Headlines

World Voice Day: ಏಪ್ರಿಲ್ 16 ವಿಶ್ವ ಧ್ವನಿ ದಿನ; ಈ ದಿನದ ಇತಿಹಾಸ ಮತ್ತು ಮಹತ್ವ ಇಲ್ಲಿ ತಿಳಿಯಿರಿ – Kannada News | World Voice Day: Ayurvedic Secrets for a Healthy Voice and Vocal Care Tips

ಪ್ರತಿ ವರ್ಷ ಏಪ್ರಿಲ್ 16ರಂದು ವಿಶ್ವ ಧ್ವನಿ ದಿನವನ್ನು ಆಚರಿಸಲಾಗುತ್ತದೆ. ಮಾತು ಮನದ ಕನ್ನಡಿಯಾದರೆ, ಧ್ವನಿ ಜೀವದ ಪ್ರತಿಬಿಂಬವಾಗಿದೆ. ನಾವು ಮಾತನಾಡುವ ಪ್ರತಿಯೊಂದು ಪದ, ಹಾಡುವ ಪ್ರತಿಯೊಂದು ರಾಗ ಮತ್ತು ನಗುವ ಪ್ರತಿಯೊಂದು ಕ್ಷಣದಲ್ಲೂ ನಮ್ಮ ಧ್ವನಿ ನಮ್ಮ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮಾನವನಿಗೆ ಪ್ರಕೃತಿ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಧ್ವನಿಯೂ ಒಂದು. ಯಾವುದೇ ಯಂತ್ರಕ್ಕೂ ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಿಲ್ಲದ ವಿಶಿಷ್ಟ ಗುರುತು ನಮ್ಮದಾಗಿದ್ದು, ಈ ಅಮೂಲ್ಯವಾದ ವರವನ್ನು ಗೌರವಿಸಲು ಮತ್ತು ಕಾಪಾಡಲು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.

ಈ ಆಚರಣೆಯ ಇತಿಹಾಸವನ್ನು ಗಮನಿಸಿದರೆ, 1999ರಲ್ಲಿ ಬ್ರೆಜಿಲ್‌ನಲ್ಲಿ ಮೊದಲ ಬಾರಿಗೆ “ವಾಯ್ಸ್ ಡೇ” ಆರಂಭವಾಯಿತು. ಕಿವಿ-ಮೂಗು-ಗಂಟಲು ತಜ್ಞರು ಹಾಗೂ ಭಾಷಣ ತಜ್ಞರು ಧ್ವನಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಿದರು. ನಂತರ 2002ರಲ್ಲಿ ಅಮೆರಿಕದ ಅಕಾಡೆಮಿ ಆಫ್ ಒಟೊಲಾರಿಂಗಾಲಜಿ ಇದನ್ನು ಜಾಗತಿಕವಾಗಿ ಅಂಗೀಕರಿಸಿತು. ಇಂದು ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಧ್ವನಿಯ ಆರೋಗ್ಯ, ಗಂಟಲಿನ ಸಮಸ್ಯೆಗಳ ತಡೆಗಟ್ಟುವಿಕೆ ಮತ್ತು ಕಲೆ ಹಾಗೂ ವೃತ್ತಿಜೀವನದಲ್ಲಿ ಧ್ವನಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.

ಆಯುರ್ವೇದದ ದೃಷ್ಟಿಕೋನದಲ್ಲಿ ಧ್ವನಿ ಎಂಬುದು ಕೇವಲ ಶಬ್ದವಲ್ಲ; ಅದು ಪ್ರಾಣಶಕ್ತಿ, ವಾಯು, ಮನಸ್ಸು ಮತ್ತು ದೇಹದ ಸಮತೋಲನದ ಫಲವಾಗಿದೆ. ಆಯುರ್ವೇದದ ಪ್ರಕಾರ ‘ಪ್ರಾಣ ವಾಯು’ ಧ್ವನಿಯ ಮೂಲವಾದರೆ, ‘ಉದಾನ ವಾಯು’ ಧ್ವನಿಯನ್ನು ಹೊರಹಾಕುವ ಶಕ್ತಿಯಾಗಿದೆ. ಇವುಗಳ ಸಮತೋಲನವಿದ್ದಾಗ ಮಾತ್ರ ಧ್ವನಿ ಮಧುರ ಮತ್ತು ಸ್ಪಷ್ಟವಾಗಿರುತ್ತದೆ. ಆದರೆ ಅತಿಯಾಗಿ ಕೂಗುವುದು, ತಣ್ಣೀರು ಅಥವಾ ಐಸ್ ಪದಾರ್ಥಗಳ ಸೇವನೆ, ಧೂಳು, ಮಾಲಿನ್ಯ, ಧೂಮಪಾನ ಮತ್ತು ಮಾನಸಿಕ ಒತ್ತಡದಿಂದ ಧ್ವನಿ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಬೆಚ್ಚಗಿನ ನೀರು ಕುಡಿಯುವುದು, ಪ್ರಾಣಾಯಾಮ ಮಾಡುವುದು ಮತ್ತು ಧ್ವನಿಗೆ ಅಗತ್ಯ ವಿಶ್ರಾಂತಿ ನೀಡುವುದು ಅತ್ಯಗತ್ಯ.

ಇದನ್ನೂ ಓದಿ: ಪ್ರತಿ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬರಿಗೆ ಮಧುಮೇಹದ ಅಪಾಯ! ಸಮೀಕ್ಷೆಯಲ್ಲಿ ಆತಂಕಕಾರಿ ಅಂಶ ಬಹಿರಂ

ಭಾರತೀಯ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಧ್ವನಿ ವಿಜ್ಞಾನದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಮಹರ್ಷಿ ಚರಕರು ಧ್ವನಿಯನ್ನು ‘ಶಬ್ದ ತನ್ಮಾತ್ರ’ ಎಂದು ವಿವರಿಸಿ ಕಂಠರೋಗಗಳಿಗೆ ಚಿಕಿತ್ಸೆ ನೀಡಿದರೆ, ಸುಶ್ರುತರು ಧ್ವನಿ ತಂತಿಗಳ ರಚನೆಯನ್ನು ವಿವರಿಸಿದ್ದರು. ಪತಂಜಲಿ ಮಹರ್ಷಿಗಳು ಪ್ರಾಣಾಯಾಮದ ಮೂಲಕ ಧ್ವನಿ ಶಕ್ತಿಯನ್ನು ವೃದ್ಧಿಸುವ ಹಾದಿ ತೋರಿಸಿಕೊಟ್ಟರೆ, ಭರತ ಮುನಿಗಳು ನಾಟ್ಯಶಾಸ್ತ್ರದ ಮೂಲಕ ಧ್ವನಿಯನ್ನು ಕಲೆಯಾಗಿ ರೂಪಿಸಿದರು. ಈ ಮಹನೀಯರ ಕೊಡುಗೆಯಿಂದಾಗಿಯೇ ಇಂದು ನಮಗೆ ಧ್ವನಿಯನ್ನು ಶಕ್ತಿ, ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಸಾಧನೆಯಾಗಿ ಕಾಣಲು ಸಾಧ್ಯವಾಗಿದೆ.

ವಿಶೇಷವಾಗಿ ಗಾಯಕರು, ಶಿಕ್ಷಕರು ಮತ್ತು ವಾಗ್ಮಿಗಳಿಗೆ ಧ್ವನಿಯೇ ಜೀವನಾಧಾರ. ಇವರಿಗೆ ಧ್ವನಿ ಕುಂದುವುದು ಅಥವಾ ಗಂಟಲು ಭಾರವಾಗುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಆಯುರ್ವೇದದಲ್ಲಿ ‘ಸಪ್ತಪರ್ಣಿ’ ಅಥವಾ ‘ಮದ್ದಾಲೆ’ ಎಂಬ ವನಸ್ಪತಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇದು ಗಂಟಲು ಉರಿಯನ್ನು ಕಡಿಮೆ ಮಾಡಿ, ಕಫ ನಿವಾರಿಸುವ ಮೂಲಕ ಧ್ವನಿ ತಂತಿಗಳನ್ನು ಬಲಪಡಿಸುತ್ತದೆ. ಒಟ್ಟಾರೆಯಾಗಿ, ಧ್ವನಿ ಎಂಬುದು ಕೇವಲ ಮಾತಲ್ಲ; ಅದು ನಮ್ಮ ಅಸ್ತಿತ್ವದ ಗುರುತು. ಅದನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *