ಲಕ್ನೋ, ಜೂನ್ 24: ಬದುಕಿನಲ್ಲಿ ಹೊಸ ಭರವಸೆ, ಉದ್ಯೋಗದಲ್ಲಿ ಬಡ್ತಿ, ಕೈತುಂಬಾ ಸಂಬಳ, ಜತೆಗೆ ಕೈಹಿಡಿಯಲಿರುವ ಪ್ರೇಯಸಿಯೊಂದಿಗೆ ಸಾಗಲಿರುವ ಸುಂದರ ಸಂಸಾರದ ಕನಸು. 27 ವರ್ಷದ ನೀಲೇಶ್ ಕುಮಾರ್ ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗುತ್ತಿತ್ತು. ಆದರೆ, ಲಕ್ನೋದ ಅಲಿಗಂಜ್‌ನಲ್ಲಿ ಸೋಮವಾರ ಸಂಭವಿಸಿದ ಆ ಒಂದು ಭೀಕರ ಅಗ್ನಿ ದುರಂತ(Fire Accident) ಆತನ ಇಡೀ ಪ್ರಪಂಚವನ್ನೇ ಸುಟ್ಟು ಬೂದಿ ಮಾಡಿದೆ. ಯಾವ ಕೋಚಿಂಗ್ ಸೆಂಟರ್‌ನಲ್ಲಿ ಇಬ್ಬರೂ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರೋ, ಅದೇ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೀಲೇಶ್ ಹಾಗೂ ಆತನ ಭಾವಿ ಪತ್ನಿ, 30 ವರ್ಷದ ಅನಾಮಿಕಾ ಸಮಂತ ಇಬ್ಬರೂ ಸಜೀವ ದಹನವಾಗಿದ್ದಾರೆ.
ಕೆಲಸದ ಸ್ಥಳದಲ್ಲೇ ಚಿಗುರಿದ್ದ ಪ್ರೀತಿ
ಮೂಲತಃ ಲಕ್ನೋದವರಾದ ನೀಲೇಶ್ ಅತ್ಯಂತ ಕಠಿಣ ಪರಿಶ್ರಮಿ, ಪಶ್ಚಿಮ ಬಂಗಾಳದ ಅನಾಮಿಕಾ ಸಮಂತ ಅವರು ಅದೇ ಅಲಿಗಂಜ್ ಕಟ್ಟಡದ ಅನಿಮೇಷನ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಜತೆಯಾಗಿ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಈ ವರ್ಷವಷ್ಟೇ ನೀಲೇಶ್‌ಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಜೊತೆಗೆ ಸಂಬಳವೂ ಹೆಚ್ಚಾಗಿತ್ತು. ಮದುವೆಗೂ ಮುನ್ನ ಹಣ ಉಳಿಸಿ, ಕುಟುಂಬಕ್ಕೆ ಒಂದು ಹೊಸ ಮನೆ ಕಟ್ಟಿಸಿಕೊಡಬೇಕೆಂಬುದು ಆತನ ದೊಡ್ಡ ಕನಸಾಗಿತ್ತು. ಆ ಮನೆ ಮುಂದಿನ ವರ್ಷ ಪೂರ್ಣಗೊಂಡ ತಕ್ಷಣ ಮದುವೆಯಾಗಲು ನಿರ್ಧರಿಸಿದ್ದರು.
ಕಳೆದ ವಾರವಷ್ಟೇ ನಡೆದಿತ್ತು ನಿಶ್ಚಿತಾರ್ಥ
ಕಳೆದ ವಾರವಷ್ಟೇ ಅನಾಮಿಕಾಳ ಪೋಷಕರು ಪಶ್ಚಿಮ ಬಂಗಾಳದಿಂದ ಲಕ್ನೋಗೆ ವಿಮಾನದ ಮೂಲಕ ಬಂದಿದ್ದರು. ನೀಲೇಶ್ ಮನೆಯಲ್ಲಿ ಇಬ್ಬರ ಪ್ರೀತಿಗೂ ಒಪ್ಪಿಗೆ ಸಿಗುವ ಮೂಲಕ ಅತ್ಯಂತ ಹರ್ಷಚಿತ್ತದಿಂದ ನಿಶ್ಚಿತಾರ್ಥ ಶಾಸ್ತ್ರ ಮುಗಿದಿತ್ತು. ಮದುವೆಯ ಮುಂದಿನ ಮಾತುಕತೆಗಾಗಿ ನೀಲೇಶ್ ಕುಟುಂಬದವರು ಮುಂದಿನ ವಾರ ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲು ಟಿಕೆಟ್‌ಗಳನ್ನೂ ಬುಕ್ ಮಾಡಿದ್ದರು.
ಮತ್ತಷ್ಟು ಓದಿ: ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು
ಆಸ್ಪತ್ರೆಯ ಹೊರಗೆ ಕುಟುಂಬದವರ ಆಕ್ರಂದನ
ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಆಸ್ಪತ್ರೆಯ ಹೊರಗೆ ನಿಂತು ಕಣ್ಣೀರು ಹಾಕುತ್ತಿದ್ದ ನೀಲೇಶ್ ಸಹೋದರ ಅಭಿಷೇಕ್, ನಾವೆಲ್ಲರೂ ಮದುವೆಯ ಸಿದ್ಧತೆಯಲ್ಲಿದ್ದೆವು. ಕೆಲವು ದಿನಗಳ ಹಿಂದೆ ನಮ್ಮ ಮನೆಯಲ್ಲೇ ಚಿಕ್ಕದೊಂದು ಸಮಾರಂಭ ನಡೆದಿತ್ತು. ಅನಾಮಿಕಾ ತುಂಬಾ ನಗುನಗುತ್ತಾ ಎಲ್ಲರೊಂದಿಗೂ ಬೆರೆತಿದ್ದಳು. ಆದರೆ ಒಂದು ಬೆಂಕಿ ಈಗ ಎಲ್ಲವನ್ನೂ ಕಿತ್ತುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದರು.
ಸೋಮವಾರ ಸಂಭವಿಸಿದ ಈ ಭೀಕರ ದುರಂತದಲ್ಲಿ ನೀಲೇಶ್ ಮತ್ತು ಅನಾಮಿಕಾ ಸೇರಿದಂತೆ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಹೆಚ್ಚಿನವರು ತಮ್ಮ ಕಣ್ಣುಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಕಲಿಯಲು ಬಂದಿದ್ದ ಅಮಾಯಕ ವಿದ್ಯಾರ್ಥಿಗಳಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
