ನವದೆಹಲಿ, ಜುಲೈ 31: ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ (Patanjali Ayurved) ಕಂಪನಿಯು ವಿಮಾ ಕ್ಷೇತ್ರಕ್ಕೆ ಕಾಲಿಡಲು ಮಹತ್ವದ ಹೆಜ್ಜೆ ಇಟ್ಟಿದೆ. ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯ (Magma General Insurance) ಸ್ವಾಧೀನಕ್ಕೆ ಪತಂಜಲಿ ಮುಂದಾಗಿದೆ. ವಿಮಾ ನಿಯಂತ್ರಕ ಸಂಸ್ಥೆಯಾದ IRDAI ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಡಿಎಸ್ ಗ್ರೂಪ್ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಗಳು ಜಂಟಿಯಾಗಿ ಈ ಖರೀದಿ ಮಾಡುತ್ತಿವೆ. ಒಪ್ಪಂದದ ಒಟ್ಟು ಮೌಲ್ಯ ಅಂದಾಜು ₹4,500 ಕೋಟಿಯಷ್ಟಿದೆ.
ಪತಂಜಲಿ ಪಾಲು 73%
ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಅದಾರ್ ಪೂನಾವಾಲಾ ಅವರ ಒಡೆತನ ಸನೋತಿ ಪ್ರಾಪರ್ಟೀಸ್ (Sanoti Properties) ಮೊದಲಾದವರು ಪ್ರಮುಖ ಷೇರುದಾರರಿದ್ದಾರೆ. ಪತಂಜಲಿ ಆಯುರ್ವೇದ ಸಂಸ್ಥೆಯು ಮ್ಯಾಗ್ಮಾದಲ್ಲಿ 73.56% ಷೇರುಪಾಲು ಪಡೆದು ಪ್ರಮುಖ ಪ್ರೊಮೋಟರ್ ಎನಿಸಲಿದೆ. ರಜನಿಗಂಧ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುವ ಡಿಎಸ್ ಗ್ರೂಪ್ ಸಂಸ್ಥೆಯು ಮ್ಯಾಗ್ಮಾ ಇನ್ಷೂರೆನ್ಸ್ ಕಂಪನಿಯಲ್ಲಿ 24.5% ಪಾಲು ಪಡೆಯುತ್ತದೆ. ಮ್ಯಾಗ್ಮಾದ ಈಗಿರನ ಶೇ. 98ರಷ್ಟು ಷೇರುಗಳನ್ನು ಪತಂಜಲಿ ಮತ್ತು ಡಿಎಸ್ ಗ್ರೂಪ್ ಖರೀದಿಸುತ್ತಿವೆ.
ಆಯುರ್ವೇದದಿಂದ ವಿಮಾ ವಲಯಕ್ಕೆ ಪತಂಜಲಿ ಪ್ರವೇಶ
ಎಫ್ಎಂಸಿಜಿ (FMCG) ಮತ್ತು ಆಯುರ್ವೇದ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರನಾಗಿರುವ ಪತಂಜಲಿ ಸಂಸ್ಥೆ ಈ ಒಪ್ಪಂದದೊಂದಿಗೆ ಅಧಿಕೃತವಾಗಿ ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರಕ್ಕೆ (Financial Services & Insurance Sector) ಕಾಲಿಟ್ಟಂತಾಗಿದೆ.
ಪತಂಜಲಿ ವಿಸ್ತೃತವಾದ ರೀಟೇಲ್ ನೆಟ್ವರ್ಕ್ ಮತ್ತು ಡಿಸ್ಟ್ರಿಬ್ಯೂಶನ್ ನೆಟ್ವರ್ಕ್ (Retail & Distribution Network) ಹೊಂದಿದೆ. ಗ್ರಾಮೀಣ ಮಾರುಕಟ್ಟೆಯಲ್ಲೂ ಆಳವಾಗಿ ಬೇರೂರಿದೆ. ಈ ಶಕ್ತಿಯನ್ನು ಬಳಸಿ ದೇಶದ ಮೂಲೆ ಮೂಲೆಗೆ ವಿಮಾ ಸೇವೆ ತಲುಪಿಸುವ ಗುರಿ ಹೊಂದಿದೆ.
ಈ ಒಪ್ಪಂದಕ್ಕೆ ಐಆರ್ಡಿಎಐ ನೀಡಿರುವ ಸಮ್ಮತಿಯು ಮೂರು ತಿಂಗಳವರೆಗೆ ಸಿಂಧು ಇರುತ್ತದೆ. ಅಂದರೆ, ಈ ಮೂರು ತಿಂಗಳೊಳಗೆ ಪತಂಜಲಿ ಆಯುರ್ವೇದ ಮತ್ತು ಡಿಎಸ್ ಗ್ರೂಪ್ ಸಂಸ್ಥೆಗಳು ಮ್ಯಾಗ್ಮಾವನ್ನು ಖರೀದಿಸಬೇಕು. ಇಲ್ಲವಾದರೆ, ಒಪ್ಪಂದವು ಅನೂರ್ಜಿತಗೊಳ್ಳುತ್ತದೆ.
ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ
ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯು ಜೀವ ವಿಮೆ ಬಿಟ್ಟು ಇತರ ಇನ್ಷೂರೆನ್ಸ್ ಸೆಗ್ಮೆಂಟ್ಗಳಲ್ಲಿ ಬ್ಯುಸಿನೆಸ್ ಮಾಡುತ್ತಿದೆ. ವಾಹನ ವಿಮೆ, ಆರೋಗ್ಯ ವಿಮೆ, ಆಸ್ತಿ ವಿಮೆ, ವಾಣಿಜ್ಯ ವಿಮೆ ಇತ್ಯಾದಿ ಸೆಗ್ಮೆಂಟ್ಗಳಲ್ಲಿ ಇದು ವಿಮೆ ಮಾಡುತ್ತದೆ. 2025-26ರಲ್ಲಿ ಈ ಕಂಪನಿಯು 3,615 ಕೋಟಿ ರೂ ಮೊತ್ತದ ಪ್ರೀಮಿಯಮ್ಗಳನ್ನು ಪಡೆದಿತ್ತು.
ಮಾರುಕಟ್ಟೆಯಲ್ಲಿ ಸಾಕಷ್ಟು ಗುರುತು ಮಾಡಿರುವ ಮ್ಯಾಗ್ಮಾ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡರೆ ಪತಂಜಲಿ ಸಂಸ್ಥೆ ಸುಲಭವಾಗಿ ಮಾರುಕಟ್ಟೆ ಪ್ರವೇಶಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ