‘ಅದು ನನ್ನ ಸಿನಿಮಾ ಆಗಿರಲಿಲ್ಲ’; ‘ಬಂದರ್’ ಚಿತ್ರದ ಬಗ್ಗೆ ಅನುರಾಗ್ ಕಶ್ಯಪ್ ಬೇಸರ – Kannada News | Anurag Kashyap Distances Himself from Bandar Says Misogyny and Anti MeToo Criticisms are Valid

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ನಿರ್ದೇಶನದ  ಇತ್ತೀಚಿನ ಚಿತ್ರ ‘ಬಂದರ್’ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಬೆನ್ನಲ್ಲೇ ತೀವ್ರ ವಿವಾದಕ್ಕೆ ಸಿಲುಕಿದೆ. ಈ ಸಿನಿಮಾ ಮಹಿಳಾ ವಿರೋಧಿಯಾಗಿದೆ ಮತ್ತು ‘ಮೀಟೂ ಚಳವಳಿ’ಗೆ ವಿರುದ್ಧವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಸ್ವತಃ ಮುಕ್ತವಾಗಿ ಮಾತನಾಡಿರುವ ಅನುರಾಗ್ ಕಶ್ಯಪ್, ಪ್ರೇಕ್ಷಕರು ಮತ್ತು ವಿಮರ್ಶಕರು ಮಾಡುತ್ತಿರುವ ಟೀಕೆಗಳು ನಿಜವಾದವು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಇದಕ್ಕೆ ಸಂಪೂರ್ಣವಾಗಿ ತಾವೊಬ್ಬರೇ ಕಾರಣವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇದು ನನ್ನ ಫೈನಲ್ ಕಟ್ ಅಲ್ಲ

ಕಾಮಿಡಿಯನ್ ಕುನಾಲ್ ಕಮ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, ‘ನಾನು ಈ ಚಿತ್ರದ ಪ್ರಚಾರಕ್ಕಾಗಿ ಯಾವುದೇ ಇಂಟರ್ವ್ಯೂ ನೀಡಿಲ್ಲ. ಅಷ್ಟೇ ಅಲ್ಲ, ಕುನಾಲ್ ಅವರಿಗೂ ಈ ಸಿನಿಮಾ ನೋಡಬೇಡಿ ಎಂದು ಹೇಳಿದ್ದೆ. ಏಕೆಂದರೆ, ಈಗ ಬಿಡುಗಡೆಯಾಗಿರುವ ಸಿನಿಮಾ ನನ್ನ ಕೊನೆಯ ಕಟ್ ಅಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ಎಡಿಟಿಂಗ್ ಸಮಯದಲ್ಲಿ ಕತ್ತರಿಸಲಾಗಿದೆ. ನಾನು ಶೂಟ್ ಮಾಡಿದ ದೃಶ್ಯಗಳನ್ನೇ ಅವರು ತೆಗೆದುಹಾಕಿರುವುದರಿಂದ ಚಿತ್ರದ ಇಡೀ ದೃಷ್ಟಿಕೋನ ಮತ್ತು ಸಂದೇಶವೇ ಬದಲಾಗಿದೆ’ ಎಂದು ಬೇಸರ ಹೊರಹಾಕಿದ್ದಾರೆ.

ಕಾರ್ಪೊರೇಟ್ ವ್ಯವಸ್ಥೆಯ ವಿರುದ್ಧ ಆಕ್ರೋಶ

ಸಿನಿಮಾ ತಡವಾಗಿ ಬಿಡುಗಡೆಯಾದಾಗ ಬಜೆಟ್ ಮತ್ತು ವೆಚ್ಚದ ಸಮಸ್ಯೆ ಎದುರಾಗುತ್ತದೆ. ಆಗ ಚಿತ್ರದ ಸಂಪೂರ್ಣ ಹಕ್ಕುಗಳು ಸ್ಟುಡಿಯೋ ಅಥವಾ ಪ್ರೊಡಕ್ಷನ್ ಹೌಸ್ ಕೈಗೆ ಹೋಗುತ್ತವೆ ಎಂದು ಅವರು ವಿವರಿಸಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಕಾರ್ಪೊರೇಟ್‌ಮಯವಾಗಿದೆ. ಚಿತ್ರದ ಕಥೆಯನ್ನು ನಂಬಿ ಸಿನಿಮಾ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಕೇವಲ ಬ್ಯುಸಿನೆಸ್ ಮತ್ತು ಯಶಸ್ಸಿಗಾಗಿ ಸಿನಿಮಾಗಳನ್ನು ಮಾಡಲಾಗುತ್ತಿದೆ. ದೊಡ್ಡ ಸಂಸ್ಥೆಗಳ ಕೈಯಲ್ಲಿ ಅಧಿಕಾರ ಇರುವುದರಿಂದ ಸ್ವತಂತ್ರ ಸಿನಿಮಾಗಳಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ’ ಎಂದು ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಸತ್ಲುಜ್’ ಸಿನಿಮಾ ನೋಡದೆಯೇ ನಿಷೇಧ ಹೇರಿದ ಸೆನ್ಸಾರ್ ಮಂಡಳಿ ಅಧ್ಯಕ್ಷ? ಅನುರಾಗ್ ಕಶ್ಯಪ್ ಆರೋಪ

ಈ ‘ಬಂದರ್’ ಸಿನಿಮಾದಲ್ಲಿ ಬಾಬಿ ಡಿಯೋಲ್, ಸಾನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ, ಸಬಾ ಆಜಾದ್, ಇಂದ್ರಜಿತ್ ಸುಕುಮಾರನ್ ಹಾಗೂ ಕನ್ನಡದ ಖ್ಯಾತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ‘ಬಂದರ್’ ಹಾಡು ಹಿಟ್ ಆಗಿದೆ. ಈ ಚಿತ್ರವನ್ನು ಸಾಫ್ರಾನ್ ಮ್ಯಾಜಿಕ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *