವಲಯದ ಅಭಿವೃದ್ಧಿಗೆ ವೇಗ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಇನ್ನು ನಾಲ್ಕುನೇ ಮಸೂದೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. 1962ರ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC) ಕಾಯ್ದೆಗೆ ತಿದ್ದುಪಡಿ ತರುವುದು ಹಾಗೂ ಸಹಕಾರ ವಲಯದ ಸಾಲ ಸೌಲಭ್ಯಗಳನ್ನು ವಿಸ್ತರಿಸುವುದು ಮುಖ್ಯ ಉದ್ದೇಶವಾಗಿದೆ.
ಇದೇ ವೇಳೆ ಹಣಕಾಸು, ರೈಲ್ವೆ, ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗಳು ತಮ್ಮ ಪ್ರಮುಖ ವರದಿಗಳನ್ನು ಸದನಕ್ಕೆ ಸಲ್ಲಿಸಲಿವೆ. ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಪಾತ್ರ, ರಾಷ್ಟ್ರೀಯ ಸಾಂಖ್ಯಿಕ ಆಯೋಗದ (NSC) ಕಾರ್ಯಕ್ಷಮತೆ ಹಾಗೂ 2026-27ನೇ ಸಾಲಿನ ಅನುದಾನ ಬೇಡಿಕೆಗಳ ಕುರಿತು ವರದಿ ನೀಡಲಿದೆ. ಸರಕು ಸಾಗಣೆ ಆದಾಯ, ಸರಕು ಸಾಗಣೆ ಕಾರಿಡಾರ್‌ಗಳ ಪ್ರಗತಿ ಹಾಗೂ ರೈಲ್ವೆ ಸುರಂಗಗಳು ಮತ್ತು ಸೇತುವೆಗಳ ನಿರ್ವಹಣೆಗೆ ಸಂಬಂಧಿಸಿದ ವರದಿಗಳನ್ನು ಮಂಡಿಸಲಿದೆ.
ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಯುಪಿ ಟಿ20 (UP T20) ಲೀಗ್‌ಗೂ ಮುನ್ನ ಲಕ್ನೋ ಫಾಲ್ಕನ್ಸ್ ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ 36 ವರ್ಷದ ಈ ಸ್ವಿಂಗ್ ಮಾಂತ್ರಿಕ, ರಾಷ್ಟ್ರೀಯ ತಂಡಕ್ಕೆ ಮರಳುವ ತಮ್ಮ ಇಂಗಿತವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಆಯ್ಕೆಗಾರರ ನಿರ್ಧಾರಕ್ಕೆ ಕಾಯುತ್ತಿರುವ ‘ಭುವಿ’:
ರಾಷ್ಟ್ರೀಯ ತಂಡಕ್ಕೆ ಮರಳಿ ಆಯ್ಕೆಯಾಗುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭುವನೇಶ್ವರ್, “ನನಗೆ ಮತ್ತೆ ಕರೆ ಬಂದರೆ ನಾನು ಬೇಡ ಎನ್ನಲು ಹೇಗೆ ಸಾಧ್ಯ? ನಾನು ಆಡಲು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ” ಎಂದು ಹೇಳಿದ್ದಾರೆ. ಆದರೆ, ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಇಲ್ಲವೇ ಎಂಬುದು ಸಂಪೂರ್ಣವಾಗಿ ಆಯ್ಕೆಗಾರರ ಕೈಯಲ್ಲಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
“ಆಯ್ಕೆ ಮಾಡುವುದಾದರೆ, ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ನಾನಂತು ರೆಡಿ ಇದ್ದೇನೆ. ಮೊದಲು ಆಯ್ಕೆ ಮಾಡಲಿ, ಆಯ್ಕೆ ಮಾಡಬೇಡಿ ಎಂದು ನಾನಂತು ಹೇಳಿಲ್ಲ. ಹಾಗೆ ಹೇಳಲು ಹೇಗೆ ಸಾಧ್ಯ. ಹೀಗಾಗಿ ನಾನು ಸಹ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದೇನೆ” ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
ಐಪಿಎಲ್ 2026ರ ಭರ್ಜರಿ ಪ್ರದರ್ಶನವೇ ಪ್ರೇರಣೆ:
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಿದ್ದ ಭುವನೇಶ್ವರ್ ಕುಮಾರ್, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಹೊಸ ಚೆಂಡಿನಲ್ಲಿ ಅವರು ತೋರಿದ ಸ್ವಿಂಗ್ ಜಾದೂ, ಅವರು ಇಂದಿಗೂ ವಿಶ್ವದರ್ಜೆಯ ಬೌಲರ್ ಎಂಬುದನ್ನು ಸಾಬೀತುಪಡಿಸಿದೆ. ಇದೇ ಕಾರಣಕ್ಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಕಂಬ್ಯಾಕ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಒತ್ತಡವಿಲ್ಲದ ಆಟ, ಮನಸ್ಸಿಗೆ ನೆಮ್ಮದಿ:
ಭಾರತ ತಂಡಕ್ಕೆ ಮರಳುವ ಆಸೆ ಇದ್ದರೂ, ಅದನ್ನೇ ಯೋಚಿಸುತ್ತಾ ತಮಗೆ ತಾವೇ ಒತ್ತಡ ಹೇರಿಕೊಳ್ಳುತ್ತಿಲ್ಲ ಎಂದು ಭುವಿ ಹೇಳಿದ್ದಾರೆ. “ನಾನು ಈಗಾಗಲೇ ಭಾರತದ ಪರ ಆಡುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈಗ ನಾನು ಕೇವಲ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಆಡುತ್ತಿದ್ದೇನೆ. ಸದ್ಯ ನನ್ನ ವೃತ್ತಿಜೀವನ ಇರುವ ಸ್ಥಿತಿಯ ಬಗ್ಗೆ ನನಗೆ ತೃಪ್ತಿ ಮತ್ತು ನೆಮ್ಮದಿಯಿದೆ” ಎಂದು ಅವರು ತಮ್ಮ ಬದಲಾದ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಅಶ್ವಿನ್ ಹಾಗೂ ಕೈಫ್ ಬೆಂಬಲ!
ಭುವನೇಶ್ವರ್ ಕುಮಾರ್ ಅವರ ಈ ಫಾರ್ಮ್ ನೋಡಿ ಮಾಜಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಕೈಫ್ ಕೂಡ ಭುವಿ ಪರ ಧ್ವನಿ ಎತ್ತಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್ ಯೋಜನೆಗೆ ಭುವನೇಶ್ವರ್ ಅವರಂತಹ ಅನುಭವಿ ಬೌಲರ್ ತಂಡಕ್ಕೆ ಅಗತ್ಯವಿದ್ದು, ವಿಶೇಷವಾಗಿ ಸೌತ್ ಆಫ್ರಿಕಾದಂತಹ ಪಿಚ್‌ಗಳಲ್ಲಿ ಅವರ ಸ್ವಿಂಗ್ ಭಾರತಕ್ಕೆ ನೆರವಾಗಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳುವತ್ತ ಗಮನ ಹರಿಸಿರುವ ಭುವನೇಶ್ವರ್ ಕುಮಾರ್, ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದಾದ ನಂತರ ಉತ್ತರ ಪ್ರದೇಶ ತಂಡದ ಪರವಾಗಿ ದೇಶಿ ಕ್ರಿಕೆಟ್‌ನ ರೆಡ್-ಬಾಲ್ ಮತ್ತು ವೈಟ್-ಬಾಲ್ ಪಂದ್ಯಾವಳಿಗಳಲ್ಲೂ ಅವರು ಕಣಕ್ಕಿಳಿಯಲಿದ್ದಾರೆ. ಇದರ ನಡುವೆ ಆಯ್ಕೆಗಾರರು ಭುವಿಯನ್ನು ಮತ್ತೆ ಟೀಮ್ ಇಂಡಿಯಾಗೆ ಕರೆತರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.