ಐಪಿಎಲ್ 2026 (IPL 2026) ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR ) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳು ಕನ್ನಡಿಗರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಿದ್ದವು. ಸನ್ರೈಸರ್ಸ್ ಪರ ಸ್ಮರಣ್ ರವಿಚಂದ್ರನ್ (Smaran Ravichandran) ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದರೆ, ಇತ್ತ ಕೆಕೆಆರ್ ಪರ ಮನೀಶ್ ಪಾಂಡೆ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಪರ ಸ್ಮರಣ್ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಆದರೆ ಸಿಕ್ಕ ಜೊಚ್ಚಲ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸ್ಮರಣ್ ಎಡವಿದರು.
ಬದಲಿ ಆಟಗಾರನಾಗಿ ಆಯ್ಕೆ
ನಿತೀಶ್ ಕುಮಾರ್ ರೆಡ್ಡಿ ಅನುಪಸ್ಥಿತಿಯಿಂದಾಗಿ ಸ್ಮರಣ್ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ವಾಸ್ತವವಾಗಿ 2025 ರ ಐಪಿಎಲ್ನಲ್ಲಿ ಆಡಮ್ ಜಂಪಾ ಗಾಯಗೊಂಡ ನಂತರ ಸ್ಮರಣ್ ಅವರನ್ನು ಸನ್ರೈಸರ್ಸ್ ಫ್ರಾಂಚೈಸಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ ಆ ಆವೃತ್ತಿಯಲ್ಲಿ ಸ್ಮರಣ್ಗೆ ಆಡುವ ಅವಕಾಶ ಸಿಗಲಿಲ್ಲ. ಇದರ ಹೊರತಾಗಿಯೂ ಸನ್ರೈಸರ್ಸ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಇದೀಗ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಪಡೆದ ಸ್ಮರಣ್ 4 ಎಸೆತಗಳಲ್ಲಿ 1 ಬೌಂಡರಿ ಸಹಿತ 4 ರನ್ ಕಲೆಹಾಕಲಷ್ಟೇ ಶಕ್ತರಾಗಿ ವಿಕೆಟ್ ಒಪ್ಪಿಸಿದರು. ಅಂದರೆ ಸ್ಮರಣ್ಗೆ ತಮ್ಮ ಚೊಚ್ಚಲ ಐಪಿಎಲ್ ಪಂದ್ಯ ಸ್ಮರಣೀಯವಾಗಲಿಲ್ಲ.
ದೇಶಿ ಟೂರ್ನಿಯಲ್ಲಿ ಅಬ್ಬರ
ದೇಶಿ ಟೂರ್ನಿಯಲ್ಲಿ ಕರ್ನಾಟಕದ ಪರ ಆಡುವ ಸ್ಮರಣ್, ತಮ್ಮ ಅಲ್ಪ ವೃತ್ತಿಜೀವನದಲ್ಲೇ ತಂಡದ ನಂಬಿಕಸ್ತ ಆಟಗಾರನಾಗಿದ್ದಾರೆ. 2024 ರಲ್ಲಿ ಕರ್ನಾಟಕ ಪರ ದೇಶೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಸ್ಮರಣ್, 2024-25 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಏಳು ಇನ್ನಿಂಗ್ಸ್ಗಳಲ್ಲಿ 72.16 ಸರಾಸರಿಯಲ್ಲಿ ಮತ್ತು 100 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 433 ರನ್ ಗಳಿಸಿದರು ಮತ್ತು ಕರ್ನಾಟಕ ಟ್ರೋಫಿ ಗೆಲ್ಲಲು ಸಹಾಯ ಮಾಡಿದರು.
CSK vs DC: ಸಿಎಸ್ಕೆ ವಿರುದ್ಧ ಸೋತ ಮುಂಬೈ ಐಪಿಎಲ್ನಿಂದ ಭಾಗಶಃ ಔಟ್
ರಣಜಿಯಲ್ಲಿ ರನ್ ಮಳೆ
ಅದೇ ಆವೃತ್ತಿಯಲ್ಲಿ ಸ್ಮರಣ್, ಕರ್ನಾಟಕ ಪರ ಏಳು ರಣಜಿ ಟ್ರೋಫಿ ಪಂದ್ಯಗಳಲ್ಲಿ 64.50 ಸರಾಸರಿಯಲ್ಲಿ 516 ರನ್ ಗಳಿಸಿದ್ದರು. ಇನ್ನು ಕಳೆದ ರಣಜಿ ಟ್ರೋಫಿಯಲ್ಲಿ ರನ್ಗಳ ಶಿಖರ ಕಟ್ಟಿದ್ದ ಸ್ಮರಣ್, ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 86.36 ಸರಾಸರಿಯೊಂದಿಗೆ 950 ರನ್ ಗಳಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದರು. ಅವರ ವಿಜಯ್ ಹಜಾರೆ ಟ್ರೋಫಿ ಅಭಿಯಾನವು ಅಷ್ಟೇನೂ ಯಶಸ್ವಿಯಾಗಲಿಲ್ಲ, ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಆಡಿದ ಏಳು ಪಂದ್ಯಗಳಲ್ಲಿ 63.80 ಸರಾಸರಿ ಮತ್ತು 158.70 ಸ್ಟ್ರೈಕ್ ರೇಟ್ನಲ್ಲಿ ವೃತ್ತಿಜೀವನದ ಅತ್ಯಧಿಕ 319 ರನ್ ಕಲೆಹಾಕಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ