T20 World Cup 2026: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇಂದು (ಮಾ.4) ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಲಿದೆ. ಹೀಗಾಗಿಯೇ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳ ಈ ಹಿಂದಿನ ಮುಖಾಮುಖಿಯೇ ರೋಚಕತೆಯಿಂದೆ ಕೂಡಿದೆ.
- ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಸೌತ್ ಆಫ್ರಿಕಾ ತಂಡವೇ ಜಯ ಸಾಧಿಸಿದೆ. ಅಂದರೆ ಟಿ20 ವಿಶ್ವಕಪ್ನಲ್ಲಿ ಆಫ್ರಿಕಾ ಪಡೆ ವಿರುದ್ಧ ನ್ಯೂಝಿಲೆಂಡ್ ತಂಡ ಒಮ್ಮೆಯೂ ಗೆಲುವು ದಾಖಲಿಸಿಲ್ಲ.
- ಐಸಿಸಿ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡ ಕೂಡ ಗೆಲುವು ದಾಖಲಿಸಿಲ್ಲ. ಅಂದರೆ ಈ ಹಿಂದೆ ಐಸಿಸಿ ಟೂರ್ನಿಯ 3 ನಾಕೌಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿವೆ. ಈ ವೇಳೆ ಮೂರು ಪಂದ್ಯಗಳಲ್ಲೂ ನ್ಯೂಝಿಲೆಂಡ್ ತಂಡವೇ ಜಯ ಸಾಧಿಸಿದೆ.
ಅಂದರೆ ಐಸಿಸಿ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗುತ್ತಾ ಬಂದಿದೆ. ಇದೀಗ ಇದೇ ಮೊದಲ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್ನ ನಾಕೌಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.
ಅತ್ತ ಟಿ20 ವಿಶ್ವಕಪ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡವು ಒಮ್ಮೆಯೂ ಸೋತಿಲ್ಲ. ಇತ್ತ ನ್ಯೂಝಿಲೆಂಡ್ ತಂಡವು ಸೌತ್ ಆಫ್ರಿಕಾ ವಿರುದ್ಧದ ಎಲ್ಲಾ ನಾಕೌಟ್ ಪಂದ್ಯಗಳನ್ನು ಗೆದ್ದ ಇತಿಹಾಸವಿದೆ. ಹೀಗಾಗಿಯೇ ಇಂದಿನ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ನಡುವಣ ಕದನವು ವಿಶೇಷ ಪಂದ್ಯವಾಗಿ ಮಾರ್ಪಟ್ಟಿದೆ.
ಏಕೆಂದರೆ ಈ ಬಾರಿ ಸೌತ್ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ ತಂಡ ಗೆದ್ದರೆ, ಅದು ಟಿ20 ವಿಶ್ವಕಪ್ನಲ್ಲಿ ಆಫ್ರಿಕಾ ವಿರುದ್ಧದ ಕಿವೀಸ್ ಪಡೆಯ ಮೊದಲ ಜಯವಾಗಿರಲಿದೆ. ಇದೇ ವೇಳೆ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ, ಅದು ನ್ಯೂಝಿಲೆಂಡ್ ವಿರುದ್ಧದ ಐಸಿಸಿ ನಾಕೌಟ್ ಪಂದ್ಯದಲ್ಲಿ ಆಫ್ರಿಕಾ ಪಡೆಯ ಮೊದಲ ಗೆಲುವುವಾಗಿರಲಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಈ ಪೈಪೋಟಿಯಲ್ಲಿ ಗೆಲ್ಲುವ ಮೂಲಕ ಮಾರ್ಚ್ 8 ರಂದು ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ಗೆ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬುದನ್ನು ಕಾದು ನೋಡೋಣ.
Published On – 10:21 am, Wed, 4 March 26