ಆಗ್ರಾ, ಜುಲೈ 14: ಸಂಸಾರದ ಒಳಗಿನ ಜಗಳಗಳಿಂದಾಗಿ, ಮನೆ ಬಿಟ್ಟು ಹೋಗಿದ್ದ ಹೆಂಡತಿ(Wife) ವಾಪಸ್ ಬರಬೇಕಾದರೆ “ಹೆತ್ತ ತಾಯಿಯನ್ನೇ ಕೊಲ್ಲಬೇಕು” ಎಂಬ ಅತ್ತೆಯ ಮಾತನ್ನು ಕೇಳಿ ಮಗನೊಬ್ಬ ತನ್ನ ತಾಯಿಗೆ ವಿಷವುಣಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ತಾಯಿಗೆ ವಿಷವಿಕ್ಕಿ ಕೊಲ್ಲಲು ಯತ್ನಿಸಿರುವ ಅತ್ಯಂತ ಅಮಾನವೀಯ ಘಟನೆ ಆಗ್ರಾದ ಬಾರ್ಪುರ ಗ್ರಾಮದಲ್ಲಿ ನಡೆದಿದೆ. ಮಹಿಳೆ ಈಗ ರಾಮಮೂರ್ತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ
ಆರೋಪಿ ರವೀಂದ್ರ ತನ್ನ ಸಹೋದರ ಮುಖೇಶ್ ಜೊತೆ ಭೂಮಿ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಈ ಕೌಟುಂಬಿಕ ಕಲಹದಿಂದ ಬೇಸತ್ತು ಆತನ ಪತ್ನಿ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದಳು. ಜುಲೈ 9 ರಂದು ರವೀಂದ್ರ ತನ್ನ ಹೆಂಡತಿಯನ್ನು ವಾಪಸ್ ಕರೆಯಲು ಅತ್ತೆಯ ಮನೆಗೆ ಹೋದಾಗ, ಅತ್ತೆ ಫೂಲ್ವತಿ ನಿನ್ನ ಹೆಂಡತಿ ನಿನಗೆ ಬೇಕಾದರೆ, ಮೊದಲು ನಿನ್ನ ತಾಯಿಯನ್ನು ಕೊಲೆ ಮಾಡು ಎಂದು ಷರತ್ತು ವಿಧಿಸಿದ್ದಳು.
ಹೆಂಡತಿಯ ವ್ಯಾಮೋಹಕ್ಕೆ ಕಟ್ಟುಬಿದ್ದು ರವೀಂದ್ರ, ಮನೆಗೆ ಬಂದು ತಾಯಿ ತಿನ್ನುವ ಊಟಕ್ಕೆ ವಿಷ ಬೆರೆಸಿದ್ದಾನೆ. ಸದ್ಯ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದು, ಪ್ರಚೋದನೆ ನೀಡಿದ ಅತ್ತೆ ಫೂಲ್ವತಿ ಪರಾರಿಯಾಗಿದ್ದಾಳೆ.
ಮತ್ತೊಂದು ಘೋರ ಕೃತ್ಯ: ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಗಂಡ
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, 26 ವರ್ಷದ ಸತ್ಯವತಿ ಯಾದವ್ ಎಂಬ ಮಹಿಳೆಯನ್ನು ಆಕೆಯ ಪತಿ ಮತ್ತು ಸಂಬಂಧಿಕರು ಸೇರಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಮತ್ತಷ್ಟು ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್
ಜೂನ್ 1-2ರ ರಾತ್ರಿ ಕೊಲೆ ಮಾಡಿದ ನಂತರ, ಸಿಕ್ಕಿಬೀಳಬಾರದೆಂದು ಪತಿಯೇ ಪೊಲೀಸ್ ಠಾಣೆಗೆ ಹೋಗಿ “ನನ್ನ ಹೆಂಡತಿ ಕಾಣೆಯಾಗಿದ್ದಾಳೆ” ಎಂದು ದೂರು ನೀಡಿ ನಾಟಕವಾಡಿದ್ದ. ಆರೋಪಿಗಳು ಮಹಿಳೆಯ ಶವವನ್ನು ಹಲವು ದಿನಗಳ ಕಾಲ ನೀರಿನ ತೊಟ್ಟಿಯಲ್ಲಿ ಅಡಗಿಸಿಟ್ಟಿದ್ದ. ನಂತರ ಯಾರಿಗೂ ತಿಳಿಯದಂತೆ ಸ್ಮಶಾನದಲ್ಲಿ ಸುಟ್ಟು, ಅರ್ಧ ಬೆಂದ ಅಸ್ಥಿಪಂಜರ ಹಾಗೂ ಬೂದಿಯನ್ನು ಸೋಟ್ ನದಿಗೆ ಎಸೆದಿದ್ದರು. ಸದ್ಯ ತನಿಖೆ ನಡೆಸಿದ ಪೊಲೀಸರು ಪತಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೌಟುಂಬಿಕ ಹಿಂಸಾಚಾರಕ್ಕೆ ಕಾನೂನು ಏನ ಹೇಳುತ್ತದೆ?
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಕೇವಲ ಜಗಳಕ್ಕೆ ಸೀಮಿತವಾಗದೆ ಇಂತಹ ಭೀಕರ ಕೊಲೆಗಳಲ್ಲಿ ಅಂತ್ಯವಾಗುತ್ತಿರುವುದು ಸಮಾಜದ ಕ್ರೂರ ಮುಖವನ್ನು ಪರಿಚಯಿಸುತ್ತಿದೆ.
ಕಠಿಣ ಸೆಕ್ಷನ್‌ಗಳ ಅಡಿ ಕೇಸ್: ಹೆತ್ತ ತಾಯಿಗೆ ವಿಷ ನೀಡಿದ ರವೇಂದ್ರ ಹಾಗೂ ಪ್ರಚೋದನೆ ನೀಡಿದ ಅತ್ತೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿ ಕೊಲೆ ಯತ್ನ ಹಾಗೂ ಅಪರಾಧ ಸಂಚಿನ ಗಂಭೀರ ಪ್ರಕರಣ ದಾಖಲಾಗಿದೆ.
ಬದೌನ್ ಪ್ರಕರಣದಲ್ಲಿ ಶವವನ್ನು ಬಚ್ಚಿಟ್ಟು, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಪತಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆಯಿದೆ. ಕೌಟುಂಬಿಕ ಸಮಸ್ಯೆಗಳಿದ್ದಾಗ ಕೋಪ ಅಥವಾ ಪ್ರಚೋದನೆಗೆ ಒಳಗಾಗುವ ಬದಲು ಕಾನೂನಾತ್ಮಕ ಕೌನ್ಸಿಲಿಂಗ್ ಪಡೆದುಕೊಳ್ಳುವುದು ಇಂತಹ ಹತ್ತಾರು ಜೀವಗಳು ಬಲಿಯಾಗುವುದನ್ನು ತಪ್ಪಿಸುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
