ತಿರುಮಲ ಶ್ರೀವಾರಿ ದರ್ಶನದ ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯಲು ರಿಯಲ್ ಎಸ್ಟೇಟ್ ಕಂಪನಿಯೊಂದು ನಡೆಸಿದ ಪ್ರಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ತಿರುಪತಿ ಹೆದ್ದಾರಿಯ ಸಮೀಪದ ತಮ್ಮ ಯೋಜನೆಯಲ್ಲಿ ನಿವೇಶನ ಖರೀದಿಸಿದವರಿಗೆ ಜೀವಿತಾವಧಿಯವರೆಗೆ ತಿರುಮಲ ಶ್ರೀವರಿಯ VIP ಬ್ರೇಕ್ ದರ್ಶನ ಒದಗಿಸಲಾಗುತ್ತದೆ ಎಂದು ಎಸ್ಸಿಪಿ ಡೆವಲಪರ್ಸ್ (SCP Developers) ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿತ್ತು. ಈ ಜಾಹೀರಾತು ವೈರಲ್ ಆಗುತ್ತಿದ್ದಂತೆಯೇ ತೀವ್ರ ಚರ್ಚೆಗೆ ಕಾರಣವಾಗಿದೆ.
ಜಾಹೀರಾತಿನಲ್ಲಿ ಏನಿತ್ತು?
ಎಸ್ಸಿಪಿ ಡೆವಲಪರ್ಸ್ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ, ತಮ್ಮ ಯೋಜನೆಯಲ್ಲಿ ನಿವೇಶನ ಖರೀದಿಸಿದವರಿಗೆ ಶ್ರೀವಾರಿಯ ಜೀವಿತಾವಧಿಯ VIP ದರ್ಶನದ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿತ್ತು. ಈ ದರ್ಶನವನ್ನು ಹೇಗೆ ಒದಗಿಸಲಾಗುತ್ತದೆ ಎಂಬ ಮಾಹಿತಿಗಾಗಿ ಕಂಪನಿಯನ್ನು ಸಂಪರ್ಕಿಸುವಂತೆ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿತ್ತು. ದೇವರ ದರ್ಶನವನ್ನು ವ್ಯಾಪಾರಿಕ ಆಮಿಷವಾಗಿ ಬಳಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಸ್ಪಷ್ಟನೆ ನೀಡಿದ ಟಿಟಿಡಿ :
ಈ ವಿವಾದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಗಮನಕ್ಕೆ ಬಂದಿದ್ದು, ತಕ್ಷಣವೇ ಸಂಸ್ಥೆ ಸ್ಪಷ್ಟನೆ ನೀಡಿದೆ. ಯಾವುದೇ ಖಾಸಗಿ ಕಂಪನಿ ಅಥವಾ ವ್ಯಕ್ತಿಗೆ ಶ್ರೀವಾರಿಯ VIP ಬ್ರೇಕ್ ದರ್ಶನದ ಖಾತರಿ ನೀಡುವ ಅಧಿಕಾರವಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಎಸ್ಸಿಪಿ ಡೆವಲಪರ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಟಿಟಿಡಿ ಪೊಲೀಸರಿಗೆ ಸೂಚನೆ ನೀಡಿದೆ. ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ರಕ್ಷಾ ಬಂಧನದಂದೇ ಚಂದ್ರಗ್ರಹಣ; ಭಾರತದಲ್ಲಿ ಗೋಚರಿಸುತ್ತಾ? ಇಲ್ಲಿದೆ ಸಂಪೂರ್ಣ ವಿವರ!
ದರ್ಶನ ವ್ಯವಸ್ಥೆ ಟಿಟಿಡಿ ನಿಯಮಗಳ ಪ್ರಕಾರವೇ?
ಶ್ರೀವಾರಿಯ ದರ್ಶನ, VIP ಬ್ರೇಕ್ ದರ್ಶನ ಸೇರಿದಂತೆ ಎಲ್ಲಾ ಸೇವೆಗಳು ಮತ್ತು ಟಿಕೆಟ್ಗಳನ್ನು ಟಿಟಿಡಿಯ ನಿಯಮಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ ಮಾತ್ರ ನೀಡಲಾಗುತ್ತದೆ. ಯಾವುದೇ ಖಾಸಗಿ ಸಂಸ್ಥೆ ಅಥವಾ ಮಧ್ಯವರ್ತಿಗಳು ದರ್ಶನದ ಭರವಸೆ ನೀಡಲು ಅಧಿಕಾರ ಹೊಂದಿಲ್ಲ ಎಂದು ಟಿಟಿಡಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಶ್ರೀವಾರಿ ದರ್ಶನದ ಹೆಸರಿನಲ್ಲಿ ಯಾವುದೇ ಖಾಸಗಿ ಸಂಸ್ಥೆಗಳು ನೀಡುವ ಭರವಸೆ ಅಥವಾ ಆಮಿಷಗಳಿಗೆ ಸಾರ್ವಜನಿಕರು ಮರುಳಾಗಬಾರದು ಎಂದು ಟಿಟಿಡಿ ಮನವಿ ಮಾಡಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ