ಅಗ್ಗಿಪೆಟ್ಟಿಗೆಯಲ್ಲಿ ಹಿಡಿಯುತ್ತೆ ಈ ಪಟ್ಟು ಸೀರೆ: ಸಿರಿಸಿಲ್ಲಾ ನೇಕಾರರ ವಿಸ್ಮಯಕಾರಿ ಕಲೆಗೆ ಒಬಾಮಾ, ಮೋದಿ ಫಿದಾ – Kannada News | Matchbox Saree: Sircilla’s Iconic Handloom Craft, Nalla Vijay Kumar’s Legacy and Global Recognition

ಹೈದರಾಬಾದ್, ಆ.7: ತೆಲಂಗಾಣದ ಪ್ರಸಿದ್ಧ ‘ಸಿರಿಸಿಲ್ಲಾ’ (Sircilla) ಪ್ರದೇಶದ ಹಸ್ತಚಾಲಿತ ಮಗ್ಗದ (Handloom) ನೇಕಾರರು ತಮ್ಮ ಅಪ್ರತಿಮ ಕೌಶಲದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಅತ್ಯಂತ ಸೂಕ್ಷ್ಮವಾದ, ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ (Matchbox) ಮಡಚಿಡಬಹುದಾದ ವಿಶೇಷ ‘ಮ್ಯಾಚ್‌ಬಾಕ್ಸ್ ಪಟ್ಟು ಸೀರೆ’ಯನ್ನು ತಯಾರಿಸುವ ಮೂಲಕ ನೇಯ್ಗೆ ಕಲೆಗೆ ಹೊಸ ಮೆರಗು ನೀಡಿದ್ದಾರೆ.

ಈ ಸೀರೆಯನ್ನು ಶುದ್ಧ ರೇಷ್ಮೆ ದಾರಗಳು ಹಾಗೂ ನೈಸರ್ಗಿಕ ತರಕಾರಿ ಬಣ್ಣಗಳನ್ನು ಬಳಸಿ ಸಾಂಪ್ರದಾಯಿಕ ಇಕ್ಕತ್ ಶೈಲಿಯಲ್ಲಿ ಕೈಮಗ್ಗದಲ್ಲಿ ನೇಯ್ಯಲಾಗುತ್ತದೆ. ಅಗ್ಗಿಪೆಟ್ಟಿಗೆಯಲ್ಲಿ ಇಡುವಷ್ಟು ಸಣ್ಣದಾಗಿ ಮಡಚಬಹುದಾದರೂ, ಇದನ್ನು ಸಾಮಾನ್ಯ ರೇಷ್ಮೆ ಸೀರೆಯಂತೆಯೇ ಸುಲಭವಾಗಿ ಉಡಬಹುದಾಗಿದೆ. ಒಂದು ಸೀರೆಯನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಕನಿಷ್ಠ 6 ದಿನಗಳ ಶ್ರಮ ಬೇಕಾಗುತ್ತದೆ.

ಸಿರಿಸಿಲ್ಲಾದ ಪ್ರಸಿದ್ಧ ನೇಯ್ಗೆ ಕಲಾವಿದರಾದ ನಲ್ಲ ವಿಜಯ್ ಕುಮಾರ್ ಹಾಗೂ ವೆಲ್ದಿ ಹರಿಪ್ರಸಾದ್ ಈ ಅಪರೂಪದ ಸೀರೆಗಳನ್ನು ತಯಾರಿಸುವಲ್ಲಿ ಜಾಗತಿಕ ಗುರುತಿಸಿಕೊಂಡಿದ್ದಾರೆ. ನಲ್ಲ ವಿಜಯ್ ಅವರ ತಂದೆ ನಲ್ಲ ಪರಂಧಾಮುಲು ಅವರು 1987ರಲ್ಲಿ ಪ್ರಥಮ ಬಾರಿಗೆ ಇಂತಹ ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ ಹಿಡಿಯುವ ಸೀರೆಯನ್ನು ರೂಪಿಸಿ ‘ಸಿರಿಸಿಲ್ಲಾ ನೇಕಾರಿಕೆಗೆ’ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದ್ದರು. ಅವರ ಮಗ ವಿಜಯ್ ಕುಮಾರ್ ಪ್ರಸ್ತುತ ಈ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಸಿರಿಸಿಲ್ಲಾದ ಈ ಮ್ಯಾಚ್‌ಬಾಕ್ಸ್ ಸೀರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಪ್ರಶಂಸೆ ಪಡೆದುಕೊಂಡಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಮಿಶೆಲ್ ಒಬಾಮಾ ಅವರಿಗೆ ಈ ವಿಶೇಷ ಸೀರೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಸಿರಿಸಿಲ್ಲಾ ನೇಕಾರರ ಕೀರ್ತಿ ಜಗತ್ತಿನಾದ್ಯಂತ ಪಸರಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಸಹ ಈ ವಿಶೇಷ ಕೈಮಗ್ಗ ಶೈಲಿಯಲ್ಲಿ ತಯಾರಿಸಿದ ಶಾಲು ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ: ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ, ಲಕ್ಷಾಂತರ ರೂ. ನಷ್ಟದಲ್ಲಿ ರಾಫ್ಟಿಂಗ್ ಉದ್ಯಮಿಗಳು

ತಮ್ಮ ಕಲಾ ನೈಪುಣ್ಯತೆಯನ್ನು ಭಕ್ತಿಯೊಂದಿಗೆ ಸಮ್ಮಿಳನಗೊಳಿಸಿರುವ ನಲ್ಲ ವಿಜಯ್ ಕುಮಾರ್ ಅವರು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ತಿರುಮಲ ತಿರುಪತಿ ದೇವಸ್ಥಾನದ ಶ್ರೀ ಪದ್ಮಾವತಿ ಅಮ್ಮನವರಿಗೆ, ಶ್ರೀಶೈಲದ ಭ್ರಮರಾಂಬಿಕಾ ದೇವಿಗೆ ಹಾಗೂ ವಿಜಯವಾಡದ ಕನಕದುರ್ಗಮ್ಮನಿಗೆ ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ ಹಿಡಿಯುವ ಈ ವಿಶೇಷ ಪಟ್ಟು ಸೀರೆಗಳನ್ನು ಸಮರ್ಪಿಸಿ ಭಕ್ತಿ ಮೆರೆದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *