
ಬೆಂಗಳೂರು, (ಮಾರ್ಚ್ 16): ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ (SSLC Exams) ದಿನಗಣನೆ ಆರಂಭವಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ (KSRTC) ಉಚಿತ ಪ್ರಯಾಣ ಘೋಷಿಸಿದೆ. ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣದ (Bus Travel) ಸೌಲಭ್ಯವನ್ನು ಘೋಷಿಸಿದೆ. ಹೌದು.. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ, ನಿವಾಸದಿಂದ ಪರೀಕ್ಷಾ ಕೇಂದ್ರದವರೆಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆ ವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ಬರೆಯಬೇಕಾದರೆ ಹಾಲ್ ಟಿಕೆಟ್ ಅವಶ್ಯವಾಗಿದೆ. ಅದೇ ರೀತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಸ್ ಕಂಡೆಕ್ಟರ್ಗೆ ಹಾಲ್ ಟಿಕೆಟ್ ತೋರಿಸಿದರಷ್ಟೇ ಉಚಿತವಾಗಿ ಪ್ರಯಾಣಿಸುವ ಅವಕಾಶ ಸಿಗಲಿದೆ. ಹೀಗಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮರೆಯದೆ ಹಾಲ್ ಟಿಕೆಟ್ ತೆಗೆದುಕೊಂಡು ಹೋಗಿ.
ಇದನ್ನೂ ಓದಿ: SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ
ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ
2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 (SSLC Exam) ಮಾರ್ಚ್ 18ರಿಂದ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದ (exam center) ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಬೆಂಗಳೂರು (bengaluru) ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ದಿನಾಂಕ: 18-03-2026 ರಿಂದ 02-04-2026 ರವರೆಗೆ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1 ಅನ್ನು ಬೆಂಗಳೂರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸುವಂತೆ ಹಾಗೂ ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್ / ಸೈಬರ್/ ಕಂಪ್ಯೂಟರ್ ಸೆಂಟರ್ಗಳನ್ನು ಮುಚ್ಚುವಂತೆ ಕೋರಲಾಗಿರುತ್ತದೆ ಎಂದಿದ್ದಾರೆ.
ಈ ವಿಷಯದ ಬಗ್ಗೆ ನಾನು ಖುದ್ದಾಗಿ ಮಾಡಿದ ವಿಚಾರಣೆಯಿಂದ ಮತ್ತು ಗುಪ್ತವಾರ್ತಾ ವರದಿಯಿಂದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1 ಅನ್ನು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯಿಸುವಂತೆ ನಿಷೇಧಾಜ್ಞೆ ಹೊರಡಿಸುವುದು ಅಗತ್ಯವಿರುವುದನ್ನು ಮನಗಂಡಿರುತ್ತೇನೆ ಎಂದು ತಿಳಿಸಿದ್ದಾರೆ.