Headlines

Raichur News: ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ತತ್ತರಿಸಿದ ಜನತೆ; 3 ವರ್ಷದ ಬಾಲಕಿಗೆ ಗಂಭೀರ ಗಾಯ! – Kannada News | Raichur Stray Dog Attack: 3 Year Old Girl Injured in Manvi

ರಾಯಚೂರು, ಜುಲೈ 22: ಜಿಲ್ಲೆಯಲ್ಲಿ ಬೀದಿ ನಾಯಿಗಳ (Street Dogs) ಸರಣಿ ದಾಳಿಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಮೊನ್ನೆಯಷ್ಟೇ ರಾಯಚೂರಿನಲ್ಲಿ ಒಂದೂವರೆ ವರ್ಷದ ಮಗು ನಾಯಿ ದಾಳಿಗೆ ಬಲಿಯಾಗಿತ್ತು. ಹಾಗೂ ನಿನ್ನೆಯಷ್ಟೇ 4 ವರ್ಷದ ಬಾಲಕನೋರ್ವ ಜೀವನ್ಮರಣ ಹೋರಾಟ ನಡೆಸುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ನಾಯಿಗಳ ಉಪಟಳ ಮುಂದುವರಿದಿದೆ. ಇದೀಗ ಮಾನ್ವಿ ಪಟ್ಟಣದಲ್ಲಿ 3 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿದೆ. ಅದಲ್ಲದೆ ನಗರದಲ್ಲಿ ಮಾರುಕಟ್ಟೆಗೆ ಬಂದಿದ್ದ ವ್ಯಕ್ತಿಯೊಬ್ಬರೂ ನಾಯಿ ಕಡಿತಕ್ಕೊಳಗಾಗಿದ್ದಾರೆ.

3 ವರ್ಷದ ಬಾಲಕಿಯ ಕಣ್ಣು, ಎದೆ ಭಾಗಕ್ಕೆ ಕಚ್ಚಿ ಹಾಕಿದ ನಾಯಿ

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ತಮ್ಮ ಮನೆ ಬಳಿ ಆಟವಾಡುತ್ತಿದ್ದ 3 ವರ್ಷದ ಇನಾಯಾ ಎಂಬ ಬಾಲಕಿಯ ಮೇಲೆ ಏಕಾಏಕಿ ನಾಯಿಯೊಂದು ಹಾರಿಬಿದ್ದು ದಾಳಿ ನಡೆಸಿದೆ. ನಾಯಿಯ ಆಕ್ರೋಶ ಎಷ್ಟಿತ್ತೆಂದರೆ, ಬಾಲಕಿಯ ಮುಖ, ಕಣ್ಣಿನ ಭಾಗ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಕಚ್ಚಿ ಗಂಭೀರ ಗಾಯಗೊಳಿಸಿದೆ.

ಕೂಡಲೇ ಬಾಲಕಿಯ ನರಳಾಟ ಕೇಳಿ ಸ್ಥಳೀಯರು ಧಾವಿಸಿ ನಾಯಿಯನ್ನು ಓಡಿಸಿದ್ದಾರೆ. ಒಂದು ವೇಳೆ ಸ್ಥಳೀಯರು ಸ್ಥಳಕ್ಕೆ ಓಡಿ ಬರದಿದ್ದರೆ ಮಗು ಜೀವಂತವಾಗಿ ಉಳಿಯುತ್ತಿರಲಿಲ್ಲ ಎಂದು ಕುಟುಂಬಸ್ಥರು ಆತಂಕದಿಂದ ಕಣ್ಣೀರಿಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿ ಇನಾಯಾ ಪ್ರಸ್ತುತ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಾನ್ವಿ ಪುರಸಭೆ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಸರಣಿ ನಾಯಿ ದಾಳಿಗಳಿಂದ ಕಂಗಾಲಾಗಿರುವ ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಮಾನ್ವಿ ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಇದೇ ರೀತಿಯ ಘಟನೆ ಅಧಿಕಾರಿಗಳ ಅಥವಾ ಜನಪ್ರತಿನಿಧಿಗಳ ಮನೆಯಲ್ಲಿ ನಡೆದಿದ್ದರೆ ಎಲ್ಲವನ್ನೂ ತಕ್ಷಣವೇ ಸರಿಪಡಿಸುತ್ತಿದ್ದರು. ಆದರೆ ಬಡವರ ಕಷ್ಟ ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ್ದಾರೆ.

ರಾಯಚೂರು ನಗರ ಮಾರುಕಟ್ಟೆಯಲ್ಲೂ ನಾಯಿ ದಾಳಿ!

ಇನ್ನೊಂದೆಡೆ ರಾಯಚೂರು ನಗರದ ಸದರಬಜಾರ್ ರಸ್ತೆಯಲ್ಲೂ ಬೀದಿ ನಾಯಿಯೊಂದರ ಹಾವಳಿ ವರದಿಯಾಗಿದೆ. ನಗರದ ಮಾರುಕಟ್ಟೆಗೆ ಪತ್ನಿ ಜೊತೆ ವಸ್ತುಗಳನ್ನು ಖರೀದಿಸಲು ಬಂದಿದ್ದ ಸತ್ಯಪ್ಪ (40) ಎಂಬುವವರು ಬೈಕ್ ನಿಲ್ಲಿಸುತ್ತಿದ್ದಾಗ, ಏಕಾಏಕಿ ಬಂದ ಬೀದಿ ನಾಯಿಯೊಂದು ಅವರ ಮೇಲೂ ದಾಳಿ ನಡೆಸಿ ಕಡಿದಿದೆ. ತಕ್ಷಣವೇ ಸತ್ಯಪ್ಪ ನಾಯಿಯನ್ನು ಬೆದರಿಸಿ ಓಡಿಸಿದ್ದು, ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಗಾಯಗೊಂಡ ಸತ್ಯಪ್ಪ ಅವರಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ ರಾಯಚೂರು, ಚಿತ್ರದುರ್ಗದಲ್ಲಿ ಮತ್ತೆ ಬೀದಿನಾಯಿಗಳ ದಾಳಿ: 4 ವರ್ಷದ ಬಾಲಕನ ಸ್ಥಿತಿ ಗಂಭೀರ, ನಾಲ್ವರು ಮಕ್ಕಳಿಗೆ ಗಾಯ

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ ಹೆಚ್ಚುತ್ತಲೇ ಇದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಪೌರಾಡಳಿತ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:54 am, Wed, 22 July 26

Source link

Leave a Reply

Your email address will not be published. Required fields are marked *