ಅಹಮದಾಬಾದ್ ಮಾ.9: ಕ್ರಿಕೆಟ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಭಾವನೆ ಎಂಬುದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತು ವಿಶ್ವಕಪ್ ಕನಸು ಭಗ್ನಗೊಂಡಾಗ, ನ್ಯೂಜಿಲೆಂಡ್ ಆಟಗಾರರಾದ ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ಅವರ ಪತ್ನಿಯರು ಮೈದಾನಕ್ಕಿಳಿದು ನೀಡಿದ ಬೆಂಬಲ ಈಗ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ತಕ್ಷಣ ಸೋಲಿನ ನಿರಾಶೆಯಲ್ಲಿದ್ದ ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ಮೈದಾನದಲ್ಲೇ ಭಾವುಕರಾಗಿದ್ದರು. ಈ ವೇಳೆ ಅವರ ಪತ್ನಿಯರು ಮೈದಾನಕ್ಕೆ ಬಂದು ಪತಿಗಳಿಗೆ ಧೈರ್ಯ ತುಂಬಿದರು. ಗ್ಲೆನ್ ಫಿಲಿಪ್ಸ್ ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ಮುತ್ತಿಕ್ಕುವ ಮೂಲಕ ತಮ್ಮ ನೋವನ್ನು ಹಂಚಿಕೊಂಡರೆ, ಇಶ್ ಸೋಧಿ ಅವರು ಕೂಡ ಪತ್ನಿಯ ಹಣೆಗೆ ಮುತ್ತಿಟ್ಟು ಸಾಂತ್ವನ ಪಡೆದರು. ಈ ಮಾನವೀಯ ಸಂಬಂಧಗಳ ಅದ್ಭುತ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.”ಸೋಲು-ಗೆಲುವು ಆಟದ ಭಾಗ, ಆದರೆ ಸಂಕಷ್ಟದ ಸಮಯದಲ್ಲಿ ಕುಟುಂಬ ನೀಡುವ ಬೆಂಬಲವೇ ಆಟಗಾರರ ನಿಜವಾದ ಶಕ್ತಿ” ಎಂದು ಕ್ರೀಡಾಭಿಮಾನಿಗಳು ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನವದೆಹಲಿ, ಮಾರ್ಚ್ 09: ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನ ಇಥಿಯೋಪಿಯಾ ಗಡಿಯಲ್ಲಿ ಯೂಟರ್ನ್ ಮಾಡಿ ದೆಹಲಿಗೆ ಮರಳಿರುವ ಘಟನೆ ನಡೆದಿದೆ. ಯು-ಟರ್ನ್‌ಗೆ ಕಾರಣದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೋಯಿಂಗ್ 787-9 ಡ್ರೀಮ್‌ಲೈನರ್ ಬಳಸಿ ಕಾರ್ಯನಿರ್ವಹಿಸುತ್ತಿದ್ದ 6E33 ವಿಮಾನವು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಯುನೈಟೆಡ್ ಕಿಂಗ್‌ಡಂನ ಮ್ಯಾಂಚೆಸ್ಟರ್‌ಗೆ ಹೋಗುವ ಮಾರ್ಗದಲ್ಲಿತ್ತು.
ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ವಿಮಾನವು ಇಥಿಯೋಪಿಯಾದ ಗಡಿಯ ಸಮೀಪ ವಾಯುಪ್ರದೇಶದ ಹತ್ತಿರ ತಲುಪಿ, ಹಾರಾಟದ ಮಧ್ಯದಲ್ಲಿ ಹಠಾತ್ತನೆ ತಿರುಗಿತು. ನಂತರ ವಿಮಾನವು ಭಾರತೀಯ ವಾಯುಪ್ರದೇಶವನ್ನು ಮತ್ತೆ ಪ್ರವೇಶಿಸಿತು.
ಹಠಾತ್ ಯು-ಟರ್ನ್‌ಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಏಕೆಂದರೆ ಕೆಲವು ವಿಮಾನಯಾನ ಅಧಿಕಾರಿಗಳು ಈ ಬೆಳವಣಿಗೆಯನ್ನು ವಿವರಿಸುವ ಅಧಿಕೃತ ಹೇಳಿಕೆಯನ್ನು ಇನ್ನೂ ನೀಡಿಲ್ಲ.
ಈ ತಿಂಗಳ ಆರಂಭದಲ್ಲಿ, ಇರಾನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲಿನ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಮಧ್ಯಪ್ರಾಚ್ಯ ಮತ್ತು ಆಯ್ದ ಅಂತಾರಾಷ್ಟ್ರೀಯ ತಾಣಗಳಿಗೆ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಇಂಡಿಗೋ ತಿಳಿಸಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶದ ನಿರ್ಬಂಧಗಳೊಂದಿಗೆ, ಫೆಬ್ರವರಿ 28 ರಿಂದ ವಿಮಾನ ಸೇವೆಗಳು ಹೆಚ್ಚಿನ ಪರಿಣಾಮ ಬೀರಿವೆ. ಫೆಬ್ರವರಿ 28 ಮತ್ತು ಮಾರ್ಚ್ 3 ರ ನಡುವೆ ಮಧ್ಯಪ್ರಾಚ್ಯ ಮತ್ತು ಆಯ್ದ ಅಂತಾರಾಷ್ಟ್ರೀಯ ತಾಣಗಳಿಗೆ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಹೇಳಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 388 ವಿಮಾನಗಳನ್ನು ರದ್ದುಪಡಿಸಿದೆ ಎಂದು ತಿಳಿಸಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಮಾರ್ಚ್ 3 ರಂದು ಭಾರತದಿಂದ ನಿರ್ಗಮಿಸಿದ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ 356 ಆಗಿದ್ದರೆ, 338 ಅಂತಾರಾಷ್ಟ್ರೀಯ ವಿಮಾನಗಳು ದೇಶದ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಳಿದಿವೆ.
ಬೆಂಗಳೂರು, ಮಾರ್ಚ್ 9: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ನಾನಾ ರೀತಿಯ ಅಭಿಪ್ರಾಯಗಳು, ಭಯ, ಆತಂಕ, ಖುಷಿ ಎಲ್ಲಾ ವ್ಯಕ್ತವಾಗುತ್ತಿವೆ. ಆಂಥ್ರೋಪಿಕ್ನ ಕ್ಲಾಡ್ ಎಐ ಬಿಡುಗಡೆಯಾದ ಬಳಿಕ ಎಲ್ಲಾ ಸಾಫ್ಟ್ವೇರ್ ಕಂಪನಿಗಳು ಧೂಳೀಪಟವಾಗುತ್ತವೆ ಎನ್ನುವ ಸುದ್ದಿ ಇತ್ತೀಚೆಗೆ ಸಾಕಷ್ಟು ಕೇಳಿ ಬಂದಿತ್ತು. ಎಲ್ಲಾ ಹೊಸ ತಂತ್ರಜ್ಞಾನಗಳು ಬಂದರೆ ಇದೇ ರೀತಿ ಭಯ ಇರುತ್ತೆ. ಆದರೆ, ತಂತ್ರಜ್ಞಾನಗಳು ಮನುಷ್ಯನಿಗೆ ಬಲ ನೀಡುತ್ತವೆಯೇ ಹೊರತು ಅವನ ಸ್ಥಾನ ಕಿತ್ತುಕೊಳ್ಳುವುದಿಲ್ಲ ಎನ್ನುವ ಸಮಾಧಾನಕರ ಅಭಿಪ್ರಾಯಗಳೂ ಇವೆ. ಈ ಮಧ್ಯೆ ಟಾಮ್ ಬ್ಲಾಮ್ಫೀಲ್ಡ್ (Tom Blomfield) ಎಂಬುವವರು ಹೊಸ ಎಐ ಬಾಂಬ್ ಸಿಡಿಸಿದ್ದಾರೆ. ಅವರ ಪ್ರಕಾರ ಕ್ಲಾಡ್ ಎಐ ಅದೆಷ್ಟು ಪ್ರಚಂಡವಾಗಿದೆ ಎಂದರೆ ಇಡೀ ಕಂಪನಿಯ ಎಲ್ಲಾ ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ಮಾಡಲು ಸಾಧ್ಯವಾಗುತ್ತದಂತೆ.
ವೈ ಕಾಂಬಿನೇಟರ್ ಎಂಬ ಸ್ಟಾರ್ಟಪ್ ಫಂಡಿಂಗ್ ಕಂಪನಿಯ ಪಾರ್ಟ್ನರ್ ಆಗಿರುವ ಟಾಮ್ ಬ್ಲಾಮ್ಫೀಲ್ಡ್ ಅವರು ಎಕ್ಸ್ನಲ್ಲಿ ಈ ಬಾಂಬ್ ಸಿಡಿಸಿ ಐಟಿ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದಾರೆ. ಅವರು ಮಾಡಿದ ಟ್ವೀಟ್ ಇಷ್ಟೇ… ‘ಕಳೆದ ಮಂಗಳವಾರ ಕ್ಲಾಡ್ ಕೋಡ್ ಕಲಿತ 24 ವರ್ಷದ ವ್ಯಕ್ತಿಯು ಇಡೀ ಅಕ್ಸೆಂಚರ್ ವರ್ಕ್ಫೋರ್ಸ್ ಅನ್ನೇ ಮೀರಿಸಲಿದ್ದಾನೆ’ ಎಂಬುದು. ಮಾರ್ಚ್ 2ರಂದು ಮಾಡಿದ ಟ್ವೀಟ್ ಅದು.
ಟಾಮ್ ಬ್ಲಾಮ್ಫೀಲ್ಡ್ ಮಾಡಿದ ಟ್ವೀಟ್
The entire Accenture workforce is about to be outperformed by a 24-year-old who learned Claude Code last Tuesday.
ಕ್ಲಾಡ್ ಎಐ ಅಭಿವೃದ್ಧಿಪಡಿಸಿದ ಆಂಥ್ರೋಪಿಕ್ ಕಂಪನಿಯ ಸಹ-ಸಂಸ್ಥಾಪಕ ಜ್ಯಾಕ್ ಕ್ಲಾರ್ಕ್ ಅವರು ಇತ್ತೀಚೆಗೆ ಟಿವಿ ಶೋವೊಂದರಲ್ಲಿ ಕ್ಲಾಡ್ನ ಉಪಯುಕ್ತತೆ ಬಗ್ಗೆ ಒಂದು ಮಾಹಿತಿ ಹೊರಗೆಡವಿದ್ದರು. ಕಂಪನಿಯ ಹೆಚ್ಚಿನ ಇಂಟರ್ನಲ್ ಕೋಡ್ ಅನ್ನು ಕ್ಲಾಡ್ ಬರೆಯಬಲ್ಲುದಂತೆ. ಈ ವರ್ಷಾಂತ್ಯದೊಳಗೆ ಸಂಪೂರ್ಣ ಎಲ್ಲಾ ಕೋಡ್ ಅನ್ನೂ ಈ ಎಐ ಸ್ವತಂತ್ರವಾಗಿ ನಿಭಾಯಿಸಬಲ್ಲುದಂತೆ.
ಟಾಮ್ ಬ್ಲಾಮ್ಫೀಲ್ಡ್ ಅವರ ಆ ಟ್ವೀಟ್ಗೆ ನಾನಾ ಪ್ರತಿಕ್ರಿಯೆಗಳು ಬಂದಿವೆ. ಅಕ್ಸೆಂಚರ್ ಕಂಪನಿ ಹೇಗೆ ಈ ಕ್ಲಾಡ್ ಎಸೆತವನ್ನು ಆಡಬಲ್ಲುದು ಎಂಬುದನ್ನು ಒಬ್ಬಾತ ವಿವರಿಸಿದ್ದಾರೆ. ಏಳು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಅಕ್ಸೆಂಚರ್ ಕಂಪನಿ ಕಳೆದ ವರ್ಷ ಆಂಥ್ರೋಪಿಕ್ ಜೊತೆ ಒಪ್ಪಂದ ಮಾಡಿಕೊಂಡು, ತನ್ನ 30,000 ಎಂಜಿನಿಯರುಗಳಿಗೆ ಕ್ಲಾಡ್ನ ಟ್ರೈನಿಂಗ್ ಕೊಡಿಸಿತು. ಎಐ ವರ್ಕ್ಫ್ಲೋ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅಕ್ಸೆಂಚರ್ ಇಟ್ಟ ಹೆಜ್ಜೆ ಇದು. ಇದೀಗ ಅಕ್ಸೆಂಚರ್ ಕಂಪನಿಯು ಡಿಸ್ಟ್ರಿಬ್ಯೂಶನ್ ಲೇಯರ್ ಆಗಿರುತ್ತದೆ. ಕ್ಲಾಡ್ ಕಲಿತ 24 ವರ್ಷದ ವ್ಯಕ್ತಿ ಡೆಮೋ ಕೊಡಬಹುದು. ಆದರೆ, ಅನುಷ್ಠಾನ, ಮ್ಯಾನೇಜ್ಮೆಂಟ್ ಬದಲಾವಣೆ, ಡಾಟಾ ಮೈಗ್ರೇಶನ್, ಮಲ್ಟಿ ಇಯರ್ ಕಾಂಟ್ರಾಕ್ಟ್ ಇತ್ಯಾದಿಯನ್ನು ಅಕ್ಸೆಂಚರ್ ಕಂಪನಿ ನಿಯಂತ್ರಿಸುತ್ತದೆ ಎಂದು ಅವರು ತಮ್ಮ ಟ್ವೀಟ್ನಲ್ಲಿ ವಿವರಿಸಿದ್ದಾರೆ.
ಟಿವಿಕೆ ಸಂಸ್ಥಾಪಕ, ನಟ ವಿಜಯ್ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 10ರಂದು ವಿಚಾರಣೆಗೆ ಹಾಜರಾಗುವಂತೆ ವಿಜಯ್ಗೆ ಸೂಚಿಸಲಾಗಿದೆ. ವಿಜಯ್ ಅವರ ಟಿವಿಕೆ ಪಕ್ಷ ಕರೂರಿನಲ್ಲಿ ನಡೆಸಿದ ಚುನಾವಣೆ ರ್ಯಾಲಿ ವೇಳೆ 41 ಜನರ ಸಾವನ್ನಪ್ಪಿದ್ದರು. ಈ ಕಾಲ್ತುಳಿತ ದುರಂತಕ್ಕೆ ಟಿವಿಕೆ ಹೊಣೆ ಅಲ್ಲ ಎಂದು ನಟ ವಿಜಯ್ ಹೇಳಿದ್ದಾರೆ. ಅಲ್ಲದೆ, ಡಿಎಂಕೆ ಸರ್ಕಾರದ ವೈಫಲ್ಯದಿಂದ ದುರಂತ ಸಂಭವಿಸಿತ್ತು ಎಂದು ಆರೋಪಿಸಿದ್ದಾರೆ. 41 ಜನರ ಸಾವಿಗೆ ಯಾರು ಹೊಣೆ ಎಂದು ಸಿಬಿಐನಿಂದ ವಿಚಾರಣೆ ನಡೆಯುತ್ತಿದೆ. ಅವರು ಈಗಾಗಲೇ ಹಲವು ಬಾರಿ ವಿಚಾರಣೆಯನ್ನು ಎದುರಿಸಿದ್ದಾರೆ.
ಹೈದರಾಬಾದ್, ಮಾ.9: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ನೆರೆರಾಜ್ಯದ ರಾಜಕೀಯ ಅಖಾಡದಲ್ಲೂ ಸದ್ದು ಮಾಡುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬೆಂಗಳೂರಿನ ಟ್ರಾಫಿಕ್ ಮತ್ತು ಮುಂಬೈ-ಚೆನ್ನೈನ ಮೂಲಸೌಕರ್ಯಗಳ ಕುರಿತು ವ್ಯಂಗ್ಯವಾಡಿದ್ದಾರೆ. ಬೆಂಗಳೂರು ನಗರ ಇಂದು ಕೇವಲ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ. ಐಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಇಂದಿನ ಸ್ಥಿತಿ ಏನಾಗಿದೆ ನೋಡಿ? ಅಲ್ಲಿನ ಜನ ಟ್ರಾಫಿಕ್‌ನಿಂದ ಹೈರಾಣಾಗಿದ್ದಾರೆ. ಆದರೆ ನಮ್ಮ ಹೈದರಾಬಾದ್‌ನಲ್ಲಿ ಅಂತಹ ಪರಿಸ್ಥಿತಿ ಇಲ್ಲ,” ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಳೆ ಬಂದರೆ ಚೆನ್ನೈ ಮತ್ತು ಮುಂಬೈ ನಗರಗಳು ಹೇಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಹೈದರಾಬಾದ್ ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಪ್ರತಿಪಾದಿಸಿದರು.”ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುತ್ತೇವೆ. ನಮಗೆ ಬೆಂಗಳೂರು ಅಥವಾ ಮುಂಬೈ ನಗರಗಳು ಸ್ಪರ್ಧಿಯಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಸಿಂಗಾಪುರ ಮತ್ತು ಟೋಕಿಯೋದಂತಹ ಜಾಗತಿಕ ನಗರಗಳ ಜೊತೆಗೆ,” ಎಂದು ಅವರು ಘೋಷಿಸಿದ್ದಾರೆ.ಇದೀಗ ಈ ಹೇಳಿಕೆ ಕನ್ನಡಿಗರ ಮತ್ತು ಕರ್ನಾಟಕದ ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಬೆಂಗಳೂರು, ಮಾರ್ಚ್ 09: ಕಬ್ಬನ್ಪಾರ್ಕ್ನ ಶೌಚಾಲಯದ ಸಮೀಪ ಸಿಗರೇಟ್‌ಗೆ ಗಾಂಜಾ ತುಂಬಿಸಿ ಸೇದುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಫೋಟೋಗ್ರಾಫರ್ಗಳಾದ ವಿ.ಸಚಿನ್(21), ಪವನ್ ಕಲ್ಯಾಣ್(22) ಬಂಧಿತರಾಗಿದ್ದು, ಫೋಟೋ ತೆಗೆಯುವ ಉದ್ದೇಶದಿಂದ ಇವರು ಪಾರ್ಕ್‌ಗೆ ಬಂದಿದ್ದರು. ಆದರೆ ಗಾಂಜಾ ಸೇದುತ್ತಿದ್ದ ಇವರನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಕಬ್ಬನ್ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆ ಎನ್‌ಡಿಪಿಎಸ್ ಕಾಯ್ದೆ ಕಲಂ 27(ಬಿ) ಅನ್ವಯ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, ಇವರು ಗಾಂಜಾ ಖರೀದಿಸಿದ್ದು ಎಲ್ಲಿ? ಪೆಡ್ಲರ್‌ಗಳು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆಗಿಳಿದಿದ್ದಾರೆ.
ಬೆಂಗಳೂರು, ಮಾರ್ಚ್ 09: ನಮ್ಮ ಮೆಟ್ರೋದಲ್ಲಿ (Namma Metro)ಆಟಿಕೆ ಗನ್ ಬಳಸಿ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಈ ಕೃತ್ಯ ನಡೆಸಿರುವುದು ತಿಳಿದುಬಂದಿದೆ.
ಸೋಶಿಯಲ್ ಮೀಡಿಯಾ ಹುಚ್ಚಿಗೆ ದಂಡ ಕಟ್ಟಿದ ಆಸಾಮಿ
ಫೆಬ್ರವರಿ 6ರಂದು ಅರ್ಜುನ್ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಾಮಾಜಿಕ ಜಾಲತಾಣಕ್ಕಾಗಿ ಪ್ರಾಂಕ್ ವಿಡಿಯೋ ಮಾಡುವ ಉದ್ದೇಶದಿಂದ ತನ್ನ ಜೇಬಿನಲ್ಲಿ ಆಟಿಕೆಯ ಗನ್ ಇಟ್ಟುಕೊಂಡಿದ್ದನು. ಪ್ರಯಾಣದ ವೇಳೆ ಅವನ ಜೇಬಿನಲ್ಲಿ ಗನ್ ಇರುವುದನ್ನು ಗಮನಿಸಿದ ಸಹ ಪ್ರಯಾಣಿಕರು ಆತಂಕಗೊಂಡು ತಕ್ಷಣ ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಅರ್ಜುನ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅದು ನಕಲಿ ಆಟಿಕೆಯ ಗನ್ ಆಗಿದ್ದು, ಕೇವಲ ಪ್ರಾಂಕ್ ವಿಡಿಯೋ ಮಾಡಲು ಇಟ್ಟುಕೊಂಡಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.ನಂತರ ಪೊಲೀಸರು ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅರ್ಜುನ್ ಮೇಲೆ 400 ರೂಪಾಯಿ ದಂಡ ವಿಧಿಸಿದೆ.
ಉಡುಪಿ, ಮಾರ್ಚ್ 09: ಕಂಬಳದ ವಿಚಾರವಾಗಿ ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶುರುವಾದ ರಾಜಕೀಯ ಕಚ್ಚಾಟವೀಗ ದೈವ ಮತ್ತು ದೇವರ ಅಂಗಳ ತಲುಪಿದೆ. ತನ್ನ ಮೇಲೆ ವೈಯಕ್ತಿಕ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಬೇಸರಗೊಂಡಿರುವ ಬಿಜೆಪಿ ಶಾಸಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ದೇವರು ಮತ್ತು ದೈವದ ಮೊರೆ ಹೋಗಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ಅಮ್ಮನ ದೇಗುಲ ಮತ್ತು ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಈ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ.
ಕಾಂಗ್ರೆಸ್ನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ವಿರುದ್ಧ ಬೇಸರ ಹೊರಹಾಕಿರುವ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಾರೆ ಎಂದು ಆರೋಪಿಸಿದ್ದಾರೆ. ಮಾರಿಯಮ್ಮನ ಮುಂದೆ ಸತ್ಯ ಸಮರ್ಪಿಸಿದ್ದೇನೆ. ಎಲ್ಲವನ್ನು ತಾಯಿಯೇ ನೋಡಿಕೊಳ್ಳಲಿ ಎಂದು ಹೇಳುವ ಮೂಲಕ ವೈಯಕ್ತಿಕ ನಿಂದನೆ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿಯೂ ಕೈ ಮುಗಿದು ಶಾಸಕರು ಪ್ರಾರ್ಥಿಸಿದ್ದು, ಸೊರಕೆ ಸವಾಲಿನ ಹಿನ್ನೆಲೆ ಈ ರೀತಿ ನಡೆದುಕೊಂಡಿರೋದಾಗಿ ತಿಳಿಸಿದ್ದಾರೆ.
ತಮ್ಮ ಮೇಲಿನ ಅದಿರು ಲೂಟಿ ಆರೋಪದ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಾನು ಯಾವುದೇ ಅನ್ಯಾಯ ಮಾಡಿಲ್ಲ. ಮಗನ ಆರ್ಥಿಕ ವ್ಯವಹಾರದ ಬಗ್ಗೆ ಸೊರಕೆ ಮಾಡಿರುವ ಆರೋಪದಿಂದ ಮನನೊಂದು ದೇವರಿಗೆ ಶರಣಾಗಿದ್ದೇನೆ. ನನ್ನ ಕುಟುಂಬ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ಪ್ರತಿ ಬಾರಿ ತನ್ನ ಕುಟುಂಬದ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಾರೆ. ಅನಾಚಾರ, ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ್ದಾರೆ. ಒಂದು ಸುಳ್ಳನ್ನು 10 ಸರಿ ಹೇಳಿದಾಗ ಜನರು ನಂಬುತ್ತಾರೆ. ಅದೇ ಕಾರಣಕ್ಕೆ ನಾನು ದೇವರಿಗೆ ಮೊರೆ ಹೋಗಿದ್ದೇನೆ. ಸುಳ್ಳು ಸಾಯಬೇಕು ಸತ್ಯ ಗೆಲ್ಲಬೇಕು. ನನಗೆ ಬದುಕಿಗೆ ಬೇಕಾದಷ್ಟು ಸಂಪತ್ತು ಭಗವಂತ ಕೊಟ್ಟಿದ್ದು, 40 ವರ್ಷದಿಂದ ಉದ್ಯಮ ನಡೆಸುತ್ತಿದ್ದೇನೆ. ರಾಜಕೀಯ ನನಗೆ ಗಂಜಿ ಕೇಂದ್ರ ಅಲ್ಲ, ಅನಿವಾರ್ಯವೂ ಅಲ್ಲ. ಆದರೆ ಜನರಿಗೆ ತಪ್ಪು ಸಂದೇಶ ಹೋಗಬಾರದು. ನಾನು ಮಾಡಿರುವುದು ಪ್ರಾರ್ಥನೆ ಹೊರತು ಆಣೆ ಪ್ರಮಾಣ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
‘ಜನ ನಾಯಗನ್’ ಸಿನಿಮಾ (Jana Nayagan Movie) ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಮೂಲ ದಿನಾಂಕ ಮುಗಿದು ಎರಡು ತಿಂಗಳು ಕಳೆದರೂ ಸಿನಿಮಾಗೆ ರಿಲೀಸ್ ಭಾಗ್ಯ ಸಿಗುತ್ತಿಲ್ಲ. ಈ ಮಧ್ಯೆ, ‘ಜನ ನಾಯಗನ್’ ಸಿನಿಮಾ ಮಾರ್ಚ್ 19ರ ರಿಲೀಸ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಅವಕಾಶ ಸಿಗಬಾರದು ಎಂದು ಎಲ್ಲರೂ ನಿರ್ಧರಿಸಿದಂತೆ ಇದೆ. ಏಕೆಂದರೆ, ಸಿನಿಮಾ ವಿಮರ್ಶೆ ಮಾಡೋದಕ್ಕೆ ಪುರನ್ ವಿಮರ್ಶೆ ಸಮಿತಿ ರೆಡಿ ಇದ್ದಂತೆ ಕಾಣಿಸುತ್ತಿಲ್ಲ.
‘ಜನ ನಾಯಗನ್’ ಚಿತ್ರವನ್ನು ವಿಮರ್ಶೆ ಮಾಡಲು ಕೆವಿಎನ್ ಸಂಸ್ಥೆ ಡಿಸೆಂಬರ್ನಲ್ಲಿಯೇ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಸಿನಿಮಾ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಪುನರ್ ವಿಮರ್ಶೆ ಸಮಿತಿಗೆ ಸಿನಿಮಾ ಸಲ್ಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಹೇಳಿತ್ತು. ಇದರಿಂದ ಸಿಟ್ಟಾದ ಕೆವಿಎನ್ ಕೋರ್ಟ್ ಮೆಟ್ಟಿಲೇರಿತ್ತು. ಸ್ಥಳೀಯ ಕೋರ್ಟ್ನಿಂದ ಹಿಡಿದು ಸುಪ್ರೀಂಕೋರ್ಟ್ವರೆಗೆ ತಂಡ ಅರ್ಜಿ ಸಲ್ಲಿಸಿತ್ತು.
ಆದರೆ, ಕೋರ್ಟ್ನಲ್ಲಿ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂಬ ಸ್ಪಷ್ಟತೆ ಸಿಕ್ಕ ಬಳಿಕ ‘ಜನ ನಾಯಗನ್’ ತಂಡ ಕೋರ್ಟ್ನಿಂದ ಅರ್ಜಿ ಹಿಂಪಡೆದು, ಪುನರ್ ವಿಮರ್ಶೆ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು (ಮಾರ್ಚ್ 9) ಮಧ್ಯಾಹ್ನ ‘ಜನ ನಾಯಗನ್’ ಸಿನಿಮಾ ನೋಡುವುದಾಗಿ ಪುನರ್ ವಿಮರ್ಶೆ ಸಮಿತಿ ಹೇಳಿದ್ದಾಗಿ ವರದಿ ಆಗಿತ್ತು. ಆದರೆ, ಈಗ ಈ ಪ್ರಕ್ರಿಯೆಯೂ ವಿಳಂಬ ಆಗುತ್ತಿದೆ.
ಸಮಿತಿಯಲ್ಲಿರುವ ಒಬ್ಬರಿಗೆ ತೀವ್ರ ಅನಾರೋಗ್ಯ ಉಂಟಾಗಿದೆಯಂತೆ. ಇದೇ ಕಾರಣ ನೀಡಿ ಸಿನಿಮಾ ವಿಮರ್ಶೆಯನ್ನು ಮುಂದಕ್ಕೆ ಹಾಕಲಾಗಿದೆ. ಇದು ತಂಡದ ಅಸಮಾಧಾನಕ್ಕೆ ಕಾರಣ ಆಗಿದೆ. ಇನ್ನು ಅಭಿಮಾನಿಗಳಿಗೂ ಸಾಕಷ್ಟು ನೋವುಂಟು ಮಾಡಿದೆ. ಈ ಬೆಳವಣಿಗೆಯಿಂದ ಮಾರ್ಚ್ 19ರ ದಿನಾಂಕ ಕೂಡ ಮಿಸ್ ಆಗುವ ಸೂಚನೆ ಸಿಕ್ಕಿದೆ.
‘ಜನ ನಾಯಗನ್’ ಚಿತ್ರವನ್ನು ವಿನೋದ್ ನಿರ್ದೇಶನ ಮಾಡಿದ್ದಾರೆ. ಕೆಲವು ಆ್ಯಕ್ಷನ್ ಚಿತ್ರಗಳನ್ನು ಅವರು ನೀರ್ದೇಶನ ಮಾಡಿದ್ದರು. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಕಡಪ, ಮಾರ್ಚ್ 09: ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿತ್ತು.ಜನರು ಟಿನ್, ಬಕೆಟ್, ಬಾಟಲಿ ಮತ್ತು ಡ್ರಮ್‌ಗಳನ್ನು ಬಳಸಿ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.ಸರಿಸುಮಾರು 21,000 ಲೀಟರ್ ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿತ್ತು. ಪೊಲೀಸರು ಬರುವ ಮೊದಲೇ ಹೆಚ್ಚಿನ ಪ್ರಮಾಣದ ತುಪ್ಪವನ್ನು ತೆಗೆದುಕೊಂಡು ಹೋಗಲಾಗಿತ್ತು.ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ.