ಕರ್ನಾಟಕ ಹವಾಮಾನ ವರದಿ: ಮುಂದಿನ 4 ದಿನಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆಯ ಮುನ್ಸೂಚನೆ! – Kannada News | Karnataka Rain Update: Rain and Thunderstorm Alerts for Bengaluru and Coastal Regions

ಮುಂದಿನ 4 ದಿನಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆಯ ಮುನ್ಸೂಚನೆ!

ಬೆಂಗಳೂರು, ಮೇ 12: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ (Weather) ತಿಳಿಸಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆ ವಹಿಸುವಂತೆ ರಾಜ್ಯ ವಿಪತತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಮುಖ್ಯಾಂಶಗಳು

  • ಮುಂದಿನ 4 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
  • ರಾಜ್ಯದಲ್ಲಿ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆ?

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ.ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಗರಿಷ್ಠ ತಾಪಮಾನ 33°C ದಾಟುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಮುಂದುವರಿಯಲಿದ್ದರೂ, ಕೆಲವು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34.8°C ಮತ್ತು ಕನಿಷ್ಠ ತಾಪಮಾನ 23.8°C ಆಸುಪಾಸಿನಲ್ಲಿರಲಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್​

ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. 64.5 ಮಿ.ಮೀ ಇಂದ 115.5 ಮಿ.ಮೀ ಮಳೆಯಾಗಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಈ ಎರಡು ದಿನ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ದೇಶದ ಎರಡನೇ ಶ್ರೀಮಂತ ಮುಖ್ಯಮಂತ್ರಿ; ಮೊದಲ ರಿಚ್ ಸಿಎಂ ಯಾರು? – Kannada News | Thalapathi Vijay’s Rs 648 Cr Net Worth: India’s Second Richest CM and Tamil Nadu MLA

ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಆಸ್ತಿ 648 ಕೋಟಿ ರೂಪಾಯಿ. ಅವರು ತಮಿಳುನಾಡಿನ ಎರಡನೇ ಶ್ರೀಮಂತ ಶಾಸಕರಾಗಿದ್ದಾರೆ. ದೇಶದ ಎರಡನೇ ಶ್ರೀಮಂತ ಮುಖ್ಯಮಂತ್ರಿಯೂ ಆಗಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊದಲ ಸ್ಥಾನದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಅವರ ಆಸ್ತಿ 931 ಕೋಟಿ ರೂ.ಗಳಿಗೂ ಹೆಚ್ಚು.

ತಮಿಳುನಾಡಿನ ಅತ್ಯಂತ ಶ್ರೀಮಂತ ಶಾಸಕಿ ಲಿಮಾ ರೋಸ್ ಮಾರ್ಟಿನ್. ಅವರ ಆಸ್ತಿ 5,863 ಕೋಟಿ ರೂ. ಲಿಮಾ ರೋಸ್ ಮಾರ್ಟಿನ್ ಲಾಲ್ಗುಡಿಯ ಎಐಎಡಿಎಂಕೆ ಶಾಸಕಿ. ಎರಡನೇ ಸ್ಥಾನದಲ್ಲಿರುವ ಶಾಸಕ ದಳಪತಿ ವಿಜಯ್. ಮೂರನೇ ಸ್ಥಾನದಲ್ಲಿರುವ ವಿಜಯ್ ಅವರ ಟಿವಿಕೆ ಪಕ್ಷದ ಶಾಸಕ ಅಧವ್ ಅರ್ಜುನ್, ಅವರ ಆಸ್ತಿ 534 ಕೋಟಿ ರೂ.

ವಿಜಯ್ ಬಳಿ ಏನಿದೆ?

ಚುನಾವಣಾ ಅಫಿಡವಿಟ್ ಪ್ರಕಾರ, ವಿಜಯ್ ಒಟ್ಟು 648.85 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ. ಇದರಲ್ಲಿ 426.20 ಕೋಟಿ ರೂಪಾಯಿಗಳ ಚರ ಆಸ್ತಿಗಳು ಮತ್ತು 222.65 ಕೋಟಿ ರೂಪಾಯಿಗಳ ಸ್ಥಿರ ಆಸ್ತಿಗಳು ಸೇರಿವೆ. ವಿಜಯ್ 7.63 ಕೋಟಿ ರೂಪಾಯಿಗಳ ಸಾಲವನ್ನು ಸಹ ಹೊಂದಿದ್ದಾರೆ.

ವಿಜಯ್ ಬ್ಯಾಂಕಿನಲ್ಲಿ 330.48 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಅವರ ಬಳಿ 19.37 ಲಕ್ಷ ರೂ. ಮೌಲ್ಯದ ಷೇರುಗಳಿವೆ. ಅವರು ಸಾಕಷ್ಟು ಸಾಲ ನೀಡಿದ್ದಾರೆ. ಇಷ್ಟೇ ಅಲ್ಲ, ವಿಜಯ್ ಬಳಿ 13.52 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 7 ಕಾರುಗಳಿವೆ. ಅವರ ಸಂಗ್ರಹದಲ್ಲಿರುವ ಅತ್ಯಂತ ದುಬಾರಿ ಕಾರು ಟಾಟಾ ಕ್ಯಾರವಾನ್ ಮತ್ತು ಅದರ ಬೆಲೆ 6 ಕೋಟಿ ರೂ.ಗಳಿಗಿಂತ ಹೆಚ್ಚು. ಅವರ ಬಳಿ 6.47 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿವೆ.

ಇದನ್ನೂ ಓದಿ: ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

ವಿಜಯ್ ಅವರ ಬಳಿ 222 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸ್ಥಿರ ಆಸ್ತಿ ಇದೆ. ಇದರಲ್ಲಿ 117 ಕೋಟಿ ರೂಪಾಯಿ ಮೌಲ್ಯದ ಬಂಗಲೆಗಳು ಮಾತ್ರ ಅವರ ಹೆಸರಿನಲ್ಲಿವೆ. ವಿಜಯ್ ಅವರ ಹೆಸರಿನಲ್ಲಿ 10 ಬಂಗಲೆಗಳು ಮತ್ತು ಅವರ ಪತ್ನಿಯ ಹೆಸರಿನಲ್ಲಿ 1 ಬಂಗಲೆ ಇದೆ. ಇದರ ಹೊರತಾಗಿ, ಅವರು 82.81 ಕೋಟಿ ರೂಪಾಯಿ ಮೌಲ್ಯದ ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ. ಅವರು 20 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿ ಮತ್ತು 22 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಹೊಂದಿದ್ದಾರೆ.

ಚಂದ್ರಬಾಬು ನಾಯ್ಡು ಅತ್ಯಂತ ಶ್ರೀಮಂತ ಮುಖ್ಯಮಂತ್ರಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ಅವರ ಆಸ್ತಿ 931.83 ಕೋಟಿ ರೂ. ಚಂದ್ರಬಾಬು ನಾಯ್ಡು ಅವರ ಬಳಿ 10.38 ಕೋಟಿ ರೂ. ಸಾಲವಿದೆ. ನಾಯ್ಡು ಅವರ ಬಳಿ 810.42 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 121.41 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿಮ್ ಡೇವಿಡ್​​ಗೆ ದುಬಾರಿ ಆಯ್ತು ಅಶ್ಲೀಲ ಸನ್ನೆ; ಬ್ಯಾನ್ ಭೀತಿ – Kannada News | Tim David Fined 30 for Obscene Gesture in RCB vs MI Match; Faces Ban Threat

ಮೇ 10ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿ ಕೇವಲ ಆಟದಿಂದ ಮಾತ್ರವಲ್ಲದೆ ವಿವಾದದಿಂದಲೂ ಸುದ್ದಿಯಲ್ಲಿದೆ. ರಾಯಪುರದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ನಡೆದುಕೊಂಡ ರೀತಿ ಚರ್ಚೆಗೆ ಕಾರಣ ಆಗಿತ್ತು. ಅವರು ಓಪನ್ ಆಗಿ ಮುಂಬೈ ಆಟಗಾರರಿಗೆ ಮಧ್ಯ ಬೆಟ್ಟು ತೋರಿಸಿದ್ದರು. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.

ಪಂದ್ಯದ ಕೊನೆಯ ಎಸೆತದವರೆಗೂ ಸಾಗಿದ ಈ ರೋಚಕ ಹೋರಾಟದಲ್ಲಿ ಆರ್‌ಸಿಬಿ ಜಯಭೇರಿ ಬಾರಿಸಿತು. ಜಯದ ಸಂಭ್ರಮದಲ್ಲಿದ್ದಾಗ ಟಿಮ್ ಡೇವಿಡ್ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದರು. ಅವರು ಪಂದ್ಯ ಮುಗಿದ ನಂತರ ಅಸಭ್ಯವಾಗಿ ‘ಮಧ್ಯದ ಬೆರಳು’ ತೋರಿಸುವ ಸನ್ನೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಐಪಿಎಲ್ ನಿಯಮ 2.6 ರ ಅಡಿಯಲ್ಲಿ ‘ಅಸಭ್ಯ, ಆಕ್ಷೇಪಾರ್ಹ ಅಥವಾ ಅವಮಾನಕರ’ ವರ್ತನೆ ಎಂದು ಪರಿಗಣಿಸಲಾಗಿದೆ.

ದಂಡದ ವಿವರ:

ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ ಅಮಿತ್ ಶರ್ಮಾ, ಟಿಮ್ ಡೇವಿಡ್ ಅವರಿಗೆ ದಂಡ ವಿಧಿಸಿದ್ದಾರೆ. ಪಂದ್ಯದ ಸಂಭಾವನೆಯಲ್ಲಿ ಶೇ. 30ರಷ್ಟು ದಂಡ ವಿಧಿಸಿದ್ದು ಅಲ್ಲದೆ, ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ದಂಡಕ್ಕೆ ಸಮ್ಮತಿಸಿದ್ದಾರೆ. ಟಿಮ್ ಡೇವಿಡ್ ಅವರಿಗೆ ಈಗ 2 ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ. ಅಂದರೆ, ಅವರು ಮುಂದಿನ ಪಂದ್ಯಗಳಲ್ಲಿ ಇನ್ನು ಕೇವಲ 2 ಪಾಯಿಂಟ್ಸ್ ಪಡೆದರೂ ಒಂದು ಪಂದ್ಯದ ನಿಷೇಧ ಎದುರಿಸಬೇಕಾಗುತ್ತದೆ.

ಪಂದ್ಯದ ಹೈಲೈಟ್ಸ್:

ಈ ಪಂದ್ಯವು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಸಿಲುಕಿ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಲ್ಪ ಮೊತ್ತಕ್ಕೆ ಔಟಾದರು. ಆದರೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ಅವರ ಹೋರಾಟದಿಂದ ಮುಂಬೈ 166 ರನ್ ಗಳಿಸಿತು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್

ಗುರಿ ಬೆನ್ನಟ್ಟಿದ ಆರ್‌ಸಿಬಿ ಕೂಡ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದಾಗ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ ಚಚ್ಚಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಕೊನೆಯ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಅವರ ಸಿಕ್ಸರ್ ಮತ್ತು ರಸಿಖ್ ಸಲಾಮ್ ಅವರ ಸಮಯೋಚಿತ ಆಟದಿಂದ ಆರ್‌ಸಿಬಿ ಗೆಲುವಿನ ನಗೆ ಬೀರಿತು. ಗೆಲುವಿನ ನಂತರದ ಟಿಮ್ ಡೇವಿಡ್ ಮಾಡಿದ ಈ ಸನ್ನೆ ಈಗ ಅವರಿಗೆ ಆರ್ಥಿಕವಾಗಿ ನಷ್ಟ ತಂದೊಡ್ಡಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಎಣ್ಣೆ’ ಪ್ರಿಯರ ಕಿಕ್ ಏರಿಸಿದ ಸರ್ಕಾರ! ಇನ್ನು ಶ್ರೀಮಂತರ ಮದ್ಯ ಅಗ್ಗ, ಬಡವರ ಮದಿರೆ ದುಬಾರಿ – Kannada News | Karnataka Implements New Excise Policy from May 11: Cheap Liquor Prices to Rise, Premium Brands Get Cheaper

ಬೆಂಗಳೂರು, ಮೇ 12: ಕರ್ನಾಟಕ (Karnataka) ಸರ್ಕಾರವು ಬಹುದಿನಗಳಿಂದ ಚರ್ಚೆಯಲ್ಲಿದ್ದ ಹೊಸ ಅಬಕಾರಿ ನೀತಿಯನ್ನು (New Excise Policy) ಸೋಮವಾರದಿಂದ (ಮೇ 11) ಅಧಿಕೃತವಾಗಿ ಜಾರಿಗೆ ತಂದಿದೆ. ದಶಕಗಳ ಹಳೆಯದಾದ ಅಬಕಾರಿ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಮೂಲಕ, ಈ ಮಾದರಿಯ ಅಬಕಾರಿ ನೀತಿ ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಆದರೆ, ಈ ಬದಲಾವಣೆಯಿಂದ ಜನಸಾಮಾನ್ಯರು ಬಳಸುವ ಕಡಿಮೆ ಬೆಲೆಯ ಮದ್ಯದ ದರವನ್ನು ಏರಿಕೆ ಮಾಡಲಿದ್ದು, ಪ್ರೀಮಿಯಂ ಅಥವಾ ವಿದೇಶಿ ಬ್ರಾಂಡ್‌ಗಳ ಮದ್ಯದ ಬೆಲೆ ಇಳಿಕೆಯಾಗಲಿದೆ.

ಮುಖ್ಯಾಂಶಗಳು

  • 16 ಸ್ಲ್ಯಾಬ್‌ಗಳಿದ್ದ ಅಬಕಾರಿ ತೆರಿಗೆ ವ್ಯವಸ್ಥೆಯನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಿದ ಸರ್ಕಾರ.
  • ಸಾಮಾನ್ಯ ಮದ್ಯದ ಬೆಲೆ (180 ಮಿ.ಲೀ) 20-30% ರಷ್ಟು ಏರಿಕೆ; ಪ್ರೀಮಿಯಂ ಬ್ರಾಂಡ್‌ಗಳ ಬೆಲೆ 16-20% ರಷ್ಟು ಇಳಿಕೆ.
  • ಸ್ಥಳೀಯ ಮದ್ಯ ತಯಾರಕರಿಗಿಂತ ಬಹುರಾಷ್ಟ್ರೀಯ ಕಂಪನಿಗಳಿಗೆ (MNC) ಹೆಚ್ಚಿನ ಲಾಭವಾಗುವ ಆತಂಕ.

ಬಜೆಟ್ ಮದ್ಯಕ್ಕೆ ಬರೆ

ಹೊಸ ನೀತಿಯಿಂದಾಗಿ ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ವಿಸ್ಕಿ, ರಮ್, ಬ್ರಾಂಡಿ ಮತ್ತು ವೋಡ್ಕಾಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ. ವಿಶೇಷವಾಗಿ 180 ಮಿ.ಲೀ (ಕ್ವಾರ್ಟರ್) ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳ ಬೆಲೆ ಶೇ 20 ರಿಂದ 30 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ (KBDA) ಪ್ರಕಾರ, ಮೊದಲ ಐದು ಸ್ಲ್ಯಾಬ್‌ಗಳಲ್ಲಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು (AED) ಶೇ 20-30 ರಷ್ಟು ಹೆಚ್ಚಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಕಳೆದ ವರ್ಷ 63 ರೂಪಾಯಿ ಇದ್ದ ಕ್ವಾರ್ಟರ್ ಬೆಲೆ, ಇತ್ತೀಚಿನ ಏರಿಕೆಯ ನಂತರ 80 ರೂಪಾಯಿಗೆ ತಲುಪಿತ್ತು. ಈಗ ಹೊಸ ನೀತಿಯಿಂದಾಗಿ ಅದು 105 ರೂಪಾಯಿಗೆ ಏರಿಕೆಯಾಗುವ ಲಕ್ಷಣಗಳಿವೆ.

ಶ್ರೀಮಂತರ ಮದ್ಯ ಅಗ್ಗ

ಇನ್ನೊಂದೆಡೆ, ಶ್ರೀಮಂತರು ಬಳಸುವ ಅಥವಾ ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್‌ಗಳಾದ ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್‌ನಂತಹ ಕಂಪನಿಗಳ ಮದ್ಯದ ಬೆಲೆ ಶೇ 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್‌ನಲ್ಲಿ ಬರುವ ಈ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಸ್ಥಳೀಯ ಕಂಪನಿಗಳಿಗೆ ಸಂಕಷ್ಟ

ಸರ್ಕಾರದ ಈ ಕ್ರಮವು ಸ್ಥಳೀಯ ಮದ್ಯ ತಯಾರಿಕಾ ಘಟಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕೆಬಿಡಿಎ ಆತಂಕ ವ್ಯಕ್ತಪಡಿಸಿದೆ. ದೊಡ್ಡ ಕಂಪನಿಗಳು ಬೆಲೆ ಏರಿಳಿತವನ್ನು ಸರಿದೂಗಿಸಿಕೊಳ್ಳಬಲ್ಲವು. ಆದರೆ ಬಜೆಟ್ ಮದ್ಯವನ್ನೇ ನೆಚ್ಚಿಕೊಂಡಿರುವ ಸಣ್ಣ ಪ್ರಾದೇಶಿಕ ಘಟಕಗಳು ವ್ಯವಹಾರ ಕುಸಿತದ ಭೀತಿಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಬಹುದು ಎಂದು ಸಂಘದ ಸದಸ್ಯರು ದೂರಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ 5ನೇ ಬಾರಿ ಶಾಕ್: ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ!

ರಾಜ್ಯದ ಅಬಕಾರಿ ಆದಾಯಕ್ಕೆ ಶೇ 70-75 ರಷ್ಟು ಕೊಡುಗೆ ನೀಡುವ ಸಾಮಾನ್ಯ ಮದ್ಯದ ಮೇಲೆಯೇ ಹೆಚ್ಚಿನ ತೆರಿಗೆ ಹೊರೆ ಬಿದ್ದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 12, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷ ದಶಮಿ, ಪೂರ್ವಾಭಾದ್ರ ನಕ್ಷತ್ರ, ವೈದೃತಿ ಯೋಗ ಮತ್ತು ಭದ್ರಕರಣವನ್ನು ಒಳಗೊಂಡಿದೆ. ರಾಹುಕಾಲ ಮಧ್ಯಾಹ್ನ 3:25 ರಿಂದ 5:00ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭ ಕಾಲಗಳು ಮಧ್ಯಾಹ್ನ 12:16 ರಿಂದ 1:51ರ ವರೆಗೆ ಇರಲಿವೆ ಎಂದು ಗುರೂಜಿ ತಿಳಿಸಿದ್ದಾರೆ.

 

 

Source link

Daily Devotional: ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ? – Kannada News | Santana Dosha: The Impact of Postponing Children According to Astrology

ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಆಧುನಿಕ ಜೀವನಶೈಲಿಯಲ್ಲಿ, ಅನೇಕ ಜನರು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಾಗಿ ಗರ್ಭ ಧಾರಣೆಯನ್ನು ಮುಂದೂಡುತ್ತಾರೆ. ಆದರೆ, ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಮಕ್ಕಳನ್ನು ಸರಿಯಾದ ಸಮಯದಲ್ಲಿ ಪಡೆಯದಿದ್ದರೆ, ವೃದ್ಧಾಪ್ಯದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು.

ಜಾತಕದಲ್ಲಿ ಸಂತಾನ ಸ್ಥಾನವಾದ ಐದನೇ ಮನೆಯನ್ನು ನಿರ್ಲಕ್ಷಿಸಿದಾಗ, ಗುರು ಗ್ರಹದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದು ದಂಪತಿಗಳಿಬ್ಬರ ಮೇಲೂ ಪರಿಣಾಮ ಬೀರಿ ಕಷ್ಟಗಳನ್ನು ತರಬಹುದು. ಸಂತಾನ ವಿಳಂಬದಿಂದಾಗಿ ಸರ್ಪ ಶಾಪ ಮತ್ತು ಸಂತಾನ ದೋಷಗಳು ಕಾಡುತ್ತವೆ. ಶನಿಯು ಐದನೇ ಮನೆಯನ್ನು ದೃಷ್ಟಿಸಿದಾಗ ಶಾಶ್ವತವಾಗಿ ಸಂತಾನವಿಲ್ಲದ ಪರಿಸ್ಥಿತಿ ಉಂಟಾಗಬಹುದು. ಗರ್ಭಪಾತವು ಮಂಗಳ ಗ್ರಹದ ಕೋಪಕ್ಕೆ ಕಾರಣವಾಗಿ ಪಿತೃ ದೋಷಗಳನ್ನು ತರಬಹುದು. ಆದ್ದರಿಂದ, ಸರಿಯಾದ ಸಮಯದಲ್ಲಿ ಸಂತಾನವನ್ನು ಹೊಂದುವುದು ದೈವಾನುಗ್ರಹ ಮತ್ತು ಜೀವನದ ಪರಿಪೂರ್ಣತೆಗೆ ಅತ್ಯಗತ್ಯ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

 

 

Source link

‘ದೃಶ್ಯಂ 3’ ಚಿತ್ರದಲ್ಲಿ ಭಾರೀ ಬದಲಾವಣೆ; ಕನ್ನಡ ವರ್ಷನ್ ಕಥೆ ಏನು? – Kannada News | Drishyam 3: Major Changes What’s the Story for Kannada, Hindi and Malayalam Versions?

‘ದೃಶ್ಯಂ’ ಚಿತ್ರದ ಸರಣಿಗೆ ಭಾರತ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಈಗ ಎಲ್ಲರ ಕಣ್ಣು ‘ದೃಶ್ಯಂ 3’ ಮೇಲಿದೆ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಪನೋರಮಾ ಸ್ಟುಡಿಯೋಸ್‌ನ ಅಭಿಷೇಕ್ ಪಾಠಕ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯು ಮೋಹನ್‌ಲಾಲ್ ಅವರ ಮಲಯಾಳಂ ಆವೃತ್ತಿಗಿಂತ ಭಿನ್ನವಾಗಿರಲಿದೆ ಎಂದು ರಿವೀಲ್ ಮಾಡಿದ್ದಾರೆ. ಈ ಚಿತ್ರವನ್ನು ಅವರು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಹಿಂದಿ ‘ದೃಶ್ಯಂ 3’ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆಯಂತೆ. ಸಣ್ಣಪುಟ್ಟ ಪ್ಯಾಚ್‌ವರ್ಕ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರವನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಮಲಯಾಳಂನಲ್ಲಿ ಮೇ 21ಕ್ಕೆ ತೆರೆಗೆ ಬರಲಿದೆ. ವಿಶೇಷವೆಂದರೆ, ಮಲಯಾಳಂ ಆವೃತ್ತಿಯು ಕೌಟುಂಬಿಕ ಡ್ರಾಮಾಕ್ಕೆ ಹೆಚ್ಚು ಒತ್ತು ನೀಡಿದರೆ, ಹಿಂದಿ ಆವೃತ್ತಿಯನ್ನು ಪಕ್ಕಾ ‘ಫ್ಯಾಮಿಲಿ ಥ್ರಿಲ್ಲರ್’ ಆಗಿ ರೂಪಿಸಲಾಗಿದೆ. ಹಿಂದಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಯ ಹಾದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಕ್ಲೈಮ್ಯಾಕ್ಸ್ ಕೂಡ ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ

‘ದೃಶ್ಯಂ’ ಅಂತಹ ಸಿನಿಮಾಗಳನ್ನು ಬರೆಯುವಾಗ ಮೊದಲು ಕ್ಲೈಮ್ಯಾಕ್ಸ್ ಸಿದ್ಧಪಡಿಸಿಕೊಳ್ಳಬೇಕು ಎಂದು ಅಭಿಷೇಕ್ ಹೇಳಿದ್ದಾರೆ. ಜೀತು ಜೋಸೆಫ್ ಅವರ ಮಲಯಾಳಂ ಡ್ರಾಫ್ಟ್ ಮತ್ತು ತಮ್ಮ ಹಿಂದಿ ಡ್ರಾಫ್ಟ್ ನಡುವೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತಹ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡದ ‘ದೃಶ್ಯ 3’ ಕಥೆ ಏನು?:

ಹಿಂದಿ ಮತ್ತು ಮಲಯಾಳಂನಲ್ಲಿ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದರೆ, ಕನ್ನಡದ ಪ್ರೇಕ್ಷಕರಿಗೂ ಒಂದು ಸಿಹಿ ಸುದ್ದಿಯಿದೆ. ಕನ್ನಡದಲ್ಲೂ ‘ದೃಶ್ಯ 3’ ಬರಲಿದೆ. ಆದರೆ, ಅದು ಸದ್ಯಕ್ಕಂತೂ ಸೆಟ್ಟೇರುವುದಿಲ್ಲ. ಮೂಲಗಳ ಪ್ರಕಾರ, ಕನ್ನಡ ಆವೃತ್ತಿಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡದೆ, ಮಲಯಾಳಂನ ಮೂಲ ಕಥೆಯನ್ನೇ ಅನುಸರಿಸುವ ಸಾಧ್ಯತೆ ಹೆಚ್ಚಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಸ್ವಲ್ಪ ಸಮಯ ಕಾಯಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಬೆಂಗಳೂರು, ಮೇ 12: ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾದ ಮಾವು ಮತ್ತು ಹಲಸು ಮೇಳ ಜನರನ್ನು ಸೆಳೆಯುತ್ತಿದೆ. ಮೇ 9 ರಂದು ಆರಂಭಗೊಂಡು ಮೇ 18 ರವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ಮಾವು ಪ್ರಿಯರು ವಿವಿಧ ತಳಿಯ ಮಾವಿನ ಹಣ್ಣುಗಳಾದ ಮಲ್ಗೋವಾ, ನೀಲಂ, ತೂತಾಪುರಿ, ರಸಪುರಿ ಮತ್ತು ಹಲಸಿನ ಹಣ್ಣುಗಳಿಗೆ ಮುಗಿಬೀಳುತ್ತಿದ್ದಾರೆ. ಮಾವಿನಿಂದ ತಯಾರಿಸಿದ ಐಸ್ ಕ್ರೀಂ, ಜ್ಯೂಸ್, ಹಲ್ವಾ ಸೇರಿದಂತೆ ಹಲವು ಖಾದ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಭಾಗಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುತ್ತಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೂಡ ಸೋಮವಾರ ಮಾವು ಮೇಳಕ್ಕೆ ಭೇಟಿ ನೀಡಿದ್ದು, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅಂದುಕೊಂಡಿರುವ ಕೆಲಸ ಸಾಧ್ಯವಾಗದು – Kannada News | Horoscope Today, May 12, 2026: Daily Rashi Bhavishya Predictions for All Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:32 – 17:07, ಯಮಗಂಡ ಕಾಲ 09:10 – 10:45, ಗುಳಿಕ ಕಾಲ 12:21 – 13:56.

ಮೇಷ ರಾಶಿ: ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳು ಇರಬಹುದು. ವೈಯಕ್ತಿಕ‌ ಜೀವನದಿಂದ ಹೊರಬರಲು ಪ್ರಯತ್ನ ನಡೆಯಲಿದೆ. ಹಣದ ವಿಚಾರದಲ್ಲಿ ಜಾಣೆ ಅಗತ್ಯ. ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ.

ವೃಷಭ ರಾಶಿ: ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ಗಂಭೀರ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಿ. ವ್ಯವಹಾರದಲ್ಲಿ ಲಾಭಸಾಧ್ಯ. ಮಕ್ಕಳಿಗೆ ಸಹಾಯ ಮಾಡಿ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ವ್ಯಾವಹಾರಿಕ ಸಂದಿಗ್ಧತೆಯನ್ನು ಸರಿಮಾಡಲು ಆಗದು. ಭವಿಷ್ಯದ ನಿಮ್ಮ ಕಲ್ಪನೆಗೆ ಒಂದು ರೂಪವು ಸಿಕ್ಕಂತೆ ತೋರುವುದು. ದಿನ ನಿತ್ಯದ ಚಟುವಟಿಕೆಗಳು ಬೇಸರ ತರಿಸುವುದು. ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ.

ಮಿಥುನ ರಾಶಿ: ನಿಮಗೆ ಬೇಕಾದುದನ್ನು ಮಾತ್ರ ಹೇಳಿಕೊಳ್ಳುವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ಸ್ಪಷ್ಟತೆಯು ಉತ್ತಮ ಸಂವಾದಕ್ಕೆ ಕಾರಣವಾಗುತ್ತದೆ. ನಾಯಕತ್ವದ ಗುಣದಿಂದ ಹೊಣೆಗಾರಿಕೆಗಳೂ ಹೆಚ್ಚಾಗುತ್ತವೆ. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತ.

ಕರ್ಕಾಟಕ ರಾಶಿ: ನಿಮ್ಮ ಪರವಾಗಿ ಮಾತನಾಡಲು ಯಾರಾದರೂ ಬೇಕಾಗುತ್ತಾರೆ. ಸಾಮಾಜಿಕ ಸೇವೆಗೆ ವಿರಾಮ ಹೇಳುವಿರಿ. ಹಳೆಯ ಸಂಬಂಧಗಳು ಮತ್ತೆ ಬರುವ ಸಾಧ್ಯತೆ ಇರುವ ದಿನ. ಜ್ಞಾನಾರ್ಜನೆಗೆ ಪ್ರಯಾಣ ಮಾಡುವಿರಿ. ಉದ್ಯೋಗದಲ್ಲಿ ವಿವೇಕ ಅವಶ್ಯ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಇರದು.

ಸಿಂಹ ರಾಶಿ: ಹಣದ ಬದಲು ಸುರಕ್ಷಿತ ಹೂಡಿಕೆ ಅತ್ಯುತ್ತಮ. ಪ್ರೀತಿ ಜೀವನ ಚೈತನ್ಯ ತುಂಬಿದಂತೆ ತೋರುತ್ತದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ ಹಾಗೂ ಲಾಭ ಸಿಗಲಿದೆ. ಮನೆಯಲ್ಲಿ ಸಮಸ್ಯೆಗಳಿದ್ದರೂ ನೀವು ಸಮಾಧಾನದಿಂದಿರುವುದು ಉತ್ತಮ. ಇಂದು ಸಮಯವನ್ನು ಕಳೆಯುವುದು ಕಷ್ಟವಸದೀತು. ಮಾತಿನ‌ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು.

ಕನ್ಯಾ ರಾಶಿ: ಇಂದಿನ ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಅನಂತರ ತೊಂದರೆ ತಪ್ಪಿಸಲು, ಯಾವುದೇ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಸ್ತ್ರೀಯರು ಉದ್ಯೋಗಕ್ಕೆ ಅಲ್ಪವಿರಾಮ ಹೇಳವ ಸಾಧ್ಯತೆ ಇದೆ. ಯಾವುದೇ ಪ್ರಮುಖ ಕೆಲಸವು ನಿಮ್ಮಿಂದ ತಪ್ಪಿಸಿಕೊಳ್ಳುವುದಿಲ್ಲ. ಪ್ರೇಮ ಸಂಬಂಧಗಳು ಮಿಶ್ರವಾಗಿರುತ್ತದೆ.

ತುಲಾ ರಾಶಿ: ಇಂದು ನೀವು ಅನ್ಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಆದ್ದರಿಂದ ಅವರ ಅಭಿಪ್ರಾಯವನ್ನು ಗೌರವಿಸಿ ಮತ್ತು ಅವರಿಗೆ ಸ್ವಲ್ಪ ಜಾಗವನ್ನು ನೀಡಿ. ಆತ್ಮವಿಶ್ವಾಸದ ಮೂಲಕ ನೀವು ಅನಾರೋಗ್ಯವನ್ನು ಎದುರಿಸಬಹುದು. ಹಣಕಾಸು ಯೋಜನೆಗಳಲ್ಲಿ ಜಾಗ್ರತೆ ಅವಶ್ಯಕ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ನಿಮ್ಮ ವೇತನದ ಬಗ್ಗೆ ಹೇಳಬೇಕಾಗಿಬರಬಹುದು.

ವೃಶ್ಚಿಕ ರಾಶಿ: ನೀವು ಪ್ರೇಮ ಸಂಬಂಧದಲ್ಲಿ ಬೇಸರವನ್ನು ಅನುಭವಿಸಬಹುದು, ಆದ್ದರಿಂದ ಪ್ರೀತಿಯ ಸಂಬಂಧವನ್ನು ಕೇಂದ್ರೀಕರಿಸಿ ಮತ್ತು ನಿಮ್ಮ ಸಂಗಾತಿಯ ಜೊತೆ, ಮಕ್ಕಳ ಜೊತಡ ಸಮಯ ಕಳೆಯಲು ಆಗದು. ಹಣ ಉಳಿಸುವ ಯತ್ನ ಇಂದು ಯಶಸ್ವಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು.

ಧನು ರಾಶಿ: ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಬೇರೆಕಡೆ ಇಟ್ಟ ಹಣದ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ಯಂತ್ರದಿಂದ ಆದಷ್ಟು ದೂರವಿರಿ. ಬಳಕೆಯನ್ನು ಕಡಿಮೆ ಮಾಡಿದರೆ ಇನಗನೂ ಒಳ್ಳೆಯದು. ಮನೆಯವರೊಂದಿಗೆ ಹೆಚ್ಚು ಕಾಲ ಇಲ್ಲದಿದ್ದರೆ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ಅಧಿಕೃತ ಮಾಡಿಕೊಳ್ಳದೇ ಯಾವುದನ್ನೂ ಹೇಳುವುದು ಬೇಡ.

ಮಕರ ರಾಶಿ: ಇಂದು ನಿಮಗೆ ಪ್ರೇಮವು ಸಂತೋಷವನ್ನು ಕೊಡದೇಹೊಇಗಬಹುದು. ನಿಮ್ಮ ಸಂಗಾತಿಗೆ ಈ ವಾರ ಸ್ಥಳಾವಕಾಶ ಬೇಕಾಗುತ್ತದೆ, ಅವರ ಅಭಿಪ್ರಾಯವನ್ನು ಗೌರವಿಸಿ. ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಪಾಲುದಾರಿಕೆಯಲ್ಲಿ ನಿಮ್ಮ ಪಾಲುದಾರಿಕೆಯೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡುವಿರಿ.

ಕುಂಭ ರಾಶಿ: ಮನೆಯ ನವೀಕರಣದ ಬಗ್ಗೆ ಯಾರನ್ನಾದರೂ ಸಂಪರ್ಕಿಸಿ ಮುಂದುವರಿಯುವಿರಿ. ಸಂಗಾತಿಯ ವ್ಯವಹಾರಗಳಲ್ಲಿ ಕಡಿಮೆ ಹಸ್ತಕ್ಷೇಪ ಮಾಡುವುದು ಉತ್ತಮ. ಹಣದ ಹೂಡಿಕೆ ಕುರಿತು ಯೋಚಿಸಿ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಓಡಾಟದ ಕೆಲಸಕ್ಕೆ ನಿಮ್ಮನ್ನು ಬಳಸಿಕೊಳ್ಳಬಹುದು. ಉತ್ಸಾಹವೂ ಇರಲಿದೆ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌

ಮೀನ ರಾಶಿ: ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ಅತಿಯಾದ ಸಮಯವನ್ನು ಬಾಕಿಯಿರುವ ಕೆಲಸಗಳಿಗೆ ಬಳಸಬಹುದು. ಹಣಕಾಸಿನ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ನಿಮ್ಮನ್ನು ನೀವು ದುರ್ಬಲ ಮಾಡಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

Source link

PBKS vs DC: ಸತತ 4ನೇ ಪಂದ್ಯ ಸೋತ ಪಂಜಾಬ್; ಡೆಲ್ಲಿ ಪ್ಲೇಆಫ್ ಕನಸು ಜೀವಂತ – Kannada News | IPL 2026: Delhi Capitals Beat PBKS in Thriller, Playoff Hopes Alive After Chasing 211

ಐಪಿಎಲ್ 2026 (IPL 2026) ರ 55ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (PBKS vs DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತಂಡದ ಪ್ಲೇ ಆಫ್ ಕನಸು ಜೀವಂತವಾಗಿ ಉಳಿದರೆ, ಇತ್ತ ಪಂಜಾಬ್ ತಂಡ ಸತತ 4ನೇ ಸೋಲಿಗೆ ಕೊರಳೊಡ್ಡಿತು.  ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ 211 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ 19 ಓವರ್​ಗಳಲ್ಲಿ ಗುರಿ ಬೆನ್ನಟ್ಟಿ ದಾಖಲೆಯ ಜಯ ದಾಖಲಿಸಿತು

ಪಂಜಾಬ್​ಗೆ ಸ್ಫೋಟಕ ಆರಂಭ

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡದ ಆರಂಭಿಕ ಜೋಡಿ ಉತ್ತಮ ಆರಂಭ ನೀಡಿತು. ಪ್ರಭ್ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಇಬ್ಬರೂ ಅರ್ಧಶತಕದ ಜೊತೆಯಾಟವಾಡಿದರು. ಇಬ್ಬರೂ ಪವರ್‌ಪ್ಲೇನ ಸಂಪೂರ್ಣ ಲಾಭ ಪಡೆದು 78 ರನ್‌ಗಳ ಜೊತೆಯಾಟವಾಡಿದರು. ಆದಾಗ್ಯೂ, ಪ್ರಭ್ಸಿಮ್ರಾನ್ ಸಿಂಗ್ ಔಟಾದಾಗ ಈ ಜೋಡಿ ಬೇರ್ಪಟ್ಟಿತು. ಪ್ರಭ್ಸಿಮ್ರಾನ್ ಸಿಂಗ್ 18 ರನ್‌ಗಳ ಕೊಡುಗೆ ನೀಡಿದರು.

ಶ್ರೇಯಸ್ ಅಜೇಯ ಅರ್ಧಶತಕ

ಎಂದಿನಂತೆ ತನ್ನ ಹೊಡಿಬಡಿ ಆಟ ಮುಂದುವರೆಸಿದ ಪ್ರಿಯಾಂಶ್ 33 ಎಸೆತಗಳಲ್ಲಿ 169.70 ಸ್ಟ್ರೈಕ್ ರೇಟ್‌ನಲ್ಲಿ 56 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಪ್ರಿಯಾಂಶ್ 6 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಕೂಪರ್ 27 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 3 ಬೌಂಡರಿಗಳೊಂದಿಗೆ 38 ರನ್ ಬಾರಿಸಿದರೆ, ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ 3 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು. ದೆಹಲಿ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು. ಮುಖೇಶ್ ಕುಮಾರ್ 1 ವಿಕೆಟ್ ಪಡೆದರು.

ಡೆಲ್ಲಿಗೆ ಆರಂಭಿಕ ಆಘಾತ

ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಎಂದಿನಂತೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಾದ ಅಭಿಷೇಕ್ ಪೂರೆಲ್ 5 ರನ್ ಬಾರಿಸಿ ಔಟಾದರೆ, ರಾಹುಲ್ ಇನ್ನಿಂಗ್ಸ್ 9 ರನ್​ಗಳಿಗೆ ಅಂತ್ಯವಾಯಿತು. ಸಾಹಿಲ್ 12 ರನ್​ಗೆ ಸುಸ್ತಾದರೆ, ಸ್ಟಬ್ಸ್​ ರನೌಟ್​ಗೆ ಬಲಿಯಾದರು. ಈ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್​ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 56 ರನ್​ಗಳ ಇನ್ನಿಂಗ್ಸ್ ಆಡಿದರು. ಅಕ್ಷರ್ ಅವರ ಈ ಇನ್ನಿಂಗ್ಸ್ ಡೆಲ್ಲಿ ತಂಡದ ಗೆಲುವಿನ ಆಸೆಗೆ ಮತ್ತಷ್ಟು ಬಲ ತುಂಬಿತು.

ಶ್ರೇಯಸ್, ಮಿಲ್ಲರ್ ಅರ್ಧಶತಕ

ಅಕ್ಷರ್ ಜೊತೆಗೆ ಡೇವಿಡ್ ಮಿಲ್ಲರ್ ಕೂಡ 51 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಜಯದ ಸನಿಹಕ್ಕೆ ತಂದರು. ಆದಾಗ್ಯೂ ಇವರಿಬ್ಬರು ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಆದರೆ ಕೆಳಕ್ರಮಾಂಕದಲ್ಲಿ ಜೊತೆಯಾದ ಆಶುತೋಷ್ ಶರ್ಮಾ ಹಾಗೂ ಮಾಧವ್ ತಿವಾರಿ ಕ್ರಮವಾಗಿ 28 ಹಾಗೂ 18 ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇವರಿಬ್ಬರ ಜೊತೆಗೆ ಆಕಿಬ್ ನಬಿ ಕೂಡ ಅಜೇಯ 10 ರನ್ ಬಾರಿಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:35 pm, Mon, 11 May 26

Source link

Exit mobile version