
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.1 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತು ಎದುರಾಳಿ ತಂಡದ ಯುವ ಆಟಗಾರ ಸಮೀರ್ ರಿಝ್ವಿ ಅವರ ಸ್ಫೋಟಕ ಆಟವೇ ಸೋಲಿಗೆ ಪ್ರಮುಖ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
ನಮ್ಮ ಬ್ಯಾಟಿಂಗ್ ದೃಷ್ಟಿಯಿಂದ ನಾವು 15-20 ರನ್ ಕಡಿಮೆ ಗಳಿಸಿದೆವು ಎಂದು ನಾನು ಭಾವಿಸುತ್ತೇನೆ. 180-185 ರನ್ ಇಲ್ಲಿ ಉತ್ತಮ ಮೊತ್ತವಾಗಿತ್ತು, ಆದರೆ ನಾವು ಈ ಸ್ಕೋರ್ ತಲುಪಲು ವಿಫಲರಾದೆವು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಇದಾಗ್ಯೂ ನಮ್ಮ ಬೌಲರ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಡೆಲ್ಲಿ ತಂಡ ಕೇವಲ 7 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ಗೆ ಬಂದ ಸಮೀರ್ ರಿಝ್ವಿ (90 ರನ್, 51 ಎಸೆತ) ಆಡಿದ ರೀತಿ ಅದ್ಭುತವಾಗಿತ್ತು. ರಿಝ್ವಿ ಪಂದ್ಯದ ಮೇಲೆ ನಮಗೆ ಹಿಡಿತ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ.
ಒಂದು ವೇಳೆ ಸಮೀರ್ ರಿಝ್ವಿ ಅವರ ವಿಕೆಟ್ ಬೇಗನೆ ಸಿಕ್ಕಿದ್ದರೆ ನಮಗೆ ಕಂಬ್ಯಾಕ್ ಮಾಡಲು ಅವಕಾಶ ದೊರೆಯುತ್ತಿತ್ತು. ಆದರೆ ರಿಝ್ವಿ ಅವರ ಬ್ಯಾಟಿಂಗ್ ವೈಖರಿ ಮುಂದೆ ನಮ್ಮ ಬೌಲರ್ಗಳು ಮಂಕಾದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್
ಈ ಸೋಲಿನ ಹೊರತಾಗಿಯೂ ಮುಂದಿನ ಪಂದ್ಯಕ್ಕೆ ಬಲವಾಗಿ ಮರಳಲು ತಂಡವು ಮತ್ತೆ ತರಬೇತಿ ಮೈದಾನಕ್ಕೆ ತೆರಳಲಿದೆ. ಈ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಲಿದ್ದೇವೆ ಎಂದು ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಪಂದ್ಯದ ಸ್ಕೋರ್ ವಿವರ:
- ಮುಂಬೈ ಇಂಡಿಯನ್ಸ್: 162/6 (20 ಓವರ್) – ಸೂರ್ಯಕುಮಾರ್ ಯಾದವ್ 51 (36).
- ಡೆಲ್ಲಿ ಕ್ಯಾಪಿಟಲ್ಸ್: 164/4 (18.1 ಓವರ್) – ಸಮೀರ್ ರಿಝ್ವಿ 90 (51).
- ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6 ವಿಕೆಟ್ ಜಯ.