ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಲಿದ್ದಾರಾ? ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಇಂದಿಗೆ (ಜೂನ್ 23, 2026) ಸರಿಯಾಗಿ 1 ವರ್ಷ 1 ತಿಂಗಳು ಕಳೆದಿದೆ. ಇದಾಗ್ಯೂ ಅವರ ಕಂಬ್ಯಾಕ್ ಅನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ ಕಳೆದ ಕೆಲ ತಿಂಗಳಿಂದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹಿಂಪಡೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೀಗ ಈ ಎಲ್ಲಾ ಸುದ್ದಿಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ನವದೆಹಲಿಯಲ್ಲಿ ನಡೆದ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಟೆಸ್ಟ್ ಕ್ರಿಕೆಟ್ನಿಂದ ಹೊರಬಂದಿದ್ದೇನೆ. ಹೀಗಾಗಿ ಮತ್ತೆ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಒಡೆತನದ ಪ್ರಸಿದ್ಧ ಲೈಫ್‌ಸ್ಟೈಲ್ ಬ್ರ್ಯಾಂಡ್ ‘One8’ ನ ಹೊಸ ಶೂ ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಕ ದಾನಿಶ್ ಸೇಠ್ ಅವರು, ಹೊಸದಾಗಿ ಮಾರುಕಟ್ಟೆಗೆ ಬಂದಿರುವ ‘ರೆಡ್ ಶೂ’ ಬೆಲೆಯನ್ನು ₹9,230 ಕ್ಕೆ ನಿಗದಿಪಡಿಸಲಾಗಿದೆ.
ಈ ಮೊತ್ತವು ನಿಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಿದ ಒಟ್ಟು 9,230 ರನ್‌ಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ. ಹೀಗಾಗಿ ಈ ಶೂ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಬ್ರ್ಯಾಂಡ್ ಲಾಭಕ್ಕಾಗಿ ನೀವು (ವಿರಾಟ್ ಕೊಹ್ಲಿ) ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಿ ಇನ್ನೂ ಕೆಲವು ರನ್ ಗಳಿಸುತ್ತೀರಾ? ಎಂದು ತಮಾಷೆಯಾಗಿ ಕೇಳಿದ್ದಾರೆ.
ಈ ಪ್ರಶ್ನೆಗೆ ನಕ್ಕ ವಿರಾಟ್ ಕೊಹ್ಲಿ, “ನಾನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಬಯಸುತ್ತೇನೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಅನ್ನು ಈಗಾಗಲೇ ಮುಗಿಸಿದ್ದೇನೆ” ಎಂದಿದ್ದಾರೆ. ಈ ಮೂಲಕ ನನ್ನ ಟೆಸ್ಟ್ ಕೆರಿಯರ್ ಮುಗಿದ ಅಧ್ಯಾಯ ಎಂದು ಕಿಂಗ್ ಕೊಹ್ಲಿ ಬಹಿರಂಗವಾಗಿಯೇ ಖಚಿತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿಜೀವನ
ಮೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ, 14 ವರ್ಷಗಳ ಸುದೀರ್ಘ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಅವರ ಟೆಸ್ಟ್ ಸಾಧನೆಯ ಕಿರುನೋಟ ಇಲ್ಲಿದೆ…
- ಒಟ್ಟು ಪಂದ್ಯಗಳು: 123
- ಒಟ್ಟು ರನ್‌ಗಳು: 9,230
- ಬ್ಯಾಟಿಂಗ್ ಸರಾಸರಿ: 46.85
- ಶತಕಗಳು: 30
- ಗರಿಷ್ಠ ಸ್ಕೋರ್: 254*
ಇದನ್ನೂ ಓದಿ: ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಅವರ ನಂತರ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದಾಗಿದೆ. ಇದಾಗ್ಯೂ ಅವರು ರೆಡ್ ಬಾಲ್ ಕ್ರಿಕೆಟ್‌ನಲ್ಲಿ 10000 ರನ್ ಪೂರೈಸದೇ ನಿವೃತ್ತಿ ಘೋಷಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.