ಕುವೈತ್​​ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ – Kannada News | Hyderabad Student Suicide: YouTuber Komali Dies After Breakup, Texts Mother in Kuwait

ಹೈದರಾಬಾದ್, ಫೆಬ್ರವರಿ 26: ಯೂಟ್ಯೂಬರ್ ಹಾಗೂ ಬಿಎಸ್​ಸಿ ವಿದ್ಯಾರ್ಥಿನಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿರುವ ತನ್ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಯುವ ಮುನ್ನ ಕುವೈತ್​​ನಲ್ಲಿರುವ ತಾಯಿಗೆ ಐ ಲವ್ ಯೂ ಸೋ ಮಚ್ ಎಂದು ಸಂದೇಶ ಕಳುಹಿಸಿದ್ದಾಳೆ.ಈ ಘಟನೆ ಫೆಬ್ರವರಿ 23 ರಂದು (ಸೋಮವಾರ) ನಡೆದಿದ್ದು, ಆಕೆಯ ತಾಯಿ ಕುವೈತ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಳನ್ನು ಕೋಮಲಿ ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರು. ಅವರು ಕಳೆದ 11 ತಿಂಗಳಿನಿಂದ ಹೈದರಾಬಾದ್‌ನಲ್ಲಿರುವ ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು, ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆಯುತ್ತಿದ್ದರು. ವಿಜ್ಞಾನ ವಿದ್ಯಾರ್ಥಿನಿಯಾಗುವುದರ ಜೊತೆಗೆ, ಯೂಟ್ಯೂಬರ್ ಕೂಡ ಆಗಿದ್ದರು.

ಫೆಬ್ರವರಿ 23 ರ ಬೆಳಗ್ಗೆ, ಆಕೆ ತನ್ನ ತಾಯಿ ಬಿ ಸತ್ಯ ವರಲಕ್ಷ್ಮಿಗೆ ಒಂದು ಸಂದೇಶ ಕಳುಹಿಸಿದ್ದಳು, ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ ಅಮ್ಮ ಎಂದು ಬರೆದಿದ್ದು, ಕಿರಿಯ ಸಹೋದರನನ್ನು ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಇದಾದ ನಂತರ, ಅವಳ ಫೋನ್ ಸ್ವಿಚ್ ಆಫ್ ಆಗಿತ್ತು.

ವರಲಕ್ಷ್ಮಿ ಕೋಮಲಿಗೆ ಕರೆ ಮಾಡಲು ಪ್ರಯತ್ನಿಸುತ್ತಲೇ ಇದ್ದರು, ಆದರೆ ಎಲ್ಲಾ ಕರೆಗಳಿಗೂ ಉತ್ತರ ಸಿಗಲಿಲ್ಲ. ನಂತರ, ಅವರು ಸ್ನೇಹಿತರಿಗೆ ಮಾಹಿತಿ ನೀಡಿ ಹೈದರಾಬಾದ್‌ನಲ್ಲಿರುವ ಕೋಮಲಿಯ ಫ್ಲಾಟ್‌ಗೆ ಹೋಗುವಂತೆ ಕೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಮೆಗಾ ಟ್ವಿಸ್ಟ್: ಕಾನ್ಫಿಡೆಂಟ್ ಒಡೆಯನಿಗೆ ಮುಳುವಾಯ್ತಾ 500 ಕೋಟಿ ರೂ.?

ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಫ್ಲಾಟ್‌ಗೆ ಹೋಗಿದ್ದಾರೆ, ಆದರೆ ಪದೇ ಪದೇ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪೊಲೀಸರು ಕೂಡಲೇ, ಬೀಗ ಮುರಿದು ಅಪಾರ್ಟ್ಮೆಂಟ್ ಒಳಗೆ ಹೋದರು, ಅಲ್ಲಿ ಕೋಮಲಿಯ ಶವ ಸೀಲಿಂಗ್ ಫ್ಯಾನ್‌ನಿಂದ ನೇತಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ಒಂದು ಸಣ್ಣ ಏಣಿ ಮತ್ತು ಸೀರೆಯನ್ನು ಸಹ ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, 21 ವರ್ಷದ ಯುವತಿ ಕಳೆದ ಮೂರು ವರ್ಷಗಳಿಂದ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಅವರು ಇತ್ತೀಚೆಗೆ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದರು.

ಆರು ತಿಂಗಳ ಹಿಂದೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈಗ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಎಲ್ಲಾ ಭೌತಿಕ ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate Today: ಚಿನ್ನದ ಬೆಲೆ ತುಸು ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 26th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 26: ನಿನ್ನೆ 10 ರೂನಷ್ಟು ಅಲ್ಪ ಏರಿಕೆ ಆಗಿದ್ದ ಚಿನ್ನದ ಬೆಲೆ (Gold Rates) ಇವತ್ತು ಗುರುವಾರ 20 ರೂ ತಗ್ಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಅಲ್ಪ ಸ್ವಲ್ಪ ಏರುಪೇರುಗಳಾಗಿವೆ. ಉಳಿದಂತೆ ಅಮೂಲ್ಯ ಲೋಹಗಳ ಬೆಲೆ ಬಹುತೇಕ ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,126 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,820 ರೂ
  • ಚೆನ್ನೈ: 14,920 ರೂ
  • ಮುಂಬೈ: 14,820 ರೂ
  • ದೆಹಲಿ: 14,835 ರೂ
  • ಕೋಲ್ಕತಾ: 14,820 ರೂ
  • ಕೇರಳ: 14,820 ರೂ
  • ಅಹ್ಮದಾಬಾದ್: 14,825 ರೂ
  • ಜೈಪುರ್: 14,835 ರೂ
  • ಲಕ್ನೋ: 14,835 ರೂ
  • ಭುವನೇಶ್ವರ್: 14,820 ರೂ

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 618 ರಿಂಗಿಟ್ (14,440 ರುಪಾಯಿ)
  • ದುಬೈ: 581.75 ಡಿರಾಮ್ (14,392 ರುಪಾಯಿ)
  • ಅಮೆರಿಕ: 162 ಡಾಲರ್ (14,723 ರುಪಾಯಿ)
  • ಸಿಂಗಾಪುರ: 204 ಸಿಂಗಾಪುರ್ ಡಾಲರ್ (14,675 ರುಪಾಯಿ)
  • ಕತಾರ್: 572.50 ಕತಾರಿ ರಿಯಾಲ್ (14,272 ರೂ)
  • ಸೌದಿ ಅರೇಬಿಯಾ: 590 ಸೌದಿ ರಿಯಾಲ್ (14,294 ರುಪಾಯಿ)
  • ಓಮನ್: 61.40 ಒಮಾನಿ ರಿಯಾಲ್ (14,493 ರುಪಾಯಿ)
  • ಕುವೇತ್: 47.42 ಕುವೇತಿ ದಿನಾರ್ (14,105 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಕನ್ನಡದ ಸಿನಿಮಾ ಅಲ್ಲವೆಂದ ಹಿರಿಯ ನಿರ್ದೇಶಕ: ಕೊಟ್ಟ ಕಾರಣವೇನು? – Kannada News | Rajendra Singh Babu praised Toxic said its not only Kannada movie its international

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಸಿನಿಮಾಕ್ಕಾಗಿ ದೇಶದಾದ್ಯಂತ ಮಾತ್ರವಲ್ಲದೆ ವಿದೇಶಿ ಸಿನಿಮಾ ಪ್ರೇಮಿಗಳು ಸಹ ಎದುರು ನೋಡುತ್ತಿದ್ದಾರೆ. ಇನ್ನು ಕನ್ನಡದ ಸಿನಿಮಾ ಕರ್ಮಿಗಳು ಸಹ ವೈಷಮ್ಯಗಳನ್ನು ಮರೆತು ತಮ್ಮ ಚಿತ್ರರಂಗದ ಸಿನಿಮಾ ಎಂಬ ಕಾರಣಕ್ಕೆ ಭರಪೂರ ಬೆಂಬಲ ನೀಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ಇದಕ್ಕೆ ಹೊರತಲ್ಲ. ‘ಟಾಕ್ಸಿಕ್’ ಸಿನಿಮಾವನ್ನು ಅದರ ಮೇಕಿಂಗ್ ಅನ್ನು ಅವರು ಕೊಂಡಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವಾರು ಬ್ಲಾಕ್ ಬಸ್ಟರ್, ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ರಾಜೇಂದ್ರ ಸಿಂಗ್ ಬಾಬು ಅವರು ಈಗಲೂ ಸಹ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದು ಇದೀಗ ‘ವೀರಕಂಬಳ’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ಟಿವಿ9 ಜೊತೆಗೆ ಮಾತನಾಡಿರುವ ಅವರು, ಬಹುನಿರೀಕ್ಷಿತ ಸಿನಿಮಾ ಮತ್ತು ಚರ್ಚೆಯಲ್ಲಿರುವ ಸಿನಿಮಾ ಆಗಿರುವ ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ‘ಟಾಕ್ಸಿಕ್’ ಸಿನಿಮಾವನ್ನು ಭಿನ್ನ ಕೋನದಿಂದ ನೋಡಿರುವ ಹಿರಿಯ ನಿರ್ದೇಶಕರು, ‘ಟಾಕ್ಸಿಕ್’ ಕನ್ನಡ ಸಿನಿಮಾ ಅಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರದ ಇಂಗ್ಲಿಷ್ ಆವೃತ್ತಿ ರಿಲೀಸ್ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಗೊಂದಲ

ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಟಾಕ್ಸಿಕ್’ ಅನ್ನು ಕೇವಲ ಕನ್ನಡ ಸಿನಿಮಾ ಎನ್ನಲಾಗದು, ಅದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಸಿನಿಮಾ, ಆ ಸಿನಿಮಾದ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಅಲ್ಲಿ ನಾಯಕನಿಗೆ ವಿಶೇಷ ಮೌಲ್ಯ ಇದೆ, ಅದ್ಭುತವಾದ ಪ್ರೊಡಕ್ಷನ್ ಇದೆ, 600 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಅಂಥಹ ಸಿನಿಮಾ ಬಂದಿರುವುದು ನಮಗೆಲ್ಲ ಸಂತೋಷ’ ಎಂದಿದ್ದಾರೆ ಬಾಬು.

‘ಟಾಕ್ಸಿಕ್’ ಸಿನಿಮಾದ ಟೀಸರ್​​ ವಿರುದ್ಧ ಅಶ್ಲೀಲತೆ ಆರೋಪ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಂದ್ರ ಸಿಂಗ್ ಬಾಬು, ‘ಅದ್ಭುತವಾದ ಮೇಕಿಂಗ್ ಮಾಡಿದ್ದಾರೆ. ಯಾವುದೇ ಇಂಗ್ಲೀಷ್ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಅದನ್ನು ಅವರು ಮಾಡಿದ್ದಾರೆ. ಯಾವುದನ್ನೇ ಆದರೂ ಕೂದಲು ಸೀಳುತ್ತಾ ಕುಳಿತರೆ ಆಗವುದಿಲ್ಲ, ಹಾಗೆ ಮಾಡಿದಾಗ ಒಂದಲ್ಲ ಒಂದು ತಪ್ಪು ಸಿಗುತ್ತವೆ, ಆದರೆ ಅದನ್ನೇ ದೊಡ್ಡದು ಮಾಡಿ, ನಿಜವಾದ ಶ್ರಮವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಪ್ರಯತ್ನಕ್ಕೆ ನಾವು ಭೇಷ್ ಎನ್ನಬೇಕು’ ಎಂದಿದ್ದಾರೆ.

‘ಒಬ್ಬ ಮನುಷ್ಯ ತಾನು ಮನಸ್ಸು ಮಾಡಿದರೆ ಬೆಟ್ಟವನ್ನೇ ಅಲ್ಲಾಡಿಸಬಹುದು ಎಂಬುದಕ್ಕೆ ಯಶ್ ಉದಾಹರಣೆ. ಹತ್ತು ವರ್ಷಗಳ ಹಿಂದೆ ಒಮ್ಮೆ ಭೇಟಿ ಆಗಿದ್ದಾಗ ಹೀಗೆ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆವು, ಆಗಲೇ ಯಶ್ ಹೇಳಿದ್ದರು, ಸರ್ ನಾನು ಮಾಡೇ ಮಾಡ್ತೀನಿ, 250 ಕೋಟಿ ಸಿನಿಮಾ ಮಾಡ್ತೀನಿ ಎಂದಿದ್ದರು. ಅದರಂತೆ ಅವರು ಇಂದು ಮಾಡಿದ್ದಾರೆ, ಅದನ್ನೂ ಮೀರಿ ಹೋಗಿದ್ದಾರೆ’ ಎಂದಿದ್ದಾರೆ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ! – Kannada News | Belagavi: Wife, Son Among Four Arrested in Brutal Kittur Murder Over Property Dispute

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣ ಬಯಲಿಗೆಳೆದ ಪೊಲೀಸರು (ಒಳಚಿತ್ರದಲ್ಲಿ ಕಲ್ಮೇಶ್)Image Credit source: tv9

ಬೆಳಗಾವಿ, ಫೆಬ್ರವರಿ 26: ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗನೇ ಕೃತ್ಯಕ್ಕೆ ಸಾಥ್ ನೀಡಿ, ನಂತರ ನಾಟಕವಾಡಿದ್ದರು ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಫೆಬ್ರವರಿ 20ರಂದು ಹಿರೇನಂದಿಹಳ್ಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ಶವ ಪತ್ತೆಯಾಗಿತ್ತು. ನಂತರ ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ್ ಕೋಟಿ ಎಂದು ಗುರುತಿಸಲಾಯಿತು. ತುಮಕೂರಿನಲ್ಲಿ ಹೋಮ್ ಕೇರ್ ಉದ್ಯೋಗದಲ್ಲಿ ತೊಡಗಿದ್ದ ಕಲ್ಮೇಶ್, ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ವೇಳೆ ಸಂಚು ರೂಪಿಸಿ ಕೊಲೆಗೈಯಲಾಗಿತ್ತು.

ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆದೊಯ್ದು ಕೊಲೆ

‘ಪಾರ್ಟಿ ಮಾಡಿ ಬರೋಣ’ ಎಂದು ಹೇಳಿ ಜಮೀನಿಗೆ ಕರೆದೊಯ್ದ ಆರೋಪಿಗಳು, ಹಲ್ಲೆ ಮಾಡಿ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ್ದರು. ಕೊಲೆಗೈದ ಬಳಿಕ ಆರೋಪಿಗಳಲ್ಲಿ ಒಬ್ಬ ತನ್ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪತ್ನಿ–ಮಗನ ಡ್ರಾಮಾ ಬಯಲು

ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ನೀಡಿದ ಸಂಗತಿ ಎಂದರೆ, ಕೊಲೆಗೆ ಸಾಥ್ ನೀಡಿದ್ದೇ ಪತ್ನಿ ಮತ್ತು ಪುತ್ರ ಎಂಬುದು. ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ ಗುರುತು ಪತ್ತೆಗೆ ಬಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ್ ಕೋಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕೈಜೋಡಿಸಿದ ಕಲ್ಮೇಶ್ ಬಾಮೈದ ಮಲ್ಲೇಶ ಅಂಬಣ್ಣವರ (32) ಹಾಗೂ ಅವನ ಸ್ನೇಹಿತ ಮುದುಕಪ್ಪ ಕೋಲೇಕರ್ ಅವರನ್ನು ಕೂಡ ಕಿತ್ತೂರು ಠಾಣೆ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

12 ವರ್ಷಗಳ ದಾಂಪತ್ಯ ಕಲಹ, ಮೂರು ಎಕರೆ ಆಸ್ತಿಯೇ ಮೂಲ ಕಾರಣ

ಕಲ್ಮೇಶ್ ಮತ್ತು ಪತ್ನಿ ಕಸ್ತೂರಿ ಕಳೆದ 12 ವರ್ಷಗಳಿಂದ ದಾಂಪತ್ಯ ಕಲಹದ ಹಿನ್ನೆಲೆ ದೂರವಿದ್ದು, ಕಸ್ತೂರಿ ಪುತ್ರನೊಂದಿಗೆ ಕುಂದಗೋಳದಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಐದು ವರ್ಷಗಳ ಹಿಂದೆ ಪುತ್ರಿಯ ಮದುವೆಗೆ 8 ಲಕ್ಷ ರೂಪಾಯಿ ಸಾಲವನ್ನು ಸಹೋದರ ಮಲ್ಲೇಶ ಅಂಬಣ್ಣವರಿಂದ ಪಡೆದಿದ್ದ ಕಸ್ತೂರಿ, ಕಲ್ಮೇಶ್ ಹೆಸರಿನ ಮೂರು ಎಕರೆ ಪಿತ್ರಾರ್ಜಿತ ಜಮೀನನ್ನು ಅಡಮಾನ ಇಟ್ಟು ಹಣ ಪಡೆದಿದ್ದಳು.

ಆದರೆ, ಜಮೀನು ಬರೆದುಕೊಡಲು ಕಲ್ಮೇಶ್ ನಿರಾಕರಿಸಿದ್ದಲ್ಲದೆ, ಸಾಲ ಮರುಪಾವತಿಗಾಗಿ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಕಸ್ತೂರಿ, ತನ್ನ ಸಹೋದರರೊಂದಿಗೆ ಸಭೆ ನಡೆಸಿ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಪತಿ ಸತ್ತರೆ ಜಮೀನು ತನ್ನ ಹೆಸರಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಲ್ಮೇಶ್ ಕಥೆ ಮುಗಿಸಲು ಸಂಚು ರೂಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಮೊದಲಿನಿಂದಲೇ ಕೊಲೆ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದ ಕಿತ್ತೂರು ಪೊಲೀಸರು, ಆಸ್ತಿಯ ಲೆಕ್ಕಾಚಾರವೇ ಕೊಲೆಗೆ ಮೂಲ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ – Kannada News | Karnataka Moral Policing: Arrests in Mangaluru, Bengaluru Bus Incident Sparks Outrage

ಮಂಗಳೂರು, ಫೆ.26: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣ ಬೆಳಕಿಗೆ ಬಂದಿದೆ. ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ಮತ್ತು ಬಾಲಕಿ ರೈಲ್ವೆ ಹಳಿಯ ಬಳಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂಬುವವರು ವಿದ್ಯಾರ್ಥಿಗಳ ವಿಡಿಯೋ ಮಾಡಲಾರಂಭಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅಡ್ಡಗಟ್ಟಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಾಲಕನ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೇವಲ ಹಲ್ಲೆಯಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ವಿದ್ಯಾರ್ಥಿಗಳ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು, ಅಪ್ರಾಪ್ತ ವಿದ್ಯಾರ್ಥಿಗಳ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಬಂಧಿತರನ್ನು ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಅಟ್ರಾಸಿಟಿ (SC/ST Act) ಹಾಗೂ ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಇದೀಗ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು

ಬೆಂಗಳೂರು ಬಸ್ಸಿನಲ್ಲಿ ನೈತಿಕ ಪೊಲೀಸ್‌ಗಿರಿ

22 ವರ್ಷದ ಯುವಕ ಮತ್ತು ಆತನ ಗೆಳತಿ ಬೆಂಗಳೂರಿನಿಂದ ಪ್ರಯಾಣಿಸಲು ಖಾಸಗಿ ಸ್ಲೀಪರ್ ಬಸ್‌ನಲ್ಲಿ 3 ಬರ್ತ್‌ಗಳನ್ನು ಬುಕ್ ಮಾಡಿದ್ದರು. ಹೆಚ್ಚು ಜಾಗವಿರಲಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದರು. ಆದರೆ ಬಸ್ ಹತ್ತಿದ ನಂತರ ಕಂಡಕ್ಟರ್ ಇವರಿಬ್ಬರನ್ನು ಒಟ್ಟಿಗೆ ಕುಳಿತುಕೊಳ್ಳದಂತೆ ತಡೆದಿದ್ದಾರೆ. ಇಬ್ಬರೂ ವಯಸ್ಕರಾಗಿದ್ದರೂ ಮತ್ತು ಅಧಿಕೃತ ಟಿಕೆಟ್ ಹೊಂದಿದ್ದರೂ, ಕಂಡಕ್ಟರ್ ಇಬ್ಬರನ್ನು ಪ್ರತ್ಯೇಕ ಸೀಟುಗಳಲ್ಲಿ ಮಲಗುವಂತೆ ಒತ್ತಾಯಿಸಿದ್ದಾರೆ.ನಿಮ್ಮ ಪೋಷಕರಿಗೆ ಫೋನ್ ಮಾಡಿ” ಇಲ್ಲವೆಂದರೆ “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಕಂಡಕ್ಟರ್ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಿಮಗಟ್ಟಿದ ಪ್ಯಾಂಗಾಂಗ್ ತ್ಸೋ ಸರೋವರದಲ್ಲಿ ಮ್ಯಾರಥಾನ್ – Kannada News | Runners Conquer Icy Terrain as Pangong Frozen Lake Marathon 2026 Wraps Up

ಪ್ಯಾಂಗಾಂಗ್, ಫೆಬ್ರವರಿ 26: ಹಿಮಗಟ್ಟಿರುವ ಪ್ಯಾಂಗಾಂಗ್ ತ್ಸೊ ಸರೋವರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಲಡಾಖ್‌ನ ಲೇಹ್‌ನಲ್ಲಿದೆ. ನೀರಿನ ಮೇಲ್ಮೈ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುತ್ತದೆ, ಭಾರತದ ಲಡಾಖ್‌ನ ಪ್ಯಾಂಗಾಂಗ್ ಸರೋವರ ಮತ್ತು ಸಿಕ್ಕಿಂನ ತ್ಸೊಂಗೊ ಸರೋವರ ಎರಡರಲ್ಲೂ ಇದೇ ರೀತಿಯ ಅನುಭವ ಕಾಣಬಹುದು.ಇವು ನೀಲಿ ಅಥವಾ ಬಿಳಿ ಬಣ್ಣದ ಐಸ್ ಶೀಟ್‌ನಂತೆ ಕಾಣುತ್ತವೆ.ಟಿಬೆಟ್‌ನಂತಹ ಎತ್ತರದ ಪ್ರದೇಶಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ.ಈ ಸರೋವರಗಳ ಮೇಲೆ ನಡೆಯುವುದು, ಸ್ಕೇಟಿಂಗ್ ಮಾಡುವುದು ಸಾಹಸೀ ಪ್ರವಾಸಿಗರಿಗೆ ರೋಮಾಂಚನವನ್ನು ನೀಡುತ್ತದೆ.ಹಿಮಗಟ್ಟಿದ ಸರೋವರಗಳ ಮೇಲೆ ನಡೆಯುವಾಗ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವುದು ಮುಖ್ಯ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಝಿಂಬಾಬ್ವೆ ವಿರುದ್ಧ ಭಾರತ ಎಷ್ಟು ರನ್​ಗಳಿಂದ ಗೆಲ್ಲಬೇಕು? – Kannada News | India’s Scenarios to Reach a Positive NRR

T20 World Cup 2026: ಟಿ20 ವಿಶ್ವಕಪ್​ನ 48ನೇ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಮ್ಯಾಚ್​ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ತನ್ನ ಸೆಮಿಫೈನಲ್​ ಹಾದಿಯನ್ನು ಸುಗಮಗೊಳಿಸಬಹುದು. ಅದರಲ್ಲೂ ನೆಟ್ ರನ್​ ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಟೀಮ್ ಇಂಡಿಯಾದ ಸೆಮಿಫೈನಲ್ ಲೆಕ್ಕಾಚಾರ ಸರಳವಾಗಲಿದೆ. ಹಾಗಿದ್ರೆ ಝಿಂಬಾಬ್ವೆ ವಿರುದ್ಧ ಭಾರತ ತಂಡ ಎಷ್ಟು ರನ್​ಗಳ ಅಂತರದಿಂದ ಗೆದ್ದರೆ ನೆಟ್ ರನ್ ರೇಟ್​ ಪಾಸಿಟಿವ್ (+0.000 ಕ್ಕಿಂತ ಹೆಚ್ಚು) ಮಾಡಿಕೊಳ್ಳಬಹುದು ಎಂದು ನೋಡುವುದಾದರೆ…

ಮೊದಲು ಬ್ಯಾಟಿಂಗ್ ಮಾಡಿದರೆ:

  • ಝಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 77 ರನ್​ಗಳ ಅಂತರದಿಂದ ಜಯಗಳಿಸಬೇಕು. ಅಂದರೆ ಟೀಮ್ ಇಂಡಿಯಾ 200 ರನ್​ಗಳಿಸಿದರೆ, ಝಿಂಬಾಬ್ವೆ ತಂಡವನ್ನು 123 ರನ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕು.
  • ಭಾರತ ತಂಡವು ಮೊದಲು ಬ್ಯಾಟ್ ಮಾಡಿ 180 ರನ್ ಗಳಿಸಿದರೆ, ಝಿಂಬಾಬ್ವೆ ತಂಡವನ್ನು 103 ರನ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬೇಕು. ಅಂದರೆ ಟೀಮ್ ಇಂಡಿಯಾ ಕನಿಷ್ಠ 77 ರನ್​ಗಳ ಅಂತರದಿಂದ ಗೆದ್ದರೆ ಮಾತ್ರ ನೆಟ್ ರನ್ ರೇಟ್ ಪಾಸಿಟಿವ್ ಆಗಲಿದೆ.

ಚೇಸಿಂಗ್ ಮಾಡಿದರೆ:

  • ಝಿಂಬಾಬ್ವೆ ತಂಡವು ಮೊದಲು ಬ್ಯಾಟ್ ಮಾಡಿ 150 ರನ್​ಗಳ ಗುರಿ ನೀಡಿದರೆ, ಈ ಗುರಿಯನ್ನು ಟೀಮ್ ಇಂಡಿಯಾ 11 ಓವರ್​ಗಳಲ್ಲಿ ಚೇಸ್ ಮಾಡಬೇಕು.
  • ಒಂದು ವೇಳೆ ನ್ಯೂಝಿಲೆಂಡ್ 180 ರನ್​ಗಳಿಸಿದರೆ, ಭಾರತ ತಂಡವು 181 ರನ್​ಗಳನ್ನು ಕೇವಲ 11.4 ಓವರ್​ಗಳಲ್ಲಿ ಕಲೆಹಾಕಬೇಕು. ಅಂದರೆ 70 ಎಸೆತಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಬೇಕು.
  • ಇನ್ನು ಝಿಂಬಾಬ್ವೆ ತಂಡವು 200 ರನ್​ಗಳ ಗುರಿ ನೀಡಿದರೆ, ಟೀಮ್ ಇಂಡಿಯಾ ಈ ಮೊತ್ತವನ್ನು ಕೇವಲ 12 ಓವರ್​ಗಳಲ್ಲಿ ಮುಟ್ಟಬೇಕು.

ಅಂದರೆ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 77 ರನ್​ಗಳ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾದ ನೆಟ್ ರನ್ ರೇಟ್ +0.000 ಕ್ಕಿಂತ ಹೆಚ್ಚು ಆಗಲಿದೆ. ಇನ್ನು ಚೇಸಿಂಗ್ ಮಾಡಿದರೆ ಅತೀ ಕಡಿಮೆ ಎಸೆತಗಳಲ್ಲಿ ಗುರಿ ಬೆನ್ನತ್ತಿದರೆ ಮಾತ್ರ ಪಾಸಿಟಿವ್ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು.

ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವುದು ಅನಿವಾರ್ಯ. ಏಕೆಂದರೆ ಬೃಹತ್ ಮೊತ್ತ ಪೇರಿಸಿದರೆ ಮಾತ್ರ 77 ರನ್​ಗಳ ಅಂತರದಿಂದ ಗೆಲ್ಲಲು ಸಾಧ್ಯ. ಇನ್ನು ಅತೀ ಕಡಿಮೆ ಓವರ್​ಗಳಲ್ಲಿ ಗುರಿ ತಲುಪಿದರೆ ಮಾತ್ರ +0.000 ಕ್ಕಿಂತ ಹೆಚ್ಚಿ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗರಿಂದ ಹೊಡಿಬಡಿ ಆಟವನ್ನು ನಿರೀಕ್ಷಿಸಬಹುದು.

ಸೆಮಿಫೈನಲ್ ಹಾದಿ:

ಭಾರತವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯುತ್ತದೆ. ಅತ್ತ ಸೌತ್ ಆಫ್ರಿಕಾ ತನ್ನ ಉಳಿದ ಪಂದ್ಯಗಳನ್ನು ಗೆದ್ದರೆ, ಅಂದರೆ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾಗೆ ನೆಟ್​ ರನ್ ರೇಟ್ ಆಧಾರದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ.

ಇದನ್ನೂ ಓದಿ: ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್

ಒಂದು ವೇಳೆ ಇಂದಿನ ಮೊದಲ ಪಂದ್ಯದಲ್ಲಿ (3 ಗಂಟೆಗೆ) ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ, ಟೀಮ್ ಇಂಡಿಯಾ ಝಿಂಬಾಬ್ವೆ ವಿರುದ್ಧ ಅಮೋಘ ಗೆಲುವು ದಾಖಲಿಸುವುದು ಅನಿವಾರ್ಯ. ಏಕೆಂದರೆ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೂ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕವೇ ಟೀಮ್ ಇಂಡಿಯಾ ತನ್ನ ನೆಟ್ ರನ್ ರೇಟ್​ ಅನ್ನು ಹೆಚ್ಚಿಸಿಕೊಳ್ಳಬೇಕಿದೆ.

Source link

ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ಶಾಸಕ – Kannada News | Kenya Assembly Leader Caleb Takes Bhagavad Gita Oath: Global Faith and ISKCON Connection

ಕೀನ್ಯಾ, ಫೆಬ್ರವರಿ 26: ಕೀನ್ಯಾದ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ(Bhagavad Gita) ಹಿಡಿದು ಪ್ರಮಾಣವಚನ ಸ್ವೀಕರಿಸಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಐತಿಹಾಸಿಕ ಘಟನೆ ನಡೆದಿದೆ. ಮೊಂಬಾಸಾ ಕೌಂಟಿಯ ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಪ್ರಮಾಣವಚನ ಸ್ವೀಕರಿಸಲು ಭಗವದ್ಗೀತೆಯೊಂದಿಗೆ ಬಂದಿದ್ದರು.

ಈ ಕುರಿತು ಇಸ್ಕಾನ್​ನ ಓಂಕಾರ ಮುಕುಂದ ದಾಸ್ ಮಾತನಾಡಿ, ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ ಆ ಭಾವ ಅವರ ಹೃದಯಲ್ಲಿ ಹುಟ್ಟಿಕೊಂಡಿರುವುದು, ಅದೇ ಸತ್ಯ, ಹಾಗೂ ಇದು ಉದ್ದೇಶ ಪೂರ್ವಕ ನಡೆ ಎಂದರು. ಸಾರ್ವಜನಿಕ ಹುದ್ದೆಯು ಹೆಚ್ಚಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ರಾಷ್ಟ್ರದಲ್ಲಿ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಕ್ಯಾಲೆಬ್ ಅವರ ನಿರ್ಧಾರವು ಹೊಸ ಭರವಸೆಯನ್ನು ಹುಟ್ಟುಹಾಕಿದೆ.

ಕ್ಯಾಲೆಬ್ ಹರೇ ಕೃಷ್ಣ ಸಮುದಾಯದಲ್ಲಿರುವ ಭಕ್ತ, ಅವರ ಅಣ್ಣನ ಮೂಲಕ ಇಸ್ಕಾನ್ ಜತೆ ಸೇರಿಕೊಂಡರು. ಮೊಂಬಾಸಾದ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿಯನ್ನು ಹರಡಲು 2021 ರಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮವಾದ ದಿ ಬೆಟರ್ ಯು ಕ್ಲಬ್‌ನ ಅಧ್ಯಕ್ಷರಾಗಿ, ಕ್ಯಾಲೆಬ್ ಕ್ಲಬ್ ಅನ್ನು 180 ಸದಸ್ಯರನ್ನು ಬೆಳೆಸಲು ಸಹಾಯ ಮಾಡಿದ್ದಾರೆ.

ಮತ್ತಷ್ಟು ಓದಿ: ‘ಪಠ್ಯದಲ್ಲಿ ಭಗವದ್ಗೀತೆ ಸೇರಿಸಿ ಎಂದು ಹೇಳಿದ್ದೇನೆ ಹೊರತು ಮತಾಂತರ ಮಾಡಿ ಎಂದಿಲ್ಲ’: ಸಿಎಂಗೆ ಹೆಚ್​​ಡಿಕೆ ಟಾಂಗ್

ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ಭಗವದ್ಗೀತೆ ಆ್ಯಸ್ ಇಟ್ ಈಸ್ ಪುಸ್ತಕವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು. ಮೊಂಬಾಸಾ ಯುವ ಅಸೆಂಬ್ಲಿ ಕೀನ್ಯಾ ಯುವ ಅಸೆಂಬ್ಲಿ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯುವ ನಾಯಕರಿಗೆ ಔಪಚಾರಿಕ ರಾಜಕೀಯಕ್ಕೆ ಮುಂಚೆ ಜವಾಬ್ದಾರಿಯನ್ನು ಅಭ್ಯಾಸ ಮಾಡುವ ವೇದಿಕೆಯಾಗಿದೆ.

ಈ ಮೊದಲು ಕೆನಡಾದ ವಿದೇಶಾಂಗ ಸಚಿವೆಯಾದ ಅನಿತಾ ಆನಂದ್ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಅಮೆರಿಕದಲ್ಲಿ ಕಾಶ್ ಪಟೇಲ್ ಎಫ್​ಬಿಐ ಡೈರೆಕ್ಟರ್ ಆದ ಬಳಿಕ ಅವರೂ ಕೂಡ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಇಂಡಿಯನ್ ಆಸ್ಟ್ರೇಲಿಯನ್ ಸಂಸದ ವರುಣ್ ಘೋಷ್ ಕೂಡ ಹೀಗೆಯೇ ಮಾಡಿದ್ದರು. ಆದರೆ ಅವರೆಲ್ಲರೂ ಮೂಲತಃ ಭಾರತೀಯರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Chandra Grahan: ಚಂದ್ರಗ್ರಹಣದ ವೇಳೆ ಅಂತ್ಯಕ್ರಿಯೆ ನಡೆಸಬಹುದೇ? ಶಾಸ್ತ್ರಗಳು ಹೇಳುವುದೇನು? – Kannada News | Chandra Grahan and Sutak: Can Last Rites Be Performed During Eclipse?

ಜ್ಯೋತಿಷ್ಯ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣ ಮತ್ತು ಅದರ ಸೂತಕ ಅವಧಿಯನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಪ್ರಕೃತಿಯಲ್ಲಿ ಸೂಕ್ಷ್ಮ ಶಕ್ತಿಗಳ ಚಲನವಲನ ಹೆಚ್ಚುತ್ತದೆ ಮತ್ತು ವಾತಾವರಣದಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 3ರಂದು ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಸಿಂಹ ರಾಶಿ ಮತ್ತು ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಸಂಭವಿಸಲಿದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಹೇಳಿದ್ದಾರೆ.

ಈ ಬಾರಿ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸುವುದರಿಂದ, ಅದರ ಸೂತಕ ಅವಧಿ ಅನ್ವಯಿಸುತ್ತದೆ. ಶಾಸ್ತ್ರಗಳ ಪ್ರಕಾರ ಚಂದ್ರಗ್ರಹಣದ ಸೂತಕ ಅವಧಿ ಗ್ರಹಣ ಆರಂಭಕ್ಕೆ ಒಂಬತ್ತು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂತಕ ಅವಧಿಯಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚುವುದು, ಪೂಜೆ–ಪಾಠಗಳನ್ನು ನಿಲ್ಲಿಸುವುದು ಮತ್ತು ಆಹಾರ ಸೇವನೆಯನ್ನು ತಡೆಯುವುದು ರೂಢಿಯಾಗಿದೆ. ಈ ಸಮಯದಲ್ಲಿ ಜಪ–ತಪ, ಮಂತ್ರಪಠಣ ಮಾಡುವುದು ಮಾತ್ರ ಶುಭಕರವೆಂದು ಹೇಳಲಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಜನರಿಗೆ ಉದ್ಭವಿಸುವ ಪ್ರಮುಖ ಪ್ರಶ್ನೆ ಎಂದರೆ – ಗ್ರಹಣದ ಸಮಯದಲ್ಲಿ ಯಾರಾದರೂ ನಿಧನರಾದರೆ ಅಂತ್ಯಕ್ರಿಯೆ ನಡೆಸಬಹುದೇ? ಶಾಸ್ತ್ರಗಳ ಪ್ರಕಾರ ಗ್ರಹಣ ಅಥವಾ ಸೂತಕ ಅವಧಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಡೆಸುವ ವಿಧಿಗಳು ಆತ್ಮದ ಶಾಂತಿಯ ಪ್ರಯಾಣಕ್ಕೆ ಅಡ್ಡಿಯಾಗಬಹುದು ಮತ್ತು ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಆದ್ದರಿಂದ, ಗ್ರಹಣದ ಸಮಯದಲ್ಲಿ ಮರಣ ಸಂಭವಿಸಿದರೆ, ಮೃತದೇಹವನ್ನು ಯಥಾಶಕ್ತಿ ಸಂರಕ್ಷಿಸಿ ಗ್ರಹಣ ಸಂಪೂರ್ಣವಾಗಿ ಮುಗಿಯುವವರೆಗೆ ಕಾಯುವುದು ಉತ್ತಮವೆಂದು ಶಾಸ್ತ್ರಗಳು ಸೂಚಿಸುತ್ತವೆ. ಚಂದ್ರ ಅಥವಾ ಸೂರ್ಯಗ್ರಹಣ ಸಾಮಾನ್ಯವಾಗಿ ಕಡಿಮೆ ಅವಧಿಯದ್ದಾಗಿರುವುದರಿಂದ, ಆ ಸಮಯ ಮುಗಿದ ನಂತರ ಶುದ್ಧಿ ವಿಧಿಗಳನ್ನು ನೆರವೇರಿಸಿ ಅಂತ್ಯಕ್ರಿಯೆಗಳನ್ನು ಮಾಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಸೂತಕ ಅವಧಿಯಲ್ಲಿಯೂ ಅಂತಿಮ ವಿಧಿಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಸಲಹೆ ನೀಡಲಾಗಿದೆ.

ಒಟ್ಟಿನಲ್ಲಿ, ಗ್ರಹಣದ ಸಮಯದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಗ್ರಹಣ ಮುಗಿದ ಬಳಿಕ ಶುದ್ಧಿ ಆಚರಣೆಗಳನ್ನು ನೆರವೇರಿಸಿ ಕಾರ್ಯಗಳನ್ನು ಮುಂದುವರಿಸುವುದು ಶಾಸ್ತ್ರೋಕ್ತ ಕ್ರಮವೆಂದು ನಂಬಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು – Kannada News | Contaminated Water Alert: Fluoride, Nitrate Risks in Villages and Solutions

ಚಿಕ್ಕಬಳ್ಳಾಪುರ, ಫೆ.26: ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ಜಿಲ್ಲೆಯ 1,274 ಹಳ್ಳಿಗಳ ಪೈಕಿ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಗುಣಮಟ್ಟ ಪರೀಕ್ಷಾ ವರದಿಯಿಂದ ಬಯಲಾಗಿದೆ. ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ಲೋರೈಡ್ (Fluoride) ಮತ್ತು ನೈಟ್ರೇಟ್ (Nitrate) ಪತ್ತೆಯಾಗಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್ ನೀಡಿರುವ ಮಾಹಿತಿಯಂತೆ, ಅಶುದ್ಧ ನೀರಿನ ಸೇವನೆಯಿಂದ ಹಲ್ಲು ಮತ್ತು ಮೂಳೆಗಳ ಬೆಳವಣಿಗೆ ಕುಂಠಿತ, ಮೂಳೆ ಸವೆತ, ಅತಿಯಾದ ಸುಸ್ತು ಮತ್ತು ಎದೆಯುಸಿರು ಸಮಸ್ಯೆಯಾಗಿದೆ. ಕಿಡ್ನಿ (ಮೂತ್ರಪಿಂಡ) ಮತ್ತು ಲಿವರ್ (ಯಕೃತ್ತು) ಸಮಸ್ಯೆಗಳು ಹಾಗೂ ಬಹು ಅಂಗಾಂಗ ವೈಫಲ್ಯದ ಸಾಧ್ಯತೆ ಎಂದು ಹೇಳಿದ್ದಾರೆ.

ಕೇವಲ ನೀರಲ್ಲದೆ ತರಕಾರಿಗಳ ಮೂಲಕವೂ ಪ್ಲೋರೈಡ್ ಸೇರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಯೂರಿನ್ ಪರೀಕ್ಷೆ ನಡೆಸಲಾಗುತ್ತಿದೆ. ಟಿವಿ9 ಗೆ ಮಾಹಿತಿ ನೀಡಿದ ಜಿ.ಪಂ. ಸಿ.ಇ.ಓ ಡಾ. ನವೀನ್ ವೈ ಭಟ್, ಅಶುದ್ಧ ನೀರನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ. ಒಟ್ಟು 1,274 ಹಳ್ಳಿಗಳ ಪೈಕಿ 1,175 ಗ್ರಾಮಗಳಲ್ಲಿ (ಶೇ. 92ರಷ್ಟು) ಘಟಕಗಳನ್ನು ಸ್ಥಾಪಿಸಲಾಗಿದೆ. ಜನರ ಅನುಕೂಲಕ್ಕಾಗಿ ಪ್ರತಿ ಎರಡು ಕಿಲೋಮೀಟರ್‌ಗೆ ಒಂದರಂತೆ ಶುದ್ಧ ನೀರಿನ ಘಟಕ ಅಳವಡಿಸಲಾಗಿದೆ. ಜಿಲ್ಲೆಯ 10 ಗ್ರಾಮಗಳಲ್ಲಿ (ಚಿಕ್ಕಬಳ್ಳಾಪುರ-3, ಗೌರಿಬಿದನೂರು-5, ಶಿಡ್ಲಘಟ್ಟ-2) ನೀರು ಅತ್ಯಂತ ಅಶುದ್ಧವಾಗಿದ್ದು, ಆಯಾ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಬಿಟ್ಟು ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಸಾಧಾರಣ’

ನಿಮ್ಮ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಮಾತ್ರ ಕುಡಿಯಲು ಬಳಸಿ. ಸುಸ್ತು ಅಥವಾ ಕೀಲು ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಪ್ಲೊರೈಡ್ ಪ್ರಭಾವ ತಗ್ಗಿಸಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸಿ ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:45 am, Thu, 26 February 26

Source link

Exit mobile version