Chanakya Niti: ಮಹಿಳೆಯರು ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says women should not make these mistakes while cooking

ಅಡುಗೆ ಕೋಣೆ ಮನೆಯ ಹೃದಯ ಭಾಗವಾಗಿದ್ದು, ಇದು ಸದಾ ಚಟುವಟಿಕೆಯಿಂದಿರುತ್ತದೆ. ಇನ್ನೂ ಮಹಿಳೆಯರು ದಿನದ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲೇ ಕಳೆಯುತ್ತಾರೆ. ಮನೆಯವರಿಗಾಗಿ ಬಗೆ ಬಗೆಯ ಆಹಾರವನ್ನು ಮಾಡುತ್ತಾರೆ. ಹೀಗೆ ಅಡುಗೆ (cooking) ಮಾಡುವಾಗ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಿದರೆ, ಅದು ಕುಟುಂಬದ ಸಂತೋಷ ಮತ್ತು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆಚಾರ್ಯ ಚಾಣಕ್ಯ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಮಾಡುವ ಯಾವ ತಪ್ಪುಗಳು ಕುಟುಂಬದ ಸಂತೋಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ.

ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು ಎಂದಿದ್ದಾರೆ ಚಾಣಕ್ಯ:

ಸ್ನಾನ ಮಾಡದೆ ಅಡುಗೆ ಮಾಡುವುದು: ಚಾಣಕ್ಯರ  ಪ್ರಕಾರ, ಅಡುಗೆ ಮಾಡುವಾಗ ದೇಹ ಮತ್ತು ಬಟ್ಟೆ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಮಹಿಳೆ ಸ್ನಾನ ಮಾಡದೆ ಅಥವಾ ಕೊಳಕು ಬಟ್ಟೆಯಲ್ಲಿ ಅಡುಗೆ ಮಾಡಿದರೆ, ಆ ಆಹಾರವನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಅಡುಗೆ ಮಾಡಿದರೆ ಬ್ಯಾಕ್ಟೀರಿಯಾಗಳು ಆಹಾರಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  ಈ ಅಭ್ಯಾಸ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸಹ ಹರಡುತ್ತದೆ ಎನ್ನುತ್ತಾರೆ ಚಾಣಕ್ಯ.

ಕೋಪ ಅಥವಾ ದುಃಖದ ಮನಸ್ಸಿನಿಂದ ಅಡುಗೆ ಮಾಡುವುದು: ಮಹಿಳೆ ಕೋಪಗೊಂಡಾಗ, ಅಳುವಾಗ ಅಥವಾ ಖಿನ್ನತೆಗೆ ಒಳಗಾದಾಗ ಅಡುಗೆ ಮಾಡಿದರೆ, ಆ ನಕಾರಾತ್ಮಕ ಆಲೋಚನೆಗಳ ಶಕ್ತಿಯು ನೇರವಾಗಿ ಆಹಾರಕ್ಕೆ ವರ್ಗಾಯಿಸಲ್ಪಡುತ್ತದೆ. ಅಂತಹ ಆಹಾರವನ್ನು ಸೇವಿಸುವುದರಿಂದ ಕುಟುಂಬ ಸದಸ್ಯರಿಗೆ ಕಿರಿಕಿರಿ ಉಂಟುಮಾಡಬಹುದು, ಘರ್ಷಣೆಗಳು ಹೆಚ್ಚಾಗಬಹುದು ಎನ್ನುತ್ತಾರೆ ಚಾಣಕ್ಯ. ಇದಲ್ಲದೆ ಕೋಪದಲ್ಲಿದ್ದಾಗ ಅಥವಾ ದುಃಖದಲ್ಲಿದ್ದಾಗ ನಮ್ಮ ಗಮನ ಬೇರೆಡೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮಾಡದಾಗ ಆ ಅಡುಗೆಯೂ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ.  ಚಾಣಕ್ಯರ ಪ್ರಕಾರ, ಅಡುಗೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು ಮತ್ತು ಸಕಾರಾತ್ಮಕ ಆಲೋಚನೆಗಳು ಇರಬೇಕು. ಇದರಿಂದ ಮಾಡಿದ ಅಡುಗೆಯೂ ರುಚಿಕರವಾಗಿರುತ್ತದೆ, ಕುಟುಂಬದ ಸದಸ್ಯರೂ ಸಂತೋಷದಿಂದ ಆ ಆಹಾರವನ್ನು ಸೇವಿಸುತ್ತಾರೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಮಾತನಾಡುತ್ತಾ ಅಡುಗೆ ಮಾಡುವುದು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಫೋನ್‌ನಲ್ಲಿ ಮಾತನಾಡುತ್ತಾ ಅಡುಗೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಹೀಗೆ ಟಿವಿ ನೋಡುತ್ತಾ, ಮೊಬೈಲ್‌ ನೋಡುತ್ತಾ, ಇತರರೊಂದಿಗೆ ಮಾತನಾಡುತ್ತಾ ಅಡುಗೆ ಮಾಡಿದಾಗ ಗಮನ ಬೇರೆಡೆ ಸೆಳೆಯುತ್ತದೆ. ಇದರಿಂದ ಅಡುಗೆ ಸುಟ್ಟು ಹೋಗುವ, ಸರಿಯಾಗಿ ಬೇಯದೆ ರುಚಿ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಈ ಸಣ್ಣಪುಟ್ಟ ಎಡವಟ್ಟುಗಳು ಕುಟುಂಬ ಸದಸ್ಯರ ಕೋಪಕ್ಕೂ ಗುರಿಯಾಗುವ ಸಾಧ್ಯತೆ ಇರುತ್ತದೆ.

ಕೆಟ್ಟ ಪದಾರ್ಥಗಳನ್ನು ಬಳಸುವುದು: ಬಳಸಿದ ಎಣ್ಣೆ, ಹಾಳಾದ ತರಕಾರಿಗಳು ಅಥವಾ ಕೆಟ್ಟುಹೋದ ಮಸಾಲೆಗಳನ್ನು ಬಳಸಿದರೆ, ಅಂತಹ ಅಡುಗೆಯ ರುಚಿ ಕೆಡುತ್ತದೆ. ಅಲ್ಲದೆ ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಚಾಣಕ್ಯರ ಪ್ರಕಾರ, ಆಹಾರವು ತಾಜಾ, ಸ್ವಚ್ಛ ಮತ್ತು ಶುದ್ಧವಾದಷ್ಟೂ ಅದು ದೇಹ ಮತ್ತು ಮನಸ್ಸನ್ನು ಬಲಪಡಿಸುತ್ತದೆ. ಹಾಳಾದ ಆಹಾರವು ಹೊಟ್ಟೆಯ ಕಾಯಿಲೆಗಳಿಗೆ ಕಾರಣವಾಗಬಹುದು, ಇದರಿಂದಾಗಿ ಮನಸ್ಥಿತಿಯೂ ಕೆಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: 6,6,6,6.. ಕೊನೆಯ ಓವರ್​ನಲ್ಲಿ ಅಬ್ಬರಿಸಿದ ಗುರ್ನೂರ್ ಬ್ರಾರ್! ವಿಡಿಯೋ – Kannada News | India vs Sri Lanka Practice: Gurnoor Brar’s 4 Sixes Thrill Gambhir

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ (India vs Sri Lanka ) ತಂಡಕ್ಕೆ ನಿಜವಾದ ಪರೀಕ್ಷೆ ಇನ್ನೂ ಆರಂಭವಾಗಿಲ್ಲ. ಟೀಂ ಇಂಡಿಯಾ ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದೆ. ಈ ಸಿದ್ಧತೆಯ ಭಾಗವಾಗಿ, ಶ್ರೀಲಂಕಾ ಕ್ರಿಕೆಟ್ XI ಮತ್ತು ಟೀಂ ಇಂಡಿಯಾ ನಡುವೆ ಕೊಲಂಬೊದಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್‌ ಮಾಡಿದ ಭಾರತ 357 ರನ್ ಕಲೆಹಾಕಿತು. ಆದಾಗ್ಯೂ ತಂಡಕ್ಕೆ 6 ರನ್​ಗಳ ಹಿನ್ನಡೆ ಎದುರಾಯಿತು. ಶ್ರೀಲಂಕಾ ಮೊದಲ ಇನ್ನಿಂಗ್ಸ್​ನಲ್ಲಿ 363 ರನ್ ಕಲೆಹಾಕಿದರೆ, ಭಾರತಕ್ಕೆ ಈ ರನ್ ಮೀರಿ ಹೋಗಲು ಸಾಧ್ಯವಾಗಲಿಲ್ಲ. ಆದರೆ ಶ್ರೀಲಂಕಾದ ಮುನ್ನಡೆಯನ್ನು ಕಡಿಮೆ ಮಾಡುವಲ್ಲಿ ಟೀಂ ಇಂಡಿಯಾದ ಯುವ ವೇಗಿ ಗುರ್ನೂರ್ ಬ್ರಾರ್ (Gurnoor Brar) ಪ್ರಮುಖ ಪಾತ್ರವಹಿಸಿದರು. ದಿನದಾಟದ ಕೊನೆಯ ಓವರ್​ನಲ್ಲಿ ಬ್ರಾರ್ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

ಪಂದ್ಯದ ಮೊದಲ ದಿನ ಶ್ರೀಲಂಕಾ ಬ್ಯಾಟಿಂಗ್‌ ಮಾಡಿದರೆ, ಎರಡನೇ ದಿನ ಟೀಂ ಇಂಡಿಯಾ ಬ್ಯಾಟ್ ಬೀಸಿತು. ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ದೇವದತ್ ಪಡಿಕ್ಕಲ್ ಅಜೇಯ 142 ರನ್ ಬಾರಿಸಿದರೆ, ರವೀಂದ್ರ ಜಡೇಜಾ ಕೂಡ ಅಜೇಯ ಅರ್ಧಶತಕ ಬಾರಿಸಿದರು. ಇತರ ಕೆಲವು ಬ್ಯಾಟ್ಸ್‌ಮನ್‌ಗಳು ವಿಫಲರಾದರೂ, ತಂಡದ ಯುವ ವೇಗಿ ಗುರ್ನೂರ್ ಬ್ರಾರ್ ದಿನದಾಟದ ಕೊನೆಯ ಓವರ್​ನಲ್ಲಿ ಪಂದ್ಯವನ್ನು ಮತ್ತಷ್ಟು ರೋಮಾಂಚಕಗೊಳಿಸಿದರು.

90 ನೇ ಓವರ್​ನಲ್ಲಿ 4 ಸಿಕ್ಸರ್

ಭಾರತೀಯ ಇನ್ನಿಂಗ್ಸ್‌ನ 90 ನೇ ಓವರ್​ನ ಮೊದಲ ಎಸೆತದಲ್ಲಿ ದೇವದತ್ ಪಡಿಕ್ಕಲ್ ಸಿಂಗಲ್ ಪಡೆದರು. ನಂತರ ಸ್ಟ್ರೈಕ್‌ಗೆ ಬಂದ ಬ್ರಾರ್, ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಅನುಭವಿ ಸ್ಪಿನ್ನರ್ ದಿಲಂ ಸುದಿರಾ ಅವರನ್ನು ಎದುರಿಸುತ್ತಿದ್ದರು. ಓವರ್‌ನ ಎರಡನೇ ಎಸೆತವನ್ನು ಲಾಂಗ್-ಆನ್ ಓವರ್‌ಗೆ ಸಿಕ್ಸರ್‌ಗೆ ಹೊಡೆದ ಬ್ರಾರ್, ಮುಂದಿನ ಚೆಂಡನ್ನು ನೇರವಾಗಿ ಸಿಕ್ಸರ್‌ಗೆ ಕಳುಹಿಸಿದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದಾಗ್ಯೂ, ಬ್ರಾರ್ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದಿನವನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸಿದರು.

IND vs SL: ಪಡಿಕ್ಕಲ್ ಅಜೇಯ 142 ರನ್; ಆತಿಥೇಯರಿಗೆ 6 ರನ್ ಮುನ್ನಡೆ

18 ಎಸೆತಗಳಲ್ಲಿ 36 ರನ್‌ ಬಾರಿಸಿದ ಬ್ರಾರ್

ಪಂದ್ಯದ ಮೊದಲ ದಿನ ಬೌಲಿಂಗ್‌ನಲ್ಲಿ ಮಿಂಚಿದ ಬ್ರಾರ್ ಅವರ ಬ್ಯಾಟಿಂಗ್ ಪ್ರದರ್ಶನವು ಟೀಂ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಸಂತೋಷಪಡಿಸಿತು. ವಿಶೇಷವಾಗಿ ಕೋಚ್ ಗೌತಮ್ ಗಂಭೀರ್ ಚಪ್ಪಾಳೆ ತಟ್ಟುತ್ತಾ ಬ್ರಾರ್ ಅವರ ಆಟವನ್ನು ಆನಂದಿಸಿದರು. ಬ್ರಾರ್ ಕೇವಲ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ 36 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ರಾಜ್ಯಾದ್ಯಂತ ಚುರುಕುಗೊಂಡ ಮುಂಗಾರು! ಕರಾವಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಿನಲ್ಲಿ 3 ದಿನ ಮಳೆ ಸಾಧ್ಯತೆ – Kannada News | Monsoon Intensifies Across Karnataka: Yellow Alert for Coastal Districts, Bengaluru May Get Rain for 3 Days

ಪ್ರಾತಿನಿಧಿಕ ಚಿತ್ರImage Credit source: tv9 kannada

ಬೆಂಗಳೂರು, ಆಗಸ್ಟ್​ 08: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ (rain) ಚುರುಕುಗೊಂಡಿದ್ದು, ಮುಂದಿನ ಕೆಲ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ.

ನಾಳೆ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 64.5 ಮಿಮೀನಿಂದ 115.4 ಮಿಮೀ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಎಸ್​​​​​ಎನ್​ಡಿಎಂಸಿ ಟ್ವೀಟ್​

ಧಾರಾಕಾರ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನೆಲೆ ಸಾರ್ವಜನಿಕರು ಹಾಗೂ ಕರಾವಳಿ, ಮಲೆನಾಡು ಭಾಗದ ನಿವಾಸಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಬೆಂಗಳೂರಿನಲ್ಲಿ ಮೂರು ದಿನ ಮಳೆ ಸಾಧ್ಯತೆ

ಇನ್ನು ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಆಗಮನವಾಗಿದ್ದು, ನಗರದಾದ್ಯಂತ ಜಿಟಿ ಜಿಟಿ ಮಳೆ ಸುರಿದಿದೆ. ನಗರದ ಮಲ್ಲೇಶ್ವರಂ, ಮೆಜಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಟೌನ್ ಹಾಲ್, ವಸಂತ ನಗರ, ಜಯನಗರ, ಶಿವಾಜಿನಗರ, ವಿಜಯನಗರ ಹಾಗೂ ಬಸವೇಶ್ವರ ನಗರ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿದಿದ್ದು, ಕೂಲ್​ ಕೂಲ್​ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Karnataka Weather Forecast: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ, 4 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಹವಾಮಾನ ಮುನ್ಸೂಚನೆಯ ಪ್ರಕಾರ, ಬೆಂಗಳೂರಿನಲ್ಲಿ ಇಂದಿನಿಂದ ಇನ್ನು ಮೂರು ದಿನಗಳ ಕಾಲ ಇದೇ ರೀತಿ ಜಿಟಿ ಜಿಟಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಸಂಜೆ ವೇಳೆಗೆ ಮಳೆ ಆರಂಭವಾಗಿರುವುದರಿಂದ ಕಚೇರಿಗಳಿಂದ ಮನೆಗೆ ಮರಳುವ ಉದ್ಯೋಗಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉಡುಪಿ ಕಾಂಗ್ರೆಸ್ ಮಖಂಡನ ಹತ್ಯೆ: ಶಾರ್ಪ್​​​​ ಶೂಟರ್ಸ್​​​​​​ಗಳ ಭಯಾನಕ​​​ ಕ್ರೈಂ ಡೈರಿ ತೆರೆದಿಟ್ಟ ಎಸ್ಪಿ – Kannada News | Uudpi david desouza Murder Case: 3 Accused Arrested, SP revels shooters Crime history

ಉಡುಪಿ ಎಸ್ಪಿ ಮತ್ತು ಬಂಧಿತ ಹಂತಕರು

ಉಡುಪಿ, (ಆಗಸ್ಟ್ 08): ಉಡುಪಿ ಕಾಂಗ್ರೆಸ್ ಮುಖಂಡ (Udupi Congress Leader) ಡೇವಿಡ್ ಡಿಸೋಜಾ ಶೂಟ್ ಔಟ್ ಪ್ರಕರಣಕ್ಕೆ (david desouza Murder Case) ಸಂಬಂಧಿಸಿದಂತೆ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಆರೋಪಿ ರಾಜು ಹಾಗೂ ಎ2 ಅನಮೋಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಹಂತಕರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಕೊಲೆ, ಹಲ್ಲೆ ಹಾಗೂ ದರೋಡೆ ಪ್ರಕರಣಗಳಿವೆ. ಅದರಲ್ಲೂ ಎ1 ಆರೋಪಿ ರಾಜುವಿನ ಮೇಲೆ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ 26 ಪ್ರಕರಣಗಳಿವೆ. ಈ ಬಗ್ಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿ ನಡೆಸಿ ಹಂತಕರ ಕ್ರೈಂ ಡೈರಿಯನ್ನು ಬಿಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್ , ಗುತ್ತಿಗೆ ವಿಚಾರಕ್ಕೆ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜನನ್ನು ಕೊಲೆ ಮಾಡಲಾಗಿದೆ. ಎ1 ಆರೋಪಿ 9 ಎಮ್‌ಎಮ್‌ ಪಿಸ್ತೂಲಿನಿಂದ ಗುಂಡು ಹಾರಿಸಿ ಡೇವಿಡ್ ನನ್ನು ಹತ್ಯೆ ಮಾಡಿದ್ದಾನೆ. ಇನ್ನು ಶೂಟರ್ ರಾಜು ಖಾತೆಗೆ 2 ಲಕ್ಷಕ್ಕೂ ಹೆಚ್ಚು ಹಣ ಪಾವತಿ ಆಗಿದೆ. ಕೊಲೆ ನಡೆಯುವ ಮೊದಲು ಹಾಗೂ ನಂತರ ಹಂತ ಹಂತವಾಗಿ ಪಾವತಿಯಾಗಿದ್ದು, ಆರೋಪಿಗಳನ್ನು ಬೈಂದೂರಿನ ಒತ್ತಿನೆಣೆ, ಭಟ್ಕಳ ಹಾಗು ಕುಮುಟಾದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಉಡುಪಿಯಲ್ಲಿ ಕೈ ಮುಖಂಡ ಶೂಟೌಟ್: ಯುಪಿ ಮೂಲದ ಶೂಟರ್ಸ್​ ಖಾಕಿ ಬಲೆಗೆ ಬಿದ್ದಿದ್ಹೇಗೆ?

ಸುಪಾರಿ ನೀಡಿ ಕೊಲೆ

ಡೇವಿಡ್ ಡಿಸೋಜಾ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ. ಆರ್ಥಿಕ ವ್ಯವಹಾರಕ್ಕೆ ಉತ್ತರ ಭಾರತದ ವ್ಯಕ್ತಿಯೊಬ್ಬ ಸುಪಾರಿ ನೀಡಿ ಕೊಲೆ ಮಾಡಿದ್ದಾನೆ . ಸುಪಾರಿ ಕೊಟ್ಟವರ ಪತ್ತೆಗಾಗಿ ಈಗಾಗಲೇ ಒಂದು ತಂಡವನ್ನು ಹೊರ ರಾಜ್ಯಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಉಡುಪಿ ಜಿಲ್ಲೆಯನ್ನು ದಾಟದಂತೆ ಎಲ್ಲ ಗಡಿಭಾಗದಲ್ಲಿ ನಾಕಬಂಧಿ ಹಾಕಲಾಗಿತ್ತು. ಉಡುಪಿ, ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದೆವು. 500ಕ್ಕೂ ಹೆಚ್ಚು ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ರೈಲ್ವೇ ಪೋಲಿಸ್ ಹಾಗು ಉತ್ತರ ಕನ್ನಡ ಎಸ್ಪಿಯವರ ಸಹಾಯದೊಂದಿಗೆ ಬಿಗಿಬಂದೋಬಸ್ತ್ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಗುತ್ತಿಗೆ ವಿಚಾರಕ್ಕೆ ಹತ್ಯೆ

ಆರೋಪಿಗಳು ಎರ್ಮಾಳ್ ಬಳಿ ಬೈಕ್ ಅನ್ನು ಬಿಟ್ಟು ಹೋಗಿದ್ದು, ಬೈಕ್ ಒದಗಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಒಬ್ಬರ ಪರಿಚಯ ಮತ್ತೊಬ್ಬರಿಗೆ ಸರಿಯಾಗಿ ಇರಲಿಲ್ಲ. ಸುಳ್ಳು ಹೆಸರು ಹೇಳಿಕೊಂಡು ಪರಿಚಯಿಸಿಕೊಂಡಿದ್ದರು. ಒಂದು ವೇಳೆ ತಪ್ಪಿಸಿಕೊಂಡಿದ್ದರೆ ಅವರಲ್ಲಿದ್ದ‌ ಮೊಬೈಲ್ ಫೋನುಗಳು ಸಿಗುತ್ತಿರಲಿಲ್ಲ. ಅಂದಾಜು 2 ರಿಂದ 3 ಕೋಟಿ ರೂಪಾಯಿ ವಿಚಾರಕ್ಕೆ ಡೇವಿಡ್ ಹಾಗು ಮತ್ತೋರ್ವ ಗುತ್ತಿಗೆದಾರನ ನಡುವೆ ವೈಮನಸ್ಸು ಉಂಟಾಗಿದ್ದು, ಇದಕ್ಕೆ ಹತ್ಯೆ ಮಾಡಲಾಗಿದೆ. ಇನ್ನು ಆರೋಪಿಗಳು 2 ತಿಂಗಳ ಹಿಂದೆ ಸ್ಥಳಕ್ಕೆ ಆಗಮಿಸಿ, ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು. ಅವರಿಗೆ ಯಾರೆಲ್ಲ ಸ್ಥಳೀಯರು ಯಾರು ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹಂತರಕರನ್ನು ಸೆರೆ ಹಿಡಿದಿದ್ಹೇಗೆ?

ಬೈಂದೂರಿನ ಒತ್ತಿನೆಣೆ ಬಳಿಯಲ್ಲಿ ಬಸ್‌ ತಪಾಸಣೆ ನಡೆಸುತ್ತಿದ್ದ ಪೋಲಿಸರನ್ನು ಕಂಡು ಮೂರು ವ್ಯಕ್ತಿಗಳು ಬಸ್‌ನಿಂದ ಇಳಿದಿದ್ದಾರೆ. ಆಗ ರಾಜು ಎಂಬಾತನನ್ನು ಕಾಪು ಪಿಎಸ್ಐ ತೇಜಸ್ವಿ ಬೆನ್ನಟ್ಟಿದ್ದಾರೆ. ಆ ವೇಳೆ ತೇಜಸ್ವಿ ಅವರಿಗೆ ಆರೋಪಿ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದ್ದು, ಪಿಎಸ್ಐ ಹಾಗು ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಉಳಿದ ಇಬ್ಬರು ಆರೋಪಿಗಳನ್ನು ಭಟ್ಕಳ ಹಾಗು ಕುಮುಟಾದಲ್ಲಿ ಶನಿವಾರ ಬೆಳಗ್ಗೆ ಬಂಧಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ವಿವರಿಸಿದ್ದಾರೆ.

ಆರೋಪಿಗಳ ಮೇಲಿವೆ ಹಲವು ಪ್ರಕರಣಗಳು

ಎ1 ಆರೋಪಿರಾಜುವಿನ ಮೇಲೆ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ 26 ಪ್ರಕರಣಗಳಿವೆ. ಎ2 ಆರೋಪಿ ಅನಮೋಲ್ ಮೇಲೆ 2018ರ ನಂತರ 4 ರಾಜ್ಯಗಳಲ್ಲಿ 8 ಪ್ರಕರಣ ಹಾಗೂ ಜಿಯಾವುಲ್ ವಜುಲ್ ಶೇಖ್ ಮೇಲೆ ದರೋಡೆ, ಶೂಟೌಟ್, ಡಕಾಯಿತಿ ಸೇರಿದಂತೆ 12 ಪ್ರಕರಣಗಳಿವೆ. ಸದ್ಯ ಆರೋಪಿ ರಾಜುವಿನಿಂದ 9 ಎಮ್‌ಎಮ್ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆರೋಪಿಗಳಿಂದ 3 ಮೊಬೈಲ್ ಪೋನ್‌ಗಳು, ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆ ಆಯ್ತು ‘ಟಾಕ್ಸಿಕ್’ ಟ್ರೈಲರ್, ಇದು ಸಾಮಾನ್ಯ ಸಿನಿಮಾ ಅಲ್ಲ ಬಿಡಿ – Kannada News | Yash starrer Toxic Kannada movie trailer released

ಯಶ್ ನಟಿಸಿರುವ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಈ ಹಿಂದೆ ಸಿನಿಮಾದ ಟೀಸರ್​​ಗಳು, ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಭಾರಿ ವೈರಲ್ ಆಗಿವೆ. ಟೀಸರ್ ಮತ್ತು ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಟೀಕೆ ಸಹ ಮಾಡಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ಟ್ರೈಲರ್ ಅನ್ನು ಇಂದು (ಆಗಸ್ಟ್ 08) ಎಎಂಬಿ ಮಾಲ್​​ನಲ್ಲಿ ಅದ್ಧೂರಿಯಾಗಿ ಚಿತ್ರತಂಡ ರಿಲೀಸ್ ಮಾಡಿದೆ. ಟ್ರೈಲರ್, ನಿರೀಕ್ಷೆಯಂತೆಯೂ ಆಕ್ಷನ್ ಭರಿತವಾಗಿದೆ. ಟಾಕ್ಸಿಕ್​​​ನಲ್ಲಿ ಯಶ್ ರಾಯನಾಗಿ ಹಾಗೂ ಟಿಕೆಟ್ ಆಗಿ ಅಬ್ಬರಿಸಿದ್ದಾರೆ.

4:38 ನಿಮಿಷದ ‘ಟಾಕ್ಸಿಕ್’ ಸಿನಿಮಾ ಟ್ರೈಲರ್ನಲ್ಲಿ ಕತೆಯ ಸಾಕಷ್ಟು ಸುಳಿವುಗಳನ್ನು ಬಿಟ್ಟುಕೊಡಲಾಗಿದೆ. ಜೊತೆಗೆ ಯಶ್ ಅವರ ಪಾತ್ರದ ಜೊತೆಗೆ ಸಿನಿಮಾದ ನಾಯಕಿಯರ ಪಾತ್ರಕ್ಕೂ ಪ್ರಾಧಾನ್ಯತೆ ನೀಡಲಾಗಿದೆ. ಟ್ರೈಲರ್​​ನಲ್ಲಿ ಆಕ್ಷನ್, ಪಂಚಿಂಗ್ ಡೈಲಾಗ್, ನಟಿಯರ ಗ್ಲಾಮರ್ ಜೊತೆಗೆ ಸಸ್ಪೆನ್ಸ್, ಎಮೋಷನ್​​ ಸಹ ಇದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ, ಅತ್ಯಂತ ಅದ್ಧೂರಿ ಮೇಕಿಂಗ್, ಕನ್ನಡ ಸಿನಿಮಾ ಪ್ರೇಮಿಗಳು ಊಹೆ ಸಹ ಮಾಡಿರದಂಥಹಾ ಪ್ರೊಡಕ್ಷನ್ ಮತ್ತು ಆಕ್ಷನ್ ಸಿನಿಮಾದ ಟ್ರೈಲರ್​​ನಲ್ಲಿವೆ.

ಈಗ ಬಿಡುಗಡೆ ಆಗಿರುವ ಟ್ರೈಲರ್​​ ನಲ್ಲಿ ‘ಟಾಕ್ಸಿಕ್’ ಸಿನಿಮಾದ ಬೃಹತ್ತತೆ, ಅದ್ಧೂರಿತನ ಮುಖ್ಯವಾಗಿ ಸೆಳೆಯುತ್ತದೆ. ಜೊತೆಗೆ ಹಲವು ವಿಷಯಗಳ ಬಗೆಗೆ ಕುತೂಹಲವನ್ನು ಸಹ ಸಿನಿಮಾ ಮೂಡಿಸುತ್ತಿದೆ. ವಿಶೇಷವಾಗಿ ನಾಯಕನ ವ್ಯಕ್ತಿತ್ವ, ನಾಯಕಿಯರೊಟ್ಟಿಗೆ ಅವನ ಸಂಬಂಧ, ಅವನ ಮಗನೊಟ್ಟಿಗೆ ಅವನ ಸಂಬಂಧ ಇನ್ನೂ ಅನೇಕ ವಿಷಯಗಳ ಬಗ್ಗೆ ಅನುಮಾನಗಳು ಮೂಡಿಸುತ್ತದೆ ಟ್ರೈಲರ್.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಯನತಾರಾ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಯಶ್ ಹಾಗೂ ಕೆವಿಎನ್​​ನ ವೆಂಕಟ್ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಸಿನಿಮಾಟೊಗ್ರಾಫರ್. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ – Kannada News | Toxic movie Trailer Release Event Live, watch here

ಯಶ್ (Yash) ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬೆಂಗಳೂರಿನ ಎಎಂಬಿ ಮಾಲ್​​ನಲ್ಲಿ ಬಿಡುಗಡೆ ಆಗುತ್ತಿದೆ. ನಟ ಯಶ್, ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ನಿರ್​ದೇಶಕಿ ಗೀತು ಮೋಹನ್​​ದಾಸ್, ನಿರ್ಮಾಪಕ ಕೆವಿಎನ್ ವೆಂಕಟ್ ಇನ್ನೂ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಇವೆಂಟ್​​ನ ಲೈವ್​​ ವೀಕ್ಷಣೆಯನ್ನು ಇಲ್ಲಿ ನೋಡಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

IND vs SL: ಪಡಿಕ್ಕಲ್ ಅಜೇಯ 142 ರನ್; ಆತಿಥೇಯರಿಗೆ 6 ರನ್ ಮುನ್ನಡೆ – Kannada News | Devdutt Padikkal Century: India XI vs Sri Lanka Practice Match Day 2 Highlights

ಮೂರು ದಿನಗಳ ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka XI) ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಎರಡು ದಿನಗಳ ಆಟ ಮುಗಿದಿದೆ. ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಎರಡನೇ ದಿನದಾಟದ ಅಂತ್ಯದ ವೇಳೆಗೆ, ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದೆ. ಆದಾಗ್ಯೂ ಭಾರತ ಪ್ರಸ್ತುತ ಮೊದಲ ಇನ್ನಿಂಗ್ಸ್ ಆರು ರನ್‌ಗಳ ಹಿನ್ನಡೆ ಅನುಭವಿಸಿದೆ. ಇದೀಗ ಮೂರನೇ ದಿನದಾಟದಲ್ಲಿ 90 ಓವರ್​ಗಳ ಆಟ ಬಾಕಿ ಇದೆ. ಆದರೆ ಈ 90 ಓವರ್​ಗಳನ್ನು ಒಂದೇ ತಂಡ ಆಡುವುದಿಲ್ಲ. ಬದಲಿಗೆ ಉಭಯ ತಂಡಗಳಿಗೆ ತಲಾ 45 ಓವರ್​ಗಳನ್ನು ನೀಡಲಾಗುತ್ತದೆ. ಅದರಲ್ಲಿ ಮುನ್ನಡೆ ಸಾಧಿಸುವ ತಂಡಕ್ಕೆ ಗೆಲುವು ಸಿಗಲಿದೆ.

2ನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ

ಎರಡನೇ ದಿನದಾಟದಂದು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಅರಂಭ ಸಿಗಲಿಲ್ಲ. ರಂಭಿಕ ಯಶಸ್ವಿ ಜೈಸ್ವಾಲ್ ಖಾತೆಯನ್ನು ತೆರೆಯದೆ ಕೇವಲ 2 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ನಾಯಕ ರಾಹುಲ್ ಜೊತೆಗೆ ಎರಡನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ನಾಯಕ ರಾಹುಲ್ 40 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಪಡಿಕ್ಕಲ್ ಶತಕ, ಜಡೇಜಾ ಅರ್ಧಶತಕ

ರಾಹುಲ್ ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಪಡಿಕ್ಕಲ್ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದರು. ರಾಹುಲ್ ವಿಕೆಟ ಪತನದ ಬಳಿಕ ಬಂದ ಅನುಭವಿ ರವೀಂದ್ರ ಜಡೇಜಾ ಕೂಡ ಅಜೇಯ 63 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ತಂಡದಲ್ಲಿರುವ ಇಬ್ಬರು ವಿಕೆಟ್​ ಕೀಪರ್​ಗಳಾದ ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಪಂತ್ 2 ರನ್​ಗೆ ವಿಕೆಟ್ ಒಪ್ಪಿಸಿದರೆ, ಜುರೇಲ್ ಇನ್ನಿಂಗ್ಸ್ 1 ರನ್​ಗೆ ಅಂತ್ಯವಾಯಿತು.

IND vs SL: ಭರ್ಜರಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್; 3ನೇ ಕ್ರಮಾಂಕ ಫಿಕ್ಸ್

ಗುರ್ನೂರ್ ಬ್ರಾರ್ ಸ್ಫೋಟಕ ಬ್ಯಾಟಿಂಗ್

ಆದಾಗ್ಯೂ ತಂಡದ ಪರ ಅಮೋಘ ಇನ್ನಿಂಗ್ಸ್ ಆಡಿದ ದೇವದತ್ ಪಡಿಕ್ಕಲ್ ಎರಡನೇ ದಿನದ ಆಟದ ಅಂತ್ಯಕ್ಕೆ 142 ರನ್ ಗಳಿಸಿ ಅಜೇಯರಾಗಿ ಉಳಿದರು. ತಮ್ಮ ಇನ್ನಿಂಗ್ಸ್​ನಲ್ಲಿ 164 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 18 ಬೌಂಡರಿ ಕೂಡ ಬಾರಿಸಿದರು. ಸ್ಪಿನ್ ಆಲ್‌ರೌಂಡರ್ ಮಾನವ್ ಸುತಾರ್ ಕೂಡ ತಂಡಕ್ಕೆ 41 ರನ್‌ಗಳ ಕೊಡುಗೆ ನೀಡಿದರೆ, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ರನ್ ಗಳಿಸಿದರು. ಕೊನೆಯಲ್ಲಿ ಗುರ್ನೂರ್ ಬ್ರಾರ್ 18 ಎಸೆತಗಳಲ್ಲಿ 36 ರನ್ ಗಳಿಸಿ ಅಜೇಯರಾಗಿ ಉಳಿದು ಶ್ರೀಲಂಕಾದ ಮುನ್ನಡೆಯನ್ನು ಕಡಿಮೆ ಮಾಡಿದರು. ಕೊನೆಯ ಓವರ್​ನಲ್ಲಿ ಬ್ರಾರ್ 4 ಸಿಕ್ಸರ್ ಬಾರಿಸಿದ್ದು, ಅವರಲ್ಲಿ ಬ್ಯಾಟಿಂಗ್‌ ಕೌಶಲ್ಯವಿದೆ ಎಂಬುದನ್ನು ಸಾಭೀತುಪಡಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:59 pm, Sat, 8 August 26

Source link

ರೈತರಿಗೆ ‘ಖಾರ’ವಾದ ಮೆಣಸಿನಕಾಯಿ: ಸಂಕಷ್ಟಕ್ಕೆ ಸಿಲುಕಿದ ಅನ್ನದಾತ – Kannada News | Dharwad Chilli Farmers in Despair: High Costs, Low Prices Force Farmers to Abandon Crops

ಧಾರವಾಡ, ಆಗಸ್ಟ್​​ 08: ಜಿಲ್ಲೆಯಲ್ಲಿ ಈ ಬಾರಿ ಅನಾವೃಷ್ಟಿ ಎದುರಾಗಿದೆ. ಇದರಿಂದಾಗಿ ರೈತರು (farmers) ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ಅನೇಕ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ದರ ಕುಸಿತದ ಪರಿಣಾಮದಿಂದಾಗಿ ಚಿಂತೆಗೀಡಾಗಿದ್ದಾರೆ. ನೀರು ಹಾಯಿಸಿ ಮೆಣಸಿನಕಾಯಿಯನ್ನ (chili) ದಷ್ಟಪುಷ್ಟವಾಗಿ ಬೆಳೆಸಿರುವ ರೈತರು ಇದೀಗ ದರ ಕುಸಿತದಿಂದಾಗಿ ಗಿಡದಲ್ಲಿಯೇ  ಬಿಟ್ಟು ಬಿಟ್ಟಿದ್ದಾರೆ.

ಕೈ ಕೊಟ್ಟ ಮಳೆ: ಸಂಕಷ್ಟದಲ್ಲಿ ರೈತರು

ಧಾರವಾಡ ಜಿಲ್ಲೆಯಲ್ಲಿ ಮೆಣಸಿನಕಾಯಿಯೂ ಒಂದು ಪ್ರಮುಖ ಬೆಳೆ. ಈ ಬಾರಿಯೂ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ತಾಲೂಕು ಸೇರಿದಂತೆ ಅನೇಕ ಕಡೆಗಳಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ ಆರಂಭದಲ್ಲಿ ಚೆನ್ನಾಗಿ ಸುರಿದಿದ್ದ ಮಳೆ ಬಳಿಕ ಕಣ್ಮರೆ ಆಯಿತು. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರು. ಅದರಲ್ಲೂ ಮೆಣಸಿನಕಾಯಿ ಬೆಳೆಯಲು ಕೊಂಚ ಹೆಚ್ಚು ವೆಚ್ಚ ಮಾಡಬೇಕಾಗುತ್ತೆ. ಆದರೂ ಹಿಂಜರಿಯದ ಅನ್ನದಾತರು ಮೆಣಸಿನಕಾಯಿಯನ್ನೇ ನಾಟಿ ಮಾಡಿದ್ದರು.

ಇದನ್ನೂ ಓದಿ: ಧಾರವಾಡ ಕೃಷಿ ವಿವಿ ಸಂಶೋಧನೆಗೆ ಜಾಗತಿಕ ಮನ್ನಣೆ: ಇಂಡೋನೇಷ್ಯಾಗೆ ಗೋಧಿ ಬೀಜ ರಫ್ತು

ಯಾವಾಗ ಮಳೆರಾಯ ಕೈಕೊಟ್ಟನೋ ಕೂಡಲೇ ಬೋರ್ ವೆಲ್ ಅಥವಾ ಕೃಷಿ ಹೊಂಡಗಳಿಂದ ಬೆಳೆಗೆ ನೀರುಣಿಸಿದರು. ಹೀಗೆ ಬೆಳೆಗೆ ನೀರುಣಿಸಲು ರೈತರು ಸಾಕಷ್ಟು ಕಷ್ಟಪಟ್ಟಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ, ಇನ್ನೇನು ಬೆಳೆಯನ್ನು ಕಟಾವು ಮಾಡಬೇಕು ಅನ್ನೋ ಹೊತ್ತಿಗೆ ಮೆಣಸಿನಕಾಯಿ ದರದಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಮ್ಮೆಲೇ ದರದಲ್ಲಿ ತೀವ್ರ ಕುಸಿತ

ಎಲ್ಲೆಲ್ಲೋ ವಿಚಾರಿಸಿ ರೈತರು ಉತ್ತಮ ತಳಿಯ ಸಸಿಯನ್ನು ದುಬಾರಿ ಬೆಲೆಗೆ ಖರೀದಿಸಿ ತಂದು ನಾಟಿ ಮಾಡಿದ್ದರು. ಮಳೆ ಮಾಯವಾದ ಕೂಡಲೇ ತುಂತುರು ಹನಿ ನೀರಾವರಿ ಮೂಲಕ ರೈತರು ಬೆಳೆಗೆ ನೀರುಣಿಸಿ, ಅದ್ಭುತ ಬೆಳೆಯನ್ನು ತೆಗೆದಿದ್ದರು. ಇದೀಗ ಮೈತುಂಬಾ ಕಾಯಿ ಬಿಟ್ಟು, ಗಿಡಗಳು ಹೊಯ್ದಾಡುತ್ತಿವೆ. ಇದೀಗ ಕಾಯಿಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಬೇಕಾಗಿದೆ. ಆದರೆ ಒಮ್ಮೆಲೇ ದರದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಕಾಯಿಯನ್ನು ಕೀಳಿಸದೇ ಗಿಡದಲ್ಲಿ ಹಾಗೆಯೇ ಬಿಡುತ್ತಿದ್ದಾರೆ.

10 ಕೆಜಿಗೆ 80 ರಿಂದ 100 ರೂ. ದರ

ಮತ್ತೆ ಕೆಲವರು ಬಂದಷ್ಟು ದುಡ್ಡು ಬರಲಿ ಅಂತಾ ಮಾರುಕಟ್ಟೆಗೆ ಒಯ್ದರೆ, 10 ಕೆಜಿಗೆ 80 ರಿಂದ 100 ರೂ. ದರ ನಿಗದಿಪಡಿಸಲಾಗುತ್ತಿದೆ. ಒಂದು ವೇಳೆ ರೈತರು ಈ ದರಕ್ಕೆ ಮೆಣಸಿನಕಾಯಿಯನ್ನು ಮಾರಾಟ ಮಾಡಿದರೆ, ಅವರಿಗೆ ಮತ್ತಷ್ಟು ನಷ್ಟವಾಗುತ್ತೆ. ಏಕೆಂದರೆ ಮೆಣಸಿನಕಾಯಿ ಕೀಳಲು ಕಾರ್ಮಿಕರಿಗೆ ಸಾಕಷ್ಟು ಕೂಲಿ ನೀಡಬೇಕಾಗುತ್ತೆ. ಇದೆಲ್ಲ ಮಾಡಿದ ಬಳಿಕ ತಾವೇ ವಾಹನದ ಖರ್ಚನ್ನು ಭರಿಸಿ, ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಹೀಗೆ ತೆಗೆದುಕೊಂಡ ಹೋದ ಮೆಣಸಿನಕಾಯಿಗೆ ಕನಿಷ್ಟ ಕೆಜಿಗೆ 25 ರೂ ನಿಗದಿಯಾದರೆ ಅದುವರೆಗೂ ರೈತರು ಮಾಡಿರುವ ಖರ್ಚಾದರೂ ಹೊರಗೆ ಹೋಗುತ್ತೆ. ಈ ದರದ ಮೇಲೆ ಏನಾದರೂ ನಿಗದಿಯಾದರಷ್ಟೇ ಅದು ಲಾಭದ ಲೆಕ್ಕಕ್ಕೆ ಸೇರುತ್ತೆ. ಇಲ್ಲವಾದರೆ ರೈತರು ಇಷ್ಟು ದಿನ ಕಟ್ಟಪಟ್ಟಿದ್ದು ವ್ಯರ್ಥ ಎಂದೇ ಅರ್ಥ. ಈಗಾಗಲೇ ಎಕರೆಗೆ ಸಾವಿರಾರು ರೂ ವ್ಯಯಿಸಿರುವ ರೈತರು ಮತ್ತೆ ಕಾಯಿ ಕೀಳಲು ಹಣ ಖರ್ಚು ಮಾಡಬೇಕು. ಇಷ್ಟಾದರೂ ಲಾಭ ಬರದೇ ಇದ್ದರೆ ಏನು ಮಾಡೋದು ಅಂದುಕೊಂಡು ಕಾಯಿ ಕೀಳದೇ ಹಾಗೆಯೇ ಬಿಡುತ್ತಿದ್ದಾರೆ.

ಇದನ್ನೂ ಓದಿ: ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!

ಇದೀಗ ಜಿಲ್ಲೆಯಲ್ಲಿ ಕೊಂಚ ಮಳೆಯಾಗುತ್ತಿದ್ದು, ಈ ಬೆಳೆ ಕಟಾವು ಮಾಡಿ ಒಂದಷ್ಟು ಆದಾಯ ಬಂದರೆ ಮುಂದಿನ ಬೆಳೆಗೆ ಯೋಚನೆ ಮಾಡಬಹುದು ಅನ್ನೋದು ರೈತರ ಲೆಕ್ಕಾಚಾರ. ಆದರೆ ಇದೀಗ ಈ ಬೆಳೆಯಿಂದ ಯಾವುದೇ ಲಾಭವೇ ಇಲ್ಲ ಅಂದಾಗ ಅವರು ಮುಂದಿನ ಬೆಳೆಯ ಯೋಚನೆಯನ್ನೇ ಕೈ ಬಿಡುವಂತಾಗಿದೆ. ಒಟ್ಟಿನಲ್ಲಿ ಬೆಳೆ ಬಂದರೂ ಮತ್ತು ಬೆಳೆ ಬರದಿದ್ದರೂ ರೈತರಿಗೆ ಸಂಕಷ್ಟ ತಪ್ಪದೇ ಇರೋದು ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:16 pm, Sat, 8 August 26

Source link

ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ! – Kannada News | Indian Woman offered job in Portugal Sold To Beer Shop Owner how she is escaped

ನವದೆಹಲಿ, ಆಗಸ್ಟ್ 8: ಕೆಲವೊಮ್ಮೆ ಹಣದ ಬಗ್ಗೆ ನಮಗಿರುವ ಅತಿಯಾದ ವ್ಯಾಮೋಹ, ದುರಾಸೆ ನಮ್ಮ ಪ್ರಾಣಕ್ಕೇ ಸಂಚಕಾರ ತಂದುಬಿಡುತ್ತದೆ. ಹೆಚ್ಚಿನ ಸಂಬಳ ಸಿಗುತ್ತದೆ, ಇನ್ನೂ ಚೆನ್ನಾಗಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆ, ಕನಸುಗಳಿಂದ ಪೋರ್ಚುಗಲ್​ಗೆ ಹೋಗಿದ್ದ ಭಾರತೀಯ ಯುವತಿಗೆ ದೊಡ್ಡ ಆಘಾತ ಕಾದಿತ್ತು. ಪೋರ್ಚುಗಲ್​ಗೆ ಹೋಗುತ್ತಿದ್ದಂತೆ ಆಕೆಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದ ಏಜೆನ್ಸಿ ಆಕೆಯನ್ನು ಅಲ್ಲಿನ ಬಿಯರ್ ಶಾಪ್ ಮಾಲೀಕರಿಗೆ ಮಾರಾಟ ಮಾಡಿದೆ. ಅಷ್ಟೇ ಅಲ್ಲದೆ, ವೀಸಾ ಮತ್ತು ಇತರೆ ದಾಖಲೆಗಳ ಕೆಲಸದ ಹೆಸರಿನಲ್ಲಿ ವಂಚಕರು ಆ ಯುವತಿಯಿಂದ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ. ಹಣ ಕಿತ್ತುಕೊಂಡಿದೆ.

ಹೊಸ ಉದ್ಯೋಗಕ್ಕೆ ಸೇರುವ ಆಸೆಯಲ್ಲಿ ಆ ಯುವತಿ ಪೋರ್ಚುಗಲ್‌ಗೆ ತಲುಪಿದ ತಕ್ಷಣ, ಅಲ್ಲಿದ್ದ ಏಜೆಂಟ್‌ಗಳು ಆಕೆಯ ಪಾಸ್‌ಪೋರ್ಟ್‌ ಅನ್ನು ಕಸಿದುಕೊಂಡು, ಕೊಠಡಿಯೊಂದರಲ್ಲಿ 2 ದಿನಗಳ ಕಾಲ ಬಂಧನದಲ್ಲಿಟ್ಟಿದ್ದರು. ನಂತರ ಆಕೆಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಾಟ ಮಾಡಲಾಗಿದ್ದು, ಅಲ್ಲಿ ಆಕೆಯಿಂದ ಬಲವಂತವಾಗಿ ಕೆಲಸ ಮಾಡಿಸಿಕೊಂಡು, ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ. ಆ ಯುವತಿ ತನ್ನ ಪಾಸ್‌ಪೋರ್ಟ್‌ ಅನ್ನು ಹಿಂತಿರುಗಿಸುವಂತೆ ವಂಚಕರನ್ನು ಕೇಳಿದಾಗ, ಅವರು ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ

ಯುವತಿ ಬಚಾವಾಗಿದ್ದು ಹೇಗೆ?:

ಬಿಯರ್ ಶಾಪ್ ಮಾಲೀಕರ ಬಳಿ ಸುಮಾರು 1 ತಿಂಗಳ ಕಾಲ ತೀವ್ರ ಕಿರುಕುಳ ಅನುಭವಿಸಿದ ನಂತರ, ಆ ಯುವತಿ ಅಲ್ಲಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡಿದ್ದಾರೆ. ಮೊದಲು ಬಸ್ ಮೂಲಕ ಲಿಸ್ಬನ್‌ಗೆ ಓಡಿಹೋದ ಆಕೆ, ನಂತರ ಮ್ಯಾಡ್ರಿಡ್‌ಗೆ ತಲುಪಿದ್ದಾರೆ. ಅಲ್ಲಿಂದ ದೋಹಾ ಮಾರ್ಗವಾಗಿ ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಮಾಲ್ಟಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅದೇ ವಂಚಕರು ಮತ್ತೆ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆ ಯುವತಿ ಹಣ ನೀಡಲು ನಿರಾಕರಿಸಿದಾಗ, ಆಕೆಯ ಗಂಡನನ್ನು ಕೊಲೆ ಮಾಡುವುದಾಗಿ ಮತ್ತು ಆಕೆಯ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಇದರಿಂದ ರೋಸಿಹೋದ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸುಲಿಗೆ ಆರೋಪದಡಿ ‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ 8 ಮಂದಿ ಆರೋಪಿಗಳ ವಿರುದ್ಧ ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ನಾಗಪುರದ ಕಾಲೇಜೊಂದರಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದ್ದು, ಆಯುರ್ವೇದ ಔಷಧ ಮಾರಾಟ ಮಾಡುವ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಉತ್ತಮ ಭವಿಷ್ಯ ಮತ್ತು ವಿದೇಶದಲ್ಲಿ ಉದ್ಯೋಗದ ಆಸೆಯಲ್ಲಿದ್ದ ಯುವತಿಗೆ ಪುಣೆ ಮೂಲದ ಜಾಬ್ ಏಜೆನ್ಸಿ ಈ ರೀತಿ ವಂಚನೆ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೈ ಸಿನಿಮಾಗಳಿಂದ ಸುಸ್ತಾಗಿ ಹಾರರ್ ಸಿನಿಮಾಕ್ಕೆ ಹಾರಿದ ‘ಯಶ್ ರಾಜ್’ – Kannada News | Yash Raj Films to produce its first Horror movie Varun Dhawan will be main lead

ಸಿನಿಮಾ (Cinema) ರಂಗದಲ್ಲಿ ಕಾಲ-ಕಾಲಕ್ಕೆ ಜಾನರ್​​ಗಳು ಬದಲಾಗುತ್ತಲೇ ಇರುತ್ತವೆ. ಪ್ರೇಮಕತೆಯೊಂದು ದೊಡ್ಡ ಹಿಟ್ ಆದರೆ ಎಲ್ಲರೂ ಪ್ರೇಮಕತೆಯ ಹಿಂದೆ ಬೀಳುತ್ತಾರೆ. ಅದೇ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಹಿಟ್ ಆದರೆ ಎಲ್ಲರೂ ಹಾಸ್ಯಪ್ರಧಾನ ಸಿನಿಮಾಗಳನ್ನೇ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್​​ನಲ್ಲಿ‘ಬಯೋಪಿಕ್’ ಜಾನರ್ ಬಲು ಓಡಿತ್ತು. ಒಂದರ ಹಿಂದೊಂದರಂತೆ ಕ್ರೀಡಾಪಟುಗಳ, ರಾಜಕಾರಣಿಗಳ ಬಯೋಪಿಕ್​​ಗಳು ನಿರ್ಮಾಣ ಆದವು. ಆದರೆ ಈಗ ಹಾರರ್ ಸಿನಿಮಾಗಳ ಕಾಲ. ಬಾಲಿವುಡ್​​ನ ಟಾಪ್ ನಿರ್ಮಾಣ ಸಂಸ್ಥೆ ಯಶ್​​ ರಾಜ್ ಫಿಲಮ್ಸ್ ಸಹ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ನಿರ್ಮಿಸಲು ಮುಂದಾಗಿದೆ.

ದಶಕಗಳಿಂದ ವಿವಿಧ ಪ್ರಕಾರದ ಸಿನಿಮಾಗಳಲ್ಲಿ ಪ್ರಯೋಗ ಮಾಡಿದ ಯಶ್ ರಾಜ್ ಫಿಲ್ಮ್ಸ್, ಇತ್ತೀಚೆಗೆ ಕೇವಲ ಮಾಸ್ ಮಸಾಲ, ಆಕ್ಷನ್ ಸಿನಿಮಾಗಳನ್ನು ಮಾತ್ರ ನೆಚ್ಚಿಕೊಂಡಿತ್ತು. ಅದರಲ್ಲೂ ತನ್ನದೇ ಆದ ‘ಸ್ಪೈ’ ಸಿನಿಮಾ ಯೂನಿವರ್ಸ್ ಅನ್ನು ಸೃಷ್ಟಿಸಿತು. ‘ಟೈಗರ್’ ಸರಣಿ, ‘ಪಠಾಣ್’, ‘ವಾರ್’ ಸರಣಿ, ‘ಆಲ್ಫಾ’ ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು. ಆದರೆ ಇದೀಗ ಯಶ್ ರಾಜ್ ಫಿಲಮ್ಸ್ ಸ್ಪೈ ಯೂನಿವರ್ಸ್ ಬದಲಿಗೆ ಹಾರರ್ ಸಿನಿಮಾದ ಕಡೆಗೆ ಹೊರಳಿದೆ. ವರದಿಗಳ ಪ್ರಕಾರ, ಈ ನಿರ್ಮಾಣ ಸಂಸ್ಥೆಯು ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಯಶ್ ರಾಜ್ ಅವರ ಮೊದಲ ಹಾರರ್ ಸಿನಿಮಾನಲ್ಲಿ ನಾಯಕನಾಗಿ ವರುಣ್ ಧವನ್ ನಟಿಸಲಿದ್ದಾರೆ.

‘ರಾಕೆಟ್ ಬಾಯ್ಸ್’ ಹೆಸರಿನ ಒಳ್ಳೆಯ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಅಭಯ್ ಪನ್ನು, ಯಶ್ ರಾಜ್ ಅವರ ಮೊದಲ ಹಾರರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಮತ್ತು ಸಂಭಾಷಣೆ ಸಹ ಅವರದ್ದೆ. ವರುಣ್ ಧವನ್ ಅವರು ನಾಯಕನಾಗಿ ನಟಿಸಲಿದ್ದು, ಈ ಸಿನಿಮಾ ಹಾರರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶ ಹಾಗೂ ಆಕ್ಷನ್ ಅನ್ನು ಸಹ ಒಳಗೊಂಡಿರಲಿದೆಯಂತೆ. ಇದು ವರುಣ್ ಧವನ್ ಅವರಿಗೆ ಯಶ್ ರಾಜ್ ಫಿಲಮ್ಸ್ ಜೊತೆಗೆ ಎರಡನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:ರಜನೀಕಾಂತ್ ಸಿನಿಮಾನಲ್ಲಿ ನಾಯಕಿ ಆಗಲಿರುವ ಕನ್ನಡತಿ ಶ್ರೀಲೀಲಾ

ವರುಣ್ ಧವನ್ ಈಗಾಗಲೇ ಹಾರರ್ ಸಿನಿಮಾಗಳಾದ ‘ಭೇಡಿಯಾ’, ‘ಸ್ತ್ರೀ 2’, ‘ಥಾಮ’, ‘ಮುಂಜಿಯಾ’ಗಳಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಮ್ಸ್ ಅವರಿಗೆ ಈ ಹಿಂದೆ ಭಾರಿ ಲಾಭ ಮಾಡಿಕೊಟ್ಟಿದ್ದ ಸ್ಪೈ ಸಿನಿಮಾಗಳು ಇತ್ತೀಚೆಗೆ ಅವರಿಗೆ ತುಸು ನಷ್ಟವನ್ನೇ ಉಂಟು ಮಾಡಿವೆ ಎನ್ನಲಾಗುತ್ತಿದೆ. ಅಲ್ಲದೆ, ಯಶ್ ರಾಜ್ ಅವರ ಸಿದ್ಧ ಸೂತ್ರದ ಸ್ಪೈ ಸಿನಿಮಾಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ಟ್ರೋಲಿಂಗ್ ಸಹ ನಡೆಯುತ್ತಿದೆ. ಇದೇ ಕಾರಣಕ್ಕೆ ಯಶ್ ರಾಜ್ ಫಿಲಮ್ಸ್ ಹೊಸ ಜಾನರ್​​ಗೆ ಎಂಟ್ರಿ ನೀಡಿದೆ.

ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ. ಚಿತ್ರೀಕರಣ ಕೆಲವೇ ತಿಂಗಳುಗಳಲ್ಲಿ ಪ್ರಾರಂಭ ಆಗಲಿದ್ದು, 2027ರ ಆರಂಭದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version