ಸುಶ್ಮಾ ಮತ್ತು ಆಕೆಯ ಪತಿ ಪುನೀತ್ ಕುಮಾರ್Image Credit source: INDIA tv
ಬೆಂಗಳೂರು, ಮಾರ್ಚ್ 04: ಕೌಟುಂಬಿಕ ಕಲಹದ ಹಿನ್ನೆಲೆ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅಬ್ಬಿಗೆರೆ (Bengaluru) ಪ್ರದೇಶದಲ್ಲಿ ನಡೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅತ್ತೆಯ ಕಾಟದಿಂದ ಬೇಸತ್ತಿದ್ದ ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಅಡಿಗೆ ವಿಷಯಕ್ಕೆ ಅತ್ತೆಯಿಂದ ಕಿರುಕುಳ
ಬೆಂಗಳೂರು ನಿವಾಸಿ ಸುಶ್ಮಾ (35) ಡೆಲ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ನನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಮಗನೂ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳ ಕುರಿತಾಗಿ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮಂಗಳವಾರ ಅತ್ತೆ ಕಲ್ಪನಾ ಅವರೊಂದಿಗೆ ಅಡುಗೆ ಮಾಡುವ ವಿಚಾರದಲ್ಲಿ ವಾಗ್ವಾದ ಉಂಟಾಗಿತ್ತು. ಸುಶ್ಮಾ ಕುಟುಂಬದವರ ಆರೋಪದಂತೆ, ಆಕೆಯ ಅತ್ತೆ ಪದೇಪದೇ ಅಡುಗೆ ಮಾಡುವ ವಿಷಯದಲ್ಲಿ ಕಿರಿಕ್ ಮಾಡುತ್ತಿದ್ದು, ಇತರೆ ವಿಷಯಗಳಲ್ಲಿಯೂ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ; ಸಿಬ್ಬಂದಿಯಿಂದಲೇ ಕೃತ್ಯ!
ಈ ಪರಿಸ್ಥಿತಿಯಿಂದ ಮಾನಸಿಕವಾಗಿ ಅಸಹನೀಯಗೊಂಡ ಸುಶ್ಮಾ, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯ ನಂತರ ತಿಳಿಸಿದ್ದಾರೆ. ಇದೀಗ ವರದಕ್ಷಿಣೆ ಕಿರುಕುಳ ಆರೋಪದ ಮೇರೆಗೆ ಪತಿ ಪುನೀತ್ ಕುಮಾರ್ನನ್ನೂ ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಅತ್ತೆ ಕಲ್ಪನಾ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಪೂರ್ವಾಪರ ವಿಚಾರಗಳನ್ನು ಪೊಲೀಸರು ಸವಿಸ್ತಾರವಾಗಿ ಪರಿಶೀಲಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
