ಮುಂಬೈ, ಜುಲೈ 18: ಮುಂಬೈನ ಅಪಾರ್ಟ್ಮೆಂಟ್ನ ಲಿಫ್ಟ್‌ನಲ್ಲಿ ಸಾಕು ನಾಯಿ(Dog)ಯೊಂದು ಯುವತಿಯರ ಮೇಲೆ ತೀವ್ರ ಆಕ್ರಮಣಕಾರಿಯಾಗಿ ದಾಳಿ ನಡೆಸಿದ ಘಟನೆ ನಡೆದಿದೆ.ಲಿಫ್ಟ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಮಲಾಡ್ ಪಶ್ಚಿಮ ಉಪನಗರದಲ್ಲಿರುವ ಪ್ರಸಿದ್ಧ ‘ಶೇತ್ ಐರೀನ್ ಟವರ್’ನಲ್ಲಿ ಈ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮೂವರು ಯುವತಿಯರು ಈಗಾಗಲೇ ಲಿಫ್ಟ್‌ನ ಒಳಗೆ ಇದ್ದಾಗ, ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯೊಂದಿಗೆ ಲಿಫ್ಟ್ ಪ್ರವೇಶಿಸಿದ್ದಾರೆ. ನಾಯಿಯ ಬಾಯಿಗೆ ಸುರಕ್ಷತಾ ಕವಚ (Muzzle) ಹಾಕಲಾಗಿದ್ದರೂ, ಲಿಫ್ಟ್ ಬಾಗಿಲು ಮುಚ್ಚಿ ಕೆಳಗೆ ಚಲಿಸಲು ಆರಂಭಿಸಿದ ತಕ್ಷಣ, ಅದು ಯುವತಿಯರ ಮೇಲೆ ದಾಳಿ ಮಾಡಿದೆ.
ವಿಡಿಯೋ
CCTV from Mumbai Malad West lift: Pet dog suddenly lunges aggressively at 3 young girls. Owner struggles to restrain it on leash as kids panic. No serious injuries, but sparks debate on pet control in shared spaces. pic.twitter.com/wvzhIwAM0y
— Ghar Ke Kalesh (@gharkekalesh) July 17, 2026
ನಾಯಿ ತೀವ್ರವಾಗಿ ಆಕ್ರಮಣ ಮಾಡುತ್ತಿದ್ದಂತೆ ಹೆದರಿದ ಇಬ್ಬರು ಯುವತಿಯರು ತಕ್ಷಣವೇ ಲಿಫ್ಟ್‌ನಿಂದ ಹೊರಗೆ ಓಡಿಹೋಗುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಬ್ಬ ಯುವತಿ ಲಿಫ್ಟ್‌ನ ಮೂಲೆಯಲ್ಲಿ ಸಿಲುಕಿಕೊಂಡಿದ್ದಾರೆ. ನಾಯಿಯ ಮಾಲೀಕ ಮಹಿಳೆ ಅದನ್ನು ತುಂಬಾ ಕಷ್ಟಪಟ್ಟಿದ್ದಾರೆ. ಅದೃಷ್ಟವಶಾತ್ ಲಿಫ್ಟ್ ಕೆಳಮಹಡಿ ತಲುಪುತ್ತಿದ್ದಂತೆ ಆ ಯುವತಿಯೂ ಹೊರಗೆ ಹೋಗಿದ್ದಾರೆ, ಮಾಲೀಕರು ನಾಯಿಯನ್ನು ಹಿಂದಕ್ಕೆ ಎಳೆದಿದ್ದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಮತ್ತಷ್ಟು ಓದಿ: ಪತ್ನಿಯನ್ನ ನೋಡಿ ಬೊಗಳಿದ್ದಕ್ಕೆ ಸ್ಕೂಬಿ ಮೇಲೆ ಕ್ರೌರ್ಯ ಮೆರೆದ ಪತಿ: ಪೊಲೀಸ್ ಮೆಟ್ಟಿಲೇರಿದ ನಾಯಿ ಗಲಾಟೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, “ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆ ನಿವಾಸಿಯು ತನ್ನ ಸಾಕುಪ್ರಾಣಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯಲು ಮುಂಚಿತವಾಗಿಯೇ ಅನುಮತಿ ಪಡೆದಿದ್ದರು” ಎಂದು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕುಪ್ರಾಣಿಗಳ ನಿಯಮದ ಚರ್ಚೆ
ಯಾವುದೇ ಅನಾಹುತ ಸಂಭವಿಸದಿದ್ದರೂ, ಈ ವಿಡಿಯೋ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಭಾರಿ ಕಳವಳ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.
ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಗರಗಳ ಬಹುಮಹಡಿ ಕಟ್ಟಡಗಳ ಲಿಫ್ಟ್‌ಗಳಲ್ಲಿ ಸಾಕು ನಾಯಿಗಳು ಮಕ್ಕಳ ಮತ್ತು ಯುವಕರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಲಿಫ್ಟ್‌ನಂತಹ ಮುಚ್ಚಿದ ಜಾಗದಲ್ಲಿ ಅಪರಿಚಿತರನ್ನು ಕಂಡಾಗ ನಾಯಿಗಳು ಆತಂಕಗೊಂಡು ಆಕ್ರಮಣಕಾರಿಯಾಗುತ್ತವೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.
ಘಟನೆಯ ಬೆನ್ನಲ್ಲೇ, ಸೊಸೈಟಿಗಳಲ್ಲಿ ಸಾಕು ನಾಯಿಗಳನ್ನು ಕರೆದೊಯ್ಯಲು ಪ್ರತ್ಯೇಕ ‘ಸರ್ವಿಸ್ ಲಿಫ್ಟ್’ ಬಳಸಬೇಕು, ಮಾಲೀಕರು ನಾಯಿಯ ಸರಪಳಿಯನ್ನು ಕಟ್ಟುನಿಟ್ಟಾಗಿ ಹಿಡಿದುಕೊಳ್ಳಬೇಕು ಮತ್ತು ಜನನಿಬಿಡ ಅವಧಿಯಲ್ಲಿ ಸಾಕುಪ್ರಾಣಿಗಳನ್ನು ಲಿಫ್ಟ್‌ಗೆ ತರಬಾರದು ಎಂಬ ನಿಯಮಗಳನ್ನು ಜಾರಿಗೆ ತರುವಂತೆ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 3:58 pm, Sat, 18 July 26