1985ರಲ್ಲಿ ರಿಲೀಸ್ ಆದ ‘ಅದೇ ಕಣ್ಣು’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ಈ ಚಿತ್ರದಲ್ಲಿ ರಾಜ್ಕುಮಾರ್, ಗಾಯತ್ರಿ ಮೊದಲಾದವರು ನಟಿಸಿದ್ದರು. ಗಾಯತ್ರಿ ಜೊತೆಗೆ ರಾಜ್ಕುಮಾರ್ ನಟಿಸಿದ ಕೊನೆಯ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸತೀಶ್ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದರು. ಅವರು ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾದರೆ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಈ ಬಗ್ಗೆ ನಿರ್ದೇಶಕ ರಘುರಾಮ್ ಅವರು ವಿಡಿಯೋ ಮಾಡಿ ಹಾಕಿದ್ದಾರೆ. ಸತೀಶ್ ಬಗೆಗಿನ ವಿವರವನ್ನು ಅವರು ನೀಡಿದ್ದಾರೆ.
1.ಅಪರೂಪದ ನಟ ಸತೀಶ್
2.‘ಅದೇ ಕಣ್ಣು’ ಚಿತ್ರದಲ್ಲಿ ಪೊಲೀಸ್ ಪಾತ್ರ
3.ಕನ್ನಡ ಚಿತ್ರರಂಗದಿಂದ ದೂರ ಇರೋ ಸತೀಶ್
ಚೆನ್ನೈನ ‘ಸ್ವಾಗತ್’ ಹೋಟೆಲ್ನಲ್ಲಿ ಸತೀಶ್ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಗ ನಿರ್ದೇಶಕ ಭಾರ್ಗವ್ ಅವರು ಇದೇ ಹೋಟೆಲ್ನಲ್ಲಿ ತಂಗುತ್ತಿದ್ದರು. ಆಗ ಸತೀಶ್ ಪರಿಚಯ ಆಯಿತು. ‘ಒಲವು ಗೆಲುವು’ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಭಾರ್ಗವ್ ಅವರು ಸತೀಶ್ಗೆ ನೀಡಿದರು. ಈ ಸಿನಿಮಾದಲ್ಲಿ ಭಾರ್ಗವ್ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದರು. ಅಲ್ಲಿಂದ ಅವರ ಕನ್ನಡ ಸಿನಿಮಾ ಜರ್ನಿ ಆರಂಭ ಆಯಿತು. ಅದಕ್ಕೂ ಮೊದಲೇ ನಟನೆಯನ್ನು ಸತೀಶ್ ಕಲಿತಿದ್ದರು. ‘ಮದುವೆ ಮಾಡು ತಮಾಷೆ ನೋಡು’ ಸೇರಿದಂತೆ ಅನೇಕ ಕನ್ನಡ ಸಿನಿಮಾ ಮಾಡಿದರು. ಆ ಬಳಿಕ ಅವರು ಕನ್ನಡ ಸಿನಿಮಾ ಮಾಡಿಲ್ಲ.
2021ರ ಅಕ್ಟೋಬರ್ 29ರಂದು ಸತೀಶ್ ಅವರು ಪಿಆರ್ಕೆ ಕಚೇರಿಯಲ್ಲಿ ಇದ್ದರು. ತಮ್ಮನ್ನು ಭೇಟಿ ಮಾಡುವಂತೆ ಸತೀಶ್ ಅವರಿಗೆ ಅಪ್ಪು ಸೂಚಿಸಿದ್ದರು. ಹೊಸ ಸಿನಿಮಾ ಒಂದರ ಚರ್ಚೆಗೆ ಇವರ ಭೇಟಿ ನಡೆದಿತ್ತು ಎನ್ನಲಾಗಿದೆಯಾದರೂ ಈ ಬಗ್ಗೆ ಸ್ಪಷ್ಟನೆ ಇಲ್ಲ. ಅಂದು ಪುನೀತ್ಗೆ ಹೃದಯಘಾತ ಆಯಿತು. ಅವರು ನಿಧನರಾದರು. ಹೀಗಾಗಿ, ಸತೀಶ್-ಪುನೀತ್ ಅವರ ಭೇಟಿ ನಡೆಯಲೇ ಇಲ್ಲ.
ಇದನ್ನೂ ಓದಿ: ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್ಕುಮಾರ್ ನಟಿಸಬೇಕಿದ್ದ ಆ ಸಿನಿಮಾ
ಸದ್ಯ ಸತೀಶ್ ಅವರು ತಮಿಳು ಸಿನಿಮಾಗಳಿಗೆ ಡಬ್ ಮಾಡುವ ಕೆಲಸ ಮಾಡುತ್ತಿದ್ದಾರಂತೆ. ಈ ಮೂಲಕ ಅವರು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಲಿ ಎಂಬುದು ಅನೇಕರ ಕೋರಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
