ಅಂಜನಾದ್ರಿಗೆ 2 ಕೋಟಿ ರೂ. ಚಿನ್ನಾಭರಣ ಕಾಣಿಕೆ: ಹಲವು ಅನುಮಾನಗಳಿಗೆ ಕಾರಣವಾಯ್ತು ಉದ್ಯಮಿಯ ಬಿಲ್ – Kannada News | Anjanadri Temple Gold Donation Row: Businessman Mahesh Reddy’s Released Bill Raises Doubts

ಕೊಪ್ಪಳ, ಮೇ 11: ನಗರದ ಸುಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Betta) ಆಂಜನೇಯ ಸ್ವಾಮಿಗೆ ಹೈದರಾಬಾದ್​​ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ಮೌಲ್ಯದ ಚಿನ್ನದ (Gold) ಆಭರಣಗಳು ಅಸಲಿಗೆ ಬಂಗಾರವೇ ಅಲ್ಲ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಹೀಗಾಗಿ ಆಭರಣ ಖರೀದಿಯ ಅಧಿಕೃತ ಬಿಲ್ ನೀಡುವಂತೆ ಜಿಲ್ಲಾಡಳಿತ ನೋಟಿಸ್ ಬೆನ್ನಲ್ಲೇ, ಇದೀಗ ಉದ್ಯಮಿ ಬಿಲ್ ಬಿಡುಗಡೆ ಮಾಡಿದ್ದು, ಆದರೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಾಂಶಗಳು

  • ಕೊಪ್ಪಳ ಜಿಲ್ಲಾಡಳಿತ ನೋಟಿಸ್ ಬೆನ್ನಲ್ಲೇ ಬಂಗಾರ ಖರೀದಿ ಬಿಲ್ ಬಿಡುಗಡೆ ಮಾಡಿದ ಉದ್ಯಮಿ
  • ಹಲವು ಅನುಮಾನಗಳಿಗೆ ಕಾರಣವಾದ ಬಂಗಾರ ಖರೀದಿ ಬಿಲ್​​
  • 8 ದಿನಗಳಲ್ಲಿ ಇಷ್ಟೆಲ್ಲಾ ಆಭರಣಗಳು ತಯಾರಿಸಲು ಹೇಗೆ ಸಾಧ್ಯ?

ಮೇ 8ರಂದು ಅಂಜನಾದ್ರಿ ದೇವಸ್ಥಾನಕ್ಕೆ ಪ್ರಭಾವಳಿ, ಚಕ್ರ, ಗದೆ ಸೇರಿದಂತೆ ವಿವಿಧ ಚಿನ್ನದ ವಸ್ತುಗಳನ್ನು ಮಹೇಶ್ ರೆಡ್ಡಿ ಕುಟುಂಬ ಸಮೇತ ಬಂದು ದೇಣಿಗೆ ನೀಡಿದ್ದರು. ಈ ದೇಣಿಗೆಗೆ ಸಂಬಂಧಿಸಿದಂತೆ ಖರೀದಿ ಬಿಲ್ ಸಲ್ಲಿಸುವಂತೆ ಜಿಲ್ಲಾಡಳಿತವು ಕಳೆದ ಎರಡು ದಿನಗಳಿಂದ ನೋಟಿಸ್ ನೀಡಿತ್ತು. ಅದರಂತೆ ಇಂದು ಉದ್ಯಮಿ ಮಹೇಶ್ ರೆಡ್ಡಿ ಬಿಲ್ ಸಲ್ಲಿಸಿದ್ದಾರೆ.

ಇದನ್ನೂ ಓದಿ: 2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್?

ಸಲ್ಲಿಕೆಯಾದ ಬಿಲ್‌ನ ಪ್ರಕಾರ, 2026ರ ಎಪ್ರಿಲ್ 28ರಂದು ಹೈದರಾಬಾದ್‌ನ ತಿರುಮಾಲ್ ಜುವೆಲ್ಲರ್ಸ್‌ನಲ್ಲಿ 1400 ಗ್ರಾಂ ಚಿನ್ನವನ್ನು ಖರೀದಿಸಲಾಗಿದೆ. ಎಎಂಆರ್ ಕಂಪನಿ ಹೆಸರಿನಲ್ಲಿ ಬಿಡುಗಡೆಯಾಗಿರುವ ಬಿಲ್‌ನ ಮೊತ್ತ 2 ಕೋಟಿ 20 ಲಕ್ಷದ 42 ಸಾವಿರ ರೂಪಾಯಿ ಆಗಿದೆ. ಆದರೆ ಬಿಲ್ ಬಿಡುಗಡೆ ದಿನಾಂಕವನ್ನು ಏಪ್ರಿಲ್ 24 ಎಂದು ನಮೂದಿಸಲಾಗಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ.

ಇದು ಕೇವಲ ಪ್ರಚಾರದ ಗಿಮಿಕ್ಕಾ?

ಸುಂದರ ಕಲಾಕೃತಿ ಹೊಂದಿರುವ ಪ್ರಭಾವಳಿ, ಚಕ್ರ, ಆಂಜನೇಯನ ಗದೇ ಸೇರಿ 12 ಆಭರಣಗಳನ್ನ ಮಹೇಶ್ ರೆಡ್ಡಿ ನೀಡಿದ್ದರು. ಬಂಗಾರ ಖರೀದಿಯ ಬಳಿಕ 08 ದಿನಗಳಲ್ಲಿ, ಇಷ್ಟೆಲ್ಲಾ ತಯಾರು ಮಾಡಲು ಹೇಗೆ ಸಾಧ್ಯವಾಯಿತು ಎನ್ನುವ ಅನುಮಾನ ಶುರುವಾಗಿದೆ. ಇನ್ನು ಜಿಲ್ಲಾಡಳಿತ ಇದನ್ನ ಪರಿಶೀಲನೆ ನಡೆಸಿದ ಬಳಿಕ, ಆಭರಣದಲ್ಲಿ 1400 ಗ್ರಾಂ ಬಂಗಾರ ಇರುವುದು ಪತ್ತೆಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಖಜಾನೆಗೆ ಆಭರಣಗಳನ್ನ ಜಮಾ ಮಾಡಿಕೊಂಡಿಲ್ಲ. ಇದು ಕೇವಲ ಪ್ರಚಾರದ ಗಿಮಿಕ್ಕಾ ಎಂಬ ಪ್ರಶ್ನೆ ಇದೀಗ ಭಕ್ತರಲ್ಲಿ ಮೂಡಿದೆ.

ಘಟನೆ ಹಿನ್ನೆಲೆ

ಉದ್ಯಮಿ ಮಹೇಶ ರೆಡ್ಡಿ ಮೇ 08ರಂದು ಕಿಷ್ಕಿಂಧಾ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಭರ್ಜರಿ ದೇಣಿಗೆ ನೀಡಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಗೆಳೆಯರೂ ಆಗಿರುವ ಮಹೇಶ ರೆಡ್ಡಿ, ಸ್ವಾಮಿಗೆ ಪ್ರಭಾವಳಿ, ಚಕ್ರ ಹಾಗೂ ಗದೆಯನ್ನು ದಾನವಾಗಿ ಅರ್ಪಿಸಿದ್ದರು. 2.50 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಎಂದು ಸ್ವತಃ ಜನಾರ್ದನ ರೆಡ್ಡಿ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ, ದೇಣಿಗೆ ಸ್ವೀಕರಿಸಿದ ಬಳಿಕ ಜಿಲ್ಲಾಡಳಿತ ಈ ಆಭರಣಗಳನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದಾಗ ಅಸಲಿ ಬಣ್ಣ ಬಯಲಾಗಿದೆ.

ಇದನ್ನೂ ಓದಿ: ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!

ತಜ್ಞರ ತಂಡ ಪರಿಶೀಲಿಸಿದಾಗ ಅಷ್ಟು ದೊಡ್ಡ ಆಭರಣಗಳಲ್ಲಿ ಇದ್ದದ್ದು ಕೇವಲ 250 ರಿಂದ 300 ಗ್ರಾಂ ಬಂಗಾರ ಮಾತ್ರ. ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಲಾದ ಆಭರಣಗಳು ಅಸಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪರೀಶಿಲನೆ ವೇಳೆ ಬಯಲು ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *