Karnataka Weather Forecast: ಕರಾವಳಿಯಲ್ಲಿ ಮುಂದುವರಿಯಲಿದೆ ಮಳೆ, ಒಳನಾಡಿನಲ್ಲೂ ಮಳೆಯ ಮುನ್ಸೂಚನೆ – Kannada News | Karnataka Weather Forecast: Rain Likely Across Coastal and Interior Districts on August 17 18

ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ (Karnataka) ಮಳೆಯ ವಾತಾವರಣ ಮುಂದುವರಿದಿದ್ದು, ಆಗಸ್ಟ್ 17 ಮತ್ತು 18ರಂದು ಕರಾವಳಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ (Weather Forecast) ನೀಡಲಾಗಿದೆ. ವಾಯವ್ಯ ಬಂಗಾಳ ಕೊಲ್ಲಿ ಹಾಗೂ ಪಶ್ಚಿಮ ಬಂಗಾಳ-ಉತ್ತರ ಒಡಿಶಾ ಕರಾವಳಿ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಆಗಸ್ಟ್ 16ರ ಬೆಳಗ್ಗೆ 8.30ರ ವೇಳೆಗೆ ಅದೇ ಪ್ರದೇಶದಲ್ಲಿ ಮುಂದುವರಿದಿತ್ತು. ಇದು ಸಮುದ್ರಮಟ್ಟದಿಂದ ಸುಮಾರು 7.6 ಕಿ.ಮೀ. ಎತ್ತರದವರೆಗೆ ವ್ಯಾಪಿಸಿದ್ದು, ಹೆಚ್ಚಾದಂತೆ ನೈಋತ್ಯ ದಿಕ್ಕಿಗೆ ಪ್ರಬಲವಾಗಿ ಚಲಿಸುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದು ವಾಯವ್ಯ ದಿಕ್ಕಿನಲ್ಲಿ ಚಲಿಸಿ ಮತ್ತಷ್ಟು ಪ್ರಬಲವಾಗುವ ಸಾಧ್ಯತೆ ಇದೆ.

ಆಗಸ್ಟ್ 17ರಂದು ಎಲ್ಲೆಲ್ಲಿ ಮಳೆ?

  • ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
  • ಉತ್ತರ ಒಳನಾಡು: ಧಾರವಾಡ, ಬೆಳಗಾವಿ, ಹಾವೇರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
  • ದಕ್ಷಿಣ ಒಳನಾಡು: ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಆಗಸ್ಟ್ 18ರಂದು ಯಾವ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ?

ಆಗಸ್ಟ್ 18ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಮುಂಗಾರು ಸಾಮಾನ್ಯ

ಭಾನುವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ನೈಋತ್ಯ ಮುಂಗಾರು ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ನೀಲ್ಕುಂದದಲ್ಲಿ ತಲಾ 5 ಸೆಂ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲೂ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ! – Kannada News | Horoscope Today 17th August​ 2026: Nagpanchami Festival, Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 17, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ನಾಗಪಂಚಮಿ ಹಾಗೂ ಸೂರ್ಯ ಸಂಕ್ರಮಣ (ಸಿಂಹ ರಾಶಿಗೆ ಸೂರ್ಯ ಪ್ರವೇಶ) ದ ವಿಶೇಷ ಪರ್ವ ದಿನವಾಗಿದೆ. ನಾಗಪಂಚಮಿ, ಚರ್ಮವ್ಯಾಧಿ, ಸಂತಾನ, ವಿವಾಹ ಅಥವಾ ಆರೋಗ್ಯಕ್ಕಾಗಿ ನಾಗ ಪೂಜೆ ಮತ್ತು ವ್ರತಗಳನ್ನು ಆಚರಿಸಲು ಬಹು ವಿಶೇಷ ದಿನವಾಗಿದೆ. ವಿಷ್ಣುವಿನ ವಾಹನವಾದ ಗರುಡನ ಪೂಜೆಯೂ ಕೂಡ ವಿಷಪೂರಿತ ಅಂಶಗಳನ್ನು ಹೊರಹಾಕಲು ಸಹಕಾರಿ.

ಇಂದು ಬೆಳಗ್ಗೆ 8:03 ರ ನಂತರ ರವಿ ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಚಂದ್ರನು ಕನ್ಯಾ ರಾಶಿಯ ಹಸ್ತ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರ ಆರ್ಥಿಕ ಸ್ಥಿತಿ, ಆರೋಗ್ಯ, ಕೌಟುಂಬಿಕ ಸಂಬಂಧಗಳು, ವೃತ್ತಿ, ಪ್ರಯಾಣ, ಶುಭ ಸಂಖ್ಯೆಗಳು, ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಉದ್ವಗ್ನತೆಗೆ ಸಿಕ್ಕಿಕೊಳ್ಳುವುದು ಬೇಡ.. – Kannada News | Daily Horoscope for August 17, 2026: Dakshinayana Greeshma season, Shravana Masa shukla Paksha Monday astrology

ಮೇಷ ರಾಶಿ:

ಇಂದು ನೀವು ಗೃಹನಿರ್ಮಾಣದ ಕಾರ್ಯವನ್ನು ಆರಂಭಿಸುವ ಯೋಚನೆ ಇದ್ದರೆ ಅದನ್ನು ಕೈಬಿಡುವುದು ಒಳ್ಳೆಯದು. ನಿನ್ನ ಕೋರಿಕೆಗಳು ಕೆಲವು ಈಡೇರಬಹುದು. ಸುಮ್ಮನಿರದೇ ಇನ್ನೊಬ್ಬರನ್ನು ಕೆಣಕುವುದನ್ನು ಬಿಡಬೇಕು. ಉದ್ಯೋಗವು ಅನ್ಯರ ಪಿತೂರಿಯಿಂದ ನಾಶವಾಗಬಹುದು. ಸ್ತ್ರೀಯರ ಜೊತೆ ಹೆಚ್ಚು ಹರಟೆ ಹೊಡೆಯುವಿರಿ. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಆತ್ಮಪ್ರಶಂಸೆ ಮಾಡುಕೊಳ್ಳುವಿರಿ. ಕೆಲವು ಗಂಟೆಗಳ‌ ಪ್ರಯಾಣವಾದರೂ ಅಸಮಾಧಾನದಿಂದಲೇ ಹೋಗುವಿರಿ.

ವೃಷಭ ರಾಶಿ:

ಹೊಸವಸ್ತುಗಳೇ ಆಗಿದ್ದರೂ ಅವುಗಳಿಂದ ನಷ್ಟವನ್ನು ಪಡೆಯುವಿರಿ. ಕೌಟುಂಬಿಕ ಭಿನ್ನಾಭಿಪ್ರಾಯವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಮೇಲೆ ಸದ್ಭಾವ ಬರಲು ಹಣವನ್ನು ಅಥವಾ ಸಮಯವನ್ನು ನೀಡುವಿರಿ. ನಿಮ್ಮ ಸಲಹೆಗಳನ್ನು ಸ್ವೀಕರಿಸದೇ ಇರುವುದು ನಿಮಗೆ ಬೇಸರವಾದೀತು. ಗಲಭೆಯಲ್ಲಿ ನೀವು ಇಂದು ಭಾಗವಹಿಸುವವರಿದ್ದೀರಿ. ಸಂಗಾತಿಗಳು ಮನಸ್ತಾಪಗಳನ್ನು ಸರಿ ಮಾಡಿಕೊಳ್ಳುವರು. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಮಿಥುನ ರಾಶಿ:

ನಿಮ್ಮ ತೀರ್ಮಾನಗಳು ನಿಮಗೆ ಸಂತೃಪ್ತಿಯನ್ನು ಕೊಡಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭವಿಷ್ಯವು ನಿಮ್ಮನ್ನು ಅತಿಯಾಗಿ ಕಾಡಬಹುದು. ಹೊಸ ಸಂಬಂಧವನ್ನು ಬೆಳೆಸಲು ನೀವು ಸಜ್ಜಾಗಿರುವಿರಿ. ಸಂಗಾತಿಯ ನಿರ್ಧಾರಗಳನ್ನು ವಿರೋಧಿಸುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ.

ಕರ್ಕಾಟಕ ರಾಶಿ:

ನೀವು ಸ್ನೇಹಿತರ ಜೊತೆ ಹೊಸ ಉದ್ಯಮವನ್ನು ನಡೆಸಲು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ಒಲವು ಇರಲಿದೆ. ಮಕ್ಕಳ ವರ್ತನೆಯನ್ನು ಕಂಡು ಆಶ್ಚರ್ಯಪಡುವಿರಿ. ಪ್ರತಿಷ್ಠೆಯನ್ನು ಇಟ್ಟುಕೊಳ್ಳುವುದು ಸುಲಭವಲ್ಲ. ನಿಮ್ಮ ವ್ಯಾಪಾರವು ಸಂಜೆಯ ಅನಂತರ ಚೆನ್ನಾಗಿ ನಡೆಯಲಿದೆ. ನಿಮ್ಮ ಮಾತಿಗೆ ಎದುರಾಡದಿದ್ದರೆ ನೀವು ಗೆದ್ದಿರೆಂದು ಅರ್ಥವಲ್ಲ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು.

ಸಿಂಹ ರಾಶಿ:

ಆರ್ಥಿಕತೆಯೂ ಅಭಿವೃದ್ಧಿಯತ್ತ ಹೊರಳಬಹುದು. ಅಪರಿಚಿತರು ಪರಿಚಿತರಂತೆ ಕಾಣಬಹುದು. ಇಂದು ಕೆಕಸದ ಒತ್ತಡವಿರಲಿದ್ದು ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಬಹುದು. ನಿಮ್ಮ ಪದೋನ್ನತಿ ಸುಲಭಕ್ಕೆ ಆಗದು. ಯಾವುದನ್ನೂ ನೋಡದೇ ಖರೀದಿಗೆ ಒಪ್ಪಿಗೆ ಕೊಡುವುದು ಬೇಡ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿದೆ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು.

ಕನ್ಯಾ ರಾಶಿ:

ನೀವು ಬರಹಗಾರರಾಗಿದ್ದರೆ ನಿಮ್ಮ ಸಾಹಿತ್ಯಕ್ಕೆ ಯಶಸ್ಸು ಬರಬಹುದು. ಕೃಷಿ ಉತ್ಪನ್ನ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಬಹುದು. ನಿಮ್ಮ ಗುರಿಯನ್ನು ಯಾರಾದರೂ ಅಪರಿಚಿತರು ಅಪಹಾಸ್ಯ ಮಾಡಬಹುದು. ನಿಮ್ಮ ಮಾತುಗಳು ಕೆಲವರಿಗೆ ಬೇಸರವನ್ನು ತರಿಸಬಹುದು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು.

ತುಲಾ ರಾಶಿ:

ನಿಮ್ಮ ಕೆಲಸವು ನಿಮಗೆ ಆತ್ಮಸಂತೋಷವನ್ನು ತರಬಹುದು. ಪಂಡಿತರಿಗೆ ಸಣ್ಣ ಮಟ್ಟದ ಗೌರವ ಪ್ರಾಪ್ತವಾಗಲಿದೆ. ಪಾಲುದಾರಿಕೆಯನ್ನು ನೀವು ಅನುಮಾನದಿಂದ ಕಾಣುವಿರಿ. ನಿಮ್ಮ ತಪ್ಪು ನಿರ್ಧಾರಗಳೇ ನಿಮ್ಮನ್ನು ಕಾಡಬಹುದು. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ.

ವೃಶ್ಚಿಕ ರಾಶಿ:

ನಿಮ್ಮ ಮಾತುಗಳು ವರ್ಷದ ವಾದವನ್ನು ಹುಟ್ಟಿಸುವಂತೆ ಮಾಡಬಹುದು. ಇಂದು ನೀವು ಉದ್ಯೋಗವನ್ನು ಹುಡುಕುವ ಪ್ರಯತ್ನ ಮಾಡಿದರೆ ವ್ಯರ್ಥವಾಗಬಹುದು. ನಿಮ್ಮ ನಂಬಿಕೆಗಳು ಗುಸಿಯಾಗಬಹುದು. ‌ಮನೆತನಕ್ಕೆ ಯೋಗ್ಯವಾದ ದಾನವನ್ನು ಮಾಡುವಿರಿ. ಸೌಂದರ್ಯ ವರ್ಧನೆಯ ಕಡೆ ಗಮನವಿರಲಿದೆ. ಹೂಡಿಕೆಯು ದ್ವಿಗುಣವಾಗಬಹುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ಮಾನಸಿಕ ಅಸ್ವಾಸ್ಥ್ಯವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ.

ಧನು ರಾಶಿ:

ಶಿಕ್ಷಣವನ್ನು ನೀವು ಹೊಸ ರೀತಿಯಲ್ಲಿ ಕೊಡಲು ಪ್ರಾರಂಭಿಸಬಹುದು. ಸಂಗಾತಿಯ ಸಲಹೆಯನ್ನು ನೀವು ಸ್ವೀಕರಿಸುವಿರಿ. ಹೊಸ ಉದ್ಯಮವು ಬಹಳ ಸಂತೋಷದಿಂದ ನಡೆಯಲಿದೆ. ಶತ್ರುಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ತೊಂದರೆಯಾಗದಂತೆ ಸರಿ ಮಾಡಿಕೊಳ್ಳಿ. ಅಂದುಕೊಂಡ ಕಾರ್ಯವು ಸ್ವಲ್ಪ ಪೂರ್ಣವಾಯಿತು ಎಂಬ ಸಂತೃಪ್ತಿ ಇರಲಿದೆ. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ಪ್ರಭಾವಿ ವ್ಯಕ್ತಿಗಳ ಜೊತೆ ಸೌಹಾರ್ದದ ಮಾತನಾಡಿ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

ಮಕರ ರಾಶಿ:

ನಿಮ್ಮ ಬಳಿ ಕೆಲವರು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಬರಬಹುದು. ಖರ್ಚಿನ ಮೇಲೆ‌ ನೀವು ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಸ್ವಾರಸ್ಯಕರ ಸಂಗತಿಗಳು ನಿಮಗೆ ಸಹಜದಂತೆ ಆಗಬಹುದು. ಸಣ್ಣ ಅವಕಾಶವನ್ನೇ ದೊಡ್ಡದಾಗಿ ಮಡಿಕೊಳ್ಳುವಿರಿ. ಬೇಡದವರ ಸಹವಾಸದಿಂದ ಹೆಸರು ಹಾಳು. ನಿಮಗೆ ಸಹಾಯಹಸ್ತವನ್ನು ನೀಡುವ ಅವಶ್ಯಕತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು.

ಕುಂಭ ರಾಶಿ:

ಸ್ವೇಚ್ಛಾಚಾರವನ್ನು ಬಿಡುವುದು ಉತ್ತಮ. ಇಂದು ಸೋಲನ್ನು ಒಪ್ಪಿಕೊಳ್ಳಲು ನೀವು ತಯಾರಿರುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ಏನನ್ನಾದರೂ ಮಾಡಲಿದ್ದೀರಿ. ಸ್ನೇಹಿತರ ಸಹವಾಸವು ನಿನಗೆ ಸಾಕೆನಿಸಬಹುದು. ಇನ್ನೊಬ್ಬರ ಸಮಸ್ಯೆಗೆ ನೀವು ಗೋಣು ಕೊಡಬೇಕಾದೀತು. ಕೋಪದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಹೆಚ್ಚಾಗಿರುವುದು. ಅನ್ಯರ ತಪ್ಪಿನಿಂದ ಅಪಘಾತವು ಸಂಭವಿಸಬಹುದು.

ಮೀನ ರಾಶಿ:

ಆಪ್ತರಿಗೂ ನಿಮ್ಮ ಮಾತನ್ನು ಕೇಳುವ ಮನಃಸ್ಥಿತಿಯು ಇರುವುದಿಲ್ಲ. ಎಂತಹ ಎದೆಗಾರಿಕೆ ಇದ್ದರೂ ಒಮ್ಮೆ ಎದೆ ಝಲ್ ಎನ್ನುವ ಸನ್ನಿವೇಶ ಬರುವುದು. ಎಂದಿನಂತೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮದಲ್ಲದ ವಿಚಾರವಾದರೂ ನಿಮ್ಮಲ್ಲಿಗೆ ಅದು ಬರಲಿದೆ. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:16, ಯಮಗಂಡ ಕಾಲ 10:50 – 12:24, ಗುಳಿಕ ಕಾಲ 13:57 – 15:31

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

UGC-NET 2026: ಪ್ರಶ್ನೆಪತ್ರಿಕೆಗಳಲ್ಲಿ ದೋಷ; ಮೂರು ವಿಷಯಗಳ ಮರುಪರೀಕ್ಷೆ ಘೋಷಿಸಿದ ಎನ್​ಟಿಎ – Kannada News | UGC NET 2026: NTA Announces Re Examination for 3 Subjects Over Question Paper Errors

ನವದೆಹಲಿ, ಆಗಸ್ಟ್​​ 16: ದೇಶಾದ್ಯಂತ ನೀಟ್​ ಪ್ರಶ್ನೆ ಪತ್ರಿಕೆ ಲೀಕ್​​ ಕೋಲಾಹಲ ಬೆನ್ನಲ್ಲೇ ಇದೀಗ ಯುಜಿಸಿ-ನೆಟ್ 2026ರ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಪತ್ತೆಯಾಗಿದೆ. ಹೀಗಾಗಿ ಮೂರು ವಿಷಯಗಳ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮರು ಪರೀಕ್ಷೆಗೆ ದಿನಾಂಕವನ್ನು ಘೋಷಿಸಿದೆ.

ಮರು ಪರೀಕ್ಷೆಯ ವೇಳಾಪಟ್ಟಿ ಹೀಗಿದೆ

  • ಇಂಗ್ಲಿಷ್: ಸೆಪ್ಟೆಂಬರ್ 9 (ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ, ಶಿಫ್ಟ್ 1)
  • ವಾಣಿಜ್ಯ (ಕಾಮರ್ಸ್): ಸೆಪ್ಟೆಂಬರ್ 9 (ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ, ಶಿಫ್ಟ್ 2)
  • ಸಮಾಜಶಾಸ್ತ್ರ (ಸೋಷಿಯಾಲಜಿ): ಸೆಪ್ಟೆಂಬರ್ 10 (ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ)

ಎನ್​​ಟಿಎ ಟ್ವೀಟ್​

2026ರ ಜೂನ್‌ನಲ್ಲಿ ಯುಜಿಸಿ-ನೆಟ್ ಪರೀಕ್ಷೆಗಳು ನಡೆದಿದ್ದವು. ಬಳಿಕ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿದ್ದ ಲೋಪದೋಷಗಳ ಬಗ್ಗೆ ಅಭ್ಯರ್ಥಿಗಳಿಂದ ಸಾಲು ಸಾಲು ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಪರಿಶೀಲಿಸಲು ಎನ್‌ಟಿಎ ನೇಮಿಸಿದ್ದ ತಜ್ಞರ ಸಮಿತಿಯು, ಪ್ರಶ್ನೆಪತ್ರಿಕೆಗಳಲ್ಲಿ ಗಂಭೀರ ವಾಸ್ತವಿಕ ದೋಷಗಳು, ಮುದ್ರಣ ಮತ್ತು ಅನುವಾದ ತಪ್ಪುಗಳು, ಪ್ರಮುಖ ವಿದ್ವಾಂಸರ ಹೆಸರು ಹಾಗೂ ಪುಸ್ತಕಗಳ ಶೀರ್ಷಿಕೆಗಳಲ್ಲಿನ ತಪ್ಪುಗಳು, ವ್ಯಾಕರಣ ದೋಷಗಳು ಮತ್ತು ಹಳೆಯ ಪ್ರಶ್ನೆಗಳ ಪುನರಾವರ್ತನೆಯಂತಹ ಹಲವು ಲೋಪಗಳನ್ನು ಪತ್ತೆ ಮಾಡಿದೆ. ಹೀಗಾಗಿ ಮರು ಪರೀಕ್ಷೆಗೆ ಶಿಫಾರಸು ಮಾಡಿತ್ತು.

ಮರು ಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ

ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಭವಿಷ್ಯಕ್ಕೆ ಯಾವುದೇ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಎನ್‌ಟಿಎ ಈ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: UGC NET 2026: ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಹತೆ, ಶುಲ್ಕ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ

ಇನ್ನು ಪರೀಕ್ಷಾ ಕೇಂದ್ರ, ನಗರ ಹಾಗೂ ಅಡ್ಮಿಟ್ ಕಾರ್ಡ್ ಕುರಿತ ವಿವರಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಉಳಿದ 84 ವಿಷಯಗಳ ಫಲಿತಾಂಶ ಪ್ರಕ್ರಿಯೆ ಹಾಗೂ ಜೆಆರ್‌ಎಫ್ ಹಂಚಿಕೆಗೆ ಈ ಮರು ಪರೀಕ್ಷೆಯಿಂದ ಯಾವುದೇ ವಿಳಂಬವಾಗುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Hockey World Cup: ಬಲಿಷ್ಠ ಚೀನಾ ಎದುರು ಭಾರತದ ವನಿತೆಯರ ಕೆಚ್ಚೆದೆಯ ಹೋರಾಟ – Kannada News | 2026 Hockey World Cup: India Women Draw Against Strong China

2026 ರ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್‌ (2026 Hockey World Cup) ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿದ್ದು, ಭಾರತದ ಎರಡೂ ತಂಡಗಳು ನಿರೀಕ್ಷಿತ ಆರಂಭ ಪಡೆದುಕೊಂಡಿವೆ. ಪುರುಷರ ವಿಶ್ವಕಪ್‌ನಲ್ಲಿ, ಟೀಂ ಇಂಡಿಯಾ ತನ್ನ ಮೊದಲ ಪೂಲ್ ಪಂದ್ಯದಲ್ಲಿ ವೇಲ್ಸ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದರೆ, ಇತ್ತ ಮಹಿಳಾ ಹಾಕಿ ತಂಡವು (India Women’s Hockey), ಮಹಿಳಾ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸದಿದ್ದರೂ ಒಲಿಂಪಿಕ್ಸ್‌ ಪದಕ ವಿಜೇತ ಚೀನಾ ವಿರುದ್ಧ 2-2 ಗೋಲುಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಭಾರತ ವನಿತೆಯರ ಕೆಚ್ಚೆದೆಯ ಹೋರಾಟ

ಆಗಸ್ಟ್ 16 ರಂದು ಭಾನುವಾರ ನೆದರ್ಲ್ಯಾಂಡ್ಸ್‌ನ ಆಮ್ಸ್ಟೆಲ್ವೀನ್‌ನಲ್ಲಿ ನಡೆದ ತಮ್ಮ ಮೊದಲ ಪೂಲ್ ಡಿ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿತು. 8 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲ್ ಗಳಿಸುವುದರೊಂದಿಗೆ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, ಏಕೆಂದರೆ ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ (15) ಚೀನಾ ಪೆನಾಲ್ಟಿ ಸ್ಟ್ರೋಕ್ ಪಡೆದು ಗೋಲು ಗಳಿಸಿ ಮೊದಲ ಕ್ವಾರ್ಟರ್‌ ಅನ್ನು 1-1 ರಿಂದ ಸಮಬಲಗೊಳಿಸಿತು. ಕೇವಲ 10 ನಿಮಿಷಗಳ ನಂತರ, ಟೀಂ ಇಂಡಿಯಾ ಮತ್ತೆ ಮುನ್ನಡೆ ಸಾಧಿಸಿತು. ಈ ಬಾರಿ, 25 ನೇ ನಿಮಿಷದಲ್ಲಿ, ದೀಪಿಕಾ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 2-1 ರಿಂದ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಮುಂದಿನ 14 ನಿಮಿಷಗಳ ಕಾಲ ಟೀಂ ಇಂಡಿಯಾ ಮುನ್ನಡೆ ಕಾಯ್ದುಕೊಂಡಿತು. ಆದರೆ 39 ನೇ ನಿಮಿಷದಲ್ಲಿ, ಚೀನಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಸ್ಕೋರ್ ಅನ್ನು 2-2 ರಿಂದ ಸಮಬಲಗೊಳಿಸಿತು. ಚೀನಾ ಮುನ್ನಡೆ ಸಾಧಿಸುತ್ತದೆ ಎಂದು ತೋರುತ್ತಿತ್ತು, ಆದರೆ ಭಾರತದ ಬಲವಾದ ರಕ್ಷಣಾ ಪಡೆ ಮೂರು ಪೆನಾಲ್ಟಿ ಕಾರ್ನರ್‌ಗಳು ಸೇರಿದಂತೆ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸಿಪಂದ್ಯವನ್ನು 2-2 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಈ ಫಲಿತಾಂಶದೊಂದಿಗೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆದವು. ಚೀನಾ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ತನ್ನ ಮೊದಲ ಪಂದ್ಯವನ್ನು ಗೆದ್ದ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.

ಈ ಡ್ರಾ ಏಕೆ ಮುಖ್ಯ?

ಚೀನಾದಂತಹ ಬಲಿಷ್ಠ ತಂಡವನ್ನು ಎದುರಿಸುವಾಗ ಭಾರತ ತಂಡಕ್ಕೆ ಸವಾಲು ಸುಲಭವಾಗಿರಲಿಲ್ಲ. ಈ ಚೀನಾ ತಂಡ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿತು, ಆದರೆ ಭಾರತ ಮಹಿಳಾ ತಂಡಕ್ಕೆ ಆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕೂ ಅವಕಾಶ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು, ಅದೇ ಚೀನಾ ತಂಡ 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿತ್ತು. ಆದ್ದರಿಂದ, ಇಂತಹ ಬಲಿಷ್ಠ ತಂಡದ ವಿರುದ್ಧ ಭಾರತ ಮಹಿಳಾ ತಂಡದ ಪ್ರದರ್ಶನ ಸ್ಮರಣೀಯವಾಗಿತ್ತು. ಇದೀಗ ಟೀಂ ಇಂಡಿಯಾದ ಮುಂದಿನ ಪಂದ್ಯ ಆಗಸ್ಟ್ 18 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಾದರೂ ಭಾರತ ಗೆಲುವಿನ ಖಾತೆ ತೆರೆಯುತ್ತಾ ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶುರುವಾಯ್ತು ಬಿಗ್​​ಬಾಸ್ ಅಗ್ನಿಪರೀಕ್ಷೆ, ಆಕಾಂಕ್ಷಿಗಳಿಗೆ ನಾನಾ ಹಿಂಸೆ – Kannada News | Bigg Boss Kannada 13: Agnipareekshe starts from August 16

ಬಿಗ್​​ಬಾಸ್ (Bigg Boss) ಕನ್ನಡ ಸೀಸನ್ 13 ಪ್ರಾರಂಭಕ್ಕೆ ಕೆಲ ದಿನಗಳಷ್ಟೆ ಬಾಕಿ ಇದೆ. ಆದರೆ ಬಿಗ್​​ಬಾಸ್ ಶೋ ಶುರು ಆಗುವ ಮುಂಚೆಯೇ ಬಿಗ್​​ಬಾಸ್ ‘ಅಗ್ನಿಪರೀಕ್ಷೆ’ ಆರಂಭವಾಗಿದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಬಿಗ್​​ಬಾಸ್ ಮನೆಗೆ ಹೋಗಲು ಅರ್ಜಿ ಹಾಕಿದ ಹಲವಾರು ಮಂದಿಯಲ್ಲಿ ಕೊನೆಯ 60 ಮಂದಿಯನ್ನು ಆಯೋಜಕರು ಆಯ್ಕೆ ಮಾಡಿದ್ದು, ಅವರನ್ನು ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕೊನೆಯ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇಂದು ಟೆಲಿಕಾಸ್ಟ್ ಆರಂಭಿಸಿದ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಮಾಜಿ ವಿನ್ನರ್​​ಗಳಾದ ನಟಿ ಶ್ರುತಿ ಮತ್ತು ಚಂದನ್ ಶೆಟ್ಟಿ ಹಾಗೂ ಬಿಗ್​​ಬಾಸ್ 10ರ ಫಿನಾಲೆ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ಸಂಗೀತ ಶೃಂಗೇರಿ ಜಡ್ಜ್​​ಗಳು. ಅಂತಿಮ ಹಂತಕ್ಕೆ ಆಯ್ಕೆ ಆಗಿರುವ 60 ಮಂದಿಗೆ ನಾನಾ ರೀತಿಯ ಪ್ರಶ್ನೆಗಳು, ಟಾಸ್ಕ್​​ಗಳನ್ನು ನೀಡಿ, ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಅರ್ಹರಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಈ ನಾಲ್ವರು ಜಡ್ಜ್​​ಗಳ ಕೆಲಸ ಆಗಿರಲಿದೆ.

ಇಂದು (ಆಗಸ್​ಟ್ 16) ಪ್ರಸಾರವಾದ ಮೊದಲ ದಿನದ ಎಪಿಸೋಡ್​​ನಲ್ಲಿ ನಾನಾ ಆಕಾಂಕ್ಷಿಗಳು ಬಿಗ್​​ಬಾಸ್ ವೇದಿಕೆಗೆ ಬಂದರು. ನಾಲ್ವರು ಜಡ್ಜ್​​ಗಳನ್ನು ರಂಜಿಸುವ ಅವರನ್ನು ಇಂಪ್ರೆಸ್ ಮಾಡುವ ಪ್ರಯತ್ನ ಮಾಡಿದರು. ಜಡ್ಜ್​​ಗಳು ಸಹ ಆಕಾಂಕ್ಷಿಗಳಿಗೆ ಕಠಿಣಾತಿ ಕಠಿಣವಾದ ಟಾಸ್ಕ್​​ಗಳನ್ನು ನೀಡಿದರು. ಹಿಂದಿಯ ‘ರೋಡೀಸ್’, ‘ಖತರೋಂಕಾ ಕಿಲಾಡಿ’ ಲೆವೆಲ್​​ನ ಟಾಸ್ಕ್​​ಗಳನ್ನು ಸಹ ಸ್ಪರ್ಧಿಗಳು ನೀಡಿದರು. ಎಪಿಸೋಡ್​​ನಲ್ಲಿ ಮೊದಲು ಬಂದ ಸ್ಪರ್ಧಿಗೆ, ಫೋನ್ ಮಾಡಿ ಕಾರಣವಿಲ್ಲದೆ ಉದ್ಯೋಗಕ್ಕೆ ರಾಜೀನಾಮೆ ಕೊಡು ಎಂದರು. ಆ ಯುವತಿ, ಜಡ್ಜ್​ಗಳು ಹೇಳಿದಂತೆ ಮಾಡಿದರು. ಆದರೂ ಅವರು ಆಯ್ಕೆ ಆಗಲಿಲ್ಲ.

ಇದನ್ನೂ ಓದಿ:ಬಿಗ್‌ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ

ಅಗ್ನಿಪರೀಕ್ಷೆಯ ರೂಲ್ಸ್ ಪ್ರಕಾರ, ಎಲ್ಲರೂ ಗ್ರೀನ್ ಕೊಟ್ಟರೆ ಸ್ಟಾರ್ ಕ್ಯಾಂಡಿಡೇಟ್, ಇಬ್ಬರು ಗ್ರೀನ್ ಕೊಟ್ಟು ಇಬ್ಬರು ರೆಡ್ ಕೊಟ್ಟರೆ ಹೋಲ್ಡ್, ಮತ್ತೆ ಅವಕಾಶ ಸಿಗುತ್ತದೆ. ಒಬ್ಬರು ಮಾತ್ರ ಗ್ರೀನ್ ಕೊಟ್ಟು ಮೂವರು ರೆಡ್ ಕೊಟ್ಟರೆ ಔಟ್. ಎಲ್ಲರೂ ರೆಡ್ ಕೊಟ್ಟರೆ ಸಹ ಔಟ್. ಜಡ್ಜ್​​ಗಳಂತೂ ತಮಗೆ ಸಿಕ್ಕಿರುವ ಪವರ್ ಅನ್ನು ಬಳಸಿ ಬರುವ ಆಕಾಂಕ್ಷಿಗಳಿಗೆ ಚಿತ್ರ, ವಿಚಿತ್ರ ಟಾಸ್ಕ್​​ಗಳನ್ನು ನೀಡುತ್ತಿದ್ದಾರೆ. ಆ ಟಾಸ್ಕ್​​ಗಳಿಗೂ ಆಕಾಂಕ್ಷಿಗಳು ಬಿಗ್​​ಬಾಸ್​​ಗೆ ಹೋಗಲು ಬೇಕಾದ ಅರ್ಹತೆಗೂ ಏನು ಸಂಬಂಧ ಎಂಬುದು ಸಹ ಗೊತ್ತಿಲ್ಲದೆ ಟಾಸ್ಕ್​​ಗಳನ್ನು ನೀಡುತ್ತಿದ್ದಾರೆ. ಈ ಜಡ್ಜ್​​ಗಳು ಆಯ್ಕೆ ಮಾಡಿದ ಸ್ಪರ್ಧಿಗಳನ್ನು ಅಂತಿಮವಾಗಿ ಮನೆಯ ಒಳಗೆ ಕಳಿಸುವ ಜವಾಬ್ದಾರಿ ಪ್ರೇಕ್ಷಕರ ಹೆಗಲ ಮೇಲೆಯೇ ಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

The Hundred 2026: ಫೈನಲ್‌ನಲ್ಲಿ ಸೋತ ಸನ್‌ರೈಸರ್ಸ್; ಕಾವ್ಯ ಮಾರನ್ ಕನಸು ನುಚ್ಚು ನೂರು – Kannada News | Trent Rockets Win Women’s The Hundred 2026 Final: Kavya Maran’s Sunrisers Leeds Crushed

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಮಹಿಳಾ ದಿ ಹಂಡ್ರೆಡ್ 2026 ಫೈನಲ್‌ನಲ್ಲಿ (Women’s The Hundred 2026 Final) ಕಾವ್ಯ ಮಾರನ್ ( Kavya Maran ) ಒಡೆತನದ ಸನ್‌ರೈಸರ್ಸ್ ಲೀಡ್ಸ್ ತಂಡವು ಹೀನಾಯ ಸೋಲು ಅನುಭವಿಸಿತು. ಟ್ರೆಂಟ್ ರಾಕೆಟ್ಸ್ ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿ, ಸನ್‌ರೈಸರ್ಸ್ ತಂಡವನ್ನು (Trent Rockets vs Sunrisers Leeds) 8 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟ್ರೆಂಟ್ ರಾಕೆಟ್ಸ್ 46 ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 92 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು. ಈ ಮೂಲಕ ಈ ಸೀಸನ್ ಆರಂಭಕ್ಕೂ ಮುನ್ನ ಕಳೆದ ಬಾರಿಯ ಚಾಂಪಿಯನ್‌ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವನ್ನು ಖರೀದಿಸಿ ಸನ್‌ರೈಸರ್ಸ್ ಲೀಡ್ಸ್ ಎಂಬ ಹೆಸರಿನೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿದಿದ್ದ ಕಾವ್ಯ ಮಾರನ್ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ.

ಸನ್‌ರೈಸರ್ಸ್ ಬ್ಯಾಟಿಂಗ್‌ ವೈಫಲ್ಯ

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಲೀಡ್ಸ್ ತಂಡ ಕಳಪೆ ಆರಂಭ ಪಡೆಯಿತು. ಫೋಬೆ ಲಿಚ್‌ಫೀಲ್ಡ್ ಉತ್ತಮ ಆರಂಭ ಒದಗಿಸಿಕೊಡಲು ಪ್ರಯತ್ನಿಸಿದರಾದರೂ ಕಿಮ್ ಗಾರ್ತ್ ಮತ್ತು ಜಾರ್ಜಿಯಾ ಆಡಮ್ಸ್ ಅವರ ತಂತ್ರಗಳ ಮುಂದೆ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್‌ ವಿಭಾಗ ಸಂಪೂರ್ಣ ಕುಸಿಯಿತು. ಇದರ ಪರಿಣಾಮವಾಗಿ ಸನ್‌ರೈಸರ್ಸ್ ಲೀಡ್ಸ್ ಕೇವಲ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆ ನಂತರ ಬಂದ ದೀಪ್ತಿ ಶರ್ಮಾ 12 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಅನ್ನಾಬೆಲ್ಲೆ ಸದರ್ಲ್ಯಾಂಡ್ ಕೂಡ ಬೇಗನೇ ಇನ್ನಿಂಗ್ಸ್ ಮುಗಿಸಿದರು. ಅಂತಿಮವಾಗಿ ತಂಡವು 91 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ಟ್ರೆಂಟ್ ರಾಕೆಟ್ಸ್ ಪರ ಕಿಮ್ ಗಾರ್ತ್, ಸಮಂತಾ ಬೇಟ್ಸ್, ಚಾರ್ಲಿ ಫಿಲಿಪ್ಸ್ ಮತ್ತು ಜಾರ್ಜಿಯಾ ಆಡಮ್ಸ್ ತಲಾ ಎರಡು ವಿಕೆಟ್ ಪಡೆದರು.

ಟ್ರೆಂಟ್ ರಾಕೆಟ್ಸ್ ಚಾಂಪಿಯನ್

92 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಸೋಫಿಯಾ ಡಂಕ್ಲಿ ಮತ್ತು ಬೆತ್ ಮೂನಿ ಭರ್ಜರಿ ಆರಂಭ ನೀಡಿದರು. ಆರಂಭಿಕರಾದ ಇಬ್ಬರೂ ಕೇವಲ 40 ಎಸೆತಗಳಲ್ಲಿ 69 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿ, ಸನ್‌ರೈಸರ್ಸ್ ತಂಡದ ಗೆಲುವಿನ ನಿರೀಕ್ಷೆಯನ್ನು ಕೊನೆಗೊಳಿಸಿದರು. ಸೋಫಿಯಾ ಡಂಕ್ಲಿ 23 ಎಸೆತಗಳಲ್ಲಿ 41 ರನ್ ಗಳಿಸಿದರೆ, ಬೆತ್ ಮೂನಿ ಔಟಾಗದೆ 31 ರನ್ ಗಳಿಸಿದರು. ನಾಯಕಿ ಆಶ್ಲೀ ಗಾರ್ಡ್ನರ್ ಗೆಲುವಿನ ಬೌಂಡರಿ ಬಾರಿಸಿ ತಂಡಕ್ಕೆ ಎಂಟು ವಿಕೆಟ್‌ಗಳ ಐತಿಹಾಸಿಕ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:00 pm, Sun, 16 August 26

Source link

ಹಾನೂರು ಶೂಟೌಟ್ ಕೇಸ್​​ಗೆ ಟ್ವಿಸ್ಟ್: ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ; ಸಿಕ್ಕಿದ್ದೇನು? – Kannada News | Hanur Shootout Case Takes a Twist: Forest Department Releases Key Evidence, What Was Found

ಚಾಮರಾಜನಗರ, ಆಗಸ್ಟ್​​ 16: ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ (death) ಪ್ರಕರಣ ಗಡಿ ಜಿಲ್ಲೆ ಧಗಧಗ ಎನ್ನುವಂತೆ ಮಾಡಿದೆ. ನಿನ್ನೆ ಕಚೇರಿಗೆ ನುಗ್ಗಿ ಆಕ್ರೋಶ ಹೊರಹಾಕಿದ್ದ ಜನ, ಇಂದು ಪೊಲೀಸ್ ಠಾಣೆ ಮುಂದೆ ಧರಣಿ ಕೂತಿದ್ದರು. ಒಂದು ಹಂತದಲ್ಲಿ ಹೈಡ್ರಾಮಾವೇ ನಡೆದಿದೆ. ಈ ಎಲ್ಲದರ ಮಧ್ಯೆ ಇದೀಗ ಅರಣ್ಯ ಇಲಾಖೆ (forest Department) ಘಟನೆ ವೇಳೆ ಸಿಕ್ಕ ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದು, ಪ್ರಕರಣ ಮತ್ತೆ ತಿರುವು ಪಡೆದುಕೊಂಡಿದೆ.

ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ‘ಘಟನಾ ಸ್ಥಳದಲ್ಲಿದ್ದ ಬೇಟೆಗಾರರಿಂದ ಅಕ್ರಮವಾಗಿ ಬಳಸಲಾಗುತ್ತಿದ್ದ ಬಂದೂಕು ಹಾಗೂ ಬರೋಬ್ಬರಿ 34.25 ಕೆಜಿ ಜಿಂಕೆ ಮಾಂಸ ತುಂಬಿದ್ದ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಂಕೆಗೆ ಮೂರು ಕಡೆಗಳಲ್ಲಿ ಬಿದ್ದಿದ್ದ ಗುಂಡೇಟಿನ ಪುರಾವೆಯನ್ನು ಇದೀಗ ಅರಣ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದೆ.’

ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಘಟನೆಯ ಸತ್ಯಾಸತ್ಯತೆ ಬಯಲಿಗೆಳೆಯಲು ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿದ ವರದಿಯ ಪ್ರಕಾರ, ಮುಂಜಾನೆ ಸುಮಾರು 5:15 ರಿಂದ 5:30ರ ಸುಮಾರಿಗೆ ಅಕ್ರಮವಾಗಿ ನಾಡಬಂದೂಕು ಹಿಡಿದು ವನ್ಯಪ್ರಾಣಿಗಳನ್ನು ಬೇಟೆಯಾಡಿ ಹೊರಡುತ್ತಿದ್ದ ಕಳ್ಳಬೇಟೆಗಾರರ ತಂಡ, ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಯನ್ನು ಕಂಡು ಏಕಾಏಕಿ ಗುಂಡಿನ ದಾಳಿ ನಡೆಸಿದೆ.

ಇದನ್ನೂ ಓದಿ: ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಘಟನೆ ಇನ್​​​​ಸೈಡ್ ಮಾಹಿತಿ ಬಿಚ್ಚಿಟ್ಟ ಸಿಎಂ ಡಿಕೆಶಿ

ಈ ವೇಳೆ ಸಿಬ್ಬಂದಿ ತಮ್ಮ ಜೀವ ಹಾಗೂ ಸರ್ಕಾರಿ ಸ್ವತ್ತಿನ ರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಮೂವರಿಗೆ ಗುಂಡೇಟು ತಗುಲಿ, ಇಬ್ಬರು ಪ್ರಜ್ಞಾಹೀನರಾಗಿದ್ದರೆ, ಪ್ರಜ್ಞೆಯಲ್ಲಿದ್ದ ಮತ್ತೊಬ್ಬ ಗಾಯಾಳುವನ್ನು ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಬ್ಬ ಆರೋಪಿ ಕಾಡಿನೊಳಗೆ ಪರಾರಿಯಾಗಿದ್ದಾನೆ. ಒಂದೆಡೆ ವನ್ಯಸಂಪತ್ತನ್ನು ಕಾಯುವ ಸಿಬ್ಬಂದಿಯ ಅಸಹಾಯಕತೆ, ಇನ್ನೊಂದೆಡೆ ರಕ್ತಸಿಕ್ತವಾಗಿ ನೆಲಕ್ಕುರುಳಿದ ಜೀವಗಳು, ಈ ಇಡೀ ದುರಂತದ ನೈಜ ಹಿನ್ನೆಲೆ, ಅಂದು ನಡೆದ ಪರಿಸ್ಥಿತಿಯ ಸನ್ನಿವೇಶ, ಬಳಸಲಾದ ಶಸ್ತ್ರಾಸ್ತ್ರಗಳ ಮೂಲ ಹಾಗೂ ಸಿಬ್ಬಂದಿಯ ಕ್ರಮಗಳ ಕುರಿತು ಯಾವುದೇ ಪಕ್ಷಪಾತವಿಲ್ಲದೆ ಸಮಗ್ರ ತನಿಖೆ ನಡೆಸಲು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ  ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಮುಂದಿನ 7 ದಿನಗಳ ಒಳಗೆ ಸಂಪೂರ್ಣ ವಾಸ್ತವಾಂಶಗಳನ್ನೊಳಗೊಂಡ ವರದಿ ಸಲ್ಲಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: 3ನೇ ದಿನವೂ ಮಳೆ..! ಮೊದಲ ಟೆಸ್ಟ್ ರದ್ದಾದರೆ ಟೀಂ ಇಂಡಿಯಾಕ್ಕೆ ಭಾರಿ ನಷ್ಟ – Kannada News | India’s WTC Final Race: Galle Rain Causes Point Loss in Sri Lanka Test

ಭಾರತ ಮತ್ತು ಶ್ರೀಲಂಕಾ (India vs Sri Lanka ) ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಪಡಿಸುತ್ತಿದೆ. ಗಾಲೆಯಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲೆರಡು ದಿನವೂ ಮಳೆ ಆಟಕ್ಕೆ ಅಡ್ಡಿಪಡಿಸಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸೂಚನೆಗೊಳ್ಳುತ್ತಿವೆ. ಇದರ ಜೊತೆಗೆ ಮಳೆ ಹೀಗೆ ಮುಂದುವರೆದರೆ ಪಂದ್ಯ ರದ್ದಾಗುವ ಸಾಧ್ಯತೆಗಳು ಇವೆ. ಒಂದು ವೇಳೆ ಮೊದಲ ಟೆಸ್ಟ್ ರದ್ದಾದರೆ ಅಥವಾ ಫಲಿತಾಂಶವಿಲ್ಲದೆ ಅಂತ್ಯವಾದರೆ ಡಬ್ಲ್ಯೂಟಿಸಿ ಫೈನಲ್​ ರೇಸ್​ನಲ್ಲಿರುವ ಭಾರತ ತಂಡಕ್ಕೆ ಆಗುವ ನಷ್ಟವೇನು ಎಂಬುದನ್ನು ನೋಡುವುದಾದರೆ..

ಮುಂದಿನ 3 ದಿನವೂ ಮಳೆ

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಆರಂಭವಾದಾಗಿನಿಂದ ಮಳೆಯಿಂದ ಅಡಚಣೆಯಾಗಿದೆ. ಮೊದಲ ದಿನದ ಆಟಕ್ಕೆ ಮಳೆ ಕೊಂಚ ಅಡ್ಡಿಪಡಿಸಿತ್ತು. ಆದರೆ ಎರಡನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಹವಾಮಾನ ವರದಿಗಳ ಪ್ರಕಾರ, ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮೂರನೇ ದಿನದಂದು ಮಳೆಯಾಗುವ ಸಾಧ್ಯತೆ ಶೇ. 81 ರಷ್ಟು ಇದ್ದು, ಇದರಿಂದ ಮೂರನೇ ದಿನದಾಟ ನಡೆಯುವುದು ಅನುಮಾನ. ಉಳಿದ ದಿನಗಳಲ್ಲಿ ಮಳೆಯ ಮುನ್ಸೂಚನೆ ಶೇ. 50 ಕ್ಕಿಂತ ಹೆಚ್ಚಿರುವುದರಿಂದ, ಪಂದ್ಯವು ಡ್ರಾದಲ್ಲಿ ಕೊನೆಗೊಳ್ಳುವುದು ಅಥವಾ ರದ್ದಾಗುವುದು ಬಹುತೇಕ ಖಚಿತವಾಗಿದೆ.

ಭಾರತಕ್ಕೆ ಭಾರಿ ನಷ್ಟ

ಈ ಪಂದ್ಯ ಮಳೆಯಿಂದ ರದ್ದಾದರೆ, ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪಂದ್ಯ ಗೆದ್ದರೆ ಸಿಗುವ 12 ಅಂಕಗಳ ಬದಲಿಗೆ, ಪಂದ್ಯ ರದ್ದಾಗುವುದರಿಂದ ಕೇವಲ 4 ಅಂಕಗಳು ಸಿಗಲಿವೆ. ಪ್ರಸ್ತುತ 48.15 ಪ್ರತಿಶತ ಗೆಲುವಿನ ಶೇಕಡಾವಾರು ಹೊಂದಿರುವ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು ಪಂದ್ಯ ಡ್ರಾ ಆದರೆ 46.67 ಪ್ರತಿಶತಕ್ಕೆ ಇಳಿಯುತ್ತದೆ. ಪ್ರಸ್ತುತ ಟೀಂ ಇಂಡಿಯಾ ಇರುವ ಐದನೇ ಸ್ಥಾನ ಬದಲಾಗದೆ ಇದ್ದರೂ, ಗೆಲುವಿನ ಶೇಕಡಾವಾರುವಿನ ಕುಸಿತವು ಭವಿಷ್ಯದ ನಿರೀಕ್ಷೆಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಈ ಹಂತದಲ್ಲಿ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಟೀಂ ಇಂಡಿಯಾಕ್ಕೆ ಪ್ರತಿ ಗೆಲುವು ಅಗತ್ಯವಿರುವಾಗ ಪಂದ್ಯ ರದ್ದಾದರೆ ದೊಡ್ಡ ಹೊಡೆತ ಬೀಳಲಿದೆ.

IND vs SL: 2ನೇ ದಿನ ಲಂಕಾ ಸ್ಪಿನ್ನರ್​ಗಳ ಪ್ರಾಬಲ್ಯ; 460 ರನ್ ಕಲೆಹಾಕಿದ ಭಾರತ

ಸಂಕಷ್ಟ ತಂದ ಬಾಂಗ್ಲಾ ಗೆಲುವು

ಡಾರ್ವಿನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಅನಿರೀಕ್ಷಿತ ಗೆಲುವು ಭಾರತೀಯ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಕಾಂಗರೂಗಳನ್ನು ಅವರ ಸ್ವಂತ ನೆಲದಲ್ಲಿ ಸೋಲಿಸಿದ ಬಾಂಗ್ಲಾ ಟೈಗರ್ಸ್, ತಮ್ಮ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಶೇಕಡಾ 66.67 ಕ್ಕೆ ಹೆಚ್ಚಿಸಿಕೊಂಡು ನಾಲ್ಕನೇ ಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ. ಇದರೊಂದಿಗೆ, ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಮತ್ತು ಐದನೇ ಸ್ಥಾನದಲ್ಲಿರುವ ಭಾರತದ ನಡುವಿನ ಅಂತರ ಗಮನಾರ್ಹವಾಗಿ ಹೆಚ್ಚಾಗಿದೆ. ಆಸ್ಟ್ರೇಲಿಯಾ 77.78 ಪ್ರತಿಶತ ಮತ್ತು ದಕ್ಷಿಣ ಆಫ್ರಿಕಾ 75 ಪ್ರತಿಶತದೊಂದಿಗೆ ಮೊದಲೆರಡು ಸ್ಥಾನಗಳಲ್ಲಿವೆ. ಹೀಗಾಗಿ ಟೀಂ ಇಂಡಿಯಾ ಮೊದಲೆರಡು ಸ್ಥಾನಗಳಲ್ಲಿ ಜಾಗ ಪಡೆಯಬೇಕಾದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Sun, 16 August 26

Source link

Exit mobile version