ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತದಲ್ಲಿ ಮೃತಪಟ್ಟವರು ಯಾರೆಲ್ಲ? ಅಧಿಕೃತ ಮಾಹಿತಿ ಬಿಡುಗಡೆ, ಕೇರಳ-ಅಸ್ಸಾಂನವರೂ ಸಾವು – Kannada News | Bengaluru Bowring Hospital Wall Collapse: Official List of 7 Deceased Released; Kerala Tourists Among Victims
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತImage Credit source: tv9
ಬೆಂಗಳೂರು, ಏಪ್ರಿಲ್ 30: ಏಪ್ರಿಲ್ 29 ರ ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ (Bowring Hospital) ಕಾಂಪೌಂಡ್ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಮೃತಪಟ್ಟ ಏಳು ಜನರ ಅಧಿಕೃತ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಭೀಕರ ಘಟನೆಯಲ್ಲಿ ಬೆಂಗಳೂರು ಮೂಲದವರು ಮಾತ್ರವಲ್ಲದೆ, ಕೇರಳದ ಪ್ರವಾಸಿಗರು ಹಾಗೂ ಅಂತರರಾಜ್ಯ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ: ಮೃತಪಟ್ಟವರ ವಿವರ
ಬೌರಿಂಗ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ನಂತರ ಬಿಡುಗಡೆಯಾದ ಪಟ್ಟಿಯ ಪ್ರಕಾರ ಮೃತರ ವಿವರ ಹೀಗಿದೆ;
- ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52)
- ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39)
- ಕೆ.ಜೆ.ಹಳ್ಳಿಯ ಮುಸಾವಿರ್ ಬೇಗಂ (6)
- ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57)
- ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19)
- ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36)
ಏಪ್ರಿಲ್ 29ರಂದು ಸಂಜೆ ನಡೆದದ್ದೇನು?
ಏಪ್ರಿಲ್ 29ರ ಬುಧವಾರ ಸಂಜೆ ಸುಮಾರು 5 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ದಿಢೀರ್ ಗುಡುಗು ಸಹಿತ ಭಾರಿ ಮಳೆ ಮತ್ತು ಆಲಿಕಲ್ಲು ಮಳೆ ಆರಂಭವಾಯಿತು. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಪಾದಚಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಕೆಳಗೆ ಆಶ್ರಯ ಪಡೆದಿದ್ದರು. ಮಳೆಯ ತೀವ್ರತೆಗೆ ದುರ್ಬಲವಾಗಿದ್ದ ಗೋಡೆಯು ಏಕಾಏಕಿ ಕುಸಿದುಬಿದ್ದ ಪರಿಣಾಮ, ಗೋಡೆಯ ಕೆಳಗಿದ್ದವರು ಅವಶೇಷಗಳಡಿ ಸಿಲುಕಿಕೊಂಡರು. ಸ್ಥಳೀಯರು ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯ ನಡೆಸಿದರೂ, ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತ; ಕಾಂಪೌಂಡ್ ಕುಸಿದು 7 ಜನ ಸಾವು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕಾಂಪೌಂಡ್ ಬಳಿ ನಡೆಸುತ್ತಿದ್ದ ನಿರ್ಮಾಣ ಕಾಮಗಾರಿಯ ಮಣ್ಣಿನ ಒತ್ತಡದಿಂದ ಗೋಡೆ ಕುಸಿದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮದುವೆ ಮನೆಯ ಡಿಜೆ ಸದ್ದು ಕೇಳಿ ಕೋಳಿಗಳಿಗೆ ಹಾರ್ಟ್ ಅಟ್ಯಾಕ್,140 ಕೋಳಿಗಳು ಸಾವು, ಕೋಳಿ ಫಾರಂ ಮಾಲೀಕನ ಆಕ್ರೋಶ – Kannada News | Uttar Pradesh:Loud Wedding Music Blamed for Death of 140 Chickens
ಸುಲ್ತಾನಪುರ, ಏಪ್ರಿಲ್ 30: ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಏಪ್ರಿಲ್ 25 ರ ರಾತ್ರಿ ನಡೆದ ಮದುವೆ ಮೆರವಣಿಗೆಯ ಡಿಜೆ ಸದ್ದಿಗೆ ಕೋಳಿ(Chicken)ಗಳು ಸಾವನ್ನಪ್ಪಿವೆ ಎಂದು ಆರೋಪಿಸಿ ಫಾರಂ ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕುದ್ವಾರ ಪ್ರದೇಶದ ರಾಮ್ ಭದ್ರ ಪೂರ್ವದಿಂದ ಬಂದ ಬಬ್ಬನ್ ವಿಶ್ವಕರ್ಮ ಅವರ ಮಗಳ ವಿವಾಹ ಮೆರವಣಿಗೆಯು ಸಬೀರ್ ಅಲಿ ಅವರ ಕೋಳಿ ಸಾಕಣೆ ಕೇಂದ್ರದ ಮೂಲಕ ಸಾಗಿತ್ತು. ರಾತ್ರಿ 9:30 ರ ಸುಮಾರಿಗೆ ಡಿಜೆಯಲ್ಲಿ ನುಡಿಸಲಾದ ಹೆಚ್ಚಿನ ಡೆಸಿಬಲ್ ಶಬ್ದವು ಕೋಳಿಗಳಲ್ಲಿ ತೀವ್ರ ಭಯವನ್ನುಂಟುಮಾಡಿತು. ಈ ತೀವ್ರ ಶಬ್ದವನ್ನು ತಡೆದುಕೊಳ್ಳಲಾರದೆ ಸಬೀರ್ ಅಲಿ ಅವರ ಫಾರಂನಲ್ಲಿದ್ದ 140 ಕೋಳಿಗಳು ಮೃತಪಟ್ಟಿವೆ.
ಸಬೀರ್ ಅಲಿ ಅವರು ನೀಡಿದ ದೂರಿನ ಮೇರೆಗೆ, ಪೊಲೀಸರು ಮಂಗಳವಾರ ರಾತ್ರಿ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂಗೀತ ವ್ಯವಸ್ಥೆಯು ಅನುಮತಿಸಲಾದ ಶಬ್ದ ಮಿತಿಗಳನ್ನು ಮೀರಿತ್ತೇ? ಮತ್ತು ಕೋಳಿಗಳ ಸಾವಿಗೆ ಈ ಶಬ್ದದ ಮಟ್ಟವೇ ನೇರ ಕಾರಣವೇ? ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಬೊಮ್ಮನಹಳ್ಳಿಯಲ್ಲಿ ಉಚಿತ ಕೋಳಿ ವಿತರಣೆ ಮಾಡಿದ ಕಾಂಗ್ರೆಸ್ ನಾಯಕ : ಜನರ ಸಾಗರ!
ತಜ್ಞರ ಪ್ರಕಾರ, ಹೆಚ್ಚಿನ ತೀವ್ರತೆಯ ಧ್ವನಿ ತರಂಗಗಳು ಪಕ್ಷಿಗಳು ಮತ್ತು ಪ್ರಾಣಿಗಳಲ್ಲಿ ತೀವ್ರ ಒತ್ತಡದ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಇದು ಕೆಲವೊಮ್ಮೆ ಅವುಗಳಲ್ಲಿ ಹೃದಯ ಸ್ತಂಭನಕ್ಕೂ (Heart Arrest) ಕಾರಣವಾಗಬಹುದು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಿದೆ. ಶಬ್ದ ಎಷ್ಟು ತೀವ್ರವಾಗಿತ್ತೆಂದರೆ ಕೋಳಿಗಳು ಭಯಗೊಂಡು ಸತ್ತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಮೇರೆಗೆ ಪೊಲೀಸರು ಮಂಗಳವಾರ ರಾತ್ರಿ ಪಾರ್ಸಿಪುರದ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಡಿಜೆ ಅಥವಾ ಮದುವೆಯನ್ನು ಆಯೋಜಿಸಿದ್ದ ಕುಟುಂಬದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಳೆಗಾರರ ಪಾಲಿಗೆ ಹಣ್ಣಿನ ರಾಜ ಈಗ ಕಹಿ! ಮಾವಿನ ಹಣ್ಣಿನ ಬೆಲೆ ದಿಢೀರ್ ಬೆಲೆ ಕುಸಿತ, ರೈತರು ಕಂಗಾಲು – Kannada News | Gadag Mango Market Crisis: Prices Plummets from Rs 3000 to Rs 600 per Tray; Farmers Face Huge Lossess
ಮಾವಿನ ಹಣ್ಣಿನ ಬೆಲೆ ಕುಸಿತ (ಸಾಂದರ್ಭಿಕ ಚಿತ್ರ)Image Credit source: tv9
ಗದಗ, ಏಪ್ರಿಲ್ 30: ಹಣ್ಣಿನ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು (Mango) ಈ ಬಾರಿ ಬೆಳೆಗಾರರ ಪಾಲಿಗೆ ಕಹಿಯಾಗಿದೆ. ಒಂದು ಕಡೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ವಿದೇಶಕ್ಕೆ ರಫ್ತು ಸ್ಥಗಿತಗೊಂಡಿದ್ದರೆ, ಇನ್ನೊಂದು ಕಡೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ (Mango Price) ದಿಢೀರ್ ಕುಸಿತ ಕಂಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಗದಗ (Gadag) ಮಾರುಕಟ್ಟೆಗೆ ಬಂದ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಬೇಸಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಹೊಂದಿದ್ದ ಮಾವಿನ ಹಣ್ಣಿನ ದರ ಈಗ ಪಾತಾಳಕ್ಕೆ ಕುಸಿದಿದೆ. ಕಳೆದ ವಾರ ಒಂದು ಟ್ರೇ ಮಾವಿಗೆ 2,500 ರಿಂದ 3,000 ರೂಪಾಯಿ ದರವಿತ್ತು. ಆದರೆ ಈಗ ಕೇವಲ 600 ರಿಂದ 700 ರೂಪಾಯಿಗೆ ಕುಸಿದಿದೆ. ಮಾರುಕಟ್ಟೆಗೆ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದ ಸರಕು ಆಗಮಿಸಿರುವುದು ಮತ್ತು ವ್ಯಾಪಾರಿಗಳ ಬೇಡಿಕೆ ಕಡಿಮೆಯಾಗಿರುವುದು ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧದ ಎಫೆಕ್ಟ್‌ನಿಂದಾಗಿ ಅಂತರಾಷ್ಟ್ರೀಯ ರಫ್ತು ವ್ಯವಹಾರಕ್ಕೂ ಹೊಡೆತ ಬಿದ್ದಿದೆ.
ಸಾರಿಗೆ ವೆಚ್ಚವೂ ಸಿಗದೆ ಕಂಗಾಲಾದ ಬೆಳೆಗಾರರು
ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಮತ್ತು ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬೆಳೆಗಾರರು ಸಾವಿರಾರು ರೂಪಾಯಿ ಸಾರಿಗೆ ವೆಚ್ಚ ಭರಿಸಿ ಗದಗ ಮಾರುಕಟ್ಟೆಗೆ ಮಾವು ತಂದಿದ್ದಾರೆ. ‘ರಸಗೊಬ್ಬರ, ಕೂಲಿ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ ಇಲ್ಲಿ ಒಂದು ಟ್ರೇ ಮಾವಿಗೆ 600 ರೂಪಾಯಿ ಕೇಳುತ್ತಿದ್ದಾರೆ. ನಾವು ಬಂದ ಗಾಡಿ ಬಾಡಿಗೆಯೂ ಈ ಹಣದಲ್ಲಿ ಬರುವುದಿಲ್ಲ’ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ದರಕ್ಕೆ ಮಾರಾಟ ಮಾಡಲು ಇಷ್ಟವಿಲ್ಲದ ಹಲವು ರೈತರು ಮಾವನ್ನು ಮರಳಿ ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಸರ್ಕಾರದ ನೆರವಿಗೆ ಆಗ್ರಹ
ತೆರೆದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾವು ಮಾರಾಟವಾಗುತ್ತಿದ್ದರೂ, ಅದರ ಲಾಭ ಮಾತ್ರ ಬೆಳೆಗಾರರಿಗೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಮತ್ತು ರಫ್ತು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ರೈತ ಸಂಘಟನೆಗಳು ಮತ್ತು ಬೆಳೆಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗದಗದಲ್ಲಿ ಧೂಳೆಬ್ಬಿಸಿದ ಎತ್ತುಗಳ ಮಿಂಚಿನ ಓಟ ಹೇಗಿತ್ತು ನೋಡಿ!
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:04 am, Thu, 30 April 26
ಮೂವರು ಸ್ಟಾರ್ ನಟಿಯರ ಸಿನಿಮಾ ವಿಳಂಬಕ್ಕೆ ಪ್ರಿಯಾಂಕಾ ಕಾರಣ? ವಿವರಿಸಿದ ನಿರ್ದೇಶಕ – Kannada News | Jee Le Zaraa: Farhan Akhtar on Delays and Star Cast | Priyanka, Katrina, Alia Film Update
‘ಜೀ ಲೇ ಜರಾ’ ಸಿನಿಮಾ ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಟ ಫರ್ಹಾನ್ ಅಖ್ತರ್ ಅವರ ಕನಸಿನ ಪ್ರಾಜೆಕ್ಟ್ ಎನಿಸಿಕೊಂಡಿದೆ. ಈ ಚಿತ್ರ ಘೋಷಣೆಯಾದ ದಿನದಿಂದಲೂ ಚಿತ್ರರಂಗದಲ್ಲಿ ಈ ಸಿನಿಮಾ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಈ ಚಿತ್ರ ಗಮನ ಸೆಳೆಯಲು ಈ ಚಿತ್ರದ ತಾರಾಗಣ ಕೂಡ ಕಾರಣ ಆಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ರೋಡ್ ಟ್ರಿಪ್ ಸುತ್ತ ಸಾಗುತ್ತದೆ ಎನ್ನಲಾಗಿದೆ. ಈಗ ಈ ಸಿನಿಮಾ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗಲೇ ಫರ್ಹಾನ್ ಅಖ್ತರ್ (Farhan Akhtar) ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
‘ಜೀ ಲೇ ಜರಾ’ ಸಿನಿಮಾದ ಅತಿದೊಡ್ಡ ಆಕರ್ಷಣೆ ಎಂದರೆ ಅದರ ತಾರಾಗಣ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಗ್ಲಾಮರ್ ಗೊಂಬೆ ಕತ್ರಿನಾ ಕೈಫ್ ಮತ್ತು ಪ್ರತಿಭಾವಂತ ನಟಿ ಆಲಿಯಾ ಭಟ್ ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಬೇಕಿತ್ತು. ಬಾಲಿವುಡ್‌ನ ಮೂವರು ಟಾಪ್ ನಟಿಯರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಕೇವಲ ನಟಿಯರಷ್ಟೇ ಅಲ್ಲದೆ, ಚಿತ್ರದ ಹಿಂದಿರುವ ತಾಂತ್ರಿಕ ತಂಡವೂ ಅಷ್ಟೇ ಪ್ರಬಲವಾಗಿದೆ. ಈ ಹಿಂದೆ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಅಂತಹ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ ಫರ್ಹಾನ್ ಅಖ್ತರ್, ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಈ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಈ ತ್ರಿಮೂರ್ತಿಗಳ ಲೇಖನಿಯಲ್ಲಿ ಮೂಡಿಬರುವ ಸಿನಿಮಾಗಳು ಸಾಮಾನ್ಯವಾಗಿ ಸ್ನೇಹ ಮತ್ತು ಜೀವನದ ಮೌಲ್ಯಗಳನ್ನು ಸಾರುತ್ತವೆ. ಹಾಗಾಗಿ ‘ಜೀ ಲೇ ಜರಾ’ ಮೇಲೆ ನಿರೀಕ್ಷೆಗಳು ಇಮ್ಮಡಿಯಾಗಿವೆ.
ಈ ಬಗ್ಗೆ ಮಾತನಾಡಿರುವ ಫರ್ಹಾನ್ ಅಖ್ತರ್, ‘ ಪ್ರತಿದಿನ ಕೆಲಸಕ್ಕೆ ಉತ್ಸಾಹದಿಂದ ಹೋಗಬೇಕು ಎನ್ನುವುದು ನನ್ನ ಆಶಯ. ಹಿಂದೆ ಕೆಲವು ಸಿನಿಮಾಗಳನ್ನು ಕೇವಲ ಆ ಕ್ಷಣದ ಕುತೂಹಲಕ್ಕೆ ಒಪ್ಪಿಕೊಂಡಿದ್ದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಅವು ನನಗೆ ತೃಪ್ತಿ ನೀಡುತ್ತಿಲ್ಲ ಎಂಬುದು ಅರಿವಾಯಿತು. ಅಂತಹ ಸಂದರ್ಭಗಳಲ್ಲಿ ಆ ಕೆಲಸವನ್ನು ಪ್ರಾಮಾಣಿಕವಾಗಿ ಪೂರೈಸಿ, ಅದರಿಂದ ಪಾಠ ಕಲಿಯುವುದು ಮುಖ್ಯ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ ಅವರು.
‘ಕಳೆದ ನಾಲ್ಕುವರೆ ವರ್ಷಗಳಿಂದ ಈ ಚಿತ್ರವನ್ನು ಸೆಟ್ಟೇರಿಸಲು ನಾನು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಯಾವುದೋ ಒಂದು ಕಾರಣದಿಂದಾಗಿ ಕೆಲಸಗಳು ಮುಂದೂಡಲ್ಪಡುತ್ತಿವೆ. ಈ ಅಡೆತಡೆಗಳನ್ನು ಕಂಡರೆ, ಬ್ರಹ್ಮಾಂಡವು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದೆಯೇನೋ ಮತ್ತು ಈ ಸಿನಿಮಾ ಮಾಡಲು ನಾನು ಎಷ್ಟು ಹಂಬಲಿಸುತ್ತಿದ್ದೇನೆ ಎಂದು ನೋಡುತ್ತಿದೆ ಎಂದು ನನಗನ್ನಿಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ‘ಡಾನ್ 3’ ಸಿನಿಮಾ ವಿವಾದ: ಬಗ್ಗೆ ಕೊನೆಗೂ ಬಾಯ್ಬಿಟ್ಟ ಫರ್ಹಾನ್ ಅಖ್ತರ್
2021ರ ಆಗಸ್ಟ್‌ನಲ್ಲಿ ಅಧಿಕೃತವಾಗಿ ಘೋಷಣೆಯಾದ ಈ ಚಿತ್ರವನ್ನು ಎಕ್ಸೆಲ್ ಎಂಟರ್ಟೈನ್‌ಮೆಂಟ್ ಮತ್ತು ಟೈಗರ್ ಬೇಬಿ ಫಿಲ್ಮ್ಸ್ ಸಂಸ್ಥೆಗಳು ಅದ್ಧೂರಿಯಾಗಿ ನಿರ್ಮಿಸುತ್ತಿವೆ. ಡೇಟ್ಸ್ ಹೊಂದಾಣಿಕೆಯ ಸಮಸ್ಯೆ ಹಾಗೂ ನಟಿಯರ ವೈಯಕ್ತಿಕ ಬದ್ಧತೆಗಳಿಂದಾಗಿ ಚಿತ್ರದ ಕೆಲಸಗಳು ಸ್ವಲ್ಪ ವಿಳಂಬವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಆರಂಭಕ್ಕೂ ಮುನ್ನವೇ ಸಂಘರ್ಷ: ಬೀಳಕಹಳ್ಳಿ ಹೆಸರಿಗಾಗಿ ಸ್ಥಳೀಯರ ಪಟ್ಟು – Kannada News | Bengaluru Pink Line Metro Controversy: Residents Protest Against Naming Bilekahalli Station as IIMB
ನಮ್ಮ ಮೆಟ್ರೋ ಪಿಂಕ್ ಲೈನ್ ಐಐಎಂಬಿ ಸ್ಟೇಷನ್Image Credit source: tv9
ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ (Pink Line Metro) ಮಾರ್ಗವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲು ಸಿದ್ಧವಾಗುತ್ತಿದೆ. ಆದರೆ, ಈ ಮಾರ್ಗದ ನಿಲ್ದಾಣವೊಂದಕ್ಕೆ ನಾಮಕರಣ ಮಾಡುವ ವಿಚಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬೀಳಕಹಳ್ಳಿ ಏರಿಯಾದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಬಿಎಂಆರ್‌ಸಿಎಲ್ (BMRCL) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ಎಂದು ಹೆಸರಿಟ್ಟಿರುವುದು ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಸ್ಥಳೀಯತೆಯ ಅಸ್ಮಿತೆಗಾಗಿ ಹೋರಾಟ
ಬೀಳಕಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಮೆಟ್ರೋ ನಿಲ್ದಾಣವಿದ್ದರೂ, ಐಐಎಂಬಿ (IIMB) ಸಂಸ್ಥೆಯ ಹೆಸರನ್ನು ನಿಲ್ದಾಣಕ್ಕೆ ಇಟ್ಟಿರುವುದು ಸ್ಥಳೀಯರ ವಿರೋಧಕ್ಕೆ ಕಾರಣ. ನಮ್ಮ ಏರಿಯಾದ ಮೂಲ ಹೆಸರು ಬಿಳೇಕಹಳ್ಳಿ ಎಂದಿರುವಾಗ, ಐಐಎಂಬಿ ಹೆಸರೇಕೆ? ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಸ್ಥಳೀಯತೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ನಿಲ್ದಾಣದ ಹೆಸರನ್ನು ತಕ್ಷಣವೇ ‘ಬೀಳಕಹಳ್ಳಿ ಮೆಟ್ರೋ ನಿಲ್ದಾಣ’ ಎಂದು ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೆಸರು ಬದಲಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ನಿವಾಸಿಗಳಾದ ನಾಗರಾಜ್ ಮತ್ತು ನಾಗಭೂಷಣ್ ಎಚ್ಚರಿಕೆ ನೀಡಿದ್ದಾರೆ.
ಮೇ ತಿಂಗಳಲ್ಲಿ ಆರು ನಿಲ್ದಾಣಗಳು ಓಪನ್?
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ 21.25 ಕಿ.ಮೀ ವ್ಯಾಪ್ತಿಯ ಈ ಪಿಂಕ್ ಲೈನ್ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿವೆ. ಇದರಲ್ಲಿ 6 ಎಲಿವೇಟೆಡ್ ಮತ್ತು 12 ಅಂಡರ್ಗ್ರೌಂಡ್ ನಿಲ್ದಾಣಗಳಿವೆ. ಬರುವ ಮೇ ತಿಂಗಳಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಸಿದ್ಧತೆ ಮಾಡಿಕೊಂಡಿದೆ. ಉಳಿದ 13.76 ಕಿ.ಮೀ ಭೂಗತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವರ್ಷದ ಅಂತ್ಯಕ್ಕೆ ಪೂರ್ಣ ಮಾರ್ಗ ಉದ್ಘಾಟನೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ!
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶನಿ ಕಾಟ ನಿವಾರಣೆಗೆ ಅತ್ಯಂತ ಸರಳ ಮಾರ್ಗ ಯಾವುದು? ಇಲ್ಲಿದೆ ಮಾಹಿತಿ – Kannada News | Simple Daily Practice to Overcome Shani Dosha
ಜ್ಯೋತಿಷ್ಯದಲ್ಲಿ ಶನಿ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಕರ್ಮ ಫಲದಾತ ಎಂದು ಪರಿಗಣಿಸಲಾಗುತ್ತದೆ. ಸಾಡೆ ಸಾತಿ, ಅರ್ಧಾಷ್ಟಮ ಶನಿ, ಪಂಚಮ ಶನಿ, ಅಷ್ಟಮ ಶನಿ ಮುಂತಾದ ಅವಧಿಗಳಲ್ಲಿ ಶನಿ ಪ್ರಭಾವ ಹೆಚ್ಚಾಗಿ, ಕಷ್ಟಗಳು ಎದುರಾಗಬಹುದು. ಈ ಸಮಸ್ಯೆಗಳಿಂದ ಹೊರಬರಲು ಸಾಮಾನ್ಯವಾಗಿ ಎಳ್ಳು ದಾನ, ಎಳ್ಳೆಣ್ಣೆ ದೀಪ, ಕಪ್ಪು ವಸ್ತ್ರಗಳಂತಹ ಪರಿಹಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಡಾ. ಬಸವರಾಜ ಗುರೂಜಿ ಯಾವುದೇ ಖರ್ಚಿಲ್ಲದೆ, ಅತ್ಯಂತ ಸರಳವಾದ ಮತ್ತು ಪರಿಣಾಮಕಾರಿ ವಿಧಾನವನ್ನು ವಿವರಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಚಪ್ಪಲಿ ಹಾಕದೆ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸುಮಾರು ಅರ್ಧ ಘಂಟೆ ಕಾಲ ನಡೆಯುವ ಅಭ್ಯಾಸವು ಶನಿಯ ಅಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಇದರಿಂದ ವ್ಯಾಪಾರ ವೃದ್ಧಿ, ಉತ್ತಮ ಆರೋಗ್ಯ, ಅಪವಾದಗಳಿಂದ ಮುಕ್ತಿ, ಕಾನೂನು ವಿಷಯಗಳಲ್ಲಿ ಜಯ, ರಾಜಕೀಯ ಪ್ರಗತಿ ಹಾಗೂ ಕುಟುಂಬದಲ್ಲಿ ಸಾಮರಸ್ಯ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Horoscope Today:ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಜಾಗೃತಿ ಅಗತ್ಯ
ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಶುಕ್ಲ ಪಕ್ಷ, ವಸಂತ ಋತು, ಚತುರ್ದಶಿ, ಚಿತ್ತಾ ನಕ್ಷತ್ರ, ವಜ್ರ ಯೋಗ, ಗರ್ಜಕರಣದಿಂದ ಕೂಡಿದ ಏಪ್ರಿಲ್ 30, 2026ರ ಈ ದಿನದ ಗ್ರಹಗಳ ಸಂಚಾರವು ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಇಂದು ರವಿ ಮೇಷ ರಾಶಿಯಲ್ಲೂ, ಚಂದ್ರ ಕನ್ಯಾ ರಾಶಿಯ ಚಿತ್ತಾ ನಕ್ಷತ್ರದಲ್ಲೂ ಸಂಚರಿಸಲಿದ್ದಾರೆ. ಬುಧ ಗ್ರಹವು ಮೀನ ರಾಶಿಯಿಂದ ಬೆಳಗಿನ ಜಾವ 6:55ಕ್ಕೆ ಮೇಷ ರಾಶಿಗೆ ಪ್ರವೇಶಿಸಿ ಬುಧಾದಿತ್ಯ ಯೋಗವನ್ನು ಸೃಷ್ಟಿಸಲಿದೆ. ಈ ವಿಶೇಷ ಗ್ರಹಗತಿಗಳು ಪ್ರತಿ ರಾಶಿಯವರ ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯದ ಮೇಲೆ ತಮ್ಮ ಪ್ರಭಾವವನ್ನು ಬೀರಲಿವೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ನಿರ್ದಿಷ್ಟ ಸಲಹೆಗಳು, ಅದೃಷ್ಟದ ಬಣ್ಣ, ದಿಕ್ಕು ಮತ್ತು ಮಂತ್ರಗಳನ್ನು ಸಹ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಅಪರೂಪದ ಉಡುಗೊರೆ ಸಿಗಲಿದೆ – Kannada News | Horoscope April 30 Thursday 2026; Dina Rashi Bhavishya Today, Checkout the details here
ಮೇಷ ರಾಶಿ:
ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಅಜಾಗರೂಕತೆಯಿಂದ ಹಣವು ಹೋಗುವುದು. ಸಂಗಾತಿಯ ಜೊತೆ ಕಾಲವನ್ನು ಕಳೆದರೂ ಸಂತೋಷವಾಗಿ ಇಡಲಾಗದು. ತಂದೆಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇಹೋಗಬಹುದು. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಕಲಹ. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು. ಆಪ್ತವಾದ ವಿಚಾರಗಳ ಜೊತೆ ಹೆಚ್ಚು ಚರ್ಚೆ ಮಾಡುವಿರಿ.
ವೃಷಭ ರಾಶಿ:
ನಿಮಗೆ ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳಾಗುವುದು. ಮಾತಿಗೆ ಬೆಲೆಯು ಕಡಿಮೆಯಾದೀತು. ಯಾವುದೋ ಸಣ್ಣ ಜವಾಬ್ದಾರಿಯನ್ನು ಕೊಟ್ಟು ನಿಮ್ಮನ್ನು ಸುಮ್ಮನಿರಿಸುವರು. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ಇಂದು ಮನಸ್ಸನ್ನು ಏಕಾಗ್ರ ಮಾಡುವುದು ಕಷ್ಟವಾದೀತು. ತಾಯಿಗೆ ಪ್ರಿಯವಾದುದನ್ನು ಮಾಡುವಿರಿ. ನಿಮ್ಮ ಹೊಣೆಗಾರಿಕೆ ಕಡಿಮೆ ಆದಂತೆ ಅನ್ನಿಸುವುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ:
ಅನಿರೀಕ್ಷಿತವಾಗಿ ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ಮನೆಯ ಕೆಲಸವು ಬಹಳ ಆಯಾಸವನ್ನು ಕೊಡಬಹುದು. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಎಂದೋ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯನ್ನು ತೋರಿಸುವಿರಿ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ.
ಕರ್ಕಾಟಕ ರಾಶಿ:
ನೀವಿಂದು ನಿಮ್ಮ ಮನಸ್ಸಿಗೆ ಹಿಡಿಸಿದವರನ್ನು ಪ್ರೀತಿಸಲು ಆರಂಭಿಸುವಿರಿ. ಅವಸರದಲ್ಲಿ ಅನಾಹುತವಾದೀತು. ಸಮಾರಂಭದಲ್ಲಿ ದೂರದ ಬಂಧುಗಳ ಸಮಾಗಮ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿ ಅದನ್ನು ಕಳೆದುಕೊಳ್ಳುವ ಆಲೋಚನೆಮಾಡುವಿರಿ. ನಿಮ್ಮ ಸಹಾಯ ಪಡೆದವರಿಂದ ಪ್ರತ್ಯುಪಕಾರವಾಗಲಿದೆ. ಉಯಾರದೋ ವೈಯಕ್ತಿಕ ವಿಚಾರಗಳು ನಿಮ್ಮ ದಾಂಪತ್ಯದಲ್ಲಿ ಒಡಕು ತರಬಹುದು. ಅತಿಥಿಗಳ ಆಗಮನದಿಂದ ನಿಮಗೆ ಸಂತೋಷವಾಗಲಿದೆ.
ಸಿಂಹ ರಾಶಿ:
ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಲಿದೆ. ಧಾರ್ಮಿಕ ಮುಖಂಡರ ಜೊತೆ ಕಲಹ ಮಾಡಿಕೊಳ್ಳುವಿರಿ. ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವು ಆಗಲಿದೆ. ಮನೆಯನ್ನು ಇಂದು ಬದಲಾಯಿಸುವಿರಿ. ಪ್ರಾಮಾಣಿಕತೆಗೆ ಸಿಗುವ ಗೌರವ ಇಲ್ಲವೆನಿಸುವುದು. ಹೂಡಿಕೆಗೆ ನಿಮ್ಮದಾದ ತಂತ್ರವನ್ನು ಬಳಸುವಿರಿ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು.
ಕನ್ಯಾ ರಾಶಿ:
ಪಾಲುದಾರಿಕೆಯಲ್ಲಿ ಕೆಲವನ್ನು ಮುಚ್ಚಿಡುವಿರಿ. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗುವುದು. ಆಂತರಿಕ ಕಲಹವು ಬಹಿರಂಗವಾಗಲಿದೆ. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಟ್ಟುಬಿಡಿ. ಆಂತರಿಕ ಕಲಹವು ಇಂದು ಜಗಜ್ಜಾಹಿರವು ಆಗಬಹುದು. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಯಾರನ್ನೂ ದೂರದಿಂದಲೇ ನಿರ್ಣಯಿಸುವುದು ಬೇಡ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು.
ತುಲಾ ರಾಶಿ:
ನಿಮ್ಮೊಳಗೆ ಭವಿಷ್ಯದ ಹತ್ತಾರು ದ್ವಂದ್ವಗಳು ಇರಲಿವೆ. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಸಾಲ ಕೊಡುವಾಗ ಸ್ವಪ್ರತಿಷ್ಠೆಯನ್ನು ತೋರಿಸುವಿರಿ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಹೆಚ್ಚು ಪಡೆದಷ್ಟು ಉತ್ತಮವೇ. ಶ್ರಮದ ಕೆಲಸವು ಆಯಾಸವನ್ನು ತರಲಿದೆ. ಆಸೆಯಿಂದ ದುಃಖಿಸ ಏಕಾಗುವುದು. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ.
ವೃಶ್ಚಿಕ ರಾಶಿ:
ನ್ಯಾಯಾಲಯದ ತೀರ್ಪಿನಿಂದ ಅದರ ಬಗ್ಗೆ ಗೌರವ ಕಡಿಮೆಯಾಗಬಹುದು. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಯಾರನ್ನಾದರೂ ಹೇಳಬಾರದ್ದನ್ನು ಬಾಯ್ತಪ್ಪಿನಿಂದ ಹೇಳಿ ಬೇಸರ ಮಾಡಿಸುವಿರಿ. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ವಹಿಸಿಕೊಂಡ ಕಾರ್ಯವನ್ನು ಪೂರ್ಣ ಮಾಡಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ.
ಧನು ರಾಶಿ:
ಜನರನ್ನು ನಿರ್ವಹಿಸುವ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಗಲಿದೆ. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಮುಖಂಡರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಉದ್ಯಮಿಗಳ ಜೊತೆ ಇಂದು ಕಾಲ ಕಳೆಯುವಿರಿ. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸಲಾರಿರಿ.
ಮಕರ ರಾಶಿ:
ಭೂಮಿಯ ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಭತ್ಯೆಯು ಸಿಗಬಹುದಾಗಿದೆ. ಮನೆಯ ಸದಸ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ನಿಮ್ಮ ಕಾರ್ಯದಲ್ಲಿ ಬರುವ ತೊಂದರೆಯನ್ನು ದೂರಮಾಡಲು ಶಕ್ತರಾಗಿದ್ದೀರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು. ಯಾರಾದರೂ ಚುಚ್ಚಿ ಮಾತನಾಡಬಹುದು. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ.
ಕುಂಭ ರಾಶಿ:
ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ವಾಹನ ಸಂಚಾರದಿಂದ ತೊಂದರೆ. ಆತುರದಿಂದ ಎಲ್ಲಿರಿಗೂ ಹೋಗುವುದು ಬೇಡ. ಕಲಾವಿದರು ಉತ್ತಮವಾದ ಅವಕಾಶವನ್ನು ಪಡೆಯಲಿದ್ದಾರೆ. ಮಾತು ವಿವಾದವಾಗಿ ದ್ವೇಷದಲ್ಲಿ ಕೊನೆಗೊಳ್ಳಬಹುದು. ಕಾರ್ಯದಲ್ಲಿ ಸಾವಧಾನತೆ ಇರಲಿದೆ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ ಕಡೆ ಗಮನ ಇರುವುದು. ಅಹಂಕಾರವು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಮೀನ ರಾಶಿ:
ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲತೆ ಇರಲಿದೆ. ಆಪ್ತರ ಭೇಟಿಯಾಗಬಹುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ನೌಕರರಿಗೆ ನೀವು ಕೊಡುವ ವ್ಯವಸ್ಥೆಯಿಂದ ಸಂತೋಷವಾಗಲಿದೆ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವಜ್ರ, ಕರಣ : ವಣಿಜ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:56 – 15:31, ಯಮಗಂಡ ಕಾಲ 06:03 – 07:38, ಗುಳಿಕ ಕಾಲ 09:13 – 10:47
-ಲೋಹಿತ ಹೆಬ್ಬಾರ್ – 8762924271 (what’s app only)
MI vs SRH: ಅತ್ಯಧಿಕ ಮೊತ್ತ ಕಲೆಹಾಕಿಯೂ ಸೋತ ಮುಂಬೈ ಇಂಡಿಯನ್ಸ್ – Kannada News | IPL 2026: SRH Chases Record 244 vs MI in Thriller; Mumbai Suffers 6th Loss
ಐಪಿಎಲ್ 2026 ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಈ ಅವೃತ್ತಿಯ ಅತ್ಯಧಿಕ ಮೊತ್ತ ದಾಖಲಿಸಿಯೂ ಹೀನಾಯವಾಗಿ ಸೋಲುಂಡಿತು. ಇದು ಈ ಆವೃತ್ತಿಯಲ್ಲಿ ಮುಂಬೈ ತಂಡದ 6ನೇ ಸೋಲಾದರೆ, ಇತ್ತ ಸನ್‌ರೈಸರ್ಸ್ 6ನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 244 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. 244 ರನ್ ಗುರಿ ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್, ಮುಂಬೈ ವಿರುದ್ಧ ಅತಿದೊಡ್ಡ ಗುರಿ ಬೆನ್ನಟ್ಟಿದ ತಂಡವೆಂಬ ದಾಖಲೆಯನ್ನು ಬರೆಯಿತು.
