ದೆಹಲಿ-ಗೋವಾ ಆಕಾಶ ಏರ್​ ವಿಮಾನದ ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ

ದೆಹಲಿ-ಗೋವಾ ಆಕಾಶ ಏರ್​ ವಿಮಾನದ ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ

ನವದೆಹಲಿ, ಮಾರ್ಚ್​ 09: ದೆಹಲಿ-ಗೋವಾ ಆಕಾಶ ಏರ್​ ವಿಮಾನ(Plane)ದಲ್ಲಿ ಪ್ರಯಾಣಿಕರೊಬ್ಬರು ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು  ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ QP1625 ವಿಮಾನದಲ್ಲಿ ಶನಿವಾರ ಈ ಘಟನೆ ನಡೆದಿದೆ.

ದೆಹಲಿ ನಿವಾಸಿ ಆಶಿಶ್ ಎಂಬ ವ್ಯಕ್ತಿ ಪ್ರಯಾಣದ ಸಮಯದಲ್ಲಿ ವಿಮಾನದ ವಾಶ್ ರೂಂ ಒಳಗೆ ಧೂಮಪಾನ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ತನ್ನ ದೂರಿನಲ್ಲಿ, ಪ್ರಯಾಣಿಕ ಲೈಟರ್ ಅನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿತ್ತು, ಇದು ವಿಮಾನ ಮತ್ತು ವಿಮಾನದಲ್ಲಿದ್ದವರಿಗೆ ಸುರಕ್ಷತಾ ಅಪಾಯವನ್ನುಂಟುಮಾಡಬಹುದು ಎಂದು ತಿಳಿಸಿದೆ.

ಈ ಕೃತ್ಯವು ಹಾರಾಟದ ಸಮಯದಲ್ಲಿ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕ ಧೂಮಪಾನ ಮಾಡುತ್ತಿರುವುದು ಕಂಡುಬಂದ ನಂತರ ತನ್ನ ಸಿಬ್ಬಂದಿ ಅಗತ್ಯ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಿದ್ದಾರೆ ಮತ್ತು ಗೋವಾಕ್ಕೆ ಬಂದ ನಂತರ ಅವರನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಆಕಾಶ ಏರ್ ಹೇಳಿದೆ.

ಮತ್ತಷ್ಟು ಓದಿ: ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ಆರೋಪಿಗಳ ವಿರುದ್ಧ ಮೋಪಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ನಾಗರಿಕ ವಿಮಾನಯಾನ ಸುರಕ್ಷತಾ ಕಾಯ್ದೆಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆಕಾಶ ಏರ್ ಹೇಳಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇಂಥಾ ಹಲವು ಘಟನೆಗಳು ಹಲವು ವಿಮಾನಗಳಲ್ಲಿ ನಡೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಇರಾನ್-ಇಸ್ರೇಲ್ ಯುದ್ಧ ಯಾವಾಗ ಕೊನೆಗೊಳ್ಳುತ್ತೆ? ಟ್ರಂಪ್ ಹೇಳಿದ್ದೇನು?

ವಾಷಿಂಗ್ಟನ್, ಮಾರ್ಚ್​ 09: ಇರಾನ್​(Iran) ಜತೆಗಿನ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸೇರಿ ತೆಗೆದುಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ದಿ ಟೈಮ್ಸ್​​ ಆಫ್​ ಇಸ್ರೇಲ್​​ಗೆ ನೀಡಿದ್ದ ಸಂದರ್ಶನದಲ್ಲಿ ಟ್ರಂಪ್ ಮಾತನಾಡಿ, ತಾನು ಮತ್ತು ನೆತನ್ಯಾಹು ಇಲ್ಲದೇ ಇದ್ದಿದ್ದರೆ ಇಸ್ಲಾಮಿಕ್ ಗಣರಾಜ್ಯ ಇಸ್ರೇಲ್ ಅನ್ನು ನಾಶಮಾಡುತ್ತಿತ್ತು ಎಂದು ಹೇಳಿದ್ದಾರೆ.

ಇರಾನ್, ಇಸ್ರೇಲ್ ಮತ್ತು ಅದರ ಸುತ್ತಲಿನ ಎಲ್ಲವನ್ನೂ ನಾಶಮಾಡಲು ಹೊರಟಿತ್ತು. ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ, ಇಸ್ರೇಲ್ ಅನ್ನು ನಾಶಮಾಡಲು ಬಯಸಿದ ದೇಶವನ್ನು ನಾವು ನಾಶಪಡಿಸಿದ್ದೇವೆ ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ಇರಾನ್ ಜತೆಗಿನ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ತಾವು ಮಾತ್ರ ನಿರ್ಧರಿಸುತ್ತಾರೋ ಅಥವಾ ನೆತನ್ಯಾಹು ಕೂಡ ತಮ್ಮ ಅಭಿಪ್ರಾಯ ತಿಳಿಸುತ್ತಾರೋ ಎಂಬ ಪ್ರಶ್ನೆಗೆ ಟ್ರಂಪ್ ಪ್ರತುಕ್ರಿಯಿಸಿದ್ದಾರೆ. ನಾವಿಬ್ಬರೂ ಮಾತುಕತೆ ನಡೆಸುತ್ತಿದ್ದೇವೆ ಎಂದರು.

ನಾನು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ, ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ನೆತನ್ಯಾಹು ಅವರ ಅಭಿಪ್ರಾಯವನ್ನು ಹೇಳಬಹುದಾದರೂ ಟ್ರಂಪ್ ಅವರ ನಿರ್ಧಾರವು ಅಂತಿಮವಾಗಿರುತ್ತದೆ . ಅಮೆರಿಕ ತನ್ನ ದಾಳಿಯನ್ನು ನಿಲ್ಲಿಸಲು ನಿರ್ಧರಿಸಿದ ನಂತರವೂ ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಮುಂದುವರೆಸಬಹುದೇ ಎಂಬ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸಿ ಅದು ಅಗತ್ಯ ಎಂದು ನನಗೆ ಅನಿಸುತ್ತಿಲ್ಲ ಎಂದರು.

ಮತ್ತಷ್ಟು ಓದಿ: ಇರಾನ್​ ರಾಜಧಾನಿ ಮೇಲೆ ಇಸ್ರೇಲ್ ವಾಯುದಾಳಿ: ತೈಲ ಡಿಪೋಗಳು ಸ್ಫೋಟ, ಬಾನೆತ್ತರಕ್ಕೆ ಚಿಮ್ಮಿದ ಬೆಂಕಿ

ಫೆಬ್ರವರಿ 28 ಎಂದು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಮೇಲೆ ದಾಳಿ ಮಾಡಿದ್ದವು, ಇದು ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯ ಹತ್ಯೆಗೆ ಕಾರಣವಾಗಿತ್ತು.
ಇರಾನ್​ನ ತಜ್ಞರ ಸಭೆಯು ಖಮೇನಿಯ ಮಗ ಮೊಜ್ತಬಾ ಅವರನ್ನು ದೇಶದ ಮುಂದಿನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಿದೆ.

ಈ ಯುದ್ಧದಲ್ಲಿ ಇರಾನ್‌ನಲ್ಲಿ ಕನಿಷ್ಠ 1,230 ಜನರು, ಲೆಬನಾನ್‌ನಲ್ಲಿ ಕನಿಷ್ಠ 397 ಜನರು ಮತ್ತು ಇಸ್ರೇಲ್‌ನಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 1 ರಂದು ಸೌದಿ ಅರೇಬಿಯಾದಲ್ಲಿ ಸೈನಿಕರ ಮೇಲೆ ಇರಾನ್ ನಡೆಸಿದ ದಾಳಿಯಿಂದ ಗಾಯಗೊಂಡು ಸೇನಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನೀರಿಗೆ ಬಾರೆ ಚನ್ನಿ’ ಹಾಡಿಗೆ ರಚಿತಾ-ದುನಿಯಾ ವಿಜಯ್ ಡ್ಯಾನ್ಸ್

ರಚಿತಾ ರಾಮ್ ಹಾಗೂ ದುನಿಯಾ ವಿಜಯ್ ಅವರು ಇತ್ತೀಚೆಗೆ ಲ್ಯಾಂಡ್​ ಲಾರ್ಡ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಇವರು ಇತ್ತೀಚೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಮತ್ತೆ ಒಟ್ಟಾಗಿ ಕಾಣಿಸಿಕೊಂಡರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರೂ ‘ನೀರಿಗೆ ಬಾರೆ ಚನ್ನಿ..’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡು ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಲ್ಮಾನ್ ಖಾನ್ ಹಾಡಿಗೆ ಐಶ್ವರ್ಯಾ-ಸಲ್ಮಾನ್ ಖಾನ್ ಭರ್ಜರಿ ಡ್ಯಾನ್ಸ್

ಸಲ್ಮಾನ್ ಖಾನ್ (Salman Khan) ಮತ್ತು ಐಶ್ವರ್ಯಾ ರೈ ಒಂದು ಕಾಲದಲ್ಲಿ ಒಟ್ಟಾಗಿ ಸುತ್ತಿದವರು. ಅವರ ಪ್ರೇಮಕಥೆ, ಜಗಳ ಮತ್ತು ಬೇರೆ ಆಗಿದ್ದು ಎಲ್ಲರಿಗೂ ತಿಳಿದಿದೆ. ನಂತರ ಐಶ್ವರ್ಯಾ ಅವರು ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಮತ್ತೊಂದೆಡೆ, ಸಲ್ಮಾನ್ ಇನ್ನೂ ಒಂಟಿಯಾಗಿದ್ದಾರೆ. ಈಗ, ದಂಪತಿ ಮತ್ತೊಮ್ಮೆ ಸುದ್ದಿಗೆ ಬರಲು ಕಾರಣ ಐಶ್ವರ್ಯಾ ಅವರ ವೈರಲ್ ವಿಡಿಯೋ.ಅವರು ಸಲ್ಲು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇತ್ತೀಚೆಗೆ, ಐಶ್ವರ್ಯಾ ತಮ್ಮ ಪತಿಯೊಂದಿಗೆ ಮದುವೆಗೆ ಬಂದಿದ್ದರು. ಈ ಸಮಯದಲ್ಲಿ, ಇಬ್ಬರೂ ವೇದಿಕೆಯಲ್ಲಿ ನೃತ್ಯ ಮಾಡಿದರು. ಈ ಡ್ಯಾನ್ಸ್ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕಾರಣವೆಂದರೆ ಈ ವೀಡಿಯೊದಲ್ಲಿ, ಐಶ್ವರ್ಯಾ ಮತ್ತು ಅಭಿಷೇಕ್ ಸಲ್ಮಾನ್ ಖಾನ್ ಅವರ ಹಾಡಿಗೆ ನೃತ್ಯ ಮಾಡಿದ್ದಾರೆ. ಅದು ಕೂಡ ಸಲ್ಮಾನ್ ಖಾನ್ ಹಾಡಿಗೆ.

ಮದುವೆಯಲ್ಲಿ ಐಶ್ವರ್ಯಾ ನೀಲಿ ಬಣ್ಣದ ಸೂಟ್ ಧರಿಸಿದ್ದರೆ, ಅಭಿಷೇಕ್ ನೀಲಿ ಮತ್ತು ಬಿಳಿ ಬಣ್ಣದ ಕುರ್ತಾ ಮತ್ತು ಪೈಜಾಮ ಧರಿಸಿದ್ದಾರೆ. ಮದುವೆಯಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ‘ಸಲಾಮ್-ಎ-ಇಷ್ಕ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದು ಸಲ್ಮಾನ್ ಖಾನ್ ಅವರ ‘ಸಲಾಮ್-ಎ-ಇಷ್ಕ್’ ಚಿತ್ರದ ಪ್ರಸಿದ್ಧ ಹಾಡು. ಮುದಿತ್ ಅದಾನಿ ಮತ್ತು ಅನನ್ಯ ದಿವಾಂಜಿ ಅವರ ಮದುವೆಯಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಡ್ಯಾನ್ಸ್ ಮಾಡಿದರು. ನೀತಾ ಅಂಬಾನಿ ಕೂಡ ಅವರೊಂದಿಗೆ ಇದ್ದರು.

ಸಲಾಮ್-ಎ-ಇಷ್ಕ್ ಹಾಡನ್ನು ಶಂಕರ್-ಎಹ್ಸಾನ್-ಲೋಯ್ ಸಂಯೋಜಿಸಿದ್ದಾರೆ ಮತ್ತು ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದ್ದಾರೆ. ಹಾಡಿನ ಸಾಹಿತ್ಯವನ್ನು ಸಮೀರ್ ಅಂಜನ್ ಬರೆದಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಅನಿಲ್ ಕಪೂರ್, ಜೂಹಿ ಚಾವ್ಲಾ, ಗೋವಿಂದ, ವಿದ್ಯಾ ಬಾಲನ್, ಜಾನ್ ಅಬ್ರಹಾಂ ಮತ್ತು ಶಾನನ್ ಇಸ್ರಾ ನಟಿಸಿದ್ದಾರೆ.

ಇದನ್ನೂ ಓದಿ: ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್

ಇದಕ್ಕೂ ಮೊದಲು, ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ತೆರಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ ಮುಗಿದರೂ ಭಾರತದಲ್ಲೇ ಸಿಲುಕಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್

T20 World Cup 2026: ಟಿ20 ವಿಶ್ವಕಪ್ ಮುಗಿದರೂ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡ ಇನ್ನೂ ಸಹ ಭಾರತದಲ್ಲೇ ಉಳಿದಿದ್ದಾರೆ. ಅಂದರೆ ಮಾರ್ಚ್ 1 ರಂದು ಕೊನೆಯ ಪಂದ್ಯವಾಡಿದ್ದ ವಿಂಡೀಸ್ ಪಡೆ ಇನ್ನೂ ಸಹ ತವರಿಗೆ ಮರಳಿಲ್ಲ. ಇತ್ತ ಮಾರ್ಚ್ 4 ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಮಿಫೈನಲ್ ಆಡಿದ್ದ ಸೌತ್ ಆಫ್ರಿಕಾ ತಂಡ ಕೂಡ ಇನ್ನೂ ಸಹ ಕೊಲ್ಕತ್ತಾದಲ್ಲೇ ಇದ್ದಾರೆ. ಅಂದರೆ ಉಭಯ ತಂಡಗಳ ಆಟಗಾರರಿಗೆ ಇನ್ನೂ ಸಹ ತವರಿಗೆ ತೆರಳಲು ಸಾಧ್ಯವಾಗಿಲ್ಲ.

ಇದಕ್ಕೆ ಮುಖ್ಯ ಕಾರಣ ಗಲ್ಫ್ ಪ್ರದೇಶದಲ್ಲಿನ ಅಂತರಾಷ್ಟ್ರೀಯ ವಾಯುಯಾನ ನಿರ್ಬಂಧ. ಇಸ್ರೇಲ್/ಅಮೆರಿಕ ಮತ್ತು ಇರಾನ್ ನಡುವಣ ಯುದ್ಧದಿಂದಾಗಿ ವಾಯು ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದೆ.

ಇದರಿಂದ  ದುಬೈ ಅಥವಾ ಕತಾರ್ ಮೂಲಕ ತವರಿಗೆ ಪ್ರಯಾಣಿಸಬೇಕಿದ್ದ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳ ಆಟಗಾರರು ಸಂಕಷ್ಟಕ್ಕೆ ಸಿಲಿಕಿದ್ದಾರೆ.

ಇದೀಗ ಉಭಯ ತಂಡಗಳ ಆಟಗಾರರಿಗೆ ಮಾರ್ಚ್ 10 ರಂದು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಐಸಿಸಿ ತಿಳಿಸಿದೆ. ಅಂದರೆ ಮಂಗಳವಾರ ಮುಂಜಾನೆ ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಆಟಗಾರರನ್ನು ತವರಿಗೆ ಕಳುಹಿಸಿ ಕೊಡಲಾಗುವುದು ಎಂದು ಐಸಿಸಿ ತಿಳಿಸಿದೆ.

ಅದರಂತೆ ಸೌತ್​ ಆಫ್ರಿಕಾ ತಂಡದ ಬಹುತೇಕ ಆಟಗಾರರು ಜೋಹಾನ್ಸ್‌ಬರ್ಗ್‌ಗೆ ಮರಳಲಿದ್ದಾರೆ. ಆದರೆ ಕೇಶವ್ ಮಹಾರಾಜ್ ಸೇರಿದಂತೆ ಮೂವರು ಆಟಗಾರರು ಭಾರತದಿಂದಲೇ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ತೆರಳಿದ್ದಾರೆ.

ಹಾಗೆಯೇ ವೆಸ್ಟ್ ಇಂಡೀಸ್ ತಂಡದ ಆಟಗಾರರು ಮೊದಲು ಜೋಹಾನ್ಸ್‌ಬರ್ಗ್‌ಗೆ ತೆರಳಿ, ಅಲ್ಲಿಂದ ಆಂಟಿಗುವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಇದರ ನಡುವೆ ಟೀಮ್ ಇಂಡಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತ ಇಂಗ್ಲೆಂಡ್ ತಂಡವು ಈಗಾಗಲೇ ತವರಿಗೆ ತಲುಪಿದ್ದಾರೆ. ಇತ್ತ ಇಂಗ್ಲೆಂಡ್ ತಂಡಕ್ಕೆ ಬೇಗನೆ ವ್ಯವಸ್ಥೆ ಕಲ್ಪಿಸಿ, ಇತರೆ ಎರಡು ತಂಡಗಳ ಆಟಗಾರರನ್ನು ನಿರ್ಲಕ್ಷಿಸಿರುವ ಬಗ್ಗೆ ಇದೀಗ ಪ್ರಶ್ನೆಗಳೆದ್ದಿವೆ.

ಅದರಲ್ಲೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ಐಸಿಸಿಯ ಈ ನಡೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಬಲಿಷ್ಠ ಕ್ರಿಕೆಟ್ ಮಂಡಳಿ ಹಾಗೂ ಬಡ ಕ್ರಿಕೆಟ್ ಮಂಡಳಿ ನಡುವಣ ವ್ಯತ್ಯಾಸ. ಇಂತಹ ತಾರತಮ್ಯವೇಕೆ ಎಂದು ಮೈಕೆಲ್ ವಾನ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Virat Kohli: ನಿಜವಾಗ್ಲೂ ಖುಷಿಯಾಯ್ತು… ಅರ್ಹ ಆಟಗಾರನಿಗೆ POTT ಪ್ರಶಸ್ತಿ ಸಿಕ್ಕಿದೆ..!

ಒಟ್ಟಿನಲ್ಲಿ ಟಿ20 ವಿಶ್ವಕಪ್ ಮುಗಿದು ಟೀಮ್ ಇಂಡಿಯಾ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡು ಮನೆಗೆ ತೆರಳಿದರೂ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ಆಟಗಾರರು ಇನ್ನೂ ಸಹ ಭಾರತದಲ್ಲೇ ಸಿಕ್ಕಿಹಾಕಿಕೊಂಡಿರುವುದು ಮಾತ್ರ ವಿಪರ್ಯಾಸ.

 

 

 

Source link

ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು

ಛತ್ತೀಸ್​ಗಢ, ಮಾರ್ಚ್​ 09: ರಾತ್ರಿ ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲಕಿ(Girl)ಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಎಸೆದು ಹೋಗಿರುವ ಘಟನೆ ಛತ್ತೀಸ್​ಗಢದ ಹಳ್ಳಿಯೊಂದರಲ್ಲಿ ನಡೆದಿದೆ. ಮಧ್ಯರಾತ್ರಿ ಹೊಲವೊಂದರಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಾರ್ಚ್​ 6ರಂದು ರಾತ್ರಿ ಕಂಕೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಮನೆಯಲ್ಲಿ ಪೋಷಕರ ಪಕ್ಕದಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ಯುವಕರು ಕುಡಿದ ಮತ್ತಿನಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಬಂದಿರಬಹುದು ಬಳಿಕ ಅಲ್ಲಿ ನಡೆದಿದ್ದೇ ಬೇರೆ ಎಂದಿದ್ದಾರೆ.

ಆರೋಪಿಗಳಾದ ಅಮಿತ್ ಜೈನ್ (20) ಮತ್ತು ರೋಹನ್ ಜೈನ್ (19) ಮಲಗಿದ್ದ ಬಾಲಕಿಯನ್ನು ಗಮನಿಸಿ ಮನೆಯಿಂದ ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಅದೇ ಹಳ್ಳಿಯಲ್ಲಿರುವ ಕೊಳದ ಬಳಿಗೆ ಬಾಲಕಿಯನ್ನು ಕರೆದೊಯ್ದರು. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆರೋಪಿ ಪರಾರಿಯಾಗಿದ್ದಾನೆ.

ಆಕೆಯ ಪೋಷಕರು ಮಧ್ಯರಾತ್ರಿ 12.30 ರ ಸುಮಾರಿಗೆ ಎಚ್ಚರವಾದಾಗ ತಮ್ಮ ಮಗಳು ಕಾಣೆಯಾಗಿದ್ದಾಳೆಂಬುದು ಗಮನಕ್ಕೆ ಬಂದಿತ್ತು. ಮಗಳು ಹೊರಗೆ ಹೋಗಿರಬಹುದು ಎಂದು ಭಾವಿಸಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದಾಗ ಆಕೆ ಹೊಲದಲ್ಲಿ ನಿತ್ರಾಣ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು.

ಮತ್ತಷ್ಟು ಓದಿ: ಉತ್ತರಾಖಂಡ್: ಮಹಿಳಾ ಟೂರಿಸ್ಟ್​ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಟ್ಯಾಕ್ಸಿ ಡ್ರೈವರ್, ಹೆದರಿ ಕಾಡಿನಲ್ಲಿ ರಾತ್ರಿ ಕಳೆದ ಯುವತಿ

ಮೊದಲು ಸಿಗದಿದ್ದಾಗ, ಕುಟುಂಬದವರು ಗ್ರಾಮದ ಕೋಟ್ವಾರ್‌ಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ, ಪೊಲೀಸ್ ತಂಡಗಳು ಮತ್ತು ಗ್ರಾಮಸ್ಥರು ಮಗುವನ್ನು ಹುಡುಕುವ ಭರವಸೆಯಿಂದ ಹತ್ತಿರದ ಪ್ರದೇಶಗಳನ್ನು ಜಾಲಾಡುತ್ತಾ ಕತ್ತಲೆಯಲ್ಲಿ ಹುಡುಕಲು ಪ್ರಾರಂಭಿಸಿದರು. ಕೊಳದ ಬಳಿಯ ಹತ್ತಿರದ ಹೊಲದಲ್ಲಿ ಆಕೆ ಪತ್ತೆಯಾಗಿದ್ದಾಳೆ.

ಆಕೆಯನ್ನು ಕಂಕೇರ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು. ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.

ವಿಚಾರಣೆಯ ಸಮಯದಲ್ಲಿ, ಅಮಿತ್ ಜೈನ್ ಮತ್ತು ರೋಹನ್ ಜೈನ್ ಎಂಬ ಇಬ್ಬರು ಅಪರಾಧವನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಸಾಹು ತಿಳಿಸಿದ್ದಾರೆ.

ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

 

Source link

ಬಿಸಿಲಿನ ತಾಪಕ್ಕೆ ‘ಬೆಂದಕಾಳೂರು’ ವಿಲ ವಿಲ! ಮಣ್ಣಿನ ಮಡಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಬೆಂಗಳೂರು, ಮಾರ್ಚ್​ 09: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಫೆಬ್ರವರಿಯಿಂದಲೇ ಆರಂಭವಾದ ಬೇಸಿಗೆಯ ತಾಪ ಇನ್ನೂ ಕಡಿಮೆಯಾಗದೇ ಇರುವ ಹಿನ್ನೆಲೆ, ತಂಪಿಗಾಗಿ ಜನರು ಮಣ್ಣಿನ ಮಡಿಕೆ ಮತ್ತು ಎಳನೀರಿನ ಮೊರೆ ಹೋಗುತ್ತಿರುವ ದೃಶ್ಯಗಳು ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿವೆ.

ಮಣ್ಣಿನ ಮಡಿಕೆ, ಎಳನೀರಿಗೆ ಹೆಚ್ಚಿನ ಬೇಡಿಕೆ

ಬೇಸಿಗೆ ಕಾಲ ಆರಂಭವಾದಾಗಲೇ ಬೆಂಗಳೂರಿನ ಜನರು ಮಣ್ಣಿನ ಮಡಿಕೆ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ಬಾರಿ ಕೂಡ ಮಣ್ಣಿನ ಮಡಿಕೆಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮಡಿಕೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಮಡಿಕೆಗಳು, ಟ್ಯಾಪ್ ಹೊಂದಿರುವ ಮಡಿಕೆಗಳು, ಮಣ್ಣಿನ ಲೋಟಗಳು ಮತ್ತು ಆಕರ್ಷಕ ವಿನ್ಯಾಸದ ಬಾಟಲ್‌ಗಳು ಜನರನ್ನು ಸೆಳೆಯುತ್ತಿವೆ. ಮಡಿಕೆಗಳ ಬೆಲೆ 300 ರೂಪಾಯಿಯಿಂದ 1500 ರೂಪಾಯಿ ವರೆಗೆ ಮಾರಾಟವಾಗುತ್ತಿದ್ದು, ಆರೋಗ್ಯಕರವಾಗಿರುವ ಕಾರಣ ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಇನ್ನೊಂದೆಡೆ, ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಎಳನೀರಿನ ಬೇಡಿಕೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ 20 ರಿಂದ 30 ರೂಪಾಯಿಗೆ ಸಿಗುತ್ತಿದ್ದ ಎಳನೀರು ಈಗ 60 ರಿಂದ 70 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಎಳನೀರು ಸೇವಿಸುವತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಇದನ್ನೂ ಓದಿ ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇಂದೂ ಒಣ ಹವೆ, ತಾಪಮಾನದಲ್ಲಿ ಏರಿಕೆ

ಒಟ್ಟಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ತಂಪು ನೀಡುವ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು, ಮಣ್ಣಿನ ಮಡಿಕೆ ಮತ್ತು ಎಳನೀರಿನ ಮಾರಾಟದಲ್ಲಿ ಏರಿಕೆ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಜನರು ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿದೆ.

ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Virat Kohli: ನಿಜವಾಗ್ಲೂ ಖುಷಿಯಾಯ್ತು… ಅರ್ಹ ಆಟಗಾರನಿಗೆ POTT ಪ್ರಶಸ್ತಿ ಸಿಕ್ಕಿದೆ..!

T20 World Cup 2026: ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಗ್ರ ಕ್ರಮಾಂಕದ ಮೂವರು ಅರ್ಧಶತಕ ಬಾರಿಸಿದ್ದರು. ಅದರಲ್ಲೂ ವಿಸ್ಫೋಟಕ ಇನಿಂಗ್ಸ್ ಆಡಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ 89 ರನ್ ಚಚ್ಚಿದ್ದರು.

ಮತ್ತೊಂದೆಡೆ ಅಭಿಷೇಕ್ ಶರ್ಮಾ 52 ರನ್ ಬಾರಿಸಿದರೆ, ಇಶಾನ್ ಕಿಶನ್ 54 ರನ್ ಸಿಡಿಸಿದ್ದರು. ಈ ಮೂವರ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 255 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದರಲ್ಲೂ ಸಂಜು ಸ್ಯಾಮ್ಸನ್ ಅವರ ಪ್ರಚಂಡ ಆಟವನ್ನು ಹಾಡಿ ಹೊಗಳಲಿದ್ದಾರೆ.

“ಎಂತಹ ಅದ್ಭುತ ಪ್ರದರ್ಶನ. ಅರ್ಹ ವ್ಯಕ್ತಿಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ (POTT) ಪ್ರಶಸ್ತಿ ದಕ್ಕಿದೆ. ಅತ್ಯಂತ ಮುಖ್ಯವಾದ ಪಂದ್ಯಗಳಲ್ಲಿ ನೀವು ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ. ನಿಜವಾಗಿಯೂ ನಿಮ್ಮ ಪ್ರದರ್ಶನ ನೋಡಿ ಖುಷಿಯಾಯ್ತು ಚೆಟ್ಟಾ” ಎಂದು ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಸಂಜು ಸ್ಯಾಮ್ಸನ್ ಅವರನ್ನು ಅಭಿನಂದಿಸುತ್ತಾ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಈ ಬಾರಿಯ ಟೂರ್ನಿಯ ಮೂಲಕ ಸಂಜು ಸ್ಯಾಮ್ಸನ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯೊಂದನ್ನು ಮುರಿದಿದ್ದಾರೆ. 2014ರ ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಸಂಜು ಸರಿಗಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್, ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ 89 ರನ್ ಚಚ್ಚಿದ್ದರು. ಇನ್ನು ಫೈನಲ್ ಮ್ಯಾಚ್​ನಲ್ಲಿ ಮತ್ತೊಮ್ಮೆ 89 ರನ್​ಗಳಿಸುವ ಮೂಲಕ ಕಿಂಗ್ ಕೊಹ್ಲಿಯ ಹ್ಯಾಟ್ರಿಕ್ ಅರ್ಧಶತಕದ ದಾಖಲೆ ಸರಿಗಟ್ಟಿದರು.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಕಿಂಗ್ ಕೊಹ್ಲಿಯ ದಾಖಲೆಯನ್ನು ಸಹ ಸಂಜು ಸ್ಯಾಮ್ಸನ್ ಮುರಿದಿದ್ದಾರೆ. ವಿರಾಟ್ ಕೊಹ್ಲಿ 2014 ರ ಟಿ20 ವಿಶ್ವಕಪ್​ನಲ್ಲಿ 319 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಆದರೆ ಈ ಬಾರಿಯ ಟೂರ್ನಿಯ ಮೂಲಕ ಒಟ್ಟು 321 ರನ್​ಗಳಿಸಿ ಸಂಜು ಸ್ಯಾಮ್ಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಫೈನಲ್ ಮ್ಯಾಚ್​ಗೂ ಮುನ್ನ ನನ್ನ ಸಹೋದರಿ ತೀರಿಕೊಂಡಿದ್ದಾಳೆ, ಇದು ಅವಳಿಗೆ..!

ಈ ಇತಿಹಾಸದೊಂದಿಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಸಂಜು ಸ್ಯಾಮ್ಸನ್ ಅವರ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ.

 

Source link

ಇರಾನ್-ಇಸ್ರೇಲ್ ಸಂಘರ್ಷ: ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ, ಬರಬೇಕಿದ್ದ 21 ವಿಮಾನಗಳು ರದ್ದು

ಬೆಂಗಳೂರು, ಮಾರ್ಚ್ 9: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ. ಇದರ ಪರಿಣಾಮವಾಗಿ ಬೆಂಗಳೂರಿನ (Bangalore) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಮಾರ್ಚ್ 9 ರಂದೂ ಸಹ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಮತ್ತು ಅಲ್ಲಿಂದ ಆಗಮಿಸಬೇಕಿದ್ದ ಒಟ್ಟು 21 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ವಾಯುಪ್ರದೇಶದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಏರ್‌ಲೈನ್ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ.

ಅಧಿಕೃತ ಮಾಹಿತಿ ಪ್ರಕಾರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ 11 ವಿಮಾನಗಳ ಹಾರಾಟ ರದ್ದಾಗಿದೆ. ಅದೇ ರೀತಿ ವಿದೇಶಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 10 ವಿಮಾನಗಳೂ ರದ್ದುಗೊಂಡಿವೆ.

ಒಟ್ಟು 21 ವಿಮಾನಗಳ ಹಾರಾಟ ರದ್ದಾದ ಕಾರಣ, ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ವಿಮಾನ ರದ್ದಾದ ಬಗ್ಗೆ ಸಂಬಂಧಿತ ಏರ್‌ಲೈನ್ ಸಂಸ್ಥೆಗಳು ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಇರಾನ್–ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿಯೂ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರಾಚ್ಯ ದೇಶಗಳತ್ತ ಪ್ರಯಾಣಿಸುವವರು ತಮ್ಮ ವಿಮಾನಗಳ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಹೆಚ್ಚುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದಲ್ಲಿ ವಾಯು ಮಾರ್ಗಗಳ ಮುಚ್ಚುವಿಕೆಯಿಂದಾಗಿ ಕಳೆದ ವಾರದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. ಮಾರ್ಚ್ 1 ರಿಂದ ಮಾರ್ಚ್ 9 ರ ನಡುವೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 200 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ. ವಾರದ ಆರಂಭದಲ್ಲಿ ಅತ್ಯಂತ ಗಮನಾರ್ಹ ಅಡಚಣೆಗಳು ಸಂಭವಿಸಿದ್ದವು. ಮಾರ್ಚ್ 2 ರಂದು 72 ವಿಮಾನ ಹಾರಾಟ ಸ್ಥಗಿತ ಮತ್ತು ಮಾರ್ಚ್ 4 ರಂದು 34 ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ವಿಮಾನಯಾನ ಸಂಸ್ಥೆಗಳು ಸೀಮಿತವಾಗಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಪ್ರಯತ್ನಿಸಿದ್ದರೂ, ಮಾರ್ಚ್ 9 ರಂದು ಮತ್ತೆ 21 ವಿಮಾನಗಳನ್ನು ರದ್ದುಪಡಿಸಲಾಗಿದೆ. ಇದು ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಯಂತ್ರಣ ತಪ್ಪಿ ಮೈ ಮೇಲೆ ಹರಿದ ರಥ; ಮಹಿಳೆಯ ಎರಡೂ ಕಾಲು ಕಟ್!

ಕಲಬುರಗಿ, ಮಾರ್ಚ್​ 09: ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ (Kalaburagi) ಗ್ರಾಮದಲ್ಲಿ ನಡೆದ ಶರಣಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ದುರ್ಘಟನೆ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾದ ನಾಗಮ್ಮ ಎಂಬ ಮಹಿಳೆ ರಥದ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಅವರ ಎರಡೂ ಕಾಲುಗಳು ಕಡಿದು ಹೋಗಿವೆ ಎಂದು ತಿಳಿದುಬಂದಿದೆ.

ಮಹಿಳೆಯ ಸ್ಥಿತಿ ಗಂಭೀರ

ಅರಳಗುಂಡಗಿ ಗ್ರಾಮವು ಶರಣಬಸವೇಶ್ವರರ ಜನ್ಮಸ್ಥಳವಾಗಿರುವ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಇಲ್ಲಿ ಜಾತ್ರೆಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ನಿನ್ನೆ (ಮಾರ್ಚ್​ 08) ಸಂಜೆ ಸುಮಾರು 6 ಗಂಟೆಗೆ ಜಾತ್ರೆಯ ಅಂಗವಾಗಿ ಶರಣಬಸವೇಶ್ವರ ರಥೋತ್ಸವ ಆರಂಭವಾಗಿತ್ತು. ಈ ವೇಳೆ ಗ್ರಾಮಸ್ಥರು ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದರು. ಜನಸಮೂಹ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿದ ರಥ ಜನರು ನಿಂತಿದ್ದ ದಿಕ್ಕಿಗೆ ಚಲಿಸಿದೆ.

ಇದನ್ನೂ ಓದಿ ಬೆಂಗಳೂರಿನ ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್! ಪೊಲೀಸರ 7 ವಿಶೇಷ ತಂಡಗಳಿಂದ ಆರೋಪಿಗಳಿಗೆ ಬಲೆ

ಈ ಸಂದರ್ಭದಲ್ಲಿ ರಥದ ಸಮೀಪದಲ್ಲಿದ್ದ ನಾಗಮ್ಮ ಎಂಬ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ರಥದ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ರಥದ ಚಕ್ರವು ಅವರ ಕಾಲಿನ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಜನರು ತಕ್ಷಣವೇ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ನಾಗಮ್ಮಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಗಮನ ಹರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Exit mobile version