NEET UG 2026: ನೀಟ್ ಯುಜಿ ಪರೀಕ್ಷಾ ದಿನದ ಡ್ರೆಸ್ ಕೋಡ್ ಮತ್ತು ಪ್ರಮುಖ ಮಾರ್ಗಸೂಚಿ ಪ್ರಕಟ! – Kannada News | NEET UG 2026 Exam Guidelines: NTA Dress Code and Security Rules Explained

ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ (NEET UG) 2026 ರ ಪರೀಕ್ಷಾ ದಿನಾಂಕ ಹತ್ತಿರವಾಗುತ್ತಿದೆ. ಈ ಪ್ರಮುಖ ಪರೀಕ್ಷೆಯು ಮೇ 3 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ರವರೆಗೆ ಒಂದೇ ಪಾಳಿಯಲ್ಲಿ ದೇಶಾದ್ಯಂತ ನಡೆಯಲಿದೆ. ಒಟ್ಟು 180 ನಿಮಿಷಗಳ ಕಾಲ ನಡೆಯುವ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಂದ ಒಟ್ಟು 180 ಪ್ರಶ್ನೆಗಳನ್ನು ಎದುರಿಸಲಿದ್ದಾರೆ. ಒಟ್ಟು 720 ಅಂಕಗಳನ್ನು ಒಳಗೊಂಡಿರುವ ಈ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಲ್ಲಿ ಯಾವುದೇ ಗೊಂದಲವಿರಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಡ್ರೆಸ್ ಕೋಡ್ ಮತ್ತು ಉಡುಪುಗಳ ನಿಯಮ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಧರಿಸಬೇಕಾದ ಉಡುಪುಗಳ ಬಗ್ಗೆ ಎನ್‌ಟಿಎ ಸ್ಪಷ್ಟವಾದ ವಿವರಗಳನ್ನು ನೀಡಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಗುರವಾದ ಬಟ್ಟೆಗಳನ್ನು ಧರಿಸಿ ಬರಲು ಸೂಚಿಸಲಾಗಿದೆ. ಒಂದು ವೇಳೆ ಪೂರ್ಣ ತೋಳಿನ ಶರ್ಟ್ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸುವುದು ಅನಿವಾರ್ಯವಾಗಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಪಾಸಣೆಗಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವರದಿ ಮಾಡಬೇಕಾಗುತ್ತದೆ. ಧಾರ್ಮಿಕ ಕಾರಣಗಳಿಗಾಗಿ ವಿಶೇಷ ಉಡುಪು ಅಥವಾ ಸಾಮಗ್ರಿಗಳನ್ನು ಧರಿಸುವ ಅಭ್ಯರ್ಥಿಗಳಿಗೂ ಅವಕಾಶವಿದ್ದು, ಇವರೂ ಕೂಡ ಕಟ್ಟುನಿಟ್ಟಾದ ಭದ್ರತಾ ತಪಾಸಣೆಗೆ ಒಳಪಡಬೇಕಿರುವುದರಿಂದ ಮುಂಚಿತವಾಗಿಯೇ ಕೇಂದ್ರಕ್ಕೆ ತಲುಪುವುದು ಕಡ್ಡಾಯವಾಗಿದೆ.

ಪಾದರಕ್ಷೆಗಳು ಮತ್ತು ಪಾರದರ್ಶಕ ವಸ್ತುಗಳು:

ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ತಪಾಸಣೆಯನ್ನು ಸುಲಭಗೊಳಿಸಲು ಅಭ್ಯರ್ಥಿಗಳು ಚಪ್ಪಲಿ ಅಥವಾ ಕಡಿಮೆ ಎತ್ತರದ ಹಿಮ್ಮಡಿಯ ಸ್ಯಾಂಡಲ್‌ಗಳನ್ನು (Low heel shoes) ಧರಿಸುವುದು ಉತ್ತಮ ಎಂದು ತಿಳಿಸಲಾಗಿದೆ. ಪರೀಕ್ಷಾ ಕೊಠಡಿಯ ಒಳಗೆ ಕೇವಲ ಪಾರದರ್ಶಕವಾದ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ನೀಡಲಾಗಿದೆ. ಈ ನಿಯಮಗಳ ಮೂಲಕ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಎನ್‌ಟಿಎ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಬಯೋಮೆಟ್ರಿಕ್ ಮತ್ತು ಭದ್ರತಾ ಪರಿಶೀಲನೆ:

ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಅಥವಾ ದೈಹಿಕ ಅಸಮರ್ಥತೆಯಿಂದ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಅಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಲಭ್ಯವಿರುವ ನಿಗದಿತ ಫಾರ್ಮ್‌ನಲ್ಲಿ ಲಿಖಿತ ಒಪ್ಪಂದವನ್ನು ಸಲ್ಲಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ. ಪರೀಕ್ಷಾ ಪ್ರಕ್ರಿಯೆಯು ಸುಗಮವಾಗಿ ನಡೆಯಲು ಅಭ್ಯರ್ಥಿಗಳು ಪರೀಕ್ಷಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಎನ್‌ಟಿಎ ವಿನಂತಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:09 pm, Sat, 2 May 26

Source link

2 ವರ್ಷದಿಂದ 15 ವರ್ಷದವರೆಗೆ ಕಂಡುಬರುವ ಈ ಟುರೆಟ್ ಸಿಂಡ್ರೋಮ್ ಬಗ್ಗೆ ಪೋಷಕರಿಗೆ ತಿಳಿದಿರಲೇಬೇಕು: ಡಾ. ಪ್ರಪುಲ್ಲ – Kannada News | Tourette Syndrome Symptoms in Children: Dr. Prapulla’s Guidance for Parents

ಇತ್ತೀಚಿನ ದಿನಗಳಲ್ಲಿ ಈ ಟುರೆಟ್ ಸಿಂಡ್ರೋಮ್ (Tourette Syndrome) ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ವಿವಿಧ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಪೋಷಕರು ಈ ಸಿಂಡ್ರೋಮ್ ಬಗ್ಗೆ ತಿಳಿಯುವುದು ಅತಿಮುಖ್ಯವಾಗಿದೆ. ಏಕೆಂದರೆ ಇದೊಂದು ನರಮಂಡಲಕ್ಕೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಇದು ಹದಿಹರೆಯದವರಲ್ಲಿ ಕಂಡುಬರುತ್ತದೆ (ಸಾಮಾನ್ಯವಾಗಿ 2 ವರ್ಷದಿಂದ 15 ವರ್ಷದವರೆಗೆ). ಇದನ್ನು ತಡೆಗಟ್ಟಲು ಮತ್ತು ಇದರ ಲಕ್ಷಣಗಳ ಬಗ್ಗೆ ಅರಿತಿದ್ದರೆ ಮಕ್ಕಳು ಇಂತಹ ಸಿಂಡ್ರೋಮ್ ನಿಂದ ಬಳಲುವುದನ್ನು ತಡೆಯಬಹುದು. ಹಾಗಾದರೆ ಟುರೆಟ್ ಸಿಂಡ್ರೋಮ್ ಗುರುತಿಸುವುದು ಹೇಗೆ, ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಹಾಸನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪ್ರಪುಲ್ಲ ಕೆ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಟುರೆಟ್ ಸಿಂಡ್ರೋಮ್ ಎಂದರೇನು?

ಈ ಖಾಯಿಲೆಯಲ್ಲಿ ವ್ಯಕ್ತಿಯು ತನ್ನ ನಿಯಂತ್ರಣವಿಲ್ಲದೆ ದೈಹಿಕ ಚಲನೆಗಳನ್ನು ಅಥವಾ ಶಬ್ದಗಳನ್ನು ಅರಿವಿಲ್ಲದೆಯೇ ಪುನರಾವರ್ತಿಸುತ್ತಾರೆ. ಈ ಸ್ಥಿತಿಯನ್ನು ‘ಟಿಕ್ಸ್’ ಎಂದು ಗುರುತಿಸಲಾಗುತ್ತದೆ. ಇದು ಮೆದುಳಿನ ನರಕೋಶಗಳ ಸಂವಹನದಲ್ಲಿನ ವ್ಯತ್ಯಾಸದಿಂದ ಉಂಟಾಗುತ್ತದೆ.
ಟಿಕ್ಸ್‌ನಲ್ಲಿ ಎರಡು ವಿಧಗಳಿವೆ:
ಮೋಟಾರ್ ಟಿಕ್ಸ್: ಕಣ್ಣು ಮಿಟುಕಿಸುವುದು, ಅಲುಗಾಡುವ ತಲೆ ಚಲನೆಗಳು, ಭುಜ ಕುಗ್ಗಿಸುವಿಕೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುವುದು ಮುಂತಾದ ದೈಹಿಕ ಚಲನೆಗಳು.
ವೋಕಲ್ ಟಿಕ್ಸ್: ಗಂಟಲು ಸ್ವಚ್ಛಗೊಳಿಸುವ ಶಬ್ದ, ಬಿಕ್ಕಳಿಕೆ, ನಿರಂತರವಾಗಿ ಇತರರ (ಎಕೋಲಾಲಿಯಾ) ಅಥವಾ ಸ್ವತಃ (ಪಾಲಿಲಾಲಿಯಾ) ಒಂದೇ ರೀತಿಯ ಪದಗಳನ್ನು ಪುನರಾವರ್ತಿಸುವುದು ಅಥವಾ ಪದಗಳನ್ನು ಕೂಗುವುದು.

ಟುರೆಟ್ ಸಿಂಡ್ರೋಮ್ ಬಗ್ಗೆ ಇರುವ ತಪ್ಪು ಕಲ್ಪನೆ:

ಸಾಮಾನ್ಯವಾಗಿ ಟುರೆಟ್ ಖಾಯಿಲೆ ಇರುವವರೆಲ್ಲರು ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದು ತಪ್ಪು ಕಲ್ಪನೆ. ಸಹಜವಾಗಿ 10 -15 % ಜನರಲ್ಲಿ ಮಾತ್ರ ಅಸಭ್ಯ ವರ್ತನೆ ಕಂಡುಬರುತ್ತದೆ. ಇದು ಒಂದು ಬುದ್ದಿಮಾಂಧ್ಯ ಖಾಯಿಲೆ ಅಲ್ಲ. ಇಂತಹ ವ್ಯಕ್ತಿಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ. ಟಿಕ್ಸ್ ಮಾಡುವುದು ಸಹಜವಾಗಿ ವ್ಯಕ್ತಿಯ ನಿಯಂತ್ರಣದಲ್ಲಿ ಇರುವುದಿಲ್ಲ. ಇದನ್ನು ಸೀನುವಿಕೆ ಅಥವಾ ಕಣ್ಣು ರೆಪ್ಪೆ ಮಿಟುಕಿಸುವ ಸಹಜ ಕ್ರಿಯೆಗೆ ಹೋಲಿಸಬಹುದು.

ಇದನ್ನೂ ಓದಿ: ಕೋವಿಡ್​ಗಿಂತ ಅಪಾಯಕಾರಿಯೇ ಈ ಗುಯಿಲಿನ್‌ ಬಾರ್‌ ಸಿಂಡ್ರೋಮ್‌? ಲಕ್ಷಣಗಳು ಹೇಗಿರುತ್ತೆ, ತಡೆಗಟ್ಟುವುದು ಹೇಗೆ?

ಈ ಸಲಹೆಯನ್ನು ತಪ್ಪದೆ ಪಾಲಿಸಬೇಕು:

ಸಾಮಾನ್ಯವಾಗಿ ಈ ಸಮಸ್ಯೆ ಹೊಂದಿರುವವರನ್ನು ನೋಡಿದರೂ ಗಮನಿಸದಂತೆ ವರ್ತಿಸಬೇಕು. ಅದನ್ನು ಪದೇ ಪದೇ ತೋರಿಸಿ ಹೀಯಾಳಿಸಬಾರದು. ಅವರೊಂದಿಗೆ ನಾವು ಸಹಜವಾಗಿ ವ್ಯವಹರಿಸಿದರೆ ಅವರಿಗೆ ಮುಜುಗರ ಮತ್ತು ಒತ್ತಡ ಕಡಿಮೆಯಾಗುತ್ತದೆ. ಈ ಕಾಯಿಲೆ ಇಂದ ಬಳಲುತ್ತಿರುವರರ ಜೊತೆ ತಾಳ್ಮೆಯಿಂದ ವರ್ತಿಸಬೇಕು. ಅವರಿಗೆ ಮಾತು ಪೂರ್ಣಗೊಳಿಸಲು ಅಥವಾ ಕೆಲಸ ಪೂರ್ಣಗೊಳಿಸಲು ಸಮಯ ನೀಡಬೇಕು. ಅವರು ಓದುವ ಶಾಲೆ ಅಥವಾ ಕೆಲಸದ ಸ್ಥಳದಲ್ಲಿ ಈ ಸಮಸ್ಯೆಯ ಬಗ್ಗೆ ತಿಳಿಸಿ, ಅಲ್ಲಿ ಅವಮಾನ ಅಥವಾ ಕಿರುಕುಳ ಆಗದಂತೆ ನೋಡಿಕೊಳ್ಳಬೇಕು.

ಆಯುರ್ವೇದ ಮತ್ತು ಜೀವನಶೈಲಿ:

ಟೂರೆಟ್ ಸಿಂಡ್ರೋಮ್ ನಿರ್ವಹಣೆಯಲ್ಲಿ ಆಯುರ್ವೇದದ ಪಂಚಕರ್ಮ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾಗಿದೆ. ಶಿರೋಧಾರಾ ಚಿಕಿತ್ಸೆ ಅಂದರೆ ಹಣೆಯ ಮೇಲೆ ನಿರಂತರವಾಗಿ ಔಷಧೀಯುಕ್ತ ತೈಲವನ್ನು ಸುರಿಯುವ ಮೂಲಕ ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ನರಗಳ ಒತ್ತಡವನ್ನು ಕಡಿಮೆ ಮಾಡಿ ‘ಟಿಕ್ಸ್’ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ನಸ್ಯ ಚಿಕಿತ್ಸೆ ಅಂದರೆ ಮೂಗಿನ ಹೊಳ್ಳೆಗಳಿಗೆ ಔಷಧೀಯ ತುಪ್ಪ ಅಥವಾ ತೈಲವನ್ನು ಹಾಕುವುದರಿಂದ ಶಿರೋಭಾಗದ ನರಮಂಡಲವನ್ನು ಬಲಗೊಳಿಸುತ್ತದೆ. ಬಲಾದಿ ಅಥವಾ ಕ್ಷೀರಬಲ ತೈಲದಿಂದ ಮಾಡುವ ಅಭ್ಯಂಗವು, ದೇಹದಲ್ಲಿನ ವಾತ ದೋಷವನ್ನು ಶಮನಗೊಳಿಸಿ ನರಮಂಡಲಕ್ಕೆ ಪುನಶ್ಚೇತನ ನೀಡುತ್ತದೆ. ಬ್ರಾಹ್ಮಿ, ಶಂಖಪುಷ್ಪಿ ಅಥವಾ ಅಶ್ವಗಂಧದಂತಹ ಮೂಲಿಕೆಗಳು ಮತ್ತು ಭ್ರಾಮರಿ ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಸಮಯೋಚಿತ ಬೆಂಬಲ, ಅರಿವು ಮತ್ತು ಸೂಕ್ತ ಚಿಕಿತ್ಸೆ, ಟೂರೆಟ್ ಲಕ್ಷಣಗಳನ್ನು ಕಡಿಮೆಮಾಡಲು ಹಾಗೂ ವ್ಯಕ್ತಿಯು ಸಾಮಾನ್ಯ ಜೀವನಶೈಲಿ ನಡೆಸಲು ಅತ್ಯಂತ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಗೃಹಿಣಿ ಅನುಮಾನಾಸ್ಪದ ಸಾವು, ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ – Kannada News | Bengaluru Crime: Housewife Vandana Found Dead in Hulimavu; Family Alleges Dowry Harassment Murder by Husband’s Family

ಬೆಂಗಳೂರು, ಮೇ 2: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೃಹಿಣಿ ವಂದನಾ ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆಕೆ ವರದಕ್ಷಿಣ ಕಿರುಕುಳದಿಂದ ಮೃತಪಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಮಗಳಿಗೆ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ವಂದನಾ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ವಂದನಾ ವಿಕ್ರಂಶೇಷ್ ಎಂಬವರನ್ನು ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ಪತಿಯ ಮನೆಯವರಿಂದ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದರು ಎಂದು ವಂದನಾ ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ರಾಜ ಸಂಧಾನ ಕೂಡ ನಡೆಸಿದ್ದರು. ಆದರೆ, ಕಿರುಕುಳ ನಿಂತಿರಲಿಲ್ಲ. ಗುರುವಾರ ಸಂಜೆ ವಂದನಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗಳು ಧೈರ್ಯವಂತೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಇದು ಕೊಲೆಯೇ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಅಲ್ಲದೆ, ವಂದನಾ ಪತಿಯ ಕುಟುಂಬದವರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕ್​, ಚಿನ್ನಾಭರಣ ಕೊಟ್ಟಿದ್ದಲ್ಲದೆ 4 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದೆವು. ಅದ್ಧೂರಿಯಾಗಿ ಮದುವೆ ಮಾಡಿದ್ದರೂ ಮತ್ತೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ ಎಂದು ವಂದನಾ ಕುಟುಂಬದವರು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಾರಾ ಗೋವಿಂದ್ ಧಮ್ಕಿ ಹಾಕಿದ್ರು’; ಕಾನೂನು ಹೋರಾಟಕ್ಕೆ ಮುಂದಾದ ಚೇತನ್

‘ರಾಜ್​​​ಕುಮಾರ್ ಪುಣ್ಯಭೂಮಿ ವಿಷಯಕ್ಕೆ ಚೇತನ್ ಅಹಿಂಸ ಅವರು ಕೊಂಕು ತೆಗೆದಿದ್ದರು. ಈಗಾಗಲೇ ಅವರು ವಿವಾದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ. ಈ ವಿಷಯವಾಗಿ ಈಗ ಹೊಸ ಬೆಳವಣಿಗೆ ನಡೆದಿದೆ. ಸಾರಾ ಗೋವಿಂದು ಈಗ ಅವರು ಧಮ್ಕಿ ಹಾಕಿರುವ ಆರೋಪವನ್ನು ಚೇತನ್ ಮಾಡಿದ್ದಾರೆ. ಸಾರಾ ಗೋವಿಂದು ಹಾಗೂ ಕನ್ನಡಪರ ಹೋರಾಟಗಾರರು ನನ್ನ ಮನೆಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಮಾತಾಡಿದ್ರು. ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ದರು’ ಎಂದು ಚೆತನ್ ಆರೋಪಿಸಿದ್ದಾರೆ. ಹೀಗಾಗಿ ಅವರು ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Source link

IPL 2026: ಜೇಮಿಸನ್​ಗೆ ‘ಶಿಕ್ಷಾರ್ಹ ಅಂಕ’: ಏನಿದು ‘ಡಿಮೆರಿಟ್ ಪಾಯಿಂಟ್’? – Kannada News | IPL 2026: Kyle Jamieson handed demerit point

IPL 2026: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯಲ್ಲಿ, ಡೆಲ್ಲಿ ತಂಡದ ವೇಗಿ ಕೈಲ್ ಜೇಮಿಸನ್ ತೋರಿದ ಅತಿಯಾದ ಆಕ್ರಮಣಕಾರಿ ವರ್ತನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಔಟ್ ಮಾಡಿದ ನಂತರ ಜೇಮಿಸನ್ ತೋರಿದ ಈ ಅತೀರೇಕದ ವರ್ತನೆಗೆ ಇದೀಗ ಐಪಿಎಲ್ ಆಡಳಿತ ಮಂಡಳಿಯು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.

ನಡೆದಿದ್ದೇನು?

ಪಂದ್ಯದ ಎರಡನೇ ಓವರ್‌ನಲ್ಲಿ ಜೇಮಿಸನ್ ಎಸೆದ ಅತ್ಯುತ್ತಮ ಯಾರ್ಕರ್ ಎಸೆತಕ್ಕೆ ಸೂರ್ಯವಂಶಿ ಕ್ಲೀನ್ ಬೌಲ್ಡ್ ಆಗಿದ್ದರು. ವಿಕೆಟ್ ಪಡೆದ ಸಂಭ್ರಮದಲ್ಲಿ ಜೇಮಿಸನ್ ಸೂರ್ಯವಂಶಿ ಅವರ ಹತ್ತಿರ ಹೋಗಿ ಆಕ್ರಮಣಕಾರಿಯಾಗಿ ಚಪ್ಪಾಳೆ ತಟ್ಟುತ್ತಾ, ಏನೋ ಹೇಳುತ್ತಾ ಪೆವಿಲಿಯನ್ ಕಡೆಗೆ ಹೋಗುವಂತೆ ಸನ್ನೆ ಮಾಡಿದರು. ಒಬ್ಬ ಅನುಭವಿ ಆಟಗಾರ 15 ವರ್ಷದ ಬಾಲಕನ ವಿರುದ್ಧ ತೋರಿದ ಈ ವರ್ತನೆ ಅಸಮಾಧಾನಕ್ಕೆ ಕಾರಣವಾಯಿತು.

ಐಪಿಎಲ್ ಕ್ರಮ:

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ಕೈಲ್​ ಜೇಮಿಸನ್ ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರಿಗೆ ಈ ಕೆಳಗಿನಂತಿನ ಶಿಕ್ಷಾರ್ಹ ಅಂಕಗಳನ್ನು ನಿಡಿದೆ.

  • ಶಿಕ್ಷೆ: ಒಂದು ಡಿಮೆರಿಟ್ ಪಾಯಿಂಟ್ ಮತ್ತು ಅಧಿಕೃತ ಎಚ್ಚರಿಕೆ.
  • ಒಪ್ಪಿಗೆ: ಪಂದ್ಯದ ರೆಫರಿ ರಾಜೀವ್ ಸೇಠ್ ಅವರ ಮುಂದೆ ಜೇಮಿಸನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಏನಿದು ಡಿಮೆರಿಟ್ ಪಾಯಿಂಟ್?

ಕ್ರಿಕೆಟ್‌ನಲ್ಲಿ ಡೆಮೆರಿಟ್ ಪಾಯಿಂಟ್ (Demerit Points) ಎನ್ನುವುದು ಆಟಗಾರರು ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದಾಗ ನೀಡುವ ಒಂದು ರೀತಿಯ ‘ಶಿಕ್ಷಾರ್ಹ ಅಂಕ’ಗಳು.  ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರ ಈ ಕೆಳಗಿನಂತಿದೆ…

ಅಂಕಗಳನ್ನು ಯಾವಾಗ ನೀಡಲಾಗುತ್ತದೆ?

ಒಬ್ಬ ಆಟಗಾರ ಐಸಿಸಿ (ICC) ಅಥವಾ ಐಪಿಎಲ್‌ನ ನೀತಿ ಸಂಹಿತೆಯನ್ನು (Code of Conduct) ಮೀರಿದಾಗ ಶಿಕ್ಷೆ ನೀಡಲಾಗುತ್ತದೆ. ಉದಾಹರಣೆಗೆ:

  • ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸುವುದು.
  • ಎದುರಾಳಿ ಆಟಗಾರರ ಮೇಲೆ ಕೆಟ್ಟ ಪದ ಬಳಕೆ ಅಥವಾ ಆಕ್ರಮಣಕಾರಿ ವರ್ತನೆ (ಜೇಮಿಸನ್ ಮಾಡಿದಂತೆ).
  • ಮೈದಾನದ ವಸ್ತುಗಳಿಗೆ (ವಿಕೆಟ್ ಇತ್ಯಾದಿ) ಹಾನಿ ಮಾಡುವುದು.

ಅಂಕಗಳ ಹಂಚಿಕೆ ಹೇಗೆ?

ಇಲ್ಲಿ ಆಟಗಾರನ ವರ್ತನೆಗೆ ಅಥವಾ ತಪ್ಪಿನ ತೀವ್ರತೆಗೆ ಅನುಗುಣವಾಗಿ ಅಂಕಗಳನ್ನು ನೀಡಲಾಗುತ್ತದೆ. ಇದನ್ನು ಮ್ಯಾಚ್ ರೆಫರಿ ನಿರ್ಧರಿಸುತ್ತಾರೆ. ಅದರಂತೆ ಈ ಕೆಳಗಿನ ಲೆವೆಲ್​ ಹಂತದ ಅನ್ವಯ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ.

  • ಲೆವೆಲ್ 1 ತಪ್ಪು: 1 ಅಥವಾ 2 ಡಿಮೆರಿಟ್ ಪಾಯಿಂಟ್.
  • ಲೆವೆಲ್ 2 ತಪ್ಪು: 3 ಅಥವಾ 4 ಡಿಮೆರಿಟ್ ಪಾಯಿಂಟ್.
  • ಲೆವೆಲ್ 3 ಮತ್ತು 4 ತಪ್ಪು: ಇವು ಗಂಭೀರ ಸ್ವರೂಪದ ತಪ್ಪುಗಳಾಗಿದ್ದು, ನೇರವಾಗಿ ಅಮಾನತು ಮಾಡಲಾಗುತ್ತದೆ.

ನಿಷೇಧ ಯಾವಾಗ?

ಯಾವಾಗ ಈ ಡಿಮೆರಿಟ್ ಪಾಯಿಂಟ್‌ಗಳು ಹೆಚ್ಚಾಗುತ್ತವೆಯೋ, ಆಗ ಆಟಗಾರನನ್ನು ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಉದಾಹರಣೆಗೆ…

  • ಒಬ್ಬ ಆಟಗಾರನ ಖಾತೆಯಲ್ಲಿ 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಪಾಯಿಂಟ್ ಸೇರಿದರೆ, ಅದನ್ನು 2 ಸಸ್ಪೆನ್ಷನ್ ಪಾಯಿಂಟ್ ಎಂದು ಪರಿಗಣಿಸಲಾಗುತ್ತದೆ.
  •  2 ಸಸ್ಪೆನ್ಷನ್ ಪಾಯಿಂಟ್ ಅಂದರೆ: ಆಟಗಾರನು ಒಂದು ಟೆಸ್ಟ್ ಪಂದ್ಯ ಅಥವಾ ಎರಡು ಏಕದಿನ/ಟಿ20 ಪಂದ್ಯಗಳಿಂದ (ಯಾವುದು ಮೊದಲು ಬರುತ್ತದೋ ಅದರಿಂದ) ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ: ರಣರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್

ಡಿಮೆರಿಟ್ ಪಾಯಿಂಟ್ ಅವಧಿ ಎಷ್ಟು?

ಡಿಮೆರಿಟ್ ಪಾಯಿಂಟ್ಸ್​ ಆಟಗಾರನ ಹೆಸರಿನಲ್ಲಿ ಶಾಶ್ವತವಾಗಿ ಇರುವುದಿಲ್ಲ. ಒಂದು ಪಾಯಿಂಟ್ ಪಡೆದ ನಂತರ 24 ತಿಂಗಳವರೆಗೆ (2 ವರ್ಷ) ಅದು ಆತನ ದಾಖಲೆಯಲ್ಲಿ ಇರುತ್ತದೆ. ಆ ಅವಧಿ ಮುಗಿದ ನಂತರ ಆ ಪಾಯಿಂಟ್ ರದ್ದಾಗುತ್ತದೆ.

ಸರಳವಾಗಿ ಹೇಳಬೇಕೆಂದರೆ, ಕೈಲ್ ಜೇಮಿಸನ್‌ಗೆ ಈಗ 1 ಡಿಮೆರಿಟ್ ಪಾಯಿಂಟ್ ಸಿಕ್ಕಿದೆ. ಮುಂದಿನ 24 ತಿಂಗಳೊಳಗೆ ಅವರು ಮತ್ತೆ ಇಂತಹ ತಪ್ಪು ಮಾಡಿ ಒಟ್ಟು 4 ಪಾಯಿಂಟ್ ಪಡೆದರೆ, ಅವರು ಒಂದು ಅಥವಾ ಎರಡು ಪಂದ್ಯಗಳಿಂದ ನಿಷೇಧಕ್ಕೊಳಗಾಗುತ್ತಾರೆ. ಹೀಗಾಗಿ ಡಿಮೆರಿಟರ್ ಪಾಯಿಂಟ್ಸ್ ಪಡೆದ ಆಟಗಾರರು 2 ವರ್ಷಗಳ ಅವಧಿಯಲ್ಲಿ ಇಂತಹ ಯಾವುದೇ ತಪ್ಪುಗಳನ್ನು ಮಾಡಲು ಮುಂದಾಗುವುದಿಲ್ಲ.

Source link

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಫೈಟ್: ಬೃಹತ್ ಪಾಲಿಕೆಗೆ ಬಿಜೆಪಿ ಪಟ್ಟು, ವಿಭಜನೆಯೇ ಲೇಸು ಎಂದ ಕಾಂಗ್ರೆಸ್ – Kannada News | Hubballi Dharwad Corporation Split vs Greater HDMC: BJP and Congress Clash Over 16th Finance Commission Grants

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆImage Credit source: tv9

ಹುಬ್ಬಳ್ಳಿ, ಮೇ 2: ಉತ್ತರ ಕರ್ನಾಟಕದ ಪ್ರಮುಖ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ (Hubli-Dharawad) ಮಹಾನಗರ ಪಾಲಿಕೆಯ ಭವಿಷ್ಯದ ಕುರಿತು ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಒಂದು ಕಾಲದಲ್ಲಿ ಪಾಲಿಕೆ ವಿಭಜನೆಗೆ ಪಟ್ಟು ಹಿಡಿದಿದ್ದ ಬಿಜೆಪಿಯು ಈಗ ಹೆಚ್ಚಿನ ಅನುದಾನದ ಆಸೆಗೆ ‘ಬೃಹತ್ ಮಹಾನಗರ ಪಾಲಿಕೆ’ (Greater Hubballi-Dharwad Municipal Corporation) ರಚನೆಗೆ ಒತ್ತಾಯಿಸುತ್ತಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಮಾತ್ರ ವಿಭಜನೆಯ ನಿರ್ಧಾರಕ್ಕೇ ಅಂಟಿಕೊಂಡಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಫೈಟ್: ಹಿನ್ನೆಲೆ ಏನು?

1962ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರಸಭೆಗಳನ್ನು ವಿಲೀನಗೊಳಿಸಿ ಮಹಾನಗರ ಪಾಲಿಕೆಯನ್ನು ರಚಿಸಲಾಗಿತ್ತು. ಪ್ರಸ್ತುತ ಇದು 202.3 ಚದರ ಕಿ.ಮೀ ವ್ಯಾಪ್ತಿ ಹಾಗೂ 82 ವಾರ್ಡ್‌ಗಳನ್ನು ಹೊಂದಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಧಾರವಾಡಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಪ್ರತ್ಯೇಕ ಧಾರವಾಡ ಪಾಲಿಕೆಗೆ ಆಗ್ರಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ 2025ರ ಜನವರಿಯಲ್ಲಿ ವಿಭಜನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು.

ಬಿಜೆಪಿ ನಿಲುವು ಬದಲಾಗಿದ್ದೇಕೆ?

ಕೇಂದ್ರದ 16ನೇ ಹಣಕಾಸು ಆಯೋಗವು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಾಲಿಕೆಗಳಿಗೆ ವಾರ್ಷಿಕ 500ರಿಂದ 1,000 ಕೋಟಿ ರೂ. ಹೆಚ್ಚಿನ ಅನುದಾನ ನೀಡಲು ಶಿಫಾರಸು ಮಾಡಿದೆ. ಒಂದು ವೇಳೆ ಪಾಲಿಕೆ ವಿಭಜನೆಯಾದರೆ ಎರಡೂ ನಗರಗಳ ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆಯಾಗಲಿದ್ದು, ಈ ಬೃಹತ್ ಅನುದಾನ ಕೈತಪ್ಪಲಿದೆ ಎಂಬುದು ಬಿಜೆಪಿಯ ಆತಂಕ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ವಿಭಜನೆ ಕೈಬಿಟ್ಟು ‘ಬೃಹತ್ ಪಾಲಿಕೆ’ ರಚಿಸಲು ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಕಾಂಗ್ರೆಸ್ ಆಕ್ಷೇಪ

ಬಿಜೆಪಿಯ ಈ ನಡೆಯನ್ನು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೀವ್ರವಾಗಿ ವಿರೋಧಿಸಿದ್ದಾರೆ. ‘ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಕೇಂದ್ರದ ಮಾನದಂಡಗಳಿಗೆ ನಮ್ಮ ಪಾಲಿಕೆ ಒಳಪಡುವುದು ಅನುಮಾನ. ಹೀಗಾಗಿ ವಿಭಜನೆಯೇ ಸೂಕ್ತ’ ಎಂಬುದು ಅವರ ವಾದ. ಈ ಗೊಂದಲಗಳ ನಡುವೆ ರಾಜ್ಯ ಸರ್ಕಾರ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: RCB ತಂಡದ ಮುಂದಿನ ಪಂದ್ಯಗಳ ಮಾಹಿತಿ ಇಲ್ಲಿದೆ – Kannada News | Ipl 2026 rcb next match vs lsg

ಐಪಿಎಲ್ 2026ರ ಆವೃತ್ತಿಯು ರೋಚಕ ಹಂತಕ್ಕೆ ತಲುಪಿದೆ. ಹಾಲಿ ಚಾಂಪಿಯನ್ಸ್ ಪಟ್ಟದೊಂದಿಗೆ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಈ ಸೀಸನ್‌ನಲ್ಲಿ ಏರಿಳಿತದ ಹಾದಿ ಸವಿಯುತ್ತಿದೆ. ಏಪ್ರಿಲ್ 30ರಂದು ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅನುಭವಿಸಿದ ಸೋಲು ತಂಡಕ್ಕೆ ಸ್ವಲ್ಪ ಹಿನ್ನಡೆ ತಂದಿದ್ದರೂ, ಪ್ಲೇ-ಆಫ್​ಗೇರಲು ಮುಂದಿನ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ.

ಅದರಲ್ಲೂ ಮುಂದಿನ ಮ್ಯಾಚ್​ನಲ್ಲಿ ಆರ್​ಸಿಬಿ ತಂಡದ ಜಯ ಸಾಧಿಸಿದರೆ ಪ್ಲೇಆಫ್​ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಲಿದೆ. ಏಕೆಂದರೆ ಮುಂದಿನ ಪಂದ್ಯದ ಬಳಿಕ ಆರ್​ಸಿಬಿ 4 ಮ್ಯಾಚ್​ಗಳನ್ನಾಡಲಿದ್ದು, ಅದರಲ್ಲಿ ಒಂದು ಪಂದ್ಯ ಗೆದ್ದರೂ 16 ಅಂಕಗಳನ್ನು ಪಡೆಯಬಹುದು.

ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್. ಮೇ 7 ರಂದು ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಒಟ್ಟು 14 ಅಂಕಗಳನ್ನು ಪಡೆಯಲಿದೆ. ಇದಾದ ಬಳಿಕ ಪ್ಲೇಆಫ್ ಆಡುವುದು ಖಚಿತವಾಗಲು ಕೇವಲ ಒಂದು ಜಯ ಸಿಕ್ಕರೆ ಸಾಕು. ಅದರಂತೆ ಆರ್​ಸಿಬಿ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…​

  •  ಲಕ್ನೋ ಸೂಪರ್ ಜೈಂಟ್ಸ್ (LSG): ಮೇ 7, ರಾತ್ರಿ 7:30ಕ್ಕೆ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಲಕ್ನೋದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ದೊಡ್ಡ ಸವಾಲು ಎದುರಾಗಲಿದೆ.
  •  ಮುಂಬೈ ಇಂಡಿಯನ್ಸ್ (MI): ಮೇ 10ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆರ್​ಸಿಬಿ ತಂಡ ಮುಂಬೈ ಇಂಡಿಯನ್ಸ್​ ಸವಾಲನ್ನು ಎದುರಿಸಲಿದೆ.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR): ಮೇ 13ರಂದು ಮತ್ತೆ ರಾಯ್‌ಪುರದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಸೆಣಸಲಿದೆ.
  •  ಪಂಜಾಬ್ ಕಿಂಗ್ಸ್ (PBKS): ಮೇ 17ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH): ಮೇ 22ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಸ್​ಆರ್​​ಹೆಚ್ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ನಾನು ಅಷ್ಟೊಂದು ಹೆದರಿದ್ದೆ… ಕೈಲ್ ಜೇಮಿಸನ್ ಬಹಿರಂಗ ಹೇಳಿಕೆ

ಸದ್ಯ ಗುಜರಾತ್ ಟೈಟಾನ್ಸ್​ ವಿರುದ್ಧದ ಸೋಲಿನ ಬಳಿಕ ಲಕ್ನೋನತ್ತ ಮುಖ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ 5 ಪಂದ್ಯಗಳಲ್ಲಿ 2 ಗೆಲುವು ದಾಖಲಿಸುವ ಮೂಲಕ ಪ್ಲೇಆಫ್​ಗೇರುವ ವಿಶ್ವಾಸದಲ್ಲಿದೆ. ಅದರಲ್ಲೂ ಮುಂದಿನ ಐದು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬಹುದು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

Source link

ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ ‘ಬಿಳಿ ಜಿಂಕೆ’! – Kannada News | Rare White Deer Spotted During Safari in Ajjipura, Chamarajanagar; Video Goes Viral

ಚಾಮರಾಜನಗರ, ಮೇ 02: ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅತಿ ಅಪರೂಪದ ಬಿಳಿ ಜಿಂಕೆ ದರ್ಶನ ನೀಡಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಈ ಮನಮೋಹಕ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಕಳೆದ ವಾರವಷ್ಟೇ ಇದೇ ಸಫಾರಿ ಪಾಯಿಂಟ್‌ನಲ್ಲಿ ಕಪ್ಪು ಚಿರತೆ (Black Panther) ಕಾಣಿಸಿಕೊಂಡು ಕುತೂಹಲ ಮೂಡಿಸಿತ್ತು. ಇದೀಗ 30 ಸಾವಿರದಲ್ಲೊಂದರಂತೆ ಕಾಣ ಸಿಗುವ ಹಾಲು ಬಿಳುಪಿನ ಜಿಂಕೆಯನ್ನು ಕಂಡು ಪ್ರವಾಸಿಗರು ರೋಮಾಂಚನಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು – Kannada News | Samay Raina, Ranveer Allahbadia on Netflix Kapil Show After Controversy

‘ಇಂಡಿಯಾಸ್ ಗಾಟ್ ಲೇಟೆಂಟ್’ ವಿವಾದದ ಒಂದು ವರ್ಷದ ನಂತರ, ಖ್ಯಾತ ಕಾಮಿಡಿಯನ್ ಸಮಯ್ ರೈನಾ ಮತ್ತು ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಈಗ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಒಟ್ಟಿಗೆ ವೇದಿಕೆ ಏರಿದ್ದಾರೆ. ಇಂದು (ಮೇ 2) ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಕಪಿಲ್ ಶರ್ಮಾ ಅವರು ಕಳೆದ ವರ್ಷದ ವಿವಾದದ ಕುರಿತು ರಣವೀರ್ ಅವರನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. ಇದು ಟೀಸರ್​​ನಲ್ಲಿ ಕಾಣಿಸಿದೆ. ಕಾರ್ಯಕ್ರಮದಲ್ಲಿ ರಣವೀರ್ ಅವರು ಸಮಯ್ ಬಗ್ಗೆ ಮಾತನಾಡುತ್ತಾ, ‘ಅವನದ್ದು ತುಂಬಾ ಶುದ್ಧವಾದ ಹೃದಯ, ಅದು ಜನರಿಗೆ ತಿಳಿಯಬೇಕು’ ಎಂದು ಹೊಗಳಿದರು. ತಕ್ಷಣವೇ ಪ್ರತಿಕ್ರಿಯಿಸಿದ ಕಪಿಲ್, ‘ಹೌದು, ಯಾರಾದರೂ ನಿಮ್ಮ ಶೋ ಅನ್ನು ಹಾಳು ಮಾಡಿದರೂ ಅವರು ನಿಮ್ಮನ್ನು ಬದುಕಲು ಬಿಟ್ಟಿದ್ದಾರೆ ಎಂದರೆ ಖಂಡಿತಾ ಅವರ ಹೃದಯ ದೊಡ್ಡದೇ ಇರಬೇಕು’ ಎಂದು ಹೇಳುವ ಮೂಲಕ ಕಳೆದ ವರ್ಷ ರಣವೀರ್ ಅವರ ಜೋಕ್‌ನಿಂದ ಉಂಟಾಗಿದ್ದ ವಿವಾದವನ್ನು ನೆನಪಿಸಿ ನಗೆಗಡಲಲ್ಲಿ ತೇಲಿಸಿದರು. ಇದು ಟೀಸರ್​ ಅಲ್ಲಿ ಕಾಣಿಸಿದೆ.

ಇದೇ ವೇಳೆ ನವಜೋತ್ ಸಿಂಗ್ ಸಿಧು ಅವರು ಸಮಯ್ ಅವರ ಚುರುಕಾದ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡರು. ಆಗ ಸಮಯ್ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ದೇವರು ಒಂದು ಬಾಗಿಲು ಮುಚ್ಚಿದರೆ ಹತ್ತು ಕಿಟಕಿಗಳನ್ನು ತೆರೆಯುತ್ತಾನೆ. ನೀನು ಕಿಟಕಿಗಳನ್ನು ನೋಡುವವನಾಗು’ ಎಂದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಮಯ್, ‘ಸರ್, ಆ ಎಲ್ಲ ಕಿಟಕಿಗಳಿಂದ ಜನ ನಮಗೆ ಕಲ್ಲು ಹೊಡೆಯುತ್ತಾರೆ’ ಎಂದಾಗ ಸಿಧು ನಕ್ಕು ಸುಸ್ತಾದರು. ಸಮಯ್ ಅವರ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಧು, ‘ಲವ್ ಯೂ ಮಗನೇ, ನೀನು ಅದ್ಭುತ!’ ಎಂದು ಅಪ್ಪಿಕೊಂಡರು.

ಇದನ್ನೂ ಓದಿ: ‘ಯಾವ ಸಮಯ್?’; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ

ಸಮಯ್ ರೈನಾ ಮತ್ತು ರಣವೀರ್ ಅಲಹಾಬಾದಿಯ ಅವರ ಈ ವಿಶೇಷ ಸಂಚಿಕೆಯು ಇಂದು ರಾತ್ರಿ 8 ಗಂಟೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅತ್ತೆ ಜೊತೆ ಅಳಿಯನ ಅಕ್ರಮ ಸಂಬಂಧಕ್ಕೆ ಹೋಗಿದ್ದು ಮೂರು ಜೀವ!: ತುಮಕೂರಲ್ಲಿ ದಾರುಣ ಘಟನೆ – Kannada News | Tumakuru Tragedy: Woman’s Illicit Affair with Nephew Leads to Three Deaths

ಕಾವ್ಯಾ, ಮೃತ ಮೂವರು ಮತ್ತು ಹೇಮಂತ್​​Image Credit source: Tv9 Kannada

ತುಮಕೂರು, ಮೇ 02: ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​ ಸಿಕ್ಕಿದೆ. ಚಿನ್ನ, ಹಣ ಸಮೇತ ಪತ್ನಿ ಪರಪುರುಷನ ಜೊತೆ ಓಡಿಹೋಗಿದ್ದಕ್ಕೆ ನೊಂದು ಶಿವಣ್ಣ ಎಂಬಾತ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣಿಗೆ ಶರಣಾಗಿದ್ದ. ಆದರೆ ಶಿವಣ್ಣ ಪತ್ನಿ ಕಾವ್ಯಾ ಓಡಿಹೋಗಿರುವುದು ಈತನ ಅಕ್ಕನ ಮಗ ಹೇಮಂತ್​​ ಎಂಬಾತನ ಜೊತೆಗೆ ಎಂಬ ವಿಷಯವೀಗ ಬಹಿರಂಗಗೊಂಡಿದೆ.

ಅಕ್ಕ ಮೃತಪಟ್ಟಬಳಿಕ ಆಕೆಯ ಮಗ ಹೇಮಂತ್​​ನನ್ನು ತನ್ನ ಮನೆಗೇ ಕರೆತಂದು ಶಿವಣ್ಣ ಸಾಕಿಕೊಂಡಿದ್ದ. ಆದರೆ ಈ ಹೇಮಂತ್​​ ಮಾವನಿಗೇ ಮೋಸ ಮಾಡಿದ್ದು, ಆತನ ಹೆಂಡತಿ ಅಂದರೆ ಅತ್ತೆಯಾದ ಕಾವ್ಯಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಗೊತ್ತಾಗಿ ಆತನನ್ನು ಶಿವಣ್ಣ ಮನೆಯಿಂದ ಹೊರಹಾಕಿದ್ದ. ಆ ಬಳಿಕ ಒಮ್ಮೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ನ್ಯಾಯ ಪಂಚಾಯ್ತಿ ಮಾಡಿ ಗಂಡ ಹೆಂಡತಿ ಇಬ್ಬರೂ ಅನೋನ್ಯವಾಗಿ ಇರುವಂತೆ ಬುದ್ದಿ ಹೇಳಿದ್ದರು. ಆ ಬಳಿಕ ಕೆಲ ತಿಂಗಳು ಗಂಡ ಹೆಂಡತಿ ಚೆನ್ನಾಗಿಯೇ ಇದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಗಂಡ ಶಿವಣ್ಣ ಮತ್ತು ಮಕ್ಕಳನ್ನು ಬಿಟ್ಟು ಹೇಮಂತ್​​ ಜೊತೆ ಕಾವ್ಯಾ ಓಡಿಹೋಗಿದ್ದಳು. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಗೆ ಶಿವಣ್ಣ ದೂರು ನೀಡಿದ್ದು, ಮತ್ತೆ ಈ ರೀತಿ ಕೆಲಸ ಮಾಡಲ್ಲ ಎಂದು ಠಾಣೆಯಲ್ಲಿಯೇ ಕ್ಷಮೆ ಕೇಳಿ ಗಂಡನ ಮನೆಗೆ ವಾಪಸ್​​ ಬಂದಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್; ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!

ಇನ್ನು ಗಂಡನ ಮನೆಗೆ ಬಂದ ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ಮನೆಯಲ್ಲಿಟ್ಟಿದ್ದ ಹಣವನ್ನ ತೆಗೆದುಕೊಂಡು ಓಡಿಹೋಗಿದ್ದಳು. ಇದರಿಂದ ಮನನೊಂದಿದ್ದ ಶಿವಣ್ಣ, ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಮಕ್ಕಳನ್ನ ಉಸಿರುಗಟ್ಟಿಸಿ ಸಾಯಿಸಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಕುಣಿಗಲ್ ಪೊಲೀಸರಿಂದ ಈ ಬಗ್ಗೆ ತನಿಖೆ ಮುಂದುವರಿದಿದೆ. ಮೃತದೇಹಗಳನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version