ಮನೆಯಲ್ಲಿ ಹಾವಿನ ಫೋಟೋ ಇಡುವುದು ಶುಭವೇ?Image Credit source: Pinterest
ಅನೇಕರು ತಮ್ಮ ಮನೆಯ ಅಂದವನ್ನು ಹೆಚ್ಚಿಸಲು ಅಥವಾ ಧಾರ್ಮಿಕ ನಂಬಿಕೆಯಿಂದ ವಿವಿಧ ಫೋಟೋಗಳನ್ನು ಗೋಡೆಗೆ ನೇತುಹಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಹಾವಿನ ಅಥವಾ ನಾಗದೇವತೆಯ ಫೋಟೋ ಇರಿಸುವ ಬಗ್ಗೆ ಅನೇಕರಲ್ಲಿ ಗೊಂದಲವಿದೆ. ಆದ್ದರಿಂದ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಹಾವಿನ ಫೋಟೋ ಇಡಬಹುದೇ? ಇಟ್ಟರೆ ಯಾವ ದಿಕ್ಕಿನಲ್ಲಿಡಬೇಕು? ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಸನಾತನ ಧರ್ಮದಲ್ಲಿ ಹಾವಿನ ಮಹತ್ವ:
ಹಿಂದೂ ಧರ್ಮದಲ್ಲಿ ಹಾವುಗಳನ್ನು ಕೇವಲ ಪ್ರಾಣಿಗಳಾಗಿ ನೋಡದೆ, ದೈವಿಕ ಶಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಶಿವನ ಆಭರಣ ಹಾಗೂ ಶ್ರೀಕೃಷ್ಣನು ಹಾವಿನ ಮೇಲೆ ನೃತ್ಯ ಮಾಡುವ ಮೂಲಕ ಅದರ ದೈವಿಕ ಸಂಬಂಧವನ್ನು ಸಾರಿದ್ದಾನೆ. ಹೀಗಾಗಿ, ಹಾವನ್ನು ದೇವತೆಯ ರೂಪದಲ್ಲಿ ಮನೆಯಲ್ಲಿ ಆರಾಧಿಸುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.
ಯಾವ ದಿಕ್ಕಿನಲ್ಲಿ ಇರಿಸುವುದು ಉತ್ತಮ?
ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಫೋಟೋವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ ಅದು ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ಮನೆಯ ಪೂರ್ವ ದಿಕ್ಕಿನಲ್ಲಿ ಹಾವಿನ ಫೋಟೋ ಇರಿಸುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೇ ಉತ್ತರ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಪಡುತ್ತಾರೆ.
ಮನೆಯಲ್ಲಿ ಹಾವಿನ ಫೋಟೋ ಇರಿಸುವುದರಿಂದಾಗುವ ಪ್ರಯೋಜನಗಳು:
ಮನೆಯಲ್ಲಿ ನಾಗದೇವತೆಯ ಅಥವಾ ಹಾವಿನ ಫೋಟೋವನ್ನು ಸರಿಯಾದ ನಿಯಮದಂತೆ ಇರಿಸುವುದರಿಂದ ಹಲವು ಲಾಭಗಳಿವೆ. ಇದು ಮನೆಗೆ ಪ್ರವೇಶಿಸುವ ದುಷ್ಟ ಶಕ್ತಿಗಳನ್ನು ಮತ್ತು ನಕಾರಾತ್ಮಕ ಕಂಪನಗಳನ್ನು ತಡೆಯುತ್ತದೆ. ಕೆಟ್ಟ ದೃಷ್ಟಿಯಿಂದ (Evil Eye) ಮನೆಯನ್ನು ರಕ್ಷಿಸುವ ಕವಚದಂತೆ ಇದು ಕೆಲಸ ಮಾಡುತ್ತದೆ. ವೃತ್ತಿ ಜೀವನದಲ್ಲಿ ಏಳಿಗೆ, ಆರ್ಥಿಕ ಸುಧಾರಣೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲು ಇದು ಪೂರಕವಾಗಿದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಗಮನಿಸಬೇಕಾದ ಎಚ್ಚರಿಕೆಗಳು ಮತ್ತು ನಿಯಮಗಳು:
ಹಾವಿನ ಫೋಟೋ ಇಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ಮನೆಯಲ್ಲಿ ತುಂಬಾ ದೊಡ್ಡದಾದ ಅಥವಾ ಭಯ ಹುಟ್ಟಿಸುವಂತಹ ಹಾವಿನ ಚಿತ್ರಗಳನ್ನು ಇಡಬಾರದು. ಇದು ಮನಸ್ಸಿನಲ್ಲಿ ಆತಂಕವನ್ನು ಮೂಡಿಸಬಹುದು. ಒಂದು ವೇಳೆ ಹಾವಿನ ಫೋಟೋವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ, ಕನಸಿನಲ್ಲಿ ಹಾವು ಬೆನ್ನಟ್ಟುವಂತೆ ಭಾಸವಾಗುವುದು ಅಥವಾ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಶಾಂತವಾಗಿರುವ ಅಥವಾ ದೈವಿಕ ಕಳೆ ಇರುವ ನಾಗದೇವತೆಯ ಫೋಟೋ ಆಯ್ಕೆ ಮಾಡುವುದು ಉತ್ತಮ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ