ಐಪಿಎಲ್ 2027ರ ಮಿನಿ ಹರಾಜಿಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ನ ದಿಗ್ಗಜ ಸುನಿಲ್ ಗಾವಸ್ಕರ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಪ್ರಮುಖ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಫ್ರಾಂಚೈಸಿಗಳ ನಡುವೆ ನಡೆಯುವ ಬಹುಕೋಟಿ ರೂಪಾಯಿಗಳ ಆಟಗಾರರ ಟ್ರೇಡಿಂಗ್ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಗಾವಸ್ಕರ್ ಒತ್ತಾಯಿಸಿದ್ದಾರೆ.
ತಮ್ಮ ಇತ್ತೀಚಿನ ಅಂಕಣದಲ್ಲಿ ಈ ಬಗ್ಗೆ ಬರೆದಿರುವ ಗವಾಸ್ಕರ್, ಐಪಿಎಲ್ನ ಯಶಸ್ಸನ್ನು ನೋಡಿ ಅಸೂಯೆ ಪಡುವವರು ಲೀಗ್ನತ್ತ ಬೆರಳು ಮಾಡದಂತೆ ತಡೆಯಲು ಈ ಆಟಗಾರರ ಟ್ರೇಡಿಂಗ್ನ ಆರ್ಥಿಕ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ರಹಸ್ಯ ಹಣಕಾಸು ಒಪ್ಪಂದಗಳಿಗೆ ಬ್ರೇಕ್!
ಪ್ರಸ್ತುತ ನಿಯಮಗಳ ಪ್ರಕಾರ, ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರ ವರ್ಗಾವಣೆಯಾದಾಗ (ಟ್ರೇಡ್) ಅದರ ಆರ್ಥಿಕ ವಿವರಗಳು ಕೇವಲ ಬಿಸಿಸಿಐ, ಸಂಬಂಧಪಟ್ಟ ಆಟಗಾರ ಮತ್ತು ಆ ಎರಡು ಫ್ರಾಂಚೈಸಿಗಳಿಗೆ ಮಾತ್ರ ತಿಳಿದಿರುತ್ತವೆ. ಉಳಿದ ತಂಡಗಳಿಗೆ ಮತ್ತು ಸಾರ್ವಜನಿಕರಿಗೆ ಈ ಮೊತ್ತ ತಿಳಿಯುವುದಿಲ್ಲ. ಇದರಿಂದಾಗಿ ಸ್ಯಾಲರಿ ಕ್ಯಾಪ್ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ ವರ್ಗಾವಣೆಯ ನಿಖರ ಮೊತ್ತವನ್ನು ಬಹಿರಂಗಪಡಿಸಬೇಕು ಎಂದು ಗಾವಸ್ಕರ್ ಆಗ್ರಹಿಸಿದ್ದಾರೆ.
ಅಸೂಯೆ ಪಡುವವರಿಂದ ರಕ್ಷಿಸಿ:
ಐಪಿಎಲ್ ವಿಶ್ವದ ಅತ್ಯಂತ ಶ್ರೇಷ್ಠ ಟಿ20 ಲೀಗ್ ಆಗಿದೆ. ಇದರ ಯಶಸ್ಸನ್ನು ನೋಡಿ ಅಸೂಯೆ ಪಡುವವರು ಇದರತ್ತ ಬೊಟ್ಟು ಮಾಡಬಾರದು ಎಂದರೆ ಪಾರದರ್ಶಕತೆ ಅತ್ಯಗತ್ಯ. ಹೀಗಾಗಿ ಟ್ರೇಡಿಂಗ್ ವಿಚಾರಗಳು ಮತ್ತು ಆಟಗಾರರ ವರ್ಗಾವಣೆಗೆ ವ್ಯಯಿಸಿದ ಮೊತ್ತವನ್ನು ಬಹಿರಂಗಪಡಿಸಬೇಕು ಎಂದು ಗಾವಸ್ಕರ್ ತಿಳಿಸಿದ್ದಾರೆ.
ಟಾಪ್ ಆಟಗಾರರ ಟ್ರೇಡಿಂಗ್ ಚರ್ಚೆ!
ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಅವರಂತಹ ದೊಡ್ಡ ಆಟಗಾರರ ಫ್ರಾಂಚೈಸಿ ಬದಲಾವಣೆ ಹಾಗೂ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸುನಿಲ್ ಗಾವಸ್ಕರ್ ಅವರ ಈ ಪಾರದರ್ಶಕತೆಯ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: 23 ಸೆಕೆಂಡ್ಸ್ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!
ಒಟ್ಟಾರೆಯಾಗಿ ಹೇಳುವುದಾದರೆ, ಸುನಿಲ್ ಗಾವಸ್ಕರ್ ಅವರ ಈ ಸಲಹೆಯು ಐಪಿಎಲ್ನ ವಿಶ್ವಾಸಾರ್ಹತೆ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಕಾಪಾಡುವಲ್ಲಿ ಬಿಸಿಸಿಐಗೆ ನೀಡಿರುವ ಒಂದು ಪ್ರಮುಖ ಎಚ್ಚರಿಕೆಯಾಗಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆ ಹೊಂದಿರುವ ಐಪಿಎಲ್ನತ್ತ ಯಾರೂ ಬೊಟ್ಟು ಮಾಡದಂತೆ ನೋಡಿಕೊಳ್ಳಲು ಸಾರ್ವಜನಿಕ ಪಾರದರ್ಶಕತೆ ಅತ್ಯಗತ್ಯ. ಮುಂಬರುವ ಹರಾಜಿನಲ್ಲಿ ಬಿಸಿಸಿಐ ಈ ಕಿವಿಮಾತನ್ನು ಗಂಭೀರವಾಗಿ ಪರಿಗಣಿಸಿ ಹೊಸ ನಿಯಮಗಳನ್ನು ಜಾರಿಗೊಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published On – 12:11 pm, Mon, 17 August 26