
ಬೆಂಗಳೂರು, ಏಪ್ರಿಲ್ 10: ಎಸ್ಎಸ್ಎಲ್ಸಿ ತೃತೀಯ ಭಾಷೆ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ನಿರ್ಧಾರ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್ ಈಗ ಬಿಗ್ ಶಾಕ್ ಕೊಟ್ಟಿದೆ.
ಅರ್ಜಿದಾರರಿಗೆ 1 ಲಕ್ಷ ದಂಡ!
ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಿಐಎಲ್ ಸಲ್ಲಿಕೆ ಮಾಡಿರುವವರು, ಸರ್ಕಾರದ ಆದೇಶದ ವಿವರ ಒದಗಿಸದೇ ಕೇವಲ ಪತ್ರಿಕೆ ವರದಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಅರ್ಜಿದಾರರಾದ ಹೆಚ್.ಎನ್.ಚಂದನಾ ಮತ್ತು ಎಸ್.ವೆಂಕಟೇಶ್ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್, ಪಿಐಎಲ್ ವಜಾಗೊಳಿಸಿ ಆದೇಶಿಸಿದೆ. ಆ ಮೂಲಕ ಅರ್ಜಿದಾರರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.
ಇದನ್ನೂ ಓದಿ: SSLC ತೃತೀಯ ಭಾಷೆಗೆ ಗ್ರೇಡ್ ವಿವಾದ; ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ
SSLC ತೃತೀಯ ಭಾಷೆಗಳ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿದ್ದವಾದರೂ, ಬಿಜೆಪಿಯ ಕೆಲವು ನಾಯಕರು ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ಸ್ವತಃ ಮಧ್ಯಪ್ರವೇಶ ಮಾಡಿದ್ದ ರಾಜ್ಯಪಾಲರು, ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲನೀಶ್ಗೆ ಪತ್ರ ಕೂಡ ಬರೆದಿದ್ದರು. ಗವರ್ನರ್ ಈ ನಡೆ ವಿರುದ್ಧ ಸಿಡಿದೆದ್ದಿದ್ದ ಕರವೇ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಈ ರೀತಿ ಮಾಡೋದು ತಪ್ಪು. ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ ಎಂದು ವಾಗ್ದಾಳಿ ನಡೆಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.