ವಿಜಯಪುರ, ಜುಲೈ 20: “ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ” ಎಂಬ ಮಾತಿಗೆ ಪುಷ್ಟಿ ನೀಡುವಂತಹ ಮತ್ತೊಂದು ವಂಚನೆ (Fraud) ಜಾಲ ವಿಜಯಪುರದಲ್ಲಿ (vijayapura) ಬಯಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಅಮಾಯಕ ಗ್ರಾಮೀಣ ಮಹಿಳೆಯರಿಗೆ ಮಕ್ಮಲ್ ಟೋಪಿ ಹಾಕಲಾಗಿದ್ದು, ಸಾಲದ ಆಸೆಗೆ ಬಿದ್ದ ನೂರಾರು ಜನ ಮುಂಗಾಡವಾಗಿ ಹಣ ಕಟ್ಟಿ ಲಕ್ಷ ಲಕ್ಷ ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಜನರನ್ನ ನಂಬಿಸಲು ಹೈಟೆಕ್ ಪ್ಲ್ಯಾನ್ ಮಾಡಿದ್ದ ಖದೀಮರು
ವಿಜಯಪುರ ತಾಲೂಕಿನ ಲೋಂಗಾವ, ಬಳ್ಳೊಳ್ಳಿ, ಕಪನಿಂಬರಗಿ, ಹೊರ್ತಿ, ತಿಕೋಟ ಮತ್ತು ಜಾಲಗೇರಿ ಸೇರಿದಂತೆ ಹಲವು ಹಳ್ಳಿಗಳ ನೂರಾರು ಜನರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದಿಕೊಂಡಿದ್ದಾರೆ. ಜನರನ್ನು ನಂಬಿಸಲೆಂದೇ ಈ ಖದೀಮರು ಹೈಟೆಕ್ ಪ್ಲ್ಯಾನ್ ಮಾಡಿದ್ದರು. ನಗರದ ಬಂಜಾರಾ ಕ್ರಾಸ್ ಬಳಿಯ ಪಾಟೀಲ್ ಪ್ಲಾನೆಟ್ ಒಳಗೆ ಸುಸಜ್ಜಿತ ಕಚೇರಿಯನ್ನು ತೆರೆದಿದ್ದರು. ವಿಜಯಪುರದ ಧೀರಜ್ ಸಿಂಗ್ ರಜಪೂತ್ ಹಾಗೂ ಲೋಂಗಾವ ಮೂಲದ ಬಂದೇನವಾಜ್ ಪಠಾಣ್ ಎಂಬುವವರೇ ಈ ವಂಚನೆ ಜಾಲದ ಸೂತ್ರಧಾರರು.
ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ!
ಈ ಖದೀಮರು ಕೇವಲ ನೂರಕ್ಕೆ 50 ಪೈಸೆ ಬಡ್ಡಿ ದರದಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಈ ಖದೀಮರು, ಮೊದಲು ಮೂರ್ನಾಲ್ಕು ಕಂತಿನ ಹಣ ಕಟ್ಟಿ, ಆಮೇಲೆ ನಿಮ್ಮ ಅಕೌಂಟ್‌ಗೆ ನೇರವಾಗಿ ಲೋನ್ ಜಮೆ ಆಗುತ್ತದೆ ಎಂದು ಯಾಮಾರಿಸಿದ್ದಾರೆ.
ತಾಳಿ ಅಡವಿಟ್ಟು ಹಣ ಕಟ್ಟಿದ ಮಹಿಳೆಯರು
ಹೆಚ್ಚಿನ ಲೋನ್ ಸಿಗುತ್ತದೆ ಎಂಬ ಆಸೆಗೆ ಬಿದ್ದ ಹಳ್ಳಿಗರು 50 ಸಾವಿರದಿಂದ ಹಿಡಿದು 1 ಲಕ್ಷ ರೂ.ವರೆಗೂ ಹಣ ತಂದು ಕಟ್ಟಿದ್ದಾರೆ. ಅದರಲ್ಲೂ ದುರಂತ ಅಂದರೆ ಸಾಲ ಸಿಕ್ಕರೆ ಬದುಕು ಹಸನಾಗಬಹುದು ಎಂಬ ಆಸೆಯಿಂದ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ತಾಳಿಯನ್ನ ಅಡವಿಟ್ಟು ತಂದು ಹಣ ಕಟ್ಟಿದ್ದಾರೆ. ಮಹಿಳೆಯರಿಗೆ ನಂಬಿಕೆ ಬರಲಿ ಎಂದು ನಕಲಿ ರಸೀದಿ, ಬಿಲ್ ಹಾಗೂ ನಕಲಿ ಬಾಂಡ್ ಪೇಪರ್‌ಗಳನ್ನು ಸಹ ಈ ವಂಚಕರು ನೀಡಿದ್ದರು. ಸದ್ಯ ಅಮಾಯಕರಿಂದ ಕೋಟಿಗೂ ಅಧಿಕ ಹಣ ಸಂಗ್ರಹಿಸಿ ಖದೀಮರು ಊರು ಬಿಟ್ಟು ಪರಾರಿಯಾಗಿದ್ದಾರೆ.
ಎಸ್ಪಿ ಕಚೇರಿ ಮೆಟ್ಟಿಲೇರಿದ ಸಂತ್ರಸ್ತರು
ಅತ್ತ ಲೋನ್ ಇಲ್ಲ, ಇತ್ತ ಕಟ್ಟಿದ ಹಣವೂ ಇಲ್ಲದೇ ಕಂಗಾಲಾದ ಮಹಿಳೆಯರು ಮತ್ತು ಸಂತ್ರಸ್ತರು ದೂರು ನೀಡಲು ವಿಜಯಪುರ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ್ದಾರೆ. ವಿಷಯದ ಗಾಂಭೀರ್ಯತೆ ಅರಿತಿರುವ ಎಸ್ಪಿ ಲಕ್ಷ್ಮಣ ನಿಂಬರಗಿ, ಸಂತ್ರಸ್ತರಿಂದ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
