ಗಂಗಾರತಿ ಮೂಲಕ ನದಿ ತಿರುವು ಯೋಜನೆ ವಿರುದ್ಧ ಸತ್ಯಾಗ್ರಹ; ವಿಶಿಷ್ಟ ಕರೆ ನೀಡಿದ ಸ್ವರ್ಣವಲ್ಲಿ ಶ್ರೀಗಳು – Kannada News | Uttara Kannada River Diversion Project Swarnavalli Mutt Leads Gangarati Protest To Save Rivers

ಉತ್ತರ ಕನ್ನಡ ಜಿಲ್ಲೆಗೆ ಸದ್ಯ ನದಿ ತಿರುವು ಯೋಜನೆಯ ಭೂತ ಕಾಡುತ್ತಿದೆ. ಇಲ್ಲಿ ಹರಿಯುವ ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಮ್ ಕಟ್ಟಿ, ಉತ್ತರ ಕರ್ನಾಟಕದ ಕಡೆಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯಲು ಸರ್ಕಾರ ಮುಂದಾಗಿದೆ. ಇದರಿಂದ ಪಶ್ಚಿಮಘಟ್ಟದ ನಾಶ ಖಚಿತ ಎಂಬ ಅಭಿಪ್ರಾಯ ತಜ್ಞರದ್ದು. ಆದಾಗ್ಯೂ ನಾವು ಯೋಜನೆ ಮಾಡಿಯೇ ತಿರುತ್ತೇವೆ ಎಂಬ ಹುಂಬುತನ ರಾಜಕಾಣಿಗಳದ್ದು. ಜನವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಯಿತು. 25 ಸಾವಿರಕ್ಕೂ ಅಧಿಕ ಜನರು ಸೇರಿ ಈ ಯೋಜನೆಯನ್ನು ವಿರೋಧಿಸಿದರು. ಈಗ ‘ಗಂಗಾರತಿ’ ಮೂಲಕ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಕರೆ ನೀಡಲಾಗಿದೆ.

ಶಿರಸಿಯ ಮುರೆಗಾರ್ ಜಲಪಾತಕ್ಕೆ (ಪಟ್ಟಣದ ಹಳ್ಳ) ಡ್ಯಾಂ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ.  ಈ ಯೋಜನೆಗಳ ವಿರುದ್ಧ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿಶಿಷ್ಟ ಕರೆ ನೀಡಿದ್ದಾರೆ. ಅದುವೇ  ನದಿ ಪೂಜೆ ಗಂಗಾರತಿ.

ಮುರೆಗಾರ್ ಜಲಪಾತದಲ್ಲಿ ಫೆಬ್ರವರಿ 23ರ ಸಂಜೆ ನದಿ ಪೂಜೆ ಗಂಗಾರತಿ ಮಾಡಲಾಯಿತು. ಗಂಗಾ ನದಿ ತೀರದಲ್ಲಿ ನಡೆಯುವಂತೆ ಇಲ್ಲಿಯ ನದಿಗಳ ನೀರಿಗೂ ಪೂಜೆ ನಡೆದವು. ಈ ರೀತಿ ಮಾಡುವುದರ ಹಿಂದಿನ ಕಾರಣವನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿವರಿಸಿದರು.

‘ನದಿಗಳ ಬಗ್ಗೆ ವೇದಗಳಲ್ಲಿ ಬರೆಯಲಾಗಿದೆ. ನೀರಲ್ಲಿ ಎಲ್ಲ ದೇವತೆಗಳು ಇರುತ್ತಾರೆ. ನೀರು ಹಾಗೂ ನದಿ ಪೂಜ್ಯವಾದದ್ದು. ಯಾವುದು ಪೂಜ್ಯವೋ ಅದನ್ನು ಮನುಷ್ಯ ಸರಿಯಾಗಿ ಇಟ್ಟುಕೊಳ್ಳುತ್ತಾನೆ. ನದಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಜಾಗೃತ ಮಾಡಲು ಈ ಪೂಜೆ. ನದಿಗಳು ಭಗವಂತನ ಇಚ್ಛೆಯಂತೆ ಹರಿಯುತ್ತಿವೆ. ಆದರೆ, ನದಿಗಳ ದಿಕ್ಕನ್ನು ಬದಲಿಸೋದು ಅಧರ್ಮ. ಪಾಪದ ಕೆಲಸ ಮಾಡಲು ಹೊರಡಲಾಗುತ್ತಿದೆ. ಹೀಗಾಗಿ ಧರ್ಮಪೀಠ ಅದನ್ನು ವಿರೋಧಿಸುತ್ತಿದೆ’ ಎಂದು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಹೇಳಿದರು.

‘ಈ ಪೂಜೆ ಹೊಸ ರೀತಿಯ ಸತ್ಯಾಗ್ರಹ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಅವರು ಉಪವಾಸ ಸತ್ಯಾಗ್ರಹ ಮಾಡಿದರು. ಅದೇ ರೀತಿ ಈಗ ಪೂಜೆ ಮೂಲಕ ನಮ್ಮ ಸತ್ಯಾಗ್ರಹ ಆರಂಭಿಸಿದ್ದೇವೆ. ಮತ್ತೆ ಮತ್ತೆ ಪೂಜೆ ಮಾಡಿ ಯೋಜನೆಗೆ ವಿರೋಧ ಹೊರಹಾಕಬೇಕಿದೆ. ಇದು ನಮ್ಮ ಜನರಿಗೆ ಜಾಗೃತಿ ಹಾಗೂ ಯೋಜನೆ ಮಾಡುವವರಿಗೆ ವಿರೋಧವೂ ಹೌದು. ಎರಡನ್ನೂ ಒಟ್ಟಿಗೆ ಮಾಡುವ ಅಹಿಂಸಾತ್ಮಕ ಯೋಜನೆಯೇ ನದಿ ಪೂಜೆ’ ಎಂದರು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ.

ಇದನ್ನೂ ಓದಿ: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ; ರಾಜಕಾರಣಿಗಳ ಆಸೆಗೆ ಪಶ್ಚಿಮ ಘಟ್ಟ ಬಲಿ?

‘ಉತ್ತರ ಭಾರತವನ್ನು ನೋಡಿ ನಾವು ಕಲಿಯಬೇಕಿದೆ. ಗಂಗಾರತಿ ಬಂದಿರೋದು ಉತ್ತರ ಭಾರತದಿಂದ. ಉತ್ತರ ಭಾರತದವರು ನದಿಯನ್ನು ಬಹುವಚನ ಕೊಟ್ಟು ಕರೆಯುತ್ತಾರೆ. ನದಿಗಳ ಬಗ್ಗೆ ಇರುವ ಶ್ರದ್ಧೆ ಹಾಗೂ ಗೌರವವನ್ನು ಇದು ತೋರಿಸುತ್ತದೆ’ ಎಂದರು ಅವರು.

ಇನ್ನು, ಪತ್ರಕ್ಕೆ ಸಹಿ ಮಾಡಿ ನದಿ ತಿರುವು ಯೋಜನೆಗೆ ವಿರೋಧ ಹೊರಹಾಕುವ ಚಳುವಳಿಗೂ ಚಾಲನೆ ಕೊಡಲಾಯಿತು. ಈ ಪತ್ರಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಆಗಲಿದೆ. ಈ ಮೂಲಕ ಸರ್ಕಾರಕ್ಕೆ ತಮ್ಮ ವಿರೋಧ ತೋರಿಸಬೇಕು ಎಂಬ ಆಶಯವನ್ನು ಇದು ಹೊಂದಿದೆ. ಈ ವೇಳೆ ಮಾತನಾಡಿದ ಅನಂತ್ ಹೆಗಡೆ ಅಶೀಸರ, ನೀರವಾರಿ ತಜ್ಞರ ಜೊತೆ ತೆರಳಿ ರಾಜ್ಯ ನೀರಾವರಿ ಇಲಾಖೆಯ ಅಧಿಕಾರಗಳ ಜೊತೆ ಮಾತನಾಡುವ ಆಲೋಚನೆ ಇದೆ ಎಂದು ಹೇಳಿದರು.

ಮತ್ತಷ್ಟು ಕರ್ನಾಟಕ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

Source link

Ranji Trophy final: ಫೈನಲ್ ಪಂದ್ಯ ಡ್ರಾ ಆದರೆ ಯಾರು ಚಾಂಪಿಯನ್? – Kannada News | If ranji final is draw who will win

ರಣಜಿ ಟೂರ್ನಿಯ 91ನೇ ಸೀಸನ್​ನ ಫೈನಲ್​ ಪಂದ್ಯ ಶುರುವಾಗಿದೆ. ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಈ ಬಾರಿಯ ಫೈನಲ್​ನಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಮೊದಲ ಇನಿಂಗ್ಸ್ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಭೋಜನಾ ವಿರಾಮದ ವೇಳೆಗೆ 34 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 104 ರನ್​ ಕಲೆಹಾಕಿದೆ. ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿರುವ ಕಾಶ್ಮೀರಿ ಪಡೆ ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿದೆ.

ಹೀಗೆ ಬೃಹತ್ ಮೊತ್ತ ಪೇರಿಸಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಯಾರಿಗೆ ಚಾಂಪಿಯನ್ ಪಟ್ಟ ಒಲಿಯಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ..

  • ರಣಜಿ ಟ್ರೋಫಿ ಫೈನಲ್ ಪಂದ್ಯವು ಡ್ರಾ ಆದಲ್ಲಿ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ  ಸಾಧಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
  • ಒಂದು ವೇಳೆ ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ 400 ರನ್​ ಕಲೆಹಾಕಿ, ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ 399 ರನ್​ಗಳಿಸಿ ಪಂದ್ಯ ಡ್ರಾ ಆದರೆ, ಮೊದಲ ಇನಿಂಗ್ಸ್​ನಲ್ಲಿ 1 ರನ್​ಗಳ ಮುನ್ನಡೆ ಹೊಂದಿರುವ ಜಮ್ಮು-ಕಾಶ್ಮೀರ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
  • ಜಮ್ಮು-ಕಾಶ್ಮೀರ ತಂಡ ಮೊದಲ ಇನಿಂಗ್ಸ್​ನಲ್ಲಿ 400 ರನ್​ಗಳಿಸಿ, ಕರ್ನಾಟಕ ಪ್ರಥಮ ಇನಿಂಗ್ಸ್​ನಲ್ಲಿ 401 ರನ್​ಗಳಿಸಿ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಮೊದಲ ಇನಿಂಗ್ಸ್​ನಲ್ಲಿ 1 ರನ್​ಗಳ ಮುನ್ನಡೆ ಹೊಂದಿರುವ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.

ರಣಜಿ ಟ್ರೋಫಿ ಫೈನಲ್ ಪಂದ್ಯದ ನಿಯಮಗಳು:

  • ಮೊದಲ ಇನಿಂಗ್ಸ್ ಮುನ್ನಡೆ: ಐದು ದಿನಗಳ ಆಟದ ನಂತರವೂ ಪಂದ್ಯವು ಯಾವುದೇ ಸ್ಪಷ್ಟ ಫಲಿತಾಂಶ ನೀಡದೆ ಡ್ರಾನಲ್ಲಿ ಅಂತ್ಯಗೊಂಡರೆ, ಯಾವ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚಿನ ರನ್ ಗಳಿಸಿರುತ್ತದೆಯೋ ಆ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗುತ್ತದೆ.
  • ಮೊದಲ ಇನಿಂಗ್ಸ್ ಟೈ: ಒಂದು ವೇಳೆ ಮೊದಲ ಇನಿಂಗ್ಸ್ ಮೊತ್ತವೂ ಸಮನಾಗಿದ್ದರೆ ಅಥವಾ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಲೀಗ್ ಹಂತದಲ್ಲಿ ಹೆಚ್ಚಿನ ಅಂಕಗಳನ್ನು (Points) ಗಳಿಸಿದ ತಂಡವನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ.
  • ಹಿಂದಿನ ಇತಿಹಾಸ: ಕಳೆದ ವರ್ಷ (2024-25) ವಿದರ್ಭ ತಂಡವು ಕೇರಳ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಆಗಿತ್ತು.

ಇದನ್ನೂ ಓದಿ: ಟೀಮ್ ಇಂಡಿಯಾ ಕೇವಲ 11 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕು!

ಒಟ್ಟಾರೆಯಾಗಿ ಹೇಳುವುದಾದರೆ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನ ಪ್ರದರ್ಶನವು ಅತ್ಯಂತ ನಿರ್ಣಾಯಕವಾಗಿರುತ್ತದೆ. ಅದರಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಉತ್ತಮ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ಬೃಹತ್ ಮೊತ್ತ ಪೇರಿಸಿದರೆ ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸುವುದು ಅತ್ಯಗತ್ಯ.

Source link

ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ – Kannada News | Baldota Factory Expansion Sparks Large Scale Farmer Protest in Koppal

ಬೃಹತ್​​ ಪ್ರತಿಭಟನೆImage Credit source: Tv9 Kannada

ಕೊಪ್ಪಳ, ಫೆಬ್ರವರಿ 24: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ತಮ್ಮ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗವಿಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದೆ.

ರೈತರ ಆಕ್ರೋಶ


ಹಾಲಿವರ್ತಿ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳಿಗೆ ಕಾರ್ಖಾನೆಯ ಹೊಗೆಯಿಂದಾಗುವ ಹಾನಿಯನ್ನು ಪ್ರದರ್ಶಿಸಲು, ಹಾಳಾದ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ; ಹೋರಾಟಕ್ಕಿಳಿದ ರೈತರು

ಪ್ರತಿಭಟನಾ ಸ್ಥಳಕ್ಕೆ ತೊಟ್ಟಿಲು ಸಮೇತ ಆಗಮಿಸಿದ ಮಹಿಳೆಯರು ಕಾರ್ಖಾನೆಗಳ ಹೊಗೆಯಿಂದ ಮಕ್ಕಳಾಗುತ್ತಿಲ್ಲವೆಂದು ಖಾಲಿ ತೊಟ್ಟಿಲು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಮಹಿಳೆಯರಿಗೆ ಗರ್ಭಪಾತವಾಗಿದೆ, ನಮಗೆ ಸಂತಾನವಿಲ್ಲ. ಮನೆಯಲ್ಲಿ ತೊಟ್ಟಿಲು ತೂಗೋಕೆ ಆಗುತ್ತಿಲ್ಲವೆಂದು ಕಿಡಿ ಕಾರಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಮಾಸ್ಕ್ ಸಮೇತ ರೈತನೋರ್ವ ಪ್ರತಿಭಟನೆಗೆ ಆಗಮಿಸಿರೋದು ಗಮನ ಸೆಳೆದಿದೆ. ಆಕ್ಸಿಜನ್ ಮಾಸ್ಕ್ ಧರಿಸಿ ಹೋರಾಟದಲ್ಲಿ ಭಾಗಿಯಾಗಿರುವ ಹಿರೇಬಗನಾಳದ ರೈತ ಮಂಜುನಾಥ, ಕಾರ್ಖಾನೆಗಳಿಂದ ಬರುವ ಹೊಗೆಯಿಂದ ಉಸಿರಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ.

ರೈತರಿಂದ ಸರ್ಕಾರದ ಶವಯಾತ್ರೆ

ಟ್ರ್ಯಾಕ್ಟರ್​ಗಳಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ರೈತರು ಭಾಗಿಯಾಗಿದ್ದು, ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ರೈತರಿಂದ ಸರ್ಕಾರದ ಶವಯಾತ್ರೆ ನಡೆಸಲಾಗಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಕೂಡ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ.

ಜನಪ್ರತಿನಿಧಿಗಳಿಗೆ ತರಾಟೆ

ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗಿಯಾದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ ಮತ್ತು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್​​ರನ್ನು ರೈತರು ತರಾಟೆಗೆ ಪಡೆದ ಪ್ರಸಂಗವೂ ನಡೆದಿದೆ. ಕಾರ್ಖಾನೆ ವಿಸ್ತರಣೆ ಮಾಡುವಾಗ ಸುಮ್ಮನಿದ್ದು ಇಲ್ಲಿಗ್ಯಾಕೆ ಬಂದ್ರಿ ಎಂದು ಕೊಪ್ಪಳದ ಗಡಿಯಾರ ಕಂಬದ ಬಳಿ ಜನಪ್ರತಿನಿಧಿಗಳನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

NCERT: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ – Kannada News | NCERT Class 8 Textbook Flags Judicial Corruption and Case Backlog as Key Issues

ನವದೆಹಲಿ, ಫೆಬ್ರವರಿ 24: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸೋಮವಾರ 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಹೊಸ ಪುಸ್ತಕವು ನ್ಯಾಯಾಂಗ(Judiciary)ದ ಪಾತ್ರವನ್ನು ವಿವರಿಸುವ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಂತಹ ಸವಾಲುಗಳನ್ನು ಪರಿಹರಿಸುವ ಹೊಸ ವಿಭಾಗವನ್ನು ಒಳಗೊಂಡಿದೆ. ಈ ವಿಷಯಗಳನ್ನು ಹಳೆಯ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸದ ಕಾರಣ ಈ ಬದಲಾವಣೆಯು ಮಹತ್ವದ್ದಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ಹೊಸ ಪುಸ್ತಕವು ನ್ಯಾಯಾಲಯಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುತ್ತದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವು ಪ್ರಚಲಿತವಾಗಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ನ್ಯಾಯಾಧೀಶರ ಕೊರತೆ, ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಮತ್ತು ನ್ಯಾಯಾಲಯಗಳಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಂತಹ ಹಲವಾರು ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದನ್ನು ಪುಸ್ತಕವು ಎತ್ತಿ ತೋರಿಸುತ್ತದೆ.

ಹೊಸ ಪುಸ್ತಕವು ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂದಾಜು ಅಂಕಿಅಂಶಗಳನ್ನು ಸಹ ಒದಗಿಸುತ್ತದೆ. ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 81,000 ಪ್ರಕರಣಗಳು ಬಾಕಿ ಉಳಿದಿವೆ. ಏತನ್ಮಧ್ಯೆ, ಭಾರತದ ಹೈಕೋರ್ಟ್‌ಗಳಲ್ಲಿ ಸುಮಾರು 6,240,000 ಪ್ರಕರಣಗಳು ಬಾಕಿ ಉಳಿದಿವೆ.

ಮತ್ತಷ್ಟು ಓದಿ: ಅಮೆರಿಕ ಸುಪ್ರೀಂ ಕೋರ್ಟ್​ನಲ್ಲಿ ಟ್ರಂಪ್ ಸೊಕ್ಕು ಮುರಿಯಲು ಕಾರಣರಾಗಿದ್ದು ಭಾರತೀಯ ಮೂಲದ ವಕೀಲ! ಯಾರು ಗೊತ್ತೇ ಈ ನೀಲ್ ಕತ್ಯಾಲ್?

ಹೆಚ್ಚುವರಿಯಾಗಿ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಸುಮಾರು 47,000,000 ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಅಂಕಿಅಂಶಗಳನ್ನು ಬಳಸಲಾಗುತ್ತದೆ. ನ್ಯಾಯಾಧೀಶರು ನೀತಿ ಸಂಹಿತೆಗೆ ಬದ್ಧರಾಗಿರುತ್ತಾರೆ ಎಂದು ಪುಸ್ತಕವು ಹೇಳುತ್ತದೆ. ಅವರು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸರಿಯಾದ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು.

ನ್ಯಾಯಾಧೀಶರ ವಿರುದ್ಧ ದೂರು ಬಂದರೆ, ಅದನ್ನು ತನಿಖೆ ಮಾಡಲು ಒಂದು ವ್ಯವಸ್ಥೆ ಇದೆ. ಈ ಉದ್ದೇಶಕ್ಕಾಗಿ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CPGRAMS) ಎಂಬ ವ್ಯವಸ್ಥೆಯನ್ನು ಉಲ್ಲೇಖಿಸಲಾಗಿದೆ. ಪುಸ್ತಕದ ಪ್ರಕಾರ, 2017 ಮತ್ತು 2021 ರ ನಡುವೆ 1,600 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಆರೋಪಗಳು ಸಾಕಷ್ಟು ಗಂಭೀರವಾಗಿದ್ದರೆ, ಸಂಸತ್ತು ದೋಷಾರೋಪಣೆ ಪ್ರಕ್ರಿಯೆಯ ಮೂಲಕ ನ್ಯಾಯಾಧೀಶರನ್ನು ತೆಗೆದುಹಾಕಬಹುದು. ಈ ಪ್ರಕ್ರಿಯೆಯು ಸಂಪೂರ್ಣ ತನಿಖೆಯ ನಂತರವೇ ಪ್ರಾರಂಭವಾಗುತ್ತದೆ ಮತ್ತು ನ್ಯಾಯಾಧೀಶರಿಗೆ ತಮ್ಮ ವಾದವನ್ನು ಮಂಡಿಸಲು ಪೂರ್ಣ ಅವಕಾಶವನ್ನು ನೀಡಲಾಗುತ್ತದೆ.

ಈ ಪುಸ್ತಕವು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹೇಳಿಕೆಯನ್ನು ಸಹ ಉಲ್ಲೇಖಿಸುತ್ತದೆ. ಜುಲೈ 2025 ರಲ್ಲಿ, ನ್ಯಾಯಾಂಗದೊಳಗೆ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಘಟನೆಗಳು ಬೆಳಕಿಗೆ ಬಂದಿವೆ, ಇದು ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತಿದೆ ಎಂದು ಅವರು ಹೇಳಿದರು. ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಅಂತಹ ಪ್ರಕರಣಗಳಲ್ಲಿ ಪಾರದರ್ಶಕ ಮತ್ತು ಕಠಿಣ ಕ್ರಮ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಹಳೆಯ ಪುಸ್ತಕದಲ್ಲಿ ಏನಿತ್ತು?
ಹಳೆಯ ಪುಸ್ತಕವು ನ್ಯಾಯಾಂಗದ ಪಾತ್ರ, ಸ್ವತಂತ್ರ ನ್ಯಾಯಾಂಗದ ಅರ್ಥ, ನ್ಯಾಯಾಲಯಗಳ ರಚನೆ ಮತ್ತು ಸಾರ್ವಜನಿಕ ಪ್ರವೇಶದ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಇದು ಭ್ರಷ್ಟಾಚಾರವನ್ನು ಉಲ್ಲೇಖಿಸಿರಲಿಲ್ಲ, ಆದರೆ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಲು ವರ್ಷಗಳು ಬೇಕಾಗುತ್ತದೆ ಎಂದು ಅದು ಹೇಳಿತ್ತು.

2018 ರಲ್ಲಿ ಸರ್ಕಾರವು ಚುನಾವಣಾ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು, ಅದರ ಮೂಲಕ ವ್ಯಕ್ತಿಗಳು ಮತ್ತು ಕಂಪನಿಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದು ಎಂದು ಪುಸ್ತಕವು ವಿವರಿಸುತ್ತದೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಎಂದು ಘೋಷಿಸಿತು ಮತ್ತು ಪಕ್ಷಗಳಿಗೆ ಯಾರು ಹಣಕಾಸು ಒದಗಿಸುತ್ತಿದ್ದಾರೆಂದು ತಿಳಿಯುವ ಹಕ್ಕು ಮತದಾರರಿಗೆ ಇದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ – Kannada News | The little girl who threw the book into the drain and danced away

ಈಗಿನ ಮಕ್ಕಳಿಗೂ (children) ಕೂಡ ಶಾಲೆಗೆ ಹೋಗೋದು, ಓದೋದು, ಹೋಮ್ ವರ್ಕ್ (home work) ಮಾಡುವುದೆಂದರೆ ದೊಡ್ಡ ತಲೆ ನೋವು. ಅದರಲ್ಲೂ ಈಗಿನ ಕಾಲದ ಮಕ್ಕಳಿಗೆ ಮುದ್ದು ಜಾಸ್ತಿ. ಮಕ್ಕಳು ಹೋಮ್ ವರ್ಕ್ ಮಾಡಲ್ಲ ಎಂದು ಹಠ ಹಿಡಿದರೆ ಅಮ್ಮನೇ ಹೋಮ್ ವರ್ಕ್ ಮಾಡಿಸಿಕೊಡುವಷ್ಟು ಮುದ್ದು ಹೆಚ್ಚಾಗಿದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಈ ಪುಟಾಣಿಗೆ ಎಷ್ಟು ಟೆನ್ಶನ್ ಇದೆ ಎಂದು ತಿಳಿಯುತ್ತೆ. ಹೌದು, ಶಾಲೆಯಿಂದ ಮನೆಗೆ ಹೊರಟ ಪುಟಾಣಿಯೂ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ಚರಂಡಿಗೆ ಎಸೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ  ನೆಟ್ಟಿಗರು ಈ ಪುಟಾಣಿ ಮಾಡಿದ ಕೆಲಸ ನೋಡಿ ಶಾಕ್ ಆಗಿದ್ದಾರೆ.

Bineesh kodiyeri ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯೊಂದು ಶಾಲೆಯಿಂದ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಬ್ಯಾಗ್ ಹಾಕಿಕೊಂಡ ಈ ಪುಟ್ಟ ಹುಡುಗಿ ಚರಂಡಿ ಪಕ್ಕ ಬಂದು ನಿಲ್ಲುತ್ತಾಳೆ. ಆ ಬಳಿಕ ತನ್ನ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ತನ್ನನ್ನು ಯಾರಾದರೂ ನೋಡುತ್ತಾರೆಯೇ ಎಂದು ಖಚಿತ ಪಡಿಸಿಕೊಂಡಿದ್ದು, ಪುಸ್ತಕವನ್ನು ಮೆಲ್ಲನೆ ಚರಂಡಿಯೊಳಗೆ ಹಾಕುತ್ತಾಳೆ. ಕೊನೆಗೆ ಖುಷಿಯಿಂದಲೇ ಕುಣಿಯುತ್ತ ಮನೆಯತ್ತ ಹೋಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಪುಟ್ಟ ಹುಡುಗಿಯ ಐಡಿಯಾ ಅದ್ಭುತ ಎಂದಿದ್ದಾರೆ. ಮತ್ತೊಬ್ಬರು, ಎನ್ ತಲೆ ಗುರು ಈ ಪುಟಾಣಿಯದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸಮಸ್ಯೆ ಕೊನೆಗೂ ಪರಿಹಾರ ಸಿಕ್ತು ಎಂದು ತಮಾಷೆಯಾಗಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:10 pm, Tue, 24 February 26

Source link

Exam Tips: ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ? ಶಿಕ್ಷಣ ತಜ್ಞರ ಸಲಹೆ ಇಲ್ಲಿದೆ – Kannada News | Dr Gururaj Karajagis Simple Tips for Exam Time Management and Focused Study

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಸಮಯ ನಿರ್ವಹಣೆ ಮತ್ತು ಗೊಂದಲ ನಿವಾರಣೆ ಕುರಿತು ಸಲಹೆ ನೀಡಿದ್ದಾರೆ. ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು, ಒಂದೇ ವಿಷಯದ ಮೇಲೆ ಆಳವಾಗಿ ಗಮನ ಹರಿಸುವಂತೆ ಅವರು ಸೂಚಿಸಿದ್ದಾರೆ.

ಪರೀಕ್ಷಾ ಸಮಯದಲ್ಲಿ ಉತ್ತರಗಳನ್ನು ಬರೆಯುವಾಗ ಸಮಯದ ಕೊರತೆ ಎದುರಾಗುವುದನ್ನು ತಪ್ಪಿಸಲು, ಅಂಕಗಳಿಗೆ ಅನುಗುಣವಾಗಿ ಉತ್ತರಗಳ ಉದ್ದವನ್ನು ನಿರ್ಧರಿಸಲು ಸಲಹೆ ನೀಡಲಾಗಿದೆ. ಹೆಚ್ಚಿನ ಉತ್ತರ ಬರೆಯುವುದರಿಂದ ಸಮಯ ವ್ಯರ್ಥವಾಗುತ್ತದೆ ಮತ್ತು ಇತರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ, ನಿಯಮಿತವಾಗಿ ಬರವಣಿಗೆ ಅಭ್ಯಾಸ ಮಾಡುವುದು ಅಕ್ಷರ ದೊಂಡುಗವನ್ನು ಸುಧಾರಿಸುತ್ತದೆ ಮತ್ತು ಬರವಣಿಗೆ ವೇಗವನ್ನು ಹೆಚ್ಚಿಸುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

 

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ? – Kannada News | Inactive EPF accounts with balance of certain amount to get direct refund to bank account

ನವದೆಹಲಿ, ಫೆಬ್ರುವರಿ 24: ಇಪಿಎಫ್​ಒದಲ್ಲಿ (EPFO) ನಿಷ್ಕ್ರಿಯವಾಗಿರುವ ಪಿಎಫ್ ಅಕೌಂಟ್​ಗಳ ಸಂಖ್ಯೆ ಬಹಳ ಇದೆ. ಹೊಸ ಪಿಎಫ್ ಖಾತೆಗೆ ವರ್ಗಾವಣೆ ಆಗದ, ಹಾಗೂ ಮೂರು ವರ್ಷಗಳಿಂದ ಪ್ರೀಮಿಯಮ್ ಸಂದಾಯ ಆಗದೇ ಇರುವ ಖಾತೆಗಳು ಇನ್ಯಾಕ್ಟಿವ್ ಎನಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ನಿಷ್ಕ್ರಿಯ ಇಪಿಎಫ್ ಖಾತೆಯಲ್ಲಿರುವ ಹಣವನ್ನು ನೇರವಾಗಿ ರೀಫಂಡ್ ಮಾಡಲಿದೆ.

ಸರ್ಕಾರದ ಈ ಆಲೋಚನೆ ಉಪಯುಕ್ತವೆನಿಸಬಹುದು. ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ಇನಾಪರೇಟಿವ್ ಅಕೌಂಟ್​ಗಳ ಸಂಖ್ಯೆ 6 ಲಕ್ಷಕ್ಕಿಂತಲೂ ಹೆಚ್ಚಿದೆ. ಅವು ನಿರುಪಯುಕ್ತವಾಗಿ ಇರುವುದರ ಬದಲು ರೀಫಂಡ್ ಪಡೆದರೆ ಇಪಿಎಫ್ ಸದಸ್ಯರಿಗೆ ಅಲ್ಪ ಸಹಾಯವಾಗಬಹುದು.

ಇದನ್ನೂ ಓದಿ: ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ?

ರೀಫಂಡ್ ಪಡೆಯಲು ಏನೂ ಮಾಡಬೇಕಿಲ್ಲ…

ನಿಮ್ಮ ನಿಷ್ಕ್ರಿಯ ಇಪಿಎಫ್ ಅಕೌಂಟ್​ನಲ್ಲಿ ಹಣದ ಬ್ಯಾಲನ್ಸ್ 1,000 ರೂಗಿಂತ ಕಡಿಮೆ ಇದ್ದಲ್ಲಿ ಯೋಚನೆ ಬೇಡ. ತನ್ನಂತಾನೆ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ನಿಮ್ಮ ಇಪಿಎಫ್ ಅಕೌಂಟ್​ಗೆ ಜೋಡಿತವಾದ ಬ್ಯಾಂಕ್ ಅಕೌಂಟ್​ಗೆ ಆ ಹಣ ಹೋಗುತ್ತದೆ. ಆ ಬ್ಯಾಂಕ್ ಅಕೌಂಟ್​ಗೆ ಆಧಾರ್ ಲಿಂಕ್ ಆಗಿರಬೇಕು.

ಇಪಿಎಫ್ ಅಕೌಂಟ್​ನಲ್ಲಿ ಹಣವು ಒಂದು ಸಾವಿರ ರೂಗಿಂತ ಹೆಚ್ಚಿದ್ದರೆ ಆಗ ಆಟೊಮ್ಯಾಟಿಕ್ ರೀಫಂಡ್ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ನೀವು ಹಣ ವಿತ್​ಡ್ರಾಗೆ ಅರ್ಜಿ ಸಲ್ಲಿಸಬೇಕಾಗಬಹುದು. ನೀವು ಸಕ್ರಿಯ ಇಪಿಎಫ್ ಅಕೌಂಟ್ ಹೊಂದಿದ್ದರೆ ಆಗ ಹಳೆಯ ನಿಷ್ಕ್ರಿಯ ಅಕೌಂಟ್ ಅನ್ನು ಸಕ್ರಿಯ ಅಕೌಂಟ್​ಗೆ ವಿಲೀನಗೊಳಿಸಬಹುದು.

ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ನಿಮ್ಮ ಇಪಿಎಫ್ ಖಾತೆ ನಿಷ್ಕ್ರಿಯವಾಗಿದೆಯಾ, ಪರಿಶೀಲಿಸುವ ಕ್ರಮ

  • ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ‘ಸರ್ವಿಸಸ್’ – ‘ಫಾರ್ ಎಂಪ್ಲಾಯೀಸ್’ ಆಯ್ಕೆ ಮಾಡಿ.
  • ಯುಎಎನ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ
  • ‘ವ್ಯೂ ಪಾಸ್​ಬುಕ್’ ನೋಡಿ.

ಇಲ್ಲಿ ಮೂರು ವರ್ಷ ಕಾಲ ಕಂಪನಿ ವತಿಯಿಂದ ಯಾವುದೇ ಪ್ರೀಮಿಯಮ್ ಕೊಡುಗೆ ಬಂದಿಲ್ಲ ಎಂದಾದರೆ ಅದು ಇನಾಪರೇಟಿವ್ ಎನಿಸುತ್ತದೆ.

ಹಾಗೆಯೇ, ಉಮಾಂಗ್ ಆ್ಯಪ್​ನಲ್ಲೂ ನೀವು ಪಾಸ್ಬುಕ್ ವೀಕ್ಷಿಸಿ ಪರಿಶೀಲನೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು! ಸಿಸಿ ಕ್ಯಾಮಾರದಲ್ಲಿ ದೃಶ್ಯ ಸೆರೆ – Kannada News | Wild Elephants Enter Mayaganahalli, CCTV Captures Movement

ರಾಮನಗರ, ಫೆಬ್ರವರಿ 24: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ತಡರಾತ್ರಿ ಸಮಯದಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆ ಗ್ರಾಮದಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಗೊಂಡಿವೆ. ಈ ಆನೆಗಳ ಹಿಂಡು ಬನ್ನೇರಘಟ್ಟ ಅರಣ್ಯ ಪ್ರದೇಶದಿಂದ ಗ್ರಾಮ ಭಾಗಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮದಲ್ಲಿ ಹಾದುಹೋಗಿದ ಆನೆಗಳು ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೇರಳದ ಹೆಸರು ಬದಲಾಗುತ್ತೆ, ಇನ್ಮುಂದೆ ಯಾವ ಹೆಸರಿನಿಂದ ಕರೀಬೇಕು ಗೊತ್ತಾ? – Kannada News | Kerala May Officially Become Keralam as Key Decision Looms

ತಿರುವನಂತಪುರಂ, ಫೆಬ್ರವರಿ 24: ಕೇರಳ(Kerala)ದಲ್ಲಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಕೇರಳ ರಾಜ್ಯದ ಹೆಸರೇ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಮುಂದೆ ಕೇರಳವನ್ನು ಕೇರಳಂ ಎಂದು ಕರೆಯಬೇಕಾಗುತ್ತದೆ. ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯು ಕೇರಳದ ಹೆಸರನ್ನು “ಕೇರಳಂ” ಎಂದು ಬದಲಾಯಿಸುವ ಮಸೂದೆಯನ್ನು ಅನುಮೋದಿಸುವ ನಿರೀಕ್ಷೆಯಿದೆ.

ಈ ನಿರ್ಧಾರವನ್ನು ರಾಜ್ಯದ ಭಾಷಾ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅಧಿಕೃತವಾಗಿ ಗುರುತಿಸುವತ್ತ ಮಹತ್ವದ ಹೆಜ್ಜೆಯಾಗಿ ನೋಡಲಾಗುತ್ತಿದೆ.ಅಧಿಕೃತ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸಲು ಕೇರಳ ವಿಧಾನಸಭೆಯು ಈಗಾಗಲೇ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇಂದು ಸಚಿವ ಸಂಪುಟ ಇದನ್ನು ಅನುಮೋದಿಸಿದರೆ, ಸಂವಿಧಾನದ ಎಂಟನೇ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸನ್ನು ಕಳುಹಿಸಲಾಗುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2024ರಲ್ಲಿ ರಾಜ್ಯದ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಮಾಡಿದ್ದರು.

2024ರ ಜೂನ್ 25ರಂದು ವಿಧಾನಸಭೆಯು ಎರಡನೇ ಬಾರಿಗೆ ನಿರ್ಣಯವನ್ನು ಅಂಗೀಕರಿಸಿತು. ಕೇಂದ್ರ ಗೃಹ ಸಚಿವಾಲಯವು ಮೊದಲ ನಿರ್ಣಯವನ್ನು ಪರಿಶೀಲಿಸಿತು ಮತ್ತು ಕೆಲವು ತಿದ್ದುಪಡಿಗಳನ್ನು ನೀಡಿತ್ತು. ಕೇರಳವನ್ನು ಮಲಯಾಳಂನಲ್ಲಿ ಕೇರಳಂ ಎಂದು ಕರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದರು.

ಮತ್ತಷ್ಟು ಓದಿ: Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಪ್ರಧಾನಿ ನರೇಂದ್ರ ಮೋದಿ ಜತೆಗೆ ಸಭೆ ನಡೆಸಲಿದೆ. ಈ ಸಭೆ ಸೇವಾತೀರ್ಥದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಫೆಬ್ರವರಿ 13ರಂದು ಪ್ರಧಾನಿಗಳ ಸೌತ್​ ಬ್ಲಾಕ್​​ನಲ್ಲಿಸಭೆ ನಡೆದಿತ್ತು.
ಕೇರಳ ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ನೇಟಿವಿಟಿ ಕಾರ್ಡ್​ ಮಸೂದೆಯನ್ನು ಮಂಡಿಸಿದ್ದು, ಇದನ್ನು ಐತಿಹಾಸಿಕ ಮತ್ತು ಅಪರೂಪದ ಶಾಸನ ಎಂದು ಕರೆದಿದೆ.

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ವಿಚಾರಣೆಯನ್ನು ಬಹಿಷ್ಕರಿಸಿದ್ದ ವಿರೋಧ ಪಕ್ಷದ ಯುಡಿಎಫ್ ಸದಸ್ಯರ ಅನುಪಸ್ಥಿತಿಯಲ್ಲಿ ಕಂದಾಯ ಸಚಿವ ಕೆ ರಾಜನ್ ಸ್ಥಳೀಯ ಗುರುತಿನ ಚೀಟಿ ಮಸೂದೆಯನ್ನು ಸದನದಲ್ಲಿ ಮಂಡಿಸಿದರು.
ಜನವರಿ 2026 ರಲ್ಲಿ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಬಿಜೆಪಿ ಮತ್ತು ಎನ್‌ಡಿಎ ಯಾವಾಗಲೂ ಕೇರಳದ ಸಂಪ್ರದಾಯಗಳು, ಸಂಸ್ಕೃತಿ ಮತ್ತು ನಂಬಿಕೆಯನ್ನು ರಕ್ಷಿಸಲು ನಿಂತಿವೆ ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ಬಾಲಕ ಸಾವು – Kannada News | Class 9 Student Dies of Suspected Heart Attack in Davanagere’s Goguddu Village

ದಾವಣಗೆರೆ, ಫೆಬ್ರವರಿ 24: ಕರ್ನಾಟಕದಲ್ಲಿ (Karnataka) ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹೃದಯಾಘಾತ (Heart Attack), ಅದರಿಂದಾಗಿ ಸಾವುಗಳು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಜೋರಾಗಿದೆ. ಇದರ ನಡುವೆಯೇ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ 15 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗೋಗುದ್ದು ಗ್ರಾಮದ ಚಮನ್‌ಸಾಬ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಜಾಮಿಲ್ (15) ಮೃತ ಬಾಲಕ. ಆತ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಶಾಲೆಗೆ ರಜೆ ಹಿನ್ನೆಲೆ ಮನೆಗೆ ಬಂದಿದ್ದ ಮುಜಾಮಿಲ್ ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಅಸ್ವಸ್ಥನಾಗಿ ಕುಸಿದುಬಿದ್ದಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ, ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯಂತೆ, ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.

ಈ ಘಟನೆ ಗೋಗುದ್ದು ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

ಕರ್ನಾಟಕದಲ್ಲಿ ಇತ್ತೀಚೆಗೆ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಕಳೆದ ವರ್ಷ ಹಾಸನ ಜಿಲ್ಲೆಯೊಂದರಲ್ಲೇ ಒಂದೂವರೆ ತಿಂಳ ಅವಧಿಯಲ್ಲಿ ಸುಮಾರು 26 ಮಂದಿ ಹಾರ್ಟ್ ಅಟ್ಯಾಕ್​ನಿಂದ ಮೃತಪಟ್ಟಿದ್ದು ಆತಂಕ ಮೂಡಿಸಿತ್ತು. ಇದೇ ಜನವರಿಯಲ್ಲಿ ಚಾಮರಾಜನಗರದಲ್ಲಿ 8 ವರ್ಷದ ಬಾಲಕಿ ಶಾಲೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಇಂತಹ ಘಟನೆಗಳ ತನಿಖೆಗಾಗಿ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಶಾಲೆಗಳಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೃದಯ ತಪಾಸಣೆ ನಡೆಸಲು ಮತ್ತು ಸಿಪಿಆರ್ (CPR) ತರಬೇತಿ ನೀಡಲು ಮುಂದಾಗಿದೆ.

ಇದನ್ನೂ ಓದಿ: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ಸಹ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದು, ಪ್ರತಿದಿನ 30 ನಿಮಿಷಗಳ ನಡಿಗೆ, ಜಂಕ್ ಫುಡ್ ನಿಯಂತ್ರಣ ಮತ್ತು ಒತ್ತಡ ಮುಕ್ತ ಜೀವನ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಏತನ್ಮಧ್ಯೆ, ಅತಿಯಾದ ಬೆವರುವಿಕೆ, ಎದೆ ಉರಿ (ಗ್ಯಾಸ್ಟ್ರಿಕ್ ಎಂದು ಭ್ರಮಿಸಬೇಡಿ), ಎಡಗೈ ಅಥವಾ ದವಡೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version