ತಮಿಳು ನಟ ಅಜಿತ್ ಕುಮಾರ್ ಅವರ (Ajit Kumar) ಮುಂದಿನ ಸಿನಿಮಾ ‘AK64’ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳ ಕಥೆ ಅಥವಾ ನಿರ್ದೇಶಕರ ಬಗ್ಗೆ ಚರ್ಚೆಯಾಗುವುದು ಸಹಜ. ಆದರೆ, ಈ ಬಾರಿ ಅಜಿತ್ ಕುಮಾರ್ ಅವರ ಸಂಭಾವನೆ ವಿಚಾರವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಅಜಿತ್ ಅವರ ಹೊಸ ಪ್ರಾಜೆಕ್ಟ್ ಘೋಷಣೆಯಾಗದೇ ತಡವಾಗುತ್ತಿದೆ. ಇದಕ್ಕೆ ಅವರ ಭಾರಿ ಮೊತ್ತದ ಸ್ಯಾಲರಿ ಮಾತುಕತೆಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅಜಿತ್ ಅವರಿಗೆ ಸಾಲು ಸಾಲು ಸೋಲುಗಳು ಎದುರಾಗಿವೆ. ಅವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಾವಾಗಿಯೇ ತಮ್ಮ ಸಂಭಾವನೆಯನ್ನು ಸುಮಾರು 150 ಕೋಟಿ ರೂಪಾಯಿಗೆ ಇಳಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ಅವರ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೆ ಪಡೆದಿದ್ದಕ್ಕಿಂತ ಕಡಿಮೆ ಮೊತ್ತವಾಗಿದೆ. ಆದಾಗ್ಯೂ, ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಅಜಿತ್ ಕೇಳುತ್ತಿರುವ ಈ ಭಾರಿ ಮೊತ್ತವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸಂಭಾವನೆಯನ್ನು ಇನ್ನೂ ಕಡಿಮೆ ಮಾಡುವಂತೆ ನಿರ್ಮಾಣ ಸಂಸ್ಥೆಗಳು ಅಜಿತ್ಗೆ ಬೇಡಿಕೆ ಇಡುತ್ತಿವೆ.
ನಿರ್ಮಾಣ ಸಂಸ್ಥೆಗಳ ಆಫರ್ ಎಷ್ಟು?:
ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ತಮಿಳಿನ ಮುಂಚೂಣಿ ನಿರ್ಮಾಣ ಸಂಸ್ಥೆಯೊಂದು ಅಜಿತ್ ಅವರೊಂದಿಗೆ ಮಾತುಕತೆ ನಡೆಸಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಸಹಮತ ಮೂಡದ ಕಾರಣ ಮಾತುಕತೆ ಅರ್ಧಕ್ಕೆ ನಿಂತಿದೆ. ಆ ಪ್ರಮುಖ ಬ್ಯಾನರ್ ಅಜಿತ್ ಅವರಿಗೆ ಗರಿಷ್ಠ 90 ಕೋಟಿ ರೂಪಾಯಿ ನೀಡಲು ಮಾತ್ರ ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಮತ್ತೊಂದು ನಿರ್ಮಾಣ ಸಂಸ್ಥೆಯು ಅಜಿತ್ ಅವರಿಗೆ ಸುಮಾರು 110 ಕೋಟಿ ರೂಪಾಯಿ ಆಫರ್ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಅಜಿತ್ ಸಂಭಾವನೆ 170 ರಿಂದ 200 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇತ್ತು ಎನ್ನಲಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಫೀಲ್ಡ್ನಲ್ಲಿ ನಟ ಅಜಿತ್ ಕುಮಾರ್ ವಿಡಿಯೋ ನೋಡಿ
ಯಾರ ಜೊತೆ ಸಿನಿಮಾ?:
ಪ್ರಸ್ತುತ ಅಜಿತ್ ಕುಮಾರ್ ಅವರ ಮುಂದೆ ಎರಡು ಪ್ರಮುಖ ಪ್ರಾಜೆಕ್ಟ್‌ಗಳು ಇವೆ. ಒಂದು ‘ಗುಡ್ ಬ್ಯಾಡ್ ಅಗ್ಲಿ’ ಖ್ಯಾತಿಯ ಅಧಿಕ್ ರವಿಚಂದ್ರನ್ ಅವರೊಂದಿಗಿನ ಸಿನಿಮಾ ಹಾಗೂ ಮತ್ತೊಂದು ಅವರ ಆಪ್ತ ನಿರ್ದೇಶಕ ಸಿರುತೈ ಶಿವ ಅವರೊಂದಿಗಿನ ಚಿತ್ರ. ಇವೆರಡೂ ದೊಡ್ಡ ಬಜೆಟ್‌ನ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಸಂಭಾವನೆ ಗೊಂದಲ ಮುಗಿಯದ ಕಾರಣ ಯಾವುದೇ ಪ್ರಾಜೆಕ್ಟ್ ಇನ್ನೂ ಅಧಿಕೃತವಾಗಿ ಆರಂಭ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
