ಐಪಿಎಲ್ 2026 ರ 52 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ತಂಡವನ್ನು ಮಣಿಸಿದ ಗುಜರಾತ್ ಟೈಟಾನ್ಸ್ ಲೀಗ್ನಲ್ಲಿ 7ನೇ ಗೆಲುವಿನೊಂದಿಗೆ 14 ಅಂಕಗಳನ್ನು ಕಲೆಹಾಕಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇತ್ತ ರಾಜಸ್ಥಾನ್ 5ನೇ ಸೋಲಿನೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಬರೋಬ್ಬರಿ 229 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 152 ರನ್ಗಳಿಗೆ ಆಲೌಟ್ ಆಗುವ ಮೂಲಕ 77 ರನ್ಗಳ ಹೀನಾಯ ಸೋಲು ಅನುಭವಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಆರಂಭದಿಂದಲೇ ಆಕ್ರಮಣಕಾರಿ ಧೋರಣೆ ಅನುಸರಿಸಿತು. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ರಾಜಸ್ಥಾನ ಬೌಲರ್ಗಳ ಮೇಲೆ ಒತ್ತಡ ಹೇರಿ ಮೊದಲ ವಿಕೆಟ್ಗೆ 118 ರನ್ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಇಬ್ಬರೂ ಬ್ಯಾಟ್ಸ್ಮನ್ಗಳು ತ್ವರಿತ ರನ್ ಗಳಿಸಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು.
ಶುಭ್ಮನ್ ಗಿಲ್ ಕೇವಲ 44 ಎಸೆತಗಳಲ್ಲಿ 84 ರನ್ ಗಳಿಸಿ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಇತ್ತ ಸಾಯಿ ಸುದರ್ಶನ್ ಕೂಡ 36 ಎಸೆತಗಳಲ್ಲಿ 55 ರನ್ಗಳ ಕೊಡುಗೆ ನೀಡಿದರು. ಆದಾಗ್ಯೂ ಜೋಸ್ ಬಟ್ಲರ್ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಪರಿಣಾಮ ಬೀರದೆ 10 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ವಾಷಿಂಗ್ಟನ್ ಸುಂದರ್ ಕೇವಲ 20 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಒಳಗೊಂಡ ಅಜೇಯ 37 ರನ್ ಗಳಿಸಿದರು. ರಾಹುಲ್ ತೆವಾಟಿಯಾ ಕೂಡ ನಾಲ್ಕು ಎಸೆತಗಳಲ್ಲಿ 14 ರನ್ಗಳ ತ್ವರಿತ ಇನ್ನಿಂಗ್ಸ್ ಆಡಿದರು. ರಾಜಸ್ಥಾನ್ ರಾಯಲ್ಸ್ ಪರ ಬ್ರಿಜೇಶ್ ಶರ್ಮಾ ಎರಡು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಯಶ್ ರಾಜ್ ಪುಂಜಾ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೂಡ ಅಬ್ಬರದ ಆರಂಭ ಪಡೆಯಿತು. ಎಂದಿನಂತೆ ವೈಭವ್ ಸೂರ್ಯವಂಶಿ ಬೌಂಡರಿಗಳ ಮಳೆಗರೆದರು. ಆದರೆ ವೈಭವ್ ಆರ್ಭಟಕ್ಕೆ ಸಿರಾಜ್ ಬ್ರೇಕ್ ಹಾಕಿದರು. ವೈಭವ್ 16 ಎಸೆತಗಳಲ್ಲಿ 36 ರನ್ ಬಾರಿಸಿ ಔಟಾದರು. ಈ ವಿಕೆಟ್ ಪತನದ ಬಳಿಕ ರಾಜಸ್ಥಾನ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ನಾಯಕ ಜೈಸ್ವಾಲ್ 3 ರನ್ಗೆ ಔಟಾದರೆ, ಜುರೇಲ್ 24, ಹೆಟ್ಮಾಯರ್ 6, ಫೆರೆರಾ 4, ಶುಭಂ ದುಬೆ 15 ರನ್ಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ರಾಜಸ್ಥಾನದ ಸೋಲು ಖಚಿತವಾಯಿತು.
Published On – 11:11 pm, Sat, 9 May 26