ನವದೆಹಲಿ, ಫೆಬ್ರುವರಿ 26: ರಿಲಾಯನ್ಸ್ ಗ್ರೂಪ್ನ ಮುಖ್ಯಸ್ಥ ಅನಿಲ್ ಅಂಬಾನಿ (Anil Ambani) ಅವರ ಸಂಕಷ್ಟ ನಿಲ್ಲುತ್ತಿಲ್ಲ. ಬುಧವಾರ ಅನಿಲ್ ಅಂಬಾನಿ ಅವರ ಮುಂಬೈ ನಿವಾಸವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದ ಬೆನ್ನಲ್ಲೇ ಇವತ್ತು ಸಿಬಿಐನಿಂದ ಅವರ ವಿರುದ್ಧ ಹೊಸ ಪ್ರಕರಣ ದಾಖಲಾಗಿದೆ. 2013ರಿಂದ 2017ರ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾಗೆ 2,223.17 ಕೋಟಿ ರೂ ವಂಚನೆ ಎಸಗಿದ ಆರೋಪದಲ್ಲಿ ಅನಿಲ್ ಅಂಬಾನಿ ಹಾಗು ಆರ್ಕಾಂ ಕಂಪನಿ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ.
ಆದರೆ, ಬ್ಯಾಂಕ್ ಆಫ್ ಬರೋಡಾಗೆ ಆರ್ಕಾಂ ವತಿಯಿಂದ ಏನು ವಂಚನೆ ಆಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಬ್ಯಾಂಕ್ಗೆ ನಷ್ಟ ತರಲಾಗಿದೆ ಎಂದು ಅನಿಲ್ ಅಂಬಾನಿ, ಆರ್ಕಾಂ, ಸರ್ಕಾರಿ ಅಧಿಕಾರಿಗಳು ಮತ್ತಿತರರ ವಿರುದ್ಧ ಸ್ವತಃ ಬ್ಯಾಂಕ್ನಿಂದಲೇ ಎಫ್ಐಆರ್ ದೂರು ದಾಖಲಾಗಿತ್ತು. ವಂಚನೆ, ಅಪರಾಧ ಸಂಚು ಇತ್ಯಾದಿಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ಬರುತ್ತದೆ. ಇದರ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ಸ್ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಸಚಿವ ವೈಷ್ಣವ್ ಸೂಚನೆ
ಅನಿಲ್ ಅಂಬಾನಿಯ ಮುಂಬೈ ನಿವಾಸ ಮುಟ್ಟುಗೋಲು
ರಿಲಾಯನ್ಸ್ ಕಮ್ಯೂನಿಕೇಶನ್ (ಆರ್ಕಾಂ) ವಿರುದ್ಧದ ವಂಚನೆ ಪ್ರಕರಣ ಸಂಬಂಧ ಅನಿಲ್ ಅಂಬಾನಿ ಅವರ ಪಾಲಿ ಹಿಲ್ ಮನೆಯನ್ನು ಜಾರಿ ನಿರ್ದೇಶನಾಲಯ ಫೆ. 25, ಬುಧವಾರದಂದು ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್ನಲ್ಲಿರುವ ಅಂಬಾನಿಯ ಈ ಮನೆಯ ಮೌಲ್ಯ 3,716.83 ಕೋಟಿ ರೂ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಮುಂಬೈನಲ್ಲೇ ಇರುವ ಅಂಬಾನಿಯ 473.17 ಕೋಟಿ ರು ಮೌಲ್ಯದ ಇನ್ನೊಂದು ಪ್ರಾಪರ್ಟಿಯನ್ನೂ ಇಡಿ ಅಟ್ಯಾಚ್ ಮಾಡಿತ್ತು. ಇದರೊಂದಿಗೆ ಮುಟ್ಟುಗೋಲು ಹಾಕಿಕೊಳ್ಳಲಾದ ರಿಲಾಯನ್ಸ್ ಗ್ರೂಪ್ ಹಾಗೂ ಅನಿಲ್ ಅಂಬಾನಿಯವರ ಒಟ್ಟು ಆಸ್ತಿ ಮೌಲ್ಯ 15,700 ಕೋಟಿ ರೂ ಆಗಿದೆ.
ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ
ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ನ ಆರ್ಕಾಂ ಹಾಗೂ ಇತರ ಕಂಪನಿಗಳು ಹಲವು ವರ್ಷಗಳ ಅವಧಿಯಲ್ಲಿ ಬ್ಯಾಂಕುಗಳಿಂದ ಸಾಕಷ್ಟು ಸಾಲಗಳನ್ನು ತೆಗೆದುಕೊಂಡಿವೆ. ಇದರಲ್ಲಿ 40,185 ಕೋಟಿ ರೂ ಸಾಲ ಬಾಕಿ ಉಳಿದಿದೆ. ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿರುವುದು ಇತ್ಯಾದಿ ಹಲವು ಆರೋಪಗಳು ಅಂಬಾನಿ ಹಾಗೂ ಅವರ ಕಂಪನಿಗಳ ಮೇಲಿದೆ. ರಿಲಾಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ಸಾಲ ತೀರಿಸಲು ಕಾಲಾವಕಾಶ ಕೋರಿದೆ. ಈ ಮಧ್ಯೆ ಪ್ರಕರಣಗಳ ಮೇಲೆ ಪ್ರಕರಣಗಳು ಅಂಬಾನಿಯನ್ನು ಸುತ್ತುವರಿಯುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
